ಡಿಸೆಂಬರ್ 7 ಬಂದು ಹೋಯಿತು, ಅಂದೇ ಅವರ ನೆನಪಾಗಿತ್ತು, ಆದರೆ…

(Photo: Master Hirannaiah, Beechi and Uday Shankar)

ಆ ಕಾಲದಲ್ಲಿ ಸಂಜೆ ಹೆಂಡತಿ ಜತೆ ವಾಕಿಂಗ್ ಹೋಗು ವುದೂ ಒಂದು ಸಂಪ್ರದಾಯವಾಗಿತ್ತು. ಬೀChi  ಕೂಡ ವಾಕಿಂಗ್‌ಗೆ ಹೊರಟಿದ್ದರು. ಹಾಗೆ ಹೋಗುತ್ತಿರು ವಾಗ ಮಾರ್ಗ ಮಧ್ಯದಲ್ಲಿ ಕಂಡ ಹುಬ್ಬಳ್ಳಿಯ ಕೊಪ್ಪಿಕರ್ ರಸ್ತೆಯಲ್ಲಿರುವ ‘ಸಾಹಿತ್ಯ ಭಂಡಾರ’ದತ್ತ ಕೈತೋರಿ “ಇದೇ ನನ್ನ ಆಫೀಸು, ಈ ಪುಸ್ತಕದಂಗಡಿಯಲ್ಲಿಯೇ ನಾನು ಹೆಚ್ಚು ಕಾಲ ಕಳೆಯುತ್ತೇನೆ” ಎಂದು ಹೆಂಡತಿಗೆ ಹೇಳುತ್ತಾರೆ.

ಸರಕಾರಿ ಗುಮಾಸ್ತರಾಗಿದ್ದ ಬೀಚಿಯವರು ಸಂಜೆ ಕಳೆಯುತ್ತಿದ್ದುದೇ ಸಾಹಿತ್ಯ ಭಂಡಾರದಲ್ಲಿ. ಬೀಚಿಯವರ ಮಾತು ಕೇಳಿಸಿಕೊಂಡ ಅವರ ಪತ್ನಿ “ಅಲ್ಲಿ ಯಾವ ಪುಸ್ತಕಗಳಿವೆ? ತೆಲುಗು ಪುಸ್ತಕಗಳಿ ವೆಯೇ?” ಎಂದು ಕೇಳುತ್ತಾರೆ. “ಇದು ಹುಬ್ಬಳ್ಳಿ” ಎಂದು ನಗುತ್ತಾ ಹೇಳಿದ ಬೀಚಿ, “ಸುಡುಗಾಡು ಕನ್ನಡ ಪುಸ್ತಕ ಮಾರತಾರ” ಎಂದರು. ಇಂಗ್ಲಿಷ್ ಸಾಹಿತ್ಯದಿಂದ ಬಹುವಾಗಿ ಪ್ರಭಾವಿತರಾಗಿದ್ದ ಅವರು, ಕನ್ನಡ ಪುಸ್ತಕಗಳನ್ನು ಕಣ್ಣೆತ್ತಿಯೂ ನೋಡಿದವರಲ್ಲ.

ಅಂದು ಬೀಚಿಯವರು ‘ಸಾಹಿತ್ಯ ಭಂಡಾರ’ದ ಬಗ್ಗೆ ಹೇಳಿದ್ದನ್ನು ನೆನಪಿಟ್ಟುಕೊಂಡಿದ್ದ ಅವರ ಹೆಂಡತಿ, “ಮಧ್ಯಾಹ್ನ ಕಳೆಯುವುದೇ ಕಷ್ಟವಾಗುತ್ತಿದೆ. ಯಾವುದಾದರೂ ಕನ್ನಡ ಪುಸ್ತಕ ತಂದುಕೊಡಿ” ಎಂದು ಒಂದು ದಿನ ಗಂಡನನ್ನು ಕೇಳಿದರು. ಎಂದಿನಂತೆ ಮರುದಿನ ಸಂಜೆ ಸಾಹಿತ್ಯ ಭಂಡಾರಕ್ಕೆ ಬಂದ ಬೀಚಿ, “ಯಾವುದಾದರೂ ಕನ್ನಡದ ಕಥೆ ಪುಸ್ತಕ ಕೊಡಿ. ನನ್ನ ಹೆಂಡತಿ ಪೀಡಿಸುತ್ತಿದ್ದಾಳೆ. ಓದಿಯಾದ ಮೇಲೆ ತಂದುಕೊಡುತ್ತೇನೆ” ಎಂದು ಸಾಹಿತ್ಯ ಭಂಡಾರ ಸ್ಥಾಪಕರೂ ಹಾಗೂ ಮಾಲೀಕರೂ ಆಗಿದ್ದ ಗೋವಿಂದರಾಯರನ್ನು ಕೇಳಿದರು. ಸೌಜನ್ಯಕ್ಕೆ ಹೆಸರಾಗಿದ್ದ ಗೋವಿಂದರಾಯರು ನಗು ನಗುತ್ತಲೇ ಕಪಾಟದಿಂದ ಪುಸ್ತಕವೊಂದನ್ನು ಹೊರತೆಗೆದು ಕವರ್‌ಗೆ ಹಾಕಿಕೊಟ್ಟರು. ಬೀಚಿ ಯವರು ಅದನ್ನು ಬಿಡಿಸಿಯೂ ನೋಡಲಿಲ್ಲ. “ಅಂಚೆ ಜವಾನನ ಕೆಲಸ ಮಾಡಿದೆ” ಎಂದು ಅವರೇ ತಮ್ಮ ‘ಭಯಾಗ್ರಫಿ”ಯಲ್ಲಿ ಹೇಳಿಕೊಂಡಿದ್ದಾರೆ. ಹೆಂಡತಿಗೆ ಪುಸ್ತಕ ತಂದುಕೊಟ್ಟು, ತಲೆನೋವು ತಪ್ಪಿತು ಎಂದು ಸುಮ್ಮನಾದರು. ಆದರೆ ಮರುದಿನ ಮಧ್ಯಾಹ್ನ ಊಟಕ್ಕೆಂದು ಕಚೇರಿಯಿಂದ ಮನೆಗೆ ಹೋದರೆ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡಿದ್ದ ಅವರ ಪತ್ನಿ ಬಿಕ್ಕಳಿಸಿ ಅಳುತ್ತಿದ್ದಾರೆ! ಆಶ್ಚರ್ಯಚಕಿತರಾದ ಬೀಚಿ, “ಕನ್ನಡ ಓದಲಿಕ್ಕೆ ಬರುತ್ತಿಲ್ಲ ಅಂತ ಅಳುತ್ತಿದ್ದೀಯೇನು?” ಎಂದು ಕೇಳಿದರು. ಬಳ್ಳಾರಿ ಜಿಲ್ಲೆಯಲ್ಲಿ ಹುಟ್ಟಿ, ಬೆಳೆದಿದ್ದ ಆಕೆಗೆ ಕನ್ನಡ ಓದುವುದಕ್ಕೆ ಕಷ್ಟವಾಗುತ್ತಿದೆ ಎಂಬುದು ಬೀಚಿಯವರ ಊಹೆಯಾಗಿತ್ತು. ಆದರೆ “ಕನ್ನಡ ಮತ್ತು ತೆಲುಗು ಲಿಪಿಗಳಲ್ಲಿ ಯಾವ ಮಹಾಭೇದವಿದೆ? ಒಂದರ ಲಿಪಿಯನ್ನು ತಿಳಿದವರು ಎರಡನ್ನೂ ಓದಬಹುದು” ಎಂದು ಕಣ್ಣೊರೆಸಿಕೊಳ್ಳುತ್ತಾ ಹೇಳಿದ ಆಕೆ, “ಪುಸ್ತಕ ಬಹಳ ಚೆನ್ನಾಗಿದೆ. ಇದನ್ನೊಮ್ಮೆ ನೀವೂ ಓದಬೇಕು” ಎಂದರು! ಇದ್ಯಾವ ಗ್ರಹಚಾರ ಎಂದುಕೊಂಡ ಬೀಚಿ, “ನೀನಂತೂ ಓದಿ ಮುಗಿಸು” ಎಂದು ಊಟಕ್ಕೆ ಅಣಿ ಯಾದರು. ಇತ್ತ ಪುಸ್ತಕವನ್ನು ಓದಿ ಮುಗಿಸಿದ ಕೂಡಲೇ ಕಾಟ ಶುರುವಿಟ್ಟುಕೊಂಡರು ಪತ್ನಿ. ‘ಒಮ್ಮೆ ನೀವೂ ಓದಿ’ ಎಂದು ಗಂಡನ ದುಂಬಾಲು ಬಿದ್ದರು. “ಹೆಂಡತಿಗಾಗಿ ಯಾರ್‍ಯಾರೋ ಏನೇನೋ ಮಾಡಿದ್ದಾರೆ. ಬ್ರಿಟನ್ ರಾಜ  ೬ನೇ ಜಾರ್ಜ್ ಪತ್ನಿಗಾಗಿ ಸಿಂಹಾ ಸನವನ್ನೇ ತ್ಯಾಗ ಮಾಡಲಿಲ್ಲವೆ? ಮದುವೆಯಾದವನು ಎಂತಹ ತ್ಯಾಗಗಳಿಗೂ ಸಿದ್ಧನಾಗಬೇಕು” ಎಂದುಕೊಂಡ ಬೀಚಿ, ಪತ್ನಿಯ ಮಾತಿಗೆ ತಲೆಯಾಡಿಸಿದರು.

ಮರುದಿನ ರೈಲು ಪ್ರಯಾಣವಿತ್ತು.

ಆದರೆ ರೈಲಿನಲ್ಲಿ ಕನ್ನಡ ಪುಸ್ತಕ ಓದಿದರೆ ಮಾನ ಉಳಿಯುವುದಿಲ್ಲ. ಕನ್ನಡ ಪುಸ್ತಕ ಓದುತ್ತಿರುವುದನ್ನು ನೋಡಿ, ಯಾರಾದರೂ ಬೀಡಿ ಕೇಳಿದರೆ ಏನು ಗತಿ? ಎಂದುಕೊಂಡ ಬೀಚಿ, ‘ಇಲಸ್ಟ್ರೇಟೆಡ್ ವೀಕ್ಲಿ’ ಮ್ಯಾಗಝಿನ್‌ನೊಳಗೆ ಕನ್ನಡ ಪುಸ್ತಕವನ್ನಿಟ್ಟುಕೊಂಡು ಓದಲಾರಂಭಿಸಿದರು. ಆರಂಭ ಮಾಡಿದ್ದಷ್ಟೇ ಗೊತ್ತು, ಕಣ್ಣುಗಳು ಅದೆಷ್ಟು ಬಾರಿ ಜಿನುಗಿದ್ದವೋ ಗೊತ್ತಿಲ್ಲ! ‘ಕನ್ನಡದಲ್ಲೂ ಒಳ್ಳೆಯ ಬರಹಗಾರರಿದ್ದಾರೆ ಎಂಬುದು ಅರಿವಾಯಿತು. ಆ ಶುಭಮುಹೂರ್ತದಲ್ಲಿ ಕನ್ನಡದಲ್ಲಿ ದೀಕ್ಷೆ ಸ್ವೀಕರಿಸಿದೆ’ ಎನ್ನುತ್ತಾರೆ ಬೀಚಿ.

ರೈಲಿನಲ್ಲಿ ಅವರು ಓದಿದ್ದು ಅನಕೃ ಅವರ ‘ಸಂಧ್ಯಾರಾಗ”!

ಆ ಘಟನೆ ಬೀಚಿಯವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅನಕೃ ಅವರ ಪರಿಚಯ ಬಯಸಿ ಹೊರಟರು. ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟರು, ಅವರನ್ನು ಪತ್ರಿಕೋದ್ಯಮವೂ ಆಕರ್ಷಿಸದೇ ಬಿಡಲಿಲ್ಲ. ಆ ಕಾಲದಲ್ಲಿ ಪಾಟೀಲ ಪುಟ್ಟಪ್ಪನವರ “ವಿಶಾಲ ಕರ್ನಾಟಕ” ಉತ್ತರ ಕರ್ನಾಟಕದ ಒಂದು ಜನಪ್ರಿಯ ಪತ್ರಿಕೆಯಾಗಿತ್ತು. ಹೊಸ ಪ್ರತಿಭೆಗಳಿಗಾಗಿ ತಡಕಾಡುತ್ತಿದ್ದ ಪಾಟೀಲ ಪುಟ್ಟಪ್ಪನವರಿಗೆ ಕಂಡಿದ್ದು ಬೀಚಿ. ಅವರ ಒತ್ತಾಯಕ್ಕೆ ಮಣಿದ ಬೀಚಿಯವರು ಒಂದು ಅಂಕಣ ಶುರುಮಾಡಿದ್ದರು. “ಕೆನೆ ಮೊಸರು” ಎಂಬ ಹೆಸರಿನ ಅಂಕಣದಲ್ಲಿ ಸಕಾಲಿಕ ವಿಷಯ ಗಳ ಬಗ್ಗೆ ಬರೆಯುತ್ತಿದ್ದ ಬೀಚಿ, ಲೇಖನದ ಕೊನೆಯಲ್ಲಿ ಒಂದು ಜೋಕು ಬರೆಯುತ್ತಿದ್ದರು. ಆ ಜೋಕು ಎಷ್ಟು ಜನಪ್ರಿಯತೆ ಪಡೆಯಿತೆಂದರೆ ಒಮ್ಮೆ ಬೀಚಿಯವರು ಏಕಾಏಕಿ ಅಂಕಣ ಬರೆಯುವುದನ್ನು ನಿಲ್ಲಿಸಿದಾಗ, ಓದುಗರ ಪತ್ರಗಳು ಕಚೇರಿಗೆ ದಾಳಿಯಿಟ್ಟವು. ಸಂಪಾದಕರಾಗಿದ್ದ ಪಾಪು, ‘ಕೆನೆ ಮೊಸರು’ ಹೆಸರಿನಡಿ ಬೀಚಿಯವರ ಫೋಟೋ ಹಾಕಿ, “ಹುಡುಕಿ ಕೊಡಿ” ಎಂದು ಪ್ರಕಟಿಸಿ ಬಿಟ್ಟರು! ಅದೆಲ್ಲಿದ್ದರೋ ಏನೋ ಕಚೇರಿಗೆ ಓಡಿಬಂದ ಬೀಚಿ, ಇನ್ನು ಮುಂದೆ ತಪ್ಪದೆ ಅಂಕಣ ಬರೆಯುವುದಾಗಿ ವಾಗ್ದಾನ ಮಾಡಿದರು. ಅವರು ಲೇಖನದ ಕೊನೆಯಲ್ಲಿ ಬರೆಯುತ್ತಿದ್ದ ಜೋಕುಗಳ ಸಂಗ್ರಹವೇ “ತಿಂಮನ ತಲೆ”. ೧೯೫೦ರಲ್ಲಿ ಮೊದಲ ಮುದ್ರಣ ಕಂಡ “ತಿಂಮನ ತಲೆ” ಮೂವತ್ತಕ್ಕೂ ಹೆಚ್ಚು ಮರುಮುದ್ರಣಗಳನ್ನು ಕಂಡಿದೆ. ಅಷ್ಟೇ ಅಲ್ಲ, ಇಂದಿಗೂ ಕನ್ನಡ ಸಾರಸ್ವತ ಲೋಕದಲ್ಲಿ ಅಂತಹ ಅದ್ಭುತ ಜೋಕುಗಳನ್ನು ಕಾಣಲು ಸಾಧ್ಯವಿಲ್ಲ.

ಹಾಗಂತ ಹೇಳಿದರೆ ಖಂಡಿತ ಅತಿಶಯೋಕ್ತಿಯಾಗದು.

ನಿಮಗೆ ಆರ್ಟ್ ಬುಕ್‌ವಾಲ್ಡ್ ಗೊತ್ತಿರಬಹುದು. ಅಮೆರಿಕದ ‘ವಾಷಿಂಗ್ಟನ್ ಪೋಸ್ಟ್’ ಪತ್ರಿಕೆಯ ಮೂಲಕ ಹಾಸ್ಯಕ್ಕೆ ಹೊಸ ಭಾಷ್ಯ ಬರೆದಾತ. ಒಮ್ಮೆ ಅಮೆರಿಕದ ಅಧ್ಯಕ್ಷರು ಬುಕ್‌ವಾಲ್ಡ್ ನನ್ನು ಔತಣಕ್ಕೆ ಕರೆದರು. ಪತ್ನಿ ಸಮೇತ ಬುಕ್‌ವಾಲ್ಡ್ ಹೋದ. ಆ ವೇಳೆಗಾಗಲೇ ಬುಕ್‌ವಾಲ್ಡ್ ಬುದ್ಧಿಗೆ ಸ್ವಲ್ಪ ಮಂಕು ಕವಿದು ಅರುಳೋ-ಮರುಳೋ ಎಂಬಂತಾಗಿತ್ತು. ಇತ್ತ ಬುಕ್‌ವಾಲ್ಡ್ ಪತ್ನಿ ಮಹಾ ಕುಳ್ಳಿ. ಊಟಕ್ಕೆ ಕುಳಿತಿದ್ದಾಗ ಬುಕ್‌ವಾಲ್ಡ್ ತನ್ನ ಬಗ್ಗೆಯೇ ಒಂದು ಜೋಕು ಹೇಳಿದ- I am mentally challenged and she is vertically challenged!!

ಅಂಕಣದಲ್ಲಿ ಬುಕ್‌ವಾಲ್ಡ್ ರಾಜಕೀಯ ವಿಡಂಬನೆ ಮಾಡುತ್ತಿದ್ದರು. ಆದರೆ ಬೀಚಿಯವರು ಅತ್ಯಂತ ಗಂಭೀರ ಸಮಸ್ಯೆಗಳ ಬಗ್ಗೆಯೂ ಮಾರ್ಮಿಕವಾಗಿ ಹಾಸ್ಯ ಮಾಡುತ್ತಿದ್ದರು.

ಒಮ್ಮೆ ಇಬ್ಬರು ವ್ಯಕ್ತಿಗಳು ಕುರಿಯೊಂದನ್ನು ಕಸಾಯಿ ಖಾನೆಗೆ ಎಳೆದುಕೊಂಡು ಹೋಗುತ್ತಿದ್ದರು. ಅದನ್ನು ನೋಡಿದ ಪುಟ್ಟ ಬಾಲಕ ಅಪ್ಪನನ್ನು ಕೇಳಿದ-ಕುರಿಯನ್ನು ಎಲ್ಲಿಗೆ ಎಳೆದೊಯ್ಯುತ್ತಿದ್ದಾರೆ?
ಅಪ್ಪ: ಕಸಾಯಿ ಖಾನೆಗೆ.
ಮಗ: ಸಧ್ಯಾ
ಅಪ್ಪ: ಏಕೆ ಹಾಗೆ ನಿಟ್ಟುಸಿರು ಬಿಡುತ್ತಿದ್ದೀಯಾ?
ಮಗ: ನನ್ನಂತೆಯೇ ಆ ಕುರಿಯನ್ನೂ ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದಾರೆ ಎಂದು ನಾನಂದುಕೊಂಡಿದ್ದೆ!

ಆಗ ದೇಶಾದ್ಯಂತ ಕಡ್ಡಾಯ ಶಿಕ್ಷಣ ನೀತಿ ಜಾರಿಗೆ ಬಂದಿತ್ತು. ಹಠ ಹಿಡಿದ ಮಕ್ಕಳನ್ನು ಹೊಡೆದು, ಬಡಿದಾದರೂ ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದರು. ಅಂದರೆ ಕಡ್ಡಾಯ ಶಿಕ್ಷಣ ಜಾರಿಯ ಉದ್ದೇಶವೇನೋ ಒಳ್ಳೆಯದಿತ್ತು. ಮಾರ್ಗ ಸರಿಯಿರ ಲಿಲ್ಲ ಎಂಬುದನ್ನು ತಿಳಿಹಾಸ್ಯದೊಂದಿಗೆ ಹೇಳುವ ಜಾಣ್ಮೆ ಬೀಚಿ ಯವರಲ್ಲಿ ಮಾತ್ರ ಇತ್ತು. ಅವರ “ಬೆಳ್ಳಿ ತಿಂಮ ೧೦೮ ಹೇಳಿದ”, “ತಿಮ್ಮನ ತಲೆ”, “ಅಂದನಾ ತಿಮ್ಮ”- ಈ ಮೂರು ಪುಸ್ತಕಗಳೂ ನಿಮ್ಮನ್ನು ನಕ್ಕು ನಗಿಸಿದರೂ ಒಂದಕ್ಕಿಂತ ಒಂದು ಭಿನ್ನ.

ಭ್ರಾತೃಪ್ರೇಮ
ಪ್ರಾಣಿದಯೆಯ ಬಗ್ಗೆ ದೀರ್ಘ ಭಾಷಣ ಮಾಡಿದ ಆನಂತರ ಪ್ರಶ್ನೆಗಳನ್ನು ಕೇಳಲು ಶುರುಮಾಡಿದರು ತಿಂಮನ ಮಾಸ್ತರು. “ರಸ್ತೆಯಲ್ಲಿ ಹೋಗುವಾಗ ನಾನೊಬ್ಬ ತುಂಟ ಹುಡುಗನನ್ನು ನೋಡುತ್ತೇನೆ. ಯಾರ ಗೋಜಿಗೂ ಹೋಗದೆ ತಲೆಬಗ್ಗಿಸಿ ತನ್ನಷ್ಟಕ್ಕೆ ಹೋಗುತ್ತಿದ್ದ ಮೂಕಪ್ರಾಣಿ ಕತ್ತೆಯೊಂದನ್ನು ಹುಡುಗ ಹೊಡೆಯುತ್ತಿದ್ದಾನೆ. ಆಗ ನಾನು ಅವನಿಗೆ ಛೀ ಮಾಡಿ ಕಳಿಸಿ ಕತ್ತೆಯನ್ನು ಕಷ್ಟದಿಂದ ಪಾರುಮಾಡುತ್ತೇನೆ. ಈ ನನ್ನ ಕಾರ್ಯ ಏನನ್ನು ಸೂಚಿಸುತ್ತದೆ?”.
“ನಾನು ಹೇಳುತ್ತೇನೆ ಸಾರ್” ಎಂದು ಎದ್ದು ನಿಂತ ತಿಂಮ. ಕೂಡಲೇ ಉತ್ತರವನ್ನೂ ಹೇಳಿದ “ನಿಮ್ಮದು ಭ್ರಾತೃಪ್ರೇಮ ಸಾರ್!”

ಕಡೇ ಪರೀಕ್ಷೆ
ತಿಂಮನ ಅಜ್ಜ ತಮ್ಮ ಕೋಣೆಯಿಂದ ಹೊರಕ್ಕೇ ಬರುತ್ತಿರಲಿಲ್ಲ. ಅವರಾಯಿತು, ಅವರ ಗ್ರಂಥಾವಲೋಕನವಾಯಿತು. ತಿಂಮನ ತಮ್ಮನಿಗೆ ಆಶ್ಚರ್ಯವಾಯಿತು. ಅಣ್ಣನನ್ನು ಕೇಳಿದ-“ಅದೇನು ಅಜ್ಜ ಅಷ್ಟು ಓದುತ್ತಿದ್ದಾರೆ? ಅವರಿಗೂ ಪರೀಕ್ಷೆ ಇದೆಯೇ?”.
ತಿಂಮ ತಮ್ಮನಿಗೆ ಸಮಾಧಾನ ಹೇಳಿದ.
“ಹೌದು, ಭಗವದ್ಗೀತೆ ಬಾಯಿಪಾಠ ಮಾಡುತ್ತಿದ್ದಾರೆ-ಕಡೇ ಪರೀಕ್ಷೆ ಬಂತಲ್ಲಾ ಅವರಿಗೆ?!”

ಮಾತು ಕೇಳುವ ಹೆಂಡತಿ
“ತಿಂಮಾ?”
“ಏನು ಸ್ವಾಮಿ?”
“ನನ್ನ ಹೆಂಡತಿ ನನ್ನ ಮಾತನ್ನು ಕೇಳುವುದೇ ಇಲ್ಲ, ನಿನ್ನ ಹೆಂಡತಿ?”
“ಚೆನ್ನಾಗಿ ಕೇಳಿದಿರಿ. ಯಾರು, ನನ್ನ ಹೆಂಡತಿಯೇ?”
“ಹೌದು, ಕೇಳುತ್ತಾಳೇನಯ್ಯಾ ನಿನ್ನ ಮಾತು?”
“ಏನು ಸ್ವಾಮಿ, ಹಾಗನ್ನುತ್ತೀರಿ? ಬೇರೆ ಸ್ತ್ರೀಯರೊಟ್ಟಿಗೆ ನಾನು ಮಾತನಾಡುತ್ತಿರುವಾಗ ಎಷ್ಟು ಚೆನ್ನಾಗಿ ಕಿವಿಕೊಟ್ಟು ಕೇಳುತ್ತಾಳೆ ಗೊತ್ತೆ?!”

ತಂದೆಯ ಶತ್ರುವಿನಂತೆ ಮಗ
ಹೊಸದಾಗಿ ಸಾಹಿತಿಯಾಗಿದ್ದ ತನ್ನ ಗೆಳೆಯನನ್ನು ಕಾಣಲು ತಿಂಮ ಹೋಗಿದ್ದ. ಆದರೆ ಮಿತ್ರನ ಮನೆಯ ಸನ್ನಿವೇಶವನ್ನು ಕಂಡು ತಿಂಮ ಪೆಚ್ಚಾದ. ತನ್ನ ಕೊನೆಯ ಮಗನ ಮೇಲೆ ಗೆಳೆಯ ಸಿಟ್ಟಾಗಿದ್ದ, ಬೈಗುಳಗಳ ಸುರಿಮಳೆಗೈಯ್ಯುತ್ತಿದ್ದ. ಅದನ್ನು ಕಂಡ ತಿಂಮ, ‘ಏನು?’ ಎಂದು ಕೇಳುವ ಮೊದಲೇ ಸ್ನೇಹಿತ ಎಲ್ಲವನ್ನೂ ವಿವರಿಸಿದ.

“ನೋಡಯ್ಯಾ ಈ ಅವಿವೇಕಿಯನ್ನ. ಎಂತಹ ಕೆಲಸ ಮಾಡಿ ದ್ದಾನೆ? ರಾತ್ರಿಯೆಲ್ಲಾ ಕುಳಿತು ೬ ಕವನ ಬರೆದಿಟ್ಟಿದ್ದೆ. ಆ ಎಲ್ಲ ಕಾಗದಗಳನ್ನೂ ಒಯ್ದು ಒಲೆಯಲ್ಲಿ ಹಾಕಿದ್ದಾನೆ ಇವನು”.

ಆದರೆ ದುಃಖ ತೋಡಿಕೊಂಡ ಗೆಳೆಯನನ್ನು ಸಮಾಧಾನ ಮಾಡುವ ಬದಲು “ಶಬಾಸ್” ಎಂದು ಆತನ ಮಗನ ಬೆನ್ನು ತಟ್ಟಿದ ತಿಂಮ, ಸ್ನೇಹಿತನಿಗೆ ಹೇಳಿದ-“ನಿಮ್ಮ ವಂಶವೇ ಅಂಥದ್ದು. ತಂದೆ ಸಾಹಿತಿ, ಮಗ ವಿಮರ್ಶಕ! ಈ ವಯಸ್ಸಿಗೇ ನಿನ್ನ ಕೃತಿಗಳನ್ನು ಅರ್ಥಮಾಡಿಕೊಂಡಿದ್ದಾನೆ ನೋಡು!!”

ಇಂದು ಜೋಕುಗಳು ಬೇಕೆಂದರೆ ಗೂಗಲ್ ಡಾಟ್‌ಕಾಮ್ ಮೂಲಕ ತಡಕಾಡಬಹುದು, ‘ವಿಕಿಪೀಡಿಯಾ’ದ ಮೊರೆಹೋಗ ಬಹುದು, ಆನ್‌ಲೈನ್ ಜೋಕ್ಸ್‌ಗಾಗಿಯೇ “Funtoosh” ಇದೆ. ಇದು ಇಂಟರ್‌ನೆಟ್ ಯುಗ. ನಮ್ಮ ಕನ್ನಡದಲ್ಲಿ ಈಗ ಕಾಣ ಸಿಗುತ್ತಿರುವವರೂ ಇಂಟರ್‌ನೆಟ್ ಕವಿಗಳು, ಸಣ್ಣಕಥೆಗಾರರೇ. ಗದ್ಯದ ಒಂದು ಸಾಲು ಅಥವಾ ವಾಕ್ಯವನ್ನು ನಾಲ್ಕು ಕಡೆ ತುಂಡು ಮಾಡಿ ಅದೇ ಕವಿತೆ, ಕವನ ಹಾಗೂ ತಾನೊಬ್ಬ ಕವಿ, ಕವಯಿತ್ರಿ ಎಂದು ಪೋಸು ಕೊಡುವವರಿಗೂ ಕಡಿಮೆಯೇನಿಲ್ಲ. ಇನ್ನು ಕೆಲವರು ಶಬ್ದಗಳ ಆಡಂಬರವೇ ಸಾಹಿತ್ಯ ಎಂಬಂತೆ ಪೋಸು ಕೊಡುತ್ತಾರೆ. ಇದನ್ನೆಲ್ಲಾ ನೋಡಿದಾಗ ಇಂಟರ್‌ನೆಟ್ ಎಂಬುದು ಕಲ್ಪನೆಗೂ ನಿಲುಕದ ಕಾಲದಲ್ಲಿ ಬೀಚಿ ಹೇಗೆ ಇಂತಹ ಹಾಸ್ಯಚಟಾಕಿಗಳನ್ನು ಬರೆದರು ಎಂದು ಆಶ್ಚರ್ಯವಾಗುತ್ತದೆ. ಈಗಿನ ಜೋಕು, ಚಟಾಕಿ, ಚೋದ್ಯ, ಸಣ್ಣಕಥೆಗಳನ್ನು ಓದಿದಾಗ ಅವುಗಳನ್ನು ಅನುಭವಿಸುವ ಬದಲು ‘ಎಲ್ಲೋ ಕೇಳಿದ್ದೇನಲ್ಲಾ, ಎಲ್ಲೋ ಓದಿದ ಹಾಗೆ ಇದೆಯೆಲ್ಲಾ’ ಎಂದು ಮನಸ್ಸು ಮೂಲ ವನ್ನು ಹುಡುಕಲಾರಂಭಿಸುತ್ತದೆ. ಒಂದೇ ಜೋಕು ಹಲವು ಪತ್ರಿಕೆಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ‘ರೀಸೈಕ್ಲ್’ ಆಗುತ್ತದೆ. ಆದರೆ ಬೀಚಿಯವರ ಬಹುದೊಡ್ಡ ಹೆಗ್ಗಳಿಕೆಯೆಂದರೆ ಅವರ ಜೋಕುಗಳಲ್ಲಿ ಇಂದಿಗೂ ತಾಜಾತನವಿದೆ, ಇಂದಿನ ಪರಿಸ್ಥಿತಿಗೂ ಹೋಲಿಕೆ ಮಾಡಿಕೊಳ್ಳಬಹುದು. ತೀರಾ Original ಎನಿಸುತ್ತವೆ.

ಬೀಚಿ ಕಾರ್ಯಕ್ಷೇತ್ರ ಬರೀ ಜೋಕು, ಕಥೆಗಳಿಗಷ್ಟೇ ಸೀಮಿತವಾಗಲಿಲ್ಲ.

‘ಸುಧಾ’ ವಾರಪತ್ರಿಕೆಯಲ್ಲಿ ‘ನೀವು ಕೇಳಿದಿರಿ?’ ಎಂಬ ಅಂಕಣ ಇಂದಿಗೂ ಪ್ರಕಟವಾಗುತ್ತದೆ. ಒಂದು ಕಾಲದಲ್ಲಿ ಈ ಅಂಕಣದಲ್ಲಿ ಬರುತ್ತಿದ್ದ ಪ್ರಶ್ನೆಗಳಿಗೆ ಬೀಚಿ ಉತ್ತರಿಸುತ್ತಿದ್ದರು.
ಪ್ರಶ್ನೆ: ಸರ್, ನಾನು ಎಂ.ಎಲ್.ಎ. ಹಾಗೂ ಎಂ.ಪಿ. ಎರಡಕ್ಕೂ ನಿಂತುಕೊಳ್ಳಬೇಕೆಂದಿದ್ದೇನೆ?
ಬೀಚಿ: ಒಂದಕ್ಕೆ ನಿಂತುಕೊಳ್ಳುತ್ತಾರೆ. ಆದರೆ ಎರಡಕ್ಕೂ ನಿಂತು ಕೊಳ್ಳುತ್ತಾರೆ ಅಂತ ಗೊತ್ತಿರಲಿಲ್ಲ!

‘ಪ್ರಜಾಮತ’ದ ‘ಗುಪ್ತ ಸಮಾಲೋಚನೆ’ ಒಂಥರಾ ಮಜಾ ಕೊಟ್ಟರೆ ಬೀಚಿ ಬುಲೆಟ್‌ಗಳು ಚಿಳ್ ಎನಿಸುತ್ತಿದ್ದವು. ಇವತ್ತಿಗೂ ಇಂತಹ ಪ್ರಶ್ನೆ-ಉತ್ತರಗಳ ಕಾಲಂಗಳು ಹೆಚ್ಚೂಕಡಿಮೆ ಎಲ್ಲ ವಾರಪತ್ರಿಕೆ, ಟ್ಯಾಬ್ಲಾಯ್ಡ್‌ಗಳಲ್ಲೂ ಪ್ರಕಟವಾಗುತ್ತಿವೆ. ಉತ್ತರ ಕೊಡುವವರೇ ಕೆಲವೊಮ್ಮೆ ಪ್ರಶ್ನೆಗಳನ್ನೂ ‘ಕೇಳಿ’ಕೊಳ್ಳುತ್ತಾರೆ! ಅವುಗಳಲ್ಲಿ ತಿಳಿಹಾಸ್ಯದ ಬದಲು ಯಾರನ್ನೋ ಅವಹೇಳನ ಮಾಡುವ ಉದ್ದೇಶ ತೂರಿಬಂದಿರುತ್ತದೆ. ಹಾಗಾಗಿ ನಕ್ಕು, ನಗಿ ಸುವ ಬದಲು “PJ’ (poor jokes)ಗಳೆನಿಸಿಕೊಂಡು ಬಿಡುತ್ತವೆ. ಇಂಗ್ಲಿಷ್‌ನಲ್ಲಿ ಜಗ್ ಸುರೈಯಾ(ಟೈಮ್ಸ್ ಆಫ್ ಇಂಡಿಯಾ) ಅವರಂತಹ ಕೆಲವರು ಗಂಭೀರವಾದ ವಿಚಾರಗಳನ್ನು ತಿಳಿಹಾಸ್ಯ ದೊಂದಿಗೆ ಇಂದಿಗೂ ಚೆನ್ನಾಗಿ ಬರೆಯುತ್ತಿದ್ದಾರೆ. ಆದರೆ ಕನ್ನಡದಲ್ಲಿ ಬೀಚಿ ಹಾಕಿಕೊಟ್ಟ ಪರಂಪರೆಯನ್ನು ಮುಂದು ವರಿಸಿಕೊಂಡು ಹೋಗುವ ಸಾಮರ್ಥ್ಯ ಪೂರ್ಣಮಟ್ಟದಲ್ಲಿ ಯಾರಲ್ಲೂ ಕಾಣಲಿಲ್ಲ. ಒಂದೆರಡು ದಶಕಗಳ ಕಾಲ ‘ಕೊರವಂಜಿ’ ಕೊಂಚ ಕೊರತೆಯನ್ನು ನೀಗಿಸಿದರೂ ಕಾಲಾಂತರದಲ್ಲಿ ಬದುಕುಳಿಯಲಿಲ್ಲ. ವೈಯೆನ್ಕೆ, ನಾ. ಕಸ್ತೂರಿ, ಪುಂಡಲಿಕ ಶೇಠ್ ಅವರಂತಹವರು ಈ ಪರಂಪರೆಯನ್ನು ಮುಂದುವರಿಸಿದರೂ ತಟ್ಟೆ ಖಾಲಿಯಾದ ನಂತರ ಬೆರಳು ನೆಕ್ಕುವಾಗ ಸಿಕ್ಕಷ್ಟು ಸುಖ ಅವುಗಳಿಂದ ಸಿಕ್ಕಿತೇ ಹೊರತು ಬೀChiಯವರಂತೆ ಭರಪೂರ ಭೋಜನವನ್ನು ಉಣ ಬಡಿಸಲೂ ಯಾರಿಗೂ  ಸಾಧ್ಯವಾಗಲಿಲ್ಲ. ಈಗಂತೂ ಯಾರೂ ಇಲ್ಲವಾಗಿದ್ದಾರೆ.

ಅಶ್ಲೀಲ ಸಾಹಿತ್ಯ
“ಅಪ್ಪಾ”
“ಏನೋ ತಿಂಮಾ?”
“ಅಶ್ಲೀಲ ಸಾಹಿತ್ಯವೆಂದರೆ ಯಾವುದಪ್ಪಾ?”
“ಚಿಕ್ಕವರು ಓದಬಾರದ್ದು ಅಶ್ಲೀಲ ಸಾಹಿತ್ಯ”
“ಹೀಗೆಂದು ದೊಡ್ಡವರು ಹೇಳ್ತಾರಲ್ವೇನಪ್ಪಾ?”
“ಹೌದೋ ತಿಂಮಾ”
“ಚಿಕ್ಕವರಿದ್ದಾಗ ಓದಿ, ದೊಡ್ಡವರಾದ ಮೇಲೆ ಚಿಕ್ಕವರು ಓದಕೂಡದು ಎಂಬುದಕ್ಕೇ ಅಶ್ಲೀಲಸಾಹಿತ್ಯವೆನ್ನುತ್ತಾರೇನಪ್ಪಾ?”

ಅವರಷ್ಟು ಚೆನ್ನಾಗಿ ಕಾಲೆಳೆಯಲು, ಕಾಲೆಳೆಯುತ್ತಲೇ ದೊಡ್ಡವರನ್ನು, ದೊಡ್ಡವರ ಧೂರ್ತತನವನ್ನು ಬೆತ್ತಲು ಮಾಡಲು ಬಹುಶಃ ಯಾರಿಗೂ ಬರುವುದಿಲ್ಲ.

ಜನಿವಾರ
ಅಪ್ಪ: ತಿಂಮಾ ಜನಿವಾರ ಹಾಕಿಕೋ.
ತಿಂಮಾ: ಯಾಕಪ್ಪಾ?
ಅಪ್ಪ: ಜನಿವಾರ ಹಾಕಿಕೊಳ್ಳದಿದ್ದರೆ ಮುಂದಿನ ಜನ್ಮದಲ್ಲಿ ನೀನು ಕತ್ತೆಯಾಗಿ ಹುಟ್ಟುತ್ತೀಯಾ.
ತಿಂಮಾ: ಅಪ್ಪಾ ಊರಲ್ಲಿ ಬಹಳ ಕತ್ತೆಗಳಿವೆ. ಅವರೆಲ್ಲ ಹಿಂದಿನ ಜನ್ಮದಲ್ಲಿ ಬ್ರಾಹ್ಮಣರಾಗಿದ್ದು ಜನಿವಾರ ಹಾಕಿಕೊಳ್ಳುವುದನ್ನು ಮರೆತಿದ್ದವರಾ?!

ಝೆನ್ ಕಥೆಗಳಂತೆ ಅತ್ಯಂತ ಕಡಿಮೆ ಪದ, ಸಾಲುಗಳಲ್ಲಿ ಕಥೆ, ಜೋಕು ಹೇಳುತ್ತಿದ್ದ ಬೀಚಿ, ಆಧುನಿಕ ಬರಹಗಾರರಿಗೆ ಮಾದರಿ. ಅರವತ್ಮೂರು ಕೃತಿಗಳನ್ನು ರಚಿಸಿರುವ ಅವರಲ್ಲಿ ಅತ್ಯಂತ ಗಂಭೀರವಾದ ಸಮಸ್ಯೆಯನ್ನು ಚೋದ್ಯದ ಮೂಲಕ ಹೇಳುವ ಜಾಣ್ಮೆ, ಸ್ವತಃ ಬಡತನದಲ್ಲಿದ್ದರೂ ಸಮಾಜವನ್ನು ಗೇಲಿ ಮಾಡಿ ನಗುವ, ನಗಿಸುವ ಸಾಮರ್ಥ್ಯ, ಒಬ್ಬ ವ್ಯಂಗ್ಯಚಿತ್ರ ಬರಹಗಾರನಲ್ಲಿರಬೇಕಾದ ಹಾಸ್ಯಪ್ರeಯನ್ನು ಕಾಣಬಹು ದಾಗಿತ್ತು. ಹಾಗಾಗಿಯೇ ಆ ಕಾಲದಲ್ಲಿ ಹೊಸದಾದ ಒಂದು ಓದುಗ ವರ್ಗವನ್ನು ಸೃಷ್ಟಿಸಿದರು. ಒಂದಿಡೀ ತಲೆಮಾರು ಅವರ ಜೋಕು, ಕಥೆಗಳನ್ನು ಕೇಳಿಕೊಂಡು ಬೆಳೆಯಿತು. ಇಂದು ಅವರ ಸ್ಥಾನವನ್ನು ತುಂಬುವ ಮಾತು ಹಾಗಿರಲಿ, ಅವರನ್ನು ನೆನಪು ಮಾಡಿಕೊಡುವಂತಹವರೂ ಕಾಣ ಸಿಗುವುದಿಲ್ಲ.

ಮೊನ್ನೆ ಡಿಸೆಂಬರ್ 7ರಂದು ಬೀChi ಯವರ (ರಾಯಸಂ ಭೀಮಸೇನ ರಾವ್ ) ಪುಣ್ಯತಿಥಿ ಇತ್ತು. ಆದರೆ ಮುಂಬೈ ಮೇಲೆ ನಡೆದಿದ್ದ ಭಯೋತ್ಪಾದನೆಯ ಬೊಬ್ಬೆಯಲ್ಲಿ ಅವರನ್ನು ನೆನಪಿಸಿ ಕೊಳ್ಳಲಾಗಿರಲಿಲ್ಲ. ತಡವಾದರೂ ನೆನಪಿಸಿಕೊಳ್ಳದೇ ಇದ್ದರೆ ಹೇಗೆ, ಅಲ್ಲವೆ?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. 2 ಟಿಪ್ಪಣಿಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: