ಇದರ ಮುಂದೆ ಪಾಕ್ ಆಪಾಯ ಏನೇನೂ ಅಲ್ಲ! -Indian traffic? Always horrible!

ಅದೇನೂ ಹೊಸ ಸಂಗತಿಯಲ್ಲ. ನಮಗೆ ಗೊತ್ತಿರುವಂಥದ್ದೇ. ನಿತ್ಯವೂ ನಾವು ಅನುಭವಿಸುತ್ತೇವೆ. ಏನೂ ಮಾಡಲಾಗದೇ ಅಸಹಾಯಕತೆಯಿಂದ ಪರಿತಪಿಸುತ್ತೇವೆ. ಆದರೆ ಆತ ಹೇಳಿದ ರೀತಿ ಮಾತ್ರ ತುಸು ಯೋಚಿಸುವಂತೆ ಮಾಡಿತು.

ಇದರ ಮುಂದೆ ಪಾಕ್ ಆಪಾಯ ಏನೇನೂ ಅಲ್ಲ!ಪತ್ರಿಕೋದ್ಯಮದ ಅತ್ಯುನ್ನತ ಪ್ರಶಸ್ತಿ-ಪುಲಿಟ್ಜರ್ ಪುರಸ್ಕೃತ ಥಾಮಸ್ ಫ್ರೀಡ್‌ಮನ್ ಹೆಸರನ್ನು ಕೇಳಿದ್ದೀರಿ. World is Flat ಪುಸ್ತಕದ ಲೇಖಕ. ಈ ಕೃತಿಯ ಅರವತ್ತು ಲಕ್ಷ ಪ್ರತಿಗಳು ಮಾರಾಟವಾಗಿವೆ. ‘ನ್ಯೂಯಾರ್ಕ್ ಟೈಮ್ಸ್” ಪತ್ರಿಕೆಯ ಅಂಕಣಕಾರ. ಜಗತ್ತಿನಾದ್ಯಂತ ಸಂಚರಿಸಿ ಜಾಗತೀಕರಣದ ಪರಿಣಾಮವನ್ನು ಮನಮುಟ್ಟುವಂತೆ ಬರೆದವ. ಭಾರತದಲ್ಲೂ ಸಾಕಷ್ಟು ಪ್ರವಾಸ ಮಾಡಿರುವ ಫ್ರೀಡ್‌ಮನ್ ಇತ್ತೀಚಿನ ಭೇಟಿ ಮುಗಿಸಿ ಹೋಗುವಾಗ ಹೀಗೆ ಬರೆಯುತ್ತಾನೆ- “ಭಾರತ ನಿಜಕ್ಕೂ ಸ್ಫೋಟಕ ಅಪಾಯಕ್ಕೆ ಸಿಲುಕಿದೆ. ಇದಕ್ಕೆ ಖಂಡಿತವಾಗಿಯೂ ಪಾಕಿಸ್ತಾನವಾಗಲಿ, ತಾಲಿಬಾನ್ ಉಗ್ರಗಾಮಿಗಳಾಗಲಿ ಕಾರಣರಲ್ಲ. ದೇಶದ ಪ್ರತಿ ನಗರವೂ ಈ ಅಪಾಯದ ಅಂಚಿನಲ್ಲಿ ಸಿಲುಕಿ ನಲುಗುತ್ತಿದೆ. ಯಾವ ಕ್ಷಣದಲ್ಲೂ ಇದು ಸಿಡಿಯಬಹುದು. ದುರ್ದೈವವೆಂದರೆ ನಗರವೊಂದೇ ಅಲ್ಲ, ಸಣ್ಣಪುಟ್ಟ ಊರುಗಳಿಗೂ ಈ ಅಪಾಯದ ತೀವ್ರತೆ ವಿಸ್ತರಿಸುತ್ತಿದೆ.”

ಯಾವುದರಿಂದ ಅಪಾಯ ಎಂಬುದನ್ನು ಫ್ರೀಡ್‌ಮನ್ ತಟ್ಟನೆ ಬಿಟ್ಟುಕೊಡುವುದಿಲ್ಲ. ಅಪಾಯದ ತೀವ್ರತೆ ಹೇಳುತ್ತಾ ಹೇಳುತ್ತಾ ಕೊನೆಗೆ ಆತ ಗುಟ್ಟು ಬಿಟ್ಟುಕೊಡುತ್ತಾನೆ- “ಭಾರತದ ರಸ್ತೆಗಳು ಹಾಗೂ ವಾಹನಗಳು! ಇವೆರಡೂ ಯಾವುದೇ ಅಣುಬಾಂಬಿಗಿಂತ, ಉಗ್ರಗಾಮಿ ದಾಳಿಗಿಂತ ಭೀಕರ ಅಪಾಯ ತಂದೊಡ್ಡಿವೆ. ಪಾಕ್ ಒಡ್ಡುತ್ತಿರುವ ಅಪಾಯ ಏನೇನೂ ಅಲ್ಲ. ದುರಂತವೆಂದರೆ ಭಾರತದಲ್ಲಿ ಯಾರೂ ಈ ಬಗ್ಗೆ ಗಂಭೀರವಾಗಿ ಯೋಚಿಸುತ್ತಿಲ್ಲ. ಎಲ್ಲ ನಗರಗಳು ವಾಹನದಟ್ಟಣೆಯಿಂದ ಉಸಿರುಗಟ್ಟುತ್ತಿವೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಇನ್ನು ಒಂದೆರಡು ವರ್ಷಗಳಲ್ಲಿ ನಾವು ಊಹಿಸಲಾಗದ ಅನಾಹುತ ಸಂಭವಿಸುತ್ತದೆ. ಆಗ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಾಗುವುದಿಲ್ಲ.”

ಫ್ರೀಡ್‌ಮನ್ ಹೈದರಾಬಾದ್‌ಗೆ ಹೋದಾಗ ಅಲ್ಲಿನ ವಾಹನದಟ್ಟಣೆಯಲ್ಲಿ ಮೂರು ತಾಸು ‘ಕೊಳೆತ” ಅನುಭವವನ್ನು ಮಾರ್ಮಿಕವಾಗಿ ವರ್ಣಿಸಿದ್ದಾನೆ. “ನಾನು ಫ್ಲೈಓವರ್ ಮೇಲೆ ಸುಮಾರು ಎರಡು ತಾಸು ನಿಂತಿದ್ದೆ. ನನ್ನ ವಾಹನ ಒಂದಿಂಚು ಸಹ ಹಿಂದೆ-ಮುಂದೆ ಹೋಗುತ್ತಿರಲಿಲ್ಲ. ಆ ಪರಿ ಟ್ರಾಫಿಕ್ ಜಾಮ್. ನನ್ನ ಕಾರಿನ ಚಾಲಕ ಹೇಳಿದ, ನಿನ್ನೆಯಷ್ಟೇ ಈ ಫ್ಲೈಓವರ್ ಉದ್ಘಾಟನೆಗೊಂಡಿದೆಯೆಂದು. ಅಂದರೆ ಅದನ್ನು ನಿರ್ಮಿಸಿಯೂ ಏನೂ ಪ್ರಯೋಜನ ಇಲ್ಲವೆಂದಂತಾಯಿತು. ಹೀಗಾದರೆ ಏನು ಗತಿ?”

ಜಗತ್ತು ಊಹೆಗೂ ನಿಲುಕದಷ್ಟು ವೇಗವಾಗಿ ಚಲಿಸುತ್ತಿದೆಯೆಂದು ನಾವೆಲ್ಲ ಭಾವಿಸಿದ್ದೇವೆ. ಆದರೆ ನಾವೆಲ್ಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ. ನಮ್ಮ ಜೀವನದ ಬಹುಭಾಗ ಈ ವಾಹನದಟ್ಟಣೆಯೆಂಬ ನಿತ್ಯ ಜಣುಕಿನಲ್ಲಿ ಸಿಲುಕಿ ವಿಲವಿಲಿಗುಟ್ಟುತ್ತಿದೆ. ನಗರಜೀವನ ಅಸಹನೀಯವಾಗುತ್ತಿದೆ. ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕದೇ, ಅದರೊಳಗೆ ಮುಳುಗದೇ ದೈನಂದಿನ ಬದುಕು ಮೇಲೇಳುವುದೇ ಇಲ್ಲ. ಓಡಾಟವೇ ಸಾಧ್ಯವಿಲ್ಲದ ಬದುಕು ಅನಾಗರಿಕ ಸಂಸ್ಕೃತಿಯ ಅಪರಾವತಾರ. ಅಂಥ ಬದುಕನ್ನು ಕೇವಲ ಹತ್ತಾರು ವರ್ಷಗಳಲ್ಲಿ ನಮ್ಮ ಮುಂದೆ ನಿರ್ಮಿಸಿದ್ದೇವೆ. ಈ ಸಮಸ್ಯೆಗೆ ತಕ್ಷಣ ಪರಿಹಾರ ಸಾಧ್ಯವೇ ಇಲ್ಲ. ಇನ್ನು ಐದಾರು ವರ್ಷ ಹೀಗೇ ಬಿಟ್ಟರೆ, ಮತ್ತಷ್ಟು ದಟ್ಟಣೆಯಿಂದ, ಫ್ರೀಡ್‌ಮನ್ ಹೇಳಿದಂತೆ ಅಪಾಯ ಸ್ಫೋಟಗೊಳ್ಳಲಿದೆ! ಆದರೆ ಯಾರಿಂದಲೂ ಅದನ್ನು ತಡೆಯಲಾಗುತ್ತಿಲ್ಲವೆಂಬುದೇ ಈ ಕ್ಷಣದ ಸಂಕಟ.

ಭಾರತದ ದೊಡ್ಡ ಸಮಸ್ಯೆಯೇನೆಂದರೆ ರಸ್ತೆ. ಒಂದೋ ಇಲ್ಲಿ ರಸ್ತೆಗಳೇ ಇಲ್ಲ, ಇಲ್ಲವೇ ಒಳ್ಳೆಯ ರಸ್ತೆಗಳಿಲ್ಲ. ಹಳ್ಳಿ ರಸ್ತೆಗಳು ಬಿಡಿ. ಬೆಂಗಳೂರಿನಂಥ ನಗರದಲ್ಲೂ ಒಂದು ಕಿಮಿ ದೂರದ ರಸ್ತೆಯಲ್ಲಿ ಕನಿಷ್ಠ ಹತ್ತಾದರೂ ಹೊಂಡಗಳು ಸಿಗುತ್ತದೆ. ವರ್ಷಕ್ಕೆ ಎರಡು ಸಲ ಡಾಂಬರು ಉಣಿಸಿದರೂ ರಸ್ತೆಗಳೆಲ್ಲ ಹಾವು ಪೊರೆ ಕಳಚಿದಂತೆ ಹೊಪ್ಪಳಿಕೆಯೆಬ್ಬಿಸಿಕೊಂಡು ನಗ್ನವಾಗುತ್ತವೆ. ಊರಿನೊಳಗೆ ಇರುವ ರಸ್ತೆಗಳನ್ನು ಇಕ್ಕೆಲಗಳಲ್ಲಿರುವ ಅಂಗಡಿಕಾರರು, ಫುಟ್‌ಪಾತ್ ವರ್ತಕರು ತಿಂದುಹಾಕಿದ್ದಾರೆ. ರಸ್ತೆಗಳಿಗೆ ಹಾದಿಯೇ ಇಲ್ಲದಂತಾಗಿದೆ.

ರಸ್ತೆಯದೇ ಈ ಕತೆಯಾದರೆ ಅವುಗಳ ಮೇಲೆ ಓಡಾಡುವ ವಾಹನಗಳದ್ದು ಇನ್ನೊಂದು ಕತೆ. ಒಮ್ಮೆ ಫೋರ್ಡ್ ಕಾರು ಕಂಪನಿಗೆ ಭೇಟಿಕೊಟ್ಟ ಮೈಕ್ರೋಸಾಫ್ಟ್ ಮುಖ್ಯಸ್ಥ, ಜಗತ್ತಿನ ಅತ್ಯಂತ ಶ್ರೀಮಂತ ಬಿಲ್‌ಗೇಟ್ಸ್‌ನನ್ನು ಯಾರೋ ಕೇಳಿದರಂತೆ. ನೀವೂ ಕಾರನ್ನು ಉತ್ಪಾದಿಸುತ್ತೀರಾ ಎಂದು. ಅದಕ್ಕೆ ಗೇಟ್ಸ್ ನಕಾರಾತ್ಮಕವಾಗಿ ಉತ್ತರಿಸಿದನಂತೆ. ಒಂದು ವೇಳೆ ನೀವು ಕಾರು ತಯಾರಿಕೆಗಿಳಿದರೆ, ನಿಮ್ಮ ಕಾರು ಹೇಗಿರುತ್ತದೆ ಎಂದು ಕೇಳಿದರಂತೆ. ಅದಕ್ಕೆ ಬಿಲ್‌ಗೇಟ್ಸ್ ಹೇಳಿದನಂತೆ- “ನಾನು ಕಾರು ತಯಾರಿಕೆಗಿಳಿದರೆ ಮೊದಲು ರಸ್ತೆಗಳನ್ನು ಸರಿಪಡಿಸುತ್ತೇನೆ. ಅನಂತರ ಕಾರು ಉತ್ಪಾದನೆಗೆ ತೊಡಗುತ್ತೇನೆ. ನೀವೆಷ್ಟೇ ಆಧುನಿಕ, ಐಷಾರಾಮಿ ಕಾರನ್ನು ತಯಾರಿಸಿ, ರಸ್ತೆಯೇ ಸರಿಯಾಗಿಲ್ಲ ಅಂದ್ರೆ ಅವೆಲ್ಲವನ್ನೂ ನಿರ್ಮಿಸಿ ಏನು ಪ್ರಯೋಜನ?”

ನಮ್ಮ ಸ್ಥಿತಿ ಹಾಗೇ ಆಗಿದೆ. ಯಾವ ಬ್ರ್ಯಾಂಡ್ ಕೇಳಿ, ಆ ಎಲ್ಲ ಕಾರುಗಳೂ ನಮ್ಮಲ್ಲಿವೆ. ಆದರೆ ರಸ್ತೆ ಮಾತ್ರ ಇಲ್ಲ. ಕಾರುಗಳಲ್ಲಿ ಕುಳಿತುಕೊಳ್ಳುವುದು ಚೆಂದ, ಓಡಾಡಲು ಅಲ್ಲ. ಕಾರಣ ವಾಹನ ದಟ್ಟಣೆಯಲ್ಲಿ ಕಾರು ಚಲಿಸಿದರೆ ತಾನೆ? ಈ ಟ್ರಾಫಿಕ್ ಜಾಮ್ ಎಂಬ ಜಣುಕು ಅದ್ಯಾವ ಪರಿ ನಗರಜೀವನಕ್ಕೆ ಮಾರಕವಾಗಿದೆಯೆಂದರೆ, ಕಾರುಗಳನ್ನು ಬಿಡಿ, ಸೈರನ್ ಒದರಿಸಿಕೊಂಡು ಹೋಗುವ ಆಂಬ್ಯುಲೆನ್ಸ್‌ಗೂ ಜಾಗ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಹೊರಬರುವ ಕಲೆ ಗೊತ್ತಿದ್ದವನು ಚಕ್ರವ್ಯೂಹ ಭೇದಿಸಬಲ್ಲ.

ಗಣೇಶ ಹಬ್ಬ, ದೀಪಾವಳಿ ಸಂದರ್ಭಗಳಲ್ಲಿ ಬೆಂಗಳೂರನ್ನು ನೋಡಬೇಕು. ಈ ನಗರದೊಳಗೆ ಬರಲೂ ಆಗುವುದಿಲ್ಲ, ಹೊರಹೋಗಲೂ ಆಗುವುದಿಲ್ಲ. ಸಾಯಂಕಾಲ ಆರಕ್ಕೆ ಕಚೇರಿ ಬಿಟ್ಟವರು ಮಧ್ಯರಾತ್ರಿ ಹನ್ನೊಂದು-ಹನ್ನೆರಡಕ್ಕೆ ಮನೆ ತಲುಪುವುದುಂಟು. ಆರೇಳು ಕಿಮಿ ಕ್ರಮಿಸಲು ಐದಾರು ತಾಸುಗಳಾದರೂ ಬೇಕು! ಇದಕ್ಕಿಂತ ಹೀನಾಯ ಸ್ಥಿತಿ ಮತ್ತೇನಿದೆ? ನಾವು ಎಂಥ ರೀತಿಯ ಸಮಾಜ ನಿರ್ಮಿಸಲು ಹೊರಟಿದ್ದೇವೆ? ಹೊರಗೆ ಓಡಾಡಲೂ ಆಗದ, ವಾಹನಗಳಲ್ಲಿ ಚಲಿಸಲೂ ಆಗದ, ರಸ್ತೆಗಳೇ ಇಲ್ಲದ ನಗರ ನಿರ್ಮಿಸಿ ಮಾಡೋದಾದರೂ ಏನು?

ಮುಂದಿನ ವರ್ಷದಿಂದ ಕೇವಲ ಒಂದು ಲಕ್ಷ ರೂ.ಗೆ ಕಾರನ್ನು ನೀಡಲಿದ್ದೇವೆಂದು ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ ಹೇಳಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಈಗಲೇ ಉಸಿರುಗಟ್ಟಿರುವ ರಸ್ತೆಗಳ ಪಾಡು ಹೇಗಿದ್ದೀತು? ಲಕ್ಷ ರೂ. ಕಾರನ್ನು ಉತ್ಪಾದಿಸಬೇಡಿ ಅಥವಾ ಆ ಕಾರನ್ನು ಖರೀದಿಸಬೇಡಿ ಎಂದು ಹೇಳಲು ಸಾಧ್ಯವಿಲ್ಲ. ಮಧ್ಯಮ ವರ್ಗದವರಿಗೆ ಕೈಗೆಟಕುವಂಥ ಬೆಲೆಗೆ ಕಾರನ್ನು ಪೂರೈಸುವ ರತನ್ ಟಾಟಾ ಕನಸಿನ ಯೋಜನೆ ನಿಜಕ್ಕೂ ಸ್ತುತ್ಯರ್ಹವೇ. ಆದರೆ ರಸ್ತೆಯೇ ಇಲ್ಲದ ನಗರಗಳಲ್ಲಿ ಕಡಿಮೆ ಬೆಲೆಯ ಕಾರನ್ನು ನೀಡಿದರೆ, ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತಾಗುವುದು. ಹಾಗಾದರೆ ಕಾರು ಖರೀದಿಸಬೇಕೆಂಬ ಮಧ್ಯಮ ವರ್ಗದವರ ಕನಸು ನನಸಾಗಬೇಡವೇ? ಖಂಡಿತವಾಗಿಯೂ ಆಗಲೇಬೇಕು. ಆದರೆ ರಸ್ತೆಗಳೇ ಇಲ್ಲದ ಊರಲ್ಲಿ ಕಾರು ತಯಾರಿಸಿದರೆ, ನದಿ, ನೀರು ಇಲ್ಲದ ಕಡೆ ಹಡಗು ನಿರ್ಮಿಸಿದಂತಾಗುವುದಿಲ್ಲವೇ?

ಹಾಗೆ ನೋಡಿದರೆ ನಮಗೆ ಬೇಕಿರುವುದು ಉತ್ತಮ ರಸ್ತೆ ಹಾಗೂ mass transport system. ಇದನ್ನು ಉತ್ತಮಪಡಿಸಿದರೆ ಅರ್ಧಕ್ಕರ್ಧ ಸಮಸ್ಯೆ ಬಗೆಹರಿಯುತ್ತದೆ. ಭಾರತ ದೂರಸಂಪರ್ಕ ಕ್ಷೇತ್ರದಲ್ಲಿ (Telecommunication) ಮಾಡಿದ ಸಾಧನೆಯನ್ನು ಇಲ್ಲಿಯೂ ಕಾಪಿ ಮಾಡಬಹುದು. ಹತ್ತು ವರ್ಷಗಳ ಹಿಂದೆ ಲ್ಯಾಂಡ್‌ಲೈನ್ ಸಂಪರ್ಕ ಪಡೆಯಲು ಮಂತ್ರಿ, ಎಂಪಿಗಳ ಶಿಫಾರಸು ಬೇಕಿತ್ತು. ಈಗ ಭಿಕ್ಷುಕನೂ ಮೊಬೈಲ್ ಖರೀದಿಸಬಹುದಾಗಿದೆ. ಇದು ಹೇಗೆ ಸಾಧ್ಯವಾಯಿತು? ಕೆಟ್ಟು ಕಿಲುಸಾರೆದ್ದುಹೋದ ದೂರಸಂಪರ್ಕ ಕ್ಷೇತ್ರವನ್ನು ಸರಿಪಡಿಸುವುದು ಸಾಧ್ಯವಾಗುವುದಾದರೆ, ನಮ್ಮ ರಸ್ತೆಗಳನ್ನೇಕೆ ಸರಿಪಡಿಸಲಾಗುವುದಿಲ್ಲ?

ಇದು ಕೇವಲ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರಿನ ಸಮಸ್ಯೆ ಅಲ್ಲ. ಇದೊಂದು ಜಾಗತಿಕ ಸಮಸ್ಯೆ. ವಾಹನ ದಟ್ಟಣೆ ಕೇವಲ ರಸ್ತೆಗಳ ಮೇಲೆ ಒತ್ತಡ ಹೇರುತ್ತಿಲ್ಲ, ಪಾರ್ಕಿಂಗ್ ತಾಣಗಳ ಮೇಲೂ ಒತ್ತಡ ಹೇರುತ್ತಿದೆ. ಆದರೆ ಈ ದಿಸೆಯಲ್ಲಿ ನಾವೇನು ಮಾಡಿದ್ದೇವೆ? ಮಲೇಷಿಯಾ, ಕೋರಿಯಾ, ತೈವಾನ್‌ದಂಥ ದೇಶಗಳು 50ರಿಂದ 60 ಕಿಮಿ ಉದ್ದದ ಮೇಲ್ದಾರಿಗಳನ್ನು ನಿರ್ಮಿಸಿವೆ. ಅಂಡರ್‌ಬ್ರಿಡ್ಜ್‌ಗಳನ್ನು ಕಟ್ಟಿವೆ. ಪರ್ಯಾಯ ಮಾರ್ಗಗಳನ್ನು ಸೃಷ್ಟಿಸಿವೆ. Mass transport ವ್ಯವಸ್ಥೆ ಗಟ್ಟಿಗೊಳಿಸಿವೆ. ಟ್ರಾಫಿಕ್‌ಜಾಮ್‌ನಿಂದ ಟ್ಯಾಕ್ಸಿಯೊಳಗೇ ಅರ್ಧ, ಮುಕ್ಕಾಲು ಗಂಟೆ ಕಳೆಯಬೇಕಾದ ಪರಿಸ್ಥಿತಿಯುಂಟಾದಾಗ ಟ್ಯಾಕ್ಸಿಯೊಳಗೆ ಕಕ್ಕಸು (potty) ಕಲ್ಪಿಸುವುದು ಕಡ್ಡಾಯ ಎಂಬ ಕಾನೂನು ಮಾಡಿವೆ. ಪ್ರಥಮಚಿಕಿತ್ಸೆ ಪೆಟ್ಟಿಗೆಯಿಲ್ಲದ ಟ್ಯಾಕ್ಸಿಗಳ ಪರವಾನಿಗೆ ರದ್ದುಪಡಿಸುವ ನಿಯಮ ಜಾರಿಗೊಳಿಸಿವೆ. ಕೆಲವು ಟ್ಯಾಕ್ಸಿಗಳಲ್ಲಿ ಲ್ಯಾಪ್‌ಟಾಪ್‌ಗಳನ್ನು ಅಳವಡಿಸಲಾಗಿದೆ. ಟ್ರಾಫಿಕ್ ಜಾಮ್‌ನ ಕಿರಿಕಿರಿ ಅಷ್ಟರಮಟ್ಟಿಗೆ ತಗ್ಗಲಿ ಎಂದು ಈ ಎಲ್ಲ ಕ್ರಮ. ನಮ್ಮಲ್ಲಿ ನಾವು ಯಾವ ಕ್ರಮ ಕೈಗೊಂಡಿದ್ದೇವೆ ಟ್ರಾಫಿಕ್ ಪೊಲೀಸರನ್ನು ರಸ್ತೆಗಿಳಿಸಿದ್ದನ್ನು ಬಿಟ್ಟರೆ? ಅವರೂ ಸಹ ದಟ್ಟಣೆ ಸಮಯದಲ್ಲಿ ಎಲ್ಲೋ ಹೋಗಿರುತ್ತಾರೆ ಬಿಡಿ.

ಯುದ್ಧೋಪಾದಿಯಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಲು ಕ್ರಮ ಕೈಗೊಳ್ಳದಿದ್ದರೆ, ಎಲ್ಲ ನಗರಗಳೂ ಸ್ಫೋಟಗೊಳ್ಳಲಿವೆ ಎಂದು ಫ್ರೀಡ್‌ಮನ್ ಹೇಳಿದ್ದು ಇದೇ ಕಾರಣಕ್ಕೆ. ಪಾಕಿಸ್ತಾನವೇನಾದರೂ ಟಾಟಾ ಕಾರಿಗಿಂತ ಕಡಿಮೆ (ಲಕ್ಷ ರೂ.ಗಿಂತ ಕಡಿಮೆ) ಬೆಲೆಯಲ್ಲಿ ಕಾರು ನಿರ್ಮಿಸಿ, ಭಾರತದೊಳಗೆ ಒಂದೆರಡು ಕೋಟಿ ಕಾರು ಕಳಿಸಿದರೆ ಸಾಕು, ಉಗ್ರಗಾಮಿ ಚಟುವಟಿಕೆಗೆ ತೊಡಗಿಸುವುದಕ್ಕಿಂತ ಕಡಿಮೆ ಹಣದಲ್ಲಿ ಭಾರತದ ನಗರಗಳನ್ನು ಸುಸ್ತು ಹೊಡೆಸಬಹುದು, ಸೆನ್ಸೆಕ್ಸ್ ಕುಸಿಯುವಂತೆ ಮಾಡಬಹುದು, ಚಲನವಲನಕ್ಕೆ ಕಡಿವಾಣ ಹಾಕಬಹುದು. ಕ್ರಮೇಣ ಅಪಾಯಕ್ಕೆ ಸಿಲುಕಿಸಬಹುದು. ಭಾರತವನ್ನು ಗಂಡಾಂತರಕ್ಕೆ ಸಿಲುಕಿಸುವುದು ಅಷ್ಟೊಂದು ಸುಲಭ!

ಬೆಂಗಳೂರನ್ನೇ ತೆಗೆದುಕೊಳ್ಳಿ. ಇಲ್ಲಿನ ಜನಸಂಖ್ಯೆ ಸುಮಾರು 70ಲಕ್ಷ. ಇಲ್ಲಿ ಐದು ಲಕ್ಷ ಕಾರು, ಇಪ್ಪತ್ತೆರಡು ಲಕ್ಷ ದ್ವಿಚಕ್ರ ವಾಹನ, ಒಂದೂವರೆ ಲಕ್ಷ ಆಟೊರಿಕ್ಷಾ ಸೇರಿದಂತೆ ಸುಮಾರು ಮೂವತ್ತೆರಡು ಲಕ್ಷ ವಾಹನಗಳಿವೆ. ದಿಲ್ಲಿಯನ್ನು ಬಿಟ್ಟರೆ ಅತಿ ಹೆಚ್ಚು ಖಾಸಗಿ ವಾಹನಗಳಿರುವ ನಗರವೆಂದರೆ ಬೆಂಗಳೂರೇ. ಪ್ರತಿದಿನ ಕನಿಷ್ಠ 900ಹೊಸ ವಾಹನಗಳು ಬೆಂಗಳೂರಿನಲ್ಲಿ ರಸ್ತೆಗಿಳಿಯುತ್ತವೆ. ಆದರೆ ರಸ್ತೆ ಮಾತ್ರ ಒಂದಡಿ ಹೆಚ್ಚಾಗುವುದಿಲ್ಲ! ಯಾರೂ ಈ ದಿಸೆಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಇದು ಎಲ್ಲ ಊರುಗಳ ಕತೆಯೂ ಹೌದು.

ಲಂಡನ್‌ನಿಂದ ಬೆಂಗಳೂರಿಗೆ ಎಂಟು ತಾಸಿನಲ್ಲಿ ವಿಮಾನದಲ್ಲಿ ಬರಬಹುದು. ಆದರೆ ಬೆಂಗಳೂರಿನಿಂದ ನಮ್ಮ ರಾಜ್ಯದಲ್ಲಿಯೇ ಇರುವ ಗುಲ್ಬರ್ಗ ಅಥವಾ ಬೀದರ್‌ಗೆ ಹೋಗಲು ಹದಿನೈದು ತಾಸು ಬೇಕು. ಬೆಂಗಳೂರಿನಿಂದ ಮಂಗಳೂರಿಗೆ ವಿಮಾನದಲ್ಲಿ ಹೋಗಲು ೫೦ ನಿಮಿಷ ಸಾಕು. ನಮ್ಮ ಮನೆಯಿಂದ ವಿಮಾನ ನಿಲ್ದಾಣ ತಲುಪಲು ಎರಡು ತಾಸು ಬೇಕು! ಇದೆಂಥ ವಿಪರ್ಯಾಸ?

ವಾಹನವೆಂಬ ಉಗ್ರಗಾಮಿ, ರಸ್ತೆಯೆಂಬ ಮಾರಿ ಸೇರಿ ವಾಹನದಟ್ಟಣೆಯೆಂಬ ಬ್ರಹ್ಮರಾಕ್ಷಸನನ್ನು ಸೃಷ್ಟಿಸಿ ನಿತ್ಯದ ಬದುಕನ್ನು ನಲುಗಿಸುತ್ತಿದೆ.
ಅಪಾಯದ ಗಂಟೆ ಇನ್ನೂ ಕೇಳಿಸುವುದಿಲ್ಲ ಅಂದ್ರೆ ಏನು?

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: