ಇವು ‘ಡೀಮ್ಡ್ ‘ಅಥವಾ ‘ಡೂಮ್ಡ್’ ಯೂನಿವರ್ಸಿಟಿಗಳೋ? -Deemed or doomed University?
ಡೀಮ್ಡ್ ಯೂನಿವರ್ಸಿಟಿಗಳಲ್ಲಿ ಸ್ವತಃ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವುದರಿಂದ, ಅವರೇ ಮೌಲ್ಯ ಮಾಪನವನ್ನೂ ಮಾಡುವುದರಿಂದ ತಮಗೆ ಆಗದ ವಿದ್ಯಾರ್ಥಿಯ ಭವಿಷ್ಯವನ್ನೇ ಪ್ರೊಫೆಸರ್ ಗಳು ಹಾಳುಗೆಡವಬಹುದು! ಅಲ್ಲದೆ ಕಾಮಪಿಪಾಸು ಪ್ರೊಫೆಸರ್ಗಳು ವಿದ್ಯಾರ್ಥಿನಿಯರ ಶೀಲಹರಣ ಮಾಡುವುದಕ್ಕೂ ಅವಕಾಶ ದೊರೆಯುತ್ತದೆ. ಇಂತಹ ಅಪಾಯಗಳಿಂದಾಗಿ ಡೀಮ್ಡ್ ಯೂನಿವರ್ಸಿಟಿಗಳು ವಿದ್ಯಾರ್ಥಿಗಳ ಪಾಲಿಗೆ ‘ಡೂಮ್ಡ್” ಆಗಬಹುದಲ್ಲವೆ?
‘ನಿಯತಿ ಕೃತ ನಿಯಮ ರಹಿತಾಂ
ಹ್ಲಾದೈಕಮಯಿ
ಅನನ್ಯ ಪರತಂತ್ರಾಂ..
..ಮಾದಧತಿ
ಭಾರತೀ
ಕವೇರ್ ಜಯತಿ”
ಯಾವ ಕವಿ ಸೃಜನಶೀಲವಾದ ಕವಿತೆಯನ್ನು ಸೃಷ್ಟಿಸುತ್ತಾನೋ ಆ ಕವಿಯನ್ನು ಮುಕ್ತ ಕಂಠದಿಂದ ಶ್ಲಾಘಿಸು. ಆತ ಸೃಷ್ಟಿಸಿದ ಕವಿತೆ ಕೆಲವು ರೂಢಿಗತ ಕಟ್ಟಳೆಗಳನ್ನು ಮೀರಬಹುದು, ಆದರೂ ಅದು ಒಂದು ವಿಸ್ತೃತ ಚೌಕಟ್ಟಿನೊಳಗೇ ಇರುತ್ತದೆ. ಅದು ಯಾವ, ಯಾರ ನಿಯಂತ್ರಣಕ್ಕೆ ಸಿಗದಿದ್ದರೂ ಒಂದು ಜನಸಮುದಾಯದ ಭಾವನೆ, ಆಶೋತ್ತರಗಳನ್ನೇ ಪ್ರತಿಫಲಿಸುತ್ತದೆ. ಅದು ಮನಸ್ಸಿಗೆ ಮುದವನ್ನೂ ನೀಡಬಲ್ಲದು, ಮತ್ತನ್ನೂ ಬರಿಸಬಲ್ಲದು ಎನ್ನುತ್ತಾನೆ ಮುಮ್ಮುಟ. ಅದನ್ನೇ ನಮ್ಮ ಕುವೆಂಪು ಅವರು “ನಿಯಮಗಳೆ ನಿನ್ನ ಬಳೆ, ಅನವರತ ಅಶ್ರಂಖಲೆ” ಎನ್ನುತ್ತಾರೆ. ಅಂದರೆ ಬಳೆ ಸೌಂದರ್ಯದ ಸಂಕೇತವೇ ಹೊರತು, ದಾಸ್ಯದ ಸಂಕೋಲೆಯಲ್ಲ. ಕವಿತೆಗೂ ಕೂಡ ನಿಯಮ, ಕಟ್ಟುಪಾಡುಗಳಿದ್ದರೂ ಅವು ಬೇಡಿಯಲ್ಲ, ಕವಿತೆ ಆ ಕಟ್ಟುಪಾಡುಗಳನ್ನು ಮೀರಿದರೂ ಒಂದು ಸ್ಥಾಪಿತ ಚೌಕಟ್ಟಿನೊಳಗೇ ಇರುತ್ತದೆ ಎಂದರ್ಥ.
ಇದನ್ನು ನೆನಪಿಸಿಕೊಳ್ಳಲು ಕಾರಣವೂ ಇದೆ. ನಮ್ಮನ್ನು ದಾಸ್ಯಕ್ಕೆ ತಳ್ಳಿದ್ದ ಬ್ರಿಟಿಷರನ್ನು ಹೊರದಬ್ಬಲು ಆರಂಭವಾದ ಸ್ವಾತಂತ್ರ್ಯ ಚಳವಳಿಯಂತಹ ಉದ್ವಿಗ್ನ ಪರಿಸ್ಥಿತಿಯಲ್ಲೂ ದೇಶಾದ್ಯಂತ ಹಲವಾರು ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡವು. ಈ ಶಿಕ್ಷಣ ಸಂಸ್ಥೆಗಳು ಮಾದರಿ ವಿದ್ಯಾರ್ಥಿಗಳನ್ನು ರೂಪಿಸಿದ್ದು ಮಾತ್ರವಲ್ಲ, ಸ್ವಾತಂತ್ರ್ಯ ಚಳವಳಿಯಲ್ಲೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಭಾಗಿಯಾಗಿದ್ದವು. ಹೀಗೆ ಕಷ್ಟಕಾಲದಲ್ಲೂ ನೈತಿಕತೆಯನ್ನು ಎತ್ತಿಹಿಡಿದ, ವ್ಯವಸ್ಥೆಯ ಸಂಕೋಲೆಯಲ್ಲೂ ಅಸ್ತಿತ್ವವನ್ನು ಉಳಿಸಿಕೊಂಡ ಅಂತಹ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ತಮ್ಮದೇ ಆದ ವೈಶಿಷ್ಟ್ಯವನ್ನು ಕಾಪಾಡಿಕೊಳ್ಳಲು ಅವಕಾಶ ಮಾಡಿಕೊಡಬೇಕೆಂದು 1948ರಲ್ಲಿ ನೇಮಕಗೊಂಡಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ನೇತೃತ್ವದ ‘ವಿಶ್ವವಿದ್ಯಾಲಯ ಶಿಕ್ಷಣ ಆಯೋಗ” ಶಿಫಾರಸು ಮಾಡಿತು. ಅದರ ಫಲವಾಗಿ, 1956ರಲ್ಲಿ ಜಾರಿಗೆ ಬಂದ “ಯುಜಿಸಿ ಕಾಯಿದೆ”ಯ ಸೆಕ್ಷನ್ 12(ಬಿ) ಅಡಿ ಅರ್ಹ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ತಮ್ಮ ವೈಶಿಷ್ಟ್ಯವನ್ನು ಉಳಿಸಿಕೊಳ್ಳಲು ‘ವಿಶ್ವವಿದ್ಯಾಲಯ”ದ ಸ್ಥಾನಮಾನ ನೀಡುವ ಅವಕಾಶ ಕಲ್ಪಿಸಲಾಯಿತು.
ಅದನ್ನೇ “Deemed -to-be University” ಅನ್ನುವುದು. ಇಂತಹ ಸ್ಥಾನಮಾನ ಪಡೆದ ಶಿಕ್ಷಣ ಸಂಸ್ಥೆಗಳಿಗೆ ಸರಕಾರದ ನಿಯಂತ್ರಣದಲ್ಲಿರುವ ವಿಶ್ವವಿದ್ಯಾಲಯಗಳಿಗೆ ಇರುವಷ್ಟೇ ಹಕ್ಕು ಮತ್ತು ಅಧಿಕಾರಗಳಿರುತ್ತವೆ. ಆದರೆ ಸರಕಾರದ ಯಾವ ನಿಯಂತ್ರಣವೂ ಇರುವುದಿಲ್ಲ. ಹಾಗಾಗಿ ಹಕ್ಕು ಮತ್ತು ಅಧಿಕಾರಗಳನ್ನು ದುರುಪಯೋಗಪಡಿಸಿಕೊಳ್ಳುವ ಎಲ್ಲ ಅವಕಾಶಗಳಿದ್ದರೂ ಏಕೆ ‘ಡೀಮ್ಡ್ ಯೂನಿವರ್ಸಿಟಿ” ಸ್ಥಾನಮಾನವನ್ನು ನೀಡಲು ಮುಂದಾದರೆಂದರೆ ಸ್ವಾತಂತ್ರ್ಯ ಪೂರ್ವದಲ್ಲಿ ಸ್ಥಾಪನೆಯಾಗಿದ್ದ ಶಿಕ್ಷಣಸಂಸ್ಥೆಗಳು ಅಂತಹ ಗೌರವವನ್ನು ಕಾಪಾಡಿಕೊಂಡಿದ್ದವು, ಜನರ ವಿಶ್ವಾಸಕ್ಕೆ ಪಾತ್ರ ವಾಗಿದ್ದವು.
ಆದರೆ ಈಗ ಆಗುತ್ತಿರುವುದೇನು? ಯುಜಿಸಿ ಕಾಯಿದೆ ಜಾರಿಗೆ ಬಂದ ಪ್ರಾರಂಭಿಕ ಹತ್ತು ವರ್ಷಗಳಲ್ಲಿ 8 ಶಿಕ್ಷಣ ಸಂಸ್ಥೆಗಳಿಗೆ ‘ಡೀಮ್ಡ್ ಯೂನಿ ವರ್ಸಿಟಿ” ಸ್ಥಾನಮಾನ ನೀಡಲಾಯಿತು. ಎಪ್ಪತ್ತರ ದಶಕದಲ್ಲಿ ‘ತೀರಾ ವಿರಳ ಹಾಗೂ ವಿಶೇಷ ಸಂದರ್ಭಗಳಲ್ಲಿ ಮಾತ್ರ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನ ನೀಡಬೇಕೆಂದು” ಅಧಿಸೂಚನೆ ಹೊರಡಿಸಿದ ಯುಜಿಸಿ, 3 ಕಾಲೇಜುಗಳಿಗೆ ಅಂತಹ ವಿಶೇಷ ಸ್ಥಾನ ನೀಡಿತು. ಎಂಬತ್ತರ ದಶಕದಲ್ಲಿ ಇನ್ನೂ 18 ಶಿಕ್ಷಣ ಸಂಸ್ಥೆಗಳಿಗೆ ಡೀಮ್ಡ್ ಸ್ಥಾನಮಾನ ನೀಡಲಾಯಿತು. 1956ರಿಂದ 1990ರವರೆಗೂ ಅಂದರೆ 35 ವರ್ಷಗಳ ಅವಧಿಯಲ್ಲಿ ಕೇವಲ 29 ಕಾಲೇಜುಗಳನ್ನು ಡೀಮ್ಡ್ ಯೂನಿವರ್ಸಿಟಿಗಳೆಂದು ಘೋಷಿಸಲಾಯಿತು. ಆದರೆ ಕಳೆದ 15 ವರ್ಷಗಳಲ್ಲಿ 63 ಶಿಕ್ಷಣ ಸಂಸ್ಥೆಗಳಿಗೆ ಡೀಮ್ಡ್ ಯೂನಿವರ್ಸಿಟಿ ಸ್ಥಾನ ನೀಡಲಾಗಿದೆ.
ಅದರಲ್ಲೂ 2002 ರಿಂದೀಚೆಗೆ ನಮ್ಮ ಸುರತ್ಕಲ್ನಲ್ಲಿರುವ ಕೆ.ಆರ್. ಇ.ಸಿ. ಸೇರಿದಂತೆ ದೇಶಾದ್ಯಂತ ಇರುವ ಎಲ್ಲ ಪ್ರಾದೇಶಿಕ ಇಂಜಿನಿಯರಿಂಗ್ ಕಾಲೇಜುಗಳಲ್ಲದೆ ಇನ್ನೂ 36 ಶಿಕ್ಷಣ ಸಂಸ್ಥೆಗಳಿಗೆ ಡೀಮ್ಡ್ ಯೂನಿವರ್ಸಿಟಿ ಸ್ಥಾನಮಾನ ನೀಡ ಲಾಗಿದೆ! ಇತ್ತೀಚೆಗಷ್ಟೇ ನಮ್ಮ ಬೆಳಗಾವಿಯಲ್ಲಿರುವ ಕೆ.ಎಲ್.ಇ. ಹಾಗೂ ಕೋಲಾರದಲ್ಲಿರುವ ಆರ್.ಎಲ್. ಜಾಲಪ್ಪನವರ ದೇವರಾಜ್ ಅರಸ್ ಮೆಡಿಕಲ್ ಕಾಲೇಜಿಗೂ ಡೀಮ್ಡ್ ಯೂನಿವರ್ಸಿಟಿ ಸ್ಥಾನ ನೀಡಲಾಗಿದೆ. ಇಂದು ಕರ್ನಾಟಕದಲ್ಲಿ ಒಟ್ಟು 9 ಡೀಮ್ಡ್ ಯೂನಿವರ್ಸಿಟಿಗಳಿವೆ. ಈ ನಡುವೆ ಕಾಲೇಜುಗಳಿಗೆ “autonomous status (ಸ್ವಾಯತ್ತ ಸ್ಥಾನಮಾನ) ನೀಡುವ ಹೊಸ ಜಾಡ್ಯ ಪ್ರಾರಂಭ ವಾಗಿದೆ!
ಅಷ್ಟಕ್ಕೂ, ‘ಡೀಮ್ಡ್ ಯೂನಿವರ್ಸಿಟಿ” ಮತ್ತು ‘ಆಟೊ ನೋಮಸ್ ಸ್ಟೇಟಸ್”ಗೂ ಇರುವ ವ್ಯತ್ಯಾಸವೇನು? ಡೀಮ್ಡ್ ಯೂನಿವರ್ಸಿಟಿಗಳ ಮೇಲೆ ಸರಕಾರದ ಯಾವ ನಿಯಂತ್ರಣವೂ ಇರುವುದಿಲ್ಲ. ಅದು ಆಡಳಿತಾತ್ಮಕ ವ್ಯವಹಾರವಿರಬಹುದು, ವ್ಯವಸ್ಥೆ ಇರಬಹುದು, ಸಂಬಳ ನಿರ್ಧಾರ, ನೀಡಿಕೆ ಎಲ್ಲವೂ ಮುಕ್ತ ಹಾಗೂ ಮ್ಯಾನೇಜ್ಮೆಂಟ್ ನಿಯಂತ್ರಣದಲ್ಲಿರುತ್ತವೆ. ಅವು ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸುತ್ತವೆ, ಅಡ್ಮಿಶನ್ ಮಾಡಿಕೊಳ್ಳುತ್ತವೆ. ತಮಗೆ ಇಷ್ಟ ಬಂದಂತೆ ಪಠ್ಯಕ್ರಮ(ಸಿಲಬಸ್)ವನ್ನೂ ರೂಪಿಸುತ್ತವೆ. ಸ್ವತಂತ್ರವಾಗಿ ಪ್ರಶ್ನೆ ಪತ್ರಿಕೆಗಳನ್ನೂ ಸಿದ್ಧಪಡಿಸುತ್ತವೆ, ಮೌಲ್ಯಮಾಪನ ಮಾಡುತ್ತವೆ. ಅಲ್ಲದೆ ತಮ್ಮದೇ ಆದ ಸರ್ಟಿಫಿಕೆಟ್ಗಳನ್ನೂ ನೀಡುತ್ತವೆ. ಇಂಥದ್ದೇ ನಿರ್ದಿಷ್ಟ ಸಿಲಬಸ್ ನಿರ್ಧರಿಸದೇ, ಪರೀಕ್ಷೆಯನ್ನೇ ನಡೆಸದೇ ಕೇವಲ ಅಸೈನ್ಮೆಂಟ್, ಸಪ್ರೈಸ್ ಕ್ವಿಜ್, ಸೆಮಿನಾರ್ಗಳ ಮೂಲಕ ಉಪನ್ಯಾಸಕರು ವಿದ್ಯಾರ್ಥಿಗಳ ಯೋಗ್ಯಾಯೋಗ್ಯತೆಯನ್ನು ಅಳೆದು ಅಂಕ ಮತ್ತು ಸರ್ಟಿಫಿಕೆಟ್ ನೀಡುವ ಡೀಮ್ಡ್ ಯೂನಿವರ್ಸಿಟಿಗಳೂ ಇವೆ!
ಆದರೆ ‘ಆಟೊನೊಮಸ್ ಸ್ಟೇಟಸ್” ಸ್ವಲ್ಪ ಭಿನ್ನ. ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸುವ, ಆಡ್ಮಿಶನ್ ಮಾಡಿಕೊಳ್ಳುವ, ಅಂತಿಮ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ರೂಪಿಸುವ, ಮೌಲ್ಯಮಾಪನ ಮಾಡುವ ಹಕ್ಕು ಮತ್ತು ಅಧಿಕಾರ ಆಟೊನೊಮಸ್ ಕಾಲೇಜುಗಳಿಗೂ ಇರುತ್ತದೆ. ಆದರೆ ಸಂಬಂಧಪಟ್ಟ ವಿಶ್ವವಿದ್ಯಾಲಯದ ಅನುಮತಿ ಪಡೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಪ್ರಶ್ನೆ ಪತ್ರಿಕೆ ರೂಪಿಸುವ ಹಾಗೂ ಮೌಲ್ಯ ಮಾಪನ ಮಾಡುವ ಅಧಿಕಾರ ಕಾಲೇಜುಗಳಿಗೇ ಸೇರಿದ್ದರೂ ಡಿಗ್ರಿ ಸರ್ಟಿಫಿಕೆಟ್ ನೀಡುವುದು ಮಾತ್ರ ವಿಶ್ವವಿದ್ಯಾಲಯವಾಗಿರುತ್ತದೆ. ಅಲ್ಲದೆ Financial independence ಇರುವುದಿಲ್ಲ.
ಇಂತಹ ಡೀಮ್ಡ್ ಯೂನಿವರ್ಸಿಟಿ ಹಾಗೂ ಆಟೊನೊ ಮಸ್ ಕಾಲೇಜುಗಳಿಂದ ಖಂಡಿತ ಲಾಭಗಳೂ ಇವೆ.
ಪಠ್ಯಕ್ರಮವನ್ನು ಕಾಲಕ್ಕನುಗುಣವಾಗಿ ಅಪ್ಡೇಟ್ ಮಾಡಬಹುದು. ಸ್ವತಃ ಪರೀಕ್ಷೆ ನಡೆಸುವ ಹಾಗೂ ಮೌಲ್ಯಮಾಪನ ಮಾಡುವ ಅಧಿಕಾರವಿರುವುದರಿಂದ ಅತ್ಯಂತ ಶೀಘ್ರದಲ್ಲೇ ಫಲಿತಾಂಶ ಪ್ರಕಟ ಮಾಡಬಹುದು. ಉಪನ್ಯಾಸಕರ ನೇಮಕದಲ್ಲೂ ಯೋಗ್ಯತೆಗೆ ಮಣೆ ಹಾಕಬಹುದು, ಮೀಸಲು ಅಡ್ಡಗೋಡೆ ಇರುವುದಿಲ್ಲ, ತರಗತಿಯ ವೇಳೆ ನಿಗದಿ, ಆಡಳಿತಾತ್ಮಕ ಬದಲಾವಣೆಗಳಂತಹ ಸಣ್ಣ-ಪುಟ್ಟ ವಿಚಾರಗಳಿಗೂ ಅಂಡರ್ ಸಕ್ರೆಟರಿ, ವಿಧಾನಸೌಧಕ್ಕೆ ಪತ್ರ ಬರೆದು ಉತ್ತರಕ್ಕಾಗಿ ಕಾದು ಕುಳಿತುಕೊಳ್ಳಬೇಕಿಲ್ಲ. ಕೂಡಲೇ ಬದಲಾವಣೆ ತರಬಹುದು. “ನಿಯಮಗಳೆ ನಿನ್ನ ಬಳೆ, ಅನವರತ ಅಶ್ರಂಖಲೆ” ಅಂತ ಕುವೆಂಪು ಅವರ ಮಾತನ್ನು ಉದಾಹರಿಸಿದ್ದು ಅದಕ್ಕೇ. ಡೀಮ್ಡ್ ಯೂನಿವರ್ಸಿಟಿ ಹಾಗೂ ಆಟೊನೊಮಸ್ ಕಾಲೇಜುಗಳು ನಿಯಮಗಳನ್ನು ಮೀರಬಹುದು, ಸಣ್ಣ ಪುಟ್ಟ ಕಟ್ಟಳೆಗಳನ್ನು ಗಾಳಿಗೆ ತೂರಬಹುದು. ಆದರೆ ಅದು ವಿದ್ಯಾರ್ಥಿವೃಂದದ ಹಿತದೃಷ್ಟಿ ಹಾಗೂ ಸಮಾಜದ ಒಳಿತಿಗಾಗಿ ಮಾತ್ರ. ಆದರೆ ಆಗುತ್ತಿರುವುದೇನು?
ಈಗಾಗಲೇ ರಾಜ್ಯದಲ್ಲಿ ಒಟ್ಟು 9 ಡೀಮ್ಡ್ ಯೂನಿವರ್ಸಿಟಿ ಗಳಿದ್ದು, 2004ರಲ್ಲಿ ಕರ್ನಾಟಕದ 18 ಕಾಲೇಜುಗಳಿಗೆ 2005-2011ರ ಅವಧಿಗೆ ಯುಜಿಸಿ ಆಟಾನಮಿ ಕೊಟ್ಟಿದೆ. ಅಷ್ಟೇ ಅಲ್ಲ, ಬಿವಿಬಿ, ಜೆಸಿ, ಮಲ್ನಾಡ್, ಎಂಎಸ್ ರಾಮಯ್ಯ, ಎನ್ಐಇ, ನಿಟ್ಟೆ, ಪಿಡಿಎ, ಎಸ್ಡಿಎಂ, ಎಸ್ಐಟಿ, ಎಸ್ಎಸ್ಐಟಿ. ಆರ್ವಿ, ಬಾಗಲಕೋಟದ ಬಸವೇಶ್ವರ ಹೀಗೆ 12 ಇಂಜಿನಿಯರಿಂಗ್ ಕಾಲೇಜುಗಳಿಗೆ ಕಳೆದ ಜೂನ್ನಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ(ವಿಟಿಯು)ವೂ ಸ್ವಾಯತ್ತೆ ನೀಡಿದೆ. ಮುಂಬರುವ ವರ್ಷಗಳಲ್ಲಿ ಬಹುಶಃ ಎಲ್ಲ ಖಾಸಗಿ ಡಿಗ್ರಿ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಿಗೂ ಆಟೊನೊಮಸ್ ಸ್ಟೇಟಸ್ ಸಿಗುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.
ಆದರೆ ಅದರಿಂದ ಯಾವ ಅಪಾಯಗಳು ಕಾದಿವೆ ಎಂಬುದನ್ನು ಎಂದಾದರೂ ಯೋಚಿಸಿದ್ದೀರಾ? ಡೀಮ್ಡ್ ಯೂನಿವರ್ಸಿಟಿಗಳಿಗೆ ಯಾವ ಮೀಸಲು ನಿಯಮವೂ ಅನ್ವಯವಾಗುವುದಿಲ್ಲ, ಅವು ಸಿಇಟಿ ವ್ಯಾಪ್ತಿಗೂ ಬರುವುದಿಲ್ಲ! ಅಂದರೆ ಬಡ, ಹಿಂದುಳಿದ ಜಾತಿ/ವರ್ಗದ ಹಾಗೂ ಪ್ರತಿಭಾವಂತರಿಗೆ ಸರಕಾರಿ ಸೀಟುಗಳೇ ಇಲ್ಲದಂದಾಗುತ್ತವೆ! ಈಗಾಗಲೇ ಕೆಆರ್ಇಸಿ ಡೀಮ್ಡ್ ಯೂನಿವರ್ಸಿಯಾಗಿದ್ದರಿಂದ 200 ಸೀಟುಗಳು ಕರ್ನಾಟಕದ ಕೈತಪ್ಪಿ ಹೋಗಿವೆ. ಮೊದಲು ಅಲ್ಲಿನ 400 ಸೀಟುಗಳನ್ನೂ ಸಿಇಟಿ ಮೂಲಕ ತುಂಬಲಾಗುತ್ತಿತ್ತು. ಇತ್ತೀಚೆಗೆ ದೇವರಾಜ್ ಅರಸ್ ಕಾಲೇಜಿಗೂ ಡೀಮ್ಡ್ ಯೂನಿವರ್ಸಿಟಿ ಸ್ಥಾನ ನೀಡಲಾಗಿರುವುದರಿಂದ 60 ಮೆಡಿಕಲ್ ಸೀಟುಗಳು ಸರಕಾರದ ಕೈತಪ್ಪಿವೆ.
ಇನ್ನು ಕರ್ನಾಟಕದಲ್ಲಿಯೇ ಅತಿದೊಡ್ಡ ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳನ್ನು ಹೊಂದಿರುವ ಕೆ.ಎಲ್.ಇ. ಸಂಸ್ಥೆಗೂ ಡೀಮ್ಡ್ ಯೂನಿ ವರ್ಸಿಟಿ ಸ್ಥಾನ ಸಿಕ್ಕಿದೆ. ಇದರಿಂದ ನಷ್ಟವಾಗಿದ್ದು ಯಾರಿಗೆ? ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೇ ಅಲ್ಲವೆ? ಇನ್ನೂ ಅಪಾಯಕಾರಿ ಅಂಶವೆಂದರೆ, ಮುಂದೊಂದು ದಿನ ಆಟೊನೊಮಸ್ ಕಾಲೇಜುಗಳಿಗೂ ಡೀಮ್ಡ್ ಯೂನಿವರ್ಸಿಟಿ ಸ್ಥಾನ ಸಿಗಬಹುದು. ಆಗ ಸಿಇಟಿಯೇ ಇಲ್ಲದಂತಾಗುತ್ತದಲ್ಲವೆ? ಅಷ್ಟೇ ಅಲ್ಲ, ಅಧ್ಯಾಪಕರ ನೇಮಕದಲ್ಲಿ ಪ್ರತಿಭೆಗೆ ಬದಲು ಸ್ವಜನ ಪಕ್ಷಪಾತವನ್ನೂ ಮಾಡಬಹುದಲ್ಲವೆ? ಉಪನ್ಯಾಸಕರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಮ್ಯಾನೇಜ್ಮೆಂಟ್ಗೆ ಇರುವುದರಿಂದ ಉಪನ್ಯಾಸಕರು ಕೂಡ ನಿವೃತ್ತಿಯಾಗುವವರೆಗೂ ಮ್ಯಾನೇಜ್ಮೆಂಟ್ಗೆ ವಿಧೇಯರಾಗಿ ಇರಬೇಕಾಗುತ್ತದೆ, ಅನ್ಯಾಯ ಕಣ್ಣೆದುರಿಗೇ ನಡೆಯುತ್ತಿದ್ದರೂ ಧ್ವನಿಯೆತ್ತುವಂತಿಲ್ಲ. ಕಾಯಂ ಆಗಿರದ ಉಪನ್ಯಾಸಕರಂತೂ ಕಾಯಂ ಗುಲಾಮರಾಗಿರಬೇಕು. ಇಲ್ಲದಿದ್ದರೆ ಕೆಲಸಕ್ಕೇ ಕುತ್ತು ಬರುತ್ತದೆ.
ಇತ್ತ ಡೀಮ್ಡ್ ಯೂನಿವರ್ಸಿಟಿ ಹಾಗೂ ಆಟೊನೊಮಸ್ ಕಾಲೇಜುಗಳು ತಮ್ಮದೇ ಆದ ಪ್ರವೇಶ ಪರೀಕ್ಷೆಯನ್ನು ನಡೆಸುತ್ತವೆ, ಉತ್ತರ ಪತ್ರಿಕೆಗಳನ್ನು ಸ್ವತಃ ಮೌಲ್ಯಮಾಪನ ಮಾಡುತ್ತವೆ. ಅವುಗಳನ್ನು ಸರಕಾರವಾಗಲಿ, ಯಾವುದಾದರೂ ಒಂದು ತಟಸ್ಥ ವ್ಯವಸ್ಥೆಯಾಗಲಿ ಕ್ರಾಸ್ಚೆಕ್ ಮಾಡುವುದಿಲ್ಲ. ಹಾಗಿರುವಾಗ ಯಾರು ಜಾಸ್ತಿ ಕಾಸು ಕೊಡುತ್ತಾರೋ ಅವರಿಗೆ ಹೆಚ್ಚಿನ ರ್ಯಾಂಕ್ ಕೊಟ್ಟು ಪ್ರವೇಶ ನೀಡಬಹುದಲ್ಲವೆ? ಕಾಮೆಡ್(ಕೆ) ವ್ಯಾಪ್ತಿಗೆ ಬರುವ ಕಾಲೇಜುಗಳು ಹೆಸರಿಗೆ ತಮ್ಮದೇ ಆದ ಪ್ರವೇಶ ಪರೀಕ್ಷೆ ನಡೆಸುತ್ತಿದ್ದರೂ ಮಾಡುತ್ತಿರುವುದು ದಂಧೆಯನ್ನೇ ಅಲ್ಲವೆ? ಮೊದಲು ಈ ದಂಧೆಯನ್ನು ಆರಂಭಿಸಿದ್ದು ಮಣಿಪಾಲದ ಪೈಗಳು. ಅವರನ್ನೇ ಮಾದರಿಯನ್ನಾಗಿಟ್ಟುಕೊಂಡು ಉಳಿದವರೂ ಅದೇ ಹಾದಿ ಹಿಡಿದಿದ್ದಾರೆ. ಮಿನಿ ಅಮೆರಿಕದಂತಾಗಿರುವ ಮಣಿಪಾಲಕ್ಕೆ ಒಮ್ಮೆ ಹೋಗಿ ಬನ್ನಿ. ಲಾಭ ಯಾರಿಗೆ ಸಿಗುತ್ತಿದೆ ಎಂಬುದು ಬರಿಗಣ್ಣಿಗೇ ಕಾಣುತ್ತದೆ.
ಯಾರ ಬಳಿ ಹಣವಿದೆಯೋ ಅವರಿಗಷ್ಟೇ ಉನ್ನತ ಶಿಕ್ಷಣ. ಅಷ್ಟಕ್ಕೂ, “Educate him who can pay for it” ಎಂದ ಟಿ.ಎಂ.ಎ. ಪೈ ಅವರ ಮಾತಿನ ಅರ್ಥವೂ ಇದೇ ಅಲ್ಲವೆ? ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ ಡೀಮ್ಡ್ ಯೂನಿವರ್ಸಿಟಿಗಳು ಪ್ರತ್ಯೇಕ ಪ್ರವೇಶ ಪರೀಕ್ಷೆಯನ್ನು ನಡೆಸುವುದರಿಂದ ವಿದ್ಯಾರ್ಥಿಗಳು ಪ್ರತಿಯೊಂದು ಕಾಲೇಜುಗಳ ಪ್ರವೇಶ ಪರೀಕ್ಷೆಗೂ ಹಾಜರಾಗಬೇಕಾಗುತ್ತದೆ. ಪ್ರತ್ಯೇಕವಾಗಿ ಅರ್ಜಿಯನ್ನೂ ಹಾಕಬೇಕಾಗುತ್ತದೆ. ಭಾರಿ ಅರ್ಜಿ ಶುಲ್ಕ ನಿಗದಿ ಮಾಡಿ ಕಾಲೇಜುಗಳು ವಿದ್ಯಾರ್ಥಿಗಳನ್ನು ಸುಲಿಗೆ ಮಾಡಬಹುದಲ್ಲವೆ?
ಇವೆಲ್ಲಕ್ಕಿಂತ ಅಪಾಯಕಾರಿ ಅಂಶವೆಂದರೆ, ಸ್ವತಃ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸುವುದರಿಂದ, ಅವರೇ ಮೌಲ್ಯ ಮಾಪನವನ್ನೂ ಮಾಡುವುದರಿಂದ ತಮಗೆ ಆಗದ ವಿದ್ಯಾರ್ಥಿಯ ಭವಿಷ್ಯವನ್ನೇ ಹಾಳುಗೆಡವಬಹುದು! ಅಲ್ಲದೆ ಕಾಮಪಿಪಾಸು ಪ್ರೊಫೆಸರ್ಗಳು ವಿದ್ಯಾರ್ಥಿನಿಯರ ಶೀಲಹರಣ ಮಾಡುವುದಕ್ಕೂ ಅವಕಾಶ ದೊರೆಯುತ್ತದೆ. ಅಷ್ಟಕ್ಕೂ, ಮುಖ ನೋಡಿ ಇಂಟರ್ನಲ್ ಮಾರ್ಕ್ಸ್ ಕೊಡುತ್ತಿ ರುವ ಉದಾಹರಣೆಗಳು ಈಗಾಗಲೇ ನಮ್ಮ ಮುಂದಿವೆ. ಇಂತಹ ಅಪಾಯಗಳಿಂದಾಗಿ ಡೀಮ್ಡ್ ಯೂನಿವರ್ಸಿಟಿಗಳು ವಿದ್ಯಾರ್ಥಿಗಳ ಪಾಲಿಗೆ ‘ಡೂಮ್ಡ್” ಆಗಬಹುದಲ್ಲವೆ? ಲಂಗು-ಲಗಾಮಿಲ್ಲದ ಈ ಡೀಮ್ಡ್ ಯೂನಿವರ್ಸಿಟಿ ಹಾಗೂ ಆಟೊನೊಮಸ್ ಕಾಲೇಜುಗಳು ವಿದ್ಯಾರ್ಥಿಗಳನ್ನು ಗುಲಾಮರನ್ನಾಗಿ ಮಾಡಿಕೊಳ್ಳದೇ ಇರುತ್ತವೆಯೇ? ಅಷ್ಟಕ್ಕೂ ಸ್ನಾತ್ತಕೋತ್ತರ ಪದವಿ ನೀಡುವ ರಾಜ್ಯದ ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳಲ್ಲೂ ಪ್ರಾಜೆಕ್ಟ್, ಡಿಸರ್ಟೆಶನ್, ಇಂಟರ್ನಲ್ ಅಸೆಸ್ಮೆಂಟ್ ಹೆಸರಿನಲ್ಲಿ ನಡೆಯುತ್ತಿರುವುದು ಇದೇ ಅನ್ಯಾಯವಲ್ಲವೆ?
Wait…
Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.
ನಿಮ್ಮ ಟಿಪ್ಪಣಿ ಬರೆಯಿರಿ
Comments 0