ವಿಶ್ವದ ಎರಡನೆ ಶ್ರೀಮಂತ ಶ್ರೀಸಾಮಾನ್ಯನಂತೆ ಸುಖವಂತ! – Warren Edward Buffett, Second Richest Man in world!

ತನ್ನ ಮಾತು, ಕೃತಿ, ಸಾಧನೆಯಿಂದಲೇ ಇಡೀ ಜನಾಂಗಕ್ಕೆ ಆದರ್ಶವಾಗಿರುವ ವಾರೆನ್‌ ಎಡ್ವರ್ಡ್‌ ಬಫೆ ಎಂಬ ಈ ಅಜ್ಜನಿಗೆ ‘ನಿನ್ನ ಸಂದೇಶವೇನು’ ಅಂತಕೇಳಿದರೆ, ‘ನಿಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡಿಕೊಂಡು ಹೋಗಿ ಸಾಕು’ ಅಂತಾನೆ.
Warren Edward Buffett, a wealthy American investor and businessman‘‘ನಾನು ಅತ್ಯಂತ ಶ್ರೀಮಂತನಾಗುತ್ತೇನೆಂಬ ಸಂಗತಿ ನನಗೆ ಚೆನ್ನಾಗಿ ತಿಳಿದಿತ್ತು. ಈ ಬಗ್ಗೆ ಒಂದೇ ಒಂದು ಕ್ಷಣ ನನ್ನಲ್ಲಿ ಸಂದೇಹ ಸುಳಿಯಲಿಲ್ಲ’’ ಎಂದ ಆ ವ್ಯಕ್ತಿ ಕಳೆದ ಒಂದು ವಾರದಿಂದ ತಲೆಯಾಳಗೆ ಕುಳಿತಿದ್ದಾನೆ. ಅವನದೇ ಯೋಚನೆ. ಅವನ ಕುರಿತ ಪುಸ್ತಕ ಓದುತ್ತಿದ್ದರೆ ಈ ಕಾಲದಲ್ಲಿ ಹೀಗೆಲ್ಲ ಆಗಲು ಸಾಧ್ಯವಾ, ಇವೆಲ್ಲ ನಿಜವಾ ಎಂದೆನಿಸುತ್ತದೆ. ಆದರೆ ಒಪ್ಪಿಕೊಳ್ಳದೇ ಬೇರೆ ದಾರಿಯಿಲ್ಲ. ಅವೆಲ್ಲವನ್ನೂ ಸಾಧಿಸಿದ ಅವನೇ ನಮ್ಮ ಮುಂದಿದ್ದಾನೆ.

ಅವನ ಹೆಸರು ವಾರೆನ್‌ ಎಡ್ವರ್ಡ್‌ ಬಫೆ! ಜಗತ್ತಿನ ಎರಡನೆಯ ಶ್ರೀಮಂತ. ಮೈಕ್ರೊಸಾಫ್ಟ್‌ ಕಂಪನಿಯ ಬಿಲ್‌ಗೇಟ್ಸ್‌ ನಂತರದ ಸ್ಥಾನ ಇವನಿಗೇ. ಆದರೆ ಬಿಲಗೇಟ್ಸ್‌ಗೂ ಇವನಿಗೂ ಅಜಗಜಾಂತರ. ಆತ ದುಡ್ಡು ಮಾಡಿದ್ದೇ ಬೇರೆ. ಈತಮಾಡಿದ ರೀತಿಯೇ ಬೇರೆ. ಶ್ರೀಮಂತಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ಗೇಟ್ಸ್‌ ಎಲ್ಲರಿಗೂ ಗೊತ್ತು. ಎರಡನೆ ಸ್ಥಾನದಲ್ಲಿರುವ ಬಗ್ಗೆ ಹೆಚ್ಚು ಮಂದಿಗೆ ಗೊತ್ತಿಲ್ಲ.

ಅವೆಲ್ಲಕ್ಕಿಂತ ಮುಖ್ಯವಾಗಿ ಬಫೆ ಹಣ ಮಾಡಿದ ರೀತಿಯಿದೆಯಲ್ಲ ಅದ್ಭುತಅದ್ಭುತ. ಬಬ್ಬ ವ್ಯಕ್ತಿ ಧೈರ್ಯ ಹಾಗೂ ಬುದ್ಧಿವಂತಿಕೆಯಿಂದ ಎಂಥ ಎತ್ತರಕ್ಕೆ ಏರಬಲ್ಲ ಎಂಬುದಕ್ಕೆ ಬಫೆ ಸಾಕ್ಷಿ. ಅವನ ಕುರಿತಪುಸ್ತಕ ಓದಿ (Buffett : The Making of an American Capitalist) ಕೆಳಗಿಟ್ಟ ಬಳಿಕ ಸಹ ನಂಬಲು ಸಾಧ್ಯವಾಗುತ್ತಿಲ್ಲ, ಇವೆಲ್ಲ ಸಾಧ್ಯಾನಾ? ಇವೆಲ್ಲ ಹೇಗೆ ಸಾಧ್ಯವಾಯಿತು? ವೃತ್ತಪತ್ರಿಕೆಯನ್ನು ಮನೆಮನೆಗೆ ಹಾಕುತ್ತಿದ್ದ ಹುಡುಗನೊಬ್ಬ 46 ಶತಕೋಟಿ ಡಾಲರ್‌ ಕಂಪನಿಗೆ ಒಡೆಯನಾಗಬಹುದಾ? ಬಬ್ಬ ಸಾಮಾನ್ಯ ಬ್ರೋಕರ್‌ನ ಮಗ 63 ಕಂಪನಿಗಳ ಮಾಲೀಕನಾಗಬಹುದಾ?

ಬಹಳ ಕಷ್ಟಪಟ್ಟು ಇವೆಲ್ಲವನ್ನೂ ನಂಬುತ್ತಿದ್ದೇನೆ. ಆತ ಅಷ್ಟೊಂದು ಹಣ ಗಳಿಸಿದ ಬಳಿಕ ಅನುಮಾನವಿಲ್ಲ. ಆದರೆ ಗಳಿಸಿದ ರೀತಿ, ವಿಧಾನ ಮಾತ್ರ ಅಬ್ಬಬ್ಬಾ. ಹಾಗಂತ‘ದೋ ನಂಬರ್‌ ಬಿಸಿನೆಸ್‌’ ಅಲ್ಲ. ಎಲ್ಲವೂ ಪ್ರಾಮಾಣಿಕವಾಗಿ ಗಳಿಸಿದ್ದು. ತಲೆಹೊಡೆದು ಹಣ ಮಾಡಿದ್ದಲ್ಲ.

ಅಷ್ಟಕ್ಕೂ ವಾರೆನ್‌ ಬಫೆ ಮೂಲತಃ ಸ್ಟಾಕ್‌ ಬ್ರೋಕರ್‌. ಸ್ಟಾಕ್‌ ಬ್ರೋಕರ್‌ನ ಮಗ. ಅಮೆರಿಕದ ನೆಬ್ರಸ್ಕಾದವನು. ತನ್ನ ತಂದೆಯ ಜತೆ ಬ್ರೋಕರ್‌ ಕೆಲಸ ಮಾಡುತ್ತಿದ್ದ. ಬೆಳಗ್ಗೆ ಪತ್ರಿಕೆ ವಿತರಣೆ , ಅನಂತರ ಶಾಲೆ ಹಾಗೂ ಮಧ್ಯಾಹ್ನದ ನಂತರ ತಂದೆ ಬಳಿ ಬಂದು ಕುಳಿತುಕೊಳ್ಳುತ್ತಿದ್ದ. ಆತ ಮೊದಲ ಷೇರನ್ನು ಖರೀದಿಸಿದಾಗ ಹನ್ನೊಂದು ವರ್ಷ ವಯಸ್ಸು.

ಮೂವತ್ತೆಂಟು ಡಾಲರ್‌ಗೆ ಖರೀದಿಸಿ ನಲವತ್ತಕ್ಕೆ ಮಾರಾಟ ಮಾಡಿದ. ಷೇರು ವಹಿವಾಟಿನಲ್ಲಿ ಎರಡು ಡಾಲರ್‌ ಗಳಿಸಿದಾಗ, ಈ ದಂಧೆಯಲ್ಲಿ ವಿಪರೀತ ಹಣ ಮಾಡಹುದೆಂದು ಅನಿಸಿತು. ಆ ಷೇರು ವ್ಯವಹಾರವನ್ನೇ ತನ್ನ ಜೀವನದ ಗುರಿಯಾಗಿಸಿಕೊಳ್ಳಲು ಅಂದೇ ನಿರ್ಧರಿಸಿದ. ಈ ಎರಡು ಡಾಲರ್‌ ಲಾಭದಿಂದ ಚಿಗುರಿದ ಆಸೆ ಮತ್ತ್ತಷ್ಟು ಷೇರು ಖರೀದಿಸುವಂತೆ ಪ್ರೇರೇಪಿಸಿತು. ಅದು ಅವನಿಗೆ ಇನ್ನೂರು ಡಾಲರ್‌ಲಾಭತಂದುಕೊಟ್ಟಿತು. ಹಾಗಂತ ಪತ್ರಿಕೆ ಹಂಚುವುದನ್ನು ಬಿಟ್ಟಿರಲಿಲ್ಲ. ಹದಿನಾಲ್ಕನೇ ವಯಸ್ಸಿನಲ್ಲಿ ಪತ್ರಿಕೆ ಹಂಚುವುದರಿಂದ ಕೂಡಿಟ್ಟ 1200 ಡಾಲರ್‌ ಹಣದಿಂದ ಸ್ವಲ್ಪ ಜಮೀನನ್ನು ಖರೀದಿಸಿ ಅದನ್ನು ರೈತರಿಗೆ ಬಾಡಿಗೆಗೆ ಕೊಟ್ಟ. ಹಣ ಮಾಡುವ ಅದಮ್ಯ ಆಸೆ ಆಗಲೇ ಆಕಾಶಕ್ಕೆ ಚಾಚಲಾರಂಭಿಸಿತ್ತು.

ಆದರೆ ತಂದೆಯ ಒತ್ತಾಯಕ್ಕೆ ಬಿದ್ದು ಬಫೆ ವಿದ್ಯಾಭ್ಯಾಸದತ್ತ ಗಮನಹರಿಸಿದ. ಆದರೂ ಷೇರು ವ್ಯವಹಾರದ ಮೇಲೆಯೇ ಮನಸ್ಸು ಹೋಗಿ ಕುಳಿತುಕೊಳ್ಳುತ್ತಿತ್ತ್ತು. ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್‌ ಸ್ಕೂಲ್‌ ಹಾಗೂ ನ್ರೆಸ್ಕಾ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಓದಿದ. ಈ ಸಂದರ್ಭದಲ್ಲಿ ಬೆಂಜಮಿನ್‌ ಗ್ರಾಹಮ್‌ ಬರೆದ ‘ದಿ ಇಂಟೆಲಿಜೆಂಟ್‌ ಇನ್ವೆಸ್ಟರ್‌’ ಎಂಬ ಕೃತಿ ಓದಿದ.

ಗ್ರಾಹಮ್‌ ಆಗ ಕೊಲಂಬಿಯಾ ಬಿಜಿನೆಸ್‌ ಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಹಾಗೂ ಜಿ.ಇ.ಐ.ಸಿ.ಓ ಎಂಬ ವಿಮಾ ಕಂಪನಿಯಲ್ಲಿ ನಿರ್ದೇಶಕರಲೊಬ್ಬನಾಗಿದ್ದ. ಅರ್ಥಶಾಸ್ತ್ರದಲ್ಲಿ ಮಾಸ್ಟರ್‌ ಡಿಗ್ರಿ ಪಡೆದ ಬಳಿಕ ಸ್ವತಃ ಗ್ರಾಹಮ್‌ ತನ್ನ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ. ಆದರೆ ಬಫೆ ಒಪ್ಪಿಕೊಳ್ಳಲಿಲ್ಲ. ತನ್ನ ತಂದೆಯ ಬ್ರೋಕರ್‌ ಕಂಪನಿಯಲ್ಲಿ ಸೇಲ್ಸ್‌ಮನ್‌ ಆಗಿ ಕೆಲಸ ಮಾಡಲಾರಂಭಿಸಿದ. ಗ್ರಾಹಮ್‌ ನಿವೃತ್ತ್ತನಾದ ನಂತರ ಅವನ ಕಂಪನಿ ಸೇರಿದ ಬಫೆ ಅಲ್ಲಿ ಎರಡು ವರ್ಷ ಕೆಲಸ ಮಾಡಿ ಅಲ್ಲಿ ತನಕ ಕೂಡಿಟ್ಟ 1.40 ಲಕ್ಷ ಡಾಲರ್‌ನಿಂದ ‘ಬಫೆ ಅಸೋಸಿಯೇಟ್ಸ್‌ ಲಿಮಿಟೆಡ್‌’ ಆರಂಭಿಸಿದ. ಆಗ ಬಫೆಗೆ 26 ವರ್ಷ.

ಈ ಸಂದರ್ಭದಲ್ಲಿ ಬಫೆಗೆ ಚಾರ್ಲಿ ಮುಂಗರ್‌ ಎಂಬಾತನ ಪರಿಚಯವಾಯಿತು. ಇಬ್ಬರೂ ಶೀಘ್ರ ಸ್ನೇಹಿತರಾದರು. ತನ್ನ ಜತೆ ಈತನನ್ನು ಇಟ್ಟುಕೊಂಡ. ಬಫೆಯ ಯಶಸ್ಸಿನಲ್ಲಿ ಈತನ ಪಾಲೂ ಇದೆ. ಈ ಸಮಯದಲ್ಲಿ ಬಫೆ ತನ್ನ ಜೀವಮಾನದ ಮಹತ್ವದದ ನಿರ್ಧಾರಕ್ಕೆ ಮುಂದಾದ.

ಬರ್ಕ್‌ಷೈರ್‌ ಹಾಥವೇ ಎಂಬ ಟೆಕ್ಸ್‌ ಟೈಲ್ಸ್‌ ಕಂಪನಿಯ ಶೇ. 49ರಷ್ಟು ಷೇರುಗಳನ್ನು ಖರೀದಿಸಿದ. ಆಗ ಪ್ರತಿ ಷೇರು 8 ಡಾಲರ್‌ಗಿಂತ ಕಡಿಮೆಗೆ ಮಾರಾಟವಾಗುತ್ತಿತ್ತು. ಅದಾಗಿ ಮೂರು ವರ್ಷಗಳ ನಂತರ ಬರ್ಕ್‌ ಷೈರ್‌ ಹಾಥವೇ ಹೆಚ್ಚಿನ ಷೇರುಗಳನ್ನು ಖರೀದಿಸಿ ಕಂಪನಿ ಮೇಲೆ ಸಂಪೂರ್ಣ ಹಿಡಿತಸಾಧಿಸಿದ. ಆಗ ಬಫೆಗೆ 37 ವರ್ಷ! ಬಕ್‌ಷೈರ್‌ ಹಾಥವೇ ಬಫೆಯ ಭವಿಷ್ಯವನ್ನೇ ಬದದಲಿಸಿತು. ಇಂದು 46 ಶತಕೋಟಿ ಅಮೆರಿಕನ್‌ ಡಾಲರ್‌ ಮೌಲ್ಯದ ಈ ಕಂಪನಿಗೆ ಬಫೆಯೇ ಯಜಮಾನ. ಎರಡನೆ ಅತ್ಯಂತ ಶ್ರೀಮಂತ ಎಂ ಅಭಿದಾನ.

ಇದಾದ ನಂತರ ಬಫೆ ಮುಟ್ಟಿದ್ದೆಲ್ಲ ಚಿನ್ನ. ದೊಡ್ಡ ಪ್ರಮಾಣದಲ್ಲಿ ಷೇರು ವಹಿವಾಟಿನಲ್ಲಿ ತೊಡಗಿಸಿಕೊಂಡ ಆತ, ಕಂಪನಿಗಳನ್ನೇ ಖರೀದಿಸಲಾರಂಭಿಸಿದ. ದೊಡ್ಡ ಕಂಪನಿಗಳಲ್ಲಿ ಬಂಡವಾಳ ಹೂಡಲಾರಂಭಿಸಿದ. ಇದರ ಫಲವಾಗಿ ವಾಷಿಂಗ್ಟನ್‌ ಪೋಸ್ಟ್‌ ಕಂಪನಿ, ಎಬಿಸಿ, ಕೋಕಾ-ಕೋಲಾ, ವೆಲ್ಸ್‌ ಫಾರ್ಗೋ, ಅಮೆರಿಕನ್‌ ಎಕ್ಸ್‌ಪ್ರೆಸ್‌ ಮುಂತಾದ ಕಂಪನಿಗಳ ಷೇರುಗಳನ್ನು ಖರೀದಿಸಲಾರಂಭಿಸಿದ.

ಕೋಕಾ-ಕೋಲಾ ಕಂಪನಿಯಾಂದರಲ್ಲೇ 1.02 ಶತಕೋಟಿ ಡಾಲರ್‌ಗೆ ಶೇ. 7ರಷ್ಟು ಷೇರು ಖರೀದಿಸಿದ. ಬಫೆ ಯಾವುದಾದರೂ ಕಂಪನಿಯ ಷೇರುಗಳ ಬಗ್ಗೆ ಮಾತನಾಡಿದರೆ, ರಾತ್ರಿ ಬೆಳಗಾಗುವುದರೊಳಗೆ ಆ ಕಂಪನಿಯನ್ನೇ ಖರೀದಿಸುವುದು ಗ್ಯಾರಂಟಿ ಎಂದು ಜನ ಮಾತಾಡಿಕೊಳ್ಳುತ್ತಿದ್ದರು. ಮರುದಿನ ಬೆಳಗಾದರೆ ಆ ಮಾತು ನಿಜವಾಗಿರುತ್ತಿತ್ತು.

ಒಮ್ಮೆ ಬಫೆಗೆ ಫ್ಯಾಕ್ಸ್‌ ಬಂತು. ಫಾರೆಸ್ಟ ರಿವರ್‌ ಕಂಪನಿಯ ಸಲಹೆಗಾರನ ಫ್ಯಾಕ್ಸ್‌ ಸಂದೇಶವದು. ‘‘ಈ ಕಂಪನಿ ಮಾರಾಟಕ್ಕಿದೆ. 800 ದಶಲಕ್ಷ ಡಾಲರ್‌ಗೆ ಖರೀದಿಸಬಹುದು’’ ಎಂದು ಸಲಹೆಗಾರ ತಿಳಿಸಿದ್ದ. ಆ ಕಂಪನಿಯ ಕಿರುಪರಿಚಯ ಬರೆದಿದ್ದ. ಅಲ್ಲಿ ತನಕ ಆ ಹೆಸರಿನ ಕಂಪನಿಯಾಂದಿದೆ ಎಂಬುದು ಸಹ ಬಫೆಗೆ ಗೊತ್ತಿರಲಿಲ್ಲ. ಆದರೆ ಆ ಫ್ಯಾಕ್ಸ್‌ನಲ್ಲಿದ್ದ ಒಂದು ಅಂಶ ಬಫೆಗೆ ಹಿಡಿಸಿತು- ‘ಕಂಪನಿಯು ದೊಡ್ಡ ಪ್ರಮಾಣದ ಮಾರುಕಟ್ಟೆ ಹೊಂದಿದೆ ಹಾಗೂ ಸ್ವಲ್ಪ ಆರ್ಥಿಕ ಹೊರೆ ಹೊಂದಿದೆ.’

ಮರುದಿನವೇ ಫಾರೆಸ್‌ರಿವರ್‌ ಸ್ಥಾಪಕ ಮಾಲೀಕ ಪೀಟರ್‌ಲೀಗಲ್‌ನ ಕಚೇರಿಯಲ್ಲಿ ಬಫೆ ಕುಳಿತಿದ್ದ. ಬಫೆ ಒಂದು ಮೊತ್ತ ಸೂಚಿಸಿದ. ಪೀಟರ್‌ನ ಮುಖದಲ್ಲಿ ಸಮ್ಮತಿ ಕಾಣಲಿಲ್ಲ. ಎರಡನೆ ಮೊತ್ತ ಹೇಳಿದ. ‘ಡೀಲ್‌’ ಮುಗಿದುಹೋಯಿತು. ಕೇವಲ ಇಪ್ಪತ್ತು ನಿಮಿಷಗಳಲ್ಲಿ ಮಾತುಕತೆ ಕೊನೆಗೊಂಡಿತು! ಬಫೆಯ ಧೈರ್ಯ, ಕಾರ್ಯವೈಖರಿ ಕಂಡು ಪೀಟರ್‌ ಹೇಳಿದ- ‘ಡ್ರೆೃವಿಂಗ್‌ ಲೈಸೆನ್ಸ್‌ನ್ನು ನವೀಕರಿಸುವುದಕ್ಕಿಂತ ಸುಲಭವಾಗಿ ಕಂಪನಿಯನ್ನು ಮಾರಬಹುದು ಅಥವಾ ಖರೀದಿಸಹುದು ಎಂಬುದು ಗೊತ್ತಿರಲಿಲ್ಲ.’

ಬಫೆಯ ಅಸ್ತ್ರ ಧೈರ್ಯ ಹಾಗೂ ವೇಗ. ಜತೆಗೆ ದೂರದೃಷ್ಟಿ. ಬೇರೆಯವರು ಯೋಚಿಸುವ ಮೊದಲೇ ಆತನಿರ್ಧರಿಸುತ್ತಿದ್ದ. ಇಲ್ಲದಿದ್ದರೆ ಬಫೆಗೆ ವಿಮೆಯಿಂದ ಹಿಡಿದು ಐಸ್‌ಕ್ರೀಮ್‌ವರೆಗೆ 63 ಕಂಪನಿಗಳನ್ನು ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಸಾವಿರಾರು ಕಂಪನಿಗಳಲ್ಲಿ ಬಂಡವಾಳ ತೊಡಗಿಸಲು ಸಾಧ್ಯವಾಗುತ್ತಿರಲಿಲ್ಲ. ಜಗತ್ತಿನ 48ಕ್ಕೂ ಹೆಚ್ಚು ದೇಶಗಳಲ್ಲಿ ವ್ಯಾಪಾರ-ವಹಿವಾಟು ಮಾಡಲು ಸಾಧ್ಯವಾಗುತ್ತಿರಲಿಲ್ಲ. 136 ಶತಕೋಟಿ ಡಾಲರ್‌ ವಹಿವಾಟು ಮಾಡಲು ಸಾಧ್ಯವಾಗುತ್ತಿರಲಿಲ್ಲ. 46ಶತಕೋಟಿ ಡಾಲರ್‌ ಬೃಹದ್ಭವ್ಯ ಸಾಮ್ರಾಜ್ಯಕ್ಕೆ ಒಡೆಯನಾಗಲಾಗುತ್ತಿರಲಿಲ್ಲ.

ಒಮ್ಮೆ ಸಿಎನ್‌ಬಿಸಿ ಟಿವಿ ಸಂದರ್ಶಕನ ಜತೆ ಮಾತಾಡುವಾಗ ಬಫೆ ಹೇಳಿದ್ದ-‘ನಾನು ನನ್ನ ಹನ್ನೊಂದನೇ ವಯಸ್ಸಿನಲ್ಲಿ ಮೊದಲ ಷೇರನ್ನು ಖರೀದಿಸಿ ಲಾಭ ಮಾಡಿದೆ. ಈಗ ನನಗನಿಸುತ್ತಿದೆ ನಾನು ಬಹಳ ತಡವಾಗಿ ಈ ರಂಗ ಪ್ರವೇಶಿಸಿದೆನೆಂದು. ಈ ಬಗ್ಗೆ ನನಗೆ ಯಾವತ್ತೂ ವಿಷಾದವಿದೆ.’ ಬಫೆ ಅದೆಂಥ ವೇಗದಲ್ಲಿ ಹೊರಟಿರ ಹುದು ಊಹಿಸಿ.

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: