ಸುಮ್ಮನೆ ಕೂತು ಕಂಪ್ಲೇಟು ಗೊಣಗೋ ಮುಖಗಳೇ ನೆನಪಿಲ್ಲ – Protect yourself from chatter boxes!

ಕೆಲವೊಮ್ಮೆ ಅಪರಿಚಿತ ಸ್ಥಳಗಳಲ್ಲಿ, ಅಪರಿಚಿತರೊಂದಿಗೆ ನಾವೇ ಏನನ್ನಾದರೂ ಮಾತಾಡಲಿಕ್ಕೆ ಟೆಂಪ್ಟ್‌ ಆಗಿ ಬಿಡುತ್ತೇವೆ. ನಮಗೇ ಗೊತ್ತಿಲ್ಲದೆ ಹರಟೆಗಿಳಿದು ಬಿಡುತ್ತೇವೆ. ಇಂತಹ ಸಮಯದಲ್ಲಿ ಮಿತಭಾಷಿಗಳು ಕೂಡ ಮಾತಿಗಿಳಿದು ಮಲ್ಲರಾಗಿಬಿಡುತ್ತಾರೆ.

ಆತ ಮಾತಾಡುತ್ತಿದ್ದ.

ಮಾತಾಡುತ್ತಲೇ ಇದ್ದ. ತೀರ ಸ್ವಗತ ಎಂಬಂತೇನೂ ಅಲ್ಲ. ಎದುರಿಗೆ ಕುಳಿತಿದ್ದ ನಾವೇ ನಾಲ್ಕೈದು ಜನರ ಮುಖ ನೋಡಿಕೊಂಡು ನಮ್ಮ ಪ್ರತಿಕ್ರಿಯೆಗೆ ಸಂಬಂಧವೇ ಇಲ್ಲದಂತೆ, ಪ್ರತಿಕ್ರಿಯೆಯ ನಿರೀಕ್ಷೆಯೂ ಇಲ್ಲದವನಂತೆ ಸುಮ್ಮನೆ ಮಾತನಾಡುತ್ತಿದ್ದ. ಬಹುಷಃ ಆತ ಅಲ್ಲಿನ ಬ್ಯಾಂಕೊಂದರ ಅಧಿಕಾರಿಯಿರಬೇಕು. ಎಲ್ಲಿಂದಲೋ ವರ್ಗಾ ಆಗಿ ಬಂದಿದ್ದ. ಒಬ್ಬಂಟಿಯಾಗಿ ರೂಮು ಗೀಮು ಮಾಡಿಕೊಂಡು ಕಾಲಕಳೆಯುತ್ತಿದ್ದನೇನೊ? ಈ ಊರು ಸರಿಯಲ್ಲ, ಜನ ಬಲು ದಡ್ಡರು, ದುಡ್ಡು ಮಾಡುವುದೇ ಗೊತ್ತಿಲ್ಲ, ಇಲ್ಲಿ ಟೈಂಪಾಸ್‌ ಆಗೋದಿಲ್ಲ. ತಿಂದದ್ದು ಮೈಗೆ ಹತ್ತಲ್ಲ, ಕುಡಿದಿದ್ದು ತಲೆಗೆ ಹತ್ತಲ್ಲ, ಜನಕ್ಕೆ ಸಾಲ ತಗೊಳ್ಳೋದೊಂದೇ ಗೊತ್ತು… ಹೀಗೆ ಮಾತಾಡುತ್ತ ಹೋದ ಆತನಿಗೆ ಇಡೀ ಜಗತ್ತಿನ ವಿರುದ್ಧವೇ ಕಂಪ್ಲೇಟಿದೆ ಅನ್ನಿಸಿತು.

ಆತ ನಮ್ಮೊಂದಿಗೆ ಮಾತಾಡದಿದ್ದರೂ ನಡೀತಿತ್ತು. ನಮಗಾತ ಪರಿಚಿತನಲ್ಲ. ಆತನ ಮಾತು ಕೇಳಿಸಿಕೊಳ್ಳುವ ಯಾವ ಉತ್ಸಾಹವೂ ನಮಗಿರಲಿಲ್ಲ. ನಮ್ಮ ಉಪೇಕ್ಷೆ ಕೂಡ ಆತನಿಗೆ ಗೊತ್ತಾಗುತ್ತಿರಲಿಲ್ಲ.

ಕೆಲವರು ಹಾಗೆ ಬಸ್‌ಸ್ಟಾಪುಗಳಲ್ಲಿ, ಥೇಟರಿನ ಕ್ಯೂಗಳಲ್ಲಿ, ದೇವಸ್ಥಾನಗಳ ಬಳಿ, ಕಾಫಿ ಹೌಸ್‌ಗಳಲ್ಲಿ ಸುಮ್ಮನೆ ಕುಳಿತು

ಮಾತನಾಡುತ್ತಿರುತ್ತಾರೆ. ಇಂಥ ವಿಷಯವೇ ಆಗಬೇಕೆಂದಿಲ್ಲ. ಇಂಥವರೊಂದಿಗೇ ಮಾತನಾಡಬೇಕು ಅಂತಲೂ ಇಲ್ಲ. ದುರಂತವೆಂದರೆ ಅಂಥವರ ಮಾತಿಗೆ ಅರ್ಥವಿರುವುದಿಲ್ಲ. ಹೆಚ್ಚೆಂದರೆ ಕಂಪ್ಲೇಂಟುಗಳಿರುತ್ತವೆ. ಅಸಲಿಗೆ ಮಾತಿನಲ್ಲೊಂದು ಪ್ರೀತಿ ಇರುವುದಿಲ್ಲ ! ಪ್ರೀತಿ -ಯಾವುದರ ಬಗ್ಗೆಯೂ ಇರುವುದಿಲ್ಲ. ಒಬ್ಬ ಮನುಷ್ಯ ಪ್ರೀತಿಯಿಂದ ಹಕ್ಕಿಗಳ ಬಗ್ಗೆ , ಮಕ್ಕಳ ಬಗ್ಗೆ, ಮಳೆಯ ಬಗ್ಗೆ, ಕಡೆಗೆ ಬೀದಿನಾಯಿಗಳ ಬಗ್ಗೆ ಮಾತಾಡಿದರೂ ಕುಂತು ಕೇಳಬಹುದು. ಆದರೆ ಯಾವುದರ ಬಗ್ಗೆಯೂ ಪ್ರೀತಿಯಿಲ್ಲದೆ ಮಾತನಾಡುವವನನ್ನು ಸಹಿಸಿಕೊಳ್ಳಲಾಗದು. ಎರಡನೆಯದಾಗಿ, ಮಾತಾಡುವವನು ಸೊಗಸಾದ ಚತುರ ಸಂಭಾಷಣೆಕಾರನೇ ಆಗಿರಬೇಕೆಂದಿಲ್ಲ. ತುಂಬ ಓದಿಕೊಂಡ ಪಂಡಿತನೇ ಆಗಿರಬೇಕೆಂದಿಲ್ಲ. ಆದರೆ ತನಗೆ ತಿಳಿಯದ ವಿಷಯಗಳ ಬಗ್ಗೆ ಮಾತನಾಡಲು ಹೊರಟರೆ ಎಂಥ ಪಂಡಿತನೇ ಆದರೂ ಸಹಿಸಿಕೊಳ್ಳುವುದು ಕಷ್ಟ. ಕೆಲವರು ಹಾಗೆ ಗೊತ್ತಿಲ್ಲದ ವಿಷಯದ ಬಗ್ಗೆ ಗಂಟೆಗಟ್ಟಲೆ ಮಾತನಾಡುತ್ತಿರುತ್ತಾರೆ. ಅವರಿಗೊಂದು ಅಭಿರುಚಿ ಅಂತ ಇರುವುದಿಲ್ಲ. ಇಂಥವರೊಂದಿಗೆ ಇಂಥ ವಿಷಯ ಮಾತನಾಡಬೇಕು ಎಂಬ ನಿಗದಿತ ನಿಯಮವಿರುವುದಿಲ್ಲ. ಕೇಳುವವರೊಬ್ಬರು ಸಿಕ್ಕರೆ ಎಷ್ಟು ಹೊತ್ತು ಬೇಕಾದರೂ ಮಾತನಾಡುತ್ತಿರುತ್ತಾರೆ.

ಮೂರನೆಯವರದು, ಉದ್ರಿ ಹರಟೆ ಅಂತೀವಲ್ಲ? ಆ ವೆರೈಟಿಯ ಮಾತು. ಅವರಿಗೆ ಮಾತನಾಡುವುದಕ್ಕೆ ಕಾರಣವೇ ಇರುವುದಿಲ್ಲ. ಮಾತು ವ್ಯಾವಹಾರಿಕೆವಾಗಿಯೂ ಇರುವುದಿಲ್ಲ. ಪ್ರೀತಿಯಿಲ್ಲದ, ಅಭಿರುಚಿಯಿಲ್ಲದ, ಸೊಗಸಾದ ಸಂಭಾಷಣೆಕಾರನಲ್ಲದ ವ್ಯಕ್ತಿಯ ಮಾತುಗಳನ್ನು ಕೂಡ- ಒಂದು ವ್ಯವಹಾರವಿತ್ತು ಅಂದರೆ ಸಹಿಸಿಕೊಳ್ಳಬಹುದು. ಅಂಥ ವ್ಯಾವಹಾರಿಕ ಮಾತುಗಳನ್ನು ನಾವು ದಿನವಿಡೀ ಅಪರಿಚಿತರೊಂದಿಗೆ, ಗಿರಾಕಿಗಳೊಂದಿಗೆ, ಆಟೋದವರೊಂದಿಗೆ, ಪ್ಯಾಸೆಂಜರುಗಳೊಂದಿಗೆ ಆಡುತ್ತಿರುತ್ತೇವೆ. ಅಲ್ಲಿ ಕಡ್ಡಿ ತುಂಡು ಮಾಡಿದಂಥ ಒಂದು ವ್ಯವಹಾರವಾದರೂ ಇರುತ್ತದೆ. ಅಂಥ ಮಾತು ಅಸಹನೀಯವಲ್ಲ. ಆದರೆ ಅಭಿರುಚಿ, ಪ್ರೀತಿ, ವ್ಯವಹಾರ ಈ ಮೂರು ಇಲ್ಲದ ವ್ಯಕ್ತಿಗಳೊಂದಿಗೆ ಏನು ಮಾತಾಡುವುದು?

ಇದು ಗೊತ್ತಿದ್ದರೂ, ಕೆಲವೊಮ್ಮೆ ಅಪರಿಚಿತ ಸ್ಥಳಗಳಲ್ಲಿ, ಅಪರಿಚಿತರೊಂದಿಗೆ ನಾವೇ ಏನನ್ನಾದರೂ ಮಾತಾಡಲಿಕ್ಕೆ tempt ಆಗಿ ಬಿಡುತ್ತೇವೆ. ನಮಗೇ ಗೊತ್ತಿಲ್ಲದೆ ಹರಟೆಗಿಳಿದು ಬಿಡುತ್ತೇವೆ. ಮುಖ್ಯವಾಗಿ ಬಸ್ಸು, ರೈಲು , ಏರ್‌ಪೋರ್ಟು, ಥೇಟರು ಮುಂತಾದ ಕಡೆ ಅನಿವಾರ್ಯವಾಗಿ ಕಾಯುವ ಪ್ರಮೇಯ ಬರುತ್ತದಾದ್ದರಿಂದ ಮಿತಭಾಷಿಗಳು ಕೂಡ ಮಾತಿಗಿಳಿದು ಮಲ್ಲರಾಗಿಬಿಡುತ್ತಾರೆ. ಹಾಗೆ ನಮಗೇ ಗೊತ್ತಿಲ್ಲದೆ ಹರಟೆಗಿಳಿದಾಗ ಥಟ್ಟನೆ ಒಂದು ಹಂತದಲ್ಲಿ ಮಾತು ನಿಲ್ಲಿಸಿ ನಾನು ಕೇವಲ ಕಂಪ್ಲೇಂಟುಗಳನ್ನು ಹೇಳುತ್ತಿದ್ದೇನಾ? ಈ ಬಸ್ಸು ಸರಿಯಲ್ಲ, ಇಂಡಿಯಾನೇ ಹೀಗೆ, ಕ್ರಿಕೆಟ್ಟಿನಲ್ಲಿ ನಮ್ಮವರು ಸೋತು ಸುಣ್ಣವಾದರು, ಇಂಗ್ಲಿಷರ ಆಡಳಿತವೇ ಸರಿಯಿತ್ತು.-ಅಂತೆಲ್ಲ ವ್ಯವಸ್ಥೆಯನ್ನ್ನು ದೂರುತ್ತಿದ್ದೇವಾ ಎಂದು ಕೇಳಿಕೊಳ್ಳಬೇಕು. ನಾವು ಕೇವಲ ದೂರುತ್ತಿದ್ದೇವೆ, ಆಕ್ಷೇಪಿಸುತ್ತಿದ್ದೇವೆ, ಕಣ್ಣೆದುರಿಗಿಲ್ಲದ ವ್ಯಕ್ತಿ ಅಥವಾ ವ್ಯವಸ್ಥೆಯ ವಿರುದ್ಧ ಗೊಣಗುತ್ತಿದ್ದೇವೆ ಅನ್ನಿಸಿದಾಗ ಕೂಡಲೆ ಮಾತು ನಿಲ್ಲಿಸಬೇಕು. ಹಾಗೆ ದೂರುವುದರಿಂದ ಕಾರಣವನ್ನ ಸರಿ ಮಾಡಲು ಸಾಧ್ಯವಿಲ್ಲ. ಸುತ್ತಲಿರುವವರಲ್ಲಿ ಜಾಗೃತಿ ಮೂಡಿಸಲಾಗುವುದಿಲ್ಲ. ಆ ಕೆಲಸಗಳಿಗೆ ಬಸ್ಟ್ಯಾಂಡು ಜಾಗವೂ ಅಲ್ಲ. ಅದಕ್ಕಿಂತ ಮುಖ್ಯವಾದ ಸಂಗತಿಯೆಂದರೆ, ನಮ್ಮಲ್ಲಿನ ಯಾವುದೋ ಅಸಮಾಧಾನ-ಅಭದ್ರತೆಗಳು ನಮ್ಮನ್ನು ಹಾಗೆ ಗೊಣಗುವಂತೆ, ಗೊರಬುವಂತೆ ಮಾಡಿರುತ್ತವೆ. ಒಬ್ಬರೇ ಕುಳಿತು ಯೋಚಿಸಿದರೆ ನಮ್ಮ ಅಸಮಾಧಾನ ಯಾವುದು ಅಂತ ನಮಗೆ ಖಚಿತವಾಗಿ ತೋಚುತ್ತದೆ. ಅದನ್ನು ಹೋಗಲಾಡಿಸಿಕೊಳ್ಳುವ ದಾರಿಯೂ ಗೋಚರಿಸುತ್ತದೆ.

ಟೈಂಪಾಸಿಗಾಗಿ, ದಾರಿ ಸಾಗುವುದಕ್ಕಾಗಿ ಹರಟುತ್ತೇವೆ ಅಂತ ನಾವು ಅಂದುಕೊಂಡಿರಬಹುದು. ಆದರೆ ನಮ್ಮ ಮಾತಿನಲ್ಲಿ ಅಭಿರುಚಿ, ಪ್ರೀತಿ ಮತ್ತು ವ್ಯಾವಹಾರಿಕೆಗಳ ಪೈಕಿ ಯಾವುದೂ ಇಲ್ಲದೆ ಹೋದರೆ, ಅದು ಕೇವಲ ಗೊಣಗುವಿಕೆಯಾಗಿ ಬಿಡುತ್ತದೆ. ಹತ್ತು ನಿಮಿಷದೊಳಗಾಗಿ ಅಲ್ಲಿರುವವರೆಲ್ಲರಿಗೂ ಬೋರು ಹೊಡೆೆದಿರುತ್ತೇವೆ.

ನಮ್ಮ ಆಫೀಸು, ಕಾಲೇಜು ಅಥವಾ ಮನೆಯ ಕುರಿತು ಅಂತಹ ಜಾಗಗಳಲ್ಲಿ ಮಾತನಾಡಲಾಗುವುದಿಲ್ಲ. ಸಾಹಿತ್ಯ, ಸಂಗೀತ, ಇನ್‌ಕಂ ಟ್ಯಾಕ್ಸು ಮುಂತಾದವು ಎಲ್ಲರಿಗೂ ರುಚಿಸುವುದಿಲ್ಲ. ಹೀಗಾಗಿ ‘‘ಈ ಸಲ ವಿಪರೀತ ಬಿಸಿಲು, ಲಾಲೂ ಬಂದ ಮೇಲೆ ರೈಲು ಸರಿಹೋಯಿತು, ರಾಜಕಾರಣಿಗಳೆಲ್ಲ ಭ್ರಷ್ಟರು’’- ಎಂಬಂಥ ಉದ್ರಿ ಟಾಪಿಕ್ಕುಗಳೇ ನಮ್ಮ ಬಾಯಿಗೆ ಸಿಗುತ್ತವೆ. ನಿರರ್ಥಕವಾಗಿ ಮಾತಾಡತೊಡಗುತ್ತೇವೆ.

ಅಂಥ ಸಂದರ್ಭಗಳಲ್ಲಿ ತಪ್ಪದೆ ನೆರವಿಗೆ ಬರುವುದು ಸಂಗೀತ ಮತ್ತು ಪುಸ್ತಕ! ಒಂದು ವಾಕ್‌ಮನ್‌ ಕಿವಿಗೆ ಹೆಟ್ಟಿಕೊಂಡು ಕೂತು ಬಿಟ್ಟರೆ ನಮ್ಮನ್ನು ಬೇರೆಯವರು ಮಾತೇ ಆಡಿಸುವುದಿಲ್ಲ. ಪುಸ್ತಕ ಹಿಡಿದು ಕುಳಿತರೆ ದಿವ್ಯ ಏಕಾಂತ. ಅದೇ ನೀವೊಂದು ಮೊಬೈಲ್‌ ಕೈಲಿಟ್ಟುಕೊಂಡು ಬಸ್‌ ಸ್ಟ್ಯಾಂಡಿಗೆ ಹೋಗಿ ನೋಡಿ? ಬಸ್ಸು ಬರುವುದಕ್ಕಿನ್ನೂ ಟೈಮಿದೆ ಅಂತಾದರೆ, ನಿಮಗೆ ಯಾರಿಗಾದರೂ ಫೋನು ಮಾಡಿ ಹರಟಬೇಕೆನ್ನಿಸುತ್ತದೆ. ಅದೂ ಯಥಾಪ್ರಕಾರ ಒಣ ಹರಟಯೇ. ಬಸ್ಸು ಬರುವ ತನಕ ನಾನಾ ನಂಬರುಗಳ ಜನಗಳೊಂದಿಗೆ ಮಾತಾಡಿರುತ್ತೇವೆ. ಅವು ಅವಶ್ಯಕತೆಯೇ ಇಲ್ಲದ ಮಾತುಗಳು.

ಬದಲಿಗೆ , ಕಂಬವೊಂದಕ್ಕೆ ಆನಿಕೊಂಡು ಪುಸ್ತಕ ಬಿಚ್ಚಿಕೊಳ್ಳಿ. ಪತ್ರಿಕೆ ಓದಲು ಕುಳಿತರೆ ‘ಮಧ್ಯದ ಪೇಜು ಕೊಡಿ’ ಅಂತ ಒಬ್ಬ ಗಂಟು ಬೀಳುತ್ತಾನೆ. ಪುಸ್ತಕ ಹಾಗಲ್ಲ. ನೀವು ಓದುತ್ತಿರುವ ಪುಸ್ತಕ ಕಂಡು ನಿಮ್ಮನೊಬ್ಬ ಅಪರಿಚಿತ ಮಾತನಾಡಿಸಿದರೆ, ಅದು ಅಭಿರುಚಿಯ ಮಾತಾಗಿರುತ್ತದೆ. ಒಬ್ಬ ಹೊಸ ಮಿತ್ರ ನಿಮ್ಮ ಗೆಳೆಯರ ಪಟ್ಟಿಗೆ ಸೇರ್ಪಡೆಯಾಗುತ್ತಾನೆ. ಹಾಗೆ ದೊರೆತ ಅನೇಕ ಮಿತ್ರರು ಇವತ್ತಿಗೂ ನನ್ನ ಸಂಪರ್ಕದಲ್ಲಿದ್ದಾರೆ.

ಸುಮ್ಮನೆ ಕುಳಿತು ಜಗತ್ತಿನ ವಿರುದ್ಧ ಕಂಪ್ಲೇಂಟು ಗೊಣಗಿದವರ ಮುಖಗಳೂ ನೆನಪಿಲ್ಲ.

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: