ಅವರ ನಿಧನ ‘ತುಂಬಲಾರದ ನಷ್ಟ’ವೋ, ಅವರಿಂದಾದ ನಷ್ಟ ‘ತುಂಬಲಾರ’ದ್ದೋ?

Even the rain couldn’t dampen the spirits of thousands of cricket fans…

ಅದು ಎಂಥದ್ದೇ ಸಂದರ್ಭವಾಗಿರಬಹುದು, ಯಾವುದೇ ಸ್ಥಳವಾಗಿರಬಹುದು. ಭಾರತ ಭಾಗಿಯಾಗಿರುವ ಕ್ರಿಕೆಟ್ ಪಂದ್ಯವೊಂದರ ವೇಳೆ ಮಳೆ ಬಂದರೂ ನಮ್ಮ ಕ್ರಿಕೆಟ್ ಪ್ರಿಯ ವೀಕ್ಷಕರು ಮಾತ್ರ ಜಾಗ ಬಿಟ್ಟು ಕದಲುವುದಿಲ್ಲ. ಮಳೆಯನ್ನೂ ಲೆಕ್ಕಿಸದೆ ಮತ್ತೆ ಪಂದ್ಯ ಆರಂಭವಾಗುವುದನ್ನೇ ಇದಿರು ನೋಡುತ್ತಾ ಕುಳಿತುಕೊಳ್ಳುತ್ತಾರೆ.

ಹಾಗೆ ಕಾದು ಕುಳಿತುಕೊಳ್ಳುವ ವೀಕ್ಷಕರ ಉತ್ಸಾಹವನ್ನು “Even the rain couldn’t dampen the spirits of thousands of cricket fans….!” ಎಂದೇ ನಮ್ಮ ಟಿವಿ ಚಾನೆಲ್‌ಗಳಲ್ಲಿ  ವರ್ಣಿಸುತ್ತಾರೆ. ಮುಂದಿನ ಪಂದ್ಯ ಅಥವಾ ಮತ್ತಿನ್ನಾವುದೋ ವರ್ಷದಲ್ಲಿ ಕ್ರಿಕೆಟ್ ಪಂದ್ಯ ನಡೆಯುವಾಗ ಮಳೆ ಬಂದರೂ ಪತ್ರಕರ್ತರು ಮಾತ್ರ ಅದೇ ವಾಕ್ಯವನ್ನು ಪುನರಾವರ್ತನೆ ಮಾಡುತ್ತಾರೆ. ಇಂತಹ ‘ಕ್ಲೀಶೆ’ಗಳು ಟಿವಿ ಚಾನೆಲ್‌ಗಳಿಗಷ್ಟೇ ಸೀಮಿತವಾಗಿಲ್ಲ. ನಮ್ಮ ಕನ್ನಡದ ಕ್ರೀಡಾ ಪುರವಣಿಗಳನ್ನೇ ತೆಗೆದುಕೊಳ್ಳಿ-ಉದಯೋನ್ಮುಖ ಆಟಗಾರ, ಮನಮೋಹಕ ಆಟ, ರೋಚಕ ಜಯ, ವಿರೋಚಿತ ಗೆಲುವು, ರೋಮಾಂಚಕಾರಿ ಪಂದ್ಯ, ಅಬ್ಬರದ ಆಟ, ಯುವ ಪ್ರತಿಭೆ, ಸಿಡಿಲಮರಿ… ಈ ಪದಗಳನ್ನು ನಮ್ಮ ಕ್ರೀಡಾ ಬರಹಗಾರರು ಅದೆಷ್ಟು ಬಾರಿ ‘Recycle’ ಮಾಡಿದ್ದಾರೆಂದರೆ, ಅವುಗಳನ್ನು ನಾವು ಅದೆಷ್ಟು ಬಾರಿ ಓದಿದ್ದೇವೆಂದರೆ ಅವುಗಳನ್ನು ‘ಕ್ಲೀಶೆ’ ಎಂದು ಕರೆಯುವುದಕ್ಕೂ ಕಿರಿಕಿರಿಯಾಗುತ್ತದೆ, ಅಷ್ಟು ಹಳಸಿ, ನಾರಿ ಹೋಗಿವೆ.

Avoid cliches like the plague.

ಎಂಬ ಮಾತು ಪತ್ರಿಕೋದ್ಯಮದಲ್ಲಿದೆ. That itself a cliche ಎಂಬ ಜೋಕೂ ನಮ್ಮಲ್ಲೇ ಇದೆ! ಈ ರೀತಿಯ ಕ್ಲೀಶೆಗಳು ಬರೀ ಕ್ರೀಡೆ, ಕೆಲವು ಪದ, ಪದಗುಚ್ಛಗಳಿಗೆ ಮಾತ್ರ ಸೀಮಿತವಾಗಿಲ್ಲ, ಪತ್ರಿಕೆಗಳ ಶ್ರದ್ಧಾಂಜಲಿಗಳನ್ನೂ ಬಿಟ್ಟಿಲ್ಲ. ಯಾವುದೇ ಜನಪ್ರಿಯ ವ್ಯಕ್ತಿ ಸಾಯಲಿ, ಆತ ಆಟವಾಡುವುದನ್ನು ನಿಲ್ಲಿಸಿ ಹಲವು ದಶಕಗಳೇ ಕಳೆದಿದ್ದ ಮಾಜಿ ಕ್ರೀಡಾಪಟುವಿರಬಹುದು, ಪಂಚೇಂದ್ರಿಯಗಳೇ ನಿಷ್ಕ್ರಿಯಗೊಂಡಿದ್ದ ಸಾಹಿತಿಯಾಗಿರಬಹುದು, ಸಮಾಜಕ್ಕೆ ಯಾವುದೇ ಒಳಿತನ್ನುಮಾಡದಿದ್ದರೂ ಕೆಲವು ಕಾಲ ಆಡಳಿತ ನಡೆಸಿದ್ದ ಮುದಿ ರಾಜಕಾರಣಿಯಾಗಿದ್ದಿರಬಹುದು. ಅವರು ನಿಧನರಾದ ಕೂಡಲೇ, ಅವರ ನಿಧನದಿಂದ ನಮ್ಮ ದೇಶಕ್ಕೆ ಅಥವಾ ರಾಜ್ಯಕ್ಕೆ ‘ತುಂಬಲಾರದ ನಷ್ಟ’ವಾಗಿದೆ ಎಂದು ಪತ್ರಕರ್ತರು ಬರೆದು ಬಿಡುತ್ತಾರೆ. ಸಾಯುವಾಗ ಅವರಿಗೆ ೮೦, ೯೦, ಕೆಲವೊಮ್ಮೆ ೧೦೦ ವರ್ಷ ಮೀರಿದ್ದರೂ ‘ತುಂಬಲಾರದ ನಷ್ಟ’ ಎಂದು ಬರೆಯುವುದನ್ನು ಮಾತ್ರ ಮರೆಯುವುದಿಲ್ಲ! ಸತ್ತ ನಂತರ ಪಾಪಿಗಳ ಬಗ್ಗೆಯೂ ಒಳ್ಳೆಯ ಮಾತುಗಳನ್ನೇ ಬರೆಯಬೇಕು ಎಂಬ ಅಘೋಷಿತ ನಿಯಮ, ವಾಡಿಕೆ ಪತ್ರಿಕೋದ್ಯಮದಲ್ಲಿದ್ದಂತಿದೆ.

ಆದರೂ ಮೊನ್ನೆ ಗುರುವಾರ ನಿಧನರಾದ ಮಾಜಿ ಪ್ರಧಾನಿ ವಿಶ್ವನಾಥ ಪ್ರತಾಪ್ ಸಿಂಗ್ ಅವರ ಅಗಲಿಕೆಯ ಬಗ್ಗೆ “ತುಂಬಲಾರದ ನಷ್ಟ” ಎಂದು ಸುಳ್ಳು ಬರೆಯಲು ಏಕೋ ಮನಸ್ಸಾಗುತ್ತಿಲ್ಲ!

ಅಷ್ಟಕ್ಕೂ ಅವರ ನಿಧನ ದೇಶಕ್ಕೆ ‘ತುಂಬಲಾರದ ನಷ್ಟ’ವೋ ಅಥವಾ ಅವರಿಂದ ನಮ್ಮ ಸಮಾಜ ಹಾಗೂ ದೇಶಕ್ಕಾದ ನಷ್ಟ ‘ತುಂಬಲಾರ’ದ್ದೋ ಎಂಬ ಜಿeಸೆಯನ್ನು ನಡೆಸಬೇಕಾಗುತ್ತದೆ. ಗಡಿಯಾರವನ್ನು ೨೦ ಅಥವಾ ೨೨ ವರ್ಷ ಹಿಂದಕ್ಕೆ ತಿರುಗಿಸಿ. “ಗಲಿ ಗಲಿ ಮೇ ಶೋರ್ ಹೈ, ರಾಜೀವ್ ಗಾಂಧಿ ಚೋರ್ ಹೈ” ಎಂಬ ಮಾತು, ಗುರುತರ ಆರೋಪ ದೇಶದ ತುಂಬೆಲ್ಲ ಕೇಳಿಬರುತ್ತಿತ್ತು. ಇಂದಿರಾ ಗಾಂಧಿಯವರ ಹತ್ಯೆಯ ನಂತರ ಪ್ರಧಾನಿಯಾಗಿದ್ದ  ರಾಜೀವ್ ಗಾಂಧಿಯವರ ಪ್ರಾಮಾಣಿಕತೆಯ ಮೇಲೆಯೇ ಗಂಭೀರ ಅನುಮಾನಗಳೆದ್ದಿದ್ದವು. ನಮ್ಮ ದೇಶ ಕಂಡ ಅತ್ಯಂತ ಸ್ಫುರದ್ರೂಪಿ ಪ್ರಧಾನಿಯ ವರ್ಚಸ್ಸು ಮತ್ತು ಪ್ರತಿಷ್ಠೆಯನ್ನು ಒಂದು ಹಗರಣ ಮಣ್ಣುಪಾಲು ಮಾಡಿತ್ತು. ೧೯೮೪ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿದ ನಂತರ ರಾಜೀವ್ ಗಾಂಧಿಯವರು ಯಾವ ವ್ಯಕ್ತಿಯನ್ನು ಉತ್ತರ ಪ್ರದೇಶದಿಂದ ರಾಷ್ಟ್ರೀಯ ರಾಜಕಾರಣಕ್ಕೆ ಕರೆಸಿಕೊಂಡು ಪ್ರತಿಷ್ಠಿತ ಹಣಕಾಸು ಖಾತೆ ನೀಡಿದ್ದರೋ ಅಂತಹ ವ್ಯಕ್ತಿಯಾದ ವಿ.ಪಿ. ಸಿಂಗ್ ಅವರೇ ರಾಜೀವ್ ಪಾಲಿಗೆ ಕಂಟಕವಾಗಿದ್ದರು! ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡುತ್ತಿದ್ದ ಕೈಗಾರಿಕೋದ್ಯಮಿಗಳು ಹಾಗೂ ಕೆಲವು ಪ್ರತಿಷ್ಠಿತ ವ್ಯಕ್ತಿಗಳ ಮನೆಗಳ ಮೇಲೆ ಐಟಿ ದಾಳಿ ನಡೆಸಿ ಸರಕಾರಕ್ಕೆ ಇರುಸು-ಮುರುಸ ನ್ನುಂಟುಮಾಡಿದ್ದ ವಿ.ಪಿ. ಸಿಂಗ್ ಅವರನ್ನು ಪ್ರಧಾನಿ ರಾಜೀವ್ ಗಾಂಧಿ ರಕ್ಷಣಾ ಖಾತೆಗೆ ಸ್ಥಳಾಂತರ ಮಾಡಿದ್ದರು. ಆದರೆ ರಕ್ಷಣಾ ಸಚಿವರಾದ ವಿ.ಪಿ. ಸಿಂಗ್, ಅಲ್ಲೂ ತಗಾದೆ ತೆಗೆದರು. ಪ್ರಧಾನಿ ರಾಜೀವ್ ಗಾಂಧಿಯವರನ್ನೇ ಪೇಚಿಗೆ ಸಿಲುಕಿಸುವಂತಹ ಶಸ್ತ್ರಾಸ್ತ್ರ  ಖರೀದಿಗೆ ಸಂಬಂಧಿಸಿದ ದಾಖಲೆಗಳು ಸಿಕ್ಕಿವೆ ಎಂಬ ವದಂತಿಯನ್ನು ಹಬ್ಚಿಸಿದರು. ದೇಶದ ತುಂಬ ಗುಸು ಗುಸು ಆರಂಭವಾಯಿತು. ಕೇಳಿ ಬಂದಿದ್ದು ಆರೋಪವಾದರೂ ದೇಶವಾಸಿಗಳ ಕಣ್ಣೆದುರು ರಾಜೀವ್ ಗಾಂಧಿ ಅಪರಾಧಿಯಾಗಿ ನಿಲ್ಲಬೇಕಾಗಿ ಬಂತು. ವಿ.ಪಿ. ಸಿಂಗ್ ಅವರ ಬೊಬ್ಬೆ ಆ ಮಟ್ಟಿಗಿತ್ತು. ಪರಿಣಾಮವಾಗಿ ವಿ.ಪಿ. ಸಿಂಗ್, ಸಚಿವ ಸ್ಥಾನ ಕಳೆದುಕೊಳ್ಳಬೇಕಾಯಿತು. ಆದರೆ ಸಂಸದನ ಸ್ಥಾನಕ್ಕೇ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಹೊರಬಂದ ವಿ.ಪಿ. ಸಿಂಗ್, ಅರುಣ್ ನೆಹರು ಮತ್ತು ಆರಿಫ್ ಮೊಹಮದ್ ಖಾನ್ ಜತೆ ಸೇರಿ ‘ಜನ ಮೋರ್ಚಾ’ ಕಟ್ಟಿದರು. ಕೊನೆಗೆ ಜನತಾ ಪಕ್ಷ, ಲೋಕದಳ, ಕಾಂಗ್ರೆಸ್(ಎಸ್)ಗಳ ಜತೆ ವಿಲೀನ ಮಾಡಿಕೊಂಡು ‘ಜನತಾ ದಳ’ ಉದಯಕ್ಕೆ ಕಾರಣರಾದರು. ಆನಂತರ ಡಿಎಂಕೆ, ಟಿಡಿಪಿ, ಎಜಿಪಿ ಮುಂತಾದ ಪ್ರಾದೇಶಿಕ ಪಕ್ಷಗಳನ್ನೊಳಗೊಂಡ ‘ಯುನೈಟೆಡ್ ಫ್ರಂಟ್’ ರಚನೆ ಮಾಡಿದ್ದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಆದರೆ ೧೯೮೯ರಲ್ಲಿ ವಿ.ಪಿ. ಸಿಂಗ್ ಅವರ ಸಮಗ್ರತೆಯ ಬಗ್ಗೆಯೇ ಶಂಕೆ ವ್ಯಕ್ತಪಡಿಸಬೇಕಾದಂತಹ ಸನ್ನಿವೇಶ ಮತ್ತೆ ಸೃಷ್ಟಿಯಾಯಿತು.

೧೯೮೯ರ ಲೋಕಸಭೆ ಚುನಾವಣೆಯಲ್ಲಿ ಯುನೈಟೆಡ್ ಫ್ರಂಟ್   ಗಣನೀಯ ಸ್ಥಾನಗಳನ್ನು ಗಳಿಸಿದರೂ ಸರಕಾರ ರಚಿಸುವ ಸ್ಥಿತಿಯಲ್ಲಿರ ಲಿಲ್ಲ. ಇತ್ತ ೮೮ ಸಂಸದರನ್ನು ಹೊಂದಿದ್ದ ಬಿಜೆಪಿ ಹಾಗೂ ಎಡಪಕ್ಷಗಳು ಬೆಂಬಲ ನೀಡಿದ ಕಾರಣ ಕಾಂಗ್ರೆಸೇತರ ಸರಕಾರವೊಂದು ಅಸ್ತಿತ್ವಕ್ಕೆ ಬರಲು ಅವಕಾಶ ಸೃಷ್ಟಿಯಾಯಿತು. ಅದರೊಂದಿಗೆ ಪ್ರಧಾನಿ ಯಾರಾಗಬೇಕೆಂಬ ಪ್ರಶ್ನೆಯೂ ಎದುರಾಯಿತು. ಅದು ಹೊಸ ಸಮಸ್ಯೆಗೂ ದಾರಿ ಮಾಡಿಕೊಡುವ ಅಪಾಯವನ್ನು ತಂದೊಡ್ಡಿತು. ಚುನಾವಣೆ ಸಂದರ್ಭದಲ್ಲಿ ವಿ.ಪಿ. ಸಿಂಗ್ ಅವರು ಮುಂಚೂಣಿಯಲ್ಲಿ ನಿಂತು ಪ್ರಚಾರಾಂದೋಲನ ಮಾಡಿದರೂ ‘ಯಂಗ್ ಟರ್ಕ್’ ಎಂದೇ ಹೆಸರು ಗಳಿಸಿಕೊಂಡಿದ್ದ ಚಂದ್ರಶೇಖರ್ ಪ್ರಬಲ ಪ್ರತಿಸ್ಪರ್ಧಿಯಾಗಿದ್ದರು, ವಿಲೀನಕ್ಕೂ ಮೊದಲು ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಅವರು ಪ್ರಧಾನಿ ಸ್ಥಾನದ ಆಕಾಂಕ್ಷಿಯೂ ಆಗಿದ್ದರು. ಹಾಗಾಗಿ ವಿ.ಪಿ. ಸಿಂಗ್ ಹಾಗೂ ಚಂದ್ರಶೇಖರ್ ಒಳ ಒಪ್ಪಂದವೊಂದನ್ನು ಮಾಡಿಕೊಂಡರು. ಹಿರಿಯ ನಾಯಕ ದೇವಿ ಲಾಲ್ ಅವರನ್ನು ಪ್ರಧಾನಿಯಾಗಿ ಮಾಡುವುದು ಹಾಗೂ ತಾವಿಬ್ಬರೂ ಮಂತ್ರಿಗಳಾಗುವುದು ಎಂದು ನಿರ್ಧರಿಸಿಕೊಂಡರು. ಅದಕ್ಕನುಗುಣವಾಗಿ ಡಿಸೆಂಬರ್ ೧ರಂದು ನಡೆಯಲಿರುವ ಸಂಸದೀಯ ಪಕ್ಷದ ಸಭೆಯಲ್ಲಿ ವಿ.ಪಿ. ಸಿಂಗ್ ಅವರು ಪ್ರಧಾನಿ ಸ್ಥಾನಕ್ಕೆ ದೇವಿಲಾಲ್ ಹೆಸರು ಸೂಚಿಸಬೇಕಿತ್ತು ಹಾಗೂ ಅದನ್ನು ಚಂದ್ರಶೇಖರ್ ಅನುಮೋದಿಸಬೇಕಿತ್ತು. ಇಂತಹ ಪೂರ್ವ ಯೋಜನೆಯ ಬೆನ್ನಲ್ಲೇ ಸಂಸತ್ತಿನ ‘ಸೆಂಟ್ರಲ್ ಹಾಲ್’ನಲ್ಲಿ ಸಭೆ ಆರಂಭವಾಯಿತು. ಮೊದಲೇ ನಿರ್ಧರಿಸಿದಂತೆ ಎದ್ದು ನಿಂತ ವಿ.ಪಿ. ಸಿಂಗ್, ಪ್ರಧಾನಿ ಸ್ಥಾನಕ್ಕೆ ದೇವಿಲಾಲ್ ಹೆಸರನ್ನು ಸೂಚಿಸಿದರು. ಇನ್ನೇನು ಚಂದ್ರಶೇಖರ್ ಅನುಮೋದಿಸಬೇಕು ಎನ್ನುವಷ್ಟರಲ್ಲಿ ಸ್ವತಃ ಎದ್ದುನಿಂತ ದೇವಿಲಾಲ್, “ವಿ.ಪಿ. ಸಿಂಗ್ ಅವರೇ ಪ್ರಧಾನಿಯಾಗಲಿ, ನಾನು ಹಿರಿಯ ಸಹೋದರನಂತಿರುತ್ತೇನೆ” ಎಂದುಬಿಟ್ಟರು! ಅವರ ಮಾತಿನಂತೆಯೇ ವಿ.ಪಿ. ಸಿಂಗ್ ಯುನೈಟೆಡ್ ಫ್ರಂಟ್ ಸರಕಾರದ ಪ್ರಧಾನಿ ಅಭ್ಯರ್ಥಿಯಾಗಿ ನೇಮಕಗೊಂಡರು. ತಮಗೆ ಸರಕಾರ ನೀಡಿದ ದೇವಿಲಾಲ್ ಅವರನ್ನು ಉಪಪ್ರಧಾನಿ ಸ್ಥಾನಕ್ಕೆ ಸೂಚಿಸಿದರು. ಇತ್ತ ಕುಪಿತಗೊಂಡ ಚಂದ್ರಶೇಖರ್ ಸಭೆಯಿಂದ ಹೊರ ನಡೆದರು, ಕ್ಯಾಬಿನೆಟ್‌ನಿಂದಲೂ ಹೊರಗುಳಿದರು.

ಅಂದು ಚಂದ್ರಶೇಖರ್ ಜತೆ ಹೊಂದಾಣಿಕೆಯ ನಾಟಕವಾಡಿದ್ದ ವಿ.ಪಿ. ಸಿಂಗ್, ದೇವಿಲಾಲ್ ಅವರನ್ನು ತೆಕ್ಕೆಗೆ ಸೆಳೆದುಕೊಂಡು ಪಿತೂರಿಯನ್ನೇ ರೂಪಿಸಿದ್ದರು!

ರಾಜೀವ್ ಗಾಂಧಿಯವರ ವಿರುದ್ಧ ದೇಶದ ತುಂಬ ಅಪಪ್ರಚಾರ ಮಾಡಿ, ಚಂದ್ರಶೇಖರ್ ವಿರುದ್ಧ ತಂತ್ರಗಾರಿಕೆ ಮಾಡಿ ಪ್ರಧಾನಿಯಾದ ಮೇಲಾದರೂ ವಿ.ಪಿ. ಸಿಂಗ್ ಮಾಡಿದ್ದೇನು? ಪ್ರಧಾನಿಯಾದ ಪ್ರಾರಂಭದಲ್ಲೇ ಗೃಹ ಸಚಿವ ಮುಫ್ತಿ ಮೊಹಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರ ಅಪಹರಣ ನಾಟಕ ಶುರುವಾಯಿತು. ಸಾಮಾನ್ಯ ಜನರಿಗೆ, ದೇಶ ಕಾಯುವ ಸೈನಿಕರಿಗೆ ಶೌರ್ಯ, ತ್ಯಾಗ, ಬಲಿದಾನಗಳ ಪಾಠ ಹೇಳುವವರೇ ಸ್ವಾರ್ಥವನ್ನು ತೋರಿದರು. ಅಪಹರಣಕಾರರ ಎಲ್ಲ ಬೇಡಿಕೆಗಳಿಗೂ ಮಣಿದ ಸರಕಾರ ಆಕೆಯನ್ನು ಬಿಡಿಸಿ ಕರೆತರುವ ಸಲುವಾಗಿ ಭಯೋತ್ಪಾದಕ ರನ್ನೇ ಬಿಡುಗಡೆ ಮಾಡಿತು. ಭಾರತವನ್ನು ಬಗ್ಗಿಸಬಹುದು ಎಂದು ಭಯೋತ್ಪಾದಕರಿಗೆ ಮನವರಿಕೆಯಾಗಿದ್ದು ಹಾಗೂ ಕಾಶ್ಮೀರ ಸಮಸ್ಯೆ ಕೈಮೀರಿ ಹೋಗಲು ಆರಂಭಿಸಿದ್ದೇ ಆ ಘಟನೆಯ ನಂತರ. ಒಂದೆಡೆ ಕಾಶ್ಮೀರ, ಇನ್ನೊಂದೆಡೆ ಪಂಜಾಬ್ ಹೊತ್ತಿ ಉರಿಯಲಾರಂಭಿಸಿದವು. ಇಂತಹ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನಹರಿಸುವ ಬದಲು ಬಿಜೆಪಿಯನ್ನು ಮಟ್ಟಹಾಕುವುದರ ಬಗ್ಗೆಯೇ ಸಿಂಗ್ ಚಿಂತಿಸತೊಡಗಿದರು. ಅಷ್ಟಕ್ಕೂ ಬಿಜೆಪಿ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಮಾತನಾಡಲಾರಂಭಿಸಿತು. ಅದೇನು ಹೊಸ ವಿಷಯವಾಗಿರಲಿಲ್ಲ. ಹಿಂದುತ್ವ, ಅಯೋಧ್ಯೆ, ಕಾಶಿ, ಮಥುರಾಗಳನ್ನು ಮುಂದಿಟ್ಟುಕೊಂಡೇ ೮೮ ಸ್ಥಾನಗಳನ್ನು ಗಳಿಸಿಕೊಂಡಿದ್ದ ಬಿಜೆಪಿಯ ಬೆಂಬಲ ಪಡೆದುಕೊಳ್ಳುವಾಗಲೇ ಮುಂದೆ ಎದುರಾಗಲಿದ್ದ ಒಂದಿಷ್ಟು ಅಪಾಯಗಳ ಬಗ್ಗೆ ವಿ.ಪಿ. ಸಿಂಗ್‌ಗೆ ಅರಿವಿತ್ತು. ಆದರೆ ವಿ.ಪಿ ಸಿಂಗ್ ಈ ವಿಷಯದಲ್ಲಿ ಸೂಕ್ಷ್ಮವಾಗಿ ನಡೆದುಕೊಳ್ಳುವ ಬದಲು ಬಿಜೆಪಿಯ ‘ಕಮಂಡಲ’ವನ್ನು ನಿಷ್ಕ್ರಿಯಗೊಳಿಸುವ ಸಲುವಾಗಿ ‘ಮಂಡಲ’ವನ್ನೆತ್ತಿಕೊಂಡರು. ಆ ಮೂಲಕ ಜಾತಿಯೆಂಬ ವಿಷಬೀಜವನ್ನು ಬಿತ್ತಿದರು.  ಪರಿಶಿಷ್ಟ ಜಾತಿ, ವರ್ಗದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ. ೨೨.೫ರಷ್ಟು ಮೀಸಲು ನೀಡಬೇಕೆನ್ನುವ ಮಂಡಲ ಆಯೋಗದ ವರದಿಯನ್ನೇ ಜಾರಿಗೆ ತರಬಾರದಿತ್ತು ಎಂದಲ್ಲ. ಆದರೆ ವಂಚಿತರಿಗೆ ಮೀಸಲು ಕಲ್ಪಿಸುವಾಗ ಇನ್ನುಳಿದವರು ವಂಚಿತರಾಗದಂತಹ ಪರಿಸ್ಥಿತಿಯನ್ನು ಮೊದಲು ಸೃಷ್ಟಿಸಬೇಕಿತ್ತು. ಅಂದರೆ ೧೯೮೦ರ ದಶಕದ ಪ್ರಾರಂಭದಲ್ಲೇ ಆರ್ಥಿಕ ಉದಾರೀಕರಣವನ್ನು ಜಾರಿಗೆ ತರಬೇಕೆಂಬ ಮಾತು ಕೇಳಿಬಂದಿತ್ತು. ನೆಹರು ಪ್ರಣೀತ ಅರೆಸಮಾಜವಾದಿ ಅರ್ಥನೀತಿಗಳಿಂದ ದೇಶಕ್ಕೆ ಯಾವ ಲಾಭವೂ ಇಲ್ಲ ಎಂಬುದೂ ಸಾಬೀತಾಗಿತ್ತು. ಇಂತಹ ಲೋಪಗಳನ್ನು ಗುರುತಿಸಿ ಮೊದಲು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬಹುದಿತ್ತು. ನರಸಿಂಹರಾವ್ ಮಾಡಿದ್ದು ಆ ಕೆಲಸವನ್ನೇ ಅಲ್ಲವೆ? ಒಬ್ಬ ಕಾಂಗ್ರೆಸ್ ಪ್ರಧಾನಿಯಾಗಿ ನೆಹರು ನೀತಿಗಳಿಗೆ ಶರಣು ಹೊಡೆಯುವ ಸಾಮರ್ಥ್ಯ ನರಸಿಂಹರಾವ್ ಅವರಲ್ಲಿತ್ತು ಎನ್ನುವುದಾದರೆ, ಆ ಕೆಲಸ ವಿ.ಪಿ. ಸಿಂಗ್ ಗೆ ಏಕಾಗಲಿಲ್ಲ? ೧೯೮೯ರಲ್ಲೇ ಆರ್ಥಿಕ ಉದಾರೀಕರಣವನ್ನು ಜಾರಿಗೆ ತಂದು ಖಾಸಗಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಬಹುದಿತ್ತು. ಆ ಮೂಲಕ ಹೊಸದಾಗಿ ಉದ್ಯೋಗ ಸೃಷ್ಟಿ ಮಾಡಬಹುದಿತ್ತು, ಜನ ಸರಕಾರಿ ಕೆಲಸವನ್ನೇ ನಂಬಿ ಕುಳಿತುಕೊಳ್ಳಬೇಕಾದ ಅಗತ್ಯವಿಲ್ಲ ಎಂಬಂತಹ ಪರಿಸ್ಥಿತಿಯನ್ನು ಕ್ರಮೇಣವಾಗಿ ಸೃಷ್ಟಿಸಿ ಮೀಸಲಿನ ಮಾತನಾಡಬಹುದಿತ್ತು. ಅದರ ಬದಲು ಏಕಾಏಕಿ ಮಂಡಲ ಆಯೋಗದ ವರದಿಯನ್ನು ಜಾರಿಗೆ ತರಲು ಹೊರಟರು. ಇದರಿಂದ ಮಧ್ಯಮ ವರ್ಗದವರು, ನಗರವಾಸಿಗಳು ಕುಪಿತಗೊಂಡು ಹಿಂದುಳಿದವರ ಜತೆ ಸಾಮಾಜಿಕ ಸಂಘರ್ಷಕ್ಕೆ ಮುಂದಾಗಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತು. ಅದರಲ್ಲೂ ದಿಲ್ಲಿಯ ದೇಶಬಂಧು ಕಾಲೇಜಿನ ರಾಜೀವ್ ಗೋಸ್ವಾಮಿ ಎಂಬಾತ ಮೈಗೆ ಬೆಂಕಿಹಚ್ಚಿಕೊಳ್ಳುವ ಮೂಲಕ ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ಸೃಷ್ಟಿಯಾಗುವಂತಾಯಿತು. ಸುಟ್ಟ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಜೀವನ್ಮರಣದ ನಡುವೆ ಗೋಸ್ವಾಮಿ ಹೋರಾಡುತ್ತಿದ್ದರೂ ಅನುಕಂಪವನ್ನು ಸೂಚಿಸುವ, ಮಂಡಲ್ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದ ವಿದ್ಯಾರ್ಥಿ ವೃಂದವನ್ನು ಮಾತುಕತೆಗೆ ಆಹ್ವಾನಿಸುವ ಸೌಜನ್ಯವನ್ನೂ ವಿ.ಪಿ. ಸಿಂಗ್ ತೋರಲಿಲ್ಲ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ವನ್ನು ಅವರೆಂದೂ ಮಾಡಲಿಲ್ಲ. ಬರೀ ಸಾಮಾಜಿಕ ನ್ಯಾಯದ ಮಾತನಾಡತೊಡಗಿದರು.

ಆದರೆ ಒಬ್ಬರ ಅವಕಾಶವನ್ನು ಕಿತ್ತುಕೊಂಡು ಇನ್ನೊಬ್ಬರಿಗೆ ಕೊಡುವುದು ಅದೆಂಥ ಸಾಮಾಜಿಕ ನ್ಯಾಯ?

ಖಂಡಿತ ಅಮೆರಿಕದಲ್ಲೂ ಕರಿಯರಿಗೆ ಮೀಸಲು ಸೌಲಭ್ಯವಿದೆ. ಆದರೆ ಆ ಮೀಸಲನ್ನು ಪಡೆದುಕೊಳ್ಳುವುದಕ್ಕೂ ಒಂದು ಅರ್ಹತೆ, ಮಾನದಂಡವಿದೆ. ನಮ್ಮಲ್ಲಿ ಮಾತ್ರ ಎಲ್ಲದಕ್ಕೂ ಜಾತಿಯೇ ಮಾನದಂಡ. ಜಾತಿಯ ಆಧಾರದ ಮೇಲೆ ಕೆಲಸವನ್ನೂ ಪಡೆದುಕೊಳ್ಳಬಹುದು. ಬಡ್ತಿಯ ವಿಷಯ ಬಂದಾಗಲೂ ಹಿಂದುಳಿದ ಜಾತಿ/ವರ್ಗಗಳಿಗೆ ‘ಜಾತಿ’ಯೇ ಸಾಮರ್ಥ್ಯ ಮತ್ತು ಅಳತೆಗೋಲಾಗಿ ಬಿಡುತ್ತದೆ! ‘ಟೈಮ್ ಬೌಂಡ್ ಪ್ರಮೋಶನ್’ ಎಂಬ ದೇಹಕ್ಕೆ ವಯಸ್ಸಾಗಿದ್ದನ್ನೇ ಅನುಭವ ಎಂದು ಪರಿಗಣಿಸುವ ಸೌಲಭ್ಯವಂತೂ ಇದ್ದೇ ಇದೆ. ಮಂಡಲ್ ವರದಿಯನ್ನು ಜಾರಿಗೊಳಿಸಲು ಮುಂದಾಗುವ ಮೂಲಕ ವಿ.ಪಿ. ಸಿಂಗ್  ಅವರು, ದಲಿತರಲ್ಲಿನ ‘ಅವಲಂಬಿತ ಮನಸ್ಥಿತಿ’ಯನ್ನು ಗಟ್ಟಿಗೊಳಿಸಲು ಪ್ರಯತ್ನಿಸಿದರೇ ಹೊರತು, ದಲಿತರು ಹಾಗೂ ಹಿಂದುಳಿದವರ eನದ ಮಟ್ಟವನ್ನು ಹೆಚ್ಚಿಸಿ ಉದ್ಯೋಗಾವಕಾಶಗಳನ್ನು ಬಾಚಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಲಿಲ್ಲ. ದಲಿತರ ಬೌದ್ಧಿಕ, ಆರ್ಥಿಕ ಮಟ್ಟವನ್ನು ಹೆಚ್ಚಿಸುವ ಬದಲು ಮೇಲಿರುವವರನ್ನು ಕೆಳಗೆಳೆಯುವುದೇ ‘ಸಾಮಾಜಿಕ ನ್ಯಾಯ’ ಎಂಬಂತೆ ವರ್ತಿಸಿದರು. ಇದರಿಂದ ನಮ್ಮ ಸಮಾಜ ಎಷ್ಟು ಒಡೆಯಿತೆಂದರೆ, ಮೇಲ್ವರ್ಗದವರನ್ನು ಮಟ್ಟಹಾಕುವುದೇ ಐತಿಹಾಸಿಕ ಅನ್ಯಾಯಕ್ಕೆ ಒದಗಿಸುವ ನ್ಯಾಯ ಎಂಬಂತೆ ದಲಿತರು ಯೋಚಿಸತೊಡಗಿದರು. ಪ್ರತಿಭೆ ಇದ್ದರೂ ದಲಿತರಿಂದಾಗಿ ತಮಗೆ ಸೇರಬೇಕಾದ ಅವಕಾಶಗಳೆಲ್ಲ ತಪ್ಪಿಹೋಗುತ್ತಿವೆ ಎಂಬ ಹತಾಶೆ, ಕೋಪ ಮೇಲ್ವರ್ಗಗಳಲ್ಲಿ ಕಂಡುಬರಲಾರಂಭಿಸಿತು. ಇದರಿಂದಾಗಿ ಮೇಲ್ ಮತ್ತು ಕೆಳವರ್ಗಗಳ ನಡುವಿನ ಕಂದಕ ಇನ್ನೂ ಹೆಚ್ಚಾಗುತ್ತಲೇ ಹೋಯಿತು. ಅಂದು ವಿ.ಪಿ. ಸಿಂಗ್ ಹುಟ್ಟುಹಾಕಿದ ‘ನವ ಅವಲಂಬಿತ ಮನಃಸ್ಥಿತಿ’ ಇಂದು ನಮ್ಮ ದಲಿತ ನಾಯಕತ್ವವನ್ನು ಹೇಗೆ ಕಾಡುತ್ತಿದೆಯೆಂದರೆ, ಖಾಸಗಿ ಕ್ಷೇತ್ರದಲ್ಲೂ ಮೀಸಲು ಕೊಡಬೇಕೆಂದು ಬೊಬ್ಬೆ ಹಾಕಲಾರಂಭಿಸಿದ್ದಾರೆ. ಅದು ತಮ್ಮ ಆಜನ್ಮ ಸಿದ್ಧ ಹಕ್ಕು ಎಂಬಂತೆ ಪ್ರತಿಪಾದಿಸುತ್ತಿದ್ದಾರೆ.

ಇದಕ್ಕೆಲ್ಲ ಕಾರಣ ವಿ.ಪಿ. ಸಿಂಗ್ ಅವರೇ ಅಲ್ಲವೆ?

ಅಂದು ರಾಜೀವ್ ಗಾಂಧಿಯವರಿಗೆ ಬೊಫೋರ್ಸ್ ಹಗರಣ ಕಳಂಕವನ್ನು ಅಂಟಿಸಿದ್ದೇನೋ ನಿಜ. ಆದರೆ ಅವರ ಆಡಳಿತಾವಧಿಯಲ್ಲಿ ಕೆಲವು ಗಮನಾರ್ಹ ಬದಲಾವಣೆಗಳೂ ಆಗಿದ್ದವು. ಪ್ರತಿಷ್ಠಿತ ಡೂನ್ ಸ್ಕೂಲ್‌ನಲ್ಲಿ ಓದಿದ್ದ ರಾಜೀವ್ ಗಾಂಧಿ, ಗ್ರಾಮೀಣ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು, ಬಾಚಣಿಗೆಯಿಂದ ಬರೆಯುವ ಪುಸ್ತಕದವರೆಗೂ, ಊಟದಿಂದ ಉಡುವ ಬಟ್ಟೆಯವರೆಗೂ ಎಲ್ಲವೂ ಉಚಿತವಾಗಿ ಸಿಗುವಂತಾಗಬೇಕು ಎಂಬ ಉದ್ದೇಶದಿಂದ ದೇಶದ ಎಲ್ಲ ಜಿಲ್ಲೆಗಳಿಗೂ ಒಂದೊಂದು ಶಾಲೆಗಳನ್ನು ಕಲ್ಪಿಸಲು ೧೯೮೬ರಲ್ಲಿ ‘ನವೋದಯ’ ಸ್ಕೂಲ್‌ಗಳನ್ನು ಆರಂಭಿಸಿದ್ದರು. ಸಂಪರ್ಕ ಕ್ರಾಂತಿಗೂ ನಾಂದಿ ಹಾಡಿದ್ದರು, ಮತದಾನದ ವಯೋಮಾನವನ್ನು ೨೧ ರಿಂದ ೧೮ಕ್ಕಿಳಿಸುವಂತಹ ಕ್ರಾಂತಿಕಾರಕ ನಿರ್ಧಾರವನ್ನೂ ಕೈಗೊಂಡಿದ್ದರು. ಆ ಮೂಲಕ ಈ ದೇಶದ ಯುವಜನತೆಗೆ ರಾಜಕೀಯ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ, ಭವಿಷ್ಯ ನಿರ್ಧರಿಸುವ ಅವಕಾಶ ಕಲ್ಪಿಸಿದ್ದರು. ಶ್ರೀಲಂಕಾಕ್ಕೆ ನಮ್ಮ ಶಾಂತಿ ಪಾಲನಾ ಪಡೆಯನ್ನು(ಐಪಿಕೆಎಫ್) ಕಳುಹಿಸುವ ಮೂಲಕ ಆ ರಾಷ್ಟ್ರಕ್ಕೆ ಮಿಲಿಟರಿ ಸಹಾಯ ನೀಡಲು ತುದಿಗಾಲಿನಲ್ಲಿ ನಿಂತಿದ್ದ ನಮ್ಮ ಶತ್ರು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ಹಿಂದೂ ಮಹಾಸಾಗರಕ್ಕೆ ಕಾಲಿಡದಂತೆ ನೋಡಿಕೊಂಡರು.
ಅಂತಹ ನಾಯಕನ ವಿರುದ್ಧ ಸಿಡಿದೆದ್ದು ಅಧಿಕಾರಕ್ಕೇರಿದ ವಿ.ಪಿ. ಸಿಂಗ್ ಈ ದೇಶಕ್ಕೆ ನೀಡಿದ ಕೊಡುಗೆಯೇನು?

ದಲಿತರ eನವೃದ್ಧಿ ಮಾಡಿ, ಅವರಲ್ಲಿ ಸ್ವಾವಲಂಬನೆ ಮನೋ ಭಾವನೆಯನ್ನು ತುಂಬುವ ಬದಲು, ಅನ್ಯರ ಅವಕಾಶಗಳನ್ನು ಕಿತ್ತುಕೊಳ್ಳುವುದೂ ಕೂಡ ‘ಹಕ್ಕು’ ಎನ್ನುವ ಮನಃಸ್ಥಿತಿಯನ್ನು ಬೆಳೆಸಿದ, ಆ ಮೂಲಕ ಸಮಾಜವನ್ನು ಒಡೆದ, ಮೀಸಲೆಂಬ ಪೆಡಂಭೂತ ಖಾಸಗಿ ಕ್ಷೇತ್ರವನ್ನೂ ಕಾಡುವಂತೆ ಮಾಡಿದ ವಿ.ಪಿ. ಸಿಂಗ್, ದೇಶಕ್ಕೆ ಮರ್ಮಾಘಾತವನ್ನುಂಟು ಮಾಡಿರುವ ಮುಂಬೈ ಆಕ್ರಮಣ ನಡೆದ ದಿನವೇ ಅಗಲಿದ್ದಾರೆ. ಆಂದು ರುಬಿಯಾ ಅವರನ್ನು ಬಿಡಿಸಿಕೊಂಡು ಬರುವ ಸಲುವಾಗಿ ಭಯೋತ್ಪಾದಕರನ್ನು ಬಿಡುಗಡೆ ಮಾಡಿ ಕಾಶ್ಮೀರ ಸಮಸ್ಯೆ ಉಲ್ಬಣಗೊಳ್ಳಲು ದಾರಿ ಮಾಡಿಕೊಟ್ಟ ಹಾಗೂ ಅಂತಹ ಪುಕ್ಕಲ ನಿರ್ಧಾರದ ಮೂಲಕ ದೇಶದ್ರೋಹಿಗಳಿಗೆ ಉತ್ತೇಜನ ನೀಡಿದ ಸಿಂಗ್ ನಿಧನದಿಂದ ದೇಶಕ್ಕೆ ‘ತುಂಬಲಾರದ ನಷ್ಟ’ವಾಗಿದೆಯೋ ಅಥವಾ ಅವರಿಂದ ದೇಶಕ್ಕಾದ ನಷ್ಟ ‘ತುಂಬಲಾರ’ದ್ದೋ?

ನೀವೇ ಯೋಚನೆ ಮಾಡಿ…

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: