ಅಂಥ ಮಾತುಗಳನ್ನು ಇವಿಷ್ಟು ವರ್ಷಗಳಲ್ಲಿ ಕೇಳಿಯೇ ಇಲ್ಲ! -Did you loose your cell phone?

ಒಬ್ಬರ್ಯಾರೋ ನಿಮಗೆ ಪರಿಚಯವಾಗುತ್ತಾರೆ. ಅವರ ನಂಬರು ಇಸಿದುಕೊಳ್ಳುತ್ತೀರಿ. ಎಲ್ಲೋ ಒಂದು ಚೀಟಿಯಲ್ಲಿ ಬರೆದುಕೊಳ್ಳುತ್ತೀರಿ. ಆದರೆ ಅವರ ಹೆಸರು ಬರೆದುಕೊಳ್ಳುವುದಿಲ್ಲ. ಅಕಸ್ಮಾತ್ ಎರಡನ್ನೂ ಬರೆದುಕೊಂಡರೂ ಅವರ ಮತ್ಯಾವುದೋ ರೆಫರೆನ್ಸು ನಿಮ್ಮ ಬಳಿ ಇರುವುದಿಲ್ಲ. ಹತ್ತು ದಿವನ ಬಿಟ್ಟು ನೋಡಿಕೊಂಡರೆ, ಈ ನಂಬರು ಯಾರದು, ಯಾಕೆ ಬರೆದುಕೊಂಡೆ ಒಂದೂ ನೆನಪಾಗುವುದಿಲ್ಲ. ನೀವು ಅದನ್ನು ಮರೆವು ಅಂದುಕೊಳ್ಳುತ್ತಿರೇನೋ? Actually ಅದು ಮರೆವಲ್ಲ, ಅಶ್ರದ್ಧೆ.

ಒಂದು ಸಲ ಅಂಥ ಫಜೀತಿ ಮಾಡಿಕೊಂಡ ಮೇಲೆ ಮತ್ತೆ ಆ ಯಡವಟ್ಟಾಗದಂತೆ ಎಚ್ಚರ ವಹಿಸಿದ್ದೇನೆ. ಆದದ್ದೇನು ಅಂದರೆ, ನೂರಾರು ಗೆಳೆಯರ ಪರಿಚಿತರ ನಂಬರುಗಳಿದ್ದ ನನ್ನ ಮೊಬೈಲ್ ಹ್ಯಾಂಡ್ ಸೆಟ್ಟೊಂದು ಕಳೆದುಹೋಯಿತು. ಒಂದು ಕ್ಷಣಕ್ಕೆ ಕೈ ಬಾಯಿ ಸತ್ತೇ ಹೋದಂತೆ! ನನ್ನ ಮನೆಯವರವೇ ನಂಬರುಗಳು ನನಗೆ ನೆನಪಿಲ್ಲ. ಹತ್ತು ವರ್ಷದ ಹಿಂದೆ ಮನೆಯಲ್ಲಿದ್ದ ಲ್ಯಾಂಡ್ ಫೋನಿನ ನಂಬರು ಇವತ್ತಿಗೂ ನೆನಪಿದೆ. ಆದರೆ ದೊಡ್ಡ ಮಗಳ ನಂಬರು ಖಂಡಿತ ನೆನಪಿಗಿಲ್ಲ. ಮೊದಲಾದರೆ ನಂಬರುಗಳನ್ನು ಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆವು. ಅದಕ್ಕಿಂತ ಹೆಚ್ಚಾಗಿ ಬೆರಳಲ್ಲಿ ನಂಬರು ಡಯಲ್ ಮಾಡುತ್ತಿದ್ದೆವು.

ಈ ಬೆರಳುಗಳ ಟ್ರೈನಿಂಗಿಗೆ ಸಂಬಂಧಿಸಿದಂತೆ ನಿಮಗೊಂದು ಮಾತು ಹೇಳಬೇಕು. ನಿಮ್ಮ ಗೆಳೆಯನೊಬ್ಬನನ್ನು ಕರೆದು ಕೂಡಿಸಿಕೊಂಡು ಆತನಿಗೆ ಗಟ್ಟಿಯಾಗಿ ಕಣ್ಣು ಮುಚ್ಚಿಕೊಳ್ಳಲಿಕ್ಕೆ ಹೇಳಿ. ಆತನ ತೋರು ಬೆರಳುಗಳಿಗೆ ಮೂರು ಕಡ್ಡಿಗಳನ್ನು ಒಂದೊಂದಾಗಿ ಚುಚ್ಚಿ.ಈಗ ನಿನ್ನ ಬೆರಳಿಗೆ ಎಷ್ಟು ಬೆಂಕಿ ಕಡ್ಡಿ ತಾಕಿದವು ಅಂತ ಕೇಳಿ. ಆತ ಕರೆಕ್ಟಾಗಿ ಹೇಳುತ್ತಾನೆ. ಅವೇ ಕಡ್ಡಿಗಳನ್ನು ಆತನ ಮುಂಗೈಗೆ ತಾಕಿಸಿ ಕೇಳಿ. ಆತ ಹೇಳಲಾರ. ಯಾಕೆ ಹೇಳಲಾರ ಅಂದರೆ, ನಮ್ಮ ಬೆರಳುಗಳು, ಬೆರಳ ತುದಿ count ಮಾಡಲಿಕ್ಕೆ train up ಆಗಿರುತ್ತದೆಯೇ ಹೊರತು, ನಮ್ಮ ಮುಂಗೈ train up ಆಗಿರುವುದಿಲ್ಲ.

ಈ ಮಾತು ಟೆಲಿಫೋನ್ ನಂಬರುಗಳ ಡಯಲಿಂಗ್ ಗೂ ಅನ್ವಯವಾಗುತ್ತದೆ. ಬುದ್ಧಿಯ ಜೊತೆ ಜೊತೆಯಲ್ಲೆ ಬೆರಳು ಕೂಡ ತನ್ನ counting ಕೆಲಸವನ್ನು ನೆನಪಿಟ್ಟುಕೊಳ್ಳುತ್ತದೆ. ಈಗ ಅನೇಕ ಮನೆಗಳಿಂದ ಲ್ಯಾಂಡ್ ಫೋನುಗಳೇ ಹೊರಟು ಹೋದವು. ಫೋನ್ ಡೈರೆಕ್ಟರಿ ಕಣ್ಮರೆಯಾಯಿತು. ಮೊಬೈಲಿನಲ್ಲಿನ ಫೋನ್ ಬುಕ್ಕು ರೂಢಿಯಾಯಿತು. ಅಲ್ಲಿ ಹೆಸರು feed ಆಗಿ, ಅದು ನೆನಪಿರುತ್ತದೆಯೇ ಹೊರತು ಫೋನ್ ನಂಬರಲ್ಲ. ಒಮ್ಮೆ ಮೊಬೈಲ್ ಕಳೆದು ಹೋಯಿತೆಂದರೆ, ಇದ್ದ ಅಷ್ಟೂ ಕಾಂಟ್ಯೂಕ್ಟುಗಳು ಕಳೆದು ಹೋದಂತೆಯೇ!

ಮನುಷ್ಯನ ವ್ಯಕ್ತಿತ್ವ ಕೂಡ ಅಷ್ಟೇ! ಈ ಬದುಕು ಪ್ರತಿಯೊಬ್ಬರನ್ನೂ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಒಯ್ಯುತ್ತದೆ. ಚಿಕ್ಕಮನೆಯಿಂದ ದೊಡ್ಡ ಮನೆಗೆ ಹೋಗುತ್ತೇವೆ. ಸೈಕಲ್ಲು ಇಳಿದು ಕಾರು ಹತ್ತುತ್ತೇವೆ. ಎಲ್ಲ ಬದಲಾಗುತ್ತದೆ. ಆದರೆ ನಮ್ಮ ಸುತ್ತಲಿನವರು ಬದಲಾಗಿರುತ್ತಾರಾ? ಹೆಚ್ಚಿನ ಸಲ ಆಗಿರುವುದಿಲ್ಲ. ಅದೇ ಕ್ಲಬ್ಬು; ಟೀ ತಂದುಕೊಡುವ ಅದೇ ಹುಡುಗ, ಆಫೀಸಿನಲ್ಲಿ ನಮ್ಮೊಟ್ಟಿಗೆ ಕೆಲಸ ಮಾಡುವ ಅದೇ ಜವಾನ. ಊರ ಕಡೆಯ ಅದೇ ರೈತ; ಅವರ್ಯಾರ ಬದುಕೂ ಬದಲಾಗಿರುವುದಿಲ್ಲ. ಆದರೆ ನಾವು ನಮಗೇ ಗೊತ್ತಿಲ್ಲದೆ ಬದಲಾಗಿ ಬಿಟ್ಟಿರುತ್ತೇವೆ; ಅವರ ವಿಷಯದಲ್ಲಿ!

ಹಳೆಯ ಗೆಳೆಯ ಈಗ ಯಾತಕ್ಕೂ ಕೆಲಸಕ್ಕೆ ಬಾರದವನು ಅನ್ನಿಸತೊಡಗಿರುತ್ತಾನೆ. ಗೆಳತಿಯೊಬ್ಬಳು ಪರಮ ಬೋರು ಎಂಬಂತೆ ಭಾಸವಾಗಿರುತ್ತಾಳೆ. ಯಾರೊಂದಿಗೋ ಮಾತಾಡುತ್ತಿರುವಾಗ ‘ಇವನ ಹತ್ರ ಏನು ಮಾತು?’ಅನ್ನಿಸಿಬಿಡುತ್ತದೆ. ಇದ್ದಕ್ಕಿದ್ದ ಹಾಗೆ ಒಂದು ಜಗತ್ತಿಗೆ ಸಂಬಂಧಿಸಿದಂತೆ ‘ಮೊಬೈಲು ಕಳೆದುಕೊಳ್ಳೋದು’ಅಂದರೆ ಇದೇ! ಆ ಜಗತ್ತಿಗೆ ನಾವು ಹೊರಗಿನವರಾಗಿ ಬಿಡುತ್ತೇವೆ. ಹೇಗೆ ನಾವು ಆ ಜಗತ್ತನ್ನು ಕಳೆದುಕೊಂಡು, ಅದರಿಂದ ಕಳಚಿಕೊಳ್ಳುತ್ತೇವೆಯೋ, ಹಾಗೆಯೇ ಆ ಜಗತ್ತಿನ ಪಾಲಿಗೂ ನಾವು ಕಳೆದು ಹೋಗತೊಡಗುತ್ತೇವೆ.

ಸ್ವಲ್ಪ ದಿನದ ಮಟ್ಟಿಗೆ ‘ಇವನು ಹೆಂಗೆ ಬದಲಾಗಿಬಿಟ್ನಲ್ವಾ?’ಅಂತ ಮಾತಾಡಿಕೊಳ್ಳುವ ಗೆಳೆಯರು ಕ್ರಮೇಣ ನಮ್ಮನ್ನು ಮರೆತು ಹೋಗುತ್ತಾರೆ. ತಮ್ಮ ಸಿಸ್ಟಮ್ ನಿಂದ ನಮ್ಮನ್ನು ತೆಗೆದು ಹಾಕುತ್ತಾರೆ. ಹದಿನಾಲ್ಕು ವರ್ಷ ಭೇಟಿಯಾಗದೆ, ಜವಾಬ್ಧಾರಿ ಹೊರದೆ, ಪ್ರೀತಿ ತೋರದೆ ಹೋದರೆ ಕಟ್ಟಿಕೊಂಡ ಹೆಂಡತಿಯೇ ಮರೆತು ಹೋಗುತ್ತಾಳೆ ಅಂತಾರೆ. ಉಳಿದ ಸಂಬಂಧಗಳಿಗೆ ಅಷ್ಟೆಲ್ಲ ವರ್ಷ ಬೇಕಾಗುವುದಿಲ್ಲ.

ಇದು ಕೇವಲ ಬದಲಾಗುವ, ಕಳಚಿಕೊಳ್ಳುವ, ಕಳೆದು ಹೋಗುವ ಮಾತಷ್ಟೇ ಅಲ್ಲ. ಕಚ್ಚಿಕೊಳ್ಳುವ ಸಂಗತಿಯೂ ಹೌದು. ಒಬ್ಬರ್ಯಾರೋ ನಿಮಗೆ ಪರಿಚಯವಾಗುತ್ತಾರೆ. ಅವರ ನಂಬರು ಇಸಿದುಕೊಳ್ಳುತ್ತೀರಿ. ಎಲ್ಲೋ ಒಂದು ಚೀಟಿಯಲ್ಲಿ ಬರೆದುಕೊಳ್ಳುತ್ತೀರಿ. ಆದರೆ ಅವರ ಹೆಸರು ಬರೆದುಕೊಳ್ಳುವುದಿಲ್ಲ. ಅಕಸ್ಮಾತ್ ಎರಡನ್ನೂ ಬರೆದುಕೊಂಡರೂ ಅವರ ಮತ್ಯಾವುದೋ ರೆಫರೆನ್ಸು ನಿಮ್ಮ ಬಳಿ ಇರುವುದಿಲ್ಲ. ಹತ್ತು ದಿವನ ಬಿಟ್ಟು ನೋಡಿಕೊಂಡರೆ, ಈ ನಂಬರು ಯಾರದು, ಯಾಕೆ ಬರೆದುಕೊಂಡೆ ಒಂದೂ ನೆನಪಾಗುವುದಿಲ್ಲ. ನೀವು ಅದನ್ನು ಮರೆವು ಅಂದುಕೊಳ್ಳುತ್ತಿರೇನೋ? Actually ಅದು ಅಶ್ರದ್ಧೆ.

ಒಂದು ಸಂಬಂಧವನ್ನು ಹೇಗೆ ಉಳಿಸಿ ಹೇಗೆ ಬೆಳೆಸಿಕೊಳ್ಳುತ್ತೇವೆ ಎಂಬುದು ಬೇರೆ ಮಾತು. ಒಂದು ಸಂಬಂಧವನ್ನು ಹೀಗೆ ನಾವು ರೆಜಿಸ್ಟರ್ ಮಾಡಿಕೊಳ್ಳುವುದರಲ್ಲೇ ಎಡವಿಬಿಟ್ಟರೆ ಅದಕ್ಕಿಂತ ದೊಡ್ಡ ತಪ್ಪು ಮತ್ತೊಂದಿಲ್ಲ. ನಮಗೆ ಪರಿಚಯವಾದವನು ತುಂಬ ದೊಡ್ಡ ವ್ಯಕ್ತಿಯಾಗಿರಬೇಕು ಅಂತೇನಿಲ್ಲ. ಯಾವನು ಯಾವ ಕಾಲಕ್ಕೆ, ಯಾವ ಕೆಲಸಕ್ಕೆ ಬರುತ್ತಾನೋ? ಆತನದೊಂದು ವಿವರ, ಒಂದು ವಿಳಾಸ, ಒಂದು ವಿಸಿಟಿಂಗ್ ಕಾರ್ಡು, ಕಡೇ ಪಕ್ಷ ಆತನ ಕುರಿತಾದ ಒಂದು ಸರಿಯಾದ ಸ್ಮೃತಿ ನಿಮ್ಮಲ್ಲಿರಬೇಕಲ್ಲ? ನಾವು ಅವರಿಬ್ಬರನ್ನು ಮರೆತಂತೆಯೇ ನಮ್ಮನ್ನು ಮರೆಯುವವರು ತುಂಬ ಜನ ಇರುತ್ತಾರೆ. ಎರಡು ಕಡೆಯಿಂದ ಕೊಂಡಿ ತಪ್ಪಿ ಹೋದರೆ exactly, ನಮ್ಮದು ಮೊಬೈಲು ಕಳೆದುಕೊಂಡವನ ಪರಿಸ್ಥಿತಿಯೇ!

ಇದೆಲ್ಲದರ ಹಿಂದಿರುವ ‘ಬೀಜ ಮಾತು’ಅಂದರೆ, ಪ್ರತಿ ಸಂಬಂಧವನ್ನೂ ನಾವು ಗೌರವಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಅದು ನಮ್ಮ ಸ್ವಭಾವದಲ್ಲಿ ಬೆರೆತು ಹೋಗಬೇಕು. ಕೇವಲ ನಂಬರು ಗುರುತಿಟ್ಟುಕೊಳ್ಳುವುದಲ್ಲ; ಎದುರಿನ ವ್ಯಕ್ತಿಯ ಪಾಲಿಗೆ ನಾನೇನು ಮತ್ತು ನನ್ನ ಪಾಲಿಗೆ ಅವನೇನು ಎಂಬುದು ನಿಚ್ಚಳವಾಗುತ್ತ ಹೋಗಬೇಕು.

‘ನೀನು ಬಿಡಪ್ಪ, ನಮ್ಮುನ್ನ ಮರೆತೇ ಬಿಟ್ಟೆ! ತುಂಬ ಬದಲಾಗಿ ಬಿಟ್ಟೆ’ಎಂಬಂಥ ಮಾತುಗಳನ್ನು ಇವಿಷ್ಟು ವರ್ಷಗಳಲ್ಲಿ ನಾನು ಕೇಳಿಯೇ ಇಲ್ಲ. ಅಕಸ್ಮಾತ್ ಕೇಳಿದ್ದರೂ ತುಂಬ ಕಡಿಮೆ ಸಲ ಕೇಳಿದ್ದೇನೆ. ಏಕೆಂದರೆ, ನಾನು ಏನನ್ನೂ ಮರೆಯುವುದಿಲ್ಲ. ನೆನಪಿಟ್ಟುಕೊಳ್ಳುತ್ತೇನೆ ಎಂಬುದು ನನ್ನ ಶಕ್ತಿಯಲ್ಲ; ಅದು ನನ್ನ ಶ್ರದ್ಧೆ.

ನಿಮಗೂ ಅದು ಇದ್ದೀತು; ಇರದೆ ಏನು?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: