ಈ ಬಾರಿ ಗಾಂಧೀಜಿ ಬಯಸಿದರೂ ಟಿಕೆಟ್ ಸಿಗೊಲ್ಲ, ಯಾಕೆಂದ್ರೆ! – No place for ‘Gandhis’ in assembly election

ಈ ಸಲವಾದರೂ ಒಂದು ಉತ್ತಮ ಸರಕಾರ ರಚಿಸಲು ಈ ರಾಜ್ಯದ ಜನತೆಗೆ ಒಂದು ಅದ್ಭುತ ಅವಕಾಶ ಸಿಕ್ಕಿತ್ತು. ಅದು ಮಣ್ಣುಗೂಡುತ್ತಿದೆಯೇನೋ ಎಂಬ ಅನುಮಾನ ಈಗ ದಟ್ಟವಾಗಿ ಕವಿಯಲಾರಂಭಿಸಿದೆ. ಚುನಾವಣೆಗೆ ಮುನ್ನವೇ ರಾಜ್ಯದ ಜನತೆ ಪರಾಭವ ಅನುಭವಿಸಿದ್ದಾರೆ. ಯಾಕೆಂದರೆ ಎಲ್ಲ ರಾಜಕೀಯ ಪಕ್ಷಗಳೂ ಪೈಪೋಟಿಗೆ ಬಿದ್ದವರಂತೆ ಅಕ್ರಮವಾಗಿ ದಿಢೀರನೆಹಣಗಳಿಸಿದವರಿಗೇ ಮಣೆ ಹಾಕುತ್ತಿವೆ.

ಇದರಲ್ಲಿ ಸ್ವಲ್ಪವೂ ಅತಿಶಯೋಕ್ತಿ ಇಲ್ಲ. ಇದು ಇಂದಿನ ಕಟುವಾಸ್ತವ!

ರಾಷ್ಟ್ರಪಿತ ಮಹಾತ್ಮ ಗಾಂಧಿಯವರೇನಾದರೂ ಬರಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಬಯಸಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿ(ಎಸ್) ನಾಯಕರಿಗೆ ಅರ್ಜಿ ಸಲ್ಲಿಸಿದ್ದರೆ ಖಂಡಿತವಾಗಿಯೂ ಆ ಮೂರೂ ಪಕ್ಷಗಳು ಅವರಿಗೆ ಸುತಾರಾಂ ಟಿಕೆಟ್ ಕೊಡುತ್ತಿರಲಿಲ್ಲ. ಯಾಕೆಂದರೆ ಟಿಕೆಟ್ ಕೊಡಲು ಅವರೇನು ಲ್ಯಾಂಡ್ ಡೆವಲಪರ್ರಾ? ಭೂಗಳ್ಳನಾ? ಗಣಿ ಗುತ್ತಿಗೆದಾರನಾ? ರೌಡಿ ಷೀಟರಾ? ಅವನ್ಯಾರು ಅಂತ ಟಿಕೆಟ್ ಕೊಡಬೇಕು? ಈಗಿನ ಟಿಕೆಟ್ ಆಕಾಂಕ್ಷಿಗಳಿಗಿರುವ ಯಾವ ಅರ್ಹತೆ ಅವನಿಗಿದೆ? ಅಷ್ಟಕ್ಕೂ ಈ ಚುನಾವಣೆಯಲ್ಲಿ ಸೆಣಸುವಷ್ಟು ಕೋಟಿಗಟ್ಟಲೆ ಹಣ ಅವನಲ್ಲಿದೆಯಾ? ಗೂಂಡಾ ಕಾರ್ಯಕರ್ತರನ್ನು ಸಾಕುವ, ಸಲಹುವ ತಾಕತ್ತು ಅವನಿಗಿದೆಯಾ? ಚುನಾವಣೆಯಲ್ಲಿ ಖರ್ಚು ಮಾಡಲು ಅಲ್ಲ, ಟಿಕೆಟ್ ಗಿಟ್ಟಿಸಲು ನಾಯಕರಿಗೆ ಕೊಡಬೇಕಲ್ಲ, ಅಷ್ಟಾದರೂ ಹಣ ಅವನಲ್ಲಿದೆಯಾ? ತಾನು ನಾಯಕನೆಂದು ಸಾಬೀತುಪಡಿಸಲು ಗಲ್ಲಿ ಗಲ್ಲಿಗಳಲ್ಲಿ ಫ್ಲೆಕ್ಸ್ ಬೋರ್ಡ್‌ಗಳನ್ನು ಹಾಕಿಕೊಳ್ಳುವಷ್ಟಾದರೂ ದುಡ್ಡು ಅವನಲ್ಲಿದೆಯಾ? ಟಿಕೆಟ್ ಕೊಟ್ಟ ನಂತರ ಪ್ರಚಾರ ಆರಂಭಿಸಬೇಕು, ಕಾರ್ಯಕರ್ತರನ್ನು ನಿಭಾಯಿಸಬೇಕು, ವಿರೋಧಿಯನ್ನು ಹಣ, ತೋಳ್ಬಲದಿಂದ ಮಣಿಸಬೇಕು, ಇವೆಲ್ಲ ಅವನಿಂದ ಸಾಧ್ಯಾನಾ? ಚುನಾವಣೆ ಹಿಂದಿನ ರಾತ್ರಿ ಮನೆಮನೆಗೆ ಸೀರೆ, ಧೋತಿ, ಮೂಗುತಿ, ಸಾರಾಯಿ ಹಂಚಬೇಕು, ಈ ಬಡಕಲನಿಂದ ಅವೆಲ್ಲ ಸಾಧ್ಯಾನಾ? ಇವನಿಗೇ ಉಡಲು, ಹೊದೆಯಲು ಬಟ್ಟೆಯಿಲ್ಲ, ಇನ್ನು ಜನರಿಗೇನು ಹಂಚುತ್ತಾನೆ? ಸತ್ಯ, ಸತ್ಯಾಗ್ರಹಗಳಿಂದ ಏನೂ ಪ್ರಯೋಜನವಿಲ್ಲವೆಂಬುದು ಗೊತ್ತಿದ್ದರೂ ಅವುಗಳಿಂದಲೇ ಹೋರಾಡುತ್ತೇನೆ ಅಂತಾನಲ್ಲ, ಇಂಥವನಿಗೆ ಟಿಕೆಟ್ ಕೊಟ್ಟರೆ ನಮ್ಮ ತಲೆ ಮೇಲೆ ನಾವೇ ಚಪ್ಪಡಿಕಲ್ಲು ಎಳೆದುಕೊಂಡಂತಾಗುವುದಿಲ್ಲವಾ?

ಹೀಗೆಲ್ಲ ಯೋಚಿಸುವ ಪಾರ್ಟಿ ನಾಯಕರು, “ಹೋಗಯ್ಯ, ನಿನ್ನಂಥವರಿಗೆ ಟಿಕೆಟ್ ಕೊಡಲು ನಮ್ಮದೇನು ಮಹಿಮಾ ಪಟೇಲರ ಸ್ವರ್ಣಯುಗ ಅಂತ ಭಾವಿಸಿದ್ದೀಯಾ? ಥೂ, ನಿನ್ನಜ್ಜಿ, ನಿನ್ನಂಥವನಿಗೆ ಟಿಕೆಟ್ ಕೊಟ್ಟರೆ ನಮ್ಮ ಪಕ್ಷ ಎಕ್ಕುಟ್ಟಿ ಹೋಗುತ್ತದೆ. ಟಿಕೆಟ್ ಬೇಕಂತೆ ಟಿಕೆಟ್, ಯೇ, ಏನ್ಮಾಡ್ತೀರೋ? ಇಂಥವರನ್ನು ಹೊರಗೆ ಕಳಿಸಿ, ಅಷ್ಟಕ್ಕೂ ಇವನನ್ನು ಒಳಗೆ ಬಿಟ್ಟವರಾರು?” ಎಂದು ಗದರುತ್ತಿದ್ದರು. ದಕ್ಷಿಣ ಆಫ್ರಿಕಾದಲ್ಲಿ ರೈಲಿನಿಂದ ಕತ್ತು ಹಿಡಿದು ನೂಕಿದ್ದರಲ್ಲ, ಅದೇ ರೀತಿ ಗಾಂಧಿಯೇನಾದರೂ ಟಿಕೆಟ್ ಬಯಸಿ ರಾಜಕೀಯ ಪಕ್ಷಗಳ ಮುಂದೆ ನಿಂತಿದ್ದರೆ ನಿರ್ದಾಕ್ಷಿಣ್ಯವಾಗಿ, ನಿರ್ದಯದಿಂದ ನೂಕುತ್ತಿದ್ದರು! ಟಿಕೆಟ್ ಗಿಟ್ಟಿಸಲು ವಿಫಲರಾಗುತ್ತಿದ್ದ ಗಾಂಧೀಜಿ ಆರಿಸಿ ಬರುವ ಮಾತು ದೂರವೇ ಉಳಿಯಿತು. ಇನ್ನು ಪಕ್ಷೇತರರಾಗಿ, ಬಂಡಾಯ ಅಭ್ಯರ್ಥಿಯಾಗಿ ನಿಂತರೆ ಇಡಗಂಟು ಜಪ್ತ್ ಆಗದಿರುತ್ತದೆಯೇ? ಗಾಂಧಿಯಲ್ಲಿ ಯಾವ ಅರ್ಹತೆ, ಉತ್ತಮಿಕೆಯಿದೆಯೆಂದು ಟಿಕೆಟ್ ಕೊಡಬೇಕಿತ್ತು, ಅವರಿಗೆ ಟಿಕೆಟ್ ನಿರಾಕರಿಸುವ ಮೂಲಕ ಪಕ್ಷದ ನಾಯಕತ್ವ ದಿಟ್ಟತನದ ನಿರ್ಧಾರ ತೆಗೆದುಕೊಂಡಿತು ಎಂದು ಪತ್ರಿಕೆಗಳೂ ವಿಶ್ಲೇಷಣೆ ಬರೆಯದೇ ಇರುತ್ತಿರಲಿಲ್ಲ.

ಚುನಾವಣೆ ಅಂದ್ರೆ ತಮಾಷೀನಾ? ಹುಡುಗಾಟವಾ? ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಅನಂತರವೂ ಗಾಂಧೀಜಿಯಂಥವರೆಲ್ಲ ಚುನಾವಣೆಗೆ ನಿಲ್ಲುವಂತಾಗಿಬಿಟ್ಟರೆ ಕಾಲ ಅಷ್ಟೆಲ್ಲ ಕೆಟ್ಟು ಹೋಯಿತಾ? ಈ ರಾಜ್ಯದಲ್ಲಿ ಹಾಗಾದರೆ ಅಭ್ಯರ್ಥಿಗಳಿಲ್ಲವಾ? ರಾಜಕೀಯ ಪಕ್ಷಗಳಿಗೆ ಅಷ್ಟೊಂದು ಬರ ಬಂದುಬಿಡ್ತಾ? ಹಾಗಾದರೆ ಕಾಕಪೋಕರು, ರೌಡಿಗಳು, ಭೂಗಳ್ಳರು, ಗಣಿ ಮಾಲೀಕರು, ಭ್ರಷ್ಟ ಅಧಿಕಾರಿಗಳು, ಅಧಿಕಾರ ಪಿಪಾಸುಗಳು, ಪಟ್ಟಭದ್ರರೆಲ್ಲ ಎಲ್ಲಿಗೆ ಹೋಗಬೇಕು? ನಮ್ಮ ರಾಜ್ಯಕ್ಕೆ ಅಂಥ ದರಿದ್ರ ಬಂದಿದೆಯಾ? 60-70 ವರ್ಷಗಳ ಹಿಂದೆ ಅದೇಗೋ, ಅದ್ಯಾಕೋ ಗಾಂಧೀಜಿಯನ್ನು ನಾಯಕ ಅಂತ ಒಪ್ಪಿಕೊಂಡೆವು. ಈಗಲೂ ಅವರಿಗೆ ಟಿಕೆಟ್ ಕೊಟ್ಟು ಆರಿಸಿ ತರುವುದೆಂದರೇನು?

ಸ್ವಲ್ಪವೂ ಅತಿಶಯೋಕ್ತಿ ಇಲ್ಲ. ಗಾಂಧೀಜಿಗೆ ನಮ್ಮ ರಾಜಕೀಯ ನಾಯಕರು ಟಿಕೆಟ್ ಕೊಡ್ತಾ ಇರಲಿಲ್ಲ. ಒಂದು ವೇಳೆ ಕೊಟ್ಟರು ಎಂದಿಟ್ಟುಕೊಳ್ಳಿ, ಜಪ್ಪಯ್ಯ ಅಂದ್ರೂ ಆರಿಸಿಬರುವುದಿಲ್ಲ. ಗಾಂಧೀಜಿಯನ್ನು ಹೇಗೆ accomodate ಮಾಡೋದು? ಯಾವ ಭೂಗಳ್ಳನನ್ನು ಪಕ್ಕಕ್ಕೆ ಸರಿಸಿ, ಅವರಿಗೆ ಟಿಕೆಟ್ ಕೊಡುವುದು? ಒಂದು ವೇಳೆ ಅಂಥ ದುಃಸ್ಸಾಹಸ ಮಾಡಿದರೆ ಭೂಗಳ್ಳನನ್ನು ಎದುರಿಸುವುದು ಹೇಗೆ? ಅವನ ಗಂಟಿಲ್ಲದೇ ಚುನಾವಣೆ ಎದುರಿಸುವುದು ಹೇಗೆ? ಗಾಂಧೀಜಿಯನ್ನು ಪಕ್ಕಕ್ಕೆ ಸರಿಸಿ ಭೂಗಳ್ಳನಿಗೆ ಟಿಕೆಟ್ ಕೊಟ್ಟರೆ ಹೆಚ್ಚೆಂದರೆ  ಏನಾದೀತು? ಗಾಂಧೀಜಿ ಉಪವಾಸ ಸತ್ಯಾಗ್ರಹ ಮಾಡಬಹುದು ತಾನೆ? ಮಾಡಿಕೊಳ್ಳಲಿ, ಅದಕ್ಕೆಲ್ಲ ಯಾರು ಹೆದರುತ್ತಾರೆ? ಆ ಕಾಲ ಎಂದೋ ಹೋಯಿತು. ಗಾಂಧೀಜಿಯಂಥವರೂ ಟಿಕೆಟ್ ಕೇಳುವ ಕಾಲ ಬಂತಲ್ಲಪ್ಪಾ? ಗಾಂಧೀಜಿ ಟಿಕೆಟ್ ಆಕಾಂಕ್ಷಿಯಾಗಿದ್ದಿದ್ದರೆ, ನಮ್ಮ ನಾಯಕರು, ರಾಜಕೀಯ ಮಂದಿ ಹೀಗೆ ಅಂದುಕೊಳ್ಳದಿದ್ದರೆ ಆಣೆ!

ನಮ್ಮ ಮುಂದಿನ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳಿಗೂ ಆದರ್ಶ, ಸಿದ್ಧಾಂತ, ತತ್ತ್ವ, ಸದಾಶಯ, ಬಡಜನರ ಉದ್ಧಾರ, ರಾಜ್ಯದ ಪ್ರಗತಿ… ಇವ್ಯಾವ  ಸಂಗತಿಗಳ ಬಗೆಗೂ ಕಿಂಚಿತ್ತೂ ಗೌರವ, ಕಾಳಜಿ ಇಲ್ಲವೇ ಇಲ್ಲ. ಒಂದು ವೇಳೆ ಇದ್ದಿದ್ದರೆ ಲಂಚಕೋರರು, ಭೂಗಳ್ಳರು, ಹೆಬ್ಬೆಟ್ಟುಗಳು, ಗಣಿ ಗುತ್ತಿಗೆದಾರರು… ಇವರ್‍ಯಾರಿಗೂ ಟಿಕೆಟ್ ಕೊಡುತ್ತಿರಲಿಲ್ಲ. ಯಾವುದೇ ನಾಗರಿಕ ಸಮಾಜ ಇವರನ್ನು ಜನಪ್ರತಿನಿಧಿಗಳು, ಪ್ರಜಾಪ್ರಭುತ್ವದ ಸೇವಕರು ಎಂದು ಪರಿಗಣಿಸಲು ಸಾಧ್ಯವಿಲ್ಲ. ಅಂಥವರೆಲ್ಲ ಇಂದು ಟಿಕೆಟ್ ಪಡೆಯುತ್ತಿದ್ದಾರೆ, ಚುನಾವಣೆಗೆ ನಿಲ್ಲುತ್ತಿದ್ದಾರೆ. ದುರಂತವೆಂದರೆ ಯಾವ ಪಕ್ಷವೂ ಅಭ್ಯರ್ಥಿಗಳನ್ನು ಸ್ಕ್ರೀನಿಂಗ್ ಮಾಡದಿರುವುದು. ಯಾರ ಬಳಿ ಹಣವಿದೆಯೋ, ಯಾರು ತಮಗೆ (ಪಾರ್ಟಿ ಫಂಡ್ ಅಂತಾರೆ ಇದನ್ನು) ಹಣ ಕೊಡುತ್ತಾರೋ ಅವರಿಗೆ ಮಾತ್ರ ಟಿಕೆಟ್. ಇದರ ಮುಂದೆ ಉಳಿದೆಲ್ಲ ಸಂಗತಿಗಳೂ ಗೌಣ. ಇವರ ಮುಂದೆ ಸಾಕ್ಷಾತ್ ಗಾಂಧೀಜಿಯೇ ಬಂದರೂ ಟಿಕೆಟ್ ಇಲ್ಲ!

ಈ ಸಲವಾದರೂ ಒಂದು ಉತ್ತಮ ಸರಕಾರ ರಚಿಸಲು ಈ ರಾಜ್ಯದ ಜನತೆಗೆ ಒಂದು ಅದ್ಭುತ ಅವಕಾಶ ಸಿಕ್ಕಿತ್ತು. ಅದು ಮಣ್ಣುಗೂಡುತ್ತಿದೆಯೇನೋ ಎಂಬ ಅನುಮಾನ ಈಗ ದಟ್ಟವಾಗಿ ಕವಿಯಲಾರಂಭಿಸಿದೆ. ಚುನಾವಣೆಗೆ ಮುನ್ನವೇ ರಾಜ್ಯದ ಜನತೆ ಪರಾಭವ ಅನುಭವಿಸಿದ್ದಾರೆ. ಯಾಕೆಂದರೆ ಎಲ್ಲ ರಾಜಕೀಯ ಪಕ್ಷಗಳೂ ಪೈಪೋಟಿಗೆ ಬಿದ್ದವರಂತೆ ಅಕ್ರಮವಾಗಿ ದಿಢೀರನೆ ಹಣಗಳಿಸಿದವರಿಗೇ ಮಣೆ ಹಾಕುತ್ತಿವೆ. ಸಜ್ಜನರು, ಸಮರ್ಥರು ಇಲ್ಲವೇ ಇಲ್ಲ ಎಂದಲ್ಲ. ಆದರೆ ಅಂಥವರ ಸಂಖ್ಯೆ ಅತ್ಯಲ್ಪ. ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಅಖೈರು ಪಟ್ಟಿ ಇನ್ನೇನು ಕೆಲದಿನಗಳಲ್ಲಿ ಪ್ರಕಟವಾಗುತ್ತದೆ.  ಆದರೆ ಆಯಾ ಪಕ್ಷಗಳ ಮುಂದೆ ನಿಂತಿರುವವರ ರುಬಾಬು, ಖದರು ನೋಡಿದರೆ ಅವರನ್ನು ಯಾವ ಆಂಗಲ್‌ನಿಂದ ನೋಡಿದರೂ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ.

ಉದಾಹರಣೆಗೆ  test case ಎಂಬಂತೆ ಪರಿಶೀಲಿಸೋಣ.  ಬಿಜೆಪಿ ಬೆಂಗಳೂರ್‌ನಲ್ಲಿ ಇಪ್ಪತ್ತೆಂಟು ಕ್ಷೇತ್ರಗಳ `ತಾತ್ಕಾಲಿಕ’ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಗೊತ್ತಿರಲಿ. ಈ ಪೈಕಿ ಸುಮಾರು ಹನ್ನೆರಡು ಮಂದಿ ರಂಗ ಎಸ್ಸೆಸ್ಸೆಲ್ಸಿ ! ಅಂದರೆ ಅವರೆಲ್ಲರ ವಿದ್ಯಾರ್ಹತೆ ಎಸ್ಸೆಸ್ಸೆಲ್ಸಿ ಅಥವಾ ಎಸ್ಸೆಸ್ಸೆಲ್ಸಿ ಫೇಲ್ಡ್ ! ಇವರಲ್ಲಿ ಕನಿಷ್ಠ ಹತ್ತು ಮಂದಿ ಭೂ ವ್ಯವಹಾರದಲ್ಲಿ ತೊಡಗಿಸಿಕೊಂಡವರು. ಇಬ್ಬರು ರೌಡಿಷೀಟರ್‌ಗಳು. ಅಧಿಕಾರಕ್ಕೆ ಬರಲಿರುವ ಪಕ್ಷ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಬಿಜೆಪಿ, ಬೆಂಗಳೂರಿನ ಉದ್ಧಾರಕ್ಕೆ ಕಣಕ್ಕೆ ಇಳಿಸಿರುವ ಅಭ್ಯರ್ಥಿಗಳ ಕಿರ್ದಿ ಇದು.

ಬಿಜೆಪಿಯ ನಾಯಕದ್ವಯರಾದ ಯಡಿಯೂರಪ್ಪ ಹಾಗೂ ಅನಂತಕುಮಾರ್ “ಬೆಂಗಳೂರು ಐಟಿ, ಬಿಟಿಗಳ ಕೇಂದ್ರ, ಸಿಲಿಕಾನ್ ಸಿಟಿ, ಏರೋಸ್ಪೇಸ್ ಸಿಟಿ ಎಂದೆಲ್ಲ ಹೇಳುತ್ತಾರೆ. ಬೆಂಗಳೂರು knowledge city” ಎಂದೆಲ್ಲ ಭಾಷಣ ಮಾಡುತ್ತಾರೆ. ಆದರೆ ಬೆಂಗಳೂರಿಗೆ ಇವರು ನಿಲ್ಲಿಸಿರುವ ಅಭ್ಯರ್ಥಿಗಳು ಹೀಗಿದ್ದಾರೆ. ಬೇರೆ ಪಕ್ಷಗಳ ಅಭ್ಯರ್ಥಿಗಳೂ ಇವರಿಗಿಂತ ಭಿನ್ನರಾಗಿರುತ್ತಾರೆಂದು ಭಾವಿಸುವಂತಿಲ್ಲ. ಯಾಕೆಂದರೆ ಬಿಜೆಪಿ ತನ್ನ  ಅಭ್ಯರ್ಥಿಯಾಗಿ ಭೂಗಳ್ಳನನ್ನು ನಿಲ್ಲಿಸಿದ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಜೆಡಿ(ಎಸ್) ಭೂಗಳ್ಳನನೇ ನಿಲ್ಲಿಸಬೇಕು, ನಿಲ್ಲಿಸುತ್ತದೆ. ಇಲ್ಲದಿದ್ದರೆ ಪೈಪೋಟಿ ಕೊಡುವುದು ಹೇಗೆ? ಹೀಗಾಗಿ ನಾವು ಯಾವುದೇ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದರೂ ಅದು ಅಕ್ರಮ ವ್ಯವಹಾರಸ್ಥನಿಗೆ ಮತ್ತಷ್ಟು ಅಕ್ರಮವೆಸಗಿಸಲು, ಪ್ರಜಾಸತ್ತಾತ್ಮಕವಾಗಿ ಅಕ್ರಮವೆಸಗಲು ಅನುವು ಮಾಡಿಕೊಟ್ಟಂತಾಗುತ್ತದೆ, ಹುರಿದುಂಬಿಸಿದಂತಾಗುತ್ತದೆ. ಅಂದರೆ ನಮ್ಮ ಮತವಿದೆಯಲ್ಲ ಅದರ ಮೇಲೆ ನಮ್ಮ ಆಯ್ಕೆಯ ಗುರುತು ಹಾಕುವುದಕ್ಕಿಂತ ಮೊದಲೇ ಕುಲಗೆಟ್ಟು ಹೋಗುತ್ತದೆ. ಅದಕ್ಕೇ ಹೇಳಿದ್ದು ಚುನಾವಣೆಗಿಂತ ಮೊದಲೇ ಸೋತವನೆಂದರೆ ಮತದಾರ! ಅಷ್ಟಕ್ಕೂ ಈ ಚುನಾವಣೆ ನಡೆಯುವುದು ಯಾವ ಪುರುಷಾರ್ಥಕ್ಕೆ, ಯಾರ ಹಿತಾರ್ಥಕ್ಕೆ? ಇದೊಂದು ರೀತಿಯಲ್ಲಿ  organised crime ಎಂದು ಅನಿಸುವುದಿಲ್ಲವೇ?

ಕರ್ನಾಟಕದಲ್ಲಿ ಮೊದಲ ಬಾರಿಗೆ ಅಂಥದ್ದೊಂದು ಕ್ರೈಮ್ ಮತದಾರನ ಮೇಲೆರಗಿ ಬರುತ್ತಿರುವುದರ ಸ್ಪಷ್ಟ ಸೂಚನೆ ಸಿಗುತ್ತಿದೆ. ಭಾರತದಲ್ಲಿ ಚುನಾವಣೆಯೇ ಭ್ರಷ್ಟಾಚಾರದ ಮೂಲ. ಲಂಚದ ಲಾವಂಚ ಮೊಳಕೆಯೊಡೆಯುವುದೇ  ಇಲ್ಲಿ. ಆದರೆ ಈ ಸಲ ಮತ್ತೂ  ಒಂದು ಹೆಜ್ಜೆ ಮುಂದೆ ಹೋಗಿರುವ ರಾಜ್ಯದ ರಾಜಕೀಯ ಪಕ್ಷಗಳು ಟಿಕೆಟ್ ನೀಡುವಾಗಲೇ ವಸೂಲಿಗೆ ಇಳಿದುಬಿಟ್ಟಿವೆ. ಬಹುತೇಕ ಎಲ್ಲವೂ ಪೇಮೆಂಟ್ ಸೀಟುಗಳು! ಮೆರಿಟ್‌ಗೆ ಟಿಕೆಟ್ ಇಲ್ಲ! ಭ್ರಷ್ಟಾಚಾರದ ಮೂಲ ಬೇರು ಮತ್ತಷ್ಟು ಆಳಕ್ಕೆ ಇಳಿದಿದೆ. ಈ ಬೇರಿನಿಂದ ಚಿಗುರು ಒಡೆಯುವ ಸರಕಾರವೆಂಬ ಮರಕ್ಕೆ ಮೈತುಂಬಾ ಭ್ರಷ್ಟ ಗೆದ್ದಲುಗಳು.  ಈ ಪ್ರಜಾಪ್ರಭುತ್ವದಲ್ಲಿ ಜನ ಸಾಮಾನ್ಯ ಅದೆಷ್ಟು ಅಸಹಾಯಕ, ದುರ್ಬಲ? ನಾವೆಲ್ಲ ಇಂಥ ಸರಕಾರ ಆರಿಸುವುದಕ್ಕಾಗಿ ಸಂಭ್ರಮಿಸಬೇಕಾ?  ಮತದಾರನ ಮುಂದೆ ಇರುವ ಆಯ್ಕೆಗಳಾದರೂ ಏನು? ಮಹಾಭ್ರಷ್ಟನಿಗಿಂತ ಭ್ರಷ್ಟ. ಮಹಾವಂಚಕನಿಗಿಂತ ಕಡಿಮೆ ವಂಚಕ, ಪರಮ ನೀಚನಿಗಿಂತ ಅಲ್ಪ ನೀಚರನ್ನು ಆರಿಸಬೇಕು. ಯಾರಿಗೇ ವೋಟು ಹಾಕಿದರೂ ಗೆಲ್ಲುವವರು ಅವರೇ. ಇವರೆಲ್ಲರ ಸಮೂಹವಾಗಿರುವ ವಿಧಾನಮಂಡಲ. ಇವರೆಲ್ಲರಿಂದ ಆಯ್ಕೆಯಾಗುವ ಶಾಸಕಾಂಗ ಪಕ್ಷದ ನಾಯಕ ಅರ್ಥಾತ್ ಮುಖ್ಯಮಂತ್ರಿ ಹೇಗಿರಬಹುದು? ಹಾಗೆಂದು ವೋಟು ಹಾಕದೇ ಇರುವಂತಿಲ್ಲ. ಎಂಥ ಪೇಚು, ಫಜೀತಿ?

ನಮಗೆ ಇಷ್ಟವಿಲ್ಲದಿದ್ದರೂ ಮತ ಹಾಕಲೇಬೇಕಾದ ಸಂದಿಗ್ಧ ಉಂಟಾಗಿರುವ ಈ ಚುನಾವಣೆ ಸಂದರ್ಭದಲ್ಲಿ ಅಂದಿನ ಭಾರತೀಯ ಜನಸಂಘದ ಅಗ್ರ ನಾಯಕರಲ್ಲಿ ಒಬ್ಬರಾಗಿದ್ದ ಪಂಡಿತ ದೀನದಯಾಳ ಉಪಾಧ್ಯಾಯ ಅವರು ಬರೆದ `ಪೊಲಿಟಿಕಲ್ ಡೈರಿ’ ಎಂಬ ಕೃತಿ ಓದುತ್ತಿದ್ದೆ. ನಲವತ್ತೇಳು ವರ್ಷಗಳ ಹಿಂದೆ (4 ಡಿಸೆಂಬರ್ 1961) ಬರೆದ your vote ಎಂಬ  ಅಧ್ಯಾಯದಲ್ಲಿ ದೀನದಯಾಳರು ಹೇಳುತ್ತಾರೆ “A number of people are given tickets for no other qualifications than their capacity to spend money. These people come in the field at election time and then hibernate for five years. they do not come to the people to solicit their votes but to purchase them. For them no price is too high.  All that they want is to grease their way to the assembly.  For them its a business deal.” ದೀನದಯಾಳರು ಈ ಮಾತನ್ನು ಕಾಂಗ್ರೆಸ್‌ನ್ನು ಗಮನದಲ್ಲಿರಿಸಿಕೊಂಡು ಹೇಳಿದ್ದರು. ದುರ್ದೈವವೆಂದರೆ ಈ ಮಾತನ್ನು ಅವರ ಪಕ್ಷದವರು ತಮಗೇ ಅನ್ವಯವಾಗುವಂತೆ ಪರಿವರ್ತನೆಯಾದುದು. ಎಲ್ಲ ಪಕ್ಷಗಳಲ್ಲೂ ಇದ್ದ ದೀನದಯಾಳರ ಆತ್ಮಕ್ಕೆ ಚಿರಶಾಂತಿ ಎಲ್ಲಿ?

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: