You can make fun of others too on April 1 – ಗೊತ್ತಾಗದಂತೆ ಸಿಡಿಯುವುದು ಬಾಂಬ್ ಹಾಗೂ ನಗೆಬಾಂಬ್

ನನ್ನ ಸ್ನೇಹಿತ ಇದ್ದಕ್ಕಿದ್ದಂತೆ ಜೋರಾಗಿ ನಗಲು ಶುರು ಮಾಡಿದ. “ಪ್ರೇರಣೆಯಿಲ್ಲದೆ ಯಾಕೋ ನಗ್ತಾಯಿರೋದು?” ಅಂತ ಕೇಳಿದೆ. ಅವ, “ನಿನ್ನೆ ಜೋಕ್ ಹೇಳಿದ್ಯಲ್ಲ, ಅದನ್ನ ನೆನೆಸಿಕೊಂಡು ನಗು ಬಂತು” ಅಂದ. ಹೋಗ್ಲಿ ನಗೋದಕ್ಕೂ (ಅಷ್ಟೊಂದು) ಟೈಮ್ ಬೇಕಾ? ಏಪ್ರಿಲ್ 1ರ ನೆಪದಲ್ಲಿ ನೂರೆಂಟು ನಗೆಬಾಂಬುಗಳು. ನಗೋದಕ್ಕೆ ಏಪ್ರಿಲ್ ಒಂದೇ ಆಗಬೇಕೆಂದಿಲ್ಲ. ಈಗಲೇ ನಗಿ. ಗುಳಗುಳನೇ ಒಳಒಳಗೇ ನಗಬೇಡಿ, ಮನಬಿಚ್ಚಿ ನಗಿ. ನಿಮ್ಮಲ್ಲೂ ಬಾಂಬ್‌ಗಳಿದ್ದರೆ ನಮಗೆ ಕಳಿಸಿ, ಕ್ಷಮಿಸಿ ನಗೆಬಾಂಬುಗಳು!

ಇನ್ನು ನಾಲ್ಕು ದಿನ ಆಚೆ ಬಿದ್ದರೆ ಏಪ್ರಿಲ್ ಒಂದು. ಅದು ನಮ್ಮೆಲ್ಲರ ದಿನ. ಒಂದಲ್ಲ ಒಂದು ರೀತಿಯಲ್ಲಿ ಮೂರ್ಖರಾಗುವ ನಾವು, ಒಂದು ದಿನವಾದರೂ ಅದಕ್ಕೆಂದೇ ಮೀಸಲಿಡದಿದ್ದರೆ ಹೇಗೆ? ಮೂರ್ಖರಾಗುವುದು ತಪ್ಪಲ್ಲ. ಮೂರ್ಖರಾಗುವುದರಿಂದ ತಪ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಆದರೆ ಕೆಲವರು ಅದನ್ನೇ ಅಭ್ಯಾಸ ಅಥವಾ ಹವ್ಯಾಸ ಮಾಡಿಕೊಳ್ಳುತ್ತಾರೆ. ಇನ್ನು ಕೆಲವರು ಅದೇ ನಮ್ಮ ಕಾಪಿರೈಟ್ ಹಾಗೂ ಬರ್ಥ್‌ರೈಟ್ ಎಂಬಂತೆ ವರ್ತಿಸುತ್ತಾರೆ.

ಒಬ್ಬನ ಮೂರ್ಖತನ ಮತ್ತೊಬ್ಬನಿಗೆ ಹಾಸ್ಯ ಎಂಬ ಮಾತಿದೆ. ಅದಕ್ಕಾಗಿ ಏಪ್ರಿಲ್ ಒಂದನ್ನು `ಹಾಸ್ಯದಿನ’ವಾಗಿಯೂ ಆಚರಿಸುವುದುಂಟು. ನಮ್ಮ ಸುತ್ತಮುತ್ತ ಎಷ್ಟೊಂದು ಹಾಸ್ಯ ಪ್ರಸಂಗಗಳು ನಿತ್ಯ ನಡೆಯುತ್ತಿರುತ್ತವೆ. ಆದರೆ ಅನೇಕರು ಅವನ್ನು ಗಮನಿಸದೇ ಮೂರ್ಖರಾಗುವುದುಂಟು. ಜೀವನದಲ್ಲಿ ಹಾಸ್ಯವನ್ನು ಸೃಷ್ಟಿಸಿಕೊಳ್ಳದವರು ಮೂರ್ಖರೇ. ಹಾಗೇ ಹಾಸ್ಯವನ್ನು ಗುರುತಿಸದವರೂ. ನಮಗೆ ಗೊತ್ತಾಗದಂತೆ ಸಿಡಿಯುವುದೆಂದರೆ ಬಾಂಬ್ ಒಂದೇ ಅಲ್ಲ. ಅದು ನಗೆ ಬಾಂಬ್ ಕೂಡ ಆಗಿರಬಹುದು.

ಒಮ್ಮೆ ಮಾಸ್ಕೋದ ಉದ್ಯಾನದಲ್ಲಿ ಹೀಬ್ರೂ ವ್ಯಾಕರಣ ಪುಸ್ತಕವನ್ನು ಯಹೂದಿ ಓದುತ್ತಿದ್ದ. ಅದನ್ನು ಕಂಡ ಕೆಜಿಬಿ ಏಜೆಂಟ್ “ಹೀಬ್ರೂವನ್ನು ಯಾಕೆ ಕಲಿಯುತ್ತಿದ್ದೀಯಾ? ನಿನಗೆ ಇಸ್ರೇಲ್‌ಗೆ ಹೋಗಲು ಬಿಡೊಲ್ಲ. ಗೊತ್ತಿರಲಿ” ಎಂದು ಗದರಿದ. ಅದಕ್ಕೆ ಯಹೂದಿ ಹೇಳಿದ- “ಸ್ವರ್ಗದಲ್ಲಿ ಹೀಬ್ರೂ ಭಾಷೆ ಮಾತಾಡಬಹುದೆಂದು ಕಲಿಯುತ್ತಿದ್ದೇನೆ.” “ಅದ್ಸರಿ. ನೀನು ಹೋಗೋದು ನರಕಕ್ಕೇ ಗೊತ್ತಿರಲಿ” ಎಂ ಕೆಜಿಬಿ ಏಜೆಂಟ್. ಅದನ್ನು ಕೇಳಿ ಯಹೂದಿ ಹೇಳಿದ- “ನಾನು ಈಗಾಗಲೇ ರಷ್ಯನ್ ಭಾಷೆ ಕಲಿತಿದ್ದೇನೆ.”

ಇನ್ನೇನು ಚುನಾವಣೆ ಬರಲಿದೆ. ಮೂರ್ಖತನಕ್ಕೆ, ಹಾಸ್ಯಕ್ಕೆ ಬರವಿಲ್ಲ. ಅದಕ್ಕೂ ಮುಂಚೆ ಮೂರ್ಖರ ದಿನದ ಪ್ರಯುಕ್ತ ನಿಮಗಾಗಿ ಕೆಲ ವಕ್ರತುಂಡೋಕ್ತಿ ಹಾಗೂ ಜೋಕುಗಳು.

ದೇವರ ಲೀಲೆ- ತೆಂಗಿನ ಕಾಯಲ್ಲಿ ನೀರು.
ವ್ಯಾಪಾರಿಯ ಲೀಲೆ- ಹಾಲಿನಲ್ಲಿ ನೀರು!

***

ಪ್ರಾಣಿಗಳಿಗೆ ಅತ್ಯಂತ ಶಕ್ತಿಯುತ ಕಣ್ಣುಗಳಿವೆ ಅಂತ ಧಾರಾಳವಾಗಿ ಹೇಳಬಹುದು. ಹೇಗೆಂದರೆ, ಪ್ರಾಣಿಗಳು ಕನ್ನಡಕ ಹಾಕ್ಕೊಂಡಿರೋದನ್ನು ಯಾರಾದ್ರೂ, ಯಾವತ್ತಾದ್ರೂ ನೋಡಿದ್ದೀರಾ?

***

ಈಗ ಕಾಲ ಬದಲಾಗಿದೆ- ಜನರೆಲ್ಲಾ ಹೆಚ್ಚು ಅನುಕೂಲವಾಗಿದ್ದಾರೆ. ಕಳ್ಳರೂ ಅಷ್ಟೆ. ಈಗ ಸೈಕಲ್ ಕಳ್ಳರಿಲ್ಲ. ಇರುವವರೆಲ್ಲ ಕಾರ್ ಕಳ್ಳರೇ.

***

ಕಿಲಾಡಿ ಡಾಕ್ಟರನೊಬ್ಬ ತನ್ನ ಕ್ಲಿನಿಕ್‌ಮುಂದೆ ಹೀಗೆ ಬರೆಸಿಕೊಂಡಿದ್ದ:
ಮಹಿಳೆ ಮತ್ತು ಇತರ ರೋಗಗಳಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತದೆ!

***

ಒಂದು ಕೆಲಸವನ್ನು ಒಬ್ಬಳೇ ಹೆಂಗಸು ಒಂದು ಗಂಟೆಯಲ್ಲಿ ಮಾಡಿ ಮುಗಿಸುತ್ತಾಳೆ. ಅದೇ ಕೆಲಸ ಬೇಗ ಆಗಲಿ ಎಂದುಕೊಂಡೇ ನೀವು ನಾಲ್ಕು ಹೆಂಗಸರನ್ನು ನೇಮಿಸಿದರೆ- ಆ ಕೆಲಸ ಮುಗಿಯಲು ನಾಲ್ಕು ಗಂಟೆ ಬೇಕಾಗುತ್ತದೆ!

***

ಮನೆಯ ಗೇಟ್‌ಗಳ ಮುಂದೆ ನಾಯಿಗಳಿವೆ ಎಚ್ಚರಿಕೆ ಅಂತ ಬೋರ್ಡ್ ಹಾಕಿರ್‍ತಾರೆ ಅಲ್ವ? ಅದನ್ನು ನೋಡಿದಾಗಲೆಲ್ಲ ಆ ಮನೇಲಿ ವಾಸ ಮಾಡೋರು ಮನುಷ್ಯರೋ ಅಥವಾ ನಾಯಿಗಳೋ ಅನ್ನೋ ಪ್ರಶ್ನೆ ಎದ್ದುನಿಲ್ಲುತ್ತೆ.

***

ಹೆಂಡತಿಗೂ, ಹೆಂಡಕ್ಕೂ ಇರುವ ವ್ಯತ್ಯಾಸ ಏನೆಂದರೆ-
ಹೆಂಡ ಕುಡಿದರೆ ಅಮಲು ತಲೆಗೇರುತ್ತೆ. ಹೆಂಡತಿ ಕುಡಿದರೆ-ತಲೆಗೇರಿದ ಅಮಲು ಇಳಿಯುತ್ತೆ!

***

ಬೀಟ್‌ರೂಟ್ ತಿಂದ್ರೆ ರಕ್ತ ಜಾಸ್ತಿಯಾಗುತ್ತೆ ಅಂತಾರಲ್ಲ, ಅದೇ ನಿಜವಾದರೆ-
ಬೀಟ್‌ರೂಟ್‌ನೇ ದಾನ ಮಾಡಬಹುದು. ರಕ್ತದಾನದ ಅಗತ್ಯ ಏನಿದೆ?

***

ಬಿಳಿ ಸೀರೆ ಉಟ್ಕೊಂಡವರನ್ನು ಮೋಹಿನಿ ಅನ್ನೋದಾದರೆ-
ಬಿಳಿ ಟೀಶರ್ಟ್-ಪ್ಯಾಂಟ್ ಹಾಕ್ಕೊಂಡವರನ್ನು `ಮೋಹನ’ ಅನ್ನಬೇಕಾ?

***

ಒಂದು ಬಡಾವಣೆಯಲ್ಲಿ ಬ್ಯಾಂಕ್‌ನ ಹೊಸ ಬ್ರ್ಯಾಂಚ್ ಶುರುವಾಯ್ತು. ಒಂದು ತಿಂಗಳು ಕಳೆದ್ರೂ ಒಬ್ಬರೂ ಅಕೌಂಟ್ ಶುರು ಮಾಡಲಿಲ್ಲ. ಯಾಕಪ್ಪಾ ಹೀಗೆ ಅಂತ ಮ್ಯಾನೇಜರ್ ಬಂದು ನೋಡಿದರೆ ಸತ್ಯ ಗೊತ್ತಾಯ್ತು. ಬೋರ್ಡ್ ಬರೆದ ಭೂಪ- Locker facility available ಅಂತ ಬರೆಯುವ ಬದಲು Lockup facility available ಎಂದು ಬರೆದಿದ್ದ!

ಬೆಂಗಳೂರಿಗೆ ಈಗಲೂ ಬೆಂದಕಾಳೂರು ಅಂತ ಕರೆದ್ರೆ ಚೆಂದ. ಯಾಕೆಂದರೆ ಈ ಊರು ಎಲ್ಲರನ್ನೂ ಈಗಲೂ ಒಂದರ್ಥದಲ್ಲಿ ಬೇಯಿಸುತ್ತಲೇ ಇರುತ್ತೆ ಅಲ್ವ, ಅದಕ್ಕೆ!

***

ಪಿ.ಎಂ.= ಪ್ರೈಮ್ ಮಿನಿಸ್ಟರ್ ಅನ್ನುವುದಾದರೆ ಸಿ.ಎಂ.= ಕ್ರೈಂ ಮಿನಿಸ್ಟರ್ ಅನ್ನಬೇಕಾ?

***

ನಗರದಲ್ಲಿ ಹೆಂಗಸರು ಮನೆಯಲ್ಲಿ ನಾಯಿ ಸಾಕಲು ಇಷ್ಟಪಡುವುದಿಲ್ಲ. ಹಳಸಿದ ತಿಂಡಿ ತಿನ್ನಲು ಹೇಗಿದ್ದರೂ ಗಂಡ ಇರುವುದರಿಂದ.

***

ಹೀಗೊಂದು ಜಾಹೀರಾತು: “ನಮ್ಮ ಅಂಗಡಿಯ ಸೇಲ್ಸ್ ಕೌಂಟರ್‌ನಲ್ಲಿ ಕೆಲಸ ಮಾಡಲು ಜನ ಬೇಕಾಗಿದ್ದಾರೆ. ಸಕ್ಕರೆ ಕಾಯಿಲೆ ಇರುವವರಿಗೆ ಆದ್ಯತೆ ನೀಡಲಾಗುವುದು ಸಂಪರ್ಕಿಸಿ: ಮ್ಯಾನೇಜರ್, ರಾಘವೇಂದ್ರ ಸ್ವೀಟ್ ಮಾರ್ಟ್”.

***

`ಆ ಹೆಂಗಸು ಆಗಾಗ ನಿಮ್ಮ ಹೋಟೆಲ್‌ಗೆ ಬರುತ್ತಾಳಲ್ಲ, ಕಾರಣ’ ಗಿರಾಕಿಯೊಬ್ಬ ಹೋಟೆಲ್ ಮ್ಯಾನೇಜರ್‌ನನ್ನು ಕೇಳಿದ. `ಹೌದು ಸಾರ್, ಆಕೆ ಪ್ರತಿ ಹನಿಮೂನ್‌ಗೂ ನಮ್ಮ ಹೋಟೆಲ್‌ಗೇ ಬರುತ್ತಾಳೆ’ ಎಂದ ಮ್ಯಾನೇಜರ್.

***

ಸದಾ ಒಂದಲ್ಲ ಒಂದು ವಾದದಲ್ಲಿ ತೊಡಗಿರುವ ಸಾಹಿತಿಗೆ `ಸಂ’ `ವಾದ’ನಾ ಶೀಲ ಸಾಹಿತಿ ಅನ್ನಬಹುದು!

***

ದೇವರು ಮೊದಲು ಸಿಗರೇಟು ಕಂಡುಹಿಡಿದ. ನಂತರವಷ್ಟೇ ಅವುಗಳಿಗೆ ಒಂದು ಗತಿ ಕಾಣಿಸಲು ತುಟಿಗಳನ್ನು ಸೃಷ್ಟಿಸಿದ.

***

ಮೂರು ಜಡೆ ಹಾಕಲು ಸಾಧ್ಯವಿಲ್ಲ ನೋಡಿ, ಅದೊಂದೇ ಕಾರಣದಿಂದ ಹುಡುಗಿಯರು ಎರಡು ಜಡೆ ಹಾಕ್ಕೋತಾರೆ!

***

ಹೆಂಡತಿ ಇರುವ ಕಡೆಯೇ ಕೆಲಸ ಮಾಡಿದ್ರೆ ಬ್ಯಾಡಾ ಫಜೀತಿ. ಬಾಸ್‌ಗಿಂತ ಹೆಂಡ್ತಿ ಕೈಲೇ ವಿಪರೀತ ಬೈಸಿಕೊಳ್ಳಬೇಕಾಗುತ್ತೆ!

***

ಡಾ. ಏಕಾಂತ್ ಅವರ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಿತ್ತು. ಒಂದು ದಿನ ಒಬ್ಬ ರೋಗಿ ಬಂದು ಹೊಟ್ಟೆನೋವು ಎಂದ. ಅದಕ್ಕೆ ಡಾಕ್ಟರ್‌ರು ಆಪರೇಷನ್ ಮಾಡಬೇಕಾಗುತ್ತದೆ, ಇಪ್ಪತ್ತು ಸಾವಿರ ರೂ. ಖರ್ಚಾಗುತ್ತದೆ ಎಂದರು. ರೋಗಿಗೆ ಗಾಬರಿಯಾಯಿತು. ಹೊಟ್ಟೆನೋವಿಗೆ ಇಪ್ಪತ್ತು ಸಾವಿರ ರೂ. ತೆರೋದುಂಟಾ ಎಂದು ರಾಗ ಎಳೆದ. ಅದಕ್ಕೆ ಡಾಕ್ಟರ್‌ರು ಹೇಳಿದರು- “ಈಗ ಐದು ಸಾವಿರ ರೂ. ಕೊಡಿ. ಉಳಿದಿದ್ದನ್ನು ಪ್ರತಿ ತಿಂಗಳು ಸಾವಿರ ರೂ.ನಂತೆ ಕೊಡ್ತಾ ಹೋಗಿ.”
“ಏನ್ ಡಾಕ್ಟ್ರೇ, ಕಾರನ್ನು ಕಂತಿನಲ್ಲಿ ತೆಗೆದುಕೊಂಡ ಹಾಗೆ ಆಯ್ತಲ್ಲಾ” ಎಂದ ರೋಗಿ. ಡಾಕ್ಟರ್‌ರು ಹೇಳಿದರು- “ನಾನು ಕಾರನ್ನು ಖರೀದಿಸಬೇಕೆಂದಿದ್ದೆ ಎಂಬುದು ನಿನಗೆ ಹೇಗೆ ತಿಳಿಯಿತು?”

***

ಮದುವೆಯಾಗಿ ಒಂದೆರಡು ತಿಂಗಳ ನಂತರ ಗಂಡ ಹೆಂಡತಿಗೆ ಹೇಳಿದ- “ನಾನು ಮನೆಯ ಯಜಮಾನ ಎಂಬುದನ್ನು ಮರೆಯಬೇಡ. ನೀನು ಯಾವುದಕ್ಕೂ ನನ್ನನ್ನು ಪ್ರಶ್ನಿಸಬಾರದು. ನಾನು ಯಾವಾಗ ಬೇಕಾದರೂ ಬರುತ್ತೇನೆ, ಹೋಗುತ್ತೇನೆ. ಬಾರ್, ಕ್ಲಬ್, ಡಿಸ್ಕೋಗೆ ಹೋಗುತ್ತೇನೆ. ನೀನು ಇದಕ್ಕೆಲ್ಲ ಆಕ್ಷೇಪ ಮಾಡಬಾರದು.”
ಗಂಡನ ಮಾತಿಗೆ ಹೆಂಡತಿ ಶಾಂತವಾಗಿ ನುಡಿದಳು- “ಆಯಿತು. ನಾನು ಈ ವಿಷಯಗಳಿಗೆ ಜಗಳ ತೆಗೆಯುವುದಿಲ್ಲ. ಆದರೆ ಒಂದು ವಿಷಯ ಮರೆಯಬೇಡಿ. ಈ ಮನೆಯಲ್ಲಿ ರಾತ್ರಿ ಎಂಟಕ್ಕೆ ಊಟ. ಒಂಬತ್ತಕ್ಕೆ ಪ್ರೇಮ. ನೀವು ಬನ್ನಿ, ಬಿಡಿ.”

***

“ಈ ಜನ್ಮದಲ್ಲಿ ಸಂಬಂಧಿಕರನ್ನು ಪ್ರೀತಿಸುವುದು, ಖುಷಿ ಪಡಿಸುವುದು ಕಷ್ಟವೆಂದು ಅನಿಸಿಬಿಟ್ಟಿದೆ” ಎಂದು ಒಬ್ಬಾತ ಹೇಳಿದ.
“ಕಷ್ಟವಲ್ಲ ಮಾರಾಯ. ಅದು ಅಸಾಧ್ಯ” ಎಂದ ಮತ್ತೊಬ್ಬ.

***

ತೊಂಬತ್ತು ವಯಸ್ಸಿನ ಇಬ್ಬರು ವೃದ್ಧರು ತಮ್ಮ ಜೀವನದಲ್ಲಾದ ಅತ್ಯಂತ ಮುಜುಗರದ ಸನ್ನಿವೇಶದ ಬಗ್ಗೆ ಮಾತಾಡುತ್ತಿದ್ದರು. ಒಬ್ಬಾತ ಹೇಳಿದ- “ನನಗಾದ ಅತಿ ಮುಜುಗರದ ಸನ್ನಿವೇಶವೆಂದರೆ, ಯುವತಿಯೊಬ್ಬಳು ಸ್ನಾನ ಮಾಡುವಾಗ ಬಾಗಿಲ ಸಂದಿಯಲ್ಲಿ ನೋಡುವಾಗ ಸಿಕ್ಕಿಬಿದ್ದಿದ್ದು.”
ಮತ್ತೊಬ್ಬಾತ ಹೇಳಿದ- “ಅದರಲ್ಲೇನು ವಿಶೇಷ ಹೇಳು. ಎಲ್ಲರಿಗೂ ಅಂಥ ಅನುಭವವಾಗುತ್ತದೆ ಅವರವರ ಯೌವನದಲ್ಲಿ.”
ಮೊದಲನೆಯವ ಹೇಳಿದ- “`ಈ ಪ್ರಸಂಗವಾದದ್ದು ನಿನ್ನೆ ಮಾರಾಯ.”

***

ಪ್ರೇಯಸಿಯ ಮುಂದೆ ಪ್ರಿಯಕರ ಜೋರಾಗಿ ಹೇಳುತ್ತಿದ್ದ- “ಪ್ರಿಯೆ, ನಿನಗಾಗಿ ನಾನು ಏನು ಬೇಕಾದರೂ ಮಾಡಬಲ್ಲೆ. ನಯಾಗಾರ ಜಲಪಾತದಿಂದ ಧುಮುಕಬಲ್ಲೆ. ಐಫಲ್ ಟವರ್‌ನಿಂದ ಜಿಗಿಯಬಲ್ಲೆ. ಹೇಳು ನಿನಗಾಗಿ ಏನು ಬೇಕಾದರೂ ಮಾಡುವೆ.”
ಪ್ರೇಯಸಿ ಹೇಳಿದಳು- “ಹಾಗೇನೂ ಮಾಡಬೇಡ. ನಾಳೆ ಸಾಯಂಕಾಲ ಆರಕ್ಕೆ ಬರ್ತೀಯಲ್ಲ?
ಪ್ರಿಯಕರ ಹೇಳಿದ- “ನಾಳೆ ಸಾಯಂಕಾಲ ಮಳೆ ಬರದಿದ್ದರೆ ಖಂಡಿತ ಬರುತ್ತೇನೆ.”

***

ರೈಲಿನಲ್ಲಿ ಕುಳಿತ ವ್ಯಕ್ತಿ ತನ್ನ ಎದುರಿಗಿದ್ದವನನ್ನುದ್ದೇಶಿಸಿ, `ಸಾರ್ ಟೈಮ್ ಎಷ್ಟು?’ ಎಂದು ಕೇಳಿದ. ಆತ ಏನೂ ಮಾತಾಡಲಿಲ್ಲ. ಪುನಃ ಕೇಳಿದ. ಆದರೂ ಉತ್ತರ ಬರಲಿಲ್ಲ. ನಾಲ್ಕೈದು ಸಲ ಕೇಳಿದ. ಆಗಲೂ ಮೌನವೇ ಉತ್ತರ. ಕೊನೆಗೆ ಮೈಮುಟ್ಟಿ ಕೇಳಿದಾಗ, ಟೈಮ್ ಹೇಳಿದ. ಟೈಮ್ ಕೇಳಿದ ವ್ಯಕ್ತಿಗೆ ಅಚ್ಚರಿಯಾಯಿತು.
“ಅದ್ಸರಿ, ಯಾಕೆ ಇಷ್ಟು ಸಮಯ ತಗೊಂಡಿರಿ, ಟೈಮ್ ಹೇಳಲು” ಎಂದು ಕೇಳಿದ್ದಕ್ಕೆ ಸಹಪ್ರಯಾಣಿಕ ಹೇಳಿದ- “ನಿನಗೆ ಟೈಮ್ ಹೇಳಿದರೆ ಮಾತು ಬೆಳೆಯುತ್ತದೆ. ನಾವಿಬ್ಬರೂ ಸ್ನೇಹಿತರಾಗುತ್ತೇವೆ. ನಾನು ನಿನ್ನನ್ನು ಮನೆಗೆ ಕರೆಯಬೇಕಾಗುತ್ತದೆ. ನೀನು ನನ್ನ ಮಗಳನ್ನು ನೋಡುತ್ತೀಯಾ. ನೀನು ಅವಳನ್ನು ಲವ್ ಮಾಡುತ್ತೀಯಾ. ಮದುವೆಯಾಗಲು ನಿರ್ಧರಿಸುತ್ತೀರಿ. ನಿಜ ಹೇಳಬೇಕೆಂದ್ರೆ ಒಂದು ಕೈಗಡಿಯಾರ ಕಟ್ಟಲು ಯೋಗ್ಯತೆ ಇಲ್ಲದವ ನನ್ನ ಅಳಿಯನಾಗುವುದು ನನಗೆ ಇಷ್ಟವಿಲ್ಲ.”

Advertisements

About sujankumarshetty

kadik helthi akka

Posted on ಆಗಷ್ಟ್ 7, 2009, in ವಿಶ್ವೇಶ್ವರ ಭಟ್ - ನೂರೆಂಟುಮಾತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: