ಅವನ ದೃಷ್ಟಿಯಲ್ಲಿ ಯಾರೂ ಸರಿಯಿಲ್ಲ :ಏನೂ ಸರಿಯಿಲ್ಲ! -Are you a Perfectionist?

ಜಗತ್ತಿನ ಪ್ರತಿಯೊಬ್ಬರನ್ನೂ ದೂಷಿಸುತ್ತಾನೆ. ತಪ್ಪು ಹುಡುಕುತ್ತಾನೆ. ಇದೆಲ್ಲದರಿಂದ ತನಗೇ ರೋಸಿಗೆಯಾಗಿ, ತಾನು ಮಾಡಬಲ್ಲ, ಪರ್‌ಫೆಕ್ಟ್ ಆಗಿ ಮಾಡಬಲ್ಲ ಇಸ್ತ್ರಿ, ಬುಕ್ ಬೈಂಡಿಂಗ್, ನೆಲ ಒರೆಸುವುದು ಮುಂತಾದ ಸೀಮಿತ ವಲಯದ ಚಿಕ್ಕ ಕೆಲಸಗಳಿಗೆ ಗಂಟುಬೀಳುತ್ತಾನೆ!

Are you a Perfectionist?ಆತ ತುಂಬ ಮಧುರವಾಗಿ ಹಾಡುತ್ತಿದ್ದ. ತನ್ಮಯನಾಗಿ ಕೇಳುತ್ತಿದ್ದೆ. ಪಕ್ಕದಲ್ಲಿ ನನ್ನ ಗೆಳೆಯ ಬಂದು ನಿಂತ. ಗಾಯನ ಮುಗಿದ ಮೇಲೆ, ಎಂಥ ಚೆಂದ ಹಾಡ್ತಾನೆ ಮಾರಾಯ! ಎಂದು ತೃಪ್ತನಾಗಿ ಉದ್ಗರಿಸಿದೆ.

ಆದ್ರೆ ಎಂಥ ಕುಡುಕ ಗೊತ್ತಾ? ಅಂದು ಬಿಟ್ಟ ಗೆಳೆಯ. ನಾನು ತಬ್ಬಿಬ್ಬಾದವನಂತೆ ಅವನನ್ನೇ ನೋಡಿದೆ. ಕೆಲವೇ ದಿನಗಳ ಕೆಳಗೆ ನನ್ನ ಗೆಳೆಯನ ಬಗ್ಗೆ ಅವನ ತಮ್ಮ ಹೇಳಿದ್ದು ನೆನಪಾಗಿ ಸಾವರಿಸಿಕೊಂಡೆ.

ನನ್ನ ಗೆಳೆಯನಿಗೆ ಅದೊಂದು ರೋಗ!

ನೀವು ಜಗತ್ತಿನಲ್ಲಿ ಸರ್ವಶ್ರೇಷ್ಠವಾದುದೊಂದನ್ನು ತೋರಿಸಿ. ಇವನು ಅದಕ್ಕೊಂದು ಹೆಸರಿಡುತ್ತಾನೆ. ಹಾಗಂತ ಆ ವಿಷಯ ತುಂಬ ದೊಡ್ಡದಿರಬೇಕು ಅಂತಿಲ್ಲ. ತನಗೆ ಸಂಬಂಧಪಟ್ಟಿರಬೇಕು ಅಂತಲೂ ಇಲ್ಲ.

ಮಕ್ಕಳ ಡಾಕ್ಟರುಗಳ ಪೈಕಿ ಆತನೇ ಬೆಸ್ಟ್ ನೋಡು ಅಂತ ಹೇಳಿದರೆ, ಈಗಿನ ಕಾಲದ ಡಾಕ್ಟ್ರುಗಳು ಇಲ್ಲದ ರೋಗ ಹೇಳಿ ಹೆದರಿಸಿ ಮೋಸಮಾಡ್ತಾರೆ ಅಂತಾನೆ. ಆಚಾರ್ಯ ರಜನೀಶ್ ನಿಜವಾದ ದಾರ್ಶನಿಕ ಅಂತ ಹೇಳಿದರೆ, ಅವನಿಗೆ ಸಾಯೋವಾಗ ಏಡ್ಸ್ ಆಗಿತ್ತಂತೆ ಅನ್ನುತ್ತಾನೆ. ಇದು ಭಾರತದ ನಂಬರ್ ಒನ್ ದಿನಪತ್ರಿಕೆ ಕಣಯ್ಯ ಅಂತ ಹೇಳಿದರೆ, ಅಮೆರಿಕದಲ್ಲಿ ಇನ್ನೂರು ಪೇಜು ಕೊಡೋ ಪತ್ರಿಕೆಗಳಿವೆ ಅಂತಾನೆ.

ಆತನ ಸಮಸ್ಯೆಯೇ ಅದು : ಯಾರನ್ನೂ ಒಪ್ಪುವುದಿಲ್ಲ. ಹೋಗಲಿ ಆತ ಜೀವನದಲ್ಲಿ ಅಪರೂಪದ್ದೇನಾದರೂ ಮಾಡಿದ್ದಾನಾ? ಸಾಧಿಸಿದ್ದಾನಾ? ಕೇಳಬೇಡಿ. ಯಾವತ್ತೋ ಏನನ್ನೋ ಸಾಧಿಸುತ್ತೇನೆ , ನೋಡ್ತಿರಿ ಅಂತಾನೆ. ಯಾವುದರ ಸಿದ್ಧತೆಯೂ ಕಾಣುವುದಿಲ್ಲ. ಹಾಗಂತ ಕೆಟ್ಟವನೇನಲ್ಲ ನನ್ನ ಗೆಳೆಯ. ಆಕ್ಷೇಪಿಸಬಹುದಾದಂಥ ದುರಭ್ಯಾಸಗಳಿಲ್ಲ. ಅವನ ಒಂದೇ ಸಮಸ್ಯೆಯೆಂದರೆ, ಅವನ ದೃಷ್ಟಿಯಲ್ಲಿ ಯಾರೂ ಮತ್ತು ಏನೂ ಸರಿಯಿಲ್ಲ.

ಒಂದು ಸಲ ಅವನ ಮನೆಗೆ ಹೋದೆ. ಬುಕ್ ಬೈಂಡ್ ಮಾಡುತ್ತ ಕುಳಿತಿದ್ದ. ಮಾಡುವ ರೀತಿಯನ್ನೇ ಗಮನಿಸುತ್ತ ಕುಳಿತೆ. ಅವನ ಕೆಲಸದಲ್ಲಿ ಎಂಥ ತಲ್ಲೀನತೆ, ಏಕಾಗ್ರತೆ ಇದ್ದವೆಂದರೆ, ಹೆಂಡತಿ ತಂದಿಟ್ಟ ಕಾಫಿಯತ್ತ ತಿರುಗಿಯೂ ನೋಡದೆ ಬೈಂಡಿಂಗ್ ಮುಂದುವರೆಸಿದೆ. ಎದ್ದು ಹೋಗಿ ಅವನ ಕೋಣೆ ನೋಡಿದೆ. ಅಲ್ಲಿದ್ದ ಪ್ರತಿ ಪುಸ್ತಕವೂ ಹಾಗೇ ನೀಟಾಗಿ ಬೈಂಡ್ ಆಗಿತ್ತು. ಫ್ಯಾನಿನ ಮೇಲೆ ಧೂಳಿರಲಿಲ್ಲ. ಹಾಸಿಗೆಯ ಮೇಲಿನ ಚಾದರದಲ್ಲಿ ಸುಕ್ಕಿರಲಿಲ್ಲ. ಅಕ್ವೇರಿಯಂ ತುಂಬ ಸ್ವಚ್ಛವಾಗಿತ್ತು. ಅವನ ಹೆಂಡತಿ ಬಂದು ಹೇಳಿದಳು : ಇದನ್ನೆಲ್ಲ ಮನೇಲಿ ಅವರೇ ಕ್ಲೀನ್ ಮಾಡೋದು!

ಗ್ರೇಟ್ ಅಂದೆ. ಅವನು ಪರ್‌ಫೆಕ್ಟಾಗಿ ಮಾಡುತ್ತಾನೆ. ಅವನ ಮಕ್ಕಳ ರೂಮು ನೋಡಿದೆ, ಕೈತೋಟ ನೋಡಿದೆ, ಮನೆಯ ವಾರ್ಡ್‌ರೋಬುಗಳನ್ನು ನೋಡಿದೆ. ಎಲ್ಲಿ ಹುಡುಕಿದರೂ ಒಂದು ತಪ್ಪಿಲ್ಲ, ಕೊಳೆಯಿಲ್ಲ. ಆದರೆ ಅವನ ಸೋಲು ಎಲ್ಲಿದೆಯೆಂಬುದು ತುಂಬ ಚೆನ್ನಾಗಿ ನನಗೆ ಗೊತ್ತು.

ಒಂದಿಡೀ ವರ್ಷ ಒಂದು ಕಂಪನಿಯಲ್ಲಿ ದುಡಿಯಲಾರ. ಯಾವ ವೃತ್ತಿಗೂ ಕಚ್ಚಿಕೊಂಡು ನಿಲ್ಲಲಾರ. ದುಡ್ಡಿನ ವಿಷಯದಲ್ಲಿ ಸೋತು ಸುಣ್ಣವಾಗಿದ್ದಾನೆ. ಹೆಂಡತಿಗೆ ಕಾಲೇಜಿನಲ್ಲಿ ನೌಕರಿ ಇದೆಯಾದ್ದರಿಂದ ಮನೆ ನಡೆದುಕೊಂಡು ಹೋಗುತ್ತಿದೆ. ಆದರೆ ನನ್ನ ಗೆಳೆಯ ವರ್ಷಗಟ್ಟಲೆ ಏನೂ ಕೆಲಸ ಮಾಡದೆ ಹೀಗೆ ಬುಕ್ ಬೈಂಡ್ ಮಾಡುತ್ತಾ, ಇಸ್ತ್ರಿ ಮಾಡುತ್ತಾ, ಬಟ್ಟೆ ಮಡಚುತ್ತಾ ಇದ್ದು ಬಿಡುತ್ತಾನೆ.

ಮನೆಯ ಕೆಲಸಗಳ್ನು ಇಷ್ಟು ನೀಟಾಗಿ, ಅಚ್ಚು ಕಟ್ಟಾಗಿ ಮಾಡಬಲ್ಲವನು ಹೊರಗಿನ ವ್ಯವಹಾರಗಳಲ್ಲಿ ಯಾಕೆ ಸೋಲುತ್ತಾನೆ? ಯಾರೊಂದಿಗೂ ಅವನಿಗೆ ಗಾಢ-ಶಾಶ್ವತ ಸ್ನೇಹವಿಲ್ಲ. ಹಾಗಂತ ಜಗಳಗಂಟನಲ್ಲ, ಅಪ್ರಾಮಾಣಿಕನಲ್ಲ. ಅವನ ಸಮಸ್ಯೆಯೆಂದರೆ, ಪ್ರತಿಯೊಬ್ಬರಲ್ಲೂ ತಪ್ಪು ಹುಡುಕುತ್ತಾನೆ. ಆಟೋ ಡ್ರೈವರ್ ಡ್ರೈವಿಂಗ್ ಸರಿಯಿಲ್ಲ ಅಂತ ತಪ್ಪು ಹುಡುಕಿದರೆ ಓ.ಕೆ. ಅವನು ಹಾಕಿಕೊಂಡಿರುವುದು ಸರ್ಕಾರದ ನಿಯಮ ಹೇಳಿರುವಂತಹ ಖಾಕಿಯಲ್ಲ ಎಂದು ರೊಳ್ಳೆ ತೆಗೆದರೆ ಏನು ಗತಿ? ಇವನನ್ನು ಸರಿಮಾಡೋದಾದರೂ ಹ್ಯಾಗೆ ಮಾರಾಯ? ಅಂತ ಕೇಳಿದಳು ಗೆಳತಿ.

ಅವನದು ಫರ್‌ಫೆಕ್ಷನಿಸ್ಟ್ ಖಾಯಿಲೆ. ಪ್ರತಿಯೊಂದನ್ನೂ ದಾರದ ಎಳೆ ಆಚೀಚೆ ಆಗದಂತೆ ಮಾಡಬೇಕು ಅಂತ ಹೊರಡುವವನ ಮನಸ್ಸು. ಅಂಥ ಹಟಗಳು ಅನೇಕರಲ್ಲಿರುತ್ತವೆ. ಆದರೆ ಪ್ರತಿಯೊಂದು ವಿಷಯದಲ್ಲೂ ಆ ಪರಿಯ ಹಟ ಇರಬಾರದು.

ನಾನು ಮುದ್ರಿಸುವ ಪತ್ರಿಕೆ ತಪ್ಪುಗಳಿಲ್ಲದೆ ಇರಬೇಕು ಎಂಬುದು ಸರಿ. ಆದರೆ ಇಡೀ ಪತ್ರಿಕೋದ್ಯಮದಲ್ಲೇ ತಪ್ಪುಗಳಾಗಬಾರದು ಅಂದರೆ ಗತಿ? ತನ್ನ ಕೆಲಸವನ್ನು ತಾನು ಅಚ್ಚುಕಟ್ಟಾಗಿ ಮಾಡಿಟ್ಟು ಹೊರಬಿದ್ದರೆ ಸಾಕು ತಾನೆ? ಇವನು ಇಡೀ ಆಫೀಸಿನ ಅಚ್ಚುಕಟ್ಟುತನ ಎಲ್ಲಿ ಕೆಟ್ಟಿದೆ ಅಂತ ನೋಡಲು ಹೊರಡುತ್ತಾನೆ. ಇದರ ಪರಿಣಾಮವೇನಾಗುತ್ತದೆಂದರೆ, ಪ್ರತಿಯೊಂದರಲ್ಲೂ ಪರ್ಫೆಕ್ಟಾಗಿ ಮಾಡಲು ಹೊರಡುವಾತ ತುಂಬ ಕೆಲಸ ಮಾಡಲಾರ. ಆತನ ಸ್ಪೀಡು ಕುಂಠಿತವಾಗುತ್ತದೆ. ಎಲ್ಲವನ್ನೂ ತಾನೇ ಮಾಡಲು ಹೊರಡುತ್ತಾನಾದ್ದರಿಂದ ಉಳಿದವರಿಂದ ಕೆಲಸ ತೆಗೆಯಲಾರ.

ಎಲ್ಲವನ್ನೂ ಮಾಡಲು ಮುಂದಾದಾಗ ಬೇಗ ದಣಿಯುತ್ತಾನೆ. ಅನಂತರವೂ ಮಾಡಿದ ಕೆಲಸ ತನ್ನ ನಿರೀಕ್ಷೆಯಂತೆ ಪರ್‌ಫೆಕ್ಟಾಗಿ ಆಗುವುದಿಲ್ಲ. ಆಗ ಕೈ ಸೋತು ಕೆಲಸದಿಂದ ಈಚೆಗೆ ಬಂದುಬಿಡುತ್ತಾನೆ.

ಇದರಿಂದ ಆಗುವ ಪರಿಣಾಮವೆಂದರೆ, ಪದೇಪದೇ ಕೆಲಸ ಕಳೆದುಕೊಳ್ಳುತ್ತಾನೆ. ತನ್ನ ಮೇಲೆ ತಾನೇ ವಿಸ್ವಾಸ ಕಳೆದುಕೊಳ್ಳುತ್ತಾನೆ. ಜಗತ್ತಿನ ಪ್ರತಿಯೊಬ್ಬರನ್ನೂ ದೂಷಿಸುತ್ತಾನೆ. ತಪ್ಪು ಹುಡುಕುತ್ತಾನೆ. ಇದೆಲ್ಲದರಿಂದ ತನಗೇ ರೋಸಿಗೆಯಾಗಿ, ತಾನು ಮಾಡಬಲ್ಲ, ಪರ್‌ಫೆಕ್ಟ್ ಆಗಿ ಮಾಡಬಲ್ಲ ಇಸ್ತ್ರಿ, ಬುಕ್ ಬೈಂಡಿಂಗ್, ನೆಲ ಒರೆಸುವುದು ಮುಂತಾದ ಸೀಮಿತ ವಲಯದ ಚಿಕ್ಕ ಕೆಲಸಗಳಿಗೆ ಗಂಟುಬೀಳುತ್ತಾನೆ. ಇವೆಲ್ಲವೂ ಒಂದಕ್ಕೊಂದು ರಿಲೇಟ್ ಆಗಿವೆ ಎಂಬುದನ್ನು ವಿವರಿಸಿ ಅವನಿಗೆ ತಿಳಿ ಹೇಳಿದೆ.

ಜಗತ್ತಿನಲ್ಲಿ ಪರ್‌ಫೆಕ್ಷನಿಸ್ಟುಗಳಿರುತ್ತಾರೆ, ನಿಜ. ಆದರೆ ಜಗತ್ತು ಅವರಿಂದ ನಡೆಯುತ್ತಿರುವುದಿಲ್ಲ. ರೈಲು ಲೇಟಾಗುತ್ತದೆ, ಟ್ರಾಫಿಕ್ ಜಾಮ್ ಆಗುತ್ತೆ, ಮಗ ಫೇಲಾಗುತ್ತಾನೆ, ಮಗಳ ಆರೋಗ್ಯ ಕೆಡುತ್ತದೆ, ಮೈಕು ಕೈ ಕೊಡುತ್ತೆ.. ಈ ಎಲ್ಲ ಅಪಸವ್ಯಗಳೂ ಆಗುತ್ತಲೇ ಇರುತ್ತವೆ ಮಾರಾಯಾ. ಆದರೂ ದಿನ ಕಳೆಯುತ್ತದೆ. ಕಾಲಚಕ್ರ ತಿರುಗುತ್ತದೆ. ನೀನು ಎಲ್ಲವನ್ನೂ ಪರ್‌ಫೆಕ್ಟಾಗಿ ಮಾಡಿದರೂ, ಮಾಡದಿದ್ದರೂ ನಿನಗೆ ನಲವತ್ತೇಳು ವರ್ಷಗಳಂತೂ ಆಗಿ ಹೋದವು.

ಉಳಿದಿರೋದು ಹೆಚ್ಚೆಂದರೆ, ಹತ್ತು ವರ್ಷ ದುಡಿಯಬಹುದಾದ ಕಾಲ. ಈ ಹತ್ತು ವರ್ಷಗಳನ್ನು ಪರ್ಫೆಕ್ಟಾಗಿ ಬೈಂಡ್ ಹಾಕೋದರಲ್ಲಿ ಕಳೆದುಬಿಟ್ಟರೆ ಹ್ಯಾಗೆ? ರೈತನೊಬ್ಬ ರಾಶಿ ಮಾಡಿ ಚೀಲಗಟ್ಟಲೆ ಜೋಳ ತಂದು ಮನೆಯಲ್ಲಿ ಒಟ್ಟುವುದರನ್ನು ನೋಡುತ್ತಾನೆಯೇ ಹೊರತು, ತೆನೆ ಬಡಿದರೆ ಕಾಳು ಚೆಲ್ಲಾಪಿಲ್ಲಿಯಾಗಿಬಿಡುತ್ತವೆ ಅಂತ ಅಂಜಿ ಕೂಡುವುದಿಲ್ಲ. ಈ ಪರ್‌ಫೆಕ್ಷನಿಜಮ್‌ನ ಖಾಯಿಲೆ ಕೊಡವಿಕೋ. ಮಾಡಬೇಕಾದದ್ದು ತುಂಬ ಇದೆ. ಪುಸ್ತಕ ಎತ್ತಿಡು ಅಂತ ಹೇಳಿದೆ.

ಇಷ್ಟು ಹೇಳಿದ ನಂತರವೂ ಒಪ್ಪಿಕೊಳ್ಳಬೇಕಾದ ಮಾತೊಂದಿದೆ. ಈ ಪರ್‌ಫೆಕ್ಷನ್‌ನ ರೋಗ ನನಗೂ ಇದೆ. ಇರುವುದರಿಂದಲೇ ಚಿಕ್ಕದೆರಡು ಪತ್ರಿಕೆ, ಪುಟ್ಟದೊಂದು ಶಾಲೆ ನಡೆಸಿಕೊಂಡು ಕುಳಿತಿದ್ದೇನೆ.

ಆದರೆ ಒಂದು ಪುಣ್ಯ, ಎಲ್ಲರಲ್ಲೂ ತಪ್ಪು ಹುಡುಕುವ ಮಟ್ಟಿಗೆ ಖಾಯಿಲೆ ಬಿದ್ದಿಲ್ಲ!

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: