ಪಟಾಕಿ ಹೊಡೆಯದೇ ದೀಪಾವಳಿ ಆಚರಿಸಿದರೆ ಹೇಗಿರುತ್ತೆ?

ಗಲಾಟೆಯಾಗುತ್ತದೆ, ಕಿವಿ ಗಿವುಡಿಕ್ಕುತ್ತದೆ, ಮಾಲಿನ್ಯವಾಗುತ್ತದೆ ಎಂದರೆ ದೀಪಾವಳಿಯಾಗುವುದಿಲ್ಲ. ಮೈಗೆ ಬಣ್ಣವಾಗುತ್ತದೆ, ದುಡ್ಡೂ ದಂಡ ಅಂತ ಬಣ್ಣವನ್ನೇ ಎರಚಿಕೊಳ್ಳದಿದ್ದರೆ ಹೋಳಿಯೂ ನಡೆಯುವುದಿಲ್ಲ. ದುರದೃಷ್ಟವಶಾತ್, ಎಡಗೈ ತೋರ್‍ಬೆರಳಿನ ಉಗುರಿನ ಮೇಲಿರುವ ಕರಿ ನಾಮವನ್ನು ನೋಡಿ ಪ್ರಜಾಪ್ರಭುತ್ವದ ದೀಪಾವಳಿಯಾದ ಚುನಾವಣೆ ನಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕಾದ ಪರಿಸ್ಥಿತಿ ಈಗ ಸೃಷ್ಟಿಯಾಗಿದೆ.

Election fever disappers in Karnatakaಒಮ್ಮೆ ತಿಂಮನ ಊರಿನಲ್ಲಿ ಹೇಮಾಹೇಮಿ ರಾಜಕಾರಣಿಯೊಬ್ಬರ ಭಾಷಣ ಏರ್ಪಾಡಾಗಿತ್ತು. ಆತ ಜನರ ನಿರೀಕ್ಷೆಗೆ ತಕ್ಕಂತೆ ಅತ್ಯದ್ಭುತ ಭಾಷಣವನ್ನೇ ಮಾಡಿದರು. ವಂದನಾರ್ಪಣೆ, ಹಾರ, ತುರಾಯಿ ಮುಂತಾದ `ಅಂತ್ಯಕ್ರಿಯೆ’ಗಳು ಮುಗಿದು ವೇದಿಕೆಯಿಂದ ಕೆಳಗಿಳಿದರು. ತಿಂಮ ಅಲ್ಲಿಯೇ ನಿಂತಿದ್ದ. ಆತನನ್ನು ನೋಡಿದ್ದೇ ತಡ ಹತ್ತಿರಕ್ಕೆ ಬಂದ ಆ ರಾಜಕಾರಣಿ, “ಹೇಗಿತ್ತಯ್ಯಾ ತಿಂಮ, ನನ್ನ ಭಾಷಣ?” ಅಂತ ಕೊಂಚ ಒಣ ಜಂಭದಿಂದಲೇ ಕೇಳಿದರು.

ತಿಂಮ: ನಿಮ್ಮ ಭಾಷಣ ಅಂದರೆ ಕೇಳಬೇಕೇ ಸ್ವಾಮಿ, ಬಹಳ ಚೆನ್ನಾಗಿತ್ತು. ಆದರೆ ಭಾಷಣದ ಒಂದು ಪ್ರತಿ ಬೇಕಿತ್ತಲ್ಲಾ?!
ರಾಜಕಾರಣಿ: ಪ್ರತಿ! ನಾನು ಬರೆದಿದ್ದರೆ ಅಲ್ಲವೇ ಕೊಡುವುದು?
ತಿಂಮ: ಅಕಸ್ಮಾತ್ ಸಣ್ಣದಾಗಿ ಪಾಯಿಂಟ್ ಮಾಡಿಕೊಂಡಿದ್ದರೆ ಅದನ್ನೇ ಕೊಡಿ ಸ್ವಾಮಿ!
ರಾಜಕಾರಣಿ: ಏನೂ ಬರೆದಿಲ್ಲವಯ್ಯಾ, ನನಗೆ ಆ ಅಭ್ಯಾಸವೇ ಇಲ್ಲ.

ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಬಗ್ಗೆ ಯೋಚಿಸುತ್ತಿರುವಾಗ `ಬೆಳ್ಳಿ ತಿಂಮ ನೂರೆಂಟು ಹೇಳಿದ’ ಪುಸ್ತಕದಲ್ಲಿ ಬೀchi ಹೇಳಿರುವ ಈ ಜೋಕು ನೆನಪಾಯಿತು. ಅಷ್ಟಕ್ಕೂ ಆತ ಎಂತಹ ಘಟಾನುಘಟಿ ರಾಜಕಾರಣಿಯೇ ಇರಬಹುದು, ಮೋಡಿ ಮಾಡುವ ಮಾತುಗಾರನಿರಬಹುದು ರಾಜಕಾರಣಿಗಳ ಭಾಷಣ ಕೇಳುವ ಅವಕಾಶವೇ ಈ ಬಾರಿ ತಪ್ಪಿಹೋದಂತಾಗಿದೆ. ಹಾಗಂತ ಜನರೇನು ಮುನಿಸಿಕೊಂಡಿಲ್ಲ, ಬಹಳ ಖುಷಿಯಿಂದಲೇ ಇದ್ದಾರೆ. ಚುನಾವಣೆಯ ಪ್ರತ್ಯಕ್ಷದರ್ಶನದ ಸಲುವಾಗಿ ಬೆಂಗಳೂರಿನಿಂದ ಹೊರಟು ತುಮಕೂರು, ಚಿತ್ರದುರ್ಗ, ದಾವಣಗೆರೆ, ಹರಿಹರ, ಹುಬ್ಬಳ್ಳಿ, ಬಾಗಲಕೋಟ, ಬೆಳಗಾವಿ, ಅಲ್ಲಿಂದ ಶಿವಮೊಗ್ಗ, ಕೊಪ್ಪ, ಶೃಂಗೇರಿ, ಚಿಕ್ಕಮಗಳೂರು ಹೀಗೆ ರಾಜ್ಯದುದ್ದಗಲಕ್ಕೂ ಪ್ರಯಾಣ ಮಾಡುತ್ತಿದ್ದೇನೆ. ಎಲ್ಲಿಗೇ ಹೋದರೂ ರಾಜಕಾರಣಿಗಳ ಕಟೌಟ್‌ಗಳ ಸುಳಿವೇ ಇಲ್ಲ, ಭಾವುಟ, ಬ್ಯಾನರ್, ಬಂಟಿಂಗ್‌ಗಳೂ ಕಾಣುತ್ತಿಲ್ಲ. ಚುನಾವಣೆ ನಡೆಯುತ್ತಿದೆಯೋ, ಇಲ್ಲವೋ ಎಂದು ಅನುಮಾನಪಡುವಷ್ಟರ ಮಟ್ಟಿಗೆ ಪ್ರಚಾರಾಂದೋಲನ ಅಪರಿಚಿತವಾಗಿಬಿಟ್ಟಿದೆ. ಅಷ್ಟೇಕೆ, ಇಬ್ಬರು ಮಾಜಿ ಮುಖ್ಯಮಂತ್ರಿಗಳ ಸ್ಪರ್ಧಾಕಣವಾಗಿರುವ ಶಿಕಾರಿಪುರದಲ್ಲೂ ಚುನಾವಣೆಯ ಛಾಯೆ ಕಾಣುವುದಿಲ್ಲ. ಚುನಾವಣೆ ಬಂತೆಂದರೆ ಚೀರಾಡುತ್ತಿದ್ದ ಮೈಕ್‌ಗಳು, ಆಟೋಗಳ ಮೇಲಿಂದ ಕೂಗಿಕೊಳ್ಳುತ್ತಿದ್ದ ಧ್ವನಿವರ್ಧಕಗಳು ತೀರಾ ಅಪರೂಪವಾಗಿಬಿಟ್ಟಿವೆ. ಎಲ್ಲಾ ಗೋಪಾಲಸ್ವಾಮಿಯವರ `ನಾಮ’ಬಲ!

ಒಂದೆಡೆ ಚುನಾವಣಾ ಆಯೋಗದವೆಂದರೆ ರಾಜಕೀಯ ಪಕ್ಷಗಳು ಥರಥರ ಎಂದು ನಡುಗುತ್ತಿವೆ, ಇನ್ನೊಂದೆಡೆ ಸಾಮಾನ್ಯ ಜನರು ಆಯೋಗವನ್ನು ಶ್ಲಾಘನೆ ಮಾಡುತ್ತಿದ್ದಾರೆ. ಇದೇ ವಿಷಯದ ಬಗ್ಗೆ ನಾನೂ ಕೂಡ ಬರೆದಿದ್ದೆ. ಆದರೆ ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮ ಮೆಚ್ಚುವಂಥದ್ದೇ ಆಗಿದ್ದರೂ ಅದರಿಂದ ಪ್ರಜಾಪ್ರಭುತ್ವ ಅಥವಾ ಚುನಾವಣಾ ಪ್ರಜಾತಂತ್ರಕ್ಕೆ ಅಂತಹ ಲಾಭವೇನೂ ಆಗುತ್ತಿಲ್ಲ. ಈ ಮಾತನ್ನು ಬೇಸರದಿಂದಲೇ ಹೇಳಬೇಕಾಗಿ ಬಂದಿದೆ. ಖಂಡಿತ, ಚುನಾವಣಾ ಆಯೋಗ ರಾಜಕೀಯ ಪಕ್ಷಗಳನ್ನು ಹತೋಟಿಯಲ್ಲಿ, ಹದ್ದುಬಸ್ತಿನಲ್ಲಿ, ಒಂದಿಷ್ಟು ಹೆದರಿಕೆಯಲ್ಲಿ ಇಟ್ಟುಕೊಂಡರೆ ಯಾರೂ ಬೇಡವೆನ್ನುವುದಿಲ್ಲ. ಆದರೆ ಒತ್ತೆಯಾಳಾಗಿಟ್ಟುಕೊಳ್ಳಲು ಪ್ರಯತ್ನಿಸುವುದು ಸರಿ ಕಾಣುವುದಿಲ್ಲ. ನಮ್ಮ ಚುನಾವಣಾ ಆಯೋಗ ನಡೆದುಕೊಳ್ಳುತ್ತಿರುವ ರೀತಿಯನ್ನು ನೋಡಿದರೆ ಹಾಗನ್ನಿಸದೇ ಇರದು. ನೀವೇ ಯೋಚಿಸಿ ನೋಡಿ, ಪ್ರಜಾತಂತ್ರದಲ್ಲಿ ನಾಯಕರು ಹೊರಹೊಮ್ಮುವುದಾದರೂ ಹೇಗೆ? ಭಾಷಣವೇ ಬೇಡ ಅನ್ನುವುದಾದರೆ ಒಬ್ಬ ಅಭ್ಯರ್ಥಿಯಲ್ಲಿರುವ ನಾಯಕತ್ವ ಗುಣ ಹೇಗೆತಾನೇ ಬೆಳಕಿಗೆ ಬರಲು ಸಾಧ್ಯ?
ಚುನಾವಣಾ ಆಯೋಗ ಕಡಿವಾಣ ಹಾಕುವ ಮೊದಲು ಈ ಬಗ್ಗೆಯೂ ಗಮನಹರಿಸಬೇಕಿತ್ತು.

ಅಷ್ಟಕ್ಕೂ ಬನಶಂಕರಿ, ಶಿರಸಂಗಿ, ಉಳವಿ, ಚಂದ್ರಗುತ್ತಿಯಲ್ಲಿ ಜಾತ್ರೆಯಾದರೆ ಒಂದಿಷ್ಟು ಗಲಾಟೆಯಾಗುತ್ತದೆ, ಮೈಕುಗಳು ಕಿರುಚಿಕೊಳ್ಳುತ್ತವೆ, ಲಕ್ಷಾಂತರ ಜನ ಸೇರುತ್ತಾರೆ. ವರ್ಷಕ್ಕೊಮ್ಮೆ ನಡೆಯುವ ಅಂಕೋಲಾದ ಬಂಡಿಯಬ್ಬ, ಚಂದಾವರದ ತೇರು, ಕೆ.ಆರ್. ಮಾರುಕಟ್ಟೆಯ ಕರಗದ ಸಂದರ್ಭದಲ್ಲಿ ಜನಜಂಗುಳಿಯೇ ಕಂಡುಬರುತ್ತದೆ. ಆದರೆ ಐದು ವರ್ಷಕ್ಕೊಮ್ಮೆ ನಡೆಯುವ ವಿಧಾನಸಭೆ ಚುನಾವಣೆ ಈ ಬಾರಿ ತೀರಾ ಪೇಲವವಾಗಿ ಕಾಣುತ್ತಿದೆ, ನೀರಸವೆನಿಸಿ ಬಿಡುತ್ತಿದೆ. ಇಡೀ ರಾಜ್ಯವೇ ಚುನಾವಣೆ ಎದುರಿಸುತ್ತಿದ್ದರೂ ಒಂದು ಜಾತ್ರೆಯ, ತೇರಿನ ಛಾಯೆಯೂ ಕಂಡುಬರುತ್ತಿಲ್ಲ. ಬ್ಯಾನರ್‍ಸ್, ಬಂಟಿಂಗ್ಸ್, ಫ್ಲಾಗ್, ಕ್ಯಾಪ್‌ಗಳ ಕಥೆ ಹಾಗಿರಲಿ, ಪ್ರತಿಸ್ಪರ್ಧಿಗಳ ವಿರುದ್ಧ ಟೀಕಾ ಪ್ರಹಾರವನ್ನೂ ಮಾಡುವಂತಿಲ್ಲ! ಹದಗೆಟ್ಟಿರುವ ಆರ್ಥಿಕತೆ ಮತ್ತು ಬೆಲೆ ಹೆಚ್ಚಳದ ಸಲುವಾಗಿ ಕಾಂಗ್ರೆಸ್ ವಿರುದ್ಧ ಸುಷ್ಮಾ ಸ್ವರಾಜ್ ಮಾಡಿರುವ ಟೀಕೆಯ ಜಾಹೀರಾತಿಗೂ ಆಯೋಗ ಕತ್ತರಿ ಹಾಕಿದೆ. ಹೀಗೆ ಟೀಕೆಯನ್ನೇ ಮಾಡಬಾರದು ಎಂದು ಆಯೋಗ ನಿರ್ಬಂಧ ಹೇರುವುದಾದರೆ, ಯಾವ ಕಾರಣಕ್ಕಾಗಿ ತಮಗೆ ಮತ ನೀಡಬೇಕೆಂದು ಅಭ್ಯರ್ಥಿಗಳು ಜನರ ಬಳಿಗೆ ಹೋಗಬೇಕು? ಮತದಾರರಿಗೆ ಯಾವ ಕಾರಣ ಕೊಟ್ಟು ತಮಗೆ ಮತ ನೀಡಬೇಕೆಂದು ಮನವೊಲಿಸುವುದು? ಅಮೆರಿಕದಂತಹ ವಿಶ್ವದ ಅತ್ಯಂತ ಬಲಿಷ್ಠ ಪ್ರಜಾಪ್ರಭುತ್ವ ರಾಷ್ಟ್ರದಲ್ಲೂ ಜಾಹೀರಾತುಗಳ ಮೇಲಾಗಲಿ, ಪರಸ್ಪರ ಟೀಕಾಪ್ರಹಾರ, ವಾಗ್ದಾಳಿ ಮಾಡಿಕೊಳ್ಳುವುದರ ಮೇಲಾಗಲಿ ನಿರ್ಬಂಧ ಹೇರಿಲ್ಲ. ಅಲ್ಲಿನ ಡೆಮೋಕ್ರಾಟಿಕ್ ಪಕ್ಷದ ನಾಮಪತ್ರಕ್ಕಾಗಿ ಪ್ರಯತ್ನಿಸುತ್ತಿರುವ ಬರಾಕ್ ಒಬಾಮಾ ಮತ್ತು ಹಿಲರಿ ರೊದ್ಹಾಮ್ ಕ್ಲಿಂಟನ್ ನಡುವೆ ದೊಡ್ಡ ಜಾಹೀರಾತು ಸಮರವೇ ನಡೆಯುತ್ತಿದೆ. ಸ್ಥಳೀಯ ಸಮಸ್ಯೆಯಿಂದ ಇರಾಕ್ ಸಮರದವರೆಗೂ ಎಲ್ಲ ವಿಷಯ, ವಿಚಾರಗಳೂ ಚರ್ಚೆ, ಟೀಕೆಯ ವಸ್ತುಗಳಾಗಿವೆ. ಇದು ನಮ್ಮ ಆಯೋಗಕ್ಕೆ ತಿಳಿಯದ ವಿಚಾರವೇನಲ್ಲ. ಆದರೂ ಅದು ಹೇರಿರುವ ನಿರ್ಬಂಧ ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತದೆ, ಅನುಚಿತವೆನಿಸುತ್ತದೆ. ಅಷ್ಟಕ್ಕೂ ಅಂತಹ ಇಂದಿರಾ ಗಾಂಧಿಯವರನ್ನೇ ನಡುಗಿಸಿದ್ದು ಜಾರ್ಜ್ ಫರ್ನಾಂಡಿಸ್ ಅವರ ವಾಗ್ದಾಳಿ, ವಾಗ್ಝರಿಯೇ ಅಲ್ಲವೆ?

ಜಯಪ್ರಕಾಶ್ ನಾರಾಯಣ್, ಜಾರ್ಜ್ ಫರ್ನಾಂಡಿಸ್, ಕರ್ಪೂರಿ ಠಾಕೂರ್, ಮೃಣಾಲ್ ಬೋರೆ ಬರುತ್ತಾರೆಂದರೆ ಅವರ ಮಾತು ಕೇಳುವುದಕ್ಕಾಗಿ ಜನ ದಂಡು ದಂಡಾಗಿ ಆಗಮಿಸುತ್ತಿದ್ದರು. ಯಾರೂ ಕಾರು, ಲಾರಿ, ವ್ಯಾನ್ ಕಳುಹಿಸಿ ಕೊಡಬೇಕಾಗಿರಲಿಲ್ಲ. ಸಮಾಜವಾದಿ ಚಳವಳಿ ನಾಯಕರಂತೂ ಮೋಡಿಯ ಮಾತಿಗೇ ಹೆಸರಾಗಿದ್ದರು. ಮಾತೇ ಆಡಬಾರದು, ಭಾಷಣವನ್ನೇ ಮಾಡಬಾರದು, ಟೀಕೆ ಕೂಡ ಸಲ್ಲದು ಅಂದರೆ ಏನರ್ಥ ಸ್ವಾಮಿ? ಮಹಾತ್ಮ ಗಾಂಧೀಜಿಯಾಗಲಿ, ಜಯಪ್ರಕಾಶ್ ನಾರಾಯಣ್ ಅವರಾಗಲಿ ಎಂದೂ ಚುನಾವಣೆಗೆ ನಿಲ್ಲಲಿಲ್ಲ. ಆದರೆ ಅವರ ಭಾಷಣವಿದೆಯೆಂದರೆ ಜನ ಸಾಗರದಂತೆ ಸೇರುತ್ತಿದ್ದರು. ಚುನಾವಣಾ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರನ್ನು ಸೇರಿಸುವುದೂ ಒಂದು ಕಲೆ. ಅಲ್ಲಿ ಮಾತುಗಾರನ ಮೋಡಿಯ ಜತೆಗೆ ಒಬ್ಬ ವ್ಯಕ್ತಿ ಸಂಘಟನಾ ಸಾಮರ್ಥ್ಯ ಕೂಡ ಪರೀಕ್ಷೆಗೆ ಒಳಪಡುತ್ತದೆ. ಜೀವರಾಜ ಆಳ್ವ ಒಬ್ಬ ಒಳ್ಳೆಯ ಭಾಷಣಕಾರನಾಗಿರುವುದಕ್ಕಿಂತ ಉತ್ತಮ ಸಂಘಟಕನಾಗಿದ್ದರು. ಅವರನ್ನು ರಾಜಕೀಯದಲ್ಲಿ ಮೇಲೆ ತಂದಿದ್ದು, ಸ್ಥಾನ ಗಳಿಸಿಕೊಟ್ಟಿದ್ದು ಅವರ ಸಂಘಟನಾ ಸಾಮರ್ಥ್ಯವೇ. ಆಯೋಗದ ನಿರ್ಧಾರದಿಂದಾಗಿ ಕರ್ನಾಟಕದಲ್ಲಿ ಈಗ ಎಂತಹ ಪರಿಸ್ಥಿತಿ ಸೃಷ್ಟಿಯಾಗಿದೆಯೆಂದರೆ ಲಕ್ಷ ಜನರನ್ನು ಸೆಳೆಯುತ್ತಿದ್ದ ಅಟಲ್ ಬಿಹಾರಿ ವಾಜಪೇಯಿಯವರೇ ಆಗಮಿಸಿದರೂ 10 ಸಾವಿರ ಜನ ಸೇರುವುದು ಕಷ್ಟ! ಇಂತಿಷ್ಟು ತಾಸುಗಳಲ್ಲೇ ಸಭೆ ಮುಗಿಯಬೇಕು, ಪಾದಯಾತ್ರೆ ಕೈಗೊಂಡರೂ ಜತೆಗೆ ಸಾಗುವವರ ಸಂಖ್ಯೆ ಇಂತಿಷ್ಟು ಮೀರಬಾರದು, ಪ್ರಚಾರಕ್ಕೆ ಏಳೇ ವಾಹನ, ಕೆಟ್ಟರೂ ಬದಲಿ ವಾಹನ ಬಳಸುವಂತಿಲ್ಲ, ಮತದಾನಕ್ಕಿಂತ 48 ಗಂಟೆಗಳ ಮೊದಲು ಮನೆಮನೆಗಳಿಗೆ ಹೋಗಿ ಮಾಡುತ್ತಿದ್ದ ಪ್ರಚಾರಕ್ಕೂ ಕಡಿವಾಣ, ಎಲ್ಲದಕ್ಕೂ ಪೂರ್ವ ಅನುಮತಿ ಕಡ್ಡಾಯ ಇಂತಹ ನಿರ್ಬಂಧಗಳಿಂದ ಪ್ರಜಾತಂತ್ರ ವ್ಯವಸ್ಥೆಗೆ ಖಂಡಿತ ಒಳಿತೇನೂ ಆಗುತ್ತಿಲ್ಲ. ಎಷ್ಟೇ ಆಗಲಿ, ಚುನಾವಣೆ ಅನ್ನುವುದೂ ಕೂಡ ಹಬ್ಬಗಳಂತೆಯೇ ಒಂದು ಸೆಲೆಬ್ರೇಶನ್. ಮನೆಮಂದಿಯೆಲ್ಲ ಒಟ್ಟು ಸೇರಿದರೆ ಹೇಗೆ ಹಬ್ಬ ರಂಗೇರುತ್ತದೋ ಹಾಗೆಯೇ ಜನ ಸೇರಿದರಷ್ಟೇ ಪ್ರಚಾರಕ್ಕೆ ಕಳೆ ಬರುವುದು.
ಪ್ರಚಾರಾಂದೋಲನದ ವೇಳೆ ರಸ್ತೆಗಳು ಕೊಳಕಾಗಬಹುದು, ಬ್ಯಾನರ್, ಬಂಟಿಂಗ್ಸ್, ಪ್ಯಾಂಪ್ಲೆಟ್‌ಗಳ ರಾಶಿ ಬೀಳಬಹುದು. ಕಿವಿಗಳಿಗೂ ಒಂಚೂರು ತ್ರಾಸವಾಗಬಹುದು. ಆದರೆ ಅದು ಹೆಚ್ಚೆಂದರೆ 15 ದಿನಗಳಷ್ಟೆ. ಆಮೇಲೆ ರಸ್ತೆಗಳನ್ನು ಸ್ವಚ್ಛಗೊಳಿಸಬಹುದು. ರಸ್ತೆ ಕೊಳಗಾಗುತ್ತದೆ ಅಂತಹ ಬ್ಯಾನರ್, ಬಂಟಿಂಗ್ಸ್ ಬೇಡ ಎಂದರೆ ಹೇಗೆ? ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಚುನಾವಣೆ ಬರುತ್ತದೆ. ಹಾಗೆ ವಿರಳವಾಗಿ ಬರುವ ಚುನಾವಣೆಯ ಸಂದರ್ಭದಲ್ಲಿ 15 ದಿನ ರಸ್ತೆ ಸ್ವಲ್ಪ ಹೊಲಸಾದರೂ ಕಳೆದುಕೊಳ್ಳುವುದಾದರೂ ಏನು? ಚುನಾವಣೆ ಕೂಡ ಒಂದು ಹಬ್ಬವಿದ್ದಂತೆ, ಹೊಸತನದ ನಿರೀಕ್ಷೆ, ಆತುರ, ಕಾತರ, ಒಂದಿಷ್ಟು ಭಯ, ಎಲ್ಲವೂ  ಇರುತ್ತವೆ. ಹಾಗಿದ್ದರೂ ಪ್ರಚಾರ, ಭಾಷಣವೇ ಬೇಡ ಎಂದರೆ ಜನರನ್ನು ತಲುಪುದಾದರೂ ಹೇಗೆ?

ಪ್ರತಿ ಕ್ಷೇತ್ರದಲ್ಲೂ ಕನಿಷ್ಠ ಒಂದೂವರೆಯಿಂದ ಎರಡೂವರೆ ಲಕ್ಷ ಮತದಾರರಿದ್ದಾರೆ. ಎಲ್ಲರ ಮನೆ ಬಾಗಿಲಿಗೆ ಹೋಗಿ ಕೈಮುಗಿದು ಮತ ಯಾಚಿಸುವುದು ಸುಲಭದ ಮಾತಲ್ಲ. ಪ್ರತಿಯೊಂದು ಮನೆಯ ಮುಂದೆ ನಿಂತು `ತನಗೇಕೆ ವೋಟು ಕೊಡಬೇಕು’ ಎಂದು ಕಾರಣವನ್ನು ವಿವರಿಸಲು, ಪ್ರತಿಯೊಬ್ಬರ ಮುಂದೆ ಕೈಜೋಡಿಸಿ ಭರವಸೆಗಳ ಪಟ್ಟಿ  ಓದಲು ಸಾಧ್ಯವಾಗುತ್ತಾ ಯೋಚನೆ ಮಾಡಿ. ಅದೇ ಹತ್ತಿಪ್ಪತ್ತು ಸಾವಿರ ಜನರನ್ನು ಸಂಘಟಿಸಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಇಂತಿಂಥ ಕೆಲಸ ಮಾಡುತ್ತೇವೆ, ಇಂತಿಂಥ ಯೋಜನೆಗಳನ್ನು ರೂಪಿಸಿ ಜಾರಿಗೆ ತರುತ್ತೇವೆ ಎಂದು ಭರವಸೆ ನೀಡಲು, ಜನರಿಗೆ ಮನವರಿಕೆ ಮಾಡಿಕೊಡಲು ಸಾಧ್ಯವಾಗುತ್ತದೆ. ಅಭ್ಯರ್ಥಿಗಳೂ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಇಂತಿಂಥ ಕೆಲಸ ಮಾಡುತ್ತೇನೆ ಎಂದು ಸಾವಿರಾರು ಜನರಿಗೆ ಒಮ್ಮೆಲೇ ಹೇಳಿಬಿಡಬಹುದು. ಭಾಷಣ ಕೇಳಿದವರು ಕೇಳದವರಿಗೂ ವಿಷಯ ಮುಟ್ಟಿಸುತ್ತಾರೆ. ಬಾಯಿಂದ ಬಾಯಿಗೆ ಪ್ರಚಾರವಾದಂತೆಯೂ ಆಗುತ್ತದೆ. ನಿರ್ಬಂಧಗಳ ಹೆಸರಿನಲ್ಲಿ ಇಂತಹ ಅವಕಾಶವನ್ನೇ ಕಿತ್ತುಕೊಳ್ಳುವಾಗ ಆಯೋಗ ಕಿಂಚಿತ್ತಾದರೂ ಆಲೋಚಿಸಬೇಕಿತ್ತು. ಹಾಗೆ ಆಲೋಚಿಸದೇ ಇದ್ದಿದ್ದು ಹಣವಂತ ಅಭ್ಯರ್ಥಿಗಳು ಹೊಸ ಕಳ್ಳಮಾರ್ಗವನ್ನು ಕಂಡುಕೊಳ್ಳಲು ಅವಕಾಶ ಮಾಡಿಕೊಟ್ಟಂತಾಗಿದೆ. ಹತ್ತಿಪ್ಪತ್ತು ಜನರನ್ನು ಕಟ್ಟಿಕೊಂಡು ಮನೆಮನೆಗೆ ದಂಡಯಾತ್ರೆ ಮಾಡುತ್ತಿರುವ ಅಭ್ಯರ್ಥಿಗಳು, ದಯವಿಟ್ಟು ನನಗೆ ಮತಹಾಕಿ ಎನ್ನುತ್ತಾ ಪ್ರತಿ ಮನೆಗೂ ಒಂದೊಂದು ಕೈಪಿಡಿ ಅಥವಾ ಪ್ರಣಾಳಿಕೆ ಕೊಡುತ್ತಿದ್ದಾರೆ. ಹಾಗೆ ಕೊಡುವಾಗ ಸ್ವಲ್ಪ ತೆರೆದು ತೋರಿಸಿ ಕೈಗಿಡುತ್ತಿದ್ದಾರೆ. ಹೀಗೆ ಪ್ರಣಾಳಿಕೆಯೊಳಗೆ ಐನೂರು, ಸಾವಿರ ರೂ.ಗಳ ನೋಟುಗಳನ್ನು ಹಂಚಲಾಗುತ್ತಿದೆ. ಪರಿಸ್ಥಿತಿ ಹೀಗಾದರೆ ಜನರೂ ಕೂಡ ಅಪೇಕ್ಷೆ ಮಾಡಲಾರಂಭಿಸುತ್ತಾರೆ. ಬಿಜೆಪಿಯವರು 500 ಕೊಟ್ಟರೆ, ಕಾಂಗ್ರೆಸ್‌ನವರ ಅಭಯಹಸ್ತದಿಂದ 1000 ರೂ. ಸಿಗುತ್ತಿದೆ, ಹೊರೆ ಹೊತ್ತ ಮಹಿಳೆಯಂತೂ ಚಿನ್ನದ ಮೂಗುನತ್ತು ಕೊಡುತ್ತಿದ್ದಾಳೆ ಅಂತ ಜನ ಯಾರ್‍ಯಾರು, ಏನೇನು ಕೊಟ್ಟರು ಎಂದು ಲೆಕ್ಕಹಾಕಿಕೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಪ್ರಜಾಪ್ರಭುತ್ವದ ಸೋಲು ಎನ್ನದೆ ಬೇರೆ ದಾರಿಯಿಲ್ಲ.

ಖಂಡಿತ ಚುನಾವಣಾ ಆಯೋಗ ಸಾಕಷ್ಟು ಒಳ್ಳೆಯ ಕೆಲಸಗಳನ್ನೂ ಮಾಡಿದೆ. ಆದರೆ ವಿಪರೀತವೆನಿಸುವ ಕೆಲವು ಕ್ರಮಗಳು ಅಡ್ಡಮಾರ್ಗಕ್ಕೂ ಪ್ರೇರಣೆಯಾಗುತ್ತಿವೆ. ಜನರಿಗೂ ಅಭ್ಯರ್ಥಿಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ಬೇಕು. ಹಾಗಾಗಬೇಕಾದರೆ ಭಾಷಣ, ಪ್ರಚಾರ, ಜನಸಂಪರ್ಕಕ್ಕೆ ಮುಕ್ತ ಅವಕಾಶವಿರಬೇಕು. ಇಲ್ಲದಿದ್ದರೆ ಯಾರು ಹೆಚ್ಚು ಕೊಟ್ಟರೋ ಅವರಿಗೆ ವೋಟು ಹಾಕುವ, ಇಲ್ಲವೆ ಎಲ್ಲರಿಂದಲೂ ನೋಟು ಪಡೆದುಕೊಂಡು ಮನಬಂದವರಿಗೆ ಮತಹಾಕುವ ಪರಿಸ್ಥಿತಿ ಸೃಷ್ಟಿಯಾಗುತ್ತದಷ್ಟೆ. ಈ ಬಾರಿಯಂತೂ ಜನ ಜಾತಿ ನೋಡಿ ವೋಟು ಹಾಕುವಂತಹ ಬೆಳವಣಿಗೆ ಕಂಡುಬರುತ್ತಿದೆ. ಜಾತಿ, ನೋಟು ಮೀರಿ ಜನ ವೋಟು ಹಾಕಬೇಕಾದರೆ ಅಭ್ಯರ್ಥಿ ಜನರ ವಿಶ್ವಾಸಕ್ಕೆ ಪಾತ್ರನಾಗಿರಬೇಕು. ಆದರೆ ಆಯ್ಕೆಯಾಗುವ ಮೊದಲೇ ವಿಶ್ವಾಸ ಗಳಿಸುವುದು ಅಷ್ಟು ಸುಲಭವಲ್ಲ. ಹಾಗಾಗಿ ಭಾಷಣ, ಪ್ರಚಾರರಾಂದೋಲನಕ್ಕೆ ಸಂಪೂರ್ಣವಾಗಿ ಕಡಿವಾಣ ಹಾಕುವುದು, ಇಲ್ಲಸಲ್ಲದ ನಿಯಮ ಹಾಕಿ ಭಾಷಣಕ್ಕೇ ಕತ್ತರಿ ಹಾಕುವುದು ಉಚಿತವಲ್ಲ.  ಇದರಿಂದ ಯಾರಿಗಾದರೂ ಲಾಭವಾಗಿದ್ದರೆ ಅದು ಗಣಿ, ರಿಯಲ್ ಎಸ್ಟೇಟ್ ದೊರೆಗಳಿಗೆ, ಭೂಗಳ್ಳರಿಗೆ. ಈ ಬಾರಿ ದುಡ್ಡೊಂದೇ ಏಕೆ ಮಾತನಾಡುತ್ತಿದೆಯೆಂದರೆ ಇದೇ ಕಾರಣಕ್ಕೆ.

ಇಲ್ಲಿ ಒಂದು ವಿಷಯವನ್ನು ಮರೆಯಬಾರದು. ಚುನಾವಣೆಯೆಂದರೆ ಬರೀ ಶಾಸಕ, ಸಂಸದರ ಆಯ್ಕೆಯಲ್ಲ. ಅಲ್ಲಿ ಜನಸಂಘಟನೆ, ಜನಜಾಗೃತಿಗಳೂ ಇರುತ್ತವೆ. ಅದರಲ್ಲೂ ಕ್ಷೇತ್ರ ಮರು ವಿಂಗಡಣೆಯಾಗಿರುವ ಈ ಭಾರಿಯಂತೂ ಮತದಾರರಿಗೆ ತಮ್ಮ ಅಭ್ಯರ್ಥಿ ಯಾರು, ತಮ್ಮ ಮತಗಟ್ಟೆ ಯಾವ ಕ್ಷೇತ್ರಕ್ಕೆ ಸೇರುತ್ತದೆ ಎಂಬ ಬಗ್ಗೆಯೇ ತೀವ್ರ ಗೊಂದಲವಿದೆ. ಇದುವರೆಗೂ ಪ್ರತಿನಿಧಿಸುತ್ತಿದ್ದ ಶಾಸಕರು ಇನ್ನಾವುದೋ ಕ್ಷೇತ್ರ ಸೇರಿರುವ, ಹೊಸದಾಗಿ ಸೇರ್ಪಡೆಯಾಗಿರುವ ವಾರ್ಡ್, ಬ್ಲಾಕ್, ಹೋಬಳಿ, ಪಂಚಾಯಿತಿಗಳಿಂದಾಗಿ ಯಾವುದೋ ಆಗಂತುಕ ಮುಖಗಳು ಅಭ್ಯರ್ಥಿಗಳಾಗಿರುವ ಸಂದರ್ಭಗಳೇ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ ಜನ ಜಾಗೃತಿ ಬಹಳ ಮುಖ್ಯವಾಗಿದೆ. ದುರದೃಷ್ಟವಶಾತ್ ಮೇರೆ ಮೀರಿರುವ ಚುನಾವಣಾ ನೀತಿ-ನಿಯಮಗಳು ಪ್ರಚಾರಕ್ಕೇ ದೊಡ್ಡ ಅಡಚಣೆಗಳಾಗಿ ಪರಿಣಮಿಸಿ ಬಿಟ್ಟವೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ವಾಸ್ತವಾಂಶಗಳನ್ನು ಅರಿತು ಬಿಗುವನ್ನು ಸ್ವಲ್ಪ ಸಡಿಲಗೊಳಿಸಿದ್ದರೆ ಖಂಡಿತ ಅನುಕೂಲವಾಗುತ್ತಿತ್ತು.

ಚುನಾವಣೆ ಎಂದರೆ ಪ್ರಜಾಪ್ರಭುತ್ವದ ದೀಪಾವಳಿ, ಹೋಳಿ ಹಬ್ಬಗಳಂತೆ. ಅಲ್ಲಿ ದೀಪವೂ ಇರಬೇಕು, ಪಟಾಕಿಗಳೂ ಬೇಕು. ಗಲಾಟೆಯಾಗುತ್ತದೆ, ಕಿವಿ ಗಿವುಡಿಕ್ಕುತ್ತದೆ, ಮಾಲಿನ್ಯವಾಗುತ್ತದೆ ಎಂದರೆ ದೀಪಾವಳಿಯಾಗುವುದಿಲ್ಲ. ಮೈಗೆ ಬಣ್ಣವಾಗುತ್ತದೆ, ದುಡ್ಡೂ ದಂಡ ಅಂತ ಬಣ್ಣವನ್ನೇ ಎರಚಿಕೊಳ್ಳದಿದ್ದರೆ ಹೋಳಿಯೂ ನಡೆಯುವುದಿಲ್ಲ. ದುರದೃಷ್ಟವಶಾತ್, ಎಡಗೈ ತೋರ್‍ಬೆರಳಿನ ಉಗುರಿನ ಮೇಲಿರುವ ಕರಿ ನಾಮವನ್ನು ನೋಡಿ ಪ್ರಜಾಪ್ರಭುತ್ವದ ದೀಪಾವಳಿಯಾದ ಚುನಾವಣೆ ನಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕಾದ ಪರಿಸ್ಥಿತಿ ಈಗ ಸೃಷ್ಟಿಯಾಗಿದೆ. ಇದರ ಬಗ್ಗೆ ನಾವೆಲ್ಲ ಗಂಭೀರವಾಗಿ ಯೋಚಿಸಬೇಕಾಗಿದೆ.

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: