ರಾಜಭವನವೆಂಬ ಸಕಲ ಸೌಕರ್ಯಗಳಿರುವ ಸರಕಾರಿ ವೃದ್ಧಾಶ್ರಮ! -Spotlight : An old age home called Rajbhavan

ಯಾವುದೇ ರಾಜ್ಯದ ಜನತೆಗೆ ಇದು ಎಲ್ಲ ಗೊತ್ತಿದ್ದರೂ ಸಹಿಸಿಕೊಳ್ಳಬೇಕಾದ ಅನಿವಾರ್ಯ ಅಸಹ್ಯ. ಹಿಂದಿನ ರಾಜ್ಯಪಾಲರಿಗಿಂತ ಈಗಿನವರೇ ಉತ್ತಮ ಎಂದು ಅಂದುಕೊಳ್ಳುವಷ್ಟರಲ್ಲಿ ಘನವೆತ್ತ ರಾಜ್ಯಪಾಲರು ಅವರ ಮುದ್ದಿನ ಹೆಂಡತಿ, ಮನೆಯವರಿ ಸೇರಿ ಹಿಂದಿನವರೇ ಇವರಿಗಿಂತ ಉತ್ತಮ ಎಂಬಂತಹ ಸನ್ನಿವೇಶ ಸೃಷ್ಟಿಸಿರುತ್ತಾರೆ. ರಾಜ್ಯಪಾಲರಷ್ಟೇ ಏಕೆ ರಾಷ್ಟ್ರಪತಿ ಹುದ್ದೆ ಅಲಂಕರಿಸಿದವರೂ ಇದಕ್ಕೆ ಹೊರತಲ್ಲ. ರಾಷ್ಟ್ರಪತಿ ರಾಷ್ಟಮಟ್ಟದಲ್ಲಾದರೆ ರಾಜ್ಯಪಾಲರು ರಾಜ್ಯಮಟ್ಟದಲ್ಲಿ ‘ಕಾರು”ಬಾರು’ ನಡೆಸಿರುತ್ತಾರೆ. ರಾಜ್ಯಪಾಲ ಹುದ್ದೆ ಅಲಂಕರಿಸಿದವರು, ಅವರು ನಡೆಸಿದ ರಾಜ್ಯಭಾರದ ಮೇಲೆ ಒಂದು ಕ್ಷಕಿರಣ.

ರಾಜಭವನವೆಂಬ ಸಕಲ ಸೌಕರ್ಯಗಳಿರುವ ಸರಕಾರಿ ವೃದ್ಧಾಶ್ರಮ!ಹೊಸದಿಲ್ಲಿಯ ರಾಜಕೀಯ ಮೊಗಸಾಲೆಯಲ್ಲಿ ಒಂದು ತಮಾಷೆ ಮಾತಿದೆ.

ಶಾಸಕರಾಗಿ, ಸಂಸದರಾಗಿ, ರಾಜ್ಯಸಭಾಸದಸ್ಯರಾಗಿ, ಪಕ್ಷದಲ್ಲಿ ಪದಾಧಿಕಾರಿಯಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಮಂತ್ರಿಯಾಗಿ, ಹಲವಾರು ಸಮಿತಿಗಳ ಸದಸ್ಯ, ಅಧ್ಯಕ್ಷರಾಗಿ, ಮೂರ್ನಾಲ್ಕು ಆಯೋಗಗಳ ಅಧ್ಯಕ್ಷರೋ, ಸದಸ್ಯರೋ ಆಗಿ, ಜೀವನಪೂರ್ತಿ ಅಧಿಕಾರ ಅನುಭವಿಸಿದರೂ ಸಂತೃಪ್ತರಾಗದೇ, ಇನ್ನೂ ರಾಜಕೀಯ ಮಾಡಬೇಕು, ಇಷ್ಟೆಲ್ಲ `ಸಮಾಜಸೇವೆ’ ಮಾಡಿದರೂ ಸಮಾಧಾನವಾಗದೇ ಆ ಎಂಬತ್ತರ ಹೊಸ್ತಿಲಲ್ಲಿ ಕ್ಲೋಸ್ಡ್‌ನೆಕ್ ಕೋಟು ಧರಿಸಿ ಬಯೋಡಾಟ ಹಿಡಿದು ನಿಂತಿದ್ದಾರೆಂದರೆ ಅವರು ರಾಜ್ಯಪಾಲರಾಗಲು ಪ್ರಯತ್ನಿಸುತ್ತಿದ್ದಾರೆಂದೇ ಅರ್ಥ.

ಈ ಮಾತು ವೃತ್ತಿಪರ ರಾಜಕಾರಣಿಗಳಂತೆ ನಿವೃತ್ತ ಐಎಎಸ್, ಐಪಿಎಸ್, ಐಎಫ್‌ಎಸ್ ಅಧಿಕಾರಿಗಳು, ಸುಪ್ರೀಂಕೋರ್ಟ್, ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಧೀಶರು, ಸೇನೆಯಲ್ಲಿ ಮಹತ್ವದ ಹುದ್ದೆ ಅಲಂಕರಿಸಿದವರಿಗೂ ಅನ್ವಯ. ರಾಜ್ಯಪಾಲರಾಗದೇ ಯಾವ ರಾಜಕಾರಣಿಯೂ ನಿವೃತ್ತರಾಗುವುದಿಲ್ಲ. ರಾಜಭವನವೆಂಬ `ವೃದ್ಧಾಶ್ರಮ’ ಸೇರಿದ ಬಳಿಕ ರಾಜಕಾರಣಿಯೊಬ್ಬ ನಿವೃತ್ತಿ ಬಗ್ಗೆ ಯೋಚಿಸುತ್ತಿದ್ದಾನೆಂದು ಭಾವಿಸಬಹುದು. ಅಷ್ಟಾಗಿಯೂ ಸಮಾಧಾನವಾಗದಿದ್ದರೆ ರಾಜ್ಯಪಾಲರಾಗಿ ಎರಡನೇ ಅವಧಿಗೆ, ಬೇರೆ ರಾಜ್ಯಕ್ಕೆ ಪ್ರಯತ್ನಿಸುತ್ತಾರೆ. ಇನ್ನು ಕೆಲವರು ಈ ವೃದ್ಧಾಶ್ರಮ ಸೇರಿದ ನಂತರವೂ ಸಕ್ರಿಯ ರಾಜಕಾರಣಕ್ಕೆ ಬರಬೇಕೆಂದು ಅಪೇಕ್ಷಿಸುತ್ತಾರೆ, ಅದು ಬೇರೆ ಮಾತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಧ್ಯಕ್ಷ, ಪ್ರಧಾನಮಂತ್ರಿ ಮನೆ ಮುಂದೆ ರಾಜಭವನ ಸೇರುವ ಆಕಾಂಕ್ಷಿಗಳ ದೊಡ್ಡ ಸಾಲು ನೆರೆದಿರುತ್ತದೆ. ಇವರನ್ನು ಪತ್ತೆ ಹಚ್ಚುವುದು ಬಹಳ ಸುಲಭ. ಇವರು ಒಂದೋ ಎಪ್ಪತ್ತು, ಎಂಬತ್ತನ್ನು ದಾಟಿರುತ್ತಾರೆ, ಇಲ್ಲವೆ ಮೂರ್ನಾಲ್ಕು ಆಪರೇಶನ್ ಮಾಡಿಸಿಕೊಂಡಿರುತ್ತಾರೆ. ವೃದ್ಧಾಶ್ರಮ ಸೇರುವ ಮೊದಲು ರಾಜಭವನ ಸೇರಿದರೆ ಐದು ವರ್ಷ ನಿಶ್ಚಿಂತೆಯಿಂದ, ಹಾಯಾಗಿ ಹೆಂಡತಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಆರಾಮಾಗಿ ಇರಬಹುದು. ಜೀವನವಿಡೀ ದುಡಿದ ದಣಿವನ್ನು ಸರಕಾರಿ ಖರ್ಚಿನಲ್ಲಿ ನಿವಾರಿಸಿಕೊಳ್ಳಬಹುದು.

ಬ್ರಿಟಿಷ್ ಸಾಮ್ರಾಜ್ಯಶಾಹಿಯ ಪಳೆಯುಳಿಕೆಗಳಂತೆ ಕಾಣುವ ಈ ರಾಜಭವನದ ಕಲ್ಪನೆ, ಅಗತ್ಯ ಯಾರಿಗೆ ಬಂತೋ ಗೊತ್ತಿಲ್ಲ, ಈ ದೇಶದಿಂದ ಆ ಬಿಳಿಯರು ಹೋಗಿ ಅರವತ್ತು ವರ್ಷಗಳಾದರೂ ಈ `ಬಿಳಿಯಾನೆ’ ಮಾತ್ರ ಹಾಗೇ ಕೊಬ್ಬಿಕೊಂಡು ಬೆಳೆಯುತ್ತಿದೆ. ರಾಜಭವನವೆಂಬುದು ಅಕ್ಷರಶಃ ನಿವೃತ್ತ ರಾಜಕಾರಣಿಗಳು, ಅಧಿಕಾರಿಗಳು, ನ್ಯಾಯಮೂರ್ತಿಗಳನ್ನು ಸಲಹುವ ಪಂಚತಾರಾ ವೃದ್ಧಾಶ್ರಮಗಳೇ ಆಗಿವೆ.

ದೇಶದ ಯಾವುದೇ ರಾಜ್ಯದ ರಾಜಭವನ ನೋಡಬೇಕು, ಐವತ್ತು-ನೂರು ಎಕರೆ ಪ್ರದೇಶಗಳಲ್ಲಿ ವಿಶಾಲವಾಗಿ ಹರಡಿಕೊಂಡ, ಜಿರಾಫೆಯೂ ಕತ್ತು ಇಣುಕದಷ್ಟು  ಎತ್ತರದ ಕಾಂಪೌಂಡ್ ಗೋಡೆಗಳ ಮಧ್ಯೆ ವೈಭವದಿಂದ ತಲೆಯೆತ್ತಿ ನಿಂತ ಬೃಹದ್ಭವ್ಯ ಮಹಲು, ನೂರಾರು ಮೀಟರ್ ಉದ್ದದ ಹೆಬ್ಬಾವಿನಂಥ ಹಜಾರ, ಕತ್ತು ಎತ್ತಿದರೂ ಮೇಲಮೇಲಕ್ಕೇರುವ ಚಾವಣಿ, ರತ್ನಗಂಬಳಿ, ನೂರಾರು ವರ್ಷಗಳಷ್ಟು ಹಳೆಯ ಪೀಠೋಪಕರಣ, ಗೋಡೆಯಿಂದ ಚಾಚಿದ ಹುಲಿ, ಕರಡಿ, ಚಿರತೆ, ಜಿಂಕೆ ಮುಖ … ಆ ವೈಭವವನ್ನು ನೋಡಿಯೇ ಅನುಭವಿಸಬೇಕು. ಹೆಜ್ಜೆ ಹೆಜ್ಜೆಗೆ ಆಳುಗಳು, ಅವರೂ ಎಂಥವರಂತೀರಿ, ಎಲ್ಲ ಸೇವೆಗೆ ಸಿದ್ಧರಿರುವ ಯೂನಿಫಾರ್ಮ್ ತೊಟ್ಟ ಠಾಕು-ಠೀಕು ಸೇವಕರು, ಅವರು ಸಾಹೇಬರಿಗೆ ಸ್ನಾನ ಮಾಡಿಸುತ್ತಾರೆ. ಚಡ್ಡಿ ಹಾಕಿಕೊಡುತ್ತಾರೆ, ಬೆಲ್ಟ್ ಕಟ್ಟಿ ಕೊಡುತ್ತಾರೆ, ಕೋಟಿನೊಳಗೆ ಮೈಯನ್ನು ತೂರಿಸಲು ನೆರವಾಗುತ್ತಾರೆ, ಓಡೋಡಿ ಹೋಗಿ ಬೂಟುಗಳನ್ನು ತಂದು ಕಾಲೊಳಗೆ ಸಿಕ್ಕಿಸುತ್ತಾರೆ, Yes, His Excellency ಎಂದು ಕಾಮನಬಿಲ್ಲಿನಂತೆ ಬಗ್ಗಿ ನಿಂತು ಆಜ್ಞೆಗಾಗಿ ಕಾಯುತ್ತಾರೆ, ಸಾಹೇಬರು ಡೈನಿಂಗ್ ಟೇಬಲ್‌ಗೆ ಬಂದರೆ ನಾಲ್ಕೈದು ಮಂದಿ ಸುತ್ತುವರಿದು ಸೇವೆ ಮಾಡುತ್ತಾರೆ, ಸಾಹೇಬರು ಕೈ ತೊಳೆಯಲು ಹೋದರೆ ಅಕ್ಕಪಕ್ಕ ಟವೆಲ್ ಹಿಡಿದು ನಿಂತಿರುತ್ತಾರೆ, ಯಾವ ಕಡೆ ತಿರುಗಿದರೂ ಟವಲ್ ಸಿಗಬೇಕು !

ಇಷ್ಟೊತ್ತಿಗೆ  ಹೊರಗೆ ಸಾಹೇಬರ ಬೆಂಜ್ ಕಾರು ಸಿದ್ಧವಾಗಿರುತ್ತದೆ. ಭುಜಕ್ಕೆ ಬಾವಿಹಗ್ಗದಂಥ ದಾರ ಇಳಿಬಿಟ್ಟ ಬಿಳಿಸಮವಸ್ತ್ರ ಧರಿಸಿದ ಎಡಿಸಿ (Aid-De-Camp) ಎಂಬ ಸೇವಕ ಸಾಹೇಬರ ಅಂಗರಕ್ಷಕ ನೆರಳಿನಂತೆ ಕಾಯಲು ತಯಾರಾಗಿರುತ್ತಾನೆ. ಇನ್ನು ಸಾಹೇಬರು ಹೊರಟರೆಂದರೆ ರಾಜ್ಯದಲ್ಲಿ ಎಲ್ಲಿಯೇ ಹೋಗಲಿ ಅವರಿಗೆ ಅಗ್ರತಾಂಬೂಲ. ಯಾವುದೇ ಕಾರ್ಯಕ್ರಮ, ಸಭೆ, ಸಮಾರಂಭದಲ್ಲಿ ಅವರೇ ಕೇಂದ್ರಬಿಂದು. ಪ್ರತಿಯೊಂದು ಅವರ ಸುತ್ತಲೂ ಸುತ್ತಬೇಕು, ಸುತ್ತುತ್ತಿರುತ್ತದೆ. ಗವರ್ನರ್ ಸಾಹೇಬರ ಹುಕುಂ ಅಂದ್ರೆ ರಾಜ್ಯವೇ ಎದ್ದು ನಿಲ್ಲಬೇಕು. ಪ್ರೋಟೊಕಾಲ್ ಎಂಬ ಶಿಷ್ಟಾಚಾರದ ಮುಂದೆ ಎಲ್ಲರೂ ನಗಣ್ಯ. ಎಲ್ಲವೂ ಮಿನಿಟ್ ಟು ಮಿನಿಟ್‌ನಂತೆ ಲೆಕ್ಕಾಚಾರ.

ಇನ್ನು ಗವರ್ನರ್ ಸಾಹೇಬರ ಹೆಂಡತಿ, ಮಕ್ಕಳು, ಮೊಮ್ಮಕ್ಕಳ ದರಬಾರನ್ನು ತಪ್ಪಿಸಿಕೊಳ್ಳುವಂತಿಲ್ಲ. ಅವರು ರಾಜಭವನದ ಅನಭಿಷಿಕ್ತ ದೊರೆಗಳು. ಸಾಹೇಬರು ಹೊರಗೆ ಹೋಗಿದ್ದಾಗ, ಅಲ್ಲಿನ ಸಿಬ್ಬಂದಿ ಇವರಿಗಾಗಿ ಸೇವೆ ಮುಡಿಪಾಗಿರಿಸುತ್ತಾರೆ. ಸಾಹೇಬರ ಹೆಂಡತಿ ಶಾಪಿಂಗ್, ಸಿನಿಮಾಕ್ಕೆ ಹೊರಟರೆ ಅವರ ಹಿಂದಿನ ಪುಟ್ಟ ಮೆರವಣಿಗೆ, ಮೇಜವಾನಿಕೆ ಅಸಹ್ಯ ಹುಟ್ಟಿಸುತ್ತದೆ. ಸರಕಾರಿ ವಾಹನ, ಸಿಬ್ಬಂದಿಯ ದುರ್ಬಳಕೆ ಆರಂಭವಾಗುವುದೇ ರಾಜಭವನದಿಂದ. ಅಧಿಕಾರದ ದರ್ಪ, ವಾಕರಿಕೆ ಹುಟ್ಟಿಸುವ ಪ್ರದರ್ಶನ ಅನಾವರಣಗೊಳ್ಳುವುದೇ ಅಲ್ಲಿಂದ.

ಖ್ಯಾತ ಪತ್ರಕರ್ತ ಹಾಗೂ ಕೇಂದ್ರದ ಮಾಜಿ ಸಚಿವ ಅರುಣ್ ಶೌರಿ ಗವರ್ನರ್ ಬಗ್ಗೆ ಬರೆಯುತ್ತಾ `ಅದೊಂದು ಜವಾಬ್ದಾರಿಯೇ ಇಲ್ಲದ ಸುಖ’ ಎಂದಿದ್ದರು. ಸಂವಿಧಾನದ ಪ್ರತಿನಿಧಿಯಂತೆ ಕಂಗೊಳಿಸುವ ರಾಜ್ಯಪಾಲರು ಒಂದು ರೀತಿಯಲ್ಲಿ ಉತ್ಸವಮೂರ್ತಿ. ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದಾಗ, ಸರಕಾರ ರಾಜೀನಾಮೆ ಕೊಟ್ಟಾಗ, ಅತಂತ್ರ ಸ್ಥಿತಿಯಲ್ಲಿದ್ದಾಗ ರಾಜ್ಯಪಾಲರಿಗೆ ಕೆಲಸವಿರುವುದನ್ನು ಬಿಟ್ಟರೆ ಉಳಿದ ಸಂದರ್ಭಗಳಲ್ಲಿ ಗಣ್ಯರನ್ನು ಸ್ವಾಗತಿಸುವುದು, ಅವರೊಂದಿಗೆ ಭೋಜನ ಸ್ವೀಕರಿಸುವುದು, ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು, ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವುದೇ ಮುಖ್ಯ ಕೆಲಸ. ರಾಜ್ಯಪಾಲರ ಮನಸ್ಥಿತಿಯ ಮೇಲೆ ರಾಜಭವನದ ಚಟುವಟಿಕೆಗಳು ನಿರ್ಧರಿತವಾಗುತ್ತವೆ.

ಖುರ್ಷಿದ್ ಆಲಂಖಾನ್ ಅವರು ನಮ್ಮ ರಾಜ್ಯದ ರಾಜ್ಯಪಾಲರಾಗಿದ್ದರು. ಅವರು ಎರಡು ಅವಧಿಗೆ ಅಂದರೆ ಹತ್ತು ವರ್ಷ ರಾಜಭವನದಲ್ಲಿದ್ದರು. ಸಾಯಂಕಾಲ ಆರು ಗಂಟೆ ನಂತರ ಸಾಹೇಬರನ್ನು ಭೇಟಿ ಮಾಡುವುದು ಸಾಧ್ಯವಿರಲಿಲ್ಲ. ರಾಜಭವನದ ಗೇಟುಗಳು ಎಲ್ಲರಿಗೂ ತೆರೆಯುತ್ತಿರಲಿಲ್ಲ. ಫೋನ್ ಮಾಡಿದರೆ ಗವರ್‍ನರ್ ಸಾಹೇಬರು ಲೈನಿಗೆ ಬರುತ್ತಿರಲಿಲ್ಲ. ರಾಜಭವನದ ಚಟುವಟಿಕೆಗಳು ಹೊರಜಗತ್ತಿಗೆ ಗೊತ್ತಾಗುತ್ತಿರಲಿಲ್ಲ. ದಶಕಕಾಲ ದರಬಾರು ಮಾಡಿ ಹೊರಟುಹೋದರು. ರಮಾದೇವಿಯವರೇನೋ ರಾಜಭವನದ ಗೇಟುಗಳನ್ನು ಸಾರ್ವಜನಿಕರಿಗೆ ತೆರೆದಿಟ್ಟರು. ಯಾರು ಬೇಕಾದರೂ ಒಳಬರಬಹುದೆಂದು ಹೇಳಿದರು. ರಾಜಭವನದೊಳಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದರು. ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿತ್ತು. ಆದರೆ ಗವರ್ನರಮ್ಮ ಸೀರಿ ಖರೀದಿಗೆ ಹೊರಟರೆಂದರೆ ಕಾರಿನ ಡಿಕ್ಕಿ ಬಾಗಿಲು ಹಾಕಲು ಸಾಧ್ಯವಾಗುತ್ತಿರಲಿಲ್ಲ. ಸೀರೆ ಅಂಗಡಿ, ಆಭರಣ ಅಂಗಡಿಗಳಲ್ಲಿ ಅವರ ವರ್ತನೆ ಬಗ್ಗೆ ರಾಜಭವನವನ್ನು ದಾಟಿಯೂ  ಜನ ಮಾತಾಡಿಕೊಳ್ಳುತ್ತಿದ್ದರು!

ಸಂವಿಧಾನದ ಪ್ರಕಾರ ರಾಜಭವನ ರಾಜಕೀಯದಿಂದ ದೂರವಿರಬೇಕು, ಪಕ್ಷ ಕಾರಣದಿಂದ ಮುಕ್ತವಾಗಿರಬೇಕು. ಆದರೆ ರಾಜ್ಯಪಾಲರಾಗಿ ನೇಮಕವಾಗುವವರೆಲ್ಲ ವೃತ್ತಿಪರ ರಾಜಕಾರಣಿಗಳೇ ಆದರೆ ಅದು ರಾಜಕೀಯದಿಂದ ಮುಕ್ತವಾಗಿರುವುದಾದರೂ ಹೇಗೆ? ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ನಿವೃತ್ತ ರಾಜಕಾರಣಿಗಳೇ ರಾಜಭವನವನ್ನು ಅಲಂಕರಿಸುತ್ತಾರೆ. ಎಲ್ಲರೂ ಒಂದು ಕಾಲಕ್ಕೆ ಪಕ್ಕಾ ಪಂಟರುಗಳೇ. ಈಗ ರಾಜ್ಯಪಾಲರಾಗಿ ಯಾರ್‍ಯಾರು ಇದ್ದಾರೆಂಬುದನ್ನು ಗಮನಿಸಿ. ಎನ್.ಡಿ. ತಿವಾರಿ (ಆಂಧ್ರ), ನವಲ್ ಕಿಶೋರ್ ಶರ್ಮ (ಗುಜರಾತ್), ರಾಮೇಶ್ವರ ಠಾಕೂರ್ (ಕರ್ನಾಟಕ), ಬನ್ವಾರಿಲಾಲ ಜೋಶಿ (ಉತ್ತರ ಖಾಂಡ್), ಆರ್.ಎಲ್. ಭಾಟಿಯಾ (ಕೇರಳ), ಆರ್.ಕೆ. ಗವಾಯ್ (ಬಿಹಾರ), ಎಸ್.ಎಂ. ಕೃಷ್ಣ (ಮಹಾರಾಷ್ಟ್ರ) ಬಲರಾಮ್ ಜಾಕಡ್ (ಮಧ್ಯಪ್ರದೇಶ), ಡಿ.ಎನ್. ಸಹಾಯ್ (ತ್ರಿಪುರಾ), ಎಸ್.ಸಿ. ಜಮೀರ್ (ಗೋವಾ) ಮುಂತಾದವರೆಲ್ಲ ಪಕ್ಕಾ ರಾಜಕಾರಣಿಗಳೇ. ಜೀವನದಲ್ಲಿ ಅಧಿಕಾರವನ್ನು ಯಥೇಚ್ಛ ಅನುಭವಿಸಿದವರೇ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಇದನ್ನೇ ಮಾಡಿದ್ದು. ಪಕ್ಷಕ್ಕಾಗಿ ದುಡಿದವರನ್ನು ರಾಜ್ಯಪಾಲರನ್ನಾಗಿ ನೇಮಿಸುವುದು ಸಹ ಎಲ್ಲ ರಾಜಕೀಯ ಪಕ್ಷಗಳು ಅನುಸರಿಸಿಕೊಂಡು ಬಂದಿರುವ ಮಾನದಂಡಗಳಲ್ಲೊಂದು. ಹೀಗಿರುವಾಗ ರಾಜಭವನ ರಾಜಕಾರಣದಿಂದ ದೂರವಿರುವುದು ಅಸಾಧ್ಯ. ರಾಜಕೀಯೇತರ ವ್ಯಕ್ತಿಗಳು ರಾಜ್ಯಪಾಲರಾದಾಗ ಬೇರೆ.

ರಾಜ್ಯಪಾಲರ ಹುದ್ದೆಯ ಮಹತ್ವ ಕೇಂದ್ರದ ಏಜೆಂಟ್ ಹುದ್ದೆಗೆ ಇಳಿದಿರುವುದು ರಾಜಭವನದ ದುರ್ದೈವ. ಸಂವಿಧಾನದ 356ನೇ ವಿಧಿ ಪ್ರತಿಸಲ ಜಾರಿಯಾದಾಗಲೂ ರಾಜ್ಯಪಾಲ ಕೇಂದ್ರದ ಏಜೆಂಟ್‌ನಂತೆ ಕೆಲಸ ಮಾಡಿದ್ದನ್ನು ನೋಡಬಹುದು. ರಾಜ್ಯದಲ್ಲಿ ಪರಿಸ್ಥಿತಿ ಏನೇ ಇರಲಿ, ತಮಗೆ ಬೇಕಾದ ವರದಿಯನ್ನು ರಾಜ್ಯಪಾಲರಿಂದ ತರಿಸಿಕೊಂಡು ಸರಕಾರಗಳನ್ನು ಕಿತ್ತು ಹಾಕುವುದು ಕಾಂಗ್ರೆಸ್‌ಗೆ ಚಟವಾಗಿ ಪರಿಣಮಿಸಿತ್ತು. ಈ ಸನ್ನಿವೇಶದಲ್ಲಿ ಕೇಂದ್ರ ಸರಕಾರ ಹೇಳಿದ್ದೆಲ್ಲವನ್ನೂ ಕಾರಕೂನನಂತೆ ಬರೆದುಕೊಂಡು ವರದಿ ಕಳಿಸುತ್ತಿದ್ದರು. ರಾಜಭವನದ ಪಡಸಾಲೆಯೊಳಗೆ ಎಷ್ಟೋ ಸರಕಾರಗಳ ಭವಿಷ್ಯ ನಿರ್ಧಾರವಾಗುತ್ತಿತ್ತು. ಪಕ್ಷಾಂತರ ನಿಷೇಧ ಕಾನೂನು ಜಾರಿಯಾಗುವ ಮುನ್ನ, ರಾಜಭವನವೇ `ಆಯಾರಾಂ ಗಯಾರಾಂ’ ಶಾಸಕರಿಗೆ ಅಡಗುತಾಣ. ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂಕೋರ್ಟು ತೀರ್ಪು ನೀಡುವುದಕ್ಕಿಂದ ಮೊದಲು, ರಾಜಭವನದ ಅಂಗಳದಲ್ಲಿಯೇ ಶಾಸಕರ ತಲೆ ಎಣಿಸುವ, ಬಹುಮತ ಸಾಬೀತುಪಡಿಸುವ ಕೈಂಕರ್ಯ ನೆರವೇರುತ್ತಿತ್ತು. ಪಕ್ಷದ ಬೋರ್ಡು ಹೊರಗೆ ನೇತು ಹಾಕಿಲ್ಲವೆಂಬುದನ್ನು ಬಿಟ್ಟರೆ ರಾಜಭವನವೆಂದರೆ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಪಕ್ಷದ ಕಚೇರಿಯೇ!

ಹೀಗಿರುವಾಗ ಎಂಥೆಂಥವರು ರಾಜಭವನದಲ್ಲಿ ದರಬಾರು ನಡೆಸಿ ಹೊರಟು ಹೋಗಿದ್ದಾರೆ ಗೊತ್ತಾ?

ರೋಮೇಶ್ ಭಂಡಾರಿ ಉತ್ತರ ಪ್ರದೇಶ ರಾಜ್ಯಪಾಲರಾಗಿದ್ದರು. ಈ ಮನುಷ್ಯ ರಾಜಭವನವನ್ನು ತನ್ನ ಖಾಸಗಿ ಕ್ಲಬ್ ಅಥವಾ ರೆಸಾರ್ಟ್ ಮಾದರಿಯಲ್ಲಿ ಪರಿವರ್ತಿಸಿದ್ದ. ಪ್ರತಿದಿನ ಸಾಯಂಕಾಲ `ಗೋಪ್ಠಿ’ಗಳು, ತಾರಾಮೇಳಗಳು. ಸ್ನೇಹಿತರನ್ನೆಲ್ಲ ಕರೆದು ಪಾರ್ಟಿಗಳನ್ನು ಮಾಡುತ್ತಿದ್ದ. ರಾಜಭವನದ ಪಾರ್ಟಿಗಳಲ್ಲಿ ಬರೀ ಶ್ರೀಮಂತರಿಗೆ ಮಾತ್ರ ಪ್ರವೇಶ. ವಿದೇಶಿ ಸ್ನೇಹಿತರಿಗೂ ಆಹ್ವಾನವಿರುತ್ತಿತ್ತು. ಹಾಡು, ಕುಣಿತಕ್ಕೆ ರಂಗೇರಿಸುವ ದ್ರವ, ಉಪದ್ರವಗಳೆಲ್ಲ ಅಲ್ಲಿರುತ್ತಿದ್ದವು. ರಾತ್ರಿಯೆಲ್ಲ ರಾಜಭವನದ ಅಂಗಳದಲ್ಲಿ ಇಂಥ ಚಟುವಟಿಕೆಗಳಲ್ಲಿ ತೊಡಗಿರುತ್ತಿದ್ದ ಗವರ್‍ನರ್ ಸಾಹೇಬರು, ಹಗಲು ಯಾರಿಗೂ ಸಿಗುತ್ತಿರಲಿಲ್ಲ. ಇಳಿಹೊತ್ತು ಮುಸುಕುತ್ತಿದ್ದಂತೆ ಭಂಡಾರಿ ಗಾಲ್ಫ್  ಅಂಗಳಕ್ಕೆ ಇಳಿದುಬಿಡುತ್ತಿದ್ದರು. ರಾಜಭವನದಲ್ಲಿನ ಹಿರಿಯ ಅಧಿಕಾರಿಗಳಿಗೇ `ಎಕ್ಸಲೆನ್ಸಿ’ ಸಿಗುತ್ತಿರಲಿಲ್ಲ. ಇಂಥ ಮನುಷ್ಯ ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಸರಕಾರವನ್ನು ಏಕಾಏಕಿ ಕಿತ್ತು ಹಾಕಿ ಜಗದಂಬಿಕ ಪಾಲ್ ಎಂಬಾತನನ್ನು ಮುಖ್ಯಮಂತ್ರಿಯಾಗಿ ಸ್ಥಾಪಿಸಿಬಿಟ್ಟಿದ್ದ. ಅಲಹಾಬಾದ್ ಹೈಕೋರ್ಟ್ ಕಲ್ಯಾಣ್‌ಸಿಂಗ್ ಸರಕಾರ ವಜಾಕ್ಕೆ ತಡೆ ನೀಡಿತು. ಪ್ರಮಾಣವಚನ ಸ್ವೀಕರಿಸಿದ ನಾಲಗೆಯಿನ್ನೂ ಒಣಗಿರಲಿಲ್ಲ. ಕೇವಲ 24 ಗಂಟೆಯೊಳಗೆ ಪಾಲ್ ಅಧಿಕಾರ ಕಳೆದುಕೊಳ್ಳಬೇಕಾಯಿತು. ರಾಜಕಾರಣಿಗಳೂ ಹೇಸುವ ರೀತಿಯಲ್ಲಿ ಈ ಐಎಫ್‌ಎಸ್ (ಫಾರಿನ್ ಸರ್ವೀಸ್) ಅಧಿಕಾರಿ ನಡೆದುಕೊಂಡು ನಗೆಪಾಟಲಿಗೀಡಾದ. ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಎನ್.ಟಿ. ರಾಮರಾವ್ ಸರಕಾರವನ್ನು ವಜಾ ಮಾಡಿದ ರಾಮಲಾಲ್ ಸಹ ಕಮ್ಮಿ  ಆಸಾಮಿಯೇನಲ್ಲ.

`ಮೈಮೇಲೆ  ಬಟ್ಟೆ  ಇಲ್ಲದಿದ್ದರೂ ಪರವಾಗಿಲ್ಲ, ತಲೆಗೆ ಪೇಟ ಬೇಕು’ ಎಂಬಂತೆ ನಮ್ಮ ರಾಜ್ಯಪಾಲರು. (ಕೃಷ್ಣಕಾಂತ್, ವಿಷ್ಣುಕಾಂತ ಶಾಸ್ತ್ರಿ, ಸಿ. ಸುಬ್ರಹ್ಮಣ್ಯಂ, ಪಿ.ಸಿ. ಅಲೆಗ್ಸಾಂಡರ್, ರಾಮಾಜೋಯಿಸ್ ಅವರಂಥವರು ರಾಜಭವನಕ್ಕೆ ಘನತೆ ತಂದುಕೊಟ್ಟಿದ್ದು ಬೇರೆ ಮಾತು.) ರಾಜಭವನದ ಖರ್ಚು-ವೆಚ್ಚಗಳಿಗೆ ಪ್ರತ್ಯೇಕ ಬಜೆಟ್ ಇರುತ್ತದೆ. ಕಡಿಮೆ ಬಿದ್ದರೆ ಮಂಜೂರು ಮಾಡಿಸಿಕೊಳ್ಳುತ್ತಾರೆ. ಇವನ್ನೆಲ್ಲ ಯಾರೂ ಪ್ರಶ್ನಿಸುವಂತಿಲ್ಲ. ರಾಜ್ಯಪಾಲರಿಗೆ ಯಾರು `ಇಲ್ಲ’ ಅಂತಾರೆ? ಅವರು ಜನರಿಗಿಂತ ಮೇಲಿನ ಪ್ರಭುಗಳು.

ಯಾವ ವೃದ್ಧಾಶ್ರಮದಲ್ಲಿ ಇಂಥ ಸೌಕರ್ಯವಿದ್ದೀತು? ಅದರಲ್ಲೂ ರಾಷ್ಟ್ರಪತಿ ಆಡಳಿತವಿದ್ದರೆ ಮುಗೀತು ಬಿಡಿ, ವೃದ್ಧಾಶ್ರಮದಲ್ಲಿರುವ ಅಂಗಾಂಗಗಳಿಗೆಲ್ಲ ನವಚೇತನ !

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: