ಲಾಲ್ ಬಹಾದೂರ್ ಶಾಸ್ತ್ರಿ ಮಗನ ಜತೆ ಎರಡು ದಿನ -He couldn`t settle his fiat car loan

ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಪ್ರಾಮಾಣಿಕ ಮತ್ತು ಸರಳ ಜೀವನದ ಕಥೆಗಳನ್ನು ನೀವು ಕೇಳಿರಲಿಕ್ಕೂ ಸಾಕು. ಆ ಕಥೆಗಳು  ಆಧುನಿಕ ಭಾರತದ ಚಂದಮಾಮ ಕಥೆಗಳು. ಎಷ್ಟು ಸಲ ಬೇಕಿದ್ದರೂ ಕೇಳಬಹುದು. ಈ ದೇಶದ ರಾಜಕಾರಣಿಗಳ ಪೈಕಿ ಪ್ರಾಮಾಣಿಕ ಎಂದು ಸಂಬೋಧಿಸಬಹುದಾದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರಾದ, ಈ ರಾಷ್ಟ್ರ ಕಂಡ ಅಪರೂಪದ ಮುತ್ಸದ್ದಿ, ದಿವಂಗತ ಪ್ರಧಾನಿ ಭಾರತರತ್ನ ಲಾಲ ಬಹಾದೂರ್ ಶಾಸ್ತ್ರಿ

“ನನಗೆ ಚೆನ್ನಾಗಿ ಗೊತ್ತು, ಈ ಪ್ರೀತಿ, ಗೌರವ, ಸಾಷ್ಟಾಂಗ ನಮನಗಳೆಲ್ಲ ನನಗಲ್ಲ. ಇವೆಲ್ಲ ನನ್ನ ತಂದೆಯವರಿಗೆ ಸೇರಬೇಕಾಗಿದ್ದು. ಜನ ನನ್ನಲ್ಲಿ ಅವರನ್ನು ಕಾಣುತ್ತಾರೆ. ಅದರಿಂದ ನನಗೆ ಹೋದೆಡೆಯಲ್ಲೆಲ್ಲ ಮರ್ಯಾದೆ, ಅಪಾರ ಪ್ರೀತಿ ಸಿಗುತ್ತಿದೆ. ಅಂಥವರ ಹೊಟ್ಟೆಯಲ್ಲಿ ನಾನು ಹುಟ್ಟಿದೆ ಎಂಬುದೇ ನನ್ನ ಸೌಭಾಗ್ಯ. ಅದಕ್ಕಿಂತ ಹೆಮ್ಮೆ, ಅಭಿಮಾನದ ಸಂಗತಿ ಮತ್ತೇನಿದೆ? ನಿಜಕ್ಕೂ ನಾನು ಪುಣ್ಯವಂತ. ನನ್ನ ಬದುಕು ಸಾರ್ಥಕ.”

ಈ ದೇಶದ ರಾಜಕಾರಣಿಗಳ ಪೈಕಿ ಪ್ರಾಮಾಣಿಕ ಎಂದು ಸಂಬೋಧಿಸಬಹುದಾದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರಾದ, ಈ ರಾಷ್ಟ್ರ ಕಂಡ ಅಪರೂಪದ ಮುತ್ಸದ್ದಿ, ದಿವಂಗತ ಪ್ರಧಾನಿ ಭಾರತರತ್ನ ಲಾಲ ಬಹಾದೂರ್ ಶಾಸ್ತ್ರಿ ಅವರ ಮಗ ಸುನೀಲ್ ಶಾಸ್ತ್ರಿ ಅಂದು ತೀರಾ ಭಾವುಕರಾಗಿ ಮಾತಾಡುತ್ತಿದ್ದರು. ಕಳೆದ ವಾರ ಎರಡು ದಿನ ಪೂರ್ತಿ ಸುನೀಲ್ ಶಾಸ್ತ್ರಿ ಹಾಗೂ ಅವರ ಪತ್ನಿ ಮೀರಾ ಅವರೊಂದಿಗೆ ಬೆಂಗಳೂರು, ಹುಬ್ಬಳ್ಳಿ ಹಾಗೂ ಯಲ್ಲಾಪುರದಲ್ಲಿ ಪ್ರವಾಸ ಮಾಡುವಾಗ ಹೆಜ್ಜೆ ಹೆಜ್ಜೆಗೂ ಜನ ಅವರನ್ನು ಮುತ್ತುತ್ತಿದ್ದರು. ಪಾದ ಮುಟ್ಟಿ ನಮಸ್ಕರಿಸುತ್ತಿದ್ದರು. ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದರು. ಸುನೀಲ್  ಶಾಸ್ತ್ರಿಯವರಲ್ಲಿ ಲಾಲ ಬಹಾದೂರ್ ಶಾಸ್ತ್ರಿಯವರನ್ನು ಕಾಣುತ್ತಿದ್ದರು.

ಯಲ್ಲಾಪುರದಲ್ಲಿ ಮಧ್ಯವಯಸ್ಕರೊಬ್ಬರು ಬಂದು, “ನಾನು ನಿಮ್ಮ ತಂದೆಯವರ ಬಗ್ಗೆ ಸಾಕಷ್ಟು ಕೇಳಿದ್ದೇನೆ, ಓದಿದ್ದೇನೆ. ಆದರೆ ಅವರನ್ನು ನೋಡುವ ಸೌಭಾಗ್ಯ ನನಗೆ ಸಿಗಲಿಲ್ಲ. ಅವರ ಮಗನನ್ನಾದರೂ ಕಾಣುವ ಸದಾವಕಾಶ ಸಿಕ್ಕಿತಲ್ಲ, ದಯವಿಟ್ಟು ಅವಕಾಶ ಕೊಡಿ, ನಿಮ್ಮ ಪಾದ ಮುಟ್ಟಿ ನಮಸ್ಕರಿಸಲು” ಎಂದವರೇ ಶಾಸ್ತ್ರಿಯವರ ಮುಂದೆ ದೀರ್ಘದಂಡ ನಮಸ್ಕಾರ ಹಾಕಿದರು. ಬಿಳಿಬಟ್ಟೆ  ಧೂಳಿನಲ್ಲಿ ನೆನೆದಿತ್ತು. ಪರವಾಗಿಲ್ಲ, ಸಾಕ್ಷಾತ್ ಲಾಲ ಬಹಾದೂರ್ ಶಾಸ್ತ್ರಿಯವರಿಗೇ ಶಿರಸಾಷ್ಟಾಂಗ ನಮನ ಸಲ್ಲಿಸಿದ ಧನ್ಯತೆ ಅವರಲ್ಲಿ ಶೇಖರವಾಗಿತ್ತು.

“ಸುನೀಲ್  ಜೀ, ರಾಜಕಾರಣಿಗಳ ಪಾದ ಮುಟ್ಟಿ ನಮ್ಮಲ್ಲಿ ಯಾರೂ ನಮಸ್ಕರಿಸುವುದಿಲ್ಲ. ಆದರೆ ನಿಮ್ಮನ್ನು ಎಲ್ಲರೂ ಪಾದಮುಟ್ಟಿಯೇ ವಂದಿಸುತ್ತಾರೆ” ಅಂದೆ. “ಹೌದು, ಅದು ಬಾಬೂಜಿ(ಲಾಲ ಬಹಾದೂರ್ ಶಾಸ್ತ್ರಿ)ಗೆ ಸಲ್ಲಬೇಕಾದದ್ದು. ನನ್ನದೇನಿದ್ದರೂ ಪೋಸ್ಟ್‌ಮ್ಯಾನ್ ಕೆಲಸ” ಎಂದರು ಸುನೀಲ್ ಶಾಸ್ತ್ರಿ. “ಸುನೀಲ್ ಜೀ, ನಮ್ಮಲ್ಲೂ ಮಾಜಿ ಪ್ರಧಾನಿಯಿದ್ದಾರೆ. ಅವರಿಗೂ ಮಕ್ಕಳಿದ್ದಾರೆ. ಆದರೆ ಅವರಿಗ್ಯಾರಿಗೂ  ಜನ ಕಾಲುಮುಟ್ಟಿ ನಮಸ್ಕರಿಸುವುದಿಲ್ಲ” ಎಂದೆ ತಮಾಷೆಯಿಂದ. ಸುನೀಲ್ ಶಾಸ್ತ್ರಿ ಜೋರಾಗಿ ನಕ್ಕರು. ಪಕ್ಕದಲ್ಲಿದ್ದವರೊಬ್ಬರು “ಅವರೂ  ಪ್ರಧಾನಿಯಾಗಿದ್ದರು. ಇವರೂ ಆಗಿದ್ದರು. ಎಂಥ ವ್ಯತ್ಯಾಸ? ಅಬ್ಬಾ!” ಎಂದು ಉದ್ಗರಿಸಿದರು. ಸುನೀಲ್  ಶಾಸ್ತ್ರಿ ನಗಲಿಲ್ಲ.

ನನ್ನ ಪೀಳಿಗೆಯವರು ಲಾಲ ಬಹಾದೂರ್ ಶಾಸ್ತ್ರಿಯವರನ್ನು ನೋಡಿಲ್ಲ. ಆದರೆ ಅವರೆಂಥ ವ್ಯಕ್ತಿಯಾಗಿರಬಹುದೆಂಬುದನ್ನು ಸುನೀಲ್ ಶಾಸ್ತ್ರಿಯವರಲ್ಲಿ ಕಾಣಬಹುದು. ತಂದೆಯವರ ಸ್ನೇಹಪರತೆ, ಸರಳತೆ, ಎಲ್ಲರೊಡನೆ ಬೆರೆಯುವ ಗುಣ, ನಗು, ಲವಲವಿಕೆಯನ್ನು ಮಗನಲ್ಲಿ ಕಾಣಬಹುದು. ಸುನೀಲ್ ಶಾಸ್ತ್ರಿಯವರ ಜತೆ ಮಾತಾಡುತ್ತಿದ್ದರೆ ಎಲ್ಲೋ ಒಂದು ಹಂತದಲ್ಲಿ, ಯಾವುದೋ ಮಾತಿನ ಮುರುಕಿಯಲ್ಲಿ ಅವರ ತಂದೆಯವರನ್ನು ತುಸು ತುಸು ದರ್ಶನ ಮಾಡಿಸುತ್ತಾ ಹೋಗುತ್ತಾರೆ. ನಿಧಾನವಾಗಿ ಮಾತುಕತೆ ಬಿಚ್ಚಿಕೊಳ್ಳುತ್ತಾ ಹೋಗುತ್ತಿದ್ದಂತೆ ತಾವು ಮರೆಯಾಗಿ ತಂದೆ ವ್ಯಕ್ತಿತ್ವವನ್ನು ಅನಾವರಣ ಮಾಡಿಸುತ್ತಾರೆ. ಎರಡು ದಿನ ಶಾಸ್ತ್ರಿಯವರ ಜತೆ ಬಾಯ್ತುಂಬಾ ಮಾತಾಡಿ, ಹೊಟ್ಟೆತುಂಬಾ ನಕ್ಕು, ಮೈದಣಿಯೇ ಸುತ್ತಾಡುತ್ತಿದ್ದರೆ ಲಾಲ ಬಹಾದೂರ್ ಶಾಸ್ತ್ರಿಯವರ ಹಿಡಿತದಿಂದ ಬಿಡಿಸಿಕೊಳ್ಳಲಾಗುತ್ತಿರಲಿಲ್ಲ. ಪಾರಗಿತ್ತಿ ಎಲ್ಲಿಯೇ ಹಾರಾಡಿದರೂ ಪುನಃ ಹೂವಿನ ಪುಷ್ಪಪಾತ್ರೆಯೊಳಗೆ ಕುಳಿತುಕೊಳ್ಳುತ್ತಿತ್ತು! ಶಾಸ್ತ್ರಿಯೇ ನಮ್ಮಿಬ್ಬರ ಮಧ್ಯೆ ಇಣುಕುತ್ತಿದ್ದರು. ಸುನೀಲ್ ಶಾಸ್ತ್ರಿ ನೆನಪಿನ ಗಣಿಯೊಳಗೆ ಇಳಿದಿದ್ದರು.

ಲಾಲ ಬಹಾದೂರ್ ಶಾಸ್ತ್ರಿ ಪ್ರಧಾನಿಯಾಗಿ ಕೆಲ ದಿನಗಳಾಗಿದ್ದವು. ಅವರ ಮೊದಲ ಮಗ ಹರಿಕೃಷ್ಣ ಅಶೋಕ್ ಲೇಲ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಶಾಸ್ತ್ರಿಯವರು ಪ್ರಧಾನಿಯಾಗುತ್ತಿದ್ದಂತೆ ಹರಿಕೃಷ್ಣನಿಗೆ ಕಂಪನಿಯು ನಾಲ್ಕು ಭಡ್ತಿ ನೀಡಿ ಸೀನಿಯರ್ ಜನರಲ್ ಮ್ಯಾನೇಜರ್ ಆಗಿ ನೇಮಿಸಿತು. ಹರಿಕೃಷ್ಣ ಈ ಪ್ರೊಮೋಷನ್ನನ್ನು ನಿರೀಕ್ಷಿಸಿರಲಿಲ್ಲ. ತನಗಾದ ಸಂತಸವನ್ನು ತಂದೆ ಮುಂದೆ ಹಂಚಿಕೊಳ್ಳಲು ಸಮಯ ಎದುರು ನೋಡುತ್ತಿದ್ದ. ಒಂದು ದಿನ ಬೆಳಗ್ಗೆ ಉಪಾಹಾರ ಸೇವಿಸುವಾಗ ಶಾಸ್ತ್ರಿಯವರ ಮುಂದೆ ಆ ಖುಷಿ ವಿಚಾರ ಹೇಳಿದ. ಶಾಸ್ತ್ರಿಯವರು ತಟ್ಟನೆ ಗಂಭೀರವದನರಾದರು. ಅವರ ಮುಖದಲ್ಲಿ ಮಗ ಉನ್ನತ ಸ್ಥಾನ ಪಡೆದ ಬಗ್ಗೆ ಸಂತಸವಿರಲಿಲ್ಲ. ತಂದೆಯಿಂದ ಹರ್ಷದ ಪ್ರತಿಕ್ರಿಯೆ ನಿರೀಕ್ಷಿಸಿದ್ದ ಹರಿಕೃಷ್ಣ ತುಸು ಗಾಬರಿಗೊಂಡ.

“ಹರಿ, ನಿನಗೆ ಸಿಕ್ಕಿರುವ ಪ್ರೊಮೋಷನ್ ನಿನ್ನ ಕೆಲಸ ನೋಡಿ ಕೊಟ್ಟಿಲ್ಲ ಎಂಬುದನ್ನು ಅರ್ಥಮಾಡಿಕೋ. ನೀನು ಪ್ರಧಾನಿ ಮಗ ಎಂಬ ಕಾರಣಕ್ಕೆ ಕೊಟ್ಟಿದ್ದಾರೆ. ನಾಳೆ ಅಶೋಕ್ ಲೇಲ್ಯಾಂಡ್ ಕಂಪನಿ ಮುಖ್ಯಸ್ಥ ಯಾವುದೋ ಸಹಾಯ ಯಾಚಿಸಿ ನನ್ನ ಮುಂದೆ ಬರುತ್ತಾನೆ. ನ್ಯಾಯಸಮ್ಮತವಾಗಿಯೇ ನಾನು ಅವನಿಗೆ ಸಹಾಯ ಮಾಡಿದೆ ಎಂದಿಟ್ಟುಕೋ. ಆಗ ಜನ ಏನಂತ ಭಾವಿಸುತ್ತಾರೆ ಹೇಳು. ನಿನ್ನ ಕಂಪನಿಯಲ್ಲಿನ ಸಹೋದ್ಯೋಗಿಗಳು ಏನೆಂದುಕೊಳ್ಳಬಹುದು? ಇವನ್ನೆಲ್ಲ ಯೋಚಿಸಿದ್ದೀಯಾ?” ಎಂದು ಶಾಸ್ತ್ರಿಯವರು ಮಗನನ್ನು ತರಾಟೆಗೆ ತೆಗೆದುಕೊಂಡರು. ಹರಿಕೃಷ್ಣ ಏನೂ ಮಾತಾಡಲಿಲ್ಲ. ಪ್ರೊಮೋಷನ್ ಸಿಕ್ಕಿದ ಸಂತಸವೆಲ್ಲ ಗಾಳಿಯಲ್ಲಿ ತೇಲಿಹೋಗಿತ್ತು. “ಹರಿ, ಒಂದು ಕೆಲಸ ಮಾಡು. ಇಂದೇ ನಿನ್ನ ಕೆಲಸಕ್ಕೆ ರಾಜೀನಾಮೆ ಕೊಡು. ನಾನು ಪ್ರಧಾನಿಯಾಗಿರುವಷ್ಟು ದಿನ ನೀನು ಆ ಕಂಪನಿಯಲ್ಲಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ” ಎಂದರು ಶಾಸ್ತ್ರಿ ಕಟ್ಟುನಿಟ್ಟಾಗಿ. ಹರಿ ಮಾತಾಡಲಿಲ್ಲ.

ಅದೇ ದಿನ ರಾಜೀನಾಮೆ ನೀಡಿದ.ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿದ್ದ ಶಾಸ್ತ್ರಿಯವರನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ಮಗಳು ಅನಾರೋಗ್ಯಪೀಡಿತಳಾಗಿದ್ದಾಳೆಂಬ ಸುದ್ದಿ ಶಾಸ್ತ್ರಿಯವರಿಗೆ ಗೊತ್ತಾದಾಗ ಪರೋಲ್ ಮೇಲೆ ಬಿಡುಗಡೆ ಮಾಡುವಂತೆ ಕೋರಿದರು. ಜೈಲರ್ ಹದಿನೈದು ದಿನಗಳ ಮಟ್ಟಿಗೆ ಬಿಡುಗಡೆಗೊಳಿಸಿದ. ವೈದ್ಯರು ದುಬಾರಿ ಔಷಧ ಬರೆದುಕೊಟ್ಟಿದ್ದರು. ಆದರೆ ಶಾಸ್ತ್ರಿಯವರ ಬಳಿ ಅಷ್ಟೊಂದು ಹಣವಿರಲಿಲ್ಲ. ಬೇರೆಯವರ ಮುಂದೆ ಹಣ ಕೇಳಲು ಮುಜುಗರ. ಈ ಮಧ್ಯೆ ಕಾಯಿಲೆ ಉಲ್ಬಣಿಸಿ ಮಗಳೂ ತೀರಿಹೋದಳು. ಅಂತ್ಯಸಂಸ್ಕಾರ ಮುಗಿಸಿದವರೇ ಪುನಃ ಜೈಲಿಗೆ ಹೊರಟರು. “ನಿಮಗೆ ಹದಿನೈದು ದಿನಗಳ ರಜೆ ನೀಡಲಾಗಿದೆ. ಅಷ್ಟು ದಿನ ನಮ್ಮೊಂದಿಗಿರಿ” ಎಂದು ಪತ್ನಿ ಹೇಳಿದಳು. “ಮಗಳ ಅನಾರೋಗ್ಯದ ಕಾರಣ ನೀಡಿ ಜೈಲಿನಿಂದ ಬಂದಿದ್ದೇನೆ. ಈಗ ಮಗಳೇ ಇಲ್ಲ. ಯಾವ ಕಾರಣಕ್ಕೆ ರಜೆ ತೆಗೆದುಕೊಂಡಿದ್ದೆನೋ ಅದಕ್ಕೇ ಉಪಯೋಗಿಸಬೇಕು. ಈಗ ರಜೆ ವಿಸ್ತರಿಸಲು ಕಾರಣ ಇಲ್ಲ. ಹೀಗಾಗಿ ಹೊರಡುತ್ತೇನೆ” ಎಂದು ಜೈಲಿಗೆ ಅದೇ ದಿನ ಹೊರಟುಬಿಟ್ಟರು.

ಜವಾಹರಲಾಲ ನೆಹರು ಸಂಪುಟದಲ್ಲಿ ಶಾಸ್ತ್ರಿ ರೈಲ್ವೆ ಸಚಿವರಾಗಿದ್ದರು. 1956ರಲ್ಲಿ ಮೆಹಬೂಬ್‌ನಗರದಲ್ಲಿ ರೈಲು ಅಪಘಾತ ಸಂಭವಿಸಿ 112 ಮಂದಿ ಮೃತಪಟ್ಟಿದ್ದರು. ಅದೇ ದಿನ ನಡೆದ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಶಾಸ್ತ್ರಿ ತೀರಾ ಮ್ಲಾನವದನರಾಗಿ ಕುಳಿತಿದ್ದರು. ನೆಹರು ಪದೇ ಪದೆ ಮಾತಾಡಿಸುವ ಪ್ರಯತ್ನ ಮಾಡಿದರೂ ಶಾಸ್ತ್ರಿ ಕೇಳಿದಷ್ಟಕ್ಕೇ ಚುಟುಕಾಗಿ ಉತ್ತರಿಸುತ್ತಿದ್ದರು. ಆ ಅಪಘಾತಕ್ಕೆ ರೈಲ್ವೆ ಸಚಿವನಾಗಿ ತಾನೇ ನೈತಿಕ ಹೊಣೆಗಾರ ಎಂಬ ಅಪರಾಧಪ್ರಜ್ಞೆ ಕಾಡುತ್ತಿತ್ತು. ಸಂಪುಟಸಭೆಯ ಆನಂತರ ನೆಹರುರನ್ನು ಭೇಟಿಯಾದ ಶಾಸ್ತ್ರಿ, “ಈ ಅಪಘಾತದಿಂದ ನೊಂದಿದ್ದೇನೆ. ಅದಕ್ಕೆ ನಾನೇ ಹೊಣೆಗಾರ. ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ಸ್ವೀಕರಿಸಿ” ಎಂದರು. ಆದರೆ ನೆಹರು ಶಾಸ್ತ್ರಿಯವರನ್ನು ಸಮಾಧಾನಪಡಿಸಿದರು. ರಾಜೀನಾಮೆ ಪತ್ರ ಸ್ವೀಕರಿಸಲಿಲ್ಲ. ಅದಾಗಿ ಮೂರು ತಿಂಗಳ ಬಳಿಕ ತಮಿಳುನಾಡಿನ ಅರಿಯಲೂರಿನಲ್ಲಿ ಸಂಭವಿಸಿದ ರೈಲು ದುರಂತದಲ್ಲಿ 144 ಮಂದಿ ಸತ್ತರು. ಈಗ ಶಾಸ್ತ್ರಿಯವರನ್ನು ತಡೆಯಲು ಸಾಧ್ಯವೇ ಇಲ್ಲವೆಂಬುದು ನೆಹರುಗೆ ಗೊತ್ತಿತ್ತು. ಆದರೂ ಮನವೊಲಿಸಲು ಪ್ರಯತ್ನಿಸಿದರು. ಆದರೆ ಶಾಸ್ತ್ರಿ ಕೇಳಲಿಲ್ಲ. ರಾಜೀನಾಮೆ ನೀಡಿದರು. ಶಾಸ್ತ್ರಿ ರಾಜೀನಾಮೆ ನೀಡಬೇಕಾದ ಅಗತ್ಯವಿರಲಿಲ್ಲ ಎಂದು ನೆಹರು ಅನೇಕ ಸಲ ಹೇಳಿದ್ದುಂಟು.

1963ರಲ್ಲಿ ಕಾಮರಾಜ ಯೋಜನೆಯನ್ವಯ ಎಲ್ಲ ಮಂತ್ರಿಗಳೂ ರಾಜೀನಾಮೆ ನೀಡಿದ್ದರು. ಅದೇ ದಿನ ಪತ್ರಕರ್ತ ಕುಲದೀಪ್ ನಯ್ಯರ್ ಶಾಸ್ತ್ರಿಯವರನ್ನು ಭೇಟಿ ಮಾಡಲು ಅವರ ಮನೆಗೆ ಹೋಗಿದ್ದರು. ಸಾಯಂಕಾಲವಾದರೂ ಮನೆಯಲ್ಲಿ ದೀಪವಿರಲಿಲ್ಲ. ನಯ್ಯರ್‌ಗೆ ಅನುಮಾನ. ಶಾಸ್ತ್ರಿಯವರ ಮಾತು ಕೇಳಿಸುತ್ತಿತ್ತು. ಆದರೆ ಇಡೀ ಮನೆಯಲ್ಲಿ ಕತ್ತಲು. “ಕತ್ತಲೆಯಲ್ಲಿ ಯಾಕೆ ಕುಳಿತಿದ್ದೀರಿ ಶಾಸ್ತ್ರೀಜಿ?” ಎಂದು ನಯ್ಯರ್ ಕೇಳಿದ್ದಕ್ಕೆ ಶಾಸ್ತ್ರಿ ಹೇಳಿದರು. “ಇಂದಿನಿಂದ ನಾನು ಮಂತ್ರಿ ಅಲ್ಲ. ಎಲ್ಲ ಖರ್ಚುಗಳನ್ನೂ ನಾನೇ ನಿಭಾಯಿಸಬೇಕು. ಆದರೆ ನನ್ನ ಬಳಿ ಹಣವೇ ಇಲ್ಲ.” ಅದಕ್ಕೆ ನಯ್ಯರ್ ಉಪಾಯ ಹೇಳಿದರಂತೆ. ಪತ್ರಿಕೆಗೆ ಲೇಖನ ಬರೆಯಿರಿ. ಸಂಭಾವನೆ ಸಿಗುತ್ತದೆ. ಪಾಪ, ಶಾಸ್ತ್ರಿ ಅದೇ ದಿನ ರಾತ್ರಿ ಕುಳಿತು ಲಾಲಾ ಲಜಪತ್ ರಾಯ್ ಕುರಿತು ಲೇಖನ ಬರೆದರಂತೆ. ಅದನ್ನು ನಯ್ಯರ್ ನಾಲ್ಕು ಪತ್ರಿಕೆಗೆ ಕಳಿಸಿದರಂತೆ. ಸಂಭಾವನೆ ರೂಪದಲ್ಲಿ ಐನೂರು ರೂ. ದೊರೆತಾಗ ಶಾಸ್ತ್ರಿಯವರಿಗಾದ ಸಂತಸ ಅಷ್ಟಿಷ್ಟಲ್ಲ. ಆರು ತಿಂಗಳು ಸಂಸಾರ ನಡೆಸಬಹುದು ಎಂದು ಸಂತಸಪಟ್ಟರಂತೆ.

ಶಾಸ್ತ್ರಿಯವರು ಪ್ರಧಾನಿಯಾಗಿದ್ದಾಗ ತಮ್ಮ ಮಕ್ಕಳನ್ನು ಶಾಲೆಗೆ ಟಾಂಗಾದಲ್ಲಿಯೇ ಕಳಿಸುತ್ತಿದ್ದರು. ಪ್ರತಿದಿನ ಬೆಳಗ್ಗೆ ಟಾಂಗಾ ಪ್ರಧಾನಿ ಮನೆಮುಂದೆ ನಿಂತಿರುತ್ತಿತ್ತು. ಆದರೆ ಪ್ರಧಾನಿ ಕಾರ್ಯಾಲಯದಲ್ಲಿದ್ದ  ಸೆಕ್ರೆಟರಿ, ಸಹಾಯಕರೆಲ್ಲ ಕಾರಿನಲ್ಲಿ ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುತ್ತಿದ್ದರು. ಕೆಲವರು ಬಾಲಕ ಸುನೀಲ್ ಶಾಸ್ತ್ರಿಯವರಲ್ಲಿ “ಪ್ರಧಾನಿ ಮಗನಾಗಿ ಟಾಂಗಾದಲ್ಲಿ ಬರ್ತೀಯಲ್ಲಾ, ನಾಚಿಕೆಯಾಗೊಲ್ವಾ?” ಎಂದು ಕೇಳಿದರಂತೆ. ಇದರಿಂದ ಮನನೊಂದ ಸುನೀಲ್ ತಂದೆಮುಂದೆ ನಡೆದ ಪ್ರಸಂಗವನ್ನು ವಿವರಿಸಿದನಂತೆ. ಅದಕ್ಕೆ ಶಾಸ್ತ್ರಿ ಹೇಳಿದರಂತೆ.  “ನಾನು ನಿನ್ನನ್ನು ಕಾರಿನಲ್ಲಿ ಶಾಲೆಗೆ ಕಳಿಸಬಹುದಿತ್ತು. ಆದರೆ ನನ್ನಲ್ಲಿ ಅಷ್ಟೊಂದು ಹಣ ಇಲ್ಲ. ಹೀಗಾಗಿ ಟಾಂಗಾದಲ್ಲಿ ಕಳಿಸುತ್ತಿದ್ದೇನೆ. ಶಾಲೆಗೆ ಹೋಗುವುದು ಮುಖ್ಯ. ಯಾವುದರ ಮೇಲೆ ಹೋಗುತ್ತೇವೆ ಎಂಬುದಲ್ಲ. ನನ್ನ ಕಚೇರಿಯಲ್ಲಿನ ಸೆಕ್ರೆಟರಿಗಳು ಶ್ರೀಮಂತರಿರಬಹುದು. ಹೀಗಾಗಿ ಅವರು ಕಾರಿನಲ್ಲಿ ತಮ್ಮ ಮಕ್ಕಳನ್ನು ಕಳಿಸಬಹುದು. ಟಾಂಗಾದಲ್ಲಿ ಓಡಾಡುವುದರಿಂದ ನಿನ್ನ ಅಥವಾ ನನ್ನ ಕಿಮ್ಮತ್ತು ಕಡಿಮೆಯಾಗುವುದಿಲ್ಲ.”

ಆದರೆ ಮಕ್ಕಳು ಕಾರು ಖರೀದಿಸುವಂತೆ ಶಾಸ್ತ್ರಿಯವರನ್ನು ಒತ್ತಾಯಿಸುತ್ತಿದ್ದರು. ಶಾಸ್ತ್ರಿ ಆ ಕೋರಿಕೆಯನ್ನು ನಯವಾಗಿ ನಿರಾಕರಿಸುತ್ತಿದ್ದರು. ಕೊನೆಗೊಂದು ದಿನ ಮಕ್ಕಳ ಒತ್ತಾಯಕ್ಕೆ ಕಟ್ಟುಬಿದ್ದು ಫಿಯಟ್ ಕಾರನ್ನು ಖರೀದಿಸಿದರು, ಸಾಲ ಮಾಡಿ! ಭಾರತದ ಪ್ರಧಾನಿಗೆ ಎಂಥ ‘ದುರ್ಗತಿ”?! ಪ್ರತಿ ತಿಂಗಳು ಕಂತಿನಲ್ಲಿ ಸಾಲ ತೀರಿಸುತ್ತಿದ್ದರು. ಶಾಸ್ತ್ರಿಯವರು ನಿಧನರಾದಾಗ 4,600 ರೂ. ಸಾಲ ಬಾಕಿ ಉಳಿದಿತ್ತು. ಈ ಸುದ್ದಿ ಹೇಗೋ ಪತ್ರಕರ್ತರಿಗೆ ಗೊತ್ತಾಯಿತು. ಮರುದಿನ ಪತ್ರಿಕೆಯಲ್ಲಿ ‘ಕಾರು ಸಾಲ ಬಾಕಿ ಉಳಿಸಿಕೊಂಡ ಭಾರತದ ಪ್ರಧಾನಿ” ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು. ಲಲಿತಾ ಶಾಸ್ತ್ರಿಯವರಲ್ಲಿ ಹಣವಿರಲಿಲ್ಲ. ಈ ಸುದ್ದಿ ಕಾಳ್ಗಿಚ್ಚಿನಂತೆ ದೇಶವ್ಯಾಪಿ ಹರಡಿತು. ಪತ್ನಿ ಲಲಿತಾ ಶಾಸ್ತ್ರಿ ಹೆಸರಿಗೆ ಒಂದು ರೂ., ಐದು ರೂ., ಹತ್ತು ರೂ., ಐವತ್ತು ರೂ.,….  ಮೊತ್ತದ ಮನಿಯಾರ್ಡರ್ ದೇಶದೆಲ್ಲೆಡೆಯಿಂದ ಹರಿದು ಬಂದವು. ಲಕ್ಷಕ್ಕೂ ಅಧಿಕ ಜನ ಹಣ ಕಳಿಸಿದ್ದರು. ಎರಡು ವರ್ಷಗಳವರೆಗೆ ಪ್ರತಿದಿನ ಮನಿಯಾರ್ಡರ್ ಬರುತ್ತಿತ್ತು.ಆದರೆ ಲಲಿತಾ ಶಾಸ್ತ್ರಿ ಆ ಎಲ್ಲ ಹಣವನ್ನು ವಾಪಸ್ ಮಾಡಿದರು.

ಒಮ್ಮೆ ಶಾಸ್ತ್ರಿಯವರ ಮಗ, ಹೇಳದೇ ಕೇಳದೇ ಪ್ರಧಾನಿ ಮನೆ ಮುಂದೆ ನಿಲ್ಲಿಸಿಟ್ಟಿದ್ದ ಕಾರನ್ನು ಓಡಿಸಿಕೊಂಡು ಹೋದ. ಈ ವಿಷಯ ಹೇಗೋ ಶಾಸ್ತ್ರಿಯವರಿಗೆ ತಿಳಿಯಿತು. ಮಗನನ್ನು ಕರೆದು ಎಲ್ಲಿಗೆ ಹೋಗಿದ್ದೀಯಾ ಎಂದು ಕೇಳಿದರು. ಸಹಾಯಕನನ್ನು ಕರೆದು, “ನನ್ನ ಮಗ 14 ಕಿ.ಮೀ. ದೂರ ಕಾರು ಓಡಿಸಿಕೊಂಡು ಹೋಗಿದ್ದಾನೆ. ಅದನ್ನು ‘ಸ್ವಂತ ಬಳಕೆ” ಎಂದು ನಮೂದಿಸು. ಆ ಹಣವನ್ನು ನನ್ನಿಂದ ತೆಗೆದುಕೋ” ಎಂದರು. ಆ ಬಾಬತ್ತು ಎಂಟು ರೂ.ಗಳನ್ನು ಶಾಸ್ತ್ರಿಯವರು ಸರಕಾರಕ್ಕೆ ಪಾವತಿ ಮಾಡಿದ್ದರು!

ಆ ಎರಡು ದಿನ  ಸುನಿಲ್ ಶಾಸ್ತ್ರಿ ತಮ್ಮ ತಂದೆಯವರ ಬದುಕಿನ ಅನೇಕ ಪ್ರಸಂಗಗಳನ್ನು ಹೇಳಿದರು. ನಾನು ವರ್ತಮಾನಕ್ಕೆ ಅವನ್ನು ಅನ್ವಯಿಸುತ್ತಿದ್ದರೆ ತಾಳ-ಮೇಳವಾಗುತ್ತಿರಲಿಲ್ಲ. ಶಾಸ್ತ್ರಿಯಂಥ ವ್ಯಕ್ತಿ ನಮ್ಮ ಸಾರ್ವಜನಿಕ ಜೀವನದಲ್ಲಿದ್ದರು ಎಂಬುದೇ ಅದ್ಭುತ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸುನಿಲ್ ಶಾಸ್ತ್ರಿಯವರನ್ನು ಕೈಕುಲುಕಿ ಬೀಳ್ಕೊಡುವಾಗ ಅವರ ಕಣ್ಣುಗಳಲ್ಲಿ ನಾನು ಏನನ್ನೋ ಹುಡುಕುತ್ತಿದ್ದೆ.ಲಾಲ ಬಹಾದೂರ್ ಶಾಸ್ತ್ರಿಯವರಿಗೆ ವಂದಿಸಿದೆ.

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: