ನಾ ಕಂಡ ರಾಷ್ಟ್ರಪತಿ

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರನ್ನು ಕುರಿತು ಅವರ ಆಪ್ತ ಕಾರ್ಯದರ್ಶಿ ಪಿ.ಎಂ. ನಾಯರ್ ಬರೆದ ಪುಸ್ತಕ Kalam Effect. ಇದೀಗ ಸಿದ್ಧಗೊಳ್ಳುತ್ತಿರುವ ಆ ಕೃತಿಯ ಕನ್ನಡ ಅವತರಣಿಕೆ, ವಿಶ್ವೇಶ್ವರ ಭಟ್ ಅವರ “ಕಲಾಂ ಕಮಾಲ್” ಪುಸ್ತಿಕೆಯಿಂದ ಆಯ್ದ ಕೆಲವು ಸ್ವಾರಸ್ಯಕರ ಭಾಗಗಳು. ಈ ಪುಸ್ತಕ ಕಲಾಂ ಸಮ್ಮುಖದಲ್ಲಿ ಮೈಸೂರಿನ ಸುತ್ತೂರು ಮಠದಲ್ಲಿ ಜೂನ್ 1ರಂದು ಬಿಡುಗಡೆಯಾಗಲಿದೆ.

ನನಗೆ ಯಾರಾದರೂ ಕೊಡಬಹುದಾದ ಅಚ್ಚುಮೆಚ್ಚಿನ ಶಿಕ್ಷೆಯೆಂದರೆ ಊಟ, ತಿಂಡಿ ಕೊಡದೇ ನಾಲ್ಕು ದಿನ ಯಾವುದಾದರೂ ಒಂದು ಕೋಣೆಯೊಳಗೆ ಕೂಡಿಹಾಕುವುದು. ಈ ರೀತಿ ಗೃಹಬಂಧನದಲ್ಲಿರಿಸಿದಾಗ ನನ್ನೊಳಗಿನ ‘ಕೈದಿ”ಯ ಕೋರಿಕೆಯೆಂದರೆ ಒಂದು ಟೇಬಲ್, ಕುರ್ಚಿಯನ್ನು ಕೊಡಿ. ಬರೆಯಲು ಶಾಯಿ ತುಂಬಿದ ಪೆನ್ನು, ನುಣುಪಾದ ಕಾಗದಗಳ ಒಂದಷ್ಟು ಕಟ್ಟನ್ನು ಪಕ್ಕದಲ್ಲಿ ಇಡಿ. ಗೃಹಬಂಧನದಿಂದ ಮುಕ್ತರಾಗುವ ಹೊತ್ತಿಗೆ ಒಂದು ನೂರೈವತ್ತು ಪುಟಗಳ ಪುಸ್ತಕ ಸಿದ್ಧ. ಪ್ರಾಮಿಸ್!

ಈ ವಿಷಯದಲ್ಲಿ ದೈತ್ಯ ಅಂದ್ರೆ ರವಿ ಬೆಳಗೆರೆ. ಎರಡು ದಿನ ಸಿಕ್ಕರೆ ‘ಹಾಗೆ ಹೋಗಿ ಹೀಗೆ ಬರುವುದರೊಳಗೆ” ಒಂದು ಪುಸ್ತಕ ರೆಡಿ. ಮೊನ್ನೆ ಕಾಲು ಮುರಿದುಕೊಂಡು ಎರಡುವಾರ ನಡೆಯಲಾಗದೇ ಕುಳಿತಿದ್ದ. ಪುನಃ ನಡೆದಾಡುವ ಹೊತ್ತಿಗೆ ಒಂದು ಪುಸ್ತಕ ಸಿದ್ಧವಾಗಿತ್ತು. ಎರಡು ವಾರಗಳ ಹಿಂದೆ ‘ಆಣಿಮುತ್ತು” ಅಂಕಣ ಖ್ಯಾತಿಯ ಎಸ್. ಷಡಕ್ಷರಿಯವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ವೇದಿಕೆಯಲ್ಲಿ ಸುತ್ತೂರು ಸ್ವಾಮೀಜಿಯವರ ಜತೆ ಮತಾಡುವಾಗ ‘ಯಾವ ಪುಸ್ತಕ ಓದುತ್ತಿದ್ದೀರಿ” ಎಂದು ಕೇಳಿದರು. ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಕಾರ್ಯದರ್ಶಿ ಪಿ.ಎಂ. ನಾಯರ್ ಬರೆದ ಪುಸ್ತಕ ಓದುತ್ತಿದ್ದೇನೆ ಹಾಗೂ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡೋಣ ಅಂದುಕೊಂಡಿದ್ದೇನೆ. ಅನುಮತಿಗಾಗಿ ಕಾಯುತ್ತಿದ್ದೇನೆ ಅಂದೆ.

“ಒಂದು ಕೆಲಸ ಮಾಡಿ, ಬೇಗನೆ ತರ್ಜುಮೆ ಮಾಡುವುದಾದರೆ ಜೂನ್ 1ಕ್ಕೆ ಕಲಾಂ ಸಮ್ಮುಖದಲ್ಲಿ ಸುತ್ತೂರುಮಠದಲ್ಲೇ ಬಿಡುಗಡೆ ಮಾಡಬಹುದು” ಎಂದರು ಸ್ವಾಮೀಜಿಯವರು. ಆಯಿತು ಎಂದೆ. ಪುಸ್ತಕ ಬಿಡುಗಡೆ ಬಗ್ಗೆ ಸ್ವಾಮೀಜಿಯವರು ಆಮಂತ್ರಣಪತ್ರದಲ್ಲಿ ಛಾಪಿಸಿಬಿಟ್ಟರು. ಒಂದೆಡೆ ಕೈತುಂಬಾ ಕೆಲಸ. ಚುನಾವಣೆ ಬೇರೆ. ಮೂರು ರಾತ್ರಿಗಳು ಹಗಲಾಗುವ ತನಕ ಕುಳಿತೆ. ಪುಸ್ತಕ ಅರಳಲಾರಂಭಿಸಿತು. ಸ್ವಾಮೀಜಿ ಅಭಿಲಾಷೆಯಂತೆ ಪುಸ್ತಕ ಜೂನ್ ಒಂದರಂದೇ ಬಿಡುಗಡೆಯಾಗುತ್ತಿದೆ. ಊದಿದ ಕಣ್ಣುತುಂಬಾ ಡಾ. ಕಲಾಂ ಅವರೇ ತುಂಬಿಕೊಂಡಿರುವುದರಿಂದ ಈ ವಾರ ಬೇರೇನೂ ಬರೆಯಲಾಗಿಲ್ಲ. ಆ ಪುಸ್ತಕದಲ್ಲಿನ ಕೆಲವು ಪ್ರಸಂಗಗಳನ್ನು ಇಲ್ಲಿ ನಿಮ್ಮ ಮುಂದೆ ಹರಡಿ ಇಡುತ್ತಿದ್ದೇನೆ. ರಾಷ್ಟ್ರಪತಿಯವರನ್ನು ಹತ್ತಿರದಿಂದ ಕಂಡ ನಾಯರ್‌ರಿಂದ ಡಾ. ಕಲಾಂ ಬಗ್ಗೆ ಕೆಲವು ಅಪೂರ್ವ ಝಲಕ್‌ಗಳನ್ನು ಕೇಳೋಣ.

***
ರಾಷ್ಟ್ರಪತಿಯಾದಾಗ ಕಲಾಂ ಅವರಿಗೆ ಎಪ್ಪತ್ತು ವರ್ಷ ವಯಸ್ಸು. ಆದರೆ ವಯಸ್ಸು ಅವರ ಪರವಾಗಿ ಇತ್ತು. ಅವರ ಲವಲವಿಕೆ, ಚೈತನ್ಯ, ಕ್ರಿಯಾಶೀಲತೆ ಹಾಗೂ ಸದಾ ಕಾರ್ಯಮಗ್ನವಾಗಿರುವ ಅವರ ಮನೋಭಾವ ಯುವಕರನ್ನೂ ನಾಚಿಸುವಂತಿತ್ತು.ಒಮ್ಮೆ ಕೇರಳಕ್ಕೆ ಹೋದಾಗಿನ ಪ್ರಸಂಗ ಹೇಳಬೇಕು. ಮೂರು ಕಾರ್ಯಕ್ರಮಗಳ ನಂತರ, ಕೇರಳದ ರಾಜ್ಯಪಾಲರು ಹೇಳಿದರು- “ಮಿಸ್ಟರ್ ನಾಯರ್, ನಾನು ರಾಜಭವನಕ್ಕೆ ಹೋಗುತ್ತೇನೆ. ನನಗೆ ಕಲಾಂ ಅವರ ವೇಗಕ್ಕೆ ಹೊಂದಿಕೊಳ್ಳಲು ಆಗುತ್ತಿಲ್ಲ.”

ಆ ದಿನ ಕಲಾಂ ಇನ್ನೂ ಹದಿನೈದು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರಿದ್ದರು! ದಿನದ ಕೊನೆಯಲ್ಲಿ ಅವರು ಆ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸಿದರು. ರಾತ್ರಿ ತಮ್ಮ ಕೊಠಡಿಗೆ ಹೋಗಿ ನಾಳಿನ ಕಾರ್ಯಕ್ರಮಗಳಿಗೆ ತಯಾರಾಗುತ್ತಿದ್ದರು.ರಾಷ್ಟ್ರಪತಿಯಾಗಿ ಕಲಾಂ ಅನೇಕ ಪ್ರಥಮಗಳನ್ನು ಸಾಸಿದವರು. ಜಗತ್ತಿನ ಅತ್ಯಂತ ಎತ್ತರದ ಸಮರಭೂಮಿ, ಹಿಮಾಚ್ಛಾದಿತ ರಣರಂಗ, ಉಸಿರಾಡಲು ಪರದಾಡಬೇಕಾದಂಥ, ಮೈನಸ್ ನಲವತ್ತು ಹವಾಮಾನವಿರುವ ಸಿಯಾಚಿನ್ ಯುದ್ಧರಂಗಕ್ಕೆ ಭೇಟಿ ನೀಡಿದ, ವಿಶಾಖಪಟ್ಟಣದಲ್ಲಿ ಐಎನ್‌ಎಸ್ ಸಿಂಧುರಕ್ಷಕ ಜಲಾಂತರ್ಗಾಮಿ ನೌಕೆಯಲ್ಲಿ ಪಯಣಿಸಿದ, ಸೂಪರ್‌ಸಾನಿಕ್ ಎಸ್‌ಯು-30 ವಿಮಾನದಲ್ಲಿ ಹಾರಿದ ಮೊದಲ ರಾಷ್ಟ್ರಪತಿ. ಕಲಾಂ ಈ ವಿಮಾನದಲ್ಲಿ ಹಾರಲು ಸಿದ್ಧರಾಗುತ್ತಿದ್ದಾಗ ನಾನು ನನ್ನ ರೂಮಿನಲ್ಲಿ ಕುಳಿತು ಟಿವಿಯಲ್ಲಿ ವೀಕ್ಷಿಸುತ್ತಿದ್ದೆ. ಯಾಕೋ ನಾನು ಆಗ ಸ್ವಲ್ಪ ಕಳೆಗುಂದಿದವನಂತೆ ಕುಳಿತಿದ್ದೆ. ಚಿಕ್ಕವರಾಗಿದ್ದಾಗ ಕಲಾಂ ಅವರಿಗೆ ಪೈಲಟ್ ಆಗುವ ಆಸೆಯಿತ್ತು.

ಅಂದು 8 ಜೂನ್ 2006. ಕಲಾಂ ಸೂಪರ್‌ಸಾನಿಕ್ ವಿಮಾನದಲ್ಲಿ ಹಾರಾಟ ಆರಂಭಿಸಿದರು. ವಿಮಾನ ಸುಮಾರು ಏಳೂವರೆ ಕಿಮೀ. ಎತ್ತರ ಹಾರಿತು. ವೇಗವನ್ನು ಕೇಳಬೇಕೆ, ಸೂಪರ್‌ಸಾನಿಕ್ ವೇಗ. ಸುಮಾರು ಹದಿನೈದು ನಿಮಿಷ ಕಲಾಂ ಅವರೇ ಪೈಲಟ್ ಆಗಿದ್ದರು. ಪುಣಾ ಸನಿಹದ ಲೋಹೆಗಾಂವ್ ಏರ್‌ಫೋರ್‍ಸ್ ಸ್ಟೇಶನ್‌ನಲ್ಲಿ ವಿಮಾನ ಧರೆಗಿಳಿದಾಗ ಕಲಾಂ ಹೊರಬಂದರು. ಅವರ ಮುಖದಲ್ಲಿ ಹಲವು ವರ್ಷಗಳ ಕನಸು ನನಸಾದ ಸಂತಸ ದಟ್ಟೈಸಿತ್ತು.

“ನನಗೆ ಅತ್ಯಂತ ಸಮಾಧಾನವಾಗಿದೆ. ಮನಸ್ಸು ತುಂಬಿಬಂದಿದೆ. ನನ್ನ ಬಾಲ್ಯದ ಕನಸು ನನಸಾಗಿದೆ” ಎಂದು ಕಲಾಂ ಉದ್ಗರಿಸಿದರು. ವಿಮಾನ ಹಾರಾಟಕ್ಕೆ ಮೊದಲು ಕಲಾಂ ಅವರಿಗೆ ಕಾಕ್‌ಪಿಟ್, ಅದರ ಕಾರ್ಯವೈಖರಿ, ಹಲವಾರು ಸ್ವಿಚ್‌ಗಳ ಬಗ್ಗೆ ಹೇಳಲಾಗಿತ್ತು. ಅವರೇನು ಮಾಡಬೇಕೆಂಬುದನ್ನು ವಿವರಿಸಲಾಗಿತ್ತು. ಪೈಲಟ್ ಸೀಟಿನಲ್ಲಿ ಕುಳಿತಾಗ ಅವರು ಮಾಡಬೇಕಾದ ಕೆಲಸಗಳ ಬಗ್ಗೆ ತಿಳಿಸಲಾಗಿತ್ತು.

2 ಏಪ್ರಿಲ್ 2004ರಂದು ಕಲಾಂ ಸಿಯಾಚಿನ್‌ಗೆ ಐತಿಹಾಸಿಕ ಭೇಟಿ ನೀಡಿದರು. ಎಂದಿನಂತೆ ಅಲ್ಲೂ ಸಹ ಬಿಡುವಿಲ್ಲದ ಕೆಲಸಕಾರ್ಯಗಳು. ಹದಿನೆಂಟು ಸಾವಿರ ಅಡಿ ಎತ್ತರದ ಬೇಸ್‌ಕ್ಯಾಂಪ್‌ಗೆ ಬರುತ್ತಿರುವಂತೆ ಕಲಾಂ ಅವರು, ದೇಶದ ಗಡಿ ರಕ್ಷಿಸುವ ಮೂಲಕ ರಾಷ್ಟ್ರಕ್ಕಾಗಿ ಸರ್ವಸಮರ್ಪಣೆಗೆ ಸಿದ್ಧರಾಗಿರುವ ಸೇನಾ ಅಧಿಕಾರಿಗಳು ಹಾಗೂ ಜವಾನರ ಅಸಾಧಾರಣ ಸೇವೆಯನ್ನು ಶ್ಲಾಘಿಸಿ ಮಾತಾಡಿದರು.

* * *
ರಾಷ್ಟ್ರಪತಿ ಕಲಾಂ ಗರಿಗೆ ಅನೇಕ ಪ್ರಥಮಗಳು ಸೇರುತ್ತವೆ. ಅವರು 163 ಬಾರಿ ದೇಶದೊಳಗೆ ಹಾಗೂ ಏಳು ಬಾರಿ ವಿದೇಶಗಳಿಗೆ ಪ್ರವಾಸ ಮಾಡಿದ್ದಾರೆ. ಇಲ್ಲಿ ಸಂಖ್ಯೆಗಳಿಗಿಂತ ಈ ಪ್ರವಾಸದ ಉದ್ದೇಶ ಹಾಗೂ ತೀವ್ರತೆ ಬಹಳ ಮಹತ್ವದ್ದೆನಿಸುತ್ತವೆ.ಕಲಾಂ ಅವರು ಪೂರ್ವಾಂಚಲ ರಾಜ್ಯಗಳಿಗೆ ಭೇಟಿ ನೀಡಿದ್ದು  ಇದಕ್ಕೊಂದು ನಿದರ್ಶನ. ಪೂರ್ವಾಂಚಲ ಪ್ರಾಂತಗಳ ಅಭಿವೃದ್ಧಿ ಇಲಾಖೆಯಿದ್ದರೂ, ದುರದೃಷ್ಟವಶಾತ್ ಈ ಪ್ರದೇಶ ಹಿಂದುಳಿದಿದೆ. ದಿಲ್ಲಿಯಿಂದ ಯಾವ ಅಧಿಕಾರಿಯೂ ಅಲ್ಲಿಗೆ ಹೋಗುವುದಿಲ್ಲ. ರಕ್ಷಣಾ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿ ದಿಲ್ಲಿಯಲ್ಲಿ ನನ್ನ ಕೆಲಸವನ್ನು ಇಷ್ಟಪಡುತ್ತಿದ್ದ ದಿನಗಳವು. ನನ್ನನ್ನು ಅರುಣಾಚಲ ಪ್ರದೇಶದ ಮುಖ್ಯ ಕಾರ್ಯದರ್ಶಿಯಾಗಿ ಕಳುಹಿಸಿದರು. ನಾನು ಹಿಂದುಮುಂದೆ ನೋಡದೇ ಅಲ್ಲಿಗೆ ಹೋದೆ. ನಾನು ಹಾಗೆ ಮಾಡಿದ್ದಕ್ಕೆ ನನ್ನ ಸಹೋದ್ಯೋಗಿಗಳು ನನ್ನನ್ನು ಮೂರ್ಖನೆಂದು ಕರೆದರು. ಆದರೆ ನಾನು ಆ ಅವಕಾಶವನ್ನು ಕಳೆದುಕೊಳ್ಳುವಷ್ಟು ‘ಮೂರ್ಖ”ನಾಗಿರಲಿಲ್ಲ.

ಪೂರ್ವಾಂಚಲ ರಾಜ್ಯಗಳಿಗೆ ಎಷ್ಟು ಸಾಧ್ಯವಾಗುವುದೋ ಅಷ್ಟು ಸಲ ಭೇಟಿ ನೀಡಿ ಎಂದು ಕಲಾಂ ಅವರಿಗೆ ಸಲಹೆ ನೀಡುತ್ತಿದ್ದೆ. ಅವರು ನಾನು ಅಂದುಕೊಂಡಿದ್ದಕ್ಕಿಂತ ಹೆಚ್ಚು ಸಲ ಅಲ್ಲಿಗೆ ಹೋದರು. ಆ ಪ್ರದೇಶದ ಒಳಪ್ರದೇಶಗಳಿಗೆ ಹೋಗಲು ಅವರು ಉತ್ಸುಕರಾಗಿದ್ದರು. ಅಲ್ಲಿನ ಹಳ್ಳಿಗಳ ಸ್ಥಿತಿಗತಿ, ಅಭಿವೃದ್ಧಿ ಕಾರ್ಯಗಳನ್ನು ಖುದ್ದಾಗಿ ನೋಡಬಯಸುತ್ತಿದ್ದರು. ಅಲ್ಲಿನ ರಾಜಧಾನಿ ಹಾಗೂ ರಾಜಭವನಗಳಿಗೆ ತಮ್ಮ ಭೇಟಿಯನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಇದು ಮಿಕ್ಕೆಲ್ಲ ಅತಿಗಣ್ಯರ ಭೇಟಿಗಿಂತ ಸಂಪೂರ್ಣ ಭಿನ್ನವಾಗಿತ್ತು.

***
ಕಲಾಂ ರಾಷ್ಟ್ರಪತಿಯಾದಂದಿನಿಂದ ಹಲವಾರು ಸಂಘ-ಸಂಸ್ಥೆಗಳಿಂದ ಅವರಿಗೆ ಬಿರುದು-ಬಾವಲಿ, ಪುರಸ್ಕಾರ, ಪ್ರಶಸ್ತಿಗಳನ್ನು ನೀಡಬೇಕೆಂಬ ಬೇಡಿಕೆಗಳ ಮಹಾಪೂರವೇ ಹರಿದು ಬರಲಾರಂಭಿಸಿತು. ರಸ್ತೆ, ಶಾಲೆ, ಆಸ್ಪತ್ರೆ, ಗ್ರಂಥಾಲಯ ಹಾಗೂ ಇನ್ನಿತರ ಕಟ್ಟಡಗಳಿಗೆ ತಮ್ಮ ಹೆಸರಿಡುವುದಾಗಿ ಹಲವಾರು ರಾಜ್ಯ ಸರಕಾರಿ ಸಂಸ್ಥೆಗಳು, ಸ್ಥಳೀಯ ಆಡಳಿತಗಳು ಕೋರಿಕೆಗಳನ್ನು ಕಲಾಂ ಅವರಿಗೆ ಕಳಿಸುತ್ತಿದ್ದವು. ಈ ಬಗ್ಗೆ ಕಲಾಂ ತಮ್ಮದೇ ನಿಲುವು ಹೊಂದಿದ್ದರು. ಈ ಎಲ್ಲ ಮನವಿಗಳು ಸಾತ್ವಿಕವಾಗಿರಬಹುದು, ಗೌರವಯುತವಾಗಿರಬಹುದು, ತಮ್ಮ ಮೇಲಿನ ಪ್ರೀತಿಯಿಂದ ಕೂಡಿದ್ದಾಗಿರಬಹುದು, ಆದರೆ ಮುಖ್ಯವಾಗಿ ತಾನು ರಾಷ್ಟ್ರಪತಿ ಎಂಬ ಕಾರಣಕ್ಕಾಗಿ ಬರುತ್ತಿವೆಯೆಂದು ಅವರು ಭಾವಿಸಿದ್ದರು. ಹೀಗಾಗಿ ಅವರು ಈ ಎಲ್ಲ ಮನವಿಗಳನ್ನು ಸವಿನಯವಾಗಿ ನಿರಾಕರಿಸಿಸುತ್ತಿದ್ದರು.

ವೃತ್ತಿಘನತೆ ಹಾಗೂ ಉನ್ನತ ಮೌಲ್ಯಗಳಿಗೆ ಕಲಾಂ ಅತಿ ಹೆಚ್ಚು ಮಹತ್ವ ನೀಡಿದ್ದರು. ನಮಗೆಲ್ಲ ಗೊತ್ತಿರುವ ಸಂಗತಿಯೇನೆಂದರೆ, ಜನರು ಅಕಾರದ ಉನ್ನತ ಹುದ್ದೆಗೇರಿದ ಬಳಿಕ ತಾವು ಬಂದ ಊರಿನ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಆ ಊರಿಗೆ ಸೌಲಭ್ಯಗಳನ್ನು ಕಲ್ಪಿಸುತ್ತಾರೆ, ಕಟ್ಟಡಗಳನ್ನು ಕಟ್ಟಿಸುತ್ತಾರೆ, ಸಂಘ-ಸಂಸ್ಥೆಗಳನ್ನು ಸ್ಥಾಪಿಸುತ್ತಾರೆ. ಇಷ್ಟೇ ಅಲ್ಲ, ಅಗತ್ಯಕ್ಕಿಂತ ಹೆಚ್ಚಾಗಿ ಅಲ್ಲಿಗೆ ಭೇಟಿ ನೀಡುತ್ತಾರೆ.

ಇವುಗಳಿಗೆಲ್ಲ ಕಲಾಂ ಅಪವಾದ. ಕಲಾಂ ಅವರು ತಮಿಳುನಾಡಿನ ರಾಮೇಶ್ವರಮ್‌ದವರು. ಅವರು ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದಂದಿನಿಂದ ಮನವಿಗಳು ಹರಿದು ಬರಲಾರಂಭಿಸಿದವು. ಅವರ ಸಚಿವಾಲಯದಲ್ಲಿರುವ ನನ್ನ ಮೇಲೂ ಒತ್ತಡಗಳು. ತಮ್ಮ ಊರಿಗೆ ಅವರ ಭೇಟಿ ನಿಗದಿಪಡಿಸಿ, ಶಂಕುಸ್ಥಾಪನೆಗೆ ಅವರನ್ನು ಕರೆದುಕೊಂಡು ಬನ್ನಿ, ಅವರ ಪ್ರಭಾವ ಬಳಸಿ ನಮ್ಮೂರ ರಸ್ತೆ ರಿಪೇರಿ ಮಾಡಿಸಿ, ಹೊಸ ರಸ್ತೆ ನಿರ್ಮಿಸಿ ಕೊಡಿ ಹೀಗೆ ಹತ್ತು ಹಲವು ಬೇಡಿಕೆ, ಒತ್ತಾಯಗಳು. ಈ ಎಲ್ಲವೂ ಮಾಡಲು ಆಗದ ಕೆಲಸಗಳೇನೂ ಆಗಿರಲಿಲ್ಲ. ಆದರೆ ಕಲಾಂ ಯೋಚಿಸುತ್ತಿದ್ದ ರೀತಿಯೇ ಬೇರೆ. ಅವರು ಇಡೀ ಭಾರತದ ರಾಷ್ಟ್ರಪತಿ. ರಾಮೇಶ್ವರಮ್ ಅವರ ಊರು ಎಂಬ ಕಾರಣಕ್ಕೆ ವಿಶೇಷ ಸೌಲಭ್ಯಗಳನ್ನು ನೀಡುವುದು ಸರಿ ಅಲ್ಲ.

ಒಮ್ಮೆ ನನ್ನೊಂದಿಗೆ ಮಾತಾಡುವಾಗ ಕಲಾಂ ಸ್ಪಷ್ಟಪಡಿಸಿದ್ದರು, ತಾನು ರಾಮೇಶ್ವರಮ್‌ಗೆ ಭೇಟಿ ನೀಡುವುದು ಆದ್ಯತೆ ಅಲ್ಲ, ಭೇಟಿ ನೀಡಲೇಬೇಕಾದ ಊರುಗಳಿಗೆ ಹೋದ ಬಳಿಕ, ಸ್ವಾಭಾವಿಕ ರೀತಿಯಲ್ಲಿ ಅಲ್ಲಿಗೆ ಹೊಗುತ್ತೇನೆ. ರಾಷ್ಟ್ರಪತಿಯಾಗಿ ಅವರು ಮೊದಲು ಅಧಿಕೃತವಾಗಿ ಭೇಟಿ ನೀಡಿದ್ದು ಗುಜರಾತ್‌ಗೆ. ಕಲಾಂ ಅವರು ರಾಮೇಶ್ವರಮ್‌ಗೆ ಭೇಟಿ ನೀಡಿದ್ದುದು ಎರಡು ಸಲ ಮಾತ್ರ. ರಾಷ್ಟ್ರಪತಿಯಾಗಿ ಬರೋಬ್ಬರಿ ಎರಡು ವರ್ಷಗಳ ನಂತರ ಮೊದಲ ಬಾರಿಗೆ ರಾಮೇಶ್ವರಮ್‌ಗೆ ಹೋದರು. ಅದಕ್ಕಿಂತ ಮೊದಲು ದೇಶದ ಇಪ್ಪತ್ತೈದು ರಾಜ್ಯಗಳಿಗೆ, ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ ಹೋಗಿ ಬಂದಿದ್ದರು.

ವಿದೇಶ ಪ್ರವಾಸಗಳಿಗೂ ಕಲಾಂ ಇದೇ ನಿಲುವು ಹೊಂದಿದ್ದರು. ಭಾರತದ ಬಹುತೇಕ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿದ ನಂತರವೇ ಅವರು ಮೊದಲ ವಿದೇಶ ಪ್ರವಾಸಕ್ಕೆ ಹೊರಟು ನಿಂತಿದ್ದು. ಇಡೀ ದೇಶವನ್ನು ಸುತ್ತಿದ ನಂತರವೇ ವಿದೇಶಗಳಿಗೆ ಹೋಗುತ್ತೇನೆಂದು ಕಲಾಂ ನನಗೆ ಹೇಳಿದ್ದರು. ಅವರ ಯೋಚನೆಯಂತೆ ನಾವೂ ನಡೆದುಕೊಂಡೆವು. ಆದರೆ ವಿದೇಶ ಪ್ರವಾಸವನ್ನು ಸಾಕಷ್ಟು ಮುಂಚಿತವಾಗಿ ನಿಗದಿಪಡಿಸುವ ಅಗತ್ಯವಿರುವುದರಿಂದ ಇಲ್ಲಿ ತುಸು ವ್ಯತ್ಯಾಸವಾಯಿತು. ಮೂರು ಕೇಂದ್ರಾಡಳಿತ ಪ್ರದೇಶ ಹಾಗೂ ಇಪ್ಪತ್ತೆರಡು ರಾಜ್ಯಗಳಿಗೆ ಹೋಗಿ ಬಂದ ನಂತರ ಮೊದಲ ವಿದೇಶಯಾನಕ್ಕೆ ಹೊರಟಿದ್ದು.

2007ರ ಜುಲೈನಲ್ಲಿ ರಾಷ್ಟ್ರಪತಿಯಾಗಿ ಅಧಿಕಾರ ಪೂರ್ಣಗೊಳಿಸಿದ ಸಂದರ್ಭದಲ್ಲಿ ಕಲಾಂ ತುಸು ವಿಷಾದ ವ್ಯಕ್ತಪಡಿಸಿದರು. ರಾಷ್ಟ್ರಪತಿಯಾಗಿ ಲಕ್ಷದ್ವೀಪಕ್ಕೆ ಹೋಗಲು ಆಗಲಿಲ್ಲವಲ್ಲ ಎಂಬ ಕೊರಗು ಅವರಿಗಿತ್ತು. ಅಲ್ಲಿಗೆ ಹೋಗಬಾರದೆಂದೇನೂ ಅಲ್ಲ. ಅವರು ಅಲ್ಲಿಗೆ ಹೋಗಬೇಕೆಂದುಕೊಂಡಾಗಲೆಲ್ಲ ಪ್ರತಿಕೂಲ ಹವಾಮಾನದಿಂದ ಭದ್ರತೆಗೆ ಅಡ್ಡಿಯಾಗುತ್ತಿತ್ತು. ಈ ವಿಷಾದ ಅವರಲ್ಲಿ ಕೊನೆವರೆಗೂ ಉಳಿದಿತ್ತು.

***
ರಾಷ್ಟ್ರಪತಿ ಭವನದೊಳಗೆ ಕಲಾಂ ಪ್ರವೇಶ ಅನೇಕ ಪಕ್ಕನೋಟಗಳನ್ನು ಸೃಷ್ಟಿಸಿತ್ತು. ಅವರು ಅವಿವಾಹಿತರಾಗಿರುವುದು ಸಹ ಅದಕ್ಕೆ ಕಾರಣವಾಗಿದ್ದಿರಲೂಬಹುದು! ಒಮ್ಮೆ ನನಗೆ ಮಹಿಳೆಯೊಬ್ಬರು ಬರೆದ ಕಾಗದ ತಲುಪಿತು. ಅವರು ಪಾಟ್ನಾದವರು. ಅವರ ಹೆಸರನ್ನು ಬಹಿರಂಗಪಡಿಸುವುದಿಲ್ಲ ಬಿಡಿ. ಅವರ ಪತ್ರದ ಒಕ್ಕಣಿಕೆ ಹೀಗಿತ್ತು:

ವಿಷಯ: ರಾಷ್ಟ್ರಪತಿ ಭವನದ ಅಧಿಕೃತ ಪ್ರಥಮ ಮಹಿಳೆ (ಫಸ್ಟ್ ಲೇಡಿ)ಯಾಗಿ ನನ್ನ ಸೇವೆಯನ್ನು ನೀಡುವುದರ ಕುರಿತು.

ಆದರಣೀಯ ಸರ್, ರಾಷ್ಟ್ರಪತಿ ಭವನದ ಅಧಿಕೃತ ಪ್ರಥಮ ಮಹಿಳೆಯಾಗಿ ಕೆಲಸ ನಿರ್ವಹಿಸಲು ನಾನು ಸಿದ್ಧನಿದ್ದೇನೆ. ಅತ್ಯಂತ ಆಕರ್ಷಕ ಹಾಗೂ ಸಂತಸ ನೀಡುವಂಥ ವ್ಯಕ್ತಿತ್ವ ಹೊಂದಿರುವ ನನಗೆ ಐವತ್ತು ವರ್ಷ ವಯಸ್ಸು. ನಾನು ಪಾಟ್ನಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರೆ. ಗೃಹವಿಜ್ಞಾನ ನನ್ನ ಆಸಕ್ತಿದಾಯಕ ವಿಷಯ. ನಾನು ಆದರಾತಿಥ್ಯದಲ್ಲಿ ಎತ್ತಿದಕೈ. ಈ ಪತ್ರದೊಂದಿಗೆ ನನ್ನ ಭಾವಚಿತ್ರವನ್ನಿರಿಸಿದ್ದೇನೆ. ದಯವಿಟ್ಟು ಗಮನಿಸಿ. ನನ್ನ ಪತಿ ಪ್ರೊ…. ಅವರ ಅನುಮತಿ ಪಡೆದಿದ್ದೇನೆ. ನನ್ನ ಪತಿ ಸಹ ಮುಕ್ತ ಮನಸ್ಸಿನ ಬಿಂದಾಸ್ ವ್ಯಕ್ತಿ. ಅವರು ಸದಾ ನೆರವು ಬಯಸುವವರಿಗೆ ಸಹಾಯಹಸ್ತ ಚಾಚುವವರು. ನಮ್ಮ ಮನೆಯಲ್ಲಿ ನಾವಿಬ್ಬರೇ. ದಯವಿಟ್ಟು ನಿಮ್ಮ ಸೇವೆ ಮಾಡುವ ಅವಕಾಶವನ್ನು ಕಲ್ಪಿಸಿಕೊಡಿ ಎಂದು ಪ್ರಾರ್ಥಿಸುವೆ. ಇತಿ ನಿಮ್ಮ-

‘ನನ್ನ ಪತಿ ಮುಕ್ತ ಮನಸ್ಸಿನ ಬಿಂದಾಸ್ ವ್ಯಕ್ತಿ” ಎಂದು ಯಾವ ಅರ್ಥದಲ್ಲಿ ಬರೆದಿದ್ದಾಳೋ ಎಂಬುದು ತಿಳಿಯಲಿಲ್ಲ.ಕಲಾಂ ಅವರಿಗೆ ಪ್ರಥಮ ಮಹಿಳೆಯ ಅಗತ್ಯವಿರಲಿಲ್ಲ. ಅವರು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಆದರಾತಿಥ್ಯದಲ್ಲಿ ಎತ್ತಿದಕೈ. ನೂರಾರು ಔತಣಕೂಟ ಹಾಗೂ ಸಾಮಾಜಿಕ ಗೋಷ್ಠಿಗಳನ್ನು ಪ್ರಥಮ ಮಹಿಳೆಯ ಗೈರು ಹಾಜರಿಯ ಕಿಂಚಿತ್ತೂ ಭಾವ ಇಣುಕದಂತೆ ಅವರಿಗೆ ನಿಭಾಯಿಸಿ ಗೊತ್ತು. ಈ ಎಲ್ಲ ಸಂದರ್ಭಗಳಲ್ಲಿ ಮುಖ್ಯವಾಗುತ್ತಿದ್ದವರು ಕಲಾಂ ಮಾತ್ರ.

ಕಲಾಂ ನಿಮಗೆ ಗೊತ್ತಿರದ ಅನೇಕ ಸಂಗತಿಗಳನ್ನು ನಾಯರ್ ಇಲ್ಲಿ ತಮ್ಮ ನೆನಪಿನ ಬುತ್ತಿಯಿಂದ ಸೋಸಿ ಕೊಟ್ಟಿದ್ದಾರೆ. ಇಂಗ್ಲಿಷಿನಲ್ಲಿ Kalam Effect ಎಂಬ ಶೀರ್ಷಿಕೆಯನ್ನು ‘ಕಲಾಂ ಪರಿಣಾಮಗಳು” ಎಂದು ತರ್ಜುಮೆ ಮಾಡದೇ, ಸಾಕಷ್ಟು ತಲೆಕೆಡಿಸಿಕೊಂಡು ಕೊನೆಗೆ ‘ಕಲಾಮ್ ಕಮಾಲ್” ಎಂದು ಕೊಟ್ಟೆ. ಇದಕ್ಕಿಂತ ಉತ್ತಮ ಶೀರ್ಷಿಕೆ ಹೊಳೆದರೆ ತಿಳಿಸಿ.

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: