ಅಬ್ದುಲ್ ಕಲಾಂ ನಮ್ಮ ನಿಮ್ಮಂತೆ

ಭಾರತದ ರಾಷ್ಟ್ರಪತಿ ಭವನ ಕಂಡ ವಿರಳರಲ್ಲಿ ವಿರಳ ವ್ಯಕ್ತಿತ್ವದವರು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ. ಅವರನ್ನು ಐದು ವರ್ಷ ಅತಿ ಹತ್ತಿರದಿಂದ ಬಲ್ಲ ಕಾರ್ಯದರ್ಶಿ ಪಿ.ಎಂ. ನಾಯರ್ ರಚಿಸಿದ ಜೀವನ ಚರಿತ್ರೆಯ ಕನ್ನಡ ರೂಪಾಂತರ (ವಿಶ್ವೇಶ್ವರ ಭಟ್) ನಾಳೆ(ಜೂನ್ 27ರಂದು) ಮೈಸೂರಿನಲ್ಲಿ ಕಲಾಂ ಸ್ವಹಸ್ತದಿಂದ ಬಿಡುಗಡೆಯಾಗಲಿದೆ. ಈ ಪುಸ್ತಕದಲ್ಲೇನಿದೆ?

***

ಕಲಾಂ ಅವರಿಗೆ ಐದು ವರ್ಷ ಕಾರ್ಯದರ್ಶಿಯಾಗಿದ್ದ ಪಿ.ಎಂ.ನಾಯರ್ ಬರೆದ ‘ದಿ ಕಲಾಂ ಇಫೆಕ್ಟ್” ಪುಸ್ತಕವನ್ನು ಸಂಪೂರ್ಣ ಅನುವಾದಿಸಿ, ಜತೆಗೆ ನನ್ನದೂ ಒಂದು ಅಧ್ಯಾಯ ಸೇರಿಸಿ ಕೃತಿಯನ್ನು ಪ್ರಕಟಣೆಗೆ ಕಳಿಸುವ ಹೊತ್ತಿಗೆ ಕಲಾಂ ನನ್ನ ಮನದಲ್ಲಿ ಬೇಲಿ ಹಾಕಿ ಕುಳಿತುಕೊಂಡಿದ್ದರೆ, ಈ ಕೃತಿಯನ್ನು ಶುಕ್ರವಾರದಂದು ( 27 ಜೂನ್, 2008)ಮೈಸೂರಿನ ಜೆಎಸ್ಎಸ್ ಮಠದಲ್ಲಿ ಸ್ವತಃ ಕಲಾಂ ಬಿಡುಗಡೆ ಮಾಡುತ್ತಿದ್ದಾರೆ. ಪ್ರಾಯಶಃ ಇಂಥ ಕೃತಿಯನ್ನು ರಾಷ್ಟ್ರಪತಿಯವರನ್ನು ನಿತ್ಯ ನೋಡುವವರು ಅವರೊಂದಿಗೆ ಮಾತಾಡುವವರು, ಅವರಿಗೆ ಸಲಹೆ ಕೊಡುವವರು, ಅವರು ಹಾಗಲ್ಲ ಅಂದ್ರೆ ಹೀಗೆ ಎಂದು ವಾದಿಸುವವರು ಮಾತ್ರ ಬರೆಯಲು ಸಾಧ್ಯ.  ನಾಯರ್‌ಗೆ ಇವೆಲ್ಲ ಸಾಧ್ಯವಾಗಿತ್ತು.  ಅವರು ಕಲಾಂ ಹೇಳಿದ್ದಕ್ಕೆಲ್ಲ ಯಸ್ ಎಂದು ಹೇಳುತ್ತಿರಲಿಲ್ಲ.  ನೋ ಎಂದು ಹೇಳುವ ನೋಯರ್ ಕೂಡ ಆಗಿದ್ದರು.  ಪ್ರಸಂಗ, ದೃಷ್ಟಾಂತಗಳಿಂದಲೇ ತುಂಬಿ ಹೋಗಿರುವ ಈ ಕೃತಿಯಲ್ಲಿ ಕಲಾಂ ವ್ಯಕ್ತಿತ್ವದ ಹಲವಾರು ಮುಖಗಳು ಅನಾವರಣಗೊಂಡಿವೆ.  ಇದು ಕೇವಲ ಹೊಗಳಲೆಂದೇ ಬರೆದ ಕೃತಿಯಲ್ಲ. ಕಲಾಂ ಅವರಿಗೆ ಸಮಯಪಾಲನೆ ಬಗ್ಗೆ ಇದ್ದ ಅನಾದರವನ್ನು ಸಹ ಎತ್ತಿ ತೋರಿಸಿದ್ದಾರೆ. ನಿಮಗೆ ಇಷ್ಟವಾಗಬಹುದೆಂದು ಇಲ್ಲಿ ಎರಡು ಪ್ರಸಂಗಗಳನ್ನು ಕೊಡುತ್ತಿದ್ದೇನೆ, ನೀವು ನನಗೆ ಕಲಾಂ Obsession ಎಂದು ಅಂದುಕೊಂಡರೂ ಪರವಾಗಿಲ್ಲ.

***
ಅಬ್ದುಲ್ ಕಲಾಂ ನಮ್ಮಂತೆ. ಕೆಲವು ಗುಣಗಳು ನಮಗಿಂತ ಉತ್ತಮವಾಗಿರಬಹುದು. ಐದು ವರ್ಷ ಅವರ ಜತೆ ಒಡನಾಡಿದ ಸಂದರ್ಭದಲ್ಲಿ ನಾನು ಅವರಲ್ಲಿ ಕೆಲವು ತಪ್ಪು, ದೋಷ, ನ್ಯೂನತೆಗಳನ್ನು ಗಮನಿಸಿದೆ. ಅವುಗಳನ್ನೂ ಹೇಳಬೇಕು.ಕಲಾಂ ಅವರಿಗೆ ಸಮಯಪಾಲನೆ ಗೊತ್ತೇ ಇಲ್ಲ. ಅವರು ಕೈಗೆ ವಾಚನ್ನು ಕಟ್ಟಿಕೊಳ್ಳುತ್ತಾರೋ ಎಂಬ ಬಗ್ಗೆ ನನಗೆ ಸಂದೇಹವಿದೆ. ಒಂದೇ ಸಮಯ ತೋರಿಸುವ ಹಲವಾರು ವಾಚುಗಳಿದ್ದಿರಬಹುದು. ಅವರು ಸಮಯಪಾಲನೆ ಮಾಡದಿರುವುದಕ್ಕೆ ಅದೇ ಕಾರಣವಿದ್ದಿರಬಹುದು. ಮಧ್ಯಾಹ್ನದ ಮೀಟಿಂಗ್ 2.30 ಕ್ಕೆಂದು ನಿಗದಿಯಾಗಿರುತ್ತಿತ್ತು. ಅದು ಎಂದೂ 2.30 ಕ್ಕೆ ಆರಂಭವಾಗುತ್ತಿರಲಿಲ್ಲ. ಯಾವತ್ತೂ 20-30 ನಿಮಿಷ ತಡ. ಅವರು ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಪ್ರವಾಸದಲ್ಲಿದ್ದಾಗಲೂ ಅವರು ಹೊರಡಬೇಕಾದ ಸಮಯ ಎಕ್ಕುಟ್ಟಿ ಹೋಗುತ್ತಿತ್ತು. ಸಮಯದ ಬಗ್ಗೆ ಅವರು ಸದಾ ‘ಸಿಕ್ಸರ್” ಬಾರಿಸುತ್ತಿದ್ದರು. ನನಗೆ ಗೊತ್ತು ಅವರು ಕ್ರಿಕೆಟ್ ಪ್ರೇಮಿ ಎಂದು. ಆದರೆ ಇದು ಬೇರೆಯ ಆಟ ತಾನೆ?

ಕಲಾಂ ಕಾರ್ಯದರ್ಶಿಯಾಗಿ ಈ ವಿಳಂಬವನ್ನು ನಾನು ಸಮರ್ಥಿಸಿಕೊಳ್ಳುವಂತಿರಲಿಲ್ಲ. ಅದಕ್ಕೆ ಅವರು ಬೇಸರಿಸಿಕೊಳ್ಳುತ್ತಿರಲಿಲ್ಲವೆಂಬುದಕ್ಕೆ ನನಗೆ ಖಾತ್ರಿಯಿದೆ. ಯಾಕೆಂದರೆ ಅವರು ಸದಾ ಸತ್ಯ ಹೇಳುವುದನ್ನೇ ಬಯಸುತ್ತಿದ್ದರು.ಕಲಾಂ ಸಮಯಪಾಲನೆ ಮಾಡುವುದಿಲ್ಲ ಎಂಬ ಬಗ್ಗೆ ಅನೇಕ ಟೀಕೆಗಳು ಕೇಳಿಬಂದಿದ್ದವು. ರಾಷ್ಟ್ರಪತಿಗಳು ಭಾರತದಲ್ಲಿ ಅಥವಾ ವಿದೇಶಗಳಲ್ಲಿ ಪ್ರವಾಸದಲ್ಲಿದ್ದಾಗ ಪೊಲೀಸ್ ಬೆಂಗಾವಲುಪಡೆ ಮೊದಲೇ ಸಿದ್ಧವಾಗಿರುತ್ತದೆ. ಅವರು ಹೊರಡುವುದಕ್ಕಿಂತ ಅಥವಾ ಆಗಮಿಸುವುದಕ್ಕಿಂತ ಕನಿಷ್ಠ ಮೂರು ತಾಸು ಮೊದಲು ಬೆಂಗಾವಲು ಪೊಲೀಸರು ತಾವು ಹೋಗಬೇಕಾದ ದಾರಿ, ತಲುಪಬೇಕಾದ ಸ್ಥಳಗಳ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರುತ್ತಾರೆ ಹಾಗೂ ಆ ಪ್ರಕಾರ ಸಿದ್ಧತೆ ಮಾಡಿಕೊಳ್ಳುತ್ತಾರೆ. ರಾಷ್ಟ್ರಪತಿಗಳು ಹೊರಟ ಅಥವಾ ಆಗಮಿಸಿದ ಎರಡು-ಮೂರು ತಾಸುಗಳ ಬಳಿಕ ಅವರು ತಮ್ಮ ತಮ್ಮ ಮನೆಗೆ ಹೋಗುತ್ತಿದ್ದರು. ಸಾಮಾನ್ಯ ಸಂದರ್ಭದಲ್ಲಿ ಅವರು ಇದಕ್ಕೆಲ್ಲ ಬೇಸರಪಟ್ಟುಕೊಳ್ಳುವುದಿಲ್ಲ.

ಆದರೆ ಚಳಿಗಾಲದಲ್ಲಿ?ರಾಷ್ಟ್ರಪತಿಗಳು ರಾತ್ರಿ ಎಂಟಕ್ಕೆ ಹೊರಡುವ ಕಾರ್ಯಕ್ರಮವಿದ್ದರೆ, ಬೆಂಗಾವಲು ಪೊಲೀಸರು ಸಾಯಂಕಾಲ ಐದಕ್ಕೆ ಸಿದ್ಧರಾಗಿರುತ್ತಿದ್ದರು. ರಾಷ್ಟ್ರಪತಿಗಳು ಎಂಟೂವರೆಗೆ ಹೊರಡುತ್ತಿದ್ದರು. ರಾಷ್ಟ್ರಪತಿಗಳು ಹೊರಡುವ ಮಾರ್ಗದಲ್ಲಿ ಕಾನ್‌ಸ್ಟೇಬಲ್‌ಗಳು ನಿಂತಿರುತ್ತಿದ್ದರು. ಅವರೂ ಸಹ ಮೂರು ತಾಸು ಮೊದಲು ನಿಂತಿರಬೇಕಾಗುತ್ತಿತ್ತು. ರಾಷ್ಟ್ರಪತಿಗಳು ಆ ಮಾರ್ಗದಲ್ಲಿ ಹಾದುಹೋದ ಒಂದು ತಾಸಿನ ಬಳಿಕ ಅಂದರೆ ರಾತ್ರಿ ಒಂಬತ್ತೂವರೆಗೆ ಅವರನ್ನು ಪಿಕ್‌ಅಪ್ ಮಾಡಿಕೊಂಡು ಆಯಾ ಪೊಲೀಸ್‌ಠಾಣೆಗೆ ಬಿಡಲಾಗುತ್ತಿತ್ತು. ಅಲ್ಲಿಂದ ಅವರು ತಮ್ಮ ಮನೆಗಳಿಗೆ ತಾವೇ ಹೋಗಬೇಕಾಗುತ್ತಿತ್ತು. ಅವರಲ್ಲಿ ಬಹುತೇಕ ಮಂದಿ ನಗರದ ಹೊರವಲಯದಲ್ಲಿ ವಾಸಿಸುವವರು. ಸಾಯಂಕಾಲ ಐದುಗಂಟೆಗೆ ಡ್ಯೂಟಿಗೆ ಬಂದವರು ಮನೆಗೆ ಹೋಗುವಾಗ ಬೆಳಗಿನ ಜಾವವಾಗುತ್ತಿತ್ತು. ಕಲಾಂ ಅವರಿಗೆ ಈ ಸಮಸ್ಯೆಯ ತೀವ್ರತೆ ಗೊತ್ತಿರಲಿಲ್ಲ.

ನಾನು ಅವರಿಗೆ ಈ ಅಂಶ ತಿಳಿಸಿದೆ. ಅವರೂ ಬಹಳ ಪೇಚಾಡುತ್ತಿದ್ದರು. ಮನನೊಂದುಕೊಳ್ಳುತ್ತಿದ್ದರು. ಅನಂತರ ಎರಡು-ಮೂರು ಕಾರ್ಯಕ್ರಮಗಳು ನಿಗದಿತ ಸಮಯಕ್ಕೆ ನಡೆಯುತ್ತಿದ್ದವು. ಮತ್ತೆ ಅದೇ ಹಳೆ ಚಾಳಿ!ಹಲವಾರು ವಿಜ್ಞಾನಿಗಳು ಮಹಾ ತಿಕ್ಕಲು ಸ್ವಭಾವದವರೆಂದು ಕೇಳಿ ಬಲ್ಲೆವು. ಅದು ಎಷ್ಟೆಂದರೆ ನಾವು, ವಿಜ್ಞಾನಿಗಳಲ್ಲದವರು ತಿಕ್ಕಲರಲ್ಲ ಎಂಬುದು ನಮ್ಮ ಭಾವನೆ. ಕಲಾಂ ವಿಜ್ಞಾನಿ ಆದರೆ ರಾಷ್ಟ್ರಪತಿಗಳೂ ಸಹ. ಹೀಗಾಗಿ ಈ ವಿಷಯವಾಗಿ ನಾನು ಅವರಿಗೆ ಹೇಳುತ್ತಿರಲಿಲ್ಲ. ವಿಜ್ಞಾನಿ ರಾಷ್ಟ್ರಪತಿಯಾಗಿಯೂ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ಸರಿಯಾದ ಸಮಯಕ್ಕೆ ಭಾಗವಹಿಸಿ ತಮ್ಮ ಸಮಯ ಗೌರವಿಸುವಂತೆ ಬೇರೆಯವರದ್ದನ್ನೂ ಗೌರವಿಸಬೇಕಾಗುತ್ತದೆಂಬುದನ್ನು ಅವರು ತಿಳಿದಿರಬೇಕು. ಯಾಕೆಂದರೆ ರಾಷ್ಟ್ರಪತಿಗಳಂತೆ ಉಳಿದವರಿಗೂ ಅವರದ್ದೇ ಆದ ಬದುಕಿರುತ್ತದೆ, ತಮ್ಮದೇ ಆದ ವೈಯಕ್ತಿಕ ಸಮಸ್ಯೆ, ಜಂಜಾಟಗಳಿರುತ್ತವೆ. ಈ ಎಲ್ಲವುಗಳ ಮಧ್ಯೆಯೂ ಅವರು ಸಂತಸ ಕಾಣಬೇಕು.

ಈ ವಿಷಯದಲ್ಲಿ ಕಲಾಂ ಫೇಲ್ ಆದರು. ಗೊತ್ತಿದ್ದೇ ಅಲ್ಲ, ಬೇಕೆಂದೇ ಅಲ್ಲ. ಈ ಎಲ್ಲ ಕಾರಣ ಮೀರಿಯೂ ಫೇಲ್ ಆದರು. ಈ ವಿಷಯದಲ್ಲಿ ಅವರಿಗೇನೂ ಮಾಡಲು ಆಗಲಿಲ್ಲ. ನಾನು ಮೂರನೆ ಕ್ಲಾಸಿನಲ್ಲಿದ್ದಾಗ ನನ್ನ ಟೀಚರ್ ಆಗಿದ್ದ ಚೆಲ್ಲಮ್ಮ ಹೇಳಿದ್ದು ನೆನಪಾಗುತ್ತಿದೆ. ‘ತಪ್ಪು ಮಾಡುವುದು ಮನುಷ್ಯ ಸಹಜ ಗುಣ” ಎಂದು ಅವರು ಹೇಳುತ್ತಿದ್ದರು. ಆಗ ಅದರ ಅರ್ಥವೇನೆಂಬುದು ಗೊತ್ತಾಗಿರಲಿಲ್ಲ. ಬೇರೆಯವರ ವೈಫಲ್ಯಗಳನ್ನು ಸ್ವೀಕರಿಸಿಯೂ ಸಹಾಯ ಮಾಡಬಹುದೆಂದು ನನಗೆ ಅನಿಸಿದೆ.

***

ಮೇ 2006. “ಮಿಸ್ಟರ್ ನಾಯರ್, ನನ್ನ ಬಂಧುಗಳು, ನೆಂಟರು ವಾರ ಅಥವಾ ಹತ್ತು ದಿನಗಳಮಟ್ಟಿಗೆ ಬರುತ್ತಾರೆ. ಅವರು ಬರುವುದು ಪಕ್ಕಾ ಖಾಸಗಿ ಉದ್ದೇಶಕ್ಕಾಗಿ. ಇದರಲ್ಲಿ ಅಧಿಕೃತ ಎಂಬುದೇನೂ ಇರುವುದಿಲ್ಲ” ಎಂದರು ಕಲಾಂ. ಕೆಲ ದಿನಗಳಲ್ಲಿ ಕಲಾಂ ಅವರ ಐವತ್ತೆರಡು ಮಂದಿ ಬಂಧು ಬಳಗದವರು ರಾಷ್ಟ್ರಪತಿ ಭವನಕ್ಕೆ ಬರುವವರಿದ್ದರು. ಅವರಲ್ಲಿ ತೊಂಬತ್ತು ವರ್ಷದ ಕಲಾಂ ಹಿರಿಯಣ್ಣನಿಂದ ಹಿಡಿದು ಒಂದೂವರೆ ವರ್ಷದ ಪುಟ್ಟ ಮಗೂ ಸಹ ಸೇರಿತ್ತು. ಕಲಾಂ ಅವರು ಹೇಳಿದ ಪ್ರತಿ ಪದವೂ ನನಗೆ ಚೆನ್ನಾಗಿ ಅರ್ಥವಾಗಿತ್ತು. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೆಂಬುದು ಗೊತ್ತಿತ್ತು.

ಅವರೆಲ್ಲ ಆಗಮಿಸಿದರು. ಎಂಟು ದಿನಗಳ ಕಾಲ ಉಳಿದರು. ಅವರೆಲ್ಲ ಅಜ್ಮೀರ್ ಷರೀಫ್‌ಗೆ ಹೋದರು. ಕೆಲವು ಕಿರಿಯರು ದಿಲ್ಲಿಯಲ್ಲಿ ಶಾಪಿಂಗ್ ಮಾಡಿದರು. ಅನಂತರ ಅವರೆಲ್ಲ ಊರಿಗೆ ವಾಪಸ್ ಹೋದರು.ಅಚ್ಚರಿಯ ಸಂಗತಿಯೇನೆಂದರೆ, ಒಂದೇ ಒಂದು ಸಲವೂ ಆಫೀಸಿನ ವಾಹನ ಬಳಸಲಿಲ್ಲ. ರಾಷ್ಟ್ರಪತಿ ಭವನದಲ್ಲಿ ಅವರೆಲ್ಲ ಉಳಿದುದಕ್ಕಾಗಿ ಕಲಾಂ ತಮ್ಮ ಕೈಯಿಂದ ಬಾಡಿಗೆ ಕಟ್ಟಿದರು. ಅವರೆಲ್ಲ ಕುಡಿದ ಸಿಂಗಲ್ ಚಹದ ಹಣವನ್ನೂ ಅವರು ಭರಿಸಿದರು! ಅವರೆಲ್ಲ ಅಷ್ಟು ದಿನ ಉಳಿದುದಕ್ಕೆ 3.52 ಲಕ್ಷ ರೂ. ಬಿಲ್ ಬಂತು. ಕಲಾಂ ತಮ್ಮ ಕಿಸೆಯಿಂದ ಹಣ ಎಣಿಸಿದರು. ಇದನ್ನು ಕಲಾಂ ಯಾರ ಮುಂದೆಯೂ ಹೇಳಿಕೊಳ್ಳಲಿಲ್ಲ. ಪತ್ರಿಕೆಗಳಿಗೆ ತಿಳಿಯುವಂತೆ ಮಾಡಿ ಪ್ರಚಾರವನ್ನೂ ಗಿಟ್ಟಿಸಿಕೊಳ್ಳಲಿಲ್ಲ. ನಾನೇಕೆ ಈ ವಿಷಯ ಹೇಳುತ್ತಿದ್ದೇನೆಂದರೆ ಈ ಸಂಗತಿ ಎಲ್ಲರಿಗೂ ಗೊತ್ತಾಗಲಿ ಎಂದು. ಹೀಗೆ ಬರೆದಿದ್ದಕ್ಕೆ ಕಲಾಂ ತಪ್ಪಾಗಿ ತಿಳಿಯಲಾರರು ಎಂದು ಭಾವಿಸಿದ್ದೇನೆ.

ಇಂಥ ಪ್ರಸಂಗಗಳು ಎಷ್ಟೋ. ಇದನ್ನೂ ಮೀರಿಸುವ ಮತ್ತೊಂದು ಪ್ರಸಂಗ ಹೇಳಬೇಕು. 2002ರ ನವೆಂಬರ್. ಅದು ರಮ್‌ಜಾನ್ ಸಮಯ. ಉಪವಾಸ ಇಫ್ತಾರ್ ಕೂಟದಲ್ಲಿ ಕೊನೆಗೊಳ್ಳುವುದು ತಾನೆ.ದೇವರು ಹಾಗೂ ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆಯುಳ್ಳವರಾದ ಕಲಾಂ, “ಮಿಸ್ಟರ್ ನಾಯರ್, ಈ ಇಫ್ತಾರ್ ಕೂಟಗಳನ್ನೇಕೆ ಏರ್ಪಡಿಸಬೇಕು? ಈ ಕೂಟಗಳಿಗೆ ಆಹ್ವಾನಿಸುವ ವ್ಯಕ್ತಿಗಳು ಹೇಗಿದ್ದರೂ ಚೆನ್ನಾಗಿ ಸೇವಿಸುವವರೇ. ಹೀಗಿರುವಾಗ ಹಣವನ್ನೇಕೆ ವೃಥಾ ವ್ಯಯಿಸಬೇಕು? ಈ ಕೂಟಗಳಿಗೆ ಎಷ್ಟು ಹಣ ಖರ್ಚು ಮಾಡುತ್ತೀರಿ?” ಎಂದು ಕೇಳಿದರು.

ಮೊದಲ ಬಾರಿಗೆ ಇಫ್ತಾರ್ ಕೂಟದ ವ್ಯವಸ್ಥೆ ಮಾಡುತ್ತಿದ್ದುದರಿಂದ ಖರ್ಚು-ವೆಚ್ಚದ ಬಗ್ಗೆ ನನಗೆ ಗೊತ್ತಿರಲಿಲ್ಲ. ಆ ವಿವರಗಳನ್ನು ತಿಳಿದುಕೊಂಡು ಹೇಳುವೆ ಎಂದೆ. ಅನಂತರ ರಾಷ್ಟ್ರಪತಿಭವನದ ವಸತಿನಿಯಂತ್ರಣ ಅಧಿಕಾರಿಯನ್ನು ಕರೆದು ಖರ್ಚಿನ ವಿವರ ಕೇಳಿದೆ. ಒಂದು ಕೂಟಕ್ಕೆ ಭೋಜನದ ಖರ್ಚಿಗೆ ಕನಿಷ್ಠ ಎರಡೂವರೆ ಲಕ್ಷ ರೂ. ತಗುಲುವುದೆಂದು ಅವರು ಹೇಳಿದರು.ಇದನ್ನು ನಾನು ರಾಷ್ಟ್ರಪತಿಯವರಿಗೆ ತಿಳಿಸಿದೆ. ಒಂದು ಕ್ಷಣ ಅವರು ಯೋಚಿಸಿದರು. “ಈ ಹಣವನ್ನೇಕೆ ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ನೀಡಬಾರದು? ನಿಮ್ಮ ಅಭಿಪ್ರಾಯವೇನು?” ಎಂದು ಕೇಳಿದರು.

“ಒಳ್ಳೆಯದು ಸರ್, ದೇವರು ನಿಮ್ಮನ್ನು ಮೆಚ್ಚುತ್ತಾನೆ” ಎಂದು ಹೇಳಿದೆ.“ಯಾವ ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ಹಣ ನೀಡಬೇಕೆಂಬುದನ್ನು ನೀವು ನಿರ್ಧರಿಸಿ” ಎಂದು ಕಲಾಂ ನನಗೆ ಸೂಚಿಸಿದರು. “ಈ ಹಣ ಪೋಲಾಗದಂತೆ ಖಾತ್ರಿಪಡಿಸಿಕೊಳ್ಳಿ” ಎಂದೂ ಹೇಳಿದರು. ನಾನು ಯಾವ ಸಂಸ್ಥೆಗೆ ಎಷ್ಟು ಸಾಮಾನುಗಳ ಅಗತ್ಯವಿದೆಯೆಂಬುದನ್ನು ನಿರ್ಧರಿಸಬೇಕಾಗಿತ್ತು. ಇಲ್ಲಿ ಜಾತಿ, ಮತ, ಧರ್ಮವನ್ನು ಪರಿಗಣಿಸುವಂತಿಲ್ಲ. ನಾನು ತಂಡಗಳನ್ನು ಸಂಘಟಿಸಿದೆ. ಈ ಸಂಸ್ಥೆಗಳಿಗೆ ಹಣ ಕೊಡದಿರಲು ನಿರ್ಧರಿಸಿದೆವು. ಇಪ್ಪತ್ತೆಂಟು ನಿರ್ಗತಿಕ ಮಕ್ಕಳ ಸಂಸ್ಥೆಗಳಿಗೆ ನಮ್ಮ ತಂಡದ ಕಾರ್ಯಕರ್ತರು ಅಕ್ಕಿ, ಹಿಟ್ಟು, ಬೇಳೆ, ಬ್ಲಾಂಕೆಟ್ ಹಾಗೂ ಸ್ವೆಟರ್‌ಗಳನ್ನು ವಿತರಿಸಿ ಬಂದರು. ಮಕ್ಕಳೆಲ್ಲ ಬಹಳ ಆನಂದಪಟ್ಟರು. ಈ ವಿವರಗಳನ್ನು ನಾನು ಕಲಾಂ ಅವರಿಗೆ ತಿಳಿಸಿದೆ.

ಆದರೆ ನನಗೆ ಮತ್ತೊಂದು ಅಚ್ಚರಿ ಕಾದಿತ್ತು.ಕಲಾಂ ಪುನಃ ನನ್ನನ್ನು ಕರೆದರು. ರೂಮಿನಲ್ಲಿ ನಾವಿಬ್ಬರೇ ಇದ್ದೆವು. ಅವರು ಸುತ್ತ ನೋಡಿ ಹೇಳಿದರು- “ನೀವು ಆ ಎಲ್ಲ ಸಾಮಾನು, ಸರಂಜಾಮುಗಳನ್ನು ಸರಕಾರಿ ಹಣದಲ್ಲಿ ಖರೀದಿಸಿ ವಿತರಿಸಿದ್ದೀರಿ. ಇಫ್ತಾರ್‌ಗೆ ನಾನು ನನ್ನ ಸ್ವಂತ ಹಣವನ್ನು ನೀಡುವವನಿದ್ದೆ. ನನ್ನ ವೈಯಕ್ತಿಕ ಖಾತೆಯಿಂದ ಒಂದು ಲಕ್ಷ ರೂ. ಚೆಕ್ ನೀಡುತ್ತೇನೆ. ಸರಕಾರಿ ಹಣವನ್ನು ಬಳಸಿದಂತೆ ಈ ಹಣವನ್ನೂ ಉಪಯೋಗಿಸಿ. ಆದರೆ ನಾನು ಹಣ ಕೊಟ್ಟಿದ್ದನ್ನು ಮಾತ್ರ ಯಾರಿಗೂ ಹೇಳಬೇಡಿ.”ನಾನು ಸರಕಾರಿ ಹಣವನ್ನು ವಿನಿಯೋಗಿಸಿದಂತೆ ಕಲಾಂ ನೀಡಿದ ಹಣವನ್ನು ಕರಾರುವಾಕ್ಕಾಗಿ ಬಳಸಿದೆ.ಕಲಾಂ ಅವರು ತಮ್ಮ ಸ್ವಂತ ಹಣದಲ್ಲಿ ಗಿಫ್ಟ್‌ಗಳನ್ನು ಖರೀದಿಸಿ ಬೇರೆಯವರಿಗೆ ನೀಡಿದ ಅನೇಕ ಪ್ರಸಂಗಗಳನ್ನು ಬೇರೆಯವರಿಗೆ ಹೇಳಿದ್ದನ್ನು ಇಲ್ಲಿ ನಾನು ಒಪ್ಪಿಕೊಳ್ಳುತ್ತೇನೆ.

***

ತಾನು ರಾಷ್ಟ್ರಪತಿಯೆಂದು ತೋರಿಸಿಕೊಳ್ಳಬೇಕೆಂಬ ಹುಸಿ ಆಡಂಬರ ಕಲಾಂ ಅವರಿಗಿರಲಿಲ್ಲ. ಅಂಥ ಪ್ರದರ್ಶನಗುಣವೆಂದರೇನು ಎಂಬುದು ಸಹ ಅವರಿಗೆ ಗೊತ್ತಿರಲಿಲ್ಲ. ಒಂದು ಸರಳ ನಿದರ್ಶನ. ರಾಷ್ಟ್ರಪತಿಯವರ ಅಧಿಕೃತ ಚಿತ್ರವೊಂದಿರುತ್ತದೆ. ಅದರ ಒಂದು ಮೂಲೆಯಲ್ಲಿ ಅವರ ಸಹಿಯಿರುತ್ತದೆ. ಈ ಫೋಟೊವನ್ನು ಎಲ್ಲ ಸರಕಾರಿ ಕಚೇರಿಗಳಲ್ಲಿ, ಭಾರತೀಯ ರಾಯಭಾರ ಕಚೇರಿಗಳಲ್ಲಿ ಹಾಗೂ ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ತಾಣಗಳಲ್ಲಿ ತೂಗುಹಾಕಬೇಕು. ಕಲಾಂ ರಾಷ್ಟ್ರಪತಿಯಾದಾಗ  ಸಂಗತಿಯನ್ನು ಅವರಿಗೆ ತಿಳಿಸಲಾಯಿತು. ಕಲಾಂ ಒಲ್ಲದ ಮನಸ್ಸಿನಿಂದ ಒಪ್ಪಿದರು. ನೀಲಿ ಅಂಗಿ ಬದಲು ಬಂದ್‌ಗಲಾ(ಕೊರಳು ಕಟ್ಟಿ ಕ) ಧರಿಸಿ ಫೋಟೊ ತೆಗೆಸಿಕೊಳ್ಳುವಂತೆ ಸೂಚಿಸಲಾಯಿತು. ಮೂರ್‍ನಾಲ್ಕು ಫೊಟೊಗಳು ಆಯ್ಕೆಯಾದ ಬಳಿಕ ಅಂತಿಮವಾಗಿ ಒಂದನ್ನು ಆಯ್ಕೆ ಮಾಡುವಂತೆ ಕಲಾಂ ನನಗೆ ಸೂಚಿಸಿದರು.

ನಾನು ಕೊನೆಗೊಂದನ್ನು ಆಯ್ಕೆ ಮಾಡಿದೆ. ಅದಕ್ಕೆ ಅವರೂ ಸಮ್ಮತಿಸಿದರು. ಅದೇ ನೀವು ನೋಡುತ್ತಿರುವ ಅಥವಾ ನೋಡಿದ ಚಿತ್ರ. ಅದರಲ್ಲಿ ಕಲಾಂ ಮುಗುಳ್ನಗುತ್ತಾ, ಕೊರಳ ಬಟನ್ ಹಾಕಿರದ ಕೋಟ್ ಧರಿಸಿದ ಫೋಟೊ!’ಇದು ನಾಚಿಕೆಗೇಡು!” ಹೀಗೆಂದು ಪ್ರತಿಕ್ರಿಯಿಸಿದವರು ಅಶ್ವಬೆಂಗಾವಲುಪಡೆಯ ಸದಸ್ಯ. ಅಂತಹ ನಾಚಿಕೆಗೇಡಿನ ಅಂಶವಾದರೂ ಏನು ಎಂದು ನಾನು ಕೇಳಿದೆ. “ರಾಷ್ಟ್ರಪತಿಯವರ ಫೋಟೊ ನೋಡಿ. ಅವರು ಭಾರತದ ರಾಷ್ಟ್ರಪತಿ. ಅವರ ಕಿಸೆಯಲ್ಲಿರುವುದು ಪೈಲಟ್ ಕಂಪನಿಯ ಬಾಲ್‌ಪಾಯಿಂಟ್ ಪೆನ್. ಅದರ ಬದಲು ಮಾಂಟ್‌ಬ್ಲಾಂಕ್ ಅಥವಾ ಪಾರ್ಕರ್ ಪೆನ್ ಇರಬೇಕಿತ್ತು” ಎಂದು ಜೋರಾಗಿ ಹೇಳಿದ.

ಒಂದು ಕ್ಷಣ ನಾನು ದಂಗಾದೆ. ತಕ್ಷಣ ನನಗೆ ಅನಿಸಿತು ಭಾರತ ಮಾಂಟ್‌ಬ್ಲಾಂಕ್ ಅಥವಾ ಪಾರ್ಕರ್ ಪೆನ್ನಿನಿಂದ ನಿರ್ದೇಶಿತವಾಗಿಲ್ಲ ಎಂದು. ಅದನ್ನು ಅವನಿಗೆ ಹೇಳಿ ಪ್ರಯೋಜನವಿಲ್ಲವೆಂದೂ ಅನಿಸಿತು. ಪೆನ್ನು ಯಾವ ಕಂಪನಿಯಾದರೇನು? ನಾವು ನಮ್ಮನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದೇವೆ. ಹೀಗಿರುವಾಗ ಪೆನ್ನೇನು ಮಹಾ? ಇವ್ಯಾವವೂ ಕಲಾಂ ಅವರಿಗೆ ಗೊತ್ತಿಲ್ಲದ ಸಂಗತಿಗಳು. ಪ್ರಾಯಶಃ ಈಗಲೂ. ಅವರಿಗೆ ಯಾವ ಪೆನ್ನಾದರೂ ಆದೀತು. ಸ್ಫುಟವಾಗಿ ಬರೆಯಲು ಬಂದರೆ ಆಯಿತು. ಅವರು ಪೆನ್ನಿನ ಬ್ರಾಂಡ್ ಬಗ್ಗೆ ಎಂದೆಂದೂ ತಲೆಕೆಡಿಸಿಕೊಂಡವರಲ್ಲ. ಮಾಂಟ್‌ಬ್ಲಾಂಕ್ ಅಥವಾ ಪಾರ್ಕರ್ ಬ್ರಾಂಡಿನ ಬಗ್ಗೆ ಅವರಿಗೆ ಗೊತ್ತಿದೆಯೋ ಇಲ್ಲವೋ?

ಶಿಷ್ಟಾಚಾರದ ಸೂಕ್ಷ್ಮ ವಿಷಯಗಳ ಬಗ್ಗೆ ಕೂಡ ಹಾಗೇ. ಅವರೆಂದೂ ತಲೆಕೆಡಿಸಿಕೊಂಡವರಲ್ಲ. ರಾಷ್ಟ್ರಪತಿಭವನದ ಒಳಗಿರಬಹುದು, ಹೊರಗಿರಬಹುದು ಅಥವಾ ವಿದೇಶಿಗಳಿಗೆ ಅಧಿಕೃತ ಭೇಟಿ ನಿಇಡಿದ ಸಂದರ್ಭವಿರಬಹುದು ಕಲಾಂ ಶಿಷ್ಟಾಚಾರಕ್ಕೆ ಒತ್ತು ನೀಡುತ್ತಿರಲಿಲ್ಲ. ಶಿಷ್ಟಾಚಾರದ ವೈಭವ, ಆಡಂಬರ, ಅಟ್ಟಹಾಸಗಳೆಂದರೆ ಅವರಿಗೆ ಆಗುತ್ತಿರಲಿಲ್ಲ. ರಾಷ್ಟ್ರಪತಿಭವನದಲ್ಲಿರುವ ನಮಗೆ ಹಾಗೂ ನಮಗಿಂತ ಹೆಚ್ಚಾಗಿ ವಿದೇಶಾಂಗ ವ್ಯವಹಾರಗಳ ಖಾತೆ ಅಕಾರಿಗಳಿಗೆ  ರಾಷ್ಟ್ರಪತಿಯವರು ಕನಿಷ್ಠ ಅನುಸರಿಸಲೇಬೇಕಾದ ಶಿಷ್ಟಾಚಾರದ ಬಗ್ಗೆ ಮನವರಿಕೆ ಮಾಡಿಕೊಡುವ ಹೊತ್ತಿಗೆ ಸುಸ್ತಾಗಿ ಹೋಗುತ್ತಿದ್ದೆವು. ಅದರಲ್ಲೂ ಮುಖ್ಯವಾಗಿ ವಿದೇಶ ಪ್ರವಾಸದಲ್ಲಿ ಶಿಷ್ಟಾಚಾರದ ಅಗತ್ಯದ ಬಗ್ಗೆ ಕಲಾಂ ಅವರಿಗೆ ಒತ್ತಿ ಹೇಳಿ ಅವರ ಮನವೊಲಿಸುವುದು ಕಷ್ಟವಾಗುತ್ತಿತ್ತು.

ಕಲಾಂ ಅವರಿಗೆ ಮರ್ಯಾದೆಯ ಕಟ್ಟುನಿಟ್ಟುತನ, ಬಾಹ್ಯೋಪಚಾರಗಳು ಇಷ್ಟವಾಗುತ್ತಿರಲಿಲ್ಲ. ಯಾರಾದರೂ ‘ಯುವರ್ ಎಕ್ಸಿಲೆನ್ಸಿ” ಎಂದು ಕರೆದರೆ ಕಿರಿಕಿರಿಯಾಗುತ್ತಿತ್ತು. ಸಭೆ-ಸಮಾರಂಭಗಳಲ್ಲಿ ಅವರನ್ನು ಹಾಗೇ ಸಂಬೋಧಿಸುವುದನ್ನು ಬಿಡಲಾಗುವುದಿಲ್ಲವೆಂಬುದು ಅವರಿಗೆ ಗೊತ್ತಿತ್ತು. ಅದನ್ನು ಸಹ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದರು. ಆದರೆ ಅವರಿಗೆ ಪರಿಚಿತ ಅತಿಥಿಗಳು, ದಿನನಿತ್ಯ ಅವರೊಂದಿಗೆ ಒಡನಾಡುವ, ವ್ಯವಹರಿಸುವ ಅಧಿಕಾರಿಗಳು ಹಾಗೇ ಸಂಬೋಧಿಸುವುದನ್ನು ಅವರು ಇಷ್ಟಪಡುತ್ತಿರಲಿಲ್ಲ. ಹಾಗೆಂದು ನಮಗೆ ಅವರ ಈ ಕೋರಿಕೆಯನ್ನು ಎಲ್ಲ ಸಂದರ್ಭಗಳಲ್ಲಿ ಈಡೇರಿಸಲು ಆಗುತ್ತಿರಲಿಲ್ಲ.

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: