Indian political humor:Nothing to laugh about – ನಮ್ಮ ರಾಜಕಾರಣಿಗಳೇಕೆ ನಗಿಸೊಲ್ಲ, ನಗಲು ಬಿಡೊಲ್ಲ?

ನೆನಪಿನ ಜೋಳಿಗೆಯನ್ನು ಸ್ವಲ್ಪ ತಡಕಾಡಿ. ಸಾಧ್ಯವಾದರೆ ದೇವೇಗೌಡರು ಹೇಳಿದ ಒಂದು ಜೋಕು, ಒಂದು ಸ್ವಾರಸ್ಯಕರ ಪ್ರಸಂಗ, ಒಂದು ಹಾಸ್ಯಮಯ ಘಟನೆಯನ್ನು ಹೇಳಿ ನೋಡೋಣ. ಉಹುಂ, ಸಾಧ್ಯವೇ ಇಲ್ಲ. ಅವರು ಜೀವನದಲ್ಲಿ ನಕ್ಕಿಲ್ಲ. ಅಷ್ಟೇ ಅಲ್ಲ ಬೇರೆಯವರಿಗೆ ನಗಲೂ ಬಿಟ್ಟಿಲ್ಲ.

ಹೋಗಲಿ ಬಿಡಿ. ಸೋನಿಯಾ ಗಾಂಧಿ, ಡಾ. ಮನಮೋಹನ್ ಸಿಂಗ್ ಹೇಳಿದ ಜೋಕು ನಿಮಗೆ ನೆನಪಿದೆಯಾ? ಇರಲಿಕ್ಕಿಲ್ಲ. ಯಾಕೆಂದರೆ ಅವರು ಇಲ್ಲಿಯತನಕ ಜೋಕ್ ಹೇಳಿಯೇ ಇಲ್ಲ.  ಅವರೂ ಬೇರೆಯವರನ್ನು ನಗಿಸಿದ್ದು ಕಡಿಮೆ, ನಕ್ಕಿದ್ದೂ ಕಡಿಮೆಯೇ. ಆಡ್ವಾಣಿ, ರಾಜನಾಥ್‌ಸಿಂಗ್, ಕಾರಟ್, ಯೆಚೂರಿ, ಜಯಲಲಿತಾ, ಕರುಣಾನಿಧಿ, ಶರದ್ ಪವಾರ್, ಬಾಳ್‌ಠಾಕ್ರೆ, ಬುದ್ಧದೇವ್ ಭಟ್ಟಾಚಾರ್ಯ, ಕರುಣಾಕರನ್, ಮಮತಾ ಬ್ಯಾನರ್ಜಿ, ಮಾಯಾವತಿ… ಇವರ ಬಾಯಲ್ಲಿ ಜೋಕು ಸಿಡಿದಿದ್ದನ್ನು ಕೇಳಿದ್ದೀರಾ, ನೋಡಿದ್ದೀರಾ? ನೆನಪಿನ ಜೋಳಿಗೆಯನ್ನು ಎಷ್ಟೇ ತಡಕಾಡಿದರೂ ಏನೂ ನೆನಪಾಗುತ್ತಿಲ್ಲ. ಹೋಗಲಿ.

ನಮ್ಮ ಧರ್ಮಸಿಂಗ್, ಖರ್ಗೆ, ಸಿದ್ದರಾಮಯ್ಯ, ಎಚ್.ಕೆ. ಪಾಟೀಲ್, ರಾಜಶೇಖರನ್, ಆಸ್ಕರ್ ಫರ್ನಾಂಡಿಸ್, ಮಾರ್ಗರೆಟ್, ಕುಮಾರಸ್ವಾಮಿ, ರೇವಣ್ಣ, ಮೆರಾಜುದ್ದೀನ್, ಸಿಂಧ್ಯಾ, ದೇಶಪಾಂಡೆ, ಯಡಿಯೂರಪ್ಪ, ಶೆಟ್ಟರ್, ಈಶ್ವರಪ್ಪ ಸಾರ್ವಜನಿಕವಾಗಿ ಒಂದು ಒಳ್ಳೆಯ ಜೋಕನ್ನು ಹೇಳಿ ನಗಿಸಿದ್ದನ್ನು ಕೇಳಿದ್ದೀರಾ? ಒಂದು ಒಳ್ಳೆಯ ಜೋಕಿಗೆ ಬಾಯ್ತುಂಬಾ ಹೊಟ್ಟೆಬಿರಿ ನಕ್ಕಿದ್ದನ್ನು ನೋಡಿದ್ದೀರಾ?

ಅರ್ಥವಾಗೊಲ್ಲ, ನಮ್ಮ ರಾಜಕೀಯ ನಾಯಕರು ಹೀಗೇಕೆ? ತಾವೂ ನಗೊಲ್ಲ, ಬೇರೆಯವರನ್ನೂ ನಗಿಸೊಲ್ಲ, ಬೇರೆಯವರು ನಗುವುದಕ್ಕೂ ಬಿಡೊಲ್ಲ. ಸದಾ ಬೆಂದ ಆಲೂಗಡ್ಡೆಯನ್ನು ಹಿಚುಕಿದಂತೆ ಮುಖ ಕಿವುಚಿಕೊಂಡಿರುತ್ತಾರೆ. ಇಡೀ ವಿಶ್ವದ ಸಮಸ್ಯೆಗಳನ್ನೆಲ್ಲ ತಾವೇ ತಲೆ ಮೇಲೆ ಹೊತ್ತಂತಿರುತ್ತಾರೆ. ಪ್ರಧಾನಿ ಡಾ. ಮನಮೋಹನ್ ಸಿಂಗ್ ಒಂದು ಒಳ್ಳೆಯ ಜೋಕನ್ನು ಹೇಳಿದರೆ ದೇಶಕ್ಕೆ ದೇಶವೇ ನಗುತ್ತದೆ. ಬಡತನ, ಹಸಿವನ್ನು ಇವರೆಲ್ಲ ನೀಗಿಸುವುದು ಅಷ್ಟರಲ್ಲಿಯೇ ಇದೆ. ಆದರೆ ಒಂದು ಜೋಕು ಹೇಳಿ, ಜನರನ್ನು  ನಗಿಸಿ ಕ್ಷಣಹೊತ್ತಾದರೂ ಖುಷಿಯಿಂದ ಇಡಬಹುದಲ್ಲ? ಅದಕ್ಕಾಗಿ ಅವರು ಕಳೆದುಕೊಳ್ಳುವುದೇನಿಲ್ಲ. ಪ್ರಧಾನಿ ಹೇಳಿದ ಜೋಕೆಂದು ಜನ ನಕ್ಕೇ ನಗುತ್ತಾರೆ. ಆದರೂ ಅವರು ಜೋಕು ಹೇಳುವುದಿಲ್ಲ.

ಪ್ರಧಾನಿಯಾಗುವ ಮೊದಲು ಅಟಲ್ ಬಿಹಾರಿ ವಾಜಪೇಯಿ ಎಷ್ಟೊಂದು ಚೆಂದದ ಜೋಕುಗಳನ್ನು ಹೇಳುತ್ತಿದ್ದರು. ಅವರ ಭಾಷಣಕ್ಕೆ ಲಕ್ಷಾಂತರ ಜನ ಸೇರುತ್ತಿದ್ದರು. ಅವರ್‍ಯಾರೂ ಬಾಡಿಗೆ ಸಭಿಕರಲ್ಲ. ಕಾರಣ ವಾಜಪೇಯಿ ಭಾಷಣದುದ್ದಕ್ಕೂ ಜೋಕುಗಳು ಸಿಡಿಯುತ್ತಿದ್ದವು. ತಮ್ಮ ವಿರೋಧಿಗಳೂ ಇಷ್ಟಪಡುವಂತೆ ಅವರು ತಿಳಿಹಾಸ್ಯದಿಂದ ಕಿಚಾಯಿಸುತ್ತಿದ್ದರು. ವ್ಯಂಗ್ಯ, ಲೇವಡಿ, ಚಾಟೋಕ್ತಿ, ಲಘುಹಾಸ್ಯ, ವಕ್ರತುಂಡೋಕ್ತಿಗಳಿಂದ ಅವರ ಮಾತು ಸಭಿಕರನ್ನು ಸೂರೆಗೊಳ್ಳುತ್ತಿದ್ದವು. ಅವರು ಪ್ರಧಾನಿಯಾಗಿದ್ದೇ, ಮುಗಿಯಿತು ಅವರ ಮಾತಿನ ವರಸೆ. ಅಲ್ಲಿಂದ ಮುಂದೆ ಅವರು ಗಂಭೀರವದನ. ಜೋಕು ಮರೆತವರಿಗೆ ಸಮಾನ.

ಇನ್ನು ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲ, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮುಂತಾದವರು ಜೋಕು ಮಾಡೋದುಂಟಾ? ಅಪದ್ಧ, ಅಪದ್ಧ… ಅದು ಸಂವಿಧಾನಕ್ಕೇ ಅಪಚಾರ ಎಂಬಷ್ಟು ಕಟ್ಟುನಿಟ್ಟಾಗಿ ಇವರೆಲ್ಲ ಪಾಲಿಸಿಕೊಂಡು ಬಂದಿದ್ದಾರೆ. ‘ಭಾರತದ ರಾಷ್ಟ್ರಪತಿಗಳು ಹೇಳಿದ ಜೋಕುಗಳು” ಎಂಬ ಪ್ರಬಂಧ ಬರೆಯಲು ಹೇಳಿದರೆ, ನೀವು ಖಾಲಿ ಕಾಗದ ಕೊಟ್ಟರೂ ಫುಲ್ ಮಾರ್ಕ್ಸ್! ಹೇಳಿದರೆ ತಾನೆ ಬರೆಯೋದು? ರಾಷ್ಟ್ರಪತಿಯಾದರೆ ರಾಷ್ಟ್ರಪತಿಭವನದ ಕಬ್ಬಿಣ ಗೇಟಿನಂತೆ ಶಟಗೊಂಡುಬಿಡುತ್ತಾರೆ. ಐದು ವರ್ಷ ನಗಬಾರದೆಂಬ ಶಿಕ್ಷೆಗೊಳಗಾದವರಂತೆ ಇದ್ದುಬಿಡುತ್ತಾರೆ.

ಯಾಕೋ ಗೊತ್ತಿಲ್ಲ. ನಮ್ಮದು ವಿಚಿತ್ರ ದೇಶ. ಸಾರ್ವಜನಿಕ ಜೀವನದಲ್ಲಿ ಬಾಯ್ತುಂಬಾ ನಗದ ದೇಶ. ಯಾರೂ ನಗೊಲ್ಲ, ನಗಿಸೊಲ್ಲ. ಹಾಗೆಂದು ನಾವು ನಕ್ಕಿಲ್ಲವೆಂದಲ್ಲ. ಇವರನ್ನೆಲ್ಲ ನೋಡಿ ‘ಕ್ಯಾಕರಿಸಿ” ನಕ್ಕಿದ್ದೇವೆ. ಭಲೇ ಮಜಾ ತೆಗೆದುಕೊಂಡಿದ್ದೇವೆ. ಯಾಕೆಂದರೆ ಒಬ್ಬೊಬ್ಬರೂ ಒಂದೊಂದು ಐಲುಗಳೇ. ಈ ಪೈಕಿ ಕೆಲವರು ಜೋಕ್ ಹೇಳಿ ನಗಿಸದೇ ಇರಬಹುದು. ಆದರೆ ಸ್ವತಃ ತಾವೇ ಜೋಕರ್‌ಗಳಂತೆ ನಡೆದುಕೊಂಡು ನಮ್ಮನ್ನೆಲ್ಲ ನಗಿಸಿದ್ದಷ್ಟೇ ಅಲ್ಲ, ನಗೆಪಾಟಲಿಗೂ ಗುರಿಯಾಗಿದ್ದಾರೆ. ಅಷ್ಟರಮಟ್ಟಿಗೆ ಅವರ ‘ಹಾಸ್ಯಪ್ರಜ್ಞೆ”ಯನ್ನು ಪ್ರಶಂಸಿಸಲೇಬೇಕು. ಅಷ್ಟರಮಟ್ಟಿಗೆ ಸಾರ್ವಜನಿಕ ಜೀವನದಲ್ಲಿ ಹಾಸ್ಯ ಜೀವಂತವಾಗಿದೆ.

ನಾನು ಮೂರು ವರ್ಷಗಳ ಹಿಂದೆ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಜತೆ ಐಸ್‌ಲ್ಯಾಂಡ್ ಎಂಬ ದೇಶಕ್ಕೆ ಹೋಗಿದ್ದೆ. ಅಲ್ಲಿನ ಅಧ್ಯಕ್ಷ ಓಲೋಫರ್ ಗ್ರಿಮ್‌ಸನ್ ಎಂಥ  ‘ಜೋಕುಮಾರ “ನೆಂದರೆ ಮಾತುಮಾತಿಗೆ ನಗಿಸುತ್ತಿದ್ದ. ಪಕ್ಕದಲ್ಲಿದ್ದ ಸ್ಥಳೀಯ ಪತ್ರಕರ್ತನಿಗೆ “ನಿಮ್ಮ ಅಧ್ಯಕ್ಷನ ಹಾಸ್ಯಪ್ರಜ್ಞೆ  ಚೆನ್ನಾಗಿದೆ” ಎಂದು ಹೇಳಿದೆ. “ಈ ವಿಷಯದಲ್ಲಿ ನಾವು ಅದೃಷ್ಟವಂತರು. ಎಷ್ಟೋ ಸಲ ಅವರು ತಮ್ಮನ್ನು ನೋಡಿಯೇ ಹಾಸ್ಯ ಮಾಡಿಕೊಳ್ಳುತ್ತಾರೆ” ಎಂದ. ಐಸ್‌ಲ್ಯಾಂಡಿನ ಘನತೆ, ಮರ್ಯಾದೆಗೆ ಕುಂದುಂಟಾಗಿದೆಯೆಂದು ಅಲ್ಲಿನ ಜನ ಈ ತನಕ ಭಾವಿಸಿಲ್ಲ, ಪುಣ್ಯ. ಸಾಯಂಕಾಲ ಔತಣಕೂಟದಲ್ಲಿದ್ದಾಗ ಆತ ಏನಿಲ್ಲವೆಂದರೂ ಹತ್ತು-ಹನ್ನೆರಡು ಜೋಕುಗಳನ್ನು ಹೇಳಿರಬೇಕು. ನಮ್ಮ ರಾಷ್ಟ್ರಪತಿಗಳನ್ನು ನೋಡುತ್ತಿದ್ದೆ. ಒತ್ತರಿಸಿ ಬರುತ್ತಿದ್ದ ನಗುವನ್ನು ತಡೆಹಿಡಿಯುತ್ತಿದ್ದರು. ನಕ್ಕಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ.

ಖ್ಯಾತ ಡಿಪ್ಲೊಮ್ಯಾಟ್, ಅಂಕಣಕಾರ ಶಶಿ ತರೂರ್ ಕೆಲ ವರ್ಷಗಳ ಹಿಂದೆ ಬರೆದ Indian political humor : Nothing to laugh about ಪ್ರಬಂಧ ಓದುತ್ತಿದ್ದೆ. ಇಂದಿರಾ ಗಾಂಧಿಯವರ ವಿದೇಶಾಂಗ ನೀತಿ ಕುರಿತು ತರೂರ್ ಪಿಎಚ್.ಡಿ. ಪ್ರಬಂಧಕ್ಕಾಗಿ ಸಂಶೋಧನೆ ಮಾಡುತ್ತಿದ್ದರು. 1966ರಿಂದ 1977ರವರೆಗೆ ಇಂದಿರಾ ಗಾಂಧಿಯ ಪ್ರತಿ ಭಾಷಣ, ಹೇಳಿಕೆಗಳನ್ನೆಲ್ಲ ರಾಶಿ ಹಾಕಿಕೊಂಡು, ಆ ಅವಧಿಯಲ್ಲಿ ಅವರು ಹೇಳಿದ ಯಾವ ಮಾತನ್ನೂ ಬಿಡದೇ ಓದಿದರಂತೆ. ತಮಗೆ ಇಂದಿರಾ ಹೇಳಿದ ಒಂದೇ ಒಂದು ಜೋಕು ಸಹ ಸಿಗಲಿಲ್ಲ. ವಕ್ರತುಂಡೋಕ್ತಿ ಮಾದರಿಯ ಒಂದು ಹಾಸ್ಯ ಝಲಕ್ ಮಾತ್ರ ಸಿಕ್ಕಿತು ಎಂದು ತರೂರ್ ಬರೆಯುತ್ತಾರೆ. In India, our private enterprise is usually more private than enterprisnig, ಎಂಬ ಚತುರೋಕ್ತಿ ಬಿಟ್ಟರೆ, ಬೇರೆಲ್ಲ ಹೇಳಿಕೆಗಳೆಲ್ಲ ಗಂಭೀರ. ಪ್ರಾಯಶಃ  ಅದನ್ನೂ ಯಾರೋ ಬರೆದುಕೊಟ್ಟಿರಬೇಕು ಅಂತಾರೆ ತರೂರ್.

1971ರಲ್ಲಿ ಪಾಕಿಸ್ತಾನದ ಜನರಲ್ ಯಾಹ್ಯಾಖಾನ್ ಅವರನ್ನೇಕೆ ಭೇಟಿ ಮಾಡಲು ನೀವು ನಿರಾಕರಿಸಿದಿರಿ? ಎಂದು ಅಮೆರಿಕದ ಪತ್ರಕರ್ತ ಪ್ರಶ್ನಿಸಿದಾಗ ಇಂದಿರಾ ‘ಮುಷ್ಟಿ ಬಿಗಿಹಿಡಿದ ಕೈಗಳನ್ನು ಕುಲುಕುವುದು ಅಸಾಧ್ಯ” ಎಂಬ ಪ್ರತಿಕ್ರಿಯೆ ಬಹಳ ಚರ್ಚೆಯಾಗಿತ್ತು. ಇದರಲ್ಲಿ ಅವರ ಹಾಸ್ಯಪ್ರಜ್ಞೆಗಿಂತ ಸಮಯಪ್ರಜ್ಞೆಯನ್ನು ಗುರುತಿಸಬಹುದಿತ್ತು. ಇವೆರಡನ್ನು ಬಿಟ್ಟರೆ ತಮಗೆ ಬೇರೆ ಯಾವ ಚಾಟೋಕ್ತಿ, ಹಾಸ್ಯ ಅವರ ಮಾತಿನಲ್ಲಿ ಸಿಗಲಿಲ್ಲವೆಂದು ತರೂರ್ ಹೇಳಿದ್ದಾರೆ.

ಈ ವಿಷಯದಲ್ಲಿ ಇಂದಿರಾ ತಂದೆ ಜವಾಹರಲಾಲ್ ನೆಹರು ಮಗಳಂತೆಯೇ. ಉತ್ತಮ ವಾಗ್ಮಿ ಹಾಗೂ ಬರಹಗಾರರಾಗಿದ್ದ ಅವರು ಜೋಕು ಸಿಡಿಸಿದ್ದು ಇಲ್ಲವೇ ಇಲ್ಲ. ಖಾಸಗಿಯಾಗಿ ನೆಹರು ವರ್ಣರಂಜಿತ ವ್ಯಕ್ತಿಯಾಗಿದ್ದರು. ಆದರೆ ಸಾರ್ವಜನಿಕವಾಗಿ ಅವರು ಹಲಸಿನಕಾಯಿಯೇ! 1949ರಲ್ಲಿ ಮೊದಲ ಬಾರಿಗೆ ಅಮೆರಿಕಕ್ಕೆ ಹೋದಾಗ ಅಲ್ಲಿನ ದೇಶ, ವೈಭವ, ವೇಷಭೂಷಣ ಕಂಡು “ಅಮೆರಿಕಕ್ಕೆ ಎರಡು, ಮೂರನೇ ಸಲ ಬರಬಹುದು, ಆದರೆ ಯಾರೂ ಮೊದಲ ಸಲ ಬರಲೇಬಾರದು” ಎಂದು ಉದ್ಗರಿಸಿದ್ದರಂತೆ. ಇದನ್ನೇ ನೆಹರು ಪದೇಪದೆ ಹೇಳುತ್ತಿದ್ದರು.

ನೆಹರುಗೆ ನಿಕಟವರ್ತಿಯಾಗಿದ್ದ ಅವರ ಕಾರ್ಯದರ್ಶಿ ಎಂ.ಓ. ಮಥಾಯ್ reminiscences of the nehru age ಎಂಬ ಪುಸ್ತಕ ಬರೆದಿದ್ದಾರೆ. ತಂದೆ-ಮಗಳು ಮಹಾನ್ ಆಡಳಿತಗಾರರಾಗಿರಬಹುದು, ಉತ್ತಮ ನಾಯಕ, ನಾಯಕಿಯರಿರಬಹುದು. ಆದರೆ ಇಬ್ಬರಲ್ಲೂ ಹಾಸ್ಯಪ್ರಜ್ಞೆಯೇ ಇರಲಿಲ್ಲ. ಬಹಳ ಪ್ರಯಾಸಪಟ್ಟು ಮಥಾಯ್ ಒಂದು ಹಾಸ್ಯಪ್ರಸಂಗ ನೆನಪಿಸಿಕೊಂಡಿದ್ದಾರೆ. ತಾಯಿ ನಿಧನರಾದ ದಿನವೂ ಮಥಾಯ್ ಗೊರಕೆ ಹೊಡೆದು ನಿದ್ದೆ ಮಾಡಿದ್ದಕ್ಕೆ ನೆಹರು ಹಾಗೂ ಇಂದಿರಾ ಅಚ್ಚರಿ ವ್ಯಕ್ತಪಡಿಸಿದಾಗ ಮಥಾಯ್ ಹೇಳಿದರಂತೆ- “ಅದರರ್ಥ ನನ್ನ ಅಂತರಂಗ, ಆತ್ಮಸಾಕ್ಷಿ ಶುದ್ಧವಾಗಿದೆ ಎಂದಾಯಿತು.” ಅದಕ್ಕೆ ಇಂದಿರಾ ತಟ್ಟನೆ ನುಡಿದರಂತೆ- “ನಿಮಗೆ ಅದಿಲ್ಲವೆಂದೂ ಅರ್ಥೈಸಬಹುದಲ್ಲ.” ಇವನ್ನು ಬಿಟ್ಟರೆ ಮಥಾಯ್ ಅಂತ ವ್ಯಕ್ತಿಗೇ ಅವರು ಹೇಳಿದ ಜೋಕುಗಳು ಗೊತ್ತಿಲ್ಲ ಅಂದ್ರೆ ತಂದೆ-ಮಗಳು ಎಷ್ಟು ಜೋಕು ಮಾಡಿರಬಹುದು? ಯೋಚಿಸಿ.

ಮಹಾತ್ಮ ಗಾಂಧಿಯಿಂದಲೇ ಸಾರ್ವಜನಿಕಜೀವನದಲ್ಲಿ ಹಾಸ್ಯ ಮಾಯವಾಯಿತೆನಿಸುತ್ತದೆ. ಅವರು ತಮ್ಮ ಮಾತಿನಲ್ಲಿ ಹಾಸ್ಯವನ್ನು  ಒತ್ತಾಯಪೂರ್ವಕವಾಗಿ ಎಳೆದು ತಂದಿದ್ದು ಸಹ ಕಮ್ಮಿಯೇ. ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆಗೆ ಅಂಗಿಯಿಲ್ಲದೇ ಹೋಗುವುದನ್ನು ಗಮನಿಸಿದ ಯಾರೋ ಆ ಬಗ್ಗೆ ಗಾಂಧಿಯನ್ನು ಕೇಳಿದಾಗ ಅವರು ಪ್ರತಿಕ್ರಿಯಿಸಿದರಂತೆ: ‘ಹೌದು, ನಾನು ಬರಿಮೈಯಲ್ಲಿದ್ದೇನೆ. ಯಾಕೆಂದರೆ ನಿಮ್ಮ ರಾಣಿ ಇಬ್ಬರಿಗೆ ಸಾಕಾಗುವಷ್ಟು ಬಟ್ಟೆ ತೊಟ್ಟಿರುತ್ತಾರೆ.”

ಸರ್ದಾರ್ ಪಟೇಲ್, ರಾಜಾಜಿ, ಚರಣ್‌ಸಿಂಗ್, ಮೊರಾರ್ಜಿ ದೇಸಾಯಿ, ಲಾಲಬಹಾದ್ದೂರ್ ಶಾಸ್ತ್ರಿ, ಜಯಪ್ರಕಾಶ್ ನಾರಾಯಣ್, ವಿ.ಪಿ. ಸಿಂಗ್, ಚಂದ್ರಶೇಖರ್, ದೇವೀಲಾಲ್, ವೆಂಕಟರಾಮನ್, ಡಾ. ಶಂಕರ ದಯಾಳ್ ಶರ್ಮ… ಹೀಗೆ ಯಾರನ್ನೇ ನೋಡಿ, ಇವರ್‍ಯಾರೂ ಒಂದು ಜೋಕು ಹೇಳಿ ನಗಿಸಿದವರಲ್ಲ. ಸರ್ದಾರ್ ಪಟೇಲರಿಗೆ ಏನೂ ಗೊತ್ತಿಲ್ಲ ಎಂದಾಗ ಸರೋಜಿನಿ ನಾಯ್ಡು ಹೇಳಿದ್ದರಂತೆ- “ಪಟೇಲ್‌ಗೆ ಗೊತ್ತಿರುವುದು ಒಂದೇ ಕಲ್ಚರ್. ಅದು ಅಗ್ರಿಕಲ್ಚರ್.” ಸರೋಜಿನಿ ತಮ್ಮ ನವುರಾದ ಹಾಸ್ಯ ಚಟಾಕಿಯಿಂದ ನಗೆಯುಕ್ಕಿಸುತ್ತಿದ್ದರು. ಮಹಾತ್ಮ ಗಾಂಧಿಯವರ ಸರಳ ಜೀವನಶೈಲಿ ಹಾಗೂ ಸದಾ ಅವರನ್ನು ಆವರಿಸಿರುವ ಶಿಷ್ಯವೃಂದವನ್ನು ಗಮನಿಸಿ  ಸರೋಜಿನಿ ನಾಯ್ಡು ಹೇಳಿದ್ದರು- “ಗಾಂಧೀಜಿಯವರನ್ನು ಹೀಗೆ ಬಡತನದಲ್ಲಿರಿಸುವುದಕ್ಕೆ ಬಹಳ ಖರ್ಚಾಗುತ್ತದೆ.”

ಸರ್ದಾರ್ ಖುಷವಂತ್ ಸಿಂಗ್ ಹೇಳುತ್ತಾರೆ- “ಯಾವನು ನಗುವುದಿಲ್ಲವೋ, ಆತ ಮತ್ತೊಬ್ಬನನ್ನು ನಗಿಸಲಾರ. ನಗದೇ, ನಗಿಸದೇ ಇರುವ ವ್ಯಕ್ತಿ ಬೇರೆಯವರಿಗೆ ಸಂತಸ ನೀಡಲಾರ. ನಮ್ಮ ರಾಜಕಾರಣಿಗಳು ಈ ವರ್ಗಕ್ಕೆ ಸೇರಿದವರು. ಒಂದು ಸೊಗಸಾದ ಜೋಕು ಹೇಳಿದರೆ ಅವರದೇನು ಗಂಟು ಹೋಗುತ್ತದೆ? ಸಾರ್ವಜನಿಕ ಜೀವನದಲ್ಲಿ ಹಾಸ್ಯದ ಮಹತ್ವವೇ ಗೊತ್ತಿಲ್ಲ. ಯಾರೂ ಸಹ ತಮ್ಮ ಬಗ್ಗೆ ಜೋಕು ಮಾಡಿಕೊಂಡು ನಗೊಲ್ಲ. ಬೇರೆಯವರ ಬಗ್ಗೆ ಹೇಳಿದರೆ ಮಜಾ ತೆಗೆದುಕೊಳ್ಳುತ್ತಾರೆ. ನಮ್ಮಲ್ಲಿ ದಾರಿದ್ರ್ಯವೊಂದೇ ಅಲ್ಲ, ಹಾಸ್ಯದ ದಾರಿದ್ರ್ಯವೂ ಇದೆ.”

ಇಲ್ಲಿ ಕರ್ನಾಟಕದ ಇಬ್ಬರು ರಾಜಕಾರಣಿಗಳ ಬಗ್ಗೆ ಹೇಳಲೇಬೇಕು. ಒಬ್ಬರು ಜಗನ್ನಾಥರಾವ್ ಜೋಶಿ ಮತ್ತೊಬ್ಬರು ಜೆ.ಎಚ್. ಪಟೇಲ್. ಇಬ್ಬರೂ ಜೋಕು ಹೇಳದೇ ಮಾತಾಡುತ್ತಿರಲಿಲ್ಲ. ಮಾತಾಡಲಾರಂಭಿಸಿದರೆ ಜೋಕುಗಳನ್ನೇ ಹೇಳುತ್ತಿದ್ದರು. ಜಗನ್ನಾಥರಾಯರು ಹೇಳಿದ ಜೋಕುಗಳನ್ನೆಲ್ಲ ಸೇರಿಸಿದರೆ ಸುಮಾರು ಮುನ್ನೂರನ್ನು ದಾಟಬಹುದು. ಆದರೆ ಅವರ ಬತ್ತಳಿಕೆಯಲ್ಲಿ ಇನ್ನೂ ಜಾಸ್ತಿಯಿತ್ತು ಎಂದು ಜಗನ್ನಾಥರಾಯರ ಜೋಕುಗಳನ್ನು ಒಪ್ಪಿಸುವ ಸ್ನೇಹಿತ ನಾರಾಯಣ ಗಂಭೀರ ಹೇಳುತ್ತಾರೆ. ಲೋಕಸಭೆಯಲ್ಲಿ ಒಬ್ಬ ಕಾಂಗ್ರೆಸ್ ಸದಸ್ಯನಿದ್ದ. ಏನೇ ಆದರೂ ಅದಕ್ಕೆ ಜನಸಂಘ ಕೈವಾಡ ಎಂದು ದೂರುತ್ತಿದ್ದನಂತೆ. ಒಮ್ಮೆ ಜಗನ್ನಾಥರಾಯರ ಮುಂದೆ ಸ್ವೀಟ್‌ಬಾಕ್ಸ್ ಹಿಡಿದಾಗ ಅವರು ಕಾರಣ ಕೇಳಿದರಂತೆ. “ನನಗೆ ಗಂಡು ಮಗುವಾಯಿತು, ಅದಕ್ಕೆ” ಎಂದನಂತೆ. ಅದಕ್ಕೆ ಜಗನ್ನಾಥರಾಯರು ಕೇಳಿದರಂತೆ- “ಇದರಲ್ಲಿ ಜನಸಂಘದ ಕೈವಾಡ ಇಲ್ಲ ತಾನೆ?”

ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಹೇಳುತ್ತಿದ್ದ ಜೋಕನ್ನು ಅವರಿಗೆ ಆಪ್ತರಾದ ಎಂ. ಶ್ರೀನಿವಾಸ್ ನೆನಪಿಸಿದ್ದಾರೆ. ಸ್ವಲ್ಪ ಪೋಲಿಯಾಗಿದೆ, ಗೊತ್ತು. ಆದರೂ ಒಬ್ಬ ಮುಖ್ಯಮಂತ್ರಿಯಾಗಿ, ತಮ್ಮ ಬಗ್ಗೇ ಮಾಡಿಕೊಂಡ ಜೋಕಾಗಿದ್ದರಿಂದ ಹೇಳಬಹುದು.  ಪಟೇಲರು ಥಾಯ್‌ಲ್ಯಾಂಡ್‌ನಲ್ಲಿ ಲೈವ್‌ಸಂಭೋಗ ಷೋ ನೋಡಲು ಹೋಗಿದ್ದರಂತೆ. ಷೋ ನೀಡಿದ ಯುವಕನನ್ನು ಕರೆದು ಪಟೇಲರು ನಿನಗೆ ಎಷ್ಟು ಕೊಡ್ತಾರೆ ಎಂದು ಕೇಳಿದ್ದಕ್ಕೆ ಆತ  “ಪ್ರತಿ ಷೋಗೆ ಹತ್ತು ಸಾವಿರ ರೂ.” ಎಂದನಂತೆ. ಅದಕ್ಕೆ ಪಟೇಲರು ಮ್ಯಾನೇಜರ್‌ನನ್ನು ಕರೆದು “ನನ್ನನ್ನು ಸೇರಿಸಿಕೊಳ್ಳಿ. ನಾನು ಫ್ರೀ ಆಗಿ ಮಾಡುತ್ತೇನೆ” ಎಂದರಂತೆ.ಈಗ ಇಲ್ಲಿ  ನಮ್ಮೆಲ್ಲ ನಾಯಕರು ಜಗಳದ ಮೂಡಿನಲ್ಲಿದ್ದಾರೆ. ಇನ್ನು ಜೋಕೆಲ್ಲಿ?ಹೊಸವರ್ಷದಲ್ಲಿ ನಿಮ್ಮ ನಗು ಸದಾ ಬುಗ್ಗೆಯಂತೆ ಹೊಮ್ಮುತಿರಲಿ. Smile please 🙂

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: