ಕ್ರಿಕೆಟ್ಟಿನಲ್ಲಿ ಸೋತಿದ್ದಕ್ಕೆ ನಾರಾಯಣಮೂರ್ತಿ ಕುಟ್ಟಿದ ತವಡು! – This is the way of Infosys Narayanamurthy’s analysis on Cricket…!

Fine. ಭಾರತದ ನಗರಗಳ ರಸ್ತೆಗಳು ಚೆನ್ನಾಗಿಲ್ಲ, ನಮ್ಮ ಜನಕ್ಕೆ ಶಿಸ್ತಿಲ್ಲ, ನಾವೆಲ್ಲ ಪರಮ ಸೋಮಾರಿಗಳು, ನಮ್ಮ ತರಬೇತು ವಿಧಾನದಲ್ಲೇ ತಪ್ಪಿದೆ-ಎಲ್ಲವೂ ನಿಜ. ಆದರೆ ಸ್ವಾಮೀ, ನಮಗಿಂತ ಕೊಳಕಾದ, ದುರ್ಭರವಾದ ದೇಶಗಳು ಶ್ರೀಲಂಕಾ ಮತ್ತು ಬಾಂಗ್ಲಾದೇಶ್‌! ಅಲ್ಲಿ ರಸ್ತೆಗಳೇ ಇಲ್ಲ. ಲಂಕಾದಲ್ಲಿ ಶವಗಳನ್ನು ತೆಗೆಯೋದೇ ಕಷ್ಟ. ದೇಶದ ಅರ್ಧ ಭಾಗಕ್ಕೆ ಎಂಟ್ರಿಯೇ ಸಿಗುವುದಿಲ್ಲ. ಅಂಥ ದೇಶದಿಂದ ಅವನ್ಯಾವನ್ರೀ ಕಲರ್‌ ತಲೆಯ ಮಾಲಿಂಗ? ಎದ್ದು ಬಂದವನೇ ಎಲ್ಲ ಶಿಸ್ತಿನ ಸಿಪಾಯಿಗಳಂಥ ದೇಶಗಳವರನ್ನೂ ನಿಲ್ಲಿಸಿ ಅಂಡಿನ ಮೇಲೆ ಬರೆ ಮೂಡುವಂತೆ ಬಾರಿಸಿ ಕ್ಯಾಕೆ ಹೊಡೆದನಲ್ಲ? ಅವನೇನು ಇನ್ಫೋಸಿಸ್‌ನಲ್ಲಿ ತರಬೇತಿ ತಗೊಂಡಿದ್ದನಾ? ಸದರಿ ನಾರಾಯಣಮೂರ್ತಿಯವರು ಇನ್ನೊಂದು ಪ್ಯಾರಾ ಬರೆಯುತ್ತಾರೆ ನೋಡಿ:

‘ನೀವು ಒಬ್ಬರಿಗೆ ಒಂದು ಜವಾಬ್ದಾರಿ ಹೊರಿಸಿದ ಮೇಲೆ, ನಿಮ್ಮ ತೀರ್ಪು ಹೇಳಿದ ಮೇಲೆ ಯಾವುದೇ ರೀತಿ ಅದರೊಳಕ್ಕೆ ತಲೆಹಾಕದೆ ಅವರಿಗೆ ಕೆಲಸ ಮಾಡಲು ಬಿಡಿ. ನಮ್ಮ ಇನ್ಫೋಸಿಸ್‌ನಲ್ಲಿ ಮೊದಲು ಚರ್ಚೆ, ವಾದ-ಪ್ರತಿವಾದ ಎಲ್ಲವೂ ಮೊದಲೇ ಆಗಿ ಯಾರಿಗೆ ನಾವು ಒಂದು ಕೆಲಸದ ಜವಾಬ್ದಾರಿ ಹೊರಿಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ. ಒಮ್ಮೆ ತೀರ್ಮಾನಿಸಿದ ನಂತರ, ಒಬ್ಬ ವ್ಯಕ್ತಿಯನ್ನು ‘ಬಾಸ್‌’ ಅಂತ ಒಪ್ಪಿಕೊಂಡ ನಂತರ ಅಲ್ಲಿಗೆ ಎಲ್ಲ ವಾದಗಳೂ ಮುಗಿದು ಹೋಗಿ ಎಲ್ಲರೂ ಅವನ ಬೆನ್ನ ಹಿಂದೆ ನಿಲ್ತೇವೆ! ’ (ಹೀಗೆ ನಾವು ಮಾಡುತ್ತೇವಾದ್ದರಿಂದ ಕೋಚ್‌ನ ಬಗ್ಗೆ ನೀವು ತಕರಾರು ತೆಗೆಯಬಾರದು ಎಂಬುದು ಯಜಮಾನ್‌ ನಾರಾಯಣಮೂರ್ತಿಯವರ ಮಾತಿನ ಅರ್ಥ).

‘ನಂಗೊತ್ತು, ಪ್ರಕ್ರಿಯೆ ಅಥವಾ ಪ್ರೊಸೀಜರ್‌ ಎಂಬುದು ಗೇಲಿಯ ಸಂಗತಿಯಾಗಿ ಹೋಗಿದೆ. ಆದರೆ ನಮ್ಮ ಇನ್ಫೋಸಿಸ್‌ನಲ್ಲಿ ನಾವು ‘ಪ್ರಾಸೆಸ್‌’ನ್ನ ಬಲವಾಗಿ ನಂಬಿಕೊಂಡು ಅದನ್ನು ಫಾಲೋ ಮಾಡ್ತೇವೆ. ಇದರಿಂದ ನಮಗೆ ತುಂಬ ಸಹಾಯವಾಗಿದೆ. ಛಾಪೆಲ್‌ನ ‘ಪ್ರಾಸೆಸ್‌’ ಯಶಸ್ವಿಯಾಗಲಿಲ್ಲವೆಂದರೆ, ಬಹುಶಃ ಅದನ್ನು ನಮ್ಮವರು ಸರಿಯಾಗಿ ಫಾಲೋ ಮಾಡಿರಲಿಕ್ಕಿಲ್ಲ. ಅಥವಾ ಅದನ್ನು ಸಂಪೂರ್ಣವಾಗಿ ಜಾರಿಗೆ ತರಲಿಕ್ಕೆ ಅವಕಾಶ ಕೊಟ್ಟಿರಲಿಕ್ಕಿಲ್ಲ… ’ ಅಂತೆಲ್ಲ ಬರೆದು ಕಡೆಗೆ ಪ್ಲೇಯರುಗಳನ್ನು ಹೇಗೆ ಆಯ್ಕೆ ಮಾಡಬೇಕು, ಹೇಗೆ ತರಬೇತಿ ಕೊಡಬೇಕು, ಹೇಗೆ ಅವರ ಸಂಬಳಗಳನ್ನು ನಿಗದಿ ಮಾಡಬೇಕು, ಹೇಗೆ ನೌಕರಿಯಿಂದ ವಜಾ ಮಾಡಬೇಕು ಅಂತೆಲ್ಲ ವಿವರಿಸಿ ಕಡೆಗೆ ‘ಎಂಟೂ… ಎಂಟು ತಾಸು, ಎಂಟು ತಾಸು ಅವರಿಂದ ಕೆಲ್ಸ ಮಾಡ್ಸಿ ’ಎಂದು ಶುದ್ಧ ಇನ್ಫಿ ಧಣಿಯಂತೆ ಅಪ್ಪಣೆ ಕೊಡುತ್ತಾರೆ ನಾರಾಯಣಮೂರ್ತಿಗಳು.

ಯಾರಾದರೂ ಕ್ರಿಕೆಟ್ಟಿಗರು ಇದನ್ನು ಓದಿದ್ದಿದ್ದರೆ ಏನನ್ನುತ್ತಿದ್ದರೋ ಗೊತ್ತಿಲ್ಲ. ನಾರಾಯಣಮೂರ್ತಿಯವರ ಇನ್ಫೋಸಿಸ್ಸೂ ಹುಟ್ಟಿ ಹತ್ತು ವರ್ಷಗಳಾಗುವ ತನಕ ಮನೆಯ ಕರಿಬೇವು ಕೊತ್ತಂಬರಿಗೆ ಆಗುವಷ್ಟು ಲಾಭದ ಕಾಸು ಅದರಲ್ಲಿ ಹುಟ್ಟುತ್ತಿರಲಿಲ್ಲ ಎಂಬುದನ್ನು ಅವರು ಮರೆತಂತಿದೆ. ಇದೇ ಭಾರತವೆಂಬ ‘ಕಕ್ಕ ಕಕ್ಕ’ ದೇಶದ ರಸ್ತೆಗಳಿಂದ, ಕೊಳಕು ನಗರಗಳಿಂದ, ದಡ್ಡ ಕಾಲೇಜುಗಳಿಂದ ಅವರು ಇಂಜಿನೀರ್‌ಗಳನ್ನು ಆರಿಸಿಕೊಂಡು, ಅವರ ಕೈಲಿ most non creative ಎಂಬಂಥ ಕೆಲಸ ಮಾಡಿಸುತ್ತಿದ್ದಾರೆಂಬುದನ್ನು ಮರೆತಂತಿದೆ. ತಮ್ಮ ಪ್ರಾಸೆಸ್‌ ಮತ್ತು ಡಿಸಿಪ್ಲೀನುಗಳಿಗಿಂತಲೂ ಇನ್ಫೋಸಿಸ್‌ನ ದೈತ್ಯ ಲಾಭಗಳಿಗೆ ನಂದನ್‌ ನಿಲೇಕಣಿಯಂತಹ ಜೀನಿಯಸ್ಸುಗಳ, ಫಣೀಶ್‌ರಂತಹ ಚತುರ ಅಧಿಕಾರಿಗಳ ‘ಜೀನಿಯಸ್ಸು’-ಮೇಧಾಶಕ್ತಿ ಹೆಚ್ಚು ಕಾರಣ ಎಂಬುದನ್ನು ನಾರಾಯಣಮೂರ್ತಿ ಮರೆತಂತಿದೆ.

ಅಂತಿಮವಾಗಿ, ಕ್ರಿಕೆಟ್‌ನಂಥ ಆಟದ ಬಗ್ಗೆ ಕಾರ್ಪೊರೇಟ್‌ ಶೈಲಿಯ ಅಪ್ಪಣೆಗಳನ್ನು ನಾ.ಮೂ.ಜಾರಿ ಮಾಡುತ್ತಾರಲ್ಲ? ಅವರದೇ ಬೆಂಗಳೂರು ಕಚೇರಿಯಲ್ಲಿ ದೈತ್ಯ ಗಾತ್ರದ ಗಾಜಿನ ಗೋಪುರವೊಂದು ಕುಸಿದು ಬಿದ್ದು ಬಡಪಾಯಿ ಕೂಲಿ ಕಾರ್ಮಿಕರು ಸತ್ತು ಹೋದರು. ಯಾಕೆ ಸ್ವಾಮಿ, ಅದಕ್ಕೆ ಮುಂಚೆ ಗಾಜಿನ ಡೂಮ್‌ ಹೇಗೆ ಕೂಡಿಸಬೇಕು ಎಂಬುದರ ಕುರಿತು ಚರ್ಚೆ-ವಾದ-ಪ್ರತಿವಾದಗಳು ಆಗಿ ಆ ಕೆಲಸಕ್ಕೆ ಯಾರನ್ನು ‘ಬಾಸ್‌’ ಆಗಿ ನೇಮಿಸಬೇಕು, ಯಾರಿಗೆ ಕಾಂಟ್ರಾಕ್ಟು ಕೊಡಬೇಕು, ಅವರಿಗೆ ಮೆರಿಟ್ಟಿದೆಯಾ, ಎಂಟು ತಾಸು ಕೆಲಸ ಮಾಡುತ್ತಾರಾ, ಜಾಗತಿಕ ನಿಯಮಾವಳಿಗಳ ತರಬೇತಿ ಆಗಿದೆಯಾ ಅಂತೆಲ್ಲ ವಿಚಾರಿಸಿರಲಿಲ್ಲವಾ? ಕುಸಿದ ಡೂಮ್‌ನ ಮುಂದೆ ಕುಳಿತು ಮುಂಡಮೋಪಿ ಪ್ರಲಾಪ ಮಾಡಿದ್ದೇಕೆ? ಹಾಗಂತ ಕೇಳಿದರೆ ಸ್ವಾಮಿ ಉತ್ತರಿಸುವುದೇ ಇಲ್ಲ.

ಕ್ರಿಕೆಟ್ಟೆಂಬುದು ವಸಾಹತುಶಾಹಿ ದೇಶ ಹುಟ್ಟಿಸಿ ಕೈಬಿಟ್ಟ ಆಟ. ಅದರಲ್ಲಿ ಸಮೂಹ ಸಾಧನೆಯೂ ಇದೆ, ವ್ಯಕ್ತಿಗತ ಮೆರವಣಿಗೆಯೂ ಇದೆ. ಯಾವ ಕಾರ್ಪೊರೇಟ್‌ ಕಲ್ಚರೂ ಇಲ್ಲದ ಕಾಲದಲ್ಲೂ ಗುಂಡಪ್ಪ ವಿಶ್ವನಾಥ್‌, ಕಪಿಲ್‌ದೇವ್‌, ಪ್ರಸನ್ನ, ಲಿಟ್ಲ್‌ ಮಾಸ್ಟರ್‌ ಗವಾಸ್ಕರ್‌ ಮುಂತಾದವರು ಜಗತ್ತೇ ನಿಬ್ಬೆರಗಾಗುವಂತೆ ಗೆದ್ದಿದ್ದಾರೆ. ಅಂತೆಯೇ ಸರಕು ಮುಗಿದ ಮೇಲೆ ಬ್ಯಾಟು ಬಿಸಾಕಿ ಪೆವಿಲಿಯನ್‌ಗೆ ಹಿಂತಿರುಗಿದ್ದಾರೆ.

ಕ್ರಿಕೆಟ್ಟನ್ನೊಂದು ಶುದ್ಧ ಆಟ ಅಂತ ತೆಗೆದುಕೊಂಡರೆ ಮಾತ್ರ ಮನುಷ್ಯನ ಇತಿಮಿತಿಗಳು ಅರ್ಥವಾಗುತ್ತವೆ. ನಮಗಿಂತಲೂ ದರಿದ್ರ ದೇಶವಾದ ಪಾಕಿಸ್ತಾನ ಯಾಕೆ ಅಷ್ಟೊಂದು ಸಲ ಗೆದ್ದಿದೆ ಮತ್ತು ಯಾಕೆ ದಯನೀಯವಾಗಿ ಸೋತಿದೆ ಎಂಬುದು ಸ್ಪಷ್ಟವಾಗುತ್ತದೆ. After all, ಅದೊಂದು ಆಟ. ಆಟವೆಂಬುದು ಮನುಷ್ಯನ ಮಿಲನಮಹೋತ್ಸವದಂತಹುದು: ಒಮ್ಮೆ ಶೀಘ್ರ ಶೀಘ್ರ-ಮತ್ತೊಮ್ಮೆ ಪರಮ ಪಾಂಗಿತವಾಗಿ ಆಡಿ… ಶಾಂತಿಃ ಶಾಂತಿಃ ಶಾಂತಿಃ ಆದ್ದರಿಂದಲೇ ಅದನ್ನು ವಾತ್ಸಾಯನ ಕೆಲಸವೆನ್ನಲಿಲ್ಲ ನಾರಾಯಣಮೂರ್ತಿಯಂತೆ. ಅದಕ್ಕೆ ‘ರತಿಕ್ರೀಡೆ’ ಅಂತ ಹೆಸರಿಟ್ಟ. ಕ್ರೀಡೆಯಲ್ಲಿ ಗೆದ್ದರೂ, ಸೋತರೂ ಸುಖವಿರಬೇಕು ಎಂಬುದನ್ನು ಹಾಗೆ ವಿವರಿಸಿದ ಬುದ್ಧಿವಂತ ಆತ.

ನಾರಾಯಣಮೂರ್ತಿ ಹೇಳಿದ ಎಲ್ಲ ಅಂಶಗಳೂ ಸರಿಯಾಗಿವೆ. ಮೆರಿಟ್ಟು, ಶ್ರಮ, ಶಿಸ್ತು, ತರಬೇತು-ಎಲ್ಲ ಸರಿ. ಆದರೆ ಇವೆಲ್ಲ ಇದ್ದೂ ಜೀನಿಯಸ್‌ನ ಕೊರತೆಯಿದ್ದರೆ ಆಟದಂತಹವುಗಳಲ್ಲಿ(ಸಾಹಿತ್ಯ, ಸಂಗೀತ, ಚಿತ್ರಕಲೆ-ಎಲ್ಲವೂ ಅಷ್ಟೆ) ಸೋಲು ಅನಿವಾರ್ಯವಾಗುತ್ತದೆ. ಭಾರತಕ್ಕೆ ಆಗಿರುವುದು ಅಷ್ಟೇ.

ನಾರಾಯಣಮೂರ್ತಿಯ ಬದಲಿಗೆ ಬೆಂಗಳೂರಿನಲ್ಲೇ ಚೆಂದಾಗಿ ಕ್ರಿಕೆಟ್‌ ಆಡುವ ಹುಡುಗನೊಬ್ಬನ ಕೈಲಿ ಭಾರತದ ಸೋಲಿಗೆ ಕಾರಣವೇನು ಅಂತ ಬರೆಯಿಸಬೇಕಾಗಿತ್ತು. ಟೈಮ್ಸ್‌ ಆಫ್‌ ಇಂಡಿಯಾದಲ್ಲಿ ಯಥಾಪ್ರಕಾರ-ಜೀನಿಯಸ್‌ನ ಕೊರತೆ!

ಬಂದಿರುವ ಮೆಸೇಜಿನಲ್ಲಿ ಏನಿದೆ ಅಂತ ಕೂಡ ನೋಡದೆ ನಾನು ಡಿಲೀಟ್‌ ಮಾಡತೊಡಗಿದ್ದು ಕ್ರಿಕೆಟ್‌ ವರ್ಲ್ಡ್‌ಕಪ್‌ ಆಟ ಆರಂಭವಾದ ಮೇಲೆ ಮತ್ತು ಅದರಲ್ಲಿ ಭಾರತ ಸೋತ ಮೇಲೆ. ಮೊದಲೆಲ್ಲ ‘ಭಾರತ ಗೆಲ್ಲಲು ದೇವರನ್ನು ಪ್ರಾರ್ಥಿಸಿ : ಈ ಮೆಸೇಜನ್ನು ಗೆಳೆಯರಿಗೆಲ್ಲ ಕಳಿಸಿ’ ಅಂತ ಮೆಸೇಜುಗಳು ಬಂದವು.

ಭಾರತ ಸೋತು ವಾಪಸು ಬರುವುದು ಖಚಿತವಾಗುತ್ತಿದ್ದಂತೆಯೇ ‘ಇಂಡಿಯಾ ಗೇಟ್‌ ಬಳಿಗೆ ದಯವಿಟ್ಟು ಬನ್ನಿ. ಕ್ರಿಕೆಟ್ಟಿಗರ ಶಿರೋಮುಂಡನ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಚಪ್ಪಲಿ ಮತ್ತು ಮೊಟ್ಟೆ ತನ್ನಿ’ ಎಂಬರ್ಥದ ಮೆಸೇಜುಗಳು ಬರತೊಡಗಿದವು. ಅಷ್ಟರೊಳಗಾಗಿ ಧೋನಿಯ ಮನೆ ಕೆಡವಿ ಹಾಕಿದ ವಾರ್ತೆ ಬಿತ್ತರವಾಯಿತು. ಬೆಂಗಳೂರು ವಾಸಿಗಳಾದ ಮೂವರು ಕ್ರಿಕೆಟ್ಟಿಗರ ಮನೆಗಳಿಗೆ ಪೊಲೀಸ್‌ ಕಾವಲು ಹಾಕಿದ ಚಿತ್ರಗಳು ಪ್ರಕಟವಾದವು.

This is the way of Infosys Narayanamurthy’s analysis on Cricket…!ಭಾರತ ಸೋತದ್ದು ಕೇಳಿ-ಕಂಡು ಯಾರೋ ಎದೆಯಾಡೆದು ಸತ್ತರೆಂಬ ಸುದ್ದಿ ಬಂತು. ಕಡೆಗೆ ಬಂದದ್ದು ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌ ಮತ್ತು ಉತ್ತಪ್ಪ ಬಾಡಿದ ಮುಖಗಳೊಂದಿಗೆ ಊರಿಗೆ ಹಿಂತಿರುಗಿದ ಸುದ್ದಿ ಮತ್ತು ಫೋಟೋಗಳು.

ಕೆಲವು ವರ್ಷಗಳ ಹಿಂದೆ ಮಹಾತ್ಮ ಗಾಂಧಿ ರಸ್ತೆಯ ಒಂದು ಮುಖ್ಯ ವೃತ್ತಕ್ಕೆ ಅನಿಲ್‌ ಕುಂಬ್ಳೆಯ ಹೆಸರಿಟ್ಟಾಗ ‘ಇದು ಅವಿವೇಕದ ಕೆಲಸ’ಅಂತ ಬರೆದಿದ್ದು ನನಗೆ ನೆನಪಿದೆ. ಈಗ ಮತ್ತೆ ಅದೇ ಮಾತನ್ನ, ಅದರ ತದ್ವಿರುದ್ಧದ ಕಾರಣಕ್ಕೆ ಬರೆಯಬೇಕಿದೆ.

ಕೋಟ್ಯಂತರ ಭಾರತೀಯರು ಕ್ರಿಕೆಟ್ಟನ್ನು ಕೈಲಿದ್ದ ಕೆಲಸಬಿಟ್ಟು ಟೀವಿಗಳ ಮುಂದೆ ಹೊತ್ತಲ್ಲದ ಹೊತ್ತಿನಲ್ಲಿ ಕೂತು ನೋಡಿದರು, ನಿಜ. ಭಾರತ ಗೆಲ್ಲಲಿ ಅಂತ ಕೋಟ್ಯಂತರ ಜನ ಆಶಿಸಿದ್ದೂ ನಿಜ. ಆದರೆ ಟೀಮು ಸೋತ ತಕ್ಷಣ ಆಟಗಾರನೊಬ್ಬನ ಮನೆ ಕೆಡವಿ ಹಾಕುವಂಥ ಸಿಟ್ಟು ಬರಬೇಕಾ? ಮನೆ ಮುಂದಿನ ಬಯಲಲ್ಲಿ ಆಡುವ ಮಗು ಆಟದಲ್ಲಿ ಸೋತು ಬಂದರೆ ಅದನ್ನು ಹಿಡಿದು ಬಡಿಯುತ್ತೇವಾ? ಇಲ್ಲವಲ್ಲ. ಹಾಗಾದರೆ ಕ್ರಿಕೆಟ್ಟಿಗರ ಮೇಲೆ ಯಾಕಷ್ಟು ಸಿಟ್ಟು ಬರುತ್ತದೆ?

ಯಾಕೆ ಬರುತ್ತದೆ ಅಂದರೆ, ಲಕ್ಷಾಂತರ ರೂಪಾಯಿಗಳನ್ನು ಆಟದ ಮೇಲೆ ಬೆಟ್‌ ಕಟ್ಟಿದ ಜೂಜುಕೋರರಿರುತ್ತಾರಲ್ಲ? ಆ ದುಡ್ಡು ಕಳೆದುಕೊಂಡಿದ್ದಕ್ಕಾಗಿ ಅವರಿಗೆ ಸಿಟ್ಟು ಬರುತ್ತದೆ. ಕ್ರಿಕೆಟ್‌ ಆಟವೆಂಬುದು ಮರೆತುಹೋಗಿ ಇಸ್ಪೀಟಿನಂತಾಗುತ್ತದೆ. ಆಟಗಾರ ರೇಸು ಕುದುರೆಯಂತೆ ಕಾಣತೊಡಗುತ್ತಾನೆ. ಟೀವಿಗಳವರು ಉಂಟುಮಾಡಿದ hypeನಲ್ಲಿ ಅತಿರೇಕದ ಪಬ್ಲಿಸಿಟಿಯಲ್ಲಿ ಮೈಮರೆತ ಮನುಷ್ಯ ಆಟವೆಂಬುದನ್ನು ತನ್ನದೇ ಅಳಿವು ಉಳಿವಿನ ಪ್ರಶ್ನೆಯನ್ನಾಗಿ ತೆಗೆದುಕೊಳ್ಳತೊಡಗುತ್ತಾನೆ. ದೊಡ್ಡಮಟ್ಟದ ಜೂಜಿನಲ್ಲಿ ತೊಡಗಿಕೊಳ್ಳುತ್ತಾನಾದ್ದರಿಂದ, ಅದು ಅಳಿವು ಉಳಿವಿನ ಪ್ರಶ್ನೆಯೇ ಆಗಿಬಿಡುತ್ತದೆ.

ಬಿಡಿ, ಜೂಜು ಕಟ್ಟಿದವರಿಗೆ ಹೊಟ್ಟೆ ಸಂಕಟ. ಭಾರತದವರು ಮ್ಯಾಚ್‌ ಫಿಕ್ಸ್‌ ಮಾಡಿಕೊಂಡು ತಮ್ಮನ್ನು ಸರ್ವನಾಶ ಮಾಡಿದರು ಎಂಬ ಅಕ್ಕಸ. ಅವರ ರೇಗುವಿಕೆಗೊಂದು ಸಮರ್ಥನೆಯಿದೆ. ಆದರೆ ಈ ಇನ್ಫೋಸಿಸ್‌ ನಾರಾಯಣಮೂರ್ತಿಯಂಥವರಿಗೇನಾಗಿರುತ್ತದೆ? ‘ಟೈಮ್ಸ್‌ ಆಫ್‌ ಇಂಡಿಯಾ’ದವರೇ ಕರೆದು ಕೇಳಿದರೋ ಈ ನಾರಾಯಣಮೂರ್ತಿಗಳೇ ಕರೆದು ಹೇಳಿಕೆ ಕೊಟ್ಟರೋ ಗೊತ್ತಿಲ್ಲ : ಕ್ರಿಕೆಟ್‌ನಲ್ಲಿ ಭಾರತದ ಸೋಲಿಗೆ ಏನು ಕಾರಣ ಎಂಬುದರ ಬಗ್ಗೆ ‘ಟೈಮ್ಸ್‌ ಆಫ್‌ ಇಂಡಿಯಾ’ದಲ್ಲಿ ಅವರದೊಂದು ವಿಶ್ಲೇಷಣಾತ್ಮಕ ಲೇಖನ ಮುಖಪುಟದಲ್ಲಿ ಪ್ರಿಂಟಾಗುತ್ತದೆ.

ತಮಾಷೆಯ ಸಂಗತಿಯೆಂದರೆ, ಕಂಪ್ಯೂಟರ್‌ ಜಗತ್ತಿನಲ್ಲಿ ಅನೇಕ ಕಂಪೆನಿಗಳಂತೆಯೇ ಒಂದಷ್ಟು ಹೆಸರು-ದುಡ್ಡು ಸಂಪಾದಿಸಿಕೊಂಡ ಕಂಪೆನಿಯಾಂದರ ನಿವೃತ್ತ ಮುಖ್ಯಸ್ಥ ನಾರಾಯಣಮೂರ್ತಿ, ನಮ್ಮ-ನಿಮ್ಮಂತೆಯೇ ಕುಂತು ಕ್ರಿಕೆಟ್ಟು ನೋಡಿದವರೇ ಹೊರತು, ಯಾವತ್ತೂ ಕ್ರಿಕೆಟ್‌ ಆಡಿದವರಲ್ಲ. ಅಂಥದರಲ್ಲಿ ನಾರಾಯಣಮೂರ್ತಿ ಕ್ರಿಕೆಟ್‌ನ ಸೋಲಿಗೆ ಯಥಾಪ್ರಕಾರದ ತಮ್ಮ ಕಾರ್ಪೊರೇಟ್‌ ಶೈಲಿಯಲ್ಲಿ ವಿಮರ್ಶೆ ಬರೆಯತೊಡಗುತ್ತಾರೆ.

‘ನನ್ನ ಪ್ರಕಾರ ಭಾರತದ ಟೀಮ್‌ನ ಸೋಲಿಗೆ ಈ ವ್ಯವಸ್ಥೆಯೇ ಕಾರಣ. ಕ್ರಿಕೆಟ್‌ ಒಂದೇ ಅಲ್ಲ : ಎಲ್ಲ ರಂಗಗಳಲ್ಲೂ ನಾವು ಕಷ್ಟಪಟ್ಟು ಕೆಲಸ ಮಾಡಲಿಕ್ಕೆ, ಶಿಸ್ತು ರೂಢಿಸಿಕೊಳ್ಳುವುದಕ್ಕೆ ತಯಾರಿಲ್ಲ. ಬೇರೆ ದೇಶಗಳೆಲ್ಲ ಎಷ್ಟು ನೀಟಾಗಿ, ಶುಚಿಯಾಗಿ, ಸುಸಂಘಟಿತವಾಗಿ ಇರುತ್ತವೆ. ನಮ್ಮ ದೇಶದ ನಗರಗಳು-ಥತ್‌, ಕಕ್ಕ! ಏಕೆಂದರೆ ನಾವು ನಿಯಮ-ಕಾನೂನು ಗೌರವಿಸುವುದಿಲ್ಲ. ಶುದ್ಧಾನುಶುದ್ಧ ಮೆರಿಟ್ಟು, ಶ್ರಮಜೀವನ, ತರಬೇತಿಯಲ್ಲಿ ಜಾಗತಿಕ ನಿಯಮಗಳು ಮತ್ತು ಶುದ್ಧಾಂಗ ಶಿಸ್ತು ರೂಢಿಸಿಕೊಂಡರೆ ಕ್ರಿಕೆಟ್ಟೊಂದರಲ್ಲೇ ಅಲ್ಲ-ನಾವು ಎಲ್ಲ ರಂಗಗಳಲ್ಲೂ ಗೆಲ್ಲುತ್ತೇವೆ’ ಎಂಬುದು ನಾರಾಯಣಮೂರ್ತಿಗಳ ಮೊದಲ ಅಪ್ಪಣೆ.

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: