22 ವರ್ಷ ಪ್ರಧಾನಿ ಕಚೇರಿಯಲ್ಲಿದ್ದರೂ ಅವರು ಬಸ್ಸಿನಲ್ಲಿ ತಿರುಗುತ್ತಿದ್ದರು! – H Y Sharadaprasad, a man of distinction

ಶಾರದಾಪ್ರಸಾದ್‌ ಮೈಸೂರಿಗರು, ಅಪ್ಪಟ ಕನ್ನಡಿಗರು ಎಂಬುದೇ ಹೆಮ್ಮೆಯ ಸಂಗತಿ. ಅನೇಕ ವರ್ಷ ಕನ್ನಡ ನೆಲದಿಂದ ದೂರವಿದ್ದರೂ, ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದರೂ ಅವರು ಕನ್ನಡ ಮರೆತವರಲ್ಲ… ಅವರ ಬಗ್ಗೆ ನೂರೆಂಟು ಮಾತು.

H Y Sharadaprasadಎಚ್‌.ವೈ.ಶಾರದಾಪ್ರಸಾದ್‌ ಬಗ್ಗೆ ಹೇಳುತ್ತೇನೆ. ಅದಕ್ಕೂ ಮೊದಲು ಸುತ್ತಿಬಳಸಿ ಒಂದು ಪ್ರಸಂಗ ಹೇಳಬಹುದೇನೋ? ಸುಮಾರು ಒಂದು ವರ್ಷದ ಹಿಂದಿನ ಮಾತು. ಒಂದು ದಿನ ಬೆಳಗ್ಗೆ ಹೊಸದಿಲ್ಲಿಯಲ್ಲಿರುವ ಕೆ.ನಟವರ್‌ ಸಿಂಗ್‌ಗೆ ಪೋನ್‌ ಮಾಡಿದೆ. ಆಗ ತಾನೆ ಅವರು ಮಾಜಿ ಸಚಿವರಾಗಿದ್ದರು. ಆಹಾರಕ್ಕಾಗಿ ತೈಲ ಹಗರಣದಲ್ಲಿ ಸಿಲುಕಿದ ಆರೋಪಕ್ಕೆ ತುತ್ತಾಗಿ ವಿದೇಶಾಂಗ ವ್ಯವಹಾರಗಳ ಖಾತೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇಂಗ್ಲಿಷ್‌ ಪತ್ರಿಕೆಯಾಂದಕ್ಕೆ ಅವರು ಅಂಕಣ ಬರೆಯಲು ಒಪ್ಪಿರುವುದು ಅವರಿಂದ ಲೇಖನ ಬರೆಸುವ ಇಚ್ಛೆಯಿಂದ, ನಮಗಿಬ್ಬರಿಗೂ commnon friend ಆಗಿರುವವರಿಂದ ಪೋನ್‌ ನಂಬರ್‌ ಪಡೆದು ನಟವರ್‌ ಸಿಂಗ್‌ಗೆ ಪೋನ್‌ ಮಾಡಿದೆ. ಪತ್ರಿಕೆ ಬಗ್ಗೆ ಕೇಳಿದರು. ಅವುಗಳ ಬಗೆಗೆಲ್ಲ ಹೇಳಿದೆ. ಅಂಕಣಕಾರರ ಕುರಿತು ಕೇಳಿದರು. ಪತ್ರಿಕೆಗೆ ಬರೆಯುವ ಪ್ರಮುಖ ಅಂಕಣಕಾರರ ಬಗ್ಗೆ ಹೇಳುತ್ತಾ, ವಿಜಯ ಕರ್ನಾಟಕಕ್ಕೆ ಎಚ್‌.ವೈ.ಶಾರದಾಪ್ರಸಾದ್‌ ಸಹ ಬರೆಯುತ್ತಾರೆ ಎಂದೆ. ಆಗ ಶಾರದಾಪ್ರಸಾದ್‌ ಪ್ರತಿ ಭಾನುವಾರ ‘ಕಾಲ-ದೇಶ’ ಎಂಬ ಅಂಕಣ ಬರೆಯುತ್ತಿದ್ದರು.

ಶಾರದಾಪ್ರಸಾದ್‌ರ ಹೆಸರು ಹೇಳುತ್ತಿದ್ದಂತೆ ಒಂದು ಕ್ಷಣ ನಿಂತು ‘ಹೌದಾ ಅವರು ಬರೆಯುತ್ತಿದ್ದಾರಾ? ಗ್ರೇಟ್‌. ಹಾಗಾದರೆ ನೀವು ಅದೃಷ್ಟಶಾಲಿಗಳು. ನಿಮ್ಮದು ಪ್ರಮುಖ ಪತ್ರಿಕೆಯಾಗಿರಬೇಬೇಕು. ಅವರು ಬರೆಯುತ್ತಿದ್ದಾರೆ ಅಂದ್ರೆ ನಾನೂ ಬರೆಯುತ್ತೇನೆ ’ಎಂದರು ನಟವರ್‌ ಸಿಂಗ್‌.

ಶಾರದಾಪ್ರಸಾದ್‌ ಹೆಸರು ಹೇಳಿದ್ದೇ ತಡ ಕೆಲಸ ಆಗಿಹೋಯಿತು!

ಮುಂದಿನದೆಲ್ಲ ಉಭಯಕುಶಲೋಪರಿ. ಹಾಗೇ ಮಾತಾಡುವಾಗ ನಟವರ್‌ ಸಿಂಗ್‌ ತಮಾಷೆಯಿಂದ ‘ನನಗೆಷ್ಟು ಸಂಭಾವನೆ ಕೊಡ್ತೀರಿ? ಶಾರದಾಪ್ರಸಾದ್‌ಗೆ ಎಷ್ಟು ಕೊಡ್ತಾ ಇದ್ದೀರಿ? ’ ಎಂದು ಕೇಳಿದರು. ನಾನು ಹೇಳಿದೆ. ಹದಿನೈದಿಪ್ಪತ್ತು ಸೆಕೆಂಡ್‌ ಆ ಕಡೆಯಿಂದ ಮೌನ. ಆನಂತರ ನಟವರ್‌ ಸಿಂಗ್‌ ಮುಂದುವರಿಸಿದರು -‘ಒಂದು ಕೆಲಸ ಮಾಡಿ. ನನಗೆ ಕೊಡುವ ಸಂಭಾವನೆ ಹಣವನ್ನು ಶಾರದಾಪ್ರಸಾದ್‌ಗೆ ಕಳಿಸಿಬಿಡಿ. ಅವರಿಗೆ ಈಗ ಹಣದ ಅಗತ್ಯವಿದೆ. ಆದರೆ ಅವರು ಪರಮ ಸ್ವಾಭಿಮಾನಿ. ಬೇರೆಯವರಿಂದ ಹಣ ಕೇಳುವುದಿಲ್ಲ. ಕೊಟ್ಟರೆ ಸಿಟ್ಟಾಗುತ್ತಾರೆ.’

ಅರ್ಧಗಂಟೆ ಬಳಿಕ ಪುನಃ ನಟವರ್‌ಸಿಂಗ್‌ ಫೋನ್‌ ಬಂತು -‘ನಾನು ಜೋಕಿಗೆ ಹೇಳಿದ್ದಲ್ಲ. ಶಾರದಾ ಪ್ರಸಾದ್‌ ಅವರಿಗೆ ನನ್ನ ಸಂಭಾವನೆ ಹಣ ಕಳಿಸಿ. ಆದರೆ ಅವರಿಗೆ ಈ ವಿಷಯ ಗೊತ್ತಾಗುವುದು ಬೇಡ’ ಎಂದರು.

ನಟವರ್‌ ಸಿಂಗ್‌ ಹೇಳಿದ ಇನ್ನೊಂದು ಮಾತು ನನ್ನ ಮನಸ್ಸಿನೊಳಗೇ ಚಕ್ಳಮಕ್ಳ ಹಾಕಿ ಕುಳಿತುಕೊಂಡಿತು -ಶಾರದಾ ಪ್ರಸಾದ್‌ ನಿಜಕ್ಕೂ ಗ್ರೇಜ್‌ ಮನುಷ್ಯ. ಅವರು ಅಪ್ಪಟ ಗಾಂಧಿವಾದಿ. ಬಹಳ ವರ್ಷಗಳ ಕಾಲ ದಿಲ್ಲಿಯಲ್ಲಿ ಅವರಿಗೊಂದು ಸ್ವಂತ ಮನೆ ಸಹ ಇರಲಿಲ್ಲ. ಈ ವಿಷಯ ಹೇಗೊ ಸೋನಿಯಾ ಗಾಂಧಿಯವರಿಗೆ ಗೊತ್ತಾಯಿತು. ಶಾರದಾಪ್ರಸಾದ್‌ ಅವರಿಗೆ ಕಡಿಮೆ ಬಾಡಿಗೆ ಸರಕಾರಿ ಮನೆ ನೀಡುವಂತೆ ಸೂಚಿಸಿದರು. ತಮಗೆ ಇಂಥ ಮನೆ ಕೊಡಿಸಿ ಎಂದು ಸೋನಿಯಾ ಮುಂದೆ ಏನಿಲ್ಲವೆಂದರೂ ಹತ್ತು ಸಾವಿರ ಮಂದಿ ಅರ್ಜಿ ಹಿಡಿದು ನಿಂತಿರಬಹುದು. ಆದರೆ ಶಾರದಾಪ್ರಸಾದ್‌ ಬಹಳ ವಿನಯಪೂರ್ವಕವಾಗಿ ಇದನ್ನು ತಿರಸ್ಕರಿಸಿದರು. ಸೈಟು ನೀಡಲು ಸರ್ಕಾರ ಮುಂದೆ ಬಂದಾಗಲೂ ಅವರು ತೆಗೆದುಕೊಳ್ಳಲಿಲ್ಲ. ಇಂಥ ವ್ಯಕ್ತಿಗಳು ಈ ಕಾಲದಲ್ಲೂ ಇದ್ದಾರೆ ಅಂದ್ರೆ ನಂಬುವುದು ಕಷ್ಟ. ಅವರೆಂಥ ಸರಳ ಜೀವನ ನಡೆಸುತ್ತಿದ್ದಾರೆಂಬುದನ್ನು ನೋಡಲು ಅವರ ಮನೆಗೊಮ್ಮೆ ಹೋಗಿ ನೋಡಿ.

ಕಳೆದ ವರ್ಷ ನಮ್ಮ ಹೊಸದಿಲ್ಲಿ ವರದಿಗಾರ ಅಶೋಕ್‌ರಾಮ್‌ ಜತೆಗೆ ಶಾರದಾಪ್ರಸಾದ್‌ ಮನೆಗೆ ಹೋದಾಗ, ನಟವರ್‌ ಸಿಂಗ್‌ ಹೇಳಿದ್ದರಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲವೆನಿಸಿತು. ದಿಲ್ಲಿಯ ಹೊರವಲಯದಲ್ಲಿರುವ ವಯಸ್ಸಾದ ಫ್ಲಾಟೊಂದರ ಎರಡನೆ ಮಹಡಿಯಲ್ಲಿ ಶಾರದಾ ಪ್ರಸಾದ್‌ ಹಾಗೂ ಅವರ ಪತ್ನಿ ವಾಸವಾಗಿದ್ದರು. ಮನೆ ಬಾಗಿಲು ತಟ್ಟಿದಾಗ ಸ್ವತಃ ಅವರೇ ಕೋಲೂರುತ್ತಾ ಬಂದು ಬಾಗಿಲು ತೆರೆದರು.

ಅದಕ್ಕೂ ಮೊದಲು ಮೂರ್ನಾಲ್ಕು ಸಲ ಫೋನಿನಲ್ಲಿ ಮಾತಾಡಿದ್ದೆ. ಅವರಿಂದ ಅಂಕಮ ಬರೆಸಲು ಒಪ್ಪಿಸುವ ತನಕ ಸಾಕೋಸಾಕಾಗಿತ್ತು. ಕನ್ನಡದಲ್ಲಿ ಬರೆಯಲು ಸಾಧ್ಯವಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂಗ್ಲಿಷ್‌ ಲೇಖನ ತರ್ಜುಮೆ ಮಾಡಿಬಳಸಿಕೊಳ್ಳುತ್ತೇವೆ ಎಂದಾಗ ‘ಅನುವಾದ ಬಹಳ ಕಷ್ಟ. ಮೂಲ ಲೇಖಕನಿಗೆ ಯಾವತ್ತೂ ನಿಷ್ಠವಾಗಿ ಇರುವುದು ಅಸಾಧ್ಯ’ ಎಂದು ನನ್ನ ಮನವಿಯನ್ನು ತಿರಸ್ಕರಿಸುತ್ತಲೇ ಇದ್ದರು. ಕೊನೆಗೆ ‘ನಾನೇ ಅನುವಾದಿಸುತ್ತೇನೆ, ನಿಮಗೆ ನಿಷ್ಠನಾಗಿರುತ್ತೇನೆ’ ಎಂದು ಮನವರಿಕೆ ಮಾಡಿಕೊಟ್ಟಾಗಲೇ ಶಾರದಾಪ್ರಸಾದ್‌ ಅಂಕಣಕ್ಕೆ ಅನುಮತಿ ನೀಡಿದ್ದು.

ಅಂದು ಶಾರದಾಪ್ರಸಾದ್‌ರೊಂದಿಗೆ ಅವರ ಮನೆಯಲ್ಲಿ ನಾನು ಎರಡು ಗಂಟೆ ಕಳೆದಿರಬಹುದು. ಮನೆತುಂಬಾ ಹಳೇ ಪುಸ್ತಕ, ಹಳೇ ಫೋಟೊ ಹಾಗೂ ಹಳೇ ಪೀಠೋಪಕರಣಗಳನ್ನು ಬಿಟ್ಟರೆ ಆಧುನಿಕವೆನಿಸುವಂಥ ಯಾವ ಸಾಮಾನುಗಳು ಅಲ್ಲಿರಲಿಲ್ಲ. ಗೋಡೆ ಸುಣ್ಣಬಣ್ಣ ಕಾಣದೇ ಆನೇಕ ವರ್ಷಗಳಾಗಿರಬಹುದು. ಮನೆಯ ಚಾವಣಿ ಅಲ್ಲಲ್ಲಿ ಕಿತ್ತು ಹೋಗಿದ್ದವು. ಲಿಫ್ಟ್‌ ಸಹ ಇಲ್ಲದ ಫಾಟು ಅದು.ಇಡೀ ಮನೆಯನ್ನು ಪುಸ್ತಕಗಳೇ ಆವರಿಸಿದ್ದವು.

ನಿವೃತ್ತ ಸಾಮಾನ್ಯ ಸರಕಾರಿ ನೌಕರನೊಬ್ಬನ ಕ್ವಾರ್ಟರ್ಸ್‌ನಂತೆ ಕಂಗೊಳಿಸುತ್ತಿದ್ದ ಆ ಮನೆಯ ಯಜಮಾನ, ಭಾರತದ ಅತ್ಯಂತ ಪ್ರಭಾವಶಾಲಿ ಪ್ರಧಾನಮಂತಿ ಇಂದಿರಾಗಾಂಧಿ ಸೇರಿದಂತೆ ಮೂವರು ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರಾಗಿದ್ದರು ಎಂದರೆ ಯಾರೂ ನಂಬುವಂತಿರಲಿಲ್ಲ. ಸಾಮಾನ್ಯ ಸರ್ಕಾರಿ ನೌಕರನೂ ಇಂದು ಬಂಗಲೆ ಕಟ್ಟಿಸುತ್ತಾನೆ, ಕಾರನ್ನಿಟ್ಟುಕೊಂಡಿರುತ್ತಾನೆ. ಆದರೆ ಪ್ರಧಾನಮಂತ್ರಿ ಕಾರ್ಯಾಲಯದಂಥ ದೇಶದ ಆಯಕಟ್ಟಿನ ಪೌವರ್‌ ಹೌಸ್‌ನಲ್ಲಿ ಸುಮಾರು ಇಪ್ಪತ್ತೆರಡು ವರ್ಷಗಳ ಕಾಲ ಕಳೆದ ವ್ಯಕ್ತಿಯ ಮನೆಯಾ ಇದು ಎಂದು ಪದೇ ಪದೆ ಕೇಳಿಕೊಳ್ಳುವ ಹಾಗೆ, ಕೇಳಿಕೊಂಡರೂ ಎದುರಾಎದುರು ನೋಡಿದರೂ ನಂಬದ ಹಾಗೆ, ಇಂಥವರೂ ಈ ಕಾಲದಲ್ಲಿ ಇರ್ತಾರಾ ಎಂದು ನಮ್ಮನ್ನೇ ಸಂಶಯಿಸಿಕೊಳ್ಳುವ ಹಾಗೆ, ಶಾರದಾಪ್ರಸಾದ್‌ ಇದ್ದರು. ಅವರ ಮನೆಯೂ ಹಾಗಿತ್ತು.

ಇಂದಿರಾಗಾಂಧಿ ಪ್ರಧಾನಿಯಾಗಿದ್ದಷ್ಟು ಕಾಲ ಶಾರದಾಪ್ರಸಾದ್‌ ಮಾಧ್ಯಮ ಸಲಹೆಗಾರರಾಗಿದ್ದರು. ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದಾಗಲೂ ನಾಲ್ಕು ವರ್ಷ ಅದೇ ಹುದ್ದೆಯಲ್ಲಿದ್ದರು. ಮೊರಾರ್ಜಿ ದೇಸಾಯಿ ಸಹ ಅವರನ್ನು ಬಿಡಲಿಲ್ಲ. ಇಂದಿರಾಗಾಂಧಿ ಅವರ ಪ್ರಮುಖ ಭಾಷಗಳೆಲ್ಲವನ್ನೂ ಬರೆದುಕೊಟ್ಟವರು ಇವರೇ. ಇಂದಿರಾಗೆ ತೀರಾ ಆತ್ಮೀಯರಾಗಿದ್ದ ಶಾರದಾಪ್ರಸಾದ್‌ ಎಲ್ಲೂ ತಮ್ಮ ಸ್ಥಾನಮಾನಗಳನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ಅವರು ಪ್ರಧಾನಮಂತ್ರಿ ಕಾರ್ಯಾಲಯದಲ್ಲಿದ್ದಾಗ ಬಸ್ಸಿನಲ್ಲಿ ಅನೇಕ ವರ್ಷ ತಿರುಗಾಡುವುದನ್ನು ನೋಡಿದವರಿದ್ದಾರೆ.

ಪ್ರಧಾನಮಂತ್ರಿಗಳ ಜತೆ ಸುಮಾರು 60ದೇಶಗಳಿಗೆ ಹೋಗಿ ಬಂದಿದ್ದರೂ, ಈ ಬಗ್ಗೆ ಯಾರಾದರೂ ಕೇಳದಿದ್ದರೆ ಪ್ರಸ್ತಾಪಿಸದಷ್ಟು ಸಕ್ಷಿಂಕೋಚ ಸ್ವಭಾವದವರು. ಶಾರದಾಪ್ರಸಾದ್‌ರನ್ನು ಭೇಟಿಯಾದಾಗ ತಾನು ಪ್ರಧಾನಿ ಕಾರ್ಯಾಲಯದಲ್ಲಿದ್ದೇನೆ, ಪ್ರಧಾನಿಗೆ ಮೀಡಿಯಾ ಅಡ್ವೈಸರ್‌ ಆಗಿದ್ದೇನೆ ಎಂದು ಹೇಳಲು ಸಹಾ ಅವರು ಹಿಂದೆಮುಂದೆ ನೋಡುತ್ತಿದ್ದರು. ಇಂದಿರಾಗೆ ಇವರ ಮೇಲೆ ಅದೆಂಥ ನಿಷ್ಠೆ, ನಂಬಿಕೆಯಿತ್ತೆಂದರೆ ನೆಹರು ನಿಧನದ ಎಷ್ಟೋ ವರ್ಷಗಳ ಬಳಿಕ ಅಲಹಾಬಾದ್‌ನಲ್ಲಿದ್ದ ಅವರ(ನೆಹರು) ಆಲ್ಮೇರಾದೊಳಗೆ ಇರುವ ಸಾಮಾನುಗಳನ್ನು ತರಲು ಇಂದಿರಾ, ಶಾರದಾಪ್ರಸಾದ್‌ಗೆ ಕೀಲಿ ಕೊಟ್ಟು ಕಳುಹಿಸಿದ್ದರು!

ಇಂಥ ಶಾರದಾಪ್ರಸಾದ್‌ ಮೈಸೂರಿಗರು, ಅಪ್ಪಟ ಕನ್ನಡಿಗರು ಎಂಬುದೇ ಹೆಮ್ಮೆಯ ಸಂಗತಿ. ಅನೇಕ ವರ್ಷ ಕನ್ನಡ ನೆಲದಿಂದ ದೂರವಿದ್ದರೂ, ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದ್ದರೂ ಅವರು ಕನ್ನಡ ಮರೆತವರಲ್ಲ. ಪ್ರಧಾನಿ ಕಚೇರಿಯಲ್ಲಿ ಕೈತುಂಬಾ ಕೆಲಸಗಳ ನಡುವೆ ಸ್ವಲ್ಪ ಸಮಯ ಸಿಕ್ಕರೂ ಏನಾದರೂ ಸಾಹಿತ್ಯ ಚಟುವಟಿಕೆಗಳಲ್ಲಿ ನಿರತರಾಗುತ್ತಿದ್ದರು. ಶಿವರಾಮ ಕಾರಂತರ ಕುಡಿಯರ ಕೂಸು(Headman of the Little Hill), ಮೈಮನಗಳ ಸುಳಿಯಲ್ಲಿ(The woman of Basrur), ಹಕ್ಷಿುಚ್ಚು ಮನಸ್ಸಿನ ಹತ್ತು ಮುಖಗಳು(The Faces of a crazy mind) ಕಾದಂಬರಿಗಳನ್ನು ಇಂಗ್ಲಿಷಿಗೆ ಅನುವಾದಿಸಿದ್ದು ಹೀಗೇ. ಆರ್‌.ಕೆ.ನಾರಾಯಣ್‌ರ Swami and His Friends ಪುಸ್ತಕವನ್ನು ಕನ್ನಡಕ್ಕೂ ಅನುವಾದಿಸಿದ್ದಾರೆ. ಕರ್ನಾಟಕ ಅಂದ್ರೆ ಏನೆಂಬುದನ್ನು ತಿಳಿಯಲು Exploring Karnataka ಎಂಬ ಕೃತಿಯನ್ನು ಓದಬೇಕು.

ಅಕ್ಷರಶಃ ಅವರು ಶಾರದೆಯ ಪ್ರಸಾದವೇ. ಸಾಹಿತ್ಯ, ಸಂಗೀತ, ಸೌಂದರ್ಯ, ಕಲೆ, ಕ್ರಿಕೆಟ್‌, ರಾಜಕೀಯ ಹಾಗೂ ಇತಿಹಾಸದಲ್ಲಿ ಅವರ ಜ್ಞಾನ ಅಗಾಧವಾದುದು. ಈ ವಿಷಯಗಳಲ್ಲಿನ ದಿಗ್ಗಜರೊಂದಿಗೆ ಅವರಿಗೆ ಒಡನಾಟವೂ ಇತ್ತು. ಎಂ.ಎಸ್‌. ಸುಬ್ಬುಲಕ್ಷ್ಮಿ, ಮಲ್ಲಿಕಾರ್ಜುನ ಮನ್ಸೂರ್‌, ಕೆ.ಕೆ.ಹೆಬ್ಬಾರ್‌, ಗಂಗೂಬಾಯಿ ಹಾನಗಲ್‌ ಮುಂತಾದವರಿಗೆ ದಿಲ್ಲಿಯ ಶಾರದಾಪ್ರಸಾದ್‌ ಮನೆಯಲ್ಲೊಂದು ಆತಿಥ್ಯ ಸದಾ ತೆರೆದಿರುತ್ತಿತ್ತು.

ಶಾರದಪ್ರಸಾದ್‌ ಭಾರತದ ರಾಜಕಾರಣಿಗಳ ಬಗ್ಗೆ ಬರೆದ ಬರಹಗಳಲ್ಲಿ ಅವರ ಗ್ರಹಿಕೆಯ ಆಳವೇನೆಂಬುದು ಗೊತ್ತಾಗುತ್ತದೆ. ಇಂದಿರಾಗಾಂಧಿ ತುರ್ತು ಸ್ಥಿತಿ ವಿಧಿಸಿದ್ದರ ಹಿನ್ನೆಲೆಯನ್ನು ಸಾಧ್ಯಂತವಾಗಿ ವಿವರಿಸಿ ಬರೆದ ಲೇಖನ ಅನೇಕ ಸೂಕ್ಷ್ಮಒಳನೋಟಗಳನ್ನು ಬಿಟ್ಟುಕೊಟ್ಟರೂ, ತಮ್ಮ ಬಾಸ್‌ ಬಗ್ಗೆ ಅವರು ಕಾಪಾಡಿಕೊಂಡು ಬಂದ ಗುಟ್ಟನ್ನು ಬಿಟ್ಟುಕೊಡುವುದಿಲ್ಲ. ಇಲ್ಲೂ ಅವರನ್ನು ಕಾಡಿದ್ದು ವೃತ್ತಿ ಹಾಗೂ ವ್ಯಕ್ತಿನಿಷ್ಠೆ. ತುರ್ತುಸ್ಥಿತಿ ಬಗ್ಗೆ ಅವರು ಹೇಳುತ್ತಾ ಹೇಳುತ್ತಾ ಎಲ್ಲೋ ಏನೋ ಮುಚ್ಚಿಡುತ್ತಿದ್ದಾರೇನೋ ಎಂದೆನಿಸುತ್ತದೆ.

ಕೆಲ ದಿನಗಳ ಹಿಂದ ಶಾರದಾಪ್ರಸಾದ್‌ ಬರೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಖ್ಯಾತ ಇತಿಹಾಸ ಬರಹಗಾರ ರಾಮಚಂದ್ರ ಗುಹಾ ಹೇಳಿದ ಮಾತುಗಳು ನೆನಪಾಗುತ್ತವೆ -‘ಶಾರದಾಪ್ರಸಾದ್‌ ಅಂದ್ರೆ ನನ್ನ ಕಣ್ಮುಂದೆ ಬರುವುದು ಒಬ್ಬ ನಾಗರಿಕ, ಸುಸಂಸ್ಕೃತ, ಸಜ್ಜನ, ಸರಳ ವ್ಯಕ್ತಿತ್ವದ ಸಾಕಾರಮೂರ್ತಿ. ನಾನು ನೋಡಿರುವ ಅತ್ಯಂತ ಸಿವಿಲೈಜ್ಡ್‌ ವ್ಯಕ್ತಿ ಅಂದ್ರೆ ಶಾರದಾಪ್ರಸಾದ್‌’. ಅವರನ್ನ ಕಂಡ, ಒಡನಾಡಿದ ಯಾರೇ ಆಗಲಿ, ಹೇಳಬಹುದಾದ ಮಾತು ಸಹ ಇದೇ. ಯಾಕೆಂದರೆ ಅವರು ಇದಲ್ಲದೇ ಬೇರೇನೂ ಅಲ್ಲ.

ದಿಲ್ಲಿಯ ಅಧಿಕಾರದ ಅಂತಃಪುರದಲ್ಲಿ ಶಾರದಾಪ್ರಸಾದ್‌ರಷ್ಟು ದೀರ್ಘಕಾಲ ಬಾಳಿಕೆ, ತಾಳಿಕೆ ಬಂದ ಮತ್ತೊಬ್ಬ(ಕನ್ನಡಿಗ) ಇಲ್ಲ. ಆದರೂ ಅವರು ಎಲೆಮರೆಯ ಕಾಯಿ ಹಾಗೆ ಇರಬಯಸುವವರು.

ಮೊನ್ನೆಮೊನ್ನೆಯ ತನಕವೂ ಲವಲವಿಕೆಯಿಂದ ಬರೆಯುತ್ತಿದ್ದ ಶಾರದಾಪ್ರಸಾದ್‌ ಅನಾರೋಗ್ಯಕ್ಕೆ ಬಿದ್ದಿದ್ದಾರೆ. ಎಂಬತ್ನಾಲ್ಕರ ಈ ವಯಸ್ಸಿನಲ್ಲಿ ಪುನಃ ಮೊದಲಿನಂತೆ ಬರೆಯುವುದು ಸಾಧ್ಯವಾಗಲಿಕ್ಕಿಲ್ಲ. ಈ ಅನಾರೋಗ್ಯವೇ ವಿಜಯಕರ್ನಾಟಕಕ್ಕೆ ಅವರು ಬರೆಯುತ್ತಿದ್ದ ಅದ್ಭುತವೆನಿಸುವ ಅಂಕಣವನ್ನು ಬಲಿ ತೆಗೆದುಕೊಂಡಿತು.

ಶಾರದಾಪ್ರಸಾದ್‌ ಪುನಃ ಬರೆಯುವಂತಾದರೆ ಎಂಥ ಚೆನ್ನ!

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: