ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು! ಛೇ!! -Anything can happen in politics!

ರಾಜಕೀಯ ಬಿಟ್ಟು ಬೇರೆ ಯಾವ ಕ್ಷೇತ್ರದಲ್ಲಿ ಏನು ಬೇಕಾದರೂ ಆಗುವುದೇ? ಇಲ್ಲವೇ ಇಲ್ಲ. ನಾವು ಅದನ್ನು ಸಹಿಸಿಕೊಳ್ಳುವುದಿಲ್ಲ. ‘ಏನು ಬೇಕಾದರೂ ಆಗಬಹುದು” ಎಂಬ ಸಿದ್ಧಾಂತವನ್ನು ನಿಮ್ಮ ನಿಮ್ಮ ಮನೆಯಲ್ಲಿ ಜಾರಿಗೊಳಿಸಿ. ಒಂದು ದಿನದೊಳಗೆ ಮನೆ ಅಸಹನೀಯವೆನಿಸಿಬಿಡುತ್ತದೆ. ಅಣ್ಣನ ಹೆಂಡತಿ ಜತೆ ತಮ್ಮ, ತಮ್ಮನ ಹೆಂಡತಿ ಜತೆ ಅಣ್ಣ ಸಂಬಂಧ ಇಟ್ಟುಕೊಳ್ಳಬಹುದು, ಏನು ಬೇಕಾದರೂ ಆಗಬಹುದು ಎಂದು ಹೇಳಿ ನೋಡೋಣ. ಅಂಥ ಮನೆಯ ಮನಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ.
ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು! ಛೇ!!‘ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು!’ ನಮ್ಮ ರಾಜ್ಯದಲ್ಲಿ ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಕಳೆದ ಒಂದೆರಡು ತಿಂಗಳುಗಳಿಂದ ನಡೆಯುತ್ತಿರುವ ನಾಚಿಕೆಗೇಡಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಎಲ್ಲ ರಾಜಕಾರಣಿಗಳು ಉದುರಿಸುತ್ತಿರುವ ಆಣಿಮುತ್ತಿದು. ಎಲ್ಲ ನಾಯಕರ ಬಾಯಲ್ಲೂ ‘ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು” ಎಂಬ ಹೇಳಿಕೆಯೇ. ಜನಸಾಮಾನ್ಯನನ್ನು ಕೇಳಿ, ಅವನ ಬಾಯಲ್ಲೂ ಅದೇ ಮಾತು. ಪ್ರತಿಯೊಬ್ಬರೂ ಹೇಳುವುದು ಅದೇ. ಹೇಳುವುದಷ್ಟೇ ಆಗಿದ್ದರೆ ಪರವಾಗಿರಲಿಲ್ಲ, ನಾವೆಲ್ಲರೂ ಅದನ್ನು ಒಪ್ಪಿಕೊಂಡುಬಿಟ್ಟಿದ್ದೇವೆ. ಹೀಗಾಗಿ ರಾಜಕೀಯದಲ್ಲಿ ಏನೇ ಆಗಲಿ, ನಮಗೆ ಏನೂ ಅನಿಸುವುದಿಲ್ಲ. ಯಾಕೆಂದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದಲ್ಲವೇ.

Anything can happen in politics ಎಂಬುದನ್ನು ನಾವು ಮಾನ್ಯ ಮಾಡಿರುವುದರಿಂದ ರಾಜಕಾರಣಿಗಳ ಹೀನಾತಿಹೀನ, ಅಸಹ್ಯ ಹುಟ್ಟಿಸುವ, ಪರಮನೀಚ ನಡೆಗಳು, ಹೇಳಿಕೆಗಳು, ನಿರ್ಧಾರಗಳು ನಮ್ಮಲ್ಲಿ ಪುಟ್ಟ ಪ್ರತಿಭಟನೆ, ಹಿಡಿಶಾಪ, ಒಂದಷ್ಟು ರೊಚ್ಚು, ವಾಕರಿಕೆಯನ್ನು ಸಹ ಹುಟ್ಟಿಸುವುದಿಲ್ಲ. ರಾಜಕೀಯದಲ್ಲಿ ಏನನ್ನು ಬೇಕಾದರೂ ಮಾಡಬಹುದು, ಹಾಗೆ ಮಾಡದಿದ್ದರೆ ರಾಜಕೀಯ ಮಾಡಲು ಸಾಧ್ಯವಿಲ್ಲ, ಏನು ಬೇಕಾದರೂ ಮಾಡುವವರಿಗೇ ರಾಜಕಾರಣ ಲಾಯಕ್ಕು ಎಂದು ನಾವು ತೀರ್ಮಾನಕ್ಕೆ ಬಂದುಬಿಟ್ಟಿದ್ದೇವೆ.

Anything is fair in love and war ಎಂಬ ಮಾತು ಈಗ ರಾಜಕೀಯಕ್ಕೂ ವಿಸ್ತಾರವಾಗಿದೆ ಹಾಗೂ ರಾಜಕೀಯಕ್ಕೆ ಹೆಚ್ಚು ಒಪ್ಪುತ್ತದೆ ಮತ್ತು ಅಲ್ಲಿಯೇ ಹೆಚ್ಚು ಬಳಕೆಯಲ್ಲಿದೆ. ಪ್ರಧಾನಮಂತ್ರಿಯಿಂದ ಹಿಡಿದು (ಅವರ ಮೇಲಿರುವ ಸೋನಿಯಾ ಗಾಂಧಿಯವರನ್ನೂ ಸೇರಿಸಿ) ಮಂಡಲ ಪಂಚಾಯಿತಿ ಸದಸ್ಯನವರೆಗೆ ಎಲ್ಲರೂ ‘ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು” ಎಂಬ ಮಾತನ್ನು ಒಪ್ಪುತ್ತಾರೆ ಹಾಗೂ ಏನನ್ನು ಬೇಕಾದರೂ ಮಾಡಲು ಹೇಸುವುದಿಲ್ಲ. ಈ ಮಾತಿಗೆ ನಾವೂ ಠಸ್ಸೆ ಒತ್ತಿಬಿಟ್ಟಿದ್ದೇವೆ! ಹೀಗಾಗಿ ಯಾರನ್ನೂ ದೂಷಿಸುವಂತಿಲ್ಲ. ರಾಜಕಾರಣಿಗಳು ಮಾಡಿದ್ದೆಲ್ಲ ಸರಿಯೇ. ‘ನೀವ್ಯಾಕೆ ಹೀಗೆ ಮಾಡಿದಿರಿ?” ಎಂದು ಯಾವ ರಾಜಕಾರಣಿಯನ್ನೂ ಪ್ರಶ್ನಿಸುವಂತಿಲ್ಲ. “ರಾಜಕಾರಣದಲ್ಲಿ ಯಾವುದನ್ನೂ ತಳ್ಳಿ ಹಾಕಲು ಆಗೊಲ್ಲ. ಏನು ಬೇಕಾದರೂ ಆಗಬಹುದು. ಟು ಪ್ಲಸ್ ಟು ಫೋರ್ ಆಗೊಲ್ಲ ರಾಜಕೀಯದಲ್ಲಿ ಫೈವ್ ಆಗಬಹುದು, ಸೆವೆನ್ ಸಹ ಆಗಬಹುದು. ಅವೆಲ್ಲ ಹೇಳಲಿಕ್ಕೆ ಆಗೊಲ್ಲ. ಅವೇನೇ ಆದರೂ ಸರಿಯೇ” ಎಂದು ಪ್ರತಿಯೊಬ್ಬ ರಾಜಕಾರಣಿಯೂ ಲಜ್ಜೆಗೆಟ್ಟವನಂತೆ ಧಿಮಾಕಿನಿಂದ ಸಮರ್ಥಿಸಿಕೊಳ್ಳುತ್ತಾನೆ. ಜನರೂ ಸಹ ಹೌದೌದು ಎಂಬಂತೆ ತಲೆಯಾಡಿಸುತ್ತಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರು ಬಿಜೆಪಿ ಹಾಗೂ ಕಾಂಗ್ರೆಸ್‌ನ್ನು ವಾಚಾಮಗೋಚರ ಬೈಯ್ದು, ಆ ಎರಡೂ ಪಕ್ಷಗಳಿಂದ ಸಮಾನ ಅಂತರ ಕಾಪಾಡಿಕೊಳ್ಳುವುದಾಗಿ ಹೇಳಿ, ಅನಂತರ ಆ ಎರಡೂ ಪಕ್ಷಗಳ ಜತೆ ಸೇರಿ ಪ್ರತ್ಯೇಕ ಸರಕಾರ ಮಾಡಿದರು. ಯಾರೂ ಮಾತಾಡಲಿಲ್ಲ. ಯಾಕೆಂದರೆ ರಾಜಕಾರಣದಲ್ಲಿ ಶಾಶ್ವತ ಸ್ನೇಹಿತರಾಗಲಿ, ಶಾಶ್ವತ ವೈರಿಗಳಾಗಲಿ ಇಲ್ಲ, ಅಂದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದೆಂಬುದರ ಹಿಂದಿನ ವರ್ಶನ್ ಅದು. ಜೆಡಿಎಸ್ [^] ಹಾಗೂ ಬಿಜೆಪಿ ಸೇರಿ ಸರಕಾರ ಮಾಡೋದುಂಟಾ ಎಂದು ಹುಬ್ಬು ಹಾರಿಸಿದವರು ಅಷ್ಟೇ ಶೀಘ್ರ ಹುಬ್ಬನ್ನು ಕೆಳಕ್ಕಿಳಿಸಿದರು. ಕಾರಣ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು!

ಮೊದಲ ಇಪ್ಪತ್ತು ತಿಂಗಳು ಅಧಿಕಾರ ನಡೆಸಿ ಅನಂತರದ ಇಪ್ಪತ್ತನ್ನು ನಿಮಗೆ ಬಿಟ್ಟುಕೊಡ್ತೇವೆ ಎಂದು ಇಡೀ ಜಗತ್ತಿನ ಮುಂದೆ (ನಂಬಿಕೆಯ ಮೇಲೆ) ಪ್ರಮಾಣ ಮಾಡಿ ಅಧಿಕಾರದ ಗದ್ದುಗೆಯೇರಿದ ಕುಮಾರಸ್ವಾಮಿ, ಅವಧಿ ಮುಗಿಯುತ್ತಿದ್ದಂತೆ ಬಿಜೆಪಿಗೆ ಅಧಿಕಾರ ಹಸ್ತಾಂತರ ಅಸಾಧ್ಯ ಎನ್ನುತ್ತಾರೆ. ಅಧಿಕಾರ ಬೇಕಿದ್ದರೆ ನನ್ನನ್ನೇ ಮುಂದುವರಿಸಿ ಎಂದು ಹೇಳುತ್ತಾರೆ. ತನ್ನ ಅವಧಿ ಮುಗಿದ ಬಳಿಕ ಅಧಿಕಾರವನ್ನು ಬಿಜೆಪಿಗೆ ಬಿಟ್ಟುಕೊಡುತ್ತೇನೆ ಎಂಬ ಮಾತನ್ನು ಮರೆಯುತ್ತಾರೆ. ರಾಜಕೀಯದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿಲ್ಲವಲ್ಲ. ಯಾಕೆಂದರೆ ರಾಜಕೀಯದಲ್ಲಿ ಏನು ಬೇಕಾದರೂ ಮಾಡಬಹುದಲ್ಲ. ಅಲ್ಲಿ ಮಾತು, ಮೌಲ್ಯ, ಸಿದ್ಧಾಂತ, ವಚನ, ವಿಶ್ವಾಸ, ನಂಬಿಕೆ, ದೋಸ್ತಿ, ಮಾನ, ಮರ್ಯಾದೆ ಯಾವುದಕ್ಕೂ ಬೆಲೆಯೇ ಇಲ್ಲವಲ್ಲ. ಇವೆಲ್ಲವನ್ನೂ ಬಿಟ್ಟರೆ ಏನು ಬೇಕಾದರೂ ಮಾಡಬಹುದು. ರಾಜಕಾರಣದಲ್ಲಿ ಅವೆಲ್ಲವನ್ನೂ ಬಿಟ್ಟರೆ, ಏನು ಬೇಕಾದರೂ ಮಾಡಬಹುದು.

ಸರಿ, ರಾಜಕಾರಣಿಗಳೇನೋ ಮಾಡ್ತಾರೆ, ಆದರೆ ನಾವೇಕೆ ಅದನ್ನು ಒಪ್ಪಿಕೊಳ್ಳಬೇಕು? ರಾಜಕೀಯದಲ್ಲಿ ಯಾವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ ಅಂದ್ರೆ ಯಾರನ್ನು ಬೇಕಾದರೂ ತಳ್ಳಿ ಏನೂ ಆಗಬಹುದು ಎಂದಂತಾಯಿತು. ಅಧಿಕಾರಕ್ಕಾಗಿ ಏನು ಬೇಕಾದರೂ ನಡೆದರೆ ಅದನ್ನು ಒಪ್ಪಿಕೊಳ್ಳಬೇಕಾ?
ಸ್ವಾಮೀ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಾರದು. ಏನು ಆಗಬೇಕೋ ಹಾಗೇ ಆಗಬೇಕು. ಟು ಪ್ಲಸ್ ಟು ಫೋರ್ ಆಗಬೇಕು. ನೈನ್ ಆಗಬಾರದು. ಹಾಗಾದರೆ ಅದು ರಾಜಕೀಯ ಅಲ್ಲ. ಅದು ವಂಚನೆ, ದಗಾ, ದ್ರೋಹ, ವಿಶ್ವಾಸಘಾತಕತನ. ರಾಜಕೀಯ ಅಂದ್ರೆ ಇವಲ್ಲ. ಇಲ್ಲ ಇಲ್ಲ ರಾಜಕೀಯ ಅಂದ್ರೆ ಇವೇ ಎಂದು ವಾದಿಸಿದರೆ ಸತ್ಯ ಹಾಗೂ ಇನ್ನಿತರ ಮೌಲ್ಯಗಳಿಗೆ ಬೆಲೆ ಇಲ್ಲ ಅಂತ ಅರ್ಥ. ಆಗ ಮಾತ್ರ ‘ಏನು ಬೇಕಾದರೂ ಆಗಬಹುದು” ಎಂಬುದನ್ನು ಒಪ್ಪಬಹುದು. ಆದರೆ ರಾಜಕಾರಣ ಅಂದ್ರೆ ಅದಲ್ಲವಲ್ಲ. ಹೀಗಾಗಿ ಏನ್ ಬೇಕಾದ್ರೂ ಆಗಬಾರದು. ಹಾಗಾದರೆ ಅದು ಸ್ವೇಚ್ಛಾಚಾರ, ಅನೀತಿ, ಅಧರ್ಮ ಎಂದೆನಿಸಿಕೊಳ್ಳುತ್ತದೆ. ರಾಜಕೀಯ ಅಂದ್ರೆ ಇದೇನಾ? ಹೀಗಾಗಿ ರಾಜಕಾರಣದಲ್ಲಿ ಏನೇನೋ ಆಗಬಾರದು.

ರಾಜಕೀಯ ಬಿಟ್ಟು ಬೇರೆ ಯಾವ ಕ್ಷೇತ್ರದಲ್ಲಿ ಏನು ಬೇಕಾದರೂ ಆಗುವುದೇ? ಇಲ್ಲವೇ ಇಲ್ಲ. ನಾವು ಅದನ್ನು ಸಹಿಸಿಕೊಳ್ಳುವುದಿಲ್ಲ. ‘ಏನು ಬೇಕಾದರೂ ಆಗಬಹುದು” ಎಂಬ ಸಿದ್ಧಾಂತವನ್ನು ನಿಮ್ಮ ನಿಮ್ಮ ಮನೆಯಲ್ಲಿ ಜಾರಿಗೊಳಿಸಿ. ಒಂದು ದಿನದೊಳಗೆ ಮನೆ ಅಸಹನೀಯವೆನಿಸಿಬಿಡುತ್ತದೆ. ಅಣ್ಣನ ಹೆಂಡತಿ ಜತೆ ತಮ್ಮ, ತಮ್ಮನ ಹೆಂಡತಿ ಜತೆ ಅಣ್ಣ ಸಂಬಂಧ ಇಟ್ಟುಕೊಳ್ಳಬಹುದು, ಏನು ಬೇಕಾದರೂ ಆಗಬಹುದು ಎಂದು ಹೇಳಿ ನೋಡೋಣ. ಅಂಥ ಮನೆಯ ಮನಸ್ಥಿತಿಯನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ನಮ್ಮ ಸಮಾಜದಲ್ಲಿ ಅಂಥ ಒಂದು ವ್ಯವಸ್ಥೆಯನ್ನು ಯಾರು ಸಹಿಸುತ್ತಾರೆ? ಉಹುಂ… ಇಲ್ಲವೇ ಇಲ್ಲ. ಆದರೆ ಇವೆಲ್ಲ ರಾಜಕೀಯದಲ್ಲಿ ಮಾತ್ರ.

ಯಾಕೆ ಹೀಗೆ? ವ್ಯಾಪಾರ, ವ್ಯವಹಾರ, ನಡೆವಳಿಕೆಗಳಲ್ಲಿ ಮಾತೆಂದರೆ ಮಾತು. ಕೊಟ್ಟ ಮಾತಿನ ಪ್ರಕಾರ ಜಗತ್ತು ನಿಂತಿದೆ. ಏನು ಬೇಕಾದರೂ ಆಗಬಹುದಾದ್ದು ಅರಾಜಕತೆಯಿದ್ದಾಗ ಮಾತ್ರ. ಸುಸಂಸ್ಕೃತ, ಮರ್ಯಾದಸ್ಥ ಸಮಾಜದಲ್ಲಿ ಏನು ಬೇಕಾದರೂ ಆಗುವುದಿಲ್ಲ. ಆಗುವುದಕ್ಕೆಲ್ಲ ಒಂದು ಅರ್ಥವಿರುತ್ತದೆ. ಅದು ಬಹುಶ್ರುತರ ಏಳಿಗೆಗೆ ಪೂರಕವಾಗಿರುತ್ತದೆ. ಬಹುಶ್ರುತರು ಅದನ್ನು ಮನಪೂರ್ವಕವಾಗಿ ಒಪ್ಪುತ್ತಾರೆ. ಮನಸ್ಸಿಗೆ ಬಂದಿದ್ದು, ಯಾರೋ ನಾಲ್ಕು ಜನರ ತಲೆಯೊಳಗೆ ಬಂದಿದ್ದೆಲ್ಲ ಆಗುವಂಥ ಸ್ಥಿತಿ ನಿರ್ಮಾಣವಾದರೆ ಏನಾಗಬೇಡ?

ವೈದ್ಯಕೀಯ, ಶಿಕ್ಷಣ, ಕಾನೂನು, ಹಣಕಾಸು, ವಾಣಿಜ್ಯ… ಹೀಗೆ ಉಳಿದ ಕ್ಷೇತ್ರಗಳಿಗೂ ಈ ಸಿದ್ಧಾಂತವನ್ನು ಅನ್ವಯಿಸಿದರೆ ಏನಾದೀತು? ಇಲ್ಲಿ ಏನು ಬೇಕಾದರೂ ಆಗುವುದಿಲ್ಲ. ಇಲ್ಲಿ ಆಗದ್ದು ರಾಜಕೀಯದಲ್ಲಿ ಮಾತ್ರ ಹೇಗೆ ಆಗುತ್ತದೆ? ಬರುಬರುತ್ತಾ ರಾಜಕೀಯಕ್ಕೆ ಅಂಟಿದ ಈ ಚಾಳಿ, ಜಾಡ್ಯ ಉಳಿದ ಕ್ಷೇತ್ರಗಳಿಗೂ ಅಮರಿಕೊಂಡರೆ ಏನಾಗಬಹುದು? ರೋಗಿಯೊಬ್ಬ ವೈದ್ಯರ ಕೈಗೆ ಸಿಕ್ಕರೆ ಏನು ಬೇಕಾದರೂ ಆಗಬಹುದು ಎಂದು ಹೇಳಿದರೆ…?
ಆದರೆ ರಾಜಕೀಯದಲ್ಲಿ ಮಾತ್ರ ಇದು ಸ್ವೀಕೃತವಾಗಿಬಿಟ್ಟಿದೆ. ನಿಜಕ್ಕೂ ಇದು ನೈತಿಕ ಪ್ರಜ್ಞೆಯ ಅಧಃಪತನ.

ತಮಿಳುನಾಡಿನ ಕರುಣಾನಿಧಿ ವಾಜಪೇಯಿ ಮಂತ್ರಿಮಂಡಲದಲ್ಲೂ ತಮ್ಮ ಮಂತ್ರಿಗಳನ್ನು ಇಡುತ್ತಾರೆ. ಡಾ. ಮನಮೋಹನ್ ಸಿಂಗ್ ಸಚಿವಸಂಪುಟದಲ್ಲೂ ತಮ್ಮ ಸಚಿವರನ್ನು ಇಡುತ್ತಾರೆ. ಈ ಎರಡೂ ಸಂದರ್ಭಗಳಲ್ಲಿ ತಾವು ತೆಗೆದುಕೊಂಡ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಇವರು ಏನು ಬೇಕಾದರೂ ಮಾಡಲು ಹಿಂದು ಮುಂದೆ ನೋಡುವವರಲ್ಲ. ರಾಜಕೀಯದಲ್ಲಿ ಯಾರೂ ಬಹುಕಾಲ ಶತ್ರುಗಳಲ್ಲ, ಸ್ನೇಹಿತರಲ್ಲ ಎಂದು ಹೇಳುತ್ತಾ ತಾವು ಮಾಡುವ ಹೊಲಸು ಕೆಲಸಗಳನ್ನೆಲ್ಲ ಸರಿಯೆನ್ನುತ್ತಾ ಹೋಗುತ್ತಾರೆ. ನಾಳೆ ಇದೇ ಕರುಣಾನಿಧಿ ಪುನಃ ವಾಜಪೇಯಿ ಮಂತ್ರಿಮಂಡಲದ ಮುಂದೆ ಹಲ್ಲುಗಿಂಜುತ್ತಾರೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು.

ಈ ದೇಶದ ರಾಜಕೀಯದಲ್ಲಿ ಇನ್ನೂ ಒಂದು ಆಗಬೇಕಾಗಿದ್ದಿದೆ. ಅದು ಇಲ್ಲಿ ತನಕ ಆಗಿಲ್ಲ. ಆದರೂ ಅಚ್ಚರಿಪಡಬೇಕಿಲ್ಲ. ಅದೇನೆಂದರೆ ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಮೈತ್ರಿ ಸರಕಾರ ಅಥವಾ ಬಿಜೆಪಿ-ಎಡಪಕ್ಷಗಳಿಂದ ಸರಕಾರ ರಚನೆ! ಅಂಥ ಪರಿಸ್ಥಿತಿ ಬರುವುದೇ ಇಲ್ಲ ಎಂದು ಹೇಳಬೇಡಿ, ಬಂದರೆ ನಮ್ಮ ರಾಜಕಾರಣಿಗಳು ಅದಕ್ಕೂ ಹಿಂದೇಟು ಹಾಕುವುದಿಲ್ಲ. ಚುನಾವಣೆಯನ್ನು ಪುನಃ ಜನರ ಮೇಲೆ ಹೇರುವುದರಿಂದ ದೇಶಕ್ಕೆ ಹೊರೆಯಾಗುತ್ತದೆಯೆಂದು ಕಾಂಗ್ರೆಸ್ ಜತೆ ಕೈಜೋಡಿಸಲು ನಿರ್ಧರಿಸಿದ್ದೇವೆ ಅಥವಾ ಕಾಂಗ್ರೆಸ್‌ನ ಬಾಹ್ಯ ಬೆಂಬಲದಿಂದ ಸರಕಾರ ರಚಿಸುತ್ತೇವೆ ಎಂದು ಬಿಜೆಪಿ ಹೇಳಿದರೆ ಆಗ ನಾವೇ ಹೇಳುತ್ತೇವೆ- “ಸ್ವಾಮಿ, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು!” ಈಗಿನ ರಾಕೀಯ ತಲುಪುತ್ತಿರುವ ದರಿದ್ರ ಅವಸ್ಥೆ ನೋಡಿದರೆ ಈ ದಿನ ಬಹಳ ದೂರವಿಲ್ಲವೇನೋ? ಹಾಗಾದರೆ ರಾಜಕೀಯ ಅಂದರೆ ಆ ಪರಿ ನಿಯತ್ತಿಲ್ಲದ, ಮರ್ಯಾದೆಯಿಲ್ಲದ ಕ್ಷೇತ್ರವಾ? ಹಾದರಗಿತ್ತಿ ಎಂಬುದು ಗೊತ್ತಿದ್ದೂ, ಅವಳನ್ನು ಮದುವೆಯಾಗಿ, ಪುನಃ ಅವಳನ್ನು ಬೇರೊಬ್ಬರ ಜತೆ ಮಲಗಲು ಬಿಟ್ಟು, ಅವಳು ಹಾದರ ಮಾಡುತ್ತಾಳೆ ಎಂದು ಕೂಗೆಬ್ಬಿಸುವುದನ್ನು ಸಮರ್ಥಿಸಿಕೊಳ್ಳುವುದು ರಾಜಕೀಯವಾ?

ಬಿಜೆಪಿಯ ದಿವಂಗತ ನಾಯಕ ಪ್ರಮೋದ್ ಮಹಾಜನ್ ಒಂದು ಪ್ರಸಂಗವನ್ನು ಹೇಳುತ್ತಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಸಂಸದೀಯ ನಿಯೋಗವೊಂದರಲ್ಲಿ ಅವರು ಚೀನಾಕ್ಕೆ ಹೋಗಿದ್ದರು. ಅದರಲ್ಲಿ ಎಲ್ಲ ಪಕ್ಷಗಳ ಸದಸ್ಯರೂ ಇದ್ದರು. ಚೀನಾದ ಪ್ರಮುಖ ನಾಯಕನಿಗೆ ನಿಯೋಗದ ಸದಸ್ಯರ ಪರಿಚಯ ಮಾಡಿಕೊಂಡಾಗ ಅವರ ಸ್ಥಾನಮಾನದ ಕುರಿತು ಗೊಂದಲವುಂಟಾಯಿತು. ಪ್ರಮೋದ್ ಮಹಾಜನ್ ಅವರತ್ತ ನೋಡಿ “ನೀವು ಹೇಗೆ ಪ್ರತಿಪಕ್ಷದಲ್ಲಿದ್ದೀರಿ?” ಎಂದು ಚೀನಾದ ನಾಯಕ ಕೇಳಿದ.

ಅದಕ್ಕೆ ಮಹಾಜನ್ ಹೇಳಿದರು- “ನಾನು ಬಿಜೆಪಿ ಸದಸ್ಯ. ನಮ್ಮ ಪಕ್ಷ ಅತಿಹೆಚ್ಚು ಸ್ಥಾನಗಳನ್ನು  ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ನಾವು ಪ್ರತಿಪಕ್ಷದ ಸಾಲಿನಲ್ಲಿ ಕುಳಿತಿದ್ದೇವೆ. ಎರಡನೆ ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲ. ಅದು ಬಾಹ್ಯ ಬೆಂಬಲ ನೀಡಿದೆ. ಎಡಪಕ್ಷಗಳೂ ಪ್ರತಿಪಕ್ಷ ಸ್ಥಾನದಲ್ಲಿ ಕುಳಿತಿವೆ. ಕೇವಲ ಹದಿನಾರು ಸದಸ್ಯರ ಬೆಂಬಲ ಹೊಂದಿದ ಪಕ್ಷದ ನಾಯಕ ನಮ್ಮ ದೇಶದ ಪ್ರಧಾನಿಯಾಗಿದ್ದಾರೆ. ಕೇವಲ ಒಂದೇ ಒಂದು ಸ್ಥಾನ ಗೆದ್ದ(ಗೋಮಾಂತಕಪಕ್ಷದ ರಮಾಕಾಂತ್ ಕಲಪ್)ವರು ಮಂತ್ರಿಯಾಗಿ ಈ ನಿಯೋಗದ ಮೂಲಕ ಸರಕಾರ ಹಾಗೂ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಜಗತ್ತಿನ ಬೇರೆ ಯಾವ ದೇಶದಲ್ಲೂ ಈ ರೀತಿಯಾಗಲು ಸಾಧ್ಯವೇ ಇಲ್ಲ.”

ಯಾಕೆ ಹೇಳಿ?

ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು.

ಇದಕ್ಕಿಂತ ನಾಚಿಕೆಗೇಡು ಬೇಕೆ?

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: