ಆಲದ ಹೂವು ಹೂವಲ್ಲ, ಗೌರವ ಡಾಕ್ಟರೇಟ್ ಪದವಿಯಲ್ಲ!

ಅಮೆರಿಕದ ಮಿಷಿಗನ್ ನ ಸ್ಯಾಜಿನಾವ್ ವ್ಯಾಲಿಸ್ಟೇಟ್ ವಿಶ್ವವಿದ್ಯಾಲಯ ನೀಡಿರುವ ಗೌರವ ಡಾಕ್ಟರೇಟ್ ಪದವಿಯನ್ನು ಸ್ವೀಕರಿಸಿದ್ದಕ್ಕೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಎಲ್ಲ ವಲಯಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಕೆಲ ರಾಜಕಾರಣಿಗಳು ‘ಸುಳ್ಳುಬುರುಕುತನಕ್ಕೆ’ ನೀಡಿದ ಗೌರವ ಅಂತ ಜರಿದಿದ್ದಾರೆ. ಅಸಲಿಗೆ ಅವರು ಆ ಪದವಿಗೆ ಅರ್ಹರಾ? ಪದವಿ ನೀಡಿದ್ದರಿಂದ ಪದವಿಯ ಘನತೆಯಾದರೂ ಜಾಸ್ತಿಯಾಗಿದೆಯಾ? ಎಂತೆಂಥವರು ಈ ಪದವಿಯನ್ನು ‘ಗಳಿಸ’ಬಹುದು? ಲೇಖನದಲ್ಲಿ ಉತ್ತರಗಳಿವೆ.

ಮೊದಲೇ ಸ್ಪಷ್ಟಪಡಿಸುತ್ತೇನೆ.

ಇದು ಬಿ.ಎಸ್. ಯಡಿಯೂರಪ್ಪ ಅವರನ್ನು ಟೀಕಿಸುವ ಬರಹ ಅಲ್ಲ. ಒಂದು ವೇಳೆ ಈ ಬರಹದಿಂದ ಡಾ. ಬಿ.ಎಸ್. ಯಡಿಯೂರಪ್ಪನವರು ಬೇಸರಗೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ. ತಕರಾರಿರುವುದು ಯಡಿಯೂರಪ್ಪ ಅವರ ಬಗ್ಗೆ ಅಲ್ಲವೇ ಅಲ್ಲ. ಅದೇನಿದ್ದರೂ ಡಾ. ಯಡಿಯೂರಪ್ಪ ಅವರ ಬಗ್ಗೆ.

ಯಾಕೆಂದರೆ ಡಾ. ಯಡಿಯೂರಪ್ಪ ಸಹಜವಾಗಿ ಕಾಣುತ್ತಾರೆ. ಡಾ. ಯಡಿಯೂರಪ್ಪ ಕೃತ್ರಿಮವಾಗಿ ಗೋಚರಿಸುತ್ತಾರೆ. ಯಡಿಯೂರಪ್ಪನವರಲ್ಲಿ ಪರಿಶ್ರಮವಿದೆ, ಹೋರಾಟವಿದೆ. ಆದರೆ ಡಾ. ಯಡಿಯೂರಪ್ಪನವರಲ್ಲಿ ಅಂಥದ್ದೇನೂ ಕಾಣುವುದಿಲ್ಲ. ಯಡಿಯೂರಪ್ಪ ಅವರ ರಾಜಕೀಯ ಸಂಘರ್ಷ, ಹೋರಾಟದ ಬದುಕಿನಲ್ಲಿಯೇ `ಡಾಕ್ಟರ್’ ಇದ್ದಾನೆ. ಆದರೆ ಡಾ. ಯಡಿಯೂರಪ್ಪನವರಲ್ಲಿ ಯಾರಾದರೂ ಇದ್ದರೆ ಅವನು ಕಾಂಪೌಂಡರ್ ಮಾತ್ರ. ಕಾಂಪೌಂಡರ್ ಯಾವತ್ತೂ ಕಾಂಪೌಂಡರ್ರೇ. ಆತನೆಂದೂ ಡಾಕ್ಟರ್ ಆಗಲಾರ. ಆತ ಡಾಕ್ಟರ್ ಕೊಡುವ ಔಷಧ, ಮಾತ್ರೆಗಳನ್ನು ಕೊಟ್ಟರೂ ಆತನನ್ನು ಯಾರೂ ಹಾಗೆ ಭಾವಿಸುವುದಿಲ್ಲ. ಯಡಿಯೂರಪ್ಪ ಗೌರವ ಡಾಕ್ಟರೇಟ್ (ಗೌ.ಡಾ.) ಪಡೆದು ಡಾ. ಯಡಿಯೂರಪ್ಪ ಆಗಿದ್ದನ್ನು ಅದೇ ರೀತಿ ನೋಡಿದಾಗ, ಯಡಿಯೂರಪ್ಪನವರೇ ಎಷ್ಟೋ ವಾಸಿ ಎನಿಸುತ್ತದೆ, ಡಾ.ಯಡಿಯೂರಪ್ಪನವರಿಗಿಂತ.

ಅಮೆರಿಕದ ಸ್ಯಾಜಿನಾವ್ ವ್ಯಾಲಿಸ್ಟೇಟ್ ವಿಶ್ವವಿದ್ಯಾಲಯ ಯಡಿಯೂರಪ್ಪನವರಿಗೆ ಗೌ.ಡಾ. ನೀಡಿದ್ದೂ ಆಯಿತು, ಅವರು ತಮ್ಮ ಪಟಾಲಂ ಕಟ್ಟಿಕೊಂಡು ಖುದ್ದು ಹೋಗಿ ಪಡೆದು ಬಂದಿದ್ದೂ ಆಯಿತು. ಆರು ತಿಂಗಳ ಹಿಂದೆ ಅಕಾರಕ್ಕೆ ಬಂದ ಯಡಿಯೂರಪ್ಪನವರ `ಸಾರ್ವಜನಿಕ ಸೇವೆ’ ಗಮನಿಸಿ ಈ `ಗೌಡಾ’ವನ್ನು ಕರುಣಿಸಲಾಗಿದೆಯೆಂದು ವಿಶ್ವವಿದ್ಯಾಲಯ ಹೇಳಿಕೊಂಡಿದೆ. ಈ `ಗೌಡಾ’ವನ್ನು ಸ್ವೀಕರಿಸಬೇಕೋ,
ಬೇಡವೋ ಎಂಬುದನ್ನು ನಾವು ವಿಮರ್ಶಿಸುವುದಕ್ಕಿಂತ ಅಥವಾ ನಿಷ್ಕರ್ಷಿಸುವುದಕ್ಕಿಂತ ಸ್ವತಃ ಯಡಿಯೂರಪ್ಪನವರೇ ಕುಳಿತು ಯೋಚಿಸಿದ್ದರೆ, ಅದನ್ನು ನಾನು ಸ್ವೀಕರಿಸುವುದು ಎಷ್ಟು ಸರಿ, ನಿಜಕ್ಕೂ ನಾನು ಅಂಥ ಗೌರವಕ್ಕೆ ಪಾತ್ರನಾ, ಒಂದು ವೇಳೆ ಪಾತ್ರನಾಗಿದ್ದರೂ ಕೊಟ್ಟ ತಕ್ಷಣ ಒಪ್ಪಿಕೊಂಡು ಮುಂದಾಗಿ ಸ್ವೀಕರಿಸುವುದು ಸರಿಯಾ ಎಂದು ತಮ್ಮನ್ನು ತಾವೇ ಕೇಳಿಕೊಂಡಿದ್ದರೆ, ಖಂಡಿತವಾಗಿಯೂ `ಗೌಡಾ’ ಆಗುತ್ತಿರಲಿಲ್ಲ. ಅಷ್ಟೂ ಅಲ್ಲದೇ, ಅಮೆರಿಕದಿಂದ ಬರಬರುತ್ತಿದ್ದಂತೆ ಮನೆಮುಂದಿನ ತಮ್ಮ ಹಳೆ ನೇಮ್‌ಪ್ಲೇಟನ್ನು ಕಿತ್ತು ಹಾಕಿ `ಡಾ. ಬಿ.ಎಸ್. ಯಡಿಯೂರಪ್ಪ” ಎಂಬ ಹೊಸ ಬೋರ್ಡ್ ಬರೆಯಿಸಿ ಅದಕ್ಕೆ ಹೂಹಾರ ಹಾಕಿಸಿಕೊಳ್ಳುತ್ತಿರಲಿಲ್ಲ. ತಮ್ಮ ಸಚಿವ ಸಹೋದ್ಯೋಗಿಗಳಿಂದ ಪುಟಗಟ್ಟಲೆ ಜಾಹೀರಾತು ಹಾಕಿಸಿಕೊಳ್ಳುತ್ತಿರಲಿಲ್ಲ. ಅದಕ್ಕಾಗಿ ಇಲ್ಲಿ ಅಭಿನಂದನೆ, ಸನ್ಮಾನ ಮಾಡಿಸಿಕೊಳ್ಳುತ್ತಿರಲಿಲ್ಲ. ಈ ಕಾರಣಕ್ಕಾಗಿ ನಮಗೆ ಡಾ. ಯಡಿಯೂರಪ್ಪನವರಿಗಿಂತ ಯಡಿಯೂರಪ್ಪನವರೇ ವಾಸಿ ಎನಿಸುತ್ತಾರೆ.

ಉತ್ತರ ಕನ್ನಡದ ಶಿರಸಿ ಸೀಮೆ ಕಡೆ ವಾಡಿಕೆಯ ಮಾತೊಂದಿದೆ. `ಟೋಪಿಯನ್ನು ಯಾರು ಬೇಕಾದರೂ ಹಾಕಿಕೊಳ್ಳಬಹುದು, ಆದರೆ ಬಾಸಿಂಗವನ್ನು ಮದುಮಗ ಮಾತ್ರ ಧರಿಸಬೇಕು’. ಈ ಮಾತನ್ನು ಡಾಕ್ಟರೇಟ್, ಗೌರವ ಡಾಕ್ಟರೇಟ್‌ಗೂ ಅನ್ವಯಿಸಬಹುದು. ಗೌಡಾ ಟೋಪಿಯಿದ್ದಂತೆ. ಬಾಸಿಂಗ್ ಡಾಕ್ಟರೇಟ್ ಇದ್ದಂತೆ. ಯಾರು ಬೇಕಾದರೂ ಗೌಡಾ ಆಗಬಹುದು. ಆದರೆ ಪರಿಶ್ರಮಪಟ್ಟು ಓದಿದವನು, ಓದನ್ನು ಸಂಶೋಧನೆಯೆಂದು ಮನ್ನಿಸಿದವನು ಮಾತ್ರ ಡಾಕ್ಟರೇಟ್ ಪಡೆಯಬಲ್ಲ. ಈ ವಿವೇಚನೆ ಇಲ್ಲದಿದ್ದರೆ ಗೌಡಾ ನೀಡಲು ವಿಶ್ವವಿದ್ಯಾಲಯಗಳು ಸಾಲುಗಟ್ಟಿ ನಿಲ್ಲುತ್ತವೆ. ಅದೇ ಮಹಾನ್ ಸಾಧನೆಯ ಪ್ರಸಾದವೆಂದು ಅಪಾತ್ರರೂ ಅದಕ್ಕೆ ಕೈಒಡ್ಡುತ್ತಾರೆ. ತಮ್ಮ ಹೆಸರಿನ ಜತೆಗೆ ಬಾಲಂಗೋಚಿಯಂತೆ `ಡಾ.’ ಎಂದು ಬರೆದುಕೊಳ್ಳುತ್ತಾರೆ. ಇಂಥ ಮನಸ್ಸಿನ ಹಿಂದೆ, ಏನೂ ಮಾಡಲಾಗದಿದ್ದರೂ, ತಾನೇನೋ ಮಹಾನ್ ಸಾಧನೆ ಮಾಡಿದ್ದೇನೆಂದು ಜಗತ್ತಿಗೆ ಸಾರಿ ಹೇಳಬೇಕೆಂಬ ಒಬ್ಬ ಬಡಾಯಿಕೋರನ ವಾಂಛೆ ಉತ್ಕಟವಾಗಿರುತ್ತದೆ.

ಇರಲಿ, ಅಷ್ಟಕ್ಕೂ ನಮ್ಮ ಯಡಿಯೂರಪ್ಪನವರಿಗೆ ಇಂಥದೊಂದು ಗಿಲೀಟು ಪದವಿ ಬೇಕಾಗಿತ್ತಾ? ಇದು ತನಗೆ ಬೇಡವೆಂದು ಹೇಳಿದ್ದರೆ ಅವರು ಕಳೆದುಕೊಳ್ಳುವುದು ಏನೂ ಇರಲಿಲ್ಲ. ಒಂದು ಪಕ್ಷ ಬೇಡವೆಂದು ಹೇಳಿದ್ದರೆ ಅವರ ವಜನ್ ಇನ್ನೂ ಜಾಸ್ತಿಯಾಗುತ್ತಿತ್ತು. ಅಕಾರದಲ್ಲಿರುವವರ ಸುತ್ತಮುತ್ತ ಸದಾ ಒಂದು ಪಟಾಲಂ ಕೆಲಸ ಮಾಡುತ್ತಿರುತ್ತದೆ. ಓಲೈಸಲು, ಹೊಗಳಲು, ಅಟ್ಟಕ್ಕೇರಿಸಲು ನಿರಂತರ ಶ್ರಮಿಸುತ್ತಲೇ ಇರುತ್ತದೆ. ಇವೆಲ್ಲವುಗಳಿಗೆ ನಿತ್ಯವೂ ಈಡಾಗಿ ಹೆಗಲ ಮೇಲೆಯೇ ತಲೆಯಿಟ್ಟುಕೊಳ್ಳುವವನು, ಪ್ರಶಂಸೆಯ ಮಾತುಗಳನ್ನು ಕುಡಿದೂ ಕುಡಿದು ಅಮಲು ಏರಿಸಿಕೊಳ್ಳದವನೇ ನಿಜವಾದ ಅಕಾರಸ್ಥ. ಯಡಿಯೂರಪ್ಪನವರಿಗೆ ಈಗ ಯಾರು ಗೌಡಾ ಕೊಡಿಸಿದ್ದಾರೋ, ಅದೇ ಆಸಾಮಿ ಎಸ್.ಎಂ. ಕೃಷ್ಣ ಮುಖ್ಯಮಂತ್ರಿ [^]ಯಾಗಿದ್ದಾಗಲೂ ಅವರನ್ನು ಭೇಟಿ ಮಾಡಿ ನಿಮಗೂ ಒಂದು ಗೌಡಾ ಕೊಡಿಸುತ್ತೇನೆ ಎಂದಿದ್ದರಂತೆ. ಕೃಷ್ಣ ತಮ್ಮ ಸಹಾಯಕರನ್ನು ಕರೆದು `ಈ ಆಸಾಮಿಯನ್ನು ಗೇಟು ದಾಟಿಸಿ ಬನ್ನಿ’ ಎಂದು ಹೇಳಿದ್ದರು. ಆ ಆಸಾಮಿ ವಿಜಯ ಸಂಕೇಶ್ವರ ಅವರಿಗೂ ನಿಮ್ಮನ್ನು ಗೌಡಾ ಮಾಡ್ತೇನೆ ಎಂದು ಹೇಳಿತ್ತು. ಸಂಕೇಶ್ವರರು ಅವರನ್ನು ಅಲ್ಲಿಂದಲ್ಲಿಂದಲೇ ಪಾರ್ಸೆಲ್ ಮಾಡಿ ಸಾಗಹಾಕಿದ್ದರು. ಇವರಿಬ್ಬರು ಮನಸ್ಸು ಮಾಡಿದ್ದರೆ ಎಂದೋ ಸ್ಯಾಜಿನಾವ್‌ಗೆ ಹೋಗಿ ಗೌನು ಧರಿಸಿ ಬಂದಿರುತ್ತಿದ್ದರು!

ನಿಮಗೆ ನೆನಪಿರಬಹುದು, ಡಾ. ರಾಜ್‌ಕುಮಾರ್ ಅವರಿಗೆ ಅದ್ಯಾರೋ `ಕೆಂಟಕಿ ಕರ್ನಲ್’ ಎಂಬ ಯಾರೂ ಕೇಳದ ವಿಚಿತ್ರ ಬಿರುದನ್ನು ಕೊಟ್ಟರು. ಯಡಿಯೂರಪ್ಪನವರಿಗೆ ಗೌಡಾ ನೀಡಿದಂಥ ಆಸಾಮಿಗಳೇ ಡಾ. ರಾಜ್‌ಗೆ ಕೆಂಟಕಿ ಕರ್ನಲ್ ಕೊಡಿಸಿರಬಹುದು. ಅದ್ಯಾವುದೋ `ಕಂಟಕ ನಿವಾರಕ’ ಎಂಬಂತೆ ಡಾ. ರಾಜ್ ಹೆಸರಿನ ಹಿಂದೆ ಈ ಬಿರುದು, ಬಾವಲಿಯಂತೆ ಜೋತುಕೊಂಡಿತು. ಆಗ ಅವರ ಎಲ್ಲ ಸಿನಿಮಾಗಳ ಟೈಟಲ್ ಕಾರ್ಡ್‌ನಲ್ಲಿ `ನಟಸಾರ್ವಭೌಮ, ಕೆಂಟಕಿ ಕರ್ನಲ್ ಡಾ. ರಾಜ್‌ಕುಮಾರ್…’ ಎಂದೇ ರಾರಾಜಿಸುತ್ತಿತ್ತು. ಸಭೆ, ಸಮಾರಂಭಗಳಲ್ಲೂ ಡಾ. ರಾಜ್ ಕೆಂಟಕಿಕರ್ನಲ್! ಆದರೆ ಯಾರಿಗೂ ಇದ್ಯಾವ ಸೀಮೆ ಪ್ರಶಸ್ತಿ ಎಂಬುದೇ ಗೊತ್ತಿರಲಿಲ್ಲ. ಕೊನೆಗೊಂದು ದಿನ ಆತ್ಮೀಯರ್‍ಯಾರೋ ಡಾ. ರಾಜ್ ಬಳಿ ಹೋಗಿ, ಕೆಂಟಕಿ ಕರ್ನಲ್ ಅಂದ್ರೆ ನಮ್ಮ ಅಣ್ಣಮ್ಮದೇವಿ ಜಾತ್ರೇಲಿ ನೀಡುವ ಪ್ರಶಸ್ತಿ ಇದ್ದಂಗೆ ಅಂದರಂತೆ. ಅಂದೇ ಆ ಕಂಟಕ ನಿವಾರಣೆ ಆಯಿತು. ಕೆಲ ದಿನಗಳ ಬಳಿಕ ರಾಜಕೀಯ ದಲ್ಲಾಳಿ ಕೆ.ಕೆ. ಮೂರ್ತಿ, ಮೇಯರ್ ಕೆ.ಎಂ. ನಾಗರಾಜ್, ಮೂಲವ್ಯಾಧಿ ಡಾಕ್ಟರ್ ಬೇತಮಂಗಲ ಶಿವರಾಮ ಗೌಡರಿಗೂ `ಕೆಂಟಕಿ ಕರ್ನಲ್’ ಬಂತು! ಡಾ. ರಾಜ್‌ಗೆ ಹೇಗಾಗಿರಬೇಡ?

ಇಂದು ಗೌರವ ಡಾಕ್ಟರೇಟ್ ಪಡೆಯುವುದೆಂದರೆ ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕಿಂತ ಸುಲಭ. ಫ್ಲೆಕ್ಸ್ ಬೋರ್ಡ್ ಮೇಲೆ ಮನಸ್ಸಿಗೆ ಬಂದಂತೆ ಬರೆಯಿಸಿಕೊಂಡಷ್ಟೇ ಸಲೀಸು. ಅಕ್ಷರಶತ್ರುಗಳು, ಸರಸ್ವತಿಯ ಶಾಪಪುತ್ರರು ಸಹ ಗೌರವ ಡಾಕ್ಟರೇಟ್ ಪಡೆದುಕೊಳ್ಳಬಹುದು. ಇಂಟರ್‌ನೆಟ್ ಮೂಲಕ ಗೌರವ ಡಾಕ್ಟರೇಟ್ ಪಡೆದುಕೊಳ್ಳುವುದಂತೂ ಇನ್ನೂ ಸುಲಭ. ನೆಟ್‌ನಲ್ಲಿ ಫಾರ್ಮ್ ಭರ್ತಿ ಮಾಡಿ, ಕ್ರೆಡಿಟ್ ಕಾರ್ಡ್ ಮೂಲಕ 18 ಡಾಲರ್ (ಒಂಬತ್ತನೂರು ರೂಪಾಯಿ) ಪಾವತಿ ಮಾಡಿದರೆ, ಕ್ಷಣಾರ್ಧದಲ್ಲಿ ಗೌರವ ಡಾಕ್ಟರೇಟ್ ಸಿಗುತ್ತದೆ. ಬಣ್ಣದ ಪ್ರಿಂಟೌಟ್ ತೆಗೆಸಿ, ಫ್ರೇಮು ಹಾಕಿ ಹಳ್ಳು ಕಟ್ಟಿಸಿಕೊಂಡು ಗೋಡೆಗೆ ನೇತು ಹಾಕಿಕೊಂಡರೆ ನೀವೂ ಗೌಡಾ! ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡಿನಲ್ಲಿ `ಡಾ.’ ಎಂದು ಬರೆದುಕೊಂಡು, ಪತ್ರಿಕೆಯಲ್ಲಿ ಎರಡು ಸಲ `ಡಾ.’ ಎಂದೇ ಪ್ರಿಂಟಾದರೆ ಎಲ್ಲರ ಬಾಯಲ್ಲೂ ನಿಮ್ಮ ಹೆಸರಿನ ಹಿಂದೆ `ಡಾ.’ ಎಂಬ ಢಾವಣಿ. ನೀವು ದುಡ್ಡು ಕೊಟ್ಟು ಸಂಪಾದಿಸಿದ್ದೋ, ಸಂಶೋಧನೆ ಮಾಡಿ ಗಳಿಸಿದ್ದೋ, ಎಂಬಿಬಿಎಸ್ ಓದಿ ಪಡೆದಿದ್ದೋ ಎಂಬುದು ಗೊತ್ತೇಆಗುವುದಿಲ್ಲ. ಜಗತ್ತಿನ ದೃಷ್ಟಿಯಲ್ಲಿ ನೀವು ಡಾಕ್ಟರ್! ಆಹಾ! ಎಂಥ ಯಾತನೆಯೇ ಇಲ್ಲದ ಮಧುರಾನುಭವ!? ಇಂಟರ್‌ನೆಟ್‌ನಲ್ಲಿ ಈ ರೀತಿ ಗೌರವ ಡಾಕ್ಟರೇಟ್ ನೀಡುವ ಸುಮಾರು ಎರಡು ಸಾವಿರ ವಿಶ್ವವಿದ್ಯಾಲಯಗಳು… ಕ್ಷಮಿಸಿ… ವೆಬ್‌ಸೈಟ್‌ಗಳಿವೆ. ದುರಂತವೆಂದರೆ ಇವು ತಮ್ಮನ್ನು ವಿಶ್ವವಿದ್ಯಾಲಯಗಳು ಎಂದೇ ಕರೆದುಕೊಳ್ಳುತ್ತವೆ. ದುಡ್ಡು ಪಡೆದು ಗೌರವ ಡಾಕ್ಟರೇಟ್ ನೀಡುವುದಕ್ಕೆ ಮಾತ್ರ ಇವುಗಳ ಅಸ್ತಿತ್ವ. ದುರ್ದೈವವೆಂದರೆ ಈ ಖೊಟ್ಟಿ, ಅಸ್ತಿತ್ವದಲ್ಲೇ ಇಲ್ಲದ, ಬೋರ್ಡೂ ಇಲ್ಲದ, ಅಡ್ರೆಸ್ಸೇ ಇಲ್ಲದ ವಿ.ವಿ.ಗಳು ನೀಡುವ ಗೌಡಾವನ್ನು ಅನೇಕರು ತಮ್ಮ ಹೆಸರಿನೊಂದಿಗೆ ಮೆತ್ತಿಕೊಂಡು ಹುಸಿಖುಷಿಯಲ್ಲಿ ಬೀಗುತ್ತಿರುತ್ತಾರೆ. ಡರ್ಟಿ ಫೆಲೋಸ್!

ಅಷ್ಟಕ್ಕೂ ಗೌರವ ಡಾಕ್ಟರೇಟ್ ಅಂದ್ರೆ ಏನು? ವಿಕಿಪಿಡಿಯಾ ಪ್ರಕಾರ An honorary degree is an academic degree awarded to an individual as a decoration, rather as the result of matriculating and studying for several years. An honorary degree may be conferred by an institution that the recepient never attended. ಗೌರವ ಡಾಕ್ಟರೇಟ್ ನೀಡಿದ ವ್ಯಕ್ತಿಯ ಪ್ರಭಾವ ಬಳಸಿಕೊಂಡು ತನ್ನ ವರ್ಚಸ್ಸು ಹೆಚ್ಚಿಸಿಕೊಳ್ಳುವುದು ಹಾಗೂ ಲಾಭ ಗಿಟ್ಟಿಸಿಕೊಳ್ಳುವುದು ಆ ಪದವಿ ನೀಡುವ ಸಂಸ್ಥೆಗಳ ಉದ್ದೇಶ. ಈ ಗೌರವ ಡಾಕ್ಟರೇಟ್ ಕೊಡುವುದು ಇತ್ತೀಚಿನ ಸಂಪ್ರದಾಯ ಅಲ್ಲ. 1470ರಲ್ಲಿ ಮೊದಲ ಬಾರಿಗೆ ಲಿಯೊನೆಲ್ ವುಡ್‌ವಿಲ್ಲೆ ಎಂಬ ಬಿಶಪ್‌ಗೆ ಮೊದಲ ಬಾರಿಗೆ ಗೌಡಾ ಪದವಿ ನೀಡಲಾಯಿತು. ಅದನ್ನು ಕೊಡಮಾಡಿದ್ದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ. ಅವರಿಂದ ಹಿಡಿದು ಯಡಿಯೂರಪ್ಪನವರ ತನಕ ಅವೆಷ್ಟೋ ಮಂದಿ ಗೌಡಾಕ್ಕೆ ಪಾತ್ರರಾಗಿದ್ದಾರೆ. ಈ ಗೌರವಕ್ಕೆ ಭಾಜನರಾದವರು ಸಾಮಾನ್ಯವಾಗಿ ತಮ್ಮ ಹೆಸರಿನ ಮೊದಲು `ಡಾ.’ ಎಂದು ಬರೆದುಕೊಳ್ಳುವುದಿಲ್ಲ. ಯಾಕೆಂದರೆ ಇದು honorary degree. ಇನ್ನು ಡಾ. ಎಂದು ಬರೆಯಿಸಿಕೊಂಡವರು Dr.(H.D.) ಅಥವಾ ಆಡಿ. Dr.(H.C.) ಎಂದು ಸ್ಪಷ್ಟಪಡಿಸುತ್ತಾರೆ. ಇನ್ನು ಕೆಲವರಂತೂ ಡಾ. ಎಂದು ಬರೆಯಿಸಿಕೊಳ್ಳುವುದೇ ಇಲ್ಲ. ಇತ್ತೀಚೆಗೆ ರವೀಂದ್ರ ಭಾರತಿ ವಿಶ್ವವಿದ್ಯಾಲಯ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದಾಗ, ಸಾರ್ವಜನಿಕವಾಗಿಯೇ ಸ್ಪಷ್ಟಪಡಿಸಿದರು- “ರವೀಂದ್ರ ಭಾರತಿ ವಿ.ವಿ. ನೀಡಿದ ಗೌರವವನ್ನು ತುಂಬು ಮನಸ್ಸಿನಿಂದ ಸ್ವೀಕರಿಸಿದ್ದೇನೆ. ಆದರೆ ನನ್ನ ಹೆಸರಿನ ಮೊದಲು ನಾನು ಡಾ. ಎಂದು ಸೇರಿಸಿಕೊಳ್ಳಲು ಬಯಸುವುದಿಲ್ಲ. ದಯವಿಟ್ಟು ನನ್ನನ್ನು ಉಸ್ತಾದ್… ಎಂದೇ ಕರೆಯಿರಿ.”

ಇತ್ತೀಚೆಗಂತೂ ಗೌರವ ಡಾಕ್ಟರೇಟ್ ಪಡೆಯುವ ಹೊಸ ಹಾಗೂ ಕೆಟ್ಟ ಕ್ರೇಜ್ ಆರಂಭವಾಗಿಬಿಟ್ಟಿದೆ. ಎಲ್ಲರಿಗೂ ಹೆಸರಿಗೆ ಮೊದಲು ಡಾ. ಎಂದು ಕರೆಯಿಸಿಕೊಳ್ಳುವ ಚಟ. ಅದಕ್ಕಾಗಿಯಾರ್‍ಯಾರದೋ ಮನೆ ಬಾಗಿಲು ತಟ್ಟುತ್ತಾರೆ. ಆಮಿಷ ಒಡ್ಡುತ್ತಾರೆ. ಹಣ ಅಥವಾ ಅದಕ್ಕೆ ಸಮನಾದ, ಮಿಗಿಲಾದ ಏನನ್ನೂ ಕೊಡಲು ಸಹ ಸಿದ್ಧರಿರುತ್ತಾರೆ. ರಾಜಕಾರಣಿಗಳು, at any cost ಖರೀದಿಸಲು ಬದ್ಧ ಹಾಗೂ ಖರೀದಿಸಿಯೇ ಸಿದ್ಧ. ಇದು ಒಂದಾದರೆ, ಕೆಲವು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟನ್ನು ಮಾರಾಟಕ್ಕೆ ಇಡುತ್ತಿವೆ. ವಿ.ವಿ.ಯ ಕುಲಪತಿಗಳು, ಕುಲಾಪತಿಗಳಾದ ರಾಜ್ಯಪಾಲರು ತಮಗೆ ಬೇಕಾದವರಿಗೆ ಇದನ್ನು ನೀಡಿ ಬೇಳೆ ಬೇಯಿಸಿಕೊಳ್ಳುತ್ತಾರೆ. ಇತ್ತೀಚೆಗೆ ಲೀಡ್ಸ್ ಮೆಟ್ರೊಪಾಲಿಟನ್ ವಿಶ್ವವಿದ್ಯಾಲಯ ಹಿಂದಿ ಚಿತ್ರರಂಗದ ಶಿಲ್ಪಾಶೆಟ್ಟಿ, ಅಮಿತಾಭ್ ಬಚ್ಚನ್, ಶಬಾನಾ ಆಜ್ಮಿ, ಯಶ್ ಛೋಪ್ರಾ ಹಾಗೂ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್‌ರಿಗೆ ಗೌರವ ಡಾಕ್ಟರೇಟ್ ನೀಡಿ ವಿವಾದಕ್ಕೆ ಗುರಿಯಾಯಿತು. ಇದು ಗೊತ್ತಾಗಿದ್ದೇ ತಡ, ಬಾಲಿವುಡ್‌ನ ನಟ-ನಟಿಯರ ದೊಡ್ಡ ದಂಡು ತಮಗೂ ಗೌಡಾ ನೀಡಬೇಕೆಂದು ಕದ್ದು (ಗುಟ್ಟಾಗಿ) ಅರ್ಜಿ ಹಾಕಿದ್ದಾರಂತೆ. ಯಾರಿಗೆ ಕೊಡುವುದು, ಯಾರನ್ನು ಬಿಡುವುದು ಎಂಬುದೇ ದೊಡ್ಡ ತಲೆನೋವಾಗಿದೆಯಂತೆ. ವಿದ್ಯಾರ್ಥಿ ದೆಸೆಯಲ್ಲಿ ಓದಿದ್ದು ಅಷ್ಟೇ ಇದೆ, ಬರೆಯುವುದಂತೂ ದೂರವೇ ಉಳಿಯಿತು. ಆದರೆ ಎಲ್ಲರಿಗೂ ಹೆಸರಿಗೆ ಮೊದಲು ಡಾ. ಬೇಕು. ಇವರ್‍ಯಾರಿಗೂ ಐದಾರು ವರ್ಷ ಓದಿ ಪಿಎಚ್.ಡಿ. ಮಾಡಿ ಡಾಕ್ಟರ್ ಆಗಬೇಕೆಂಬ ಆಸೆಯಿಲ್ಲ. ಆದರೆ ಹಾಗೆ ಮಾಡಿ ಡಾಕ್ಟರ್ ಆಗಲು ಈ ಜನ್ಮದಲ್ಲಿ ಸಾಧ್ಯವಿಲ್ಲವೆಂದು ಮನವರಿಕೆಯಾಗಿರುವುದರಿಂದಲೇ ಈ ಕಳ್ಳಮಾರ್ಗ ಅಥವಾ short cutನಿಂದ `ಡಾ.’ ಆಗಲು ಹವಣಿಸುತ್ತಾರೆ. ಇವರ ಪಾಲಿಗೆ Ph.D. ಅಂದ್ರೆ ಪತ್ರಕರ್ತ ವೈಯೆನ್ಕೆ ಹೇಳುತ್ತಿದ್ದಂತೆ Precious hour of Drinking! ಅಷ್ಟೆ. ಗೌರವ ಡಾಕ್ಟರೇಟ್ ಎಂಬುದು ಈಗಂತೂ ಒಂದು ದಂಧೆಯಾಗಿ ಮಾರ್ಪಟ್ಟಿದೆ. (ದೇವೇಗೌಡರು ಪ್ರಧಾನಿಯಾಗುತ್ತಿದ್ದಂತೆ ಬೆಂಗಳೂರು ವಿ.ವಿ.ಯ ಅಂದಿನ ಕುಲಪತಿಗಳು ಅವರಿಗೆ ಗೌಡಾ ನೀಡಲು ಮುಂದಾಗಿದ್ದರು. ಅಂದಿನ ಉನ್ನತ ಶಿಕ್ಷಣ ಸಚಿವ ಹಾಗೂ ಅವರ ಪಕ್ಷದವರೇ ಆದ ಬಿ. ಸೋಮಶೇಖರ್ ಅದಕ್ಕೆ ಕಲ್ಲು ಹಾಕಿದ ಪ್ರಸಂಗ ನೆನಪಾಗುತ್ತದೆ.)

ಬಹಳ ಮಂದಿಗೆ ಗೊತ್ತಿರಲಿಕ್ಕಿಲ್ಲ. ನಮ್ಮ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಪಿಎಚ್.ಡಿ. ಮಾಡಿ ಡಾಕ್ಟರೇಟ್ ಪಡೆದವರಲ್ಲ. ಎಂಬಿಬಿಎಸ್ ಓದಿಯೂ ಡಾಕ್ಟರ್ ಆದವರಲ್ಲ. ಅವರು ಮೂಲತಃ ಏರೋನಾಟಿಕಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಹೋಲ್ಡರ್. ಈ ಕಾರಣಕ್ಕಾಗಿಯೇ ಡಾ. ಕಲಾಂ ಅವರು ಸ್ವತಃ ಆಸಕ್ತಿ ವ್ಯಕ್ತಪಡಿಸಿದರೂ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರ (ಐಐಎಸ್‌ಸಿ) ಅವರನ್ನು ಬೋಧಕರನ್ನಾಗಿ ನೇಮಿಸಿಕೊಂಡಿರಲಿಲ್ಲ. ಆಗ ಅವರು ಪ್ರಧಾನಿಗೆ ವೈಜ್ಞಾನಿಕ ಸಲಹೆಗಾರರಾಗಿ, ಪೋಖ್ರಾನ್ ಅಣು ಪರೀಕ್ಷೆಯ ನೇತೃತ್ವ ವಹಿಸಿ ಸೈ ಎನಿಸಿಕೊಂಡಿದ್ದರು. ಆದರೆ ಐಐಎಸ್‌ಸಿಯಂತಹ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಅತಿಥಿ ಉಪನ್ಯಾಸಕರಾಗುವ ಅವಕಾಶ ದೊರೆಯಬೇಕಾದರೆ ನಿರ್ದಿಷ್ಟ ಅರ್ಹತೆಯನ್ನು ಹೊಂದಿರಬೇಕು, ಐಐಎಸ್‌ಸಿಯಷ್ಟೇ ಪ್ರತಿಷ್ಠಿತ ವಿದ್ಯಾಸಂಸ್ಥೆಯ ಪಿಎಚ್‌ಡಿ ಹೊಂದಿರಬೇಕು. ಆದರೆ ಕಲಾಂ ಬಳಿ ಇದ್ದಿದ್ದು 1982ರಲ್ಲಿ ಅಣ್ಣಾ ವಿವಿ ನೀಡಿದ್ದ ಗೌರವ ಡಾಕ್ಟರೇಟ್. ಆಗಲೇ ಅವರು ಡಾ. ಅಬ್ದುಲ್ ಕಲಾಂ ಆಗಿದ್ದು. ಬಳಿಕ 30 ವಿಶ್ವವಿದ್ಯಾಲಯಗಳು ಅವರಿಗೆ ಗೌಡಾ ನೀಡಿದವು. ಮೊನ್ನೆ ಮೊನ್ನೆ ನಮ್ಮ ವಿಶ್ವೇಶ್ವರಯ್ಯ ತಾಂತ್ರಿಕ ವಿ.ವಿ. ಸಹ ಡಾ. ಕಲಾಂ ಅವರಿಗೆ ಗೌಡಾ ನೀಡಿ ಸನ್ಮಾನಿಸಿತು. ಡಾ. ಕಲಾಂ ಅವರು ಪಿಎಚ್.ಡಿ. ಮಾಡಿಲ್ಲ, ಅವರಿಗೆ ಸಿಕ್ಕಿರುವುದು ಗೌರವ ಡಾಕ್ಟರೇಟ್ ಅಂದ್ರೆ ಯಾರೂ ನಂಬುವುದಿಲ್ಲ. ಹಾಗೆ ನೋಡಿದರೆ ಅವರಂಥ ವ್ಯಕ್ತಿಗಳಿಗೆ ಗೌಡಾ ನೀಡಿದರೆ ವ್ಯಕ್ತಿಗಳಿಗಿಂತ ನೀಡಿದ ಸಂಸ್ಥೆಯ ಗೌರವ ಹೆಚ್ಚಾಗುತ್ತದೆ. ಅಲ್ಲದೇ ಗೌರವ ಡಾಕ್ಟರೇಟ್‌ಗೂ ಒಂದು ಕಿಮ್ಮತ್ತು ಬರುತ್ತದೆ, ಅದರ ಘನತೆ ಹೆಚ್ಚಾಗುತ್ತದೆ. ಕಲಾಂ ಅವರಂಥವರಿಗೆ ಯಾವುದೇ ಗೌರವ ಡಾಕ್ಟರೇಟ್ ಬೇಕಾಗಿಲ್ಲ. ಅದೇ ಒಬ್ಬ ಅಪಾತ್ರರಿಗೆ ಈ ಗೌರವ ಹೋದರೆ, ಅವರನ್ನು ಸಂದೇಹದಿಂದ ನೋಡುವಂತಾಗುತ್ತದೆ. ಡಾ. ಕಲಾಂ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಅಣ್ಣಾಮಲೈ ವಿ.ವಿ. ಯಾವುದೇ (ಕಳಪೆ) ರಾಜಕಾರಣಿಗೆ ಈ ಗೌರವ ನೀಡಿದರೆ, ಆಗ ಅದರ ಮಟ್ಟ ತನ್ನಿಂದತಾನೇ ಇಳಿಯುತ್ತದೆ. ಡಾ. ಕಲಾಂ ಅವರಿಗೆ ಕೊಟ್ಟು ಗಳಿಸಿದ ಮಾನ, ಮತ್ತೊಂದರಲ್ಲಿ ಹೋದಂತಾಗುತ್ತದೆ. ಹೀಗಾಗಿ ಗೌರವ ಡಾಕ್ಟರೇಟ್ ಪದವಿಯನ್ನು ಯಾರು ಸ್ವೀಕರಿಸುತ್ತಾರೆ ಎಂಬಷ್ಟೇ ಯಾರು ಕೊಡುತ್ತಾರೆ ಎಂಬುದೂ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಅದು ಕೊಡು-ಕೊಳ್ಳುವ ಒಂದು ದಂಧೆ ಅಥವಾ ವ್ಯವಹಾರವಾಗುತ್ತದೆ.

ಇವೆಲ್ಲ ಯೋಚಿಸಿದಾಗ ದೇಹ ತುಂಬಾ ಗೌನು ಧರಿಸಿ ಗೌಣವಾಗುವ ಬದಲು ಯಡಿಯೂರಪ್ಪನವರು ಡಾಕ್ಟರ್ ಆಗದೆ ಇದ್ದಿದ್ದರೇ ಒಳ್ಳೆಯದಾಗಿತ್ತು, ಒಮ್ಮೆ ಆದರೂ ಹೆಸರಿಗೆ ಮೊದಲು `ಡಾ.’ ಎಂಬ ಚುಂಗನ್ನು ಸೇರಿಸಿಕೊಳ್ಳಬಾರದಿತ್ತು ಎಂದು ಅನಿಸುವುದಿಲ್ಲವೇ? ಆಲದ ಹೂವು ಹೂವಲ್ಲ, ಗೌರವ ಡಾಕ್ಟರೇಟ್ ಪದವಿಯಲ್ಲ ಎಂಬುದು ಗೊತ್ತಾದರೆ ಸಾಕು, ಇನ್ನಾದರೂ.

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: