ಡಿವೋರ್ಸ್ ಎಂಬುದು ಎಲ್ಲೆಲ್ಲಿಂದಲೋ ಬಂದದ್ದು! -Your child will suffer, not YOU!!

ನಿಮಗೆ ಆಶ್ಚರ್ಯವಾಗಬಹುದು. ಡಿವೋರ್ಸ್ ಪಡೆದ ದಂಪತಿಗಳ ಮಕ್ಕಳು ಪಲಾಯನವಾದಿಗಳಾಗಿ ಬಿಡುತ್ತಾರೆ! ಯಾವ ಸಂಘರ್ಷವನ್ನೂ,ಯಾವ ಸವಾಲನ್ನೂ ಎದುರಿಸಲಾಗದಷ್ಟು ಅವರು ಪಲಾಯನವಾದಿಗಳಾಗಿ ಬಿಡುತ್ತಾರೆ. ವಿಚ್ಛೇದನದ ಆಲೋಚನೆ ಮಾಡುವ ಮುಂಚೆ ನಿಮಗಿದು ನೆನಪಿದ್ದರೆ ಮಕ್ಕಳು ಬಚಾವ್!
ಡಿವೋರ್ಸ್ ಎಂಬುದು ಎಲ್ಲೆಲ್ಲಿಂದಲೋ ಬಂದದ್ದು! ತುಂಬ ಜಗಳ ಆಡಿ ರಂಪ ರಾದ್ಧಾಂತ ಮಾಡಿ,ಭಯಂಕರವಾಗಿ ಕೂಗಾಡಿ ಹೆಂಡತಿಯನ್ನು ಬೈಯ್ಯಬಾರದ ಮಾತುಗಳಲ್ಲೆಲ್ಲ ಬೈದು ಮಲಗಿರುತ್ತೇವೆ. ಬೆಳಗ್ಗೆ ಹೊತ್ತಿಗೆ ಸಿಟ್ಟು ಮುಗಿದು ಹೋಗಿರಬಹುದು. ಆದರೆ ವಿಪರೀತ ಗಿಲ್ಟು ಉಳಿದಿರುತ್ತದೆ. ಜಗಳ ಆಡಿದ ಗಿಲ್ಟ್ ಅಲ್ಲ. ರಂಪರಾದ್ಧಾಂತಮಾಡಿ, ಕೂಗಾಡಿ ಹೆಂಡತಿಯನ್ನು ಅಸಹ್ಯಕರವಾಗಿ ಬೈದ ಗಿಲ್ಟ್ ಅಲ್ಲ. ಅದೆಲ್ಲವನ್ನೂ ನಾವು ಮಕ್ಕಳೆದುರಿಗೆ ಮಾಡಿದೆವೆಂಬ ಗಿಲ್ಟು!

‘ಇನ್ನು ಮೇಲೆ ಯಾವ ಕಾರಣಕ್ಕೂ ಮಕ್ಕಳೆದುರು ಜಗಳವಾಡಬಾರದು’ ಅಂತ ತೀರ್ಮಾನಿಸಿರುತ್ತೇವೆ. ವಿಶೇಷವಾಗಿ ದಂಪತಿಗಳು ರಾಜಿಯಾಗುವಾಗ, ‘ಮಕ್ಕಳೆದುರಿಗೆ ಬೈಯ್ಯಬಾರದು’ಅಂತ ಒಂದು clause ರಾಜೀಸೂತ್ರದಲ್ಲಿ ಇದ್ದೇ ಇರುತ್ತದೆ. ಆದರೆ ಸಿಟ್ಟು-ಸೆಡುವು ಯಾರ ನಿಯಂತ್ರಣದಲ್ಲಿರಲು ಸಾಧ್ಯ? ಒಂದೇ ಟೇಬಲ್ಲಿಗೆ ಕುಳಿತು ಮಕ್ಕಳ ಜತೆ ಊಟ ಮಾಡುತ್ತಿರುವಾಗಲೇ ಸಿರ್ರನೆ ರೇಗಿ ತಟ್ಟೆ ಎಸೆದು ಎದ್ದು ಹೋಗಿ ಬಿಟ್ಟಿರುತ್ತಾನೆ ಗಂಡ.

ಮಕ್ಕಳ ಮೇಲೆ ಇದು ಎಂಥ ಪರಿಣಾಮ ಉಂಟು ಮಾಡಿರುತ್ತದೆ-ಯೋಚಿಸಿದ್ದೀರಾ? ಮಕ್ಕಳು ತಮ್ಮ ತಂದೆತಾಯಿ ಜಗಳಕ್ಕೆ ತೋರ್ಪಡಿಸುವ ಮೊದಲ ಪ್ರತಿಕ್ರಿಯೆಯೆಂದರೆ, ಅವು ಮಂಕಾಗಿಬಿಡುತ್ತವೆ. ತುಂಬ ಚಿಕ್ಕವರಿದ್ದಾಗ ಆ ಕ್ಷಣದಲ್ಲೊಂದು ನಿರ್ಧಾರಕ್ಕೆ ಬಂದು ಅಪ್ಪನ ಪಾರ್ಟಿಗೆ ಅಥವಾ ಅಮ್ಮನ ಪಾರ್ಟಿ  ಸೇರಿಕೊಂಡು ಬಿಡುತ್ತವೆ. ಒಂದೊಂದು ಜಗಳವಾದಗಾಲೂ ಮಕ್ಕಳು ಅಮ್ಮನ ಪಾರ್ಟಿ ಅಥವಾ ಅಪ್ಪನ ಪಾರ್ಟಿ ಬದಲಾಯಿಸಬಹುದು. ಇಬ್ಬರ ಪೈಕಿ ಯಾರು ಸರಿ ಎಂಬುದನ್ನು ನಿರ್ಧರಿಸಲಾಗದ ವಯಸ್ಸು. ಆದರೆ ಕ್ಷಮೇಣ ಅವರಿಗೆ ಇಬ್ಬರೆಡೆಗೂ ಅನಾದರ, ತಿರಸ್ಕಾರ ಬೆಳೆಯುತ್ತಾ ಹೋಗುತ್ತದೆ.

ಚಿಕ್ಕಂದಿನಿಂದ ಅಪ್ಪ ಅಮ್ಮನ ಜಗಳ ನೋಡಿಕೊಂಡು ಬೆಳೆದ ಮಕ್ಕಳು ಪಿಯೂಸಿ ಮುಗಿಯುವ ಹಂತಕ್ಕೆ ಬಂದಾಗ(ಅದರಲ್ಲೂ ಹೆಣ್ಣು ಮಕ್ಕಳು)’ಅಪ್ಪ ಅಮ್ಮಂದು ಇದ್ದಿದ್ದೇ ಜಗಳ’ಎಂಬಂಥ ತೀವ್ರ ತಿರಸ್ಕಾರದ ಭಾವ ಬೆಳೆಸಿಕೊಂಡು ಬಿಡುತ್ತಾರೆ. ಕೆಲವು ಮಕ್ಕಳಂತೂ ದಾಂಪತ್ಯವೆಂದರೇನೇ ಜಗಳ
ಎಂಬಂಥ ತೀವ್ರ ತೀರ್ಮಾನಕ್ಕೆ ಬಂದು ಬಿಡುತ್ತಾರೆ. ದಂಪತಿಗಳ ಕದನ, ನಿತ್ಯ ಹಣಾಹಣಿಗಳು ಮಕ್ಕಳ ಮೇಲೆ ಅದೆಷ್ಟು ಪರಿಣಾಮ ಬೀರುತ್ತವೆಂದರೆ, ಮಕ್ಕಳು ತಮ್ಮತಮ್ಮಲ್ಲೇ ಕಿತ್ತಾಡಿಕೊಳ್ಳುತ್ತವೆ.

ಕುಡಿದು ಬಂದು ವಾಯ್ಲೆಂಟಾಗಿ ಹೆಂಡತಿಯನ್ನು ಹೊಡೆಯುವ ಗಂಡನಿದ್ದರೆ,ಅಂಥವರ ಮಗು ಕ್ಲಾಸಿನಲ್ಲಿ ಇತರೆ ಮಕ್ಕಳನ್ನು exactly ಹಾಗೇ ವಾಯ್ಲೆಂಟ್ ಆಗಿ, ಅಗ್ರೆಸ್ಸಿವ್ ಆಗಿ ಹೊಡೆಯಲು ಯತ್ನಿಸುತ್ತದೆ. ಮನೆಯಲ್ಲಿ  ತನ್ನ ತಮ್ಮ ತಂಗಿಯರ ಮೇಲೆ ಕೈ ಮಾಡುತ್ತದೆ. ಅಸಹ್ಯಕರವಾದ ಬೈಗುಳ ಬೈಯುತ್ತದೆ.  ಜಗಳಗಂಟ ದಂಪತಿಗಳ ಮಕ್ಕಳು, ತಾವೂ ಕದನ ಕುತೂಹಲಿ ದಂಪತಿಗಳಾಗಿ ಬೆಳೆಯುತ್ತಾರೆ. ಅಕಸ್ಮಾತ್ ತಂದೆತಾಯಿಯರಲ್ಲಿ ಸಣ್ಣಪುಟ್ಟ ಜಗಳಗಳಾದಾಗ, ತಂದೆ ತಾಯಿ ದಿನಗಟ್ಟಲೆ ಒಬ್ಬರನ್ನೊಬ್ಬರು ಮಾತಾಡಿಸದೆ ಇರುವುದನ್ನು ರೂಢಿಮಾಡಿಕೊಂಡರೆ, ಮಕ್ಕಳೂ ಅದನ್ನೇ ಅನುಸರಿಸಿ ಚಿಕ್ಕದಕ್ಕೂ ಗೆಳೆಯರೊಂದಿಗೆ ಮಾತು ಬಿಡುತ್ತವೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಮಕ್ಕಳು ತಮ್ಮ ತಂದೆತಾಯಿಯರನ್ನು ಇಮೆಟೇಟ್ ಮಾಡುತ್ತಾರೆ.

ಇದಕ್ಕೆ ಅನೇಕ ದಂಪತಿಗಳು ಕಂಡುಕೊಳ್ಳುವ ಪರಿಹಾರವೆಂದರೆ ಡಿವೋರ್ಸ್! ಸುಮ್ಮನೇ ಒಂದು ಕಡೆ ಇದ್ದುಕೊಂಡು ಮಕ್ಕಳೆದುರಿಗೆ ಕಿತ್ತಾಡೋಕಿಂತ ಇಬ್ಬರೂ ಸಪರೇಟ್ ಆಗಿ ಬಿಡೋಣ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಒಟ್ಟಿಗೆ ಇದ್ದು ಸರಿಯಾದ ರೀತಿಯಲ್ಲಿ ಸಾಕಲಾಗದ ಮೇಲೆ ಡಿವೋರ್ಸ್ ಒಂದೇ ಅಲ್ಲವಾ ಉಳಿಯುವ ದಾರಿ ಅಂತ, ಮನೆಯಿಂದ ದೂರನಿಂತು ಯೋಚಿಸುವ ಎಲ್ಲರಿಗೂ ಅನ್ನಿಸುತ್ತದೆ. ಅದು ಸಹಜ.

ಮಕ್ಕಳನ್ನು ಸಾಕಲು ತಂದೆ ಇಂತಿಷ್ಟು ಹಣ ಕೊಡುವುದು. ಅವುಗಳನ್ನು ಬೆಳೆಸುವ ಜವಾಬ್ದಾರಿಯನ್ನು ತಾಯಿ ತೆಗೆದುಕೊಳ್ಳುವುದು ಅಂತ roughಆಗಿ ಒಂದು ತೀರ್ಮಾನ ಕೈಗೊಳ್ಳುತ್ತಾರೆ. ಕೋರ್ಟಿಗೆ ಹೋಗಿ ತೀರಾ ವಿಧ್ಯುಕ್ತವಾಗಿ ಡಿವೋರ್ಸ್ ಮಾಡದಿದ್ದರೂ, ಪರಸ್ಪರ ಮಾತಾಡಿಕೊಂಡು ಇಂಥದ್ದೊಂದು ವ್ಯವಸ್ಥೆ ಮಾಡಿಕೊಂಡ, ಮಾಡಿಕೊಳ್ಳದ ಅನೇಕ ದಂಪತಿಗಳಿದ್ದಾರೆ. ಅವರಿಗೆ ತಕ್ಷಣಕ್ಕೆ ಅರ್ಥವಾಗದ ಸಂಗತಿಯೆಂದರೆ, ಈ ವ್ಯವಸ್ಥೆ ಕೂಡ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ! ಜಗಳ ಬೀರುವ ಪರಿಣಾಮಕ್ಕಿಂತ ಡಿವೋರ್ಸ್ ಬೀರುವ ಪರಿಣಾಮ ಹೆಚ್ಚು ಅಪಾಯಕಾರಿ. ಮಕ್ಕಳು, ಅದನ್ನು ಇಮಿಟೇಟ್ ಮಾಡುತ್ತಾರೆ.

ತಂದೆಯಿಂದ ದೂರವಾಗಿ ತಾಯಿಯೊಂದಿಗೆ  ಬೆಳೆಯುವ ಗಂಡು ಮಕ್ಕಳು ತುಂಬ ಅಗ್ರೆಸಿವ್ ಆಗಿಬಿಡುವ ಅಪಾಯವಿದೆ. ಮೊದಲು, ತನ್ನ ಏಕಾಂಗಿಯಾದ ತಾಯಿಯನ್ನು ತಾನು ರಕ್ಷಿಸಬೇಕು ಎಂಬುದು ಗಂಡು ಮಗುವಿನ ತಲೆಗೆ ಬಂದುಬಿಡುತ್ತದೆ. ಹಾಗೆ ಶುರುವಾಗುವ ಆಕ್ರಮಣಕಾರಿ ಪ್ರವೃತ್ತಿ ಕ್ರಮೇಣ ಒರಟುತನಕ್ಕೆ,ದುಷ್ಟತನಕ್ಕೆ ರೌಡಿತನಕ್ಕೆ ತಿರುಗಿಕೊಳ್ಳುತ್ತದೆ. ತಂದೆಯ ಅಂಕೆಯಿಲ್ಲದ ಗಂಡು ಮಕ್ಕಳು ವಿಪರೀತ ಸ್ವೇಚ್ಛೆಗೆ ಬೀಳುತ್ತಾರೆ. ಇದಕ್ಕಿಂತ ದುಷ್ಪರಿಣಾಮ ಹೆಣ್ಣು ಮಕ್ಕಳ ಮೇಲಾಗುತ್ತದೆ.

ನಿಸರ್ಗ ಸಹಜವಾಗಿ ತಂದೆಯನ್ನೇ ಹೆಚ್ಚಾಗಿ ಹಚ್ಚಿಕೊಂಡು ಬೆಳೆಯುವ ಹೆಣ್ಣುಮಕ್ಕಳು ತಮ್ಮ ಅಡಾಲಸೆನ್ಸ್ ನಲ್ಲಿ ಮತ್ತು ಆರಂಭಿಕ ಟೀನ್ಸ್ ನಲ್ಲಿ ತಂದೆಯಲ್ಲೊಬ್ಬ ಹೀರೋನನ್ನು ಕಂಡುಕೊಂಡಿರುತ್ತಾರೆ. ಅಂಥ ಹೀರೋ ಮನೆಯಲ್ಲಿ ಸಿಗದೆ ಹೋದಾಗ ಬಾಯ್ ಫ್ರೆಂಡ್ ಗಳಲ್ಲಿ, ವಿವಾಹಿತ ಗಂಡಸರಲ್ಲಿ, ತಮ್ಮ ಲೆಕ್ಚರರ್ ಗಳಲ್ಲಿ ಹುಡುಕತೊಡಗುತ್ತಾರೆ. ತೀರಾ ಹದಿನಾರನೇ ವಯಸ್ಸಿನಲ್ಲೇ ಅಫೇರ್ ಗಳಿಗೆ ಬೀಳುವ ಅನೇಕ ಹುಡುಗಿಯರ ಹಿನ್ನೆಲೆ ಹುಡುಕಿ ನೋಡಿದರೆ, ಅಲ್ಲಿ ಅವರು ತಂದೆಯ ಪ್ರೀತಿಯಿಂದ ವಂಚಿತರಾಗಿರುವುದು ಗೋಚರವಾಗುತ್ತದೆ.

ಇದೆಲ್ಲಕ್ಕಿಂತ ಕೆಟ್ಟ ಪರಿಣಾಮವೊಂದಿದೆ. ನಿಮಗೆ ಆಶ್ಚರ್ಯವಾಗಬಹುದು. ಡಿವೋರ್ಸ್ ಪಡೆದ ದಂಪತಿಗಳ ಮಕ್ಕಳು ಪಲಾಯನವಾದಿಗಳಾಗಿ ಬಿಡುತ್ತಾರೆ! ಯಾವ ಸಂಘರ್ಷವನ್ನೂ,ಯಾವ ಸವಾಲನ್ನೂ ಎದುರಿಸಲಾಗದಷ್ಟು ಅವರು ಪಲಾಯನವಾದಿಗಳಾಗಿ ಬಿಡುತ್ತಾರೆ.

ಹಾಗಾದರೆ, ಯಾವ ನಿರ್ಧಾರ ಸೂಕ್ತ? ಮಕ್ಕಳೆದುರಿಗೆ ಶರಂಪರ ಜಗಳ ಮಾಡಿಕೊಂಡು ಒಟ್ಟಿಗೇ ಬದುಕುವುದಾ? ಡಿವೋರ್ಸ್ ಮಾಡಿ ಅವರನ್ನು ಇನ್ನೊಂದು ತೆರನಾದ ಸಮಸ್ಯೆಗಳಿಗೆ ನೂಕುವುದಾ? ನಾವೆಲ್ಲ ನಮ್ಮ ಮನೆಗಳಲ್ಲಿ ಅಪ್ಪಅಮ್ಮನ ಜಗಳ ದುಸುಮುಸು ನೋಡಿಕೊಂಡೇ ಬೆಳೆದವರು. ಅವರು ಎಷ್ಟೇ ಜಗಳ ಮಾಡಿಕೊಂಡರೂ ಮಕ್ಕಳೆದುರು ಒಬ್ಬರನ್ನೊಬ್ಬರು ಹೀನಾಯಗೊಳಿಸಿಕೊಳ್ಳುತ್ತಿರಲಿಲ್ಲ ಎಂಬುದನ್ನು ನೆನಪು ಮಾಡಿಕೊಂಡರೆ, ಆ ಜಗಳಗಳು ತೀರ ಅಪಾಯಕಾರಿಯಾಗೇನೂ ಇರಲಿಲ್ಲ. ಅಪ್ಪ ಅಮ್ಮ ಕೂಡ ಜಗಳ ಮರೆಯುತ್ತ, ಮತ್ತೆ ಕೆದರಿಕೊಳ್ಳುತ್ತ ನಮ್ಮದುರಿಗೇ ಬದುಕಿದ್ದರಲ್ಲವಾ ಅನಿಸುತ್ತದೆ.

ಡಿವೋರ್ಸ್ ಎಂಬುದು ಈ ನೆಲದ ಪರಿಪಾಠವಾಲ್ಲ. ಅದು ಅಲ್ಲೆಲ್ಲಿಂದಲೋ ಪಲಾಯನ ಆರಂಭಿಸಿ ಇಲ್ಲಿಗೆ ಬಂದದ್ದು. ಅಲ್ಲವೇ?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: