ಪಕ್ಷ ಯಾವುದಾದರೂ ಸರಿ, ಒಂದೇ ಪಕ್ಷ ಅಧಿಕಾರಕ್ಕೆ ಬರಲಿ

ಮೊದಲ ಹಂತದ ಚುನಾವಣೆಗೆ ಇನ್ನು ಕೇವಲ ಎರಡು ದಿನಗಳು ಬಾಕಿ ಉಳಿದಿವೆ. ಬೂತ್ ಮುಂದೆ ನಿಂತಾಗ ಯಾರಿಗೆ ವೋಟು ಹಾಕಬೇಕೆಂಬ ಪ್ರಶ್ನೆ ಭೂತಾಕಾರವಾಗಿ ಕಾಡುತ್ತದೆ. ಕಳೆದ ಒಂದು ತಿಂಗಳ ವಿದ್ಯಮಾನಗಳನ್ನು ಗಮನಿಸಿದವರಿಗೆ ರೇಜಿಗೆ ಹುಟ್ಟಿಸುವಷ್ಟು ಬೇಸರ, ಅಸಹ್ಯ, ಆಕ್ರೋಶ ಹುಟ್ಟಿಸಿದೆ. ಯಾವ ಪಕ್ಷವೂ ಜನರ ಪ್ರೀತಿ, ವಿಶ್ವಾಸ ಉಳಿಸಿಕೊಳ್ಳುವ ಹಾಗೆ ನಡೆದುಕೊಂಡಿಲ್ಲ. ನಿನ್ನೆಯ ತನಕ ಒಂದು ಪಕ್ಷವನ್ನು ಬಾಯಿಗೆ ಬಂದಂತೆ ಬೈಯುತ್ತಿದ್ದವರು ಇಂದು ಅದೇ ಪಕ್ಷ ಸೇರಿ, ಅದೇ ಪಕ್ಷದ ಟಿಕೆಟ್‌ನಿಂದ ಸ್ಪರ್ಧಿಸುತ್ತಿದ್ದಾರೆ. ಹಲವಾರು ವರ್ಷಗಳಿಂದ ಒಂದೇ ಪಕ್ಷದಲ್ಲಿದ್ದ ನಿಷ್ಠಾವಂತರಿಗೆ ಟಿಕೆಟ್ ನಿರಾಕರಿಸಲಾಗಿದೆ. ಪಕ್ಷದ ನಾಯಕರು ಹಣ ಪಡೆದು ಟಿಕೆಟ್ ಹಂಚಿದ್ದಾರೆ. ಮೊದಲ ಬಾರಿಗೆ ಸಿರಿವಂತರೇ ಹೆಚ್ಚಾಗಿ ಕಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭೂಮಾಫಿಯಾ, ಗಣಿ ದೊರೆಗಳ ಪ್ರಾಬಲ್ಯ ನಿಚ್ಚಳವಾಗಿ ಕಾಣುತ್ತಿದೆ. ಚುನಾವಣಾ ಆಯೋಗದ ನೀತಿಸಂಹಿತೆ ಅಬ್ಬರದ ಪ್ರಚಾರಕ್ಕೆ ಬ್ರೇಕ್ ಹಾಕಿದರೂ, ಇನ್ನಿತರ ಅನಿಷ್ಠಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ನಗರ ಪ್ರದೇಶಗಳಲ್ಲಿ ಅಭ್ಯರ್ಥಿಗಳು ಕೋಟಿಗಟ್ಟಲೆ ಹಣ ಚೆಲ್ಲುತ್ತಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ ಒಬ್ಬ ಅಭ್ಯರ್ಥಿ ಹೆಚ್ಚೆಂದರೆ 10 ಲಕ್ಷ ರೂ.ಗಳನ್ನು ಮಾತ್ರ ಖರ್ಚು ಮಾಡಬಹುದು. ಅದಕ್ಕಿಂತ ಹೆಚ್ಚು ಖರ್ಚು ಮಾಡಿದರೆ ಆರಿಸಿ ಬಂದರೂ ಆತನ ಸದಸ್ಯತ್ವ ರದ್ದಾಗುತ್ತದೆ. ಅಂದರೆ 224 ಅಭ್ಯರ್ಥಿಗಳು ಖರ್ಚು ಮಾಡುವ ಹಣ 22 ಕೋಟಿ ಮಾತ್ರ. ನಾಲ್ಕು ಪಕ್ಷಗಳು ಹಾಗೂ ಪಕ್ಷೇತರರು ಖರ್ಚು ಮಾಡುವ ಹಣವನ್ನು ಲೆಕ್ಕ ಹಾಕಿದರೂ ಈ ಮೊತ್ತ ನೂರು ಕೋಟಿ ರೂ. ದಾಟುವುದಿಲ್ಲ. ಆದರೆ ಎಂಥಾ ವಿಚಿತ್ರವೆಂದರೆ ಚುನಾವಣಾ ಆಯೋಗದ ಅಧಿಕಾರಿಗಳು ಮೊದಲ ಹಂತದ ಚುನಾವಣೆ ಮುಗಿಯುವ ಮೊದಲೇ ಸುಮಾರು 50 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ. ಯಾವ ಪ್ರಮಾಣದಲ್ಲಿ ಹಣದ ಹೊಳೆ ಹರಿಯುತ್ತಿರಬಹುದು ಎಂಬುದನ್ನು ಊಹಿಸಬಹುದು.

ಇನ್ನು ಚುನಾವಣೆಯಲ್ಲಿ ಚರ್ಚಿತವಾಗುವ ವಿಷಯಗಳಾದರೂ ಯಾವವು? ಹಾಗೆ ನೋಡಿದರೆ ಮೂರೂ ಪಕ್ಷಗಳ ಮುಂದೆ ಪ್ರಮುಖವಾದ issueಗಳೇ ಇಲ್ಲ. ಬಿಜೆಪಿಗೆ ಕಾಂಗ್ರೆಸ್ ಆಡಳಿತದ ಬೆಲೆ ಏರಿಕೆಯೇ ದೊಡ್ಡ ವಿಷಯ. ಕಾಂಗ್ರೆಸ್‌ಗೆ ಭದ್ರತೆ, ಸ್ಥಿರತೆಯೇ ಅಸ್ತ್ರ. ಜತೆಗೆ ಪುಕ್ಕಟೆ ಟಿವಿ, 2 ರೂ. ಅಕ್ಕಿ ಆಕರ್ಷಣೆ. ಜೆಡಿಎಸ್ ಮುಂದೆ ವಿಷಯಗಳೇ ಇಲ್ಲ. ಜಾತಿಯೇ ಎಲ್ಲ ಕ್ಷೇತ್ರಗಳಲ್ಲೂ ಪ್ರಮುಖ ಲೆಕ್ಕಾಚಾರ. ಅವನ್ನೆಲ್ಲ ಬಿಟ್ಟರೆ ದೊಡ್ಡ ಅಸ್ತ್ರವೆಂದರೆ ಬೈಗುಳ. ಯಾವ ನಾಯಕನ ಮುಂದೆಯೂ ಕರ್ನಾಟಕವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನೀಲನಕ್ಷೆಯಿಲ್ಲ. ಯಾರ ಕಣ್ಣಲ್ಲೂ ಕನಸುಗಳಿಲ್ಲ. ಎಲ್ಲರಿಗೂ ಅಧಿಕಾರವನ್ನು ಬಾಚಿಕೊಳ್ಳುವ, ರಾಜ್ಯವನ್ನು ದೋಚಿಕೊಳ್ಳುವ ಹಗಲುಗನಸು. ತಮ್ಮನ್ನೇಕೆ ಆರಿಸಬೇಕು ಎಂದು ಕೇಳಿದರೆ ಮನವೊಲಿಕೆಯ ಉತ್ತರ ಯಾರಿಂದಲೂ ಸಿಗುವುದಿಲ್ಲ. ಎಲ್ಲರೂ ವೈಯಕ್ತಿಕ ಜಗಳದಲ್ಲಿ ತೊಡಗಿದ್ದಾರೆ. ಯಾವ ಪಕ್ಷವೂ ಶುಭ್ರತೆ ಉಳಿಸಿಕೊಂಡಿಲ್ಲ. ಎಲ್ಲ ಪಕ್ಷಗಳ ಒಳಮನೆಯೊಳಗೂ `ಚರಂಡಿ ನೀರು’ ನುಗ್ಗಿಬಿಟ್ಟಿದೆ. ಹೀಗಿರುವಾಗ ಈ ಪಕ್ಷಗಳು ಎಂಥ ಸರಕಾರ ಕೊಡಬಹುದು? ಮೊದಲ ಬಾರಿಗೆ ಎಲ್ಲ ಪಕ್ಷಗಳ ನೈತಿಕತೆ ಚುನಾವಣೆ ಅಂಗಳದಲ್ಲಿ ಬೋರಲು ಬಿದ್ದಿದೆ. ಯಾವ ರಾಜಕೀಯ ನಾಯಕನ ಭಾಷಣ ಕೇಳಲೂ ಜನ ಹೋಗುತ್ತಿಲ್ಲ. ಆಡ್ವಾಣಿ, ಮೋದಿ, ಸೋನಿಯಾ, ಸುಷ್ಮಾ ಭಾಷಣಕ್ಕೆ ಸಹ ಹತ್ತು ಸಾವಿರ ಜನ ಸೇರುತ್ತಿಲ್ಲ. ಖಾಲಿ ಸ್ಟೇಡಿಯಮ್‌ನಲ್ಲಿ ಟ್ವೆಂಟಿ ಟ್ವೆಂಟಿ ಕ್ರಿಕೆಟ್ ಪಂದ್ಯ ನೋಡಿದ ಅನುಭವ! ಹಣಕೊಟ್ಟು, ವಾಹನ ಕಳಿಸದಿದ್ದರೆ ರಾಜಕೀಯ ಸಭೆಗಳಿಗೆ ಜನ ಹೋಗುವುದಿಲ್ಲ. ಚುನಾವಣೆಯ ಬಯಲು ಖಾಲಿ ಖಾಲಿ.

ಕಾಂಗ್ರೆಸ್‌ನಲ್ಲಿ ಯಾರು ಮುಖ್ಯಮಂತ್ರಿಯಾಗ್ತಾರೆಂಬುದೇ ಗೊತ್ತಿಲ್ಲ. ಬಿಜೆಪಿ ಅಧಿಕಾರಕ್ಕೆ ಬರುವುದು ಪೂರ್ತಿ ಗ್ಯಾರಂಟಿಯಿಲ್ಲ. ಆದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗೋದು ಮಾತ್ರ ಸಿದ್ಧ! ಮದುವೆ ನಡೆಯುವುದು ಡೌಟು, ಆದರೆ ವರ ಮಾತ್ರ ಸಿದ್ಧನಾಗಿದ್ದಾನೆ ಅಂತಾರಲ್ಲ ಹಾಗೆ. ಇನ್ನು ದೇವೇಗೌಡರದು ಬೇರೆ ಲೆಕ್ಕಾಚಾರ. ಅವರಿಗೆ 30-35 ಸೀಟು ಬಂದರೆ ಸಾಕು. ತಮ್ಮ ಮಕ್ಕಳೇ ಮುಖ್ಯಮಂತ್ರಿಯಾಗ್ತಾರೆ ಅಂತಿದ್ದಾರೆ. ಅವರಿಗೆ ಹೆಚ್ಚು ಸೀಟು ಬೇಕಾಗಿಲ್ಲ. ಪತ್ರಿಕೆ ಸರ್ಕ್ಯುಲೇಶನ್ ಜಾಸ್ತಿಯಾದರೆ ಲಾಸು ಅಂತಾರಲ್ಲ ಅಂಥ ಯೋಚನೆ ಅವರದು. ಮತದಾರ ಯಾರಿಗೆ ವೋಟು ಹಾಕಬೇಕು ಇಂಥ ಸ್ಥಿತಿಯಲ್ಲಿ?

ಚುನಾವಣಾತಜ್ಞರ ಪ್ರಕಾರ ಇಂಥ ಮನಸ್ಥಿತಿಯೇ ಯಾವ ಪಕ್ಷಕ್ಕೂ ಸಂಪೂರ್ಣ ಬಹುಮತವನ್ನು ತಂದುಕೊಡುವುದಿಲ್ಲ. ಇದು fractured mandateಗೆ ಕಾರಣವಾಗುತ್ತದೆ. ಕೊನೆಗೆ ಸಮ್ಮಿಶ್ರ ಸರಕಾರ ರಚನೆಯಲ್ಲಿ ಕೊನೆಗೊಳ್ಳುತ್ತದೆ. ನಮಗೆ ಈಗ ಅಂಥ ಸರಕಾರ ಬೇಕಾ? ಸಮ್ಮಿಶ್ರ ಸರಕಾರ ಅಂದ್ರೆ ಅವಕಾಶವಾದಿತನದ ಅಪರಿಮಿತ ಅನಾವರಣ! ರಾಜಕೀಯ ಹಾದರವನ್ನು ಸಂಭಾವಿತರು ಸಮ್ಮಿಶ್ರ ಸರಕಾರ ಅಂತಾರೆ ಅಷ್ಟೆ. ಸಾರ್ವಜನಿಕವಾಗಿ, ಸಂವಿಧಾನಾತ್ಮಕವಾಗಿ `ಹಾದರ’ ಪದ ಪಾರ್ಲಿಮೆಂಟರಿ ಅಲ್ಲ. ಹೀಗಾಗಿ ಯಾರೂ ಆ ಪದ ಬಳಸುವುದಿಲ್ಲ. ಇಲ್ಲದಿದ್ದರೆ ಅದು ಹಾದರವಲ್ಲದೇ ಮತ್ತೇನೂ ಅಲ್ಲ.

ಎಲ್ಲಿಯಾದರೂ ಬಿಜೆಪಿ-ಜೆಡಿಎಸ್ ಒಂದಾಗೋದುಂಟಾ? ಯಡಿಯೂರಪ್ಪ-ಕುಮಾರಸ್ವಾಮಿಗೆ ಯಾವ ಹೊಂದಾಣಿಕೆ ಇತ್ತು? ಹೋಗಿ ಹೋಗಿ ಕುಮಾರಸ್ವಾಮಿ ಹೇಗೆ ಮುಖ್ಯಮಂತ್ರಿಯಾದರು? ಅವರಿಗೆ mandateಇತ್ತಾ? ಚುನಾವಣೆಯಲ್ಲಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯೆಂದು ಬಿಂಬಿಸಿದ್ದರಾ? ಈ ಕುಮಾರಸ್ವಾಮಿ ಚುನಾವಣೆಯಲ್ಲಿ ಗೆದ್ದು ಬಂದ ನಂತರ ಸಣ್ಣಪುಟ್ಟ ಡೀಲಿಂಗ್‌ಗಳನ್ನು ಮಾಡಿಕೊಂಡು, ಸಿನಿಮಾ ನಿರ್ಮಾಣ ಮಾಡುತ್ತಾ ರೀಲು ಸುತ್ತಿಕೊಂಡಿದ್ದರು. ಅದು ಅವರ ವ್ಯಕ್ತಿತ್ವಕ್ಕೆ ಸರಿಹೊಂದುವ ಕೆಲಸವೂ ಆಗಿತ್ತು. ಆದರೆ ಅವರು ದೇವೇಗೌಡರ ಮಗನಾಗಿದ್ದರಿಂದ ಮುಂದೆ ಏನೆಲ್ಲ ಆಗಬೇಕೊ ಆದರು. ಹಾಗೆ ನೋಡಿದರೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಜನ್ಮೇತಿ ಮುಖಾಮುಖಿ ಭೇಟಿಯಾದವರಲ್ಲ. ಒಟ್ಟಿಗೆ ಕುಳಿತು ಬೈಟು ಕಾಫಿ ಕುಡಿದವರಲ್ಲ. ಅವರಿಬ್ಬರಲ್ಲಿ ಸಾಮ್ಯವೆನಿಸುವ ಯಾವ ಗುಣಗಳೂ ಇರಲಿಲ್ಲ. ಅವರಿಬ್ಬರ ಗುಣಗಳನ್ನು ಬಲ್ಲವರಿಗೆ ರೈಲುಬೋಗಿಯಲ್ಲಿ ಎದುರಾ-ಬದುರಾ ಕುಳಿತರೂ ಹತ್ತು ನಿಮಿಷ ಮುಖಮುಖ ನೋಡಿಕೊಳ್ಳಲಾರರು. ರಾಜಕೀಯದ ಯಾವುದೇ ತಿರುವಿನಲ್ಲಿ ಇಬ್ಬರೂ ಭೇಟಿಯಾದವರಲ್ಲ.

ಆದರೆ ಅಧಿಕಾರವೆಂಬ ಅಂಟು ಅವರನ್ನು ಒಟ್ಟಿಗೆ ಸೇರಿಸಿತು. ಬಿಜೆಪಿ ಜತೆ ಕುಮಾರಸ್ವಾಮಿ ಸಖ್ಯ ಬೆಳೆಸಿದ್ದಕ್ಕೆ ದೇವೇಗೌಡರು ಇನ್ನಿಲ್ಲದ ನಾಟಕವಾಡಿದರು. ದೇವೇಗೌಡರ ಒಪ್ಪಿಗೆಯಿಲ್ಲದೇ ಬಿಜೆಪಿ-ಜೆಡಿಎಸ್ ಸರಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿತ್ತು. ಕುಮಾರಸ್ವಾಮಿ ಯಡಿಯೂರಪ್ಪನವರ ಜತೆ ಸೇರಿ ಸರಕಾರ ರಚಿಸುವ  ಸಂದರ್ಭದಲ್ಲಿ ದೇವೇಗೌಡರೊಂದಿಗೆ ಸತತ ಸಂಪರ್ಕದಲ್ಲಿದ್ದರೆಂದು ಈಗ ಜೆಡಿಎಸ್ ಬಿಟ್ಟಿರುವ, ಕಾಂಗ್ರೆಸ್ ಸೇರಿರುವ ಮಾಜಿ ಶಾಸಕರು ಬಾಯಿಬಿಡುತ್ತಾರೆ. ಯಾವಜ್ಜೀವ ಬಿಜೆಪಿಯನ್ನು ದ್ವೇಷಿಸುತ್ತಾ ಬಂದ ದೇವೇಗೌಡರು, ತಮ್ಮ ಮಗನನ್ನು ಅಧಿಕಾರದ ಬಾವಿಗೆ ದೂಡಿದರು. ಇದೆಲ್ಲ ಕೇವಲ ಸಮ್ಮಿಶ್ರ ಸರಕಾರದಲ್ಲಿ ಮಾತ್ರ ಸಾಧ್ಯ. ಅಧಿಕಾರ ಅನುಭವಿಸಲು ಸಮ್ಮಿಶ್ರ ಸರಕಾರದಂಥ ಅದ್ಭುತ ಅರೇಂಜ್‌ಮೆಂಟ್ ಇನ್ನೊಂದಿಲ್ಲ. ಇರುವಷ್ಟು  ದಿನ ಯಥೇಚ್ಛ  ಮೆಂದು, ಏನನ್ನೂ ಉಳಿಸದೇ, ಎದ್ದು ಹೋಗುವಾಗ ಎಲ್ಲರನ್ನೂ ಬೈಯ್ದು, ಯಾರಿಗೂ ಉತ್ತರದಾಯಿಯಾಗದೇ ನಿರಾತಂಕವಾಗಿ ನಡೆದು ಹೋಗುವುದು. ಒಳ್ಳೆಯ ಮಾತು ಬಂದರೆ ಅದಕ್ಕೆಲ್ಲ ನಾನೇ ಕಾರಣ. ಕೆಟ್ಟದ್ದಕ್ಕೆಲ್ಲ ಬೇರೆಯವರೇ ಹೊಣೆ. ಸಮ್ಮಿಶ್ರ ಸರಕಾರದಲ್ಲಿದ್ದವರಿಗೆ “ನೀವು ಹೀಗೆ ಮಾತು ಕೊಟ್ಟಿದ್ರಿ. ಯಾಕೆ ಈಡೇರಿಸಲಿಲ್ಲ?” ಅಂತ ಕೇಳಿದರೆ `ಅದು ನಮ್ಮ ಸರಕಾರವಲ್ಲ. ಸಮ್ಮಿಶ್ರ ಸರಕಾರ. ನಮ್ಮ ಸರಕಾರವಿದ್ದರೆ ಅದರ ಕತೆಯೇ ಬೇರೆ’ ಎಂದು ಹೇಳಿ ಬಚಾವಾಗುತ್ತಾರೆ.

ಕುಮಾರಸ್ವಾಮಿ-ಯಡಿಯೂರಪ್ಪ, ಧರಂಸಿಂಗ್-ದೇವೇಗೌಡ ಒಂದಾಗುವುದೇ ಪ್ರಜಾಪ್ರಭುತ್ವದ ಕ್ರೂರ ಅಣಕ. ಕಳೆದ ಚುನಾವಣೆಯಲ್ಲಿ ಯಾರ್‍ಯಾರು ಹೇಗೆ ಮಾತಾಡಿದ್ದರು ಎಂಬುದನ್ನು ಕೇಳಿಸಿಕೊಳ್ಳಿ. ದೇವೇಗೌಡರು ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಬಾಯಿಗೆ ಬಂದಂತೆ ಬೈಯ್ದಿದ್ದರು. ಫಲಿತಾಂಶ ಬರುತ್ತಿರುವಂತೆ ಕಾಂಗ್ರೆಸ್ ಜತೆ ಕೈಜೋಡಿಸಿ ಸರಕಾರ ರಚಿಸಲು ಮುಂದಾದರು. ಬಿಜೆಪಿ ಸಹ ಕಾಂಗ್ರೆಸ್, ಜೆಡಿಎಸ್ಸನ್ನು ಹಿಗ್ಗಾಮುಗ್ಗಾ ಬೈಯ್ದಿತ್ತು. ಅನಂತರ ಜೆಡಿಎಸ್ ಜತೆ ಕೈಜೋಡಿಸಿತು. ಕಾಂಗ್ರೆಸ್ ಹಾಗೂ ಬಿಜೆಪಿಗೆ ಸಮಸಮವಾಗಿ ಬೈಯ್ದ ಜೆಡಿಎಸ್, ಆ ಎರಡೂ ಪಕ್ಷಗಳ ಜತೆ ಸೇರಿ ಅಧಿಕಾರ ಅನುಭವಿಸಿತು. ಇದು ಅವಕಾಶವಾದಿ ರಾಜಕಾರಣ. ಇವೆಲ್ಲ ಸಮ್ಮಿಶ್ರ ಸರಕಾರದಲ್ಲಿ ಮಾತ್ರ ಸಾಧ್ಯ.

ಪ್ರಾಯಶಃ ಇನ್ನೂ ಯಾರಿಗೂ ಅರ್ಥವಾಗದ ಪ್ರಶ್ನೆಯೆಂದರೆ ಕಾಂಗ್ರೆಸ್ ಹಾಗೂ ಬಿಜೆಪಿ ಸೇರಿ ಸಮ್ಮಿಶ್ರ ಸರಕಾರವನ್ನೇಕೆ ರಚಿಸಬಾರದು? ಇನ್ನೂ ಅಂಥ ಪ್ರಯೋಗ ಯಾಕೆ ಜಾರಿಗೆ ಬಂದಿಲ್ಲ? ಅದು ಜಾರಿಗೆ ಬರದಿರುವುದಕ್ಕೆ ಅಡ್ಡಿ ಏನು? ಇಂದು ಕಾಂಗ್ರೆಸ್ ಹಾಗೂ ಬಿಜೆಪಿ ಯಾವ ರೀತಿಯಲ್ಲೂ ಭಿನ್ನವಾಗಿಲ್ಲ. ಬಿಜೆಪಿಯ ಕಾಂಗ್ರೆಸ್ಸೀಕರಣ ಮತ್ತು ಕಾಂಗ್ರೆಸ್ಸಿನ ಬಿಜೆಪಿಕರಣ ಸಮಪ್ರಮಾಣದಲ್ಲಿ ಆಗಿವೆ. ಬಿಜೆಪಿಯಲ್ಲಿದ್ದ ಶಿಸ್ತುಗಾರ ಪುಟ್ಟಸ್ವಾಮಿ, ಸುಬಗ ಸುಬ್ಬರಾಯರೆಲ್ಲ ಕಾಂಗ್ರೆಸ್ಸಿಗರಂತೆ ಕಳಂಕಿತರಾಗಿದ್ದಾರೆ. ಹಾಗೆ ನೋಡಿದರೆ ನಿಜವಾದ like minded ಅಥವಾ broad minded ಪಕ್ಷಗಳೆಂದರೆ ಕಾಂಗ್ರೆಸ್ ಹಾಗೂ ಬಿಜೆಪಿ. ಯಾಕೆಂದರೆ ಇವೆರಡೂ ಪಕ್ಷಗಳ ಜತೆ ಯಾರು ಬೇಕಾದರೂ ಸೇರಿ ಸರಕಾರ ರಚಿಸಬಹುದು. ಇವರು ಯಾರ ಜತೆ ಬೇಕಾದರೂ ಕೈಜೋಡಿಸುತ್ತಾರೆ. ಯಾರ ಜತೆ ಬೇಕಾದರೂ ಕೈ ಚಾಚುತ್ತಾರೆ. ರಾಜಕಾರಣದ ಎಲ್ಲ ಬೇಕು-ಬೇಡಗಳನ್ನು ಅರಗಿಸಿಕೊಳ್ಳುವ ಶಕ್ತಿಯಿರುವುದೂ ಈ ಎರಡು ಪಕ್ಷಗಳಿಗೆ. ಹೀಗಿರುವಾಗ ಈ ಎರಡು ಪಕ್ಷಗಳೇಕೆ ಸೇರಿ ಸಮ್ಮಿಶ್ರ ಸರಕಾರ ರಚಿಸಬಾರದು? ಸಾಮಾನ್ಯ ಕನಿಷ್ಠ ಕಾರ್ಯಕ್ರಮದಂತೆ ಸರಕಾರ ರಚಿಸಿಕೊಂಡು ಹೋಗಬಹುದಲ್ಲ? ಕೇಂದ್ರದಲ್ಲಿ ಸಾಧ್ಯವಾಗದಿದ್ದರೆ ಕನಿಷ್ಠ ರಾಜ್ಯದಲ್ಲಾದರೂ ಈ ಪ್ರಯೋಗ ಜಾರಿಗೆ ತರಬಹುದಲ್ಲ?

ಆ ಕಾಲ ಬಂದರೂ ಬರಬಹುದು, ಆಶ್ಚರ್ಯಪಡಬೇಕಿಲ್ಲ. ಅಧಿಕಾರಕ್ಕಾಗಿ ಯಾರ ಜತೆ ಬೇಕಾದರೆ ನಮ್ಮ ರಾಜಕಾರಣಿಗಳು ಕೈಜೋಡಿಸಲು ಸಿದ್ಧರಿರುವಾಗ, ಕಾಂಗ್ರೆಸ್ಸಾದರೇನು ಬಿಜೆಪಿಯಾದರೇನು? ಹೀಗಾಗುವುದು ಮಾತ್ರ ಬಾಕಿ ಇದೆ. ರಾಜಕೀಯದಲ್ಲಿ ಏನು ಬೇಕಾದರೂ ಆಗುವುದರಿಂದ ಇದೂ ಆಗಬಹುದು. ಯಾರಾದರೂ ಸರಿ ಸಮ್ಮಿಶ್ರ ಸರಕಾರವೆಂಬ ಮಂಚದ ಮೇಲೆ ಸಖ್ಯ ಕುದುರುತ್ತದೆ. ಸಮ್ಮಿಶ್ರ ಸರಕಾರವೆಂದರೆ ನೀಚತನದ ಪರಮಾವಧಿ, ಅಪವಿತ್ರ ಹೊಂದಾಣಿಕೆಯ ಗೌರಿಶಂಕರ, ಸಮಯಸಾಧಕತನದ ಉತ್ತುಂಗ, ನೈತಿಕ ಅಧಃಪತನದ ರಸಾತಳ. ಸಮ್ಮಿಶ್ರ ಸರಕಾರದ ಸಮರ್ಥನೆಗೆ ಕೊಡುವ ಉತ್ತರವೆಂದರೆ ರಾಜಧರ್ಮ. ಯಾವ ಸಮ್ಮಿಶ್ರ ಸರಕಾರ ಅದನ್ನು ಪಾಲಿಸಿದೆ? ಕಾಂಗ್ರೆಸ್-ಜೆಡಿಎಸ್ ಸರಕಾರವಿದ್ದಾಗ ಮುಖ್ಯಮಂತ್ರಿ ಧರ್ಮಸಿಂಗ್ ಅಕ್ಷರಶಃ ದೇವೇಗೌಡರ ಕೈಗೊಂಬೆಯಾಗಿದ್ದರು. ಹಾಗೆ ಮಾಡುವುದು ರಾಜಧರ್ಮ ಪಾಲನೆ. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ ಬಿಜೆಪಿಯನ್ನು ಒಕ್ಕೊರಲಿನಿಂದ ಬೈಯುತ್ತಿದ್ದವು. ಬಿಜೆಪಿಯೂ ಆ ಎರಡೂ ಪಕ್ಷಗಳನ್ನು ಹಳಿಯುತ್ತಿತ್ತು. ಅನಂತರ ಏಕಾಏಕಿ ಬಿಜೆಪಿ-ಜೆಡಿಎಸ್ ಒಂದಾದವು. ಅಧಿಕಾರವನ್ನು ಅನುಭವಿಸುವುದೇ ಮುಖ್ಯ ಕಾರಣ ಅಲ್ಲ ಅಂದ್ರೆ ಇವೆರಡೂ ಒಂದಾಗಿದ್ದು ಬೇರೆ ಯಾವ ಸಿದ್ಧಾಂತದ ಆಧಾರದ ಮೇಲೆ ಎಂಬುದು ರಾಜ್ಯದ ಜನತೆಗೆ ಇನ್ನೂ ಸಿಗದ ಉತ್ತರ.
ಅಧಿಕಾರಕ್ಕೆ ಬಂದ ಅನಂತರ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರ ನಡುವೆ ಸ್ವಲ್ಪವೂ ಸಾಮರಸ್ಯವಿರಲಿಲ್ಲ. ಪ್ರಮುಖ ನಿರ್ಧಾರಗಳನ್ನು ಇಬ್ಬರೂ ಚರ್ಚಿಸುತ್ತಿರಲಿಲ್ಲ. ಇಬ್ಬರೂ ಇಪ್ಪತ್ತು ತಿಂಗಳು ಮುಗಿಯುವುದಕ್ಕೆ ಕಾಯುತ್ತಿದ್ದರು. ಯಡಿಯೂರಪ್ಪನವರಿಗೆ ಅಧಿಕಾರ ವಂಚಿಸಲು ಕುಮಾರಸ್ವಾಮಿ ಕಾಯುತ್ತಿದ್ದರು, ಯಡಿಯೂರಪ್ಪನವರು ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದರು. ಅನಂತರ ಏನಾಯಿತೆಂಬುದು ಇತಿಹಾಸ.

ಆಟ ಮುಗಿಯಿತೆಂದು ಪರದೆ ಎಳೆದ ಮೇಲೂ ಬಿಜೆಪಿ-ಜೆಡಿಎಸ್, ಜೆಡಿಎಸ್-ಕಾಂಗ್ರೆಸ್ ಪುನಃ ತಾಲೀಮು ನಡೆಸಿ ರಂಗವೇರಲು ಪ್ರಯತ್ನ ನಡೆಸಿದ್ದೂ ಸಹ ಅಸಹ್ಯ ರಾಜಕೀಯಕ್ಕೆ ಬರೆದ ಕೆಟ್ಟ ಭಾಷ್ಯ. ಸಮ್ಮಿಶ್ರ ಸರಕಾರ ಅಂದ್ರೆ ಅಭಿವೃದ್ಧಿ ವಿರೋಧಿ. ಸಮ್ಮಿಶ್ರ ಸರಕಾರ ಬಂದ್ರೆ ರಾಜ್ಯದ ಜನತೆಗೆ ಅವಮಾನ. ಇದು ಹಗಲು ದರೋಡೆಗೆ ಅನುಮತಿ ನೀಡಿದ ಹಾಗೆ. ರಾಜಕೀಯ ಹಾದರಕ್ಕೆ ಹಾಸಿಗೆ ಬಿಚ್ಚಿಕೊಟ್ಟ ಹಾಗೆ. ಒಂದು ವೇಳೆ ನಾಳೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿಲ್ಲ ಅಂತಿಟ್ಟುಕೊಳ್ಳಿ, ನಾವು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ಸಿದ್ಧ ಎಂದು ಹೇಳುತ್ತಿರುವ ದೇವೇಗೌಡ, ಯಡಿಯೂರಪ್ಪ, ಖರ್ಗೆ ಹೇಗೆ ಒಬ್ಬರ ಹಿಂದೆ ಮತ್ತೊಬ್ಬರು ಬೀಳುತ್ತಾರೆ ನೋಡ್ತಾ ಇರಿ. ಈಗ ಒಬ್ಬರನ್ನೊಬ್ಬರು ಬೈಯುತ್ತಿದ್ದವರು ನಾಳೆ ತಾಪ್ಡ್‌ತೋಪ್ಡ್ ಪ್ಲೇಟ್ ಬದಲಾಯಿಸದಿದ್ದರೆ ಆಣೆ.

ಕಳೆದ ನಾಲ್ಕು ವರ್ಷ ಅನುಭವಿಸಿದ ಯಾತನೆ, ನರಕ ಹಾಗೂ ಬರಲಿರುವ ಸಮ್ಮಿಶ್ರ ಸರಕಾರದ ಗುಮ್ಮನನ್ನು ನೆನೆದುಕೊಂಡರೆ ದಿಗಿಲಾಗುತ್ತದೆ. ಈ ರಾಜಕಾರಣಿಗಳ ಜೀತಗಳಾಗಬೇಕಲ್ಲ ಅಂತ ನೆನೆದರೆ ಭಯವಾಗುತ್ತದೆ. ಆದ್ದರಿಂದ ಯಾವ ಪಕ್ಷವಾದರೂ ಸರಿ, ಯಾವುದಾದರೂ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ ಆರಿಸಿ ತನ್ನಿ. ಆ ಕೆಲಸ ನಿಮ್ಮಿಂದ ಮಾತ್ರ ಸಾಧ್ಯ. ಎಚ್ಚರ. ಸಮ್ಮಿಶ್ರ ಸರಕಾರ ಅಂದ್ರೆ ಹಗಲು ದರೋಡೆಗೆ ಪರ್ಮಿಟ್ ಕೊಟ್ಟಂತೆ!

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: