ದೇವೆಗೌಡರ ಕಪಿಮುಷ್ಟಿಯಿಂದ ಪಾರಾಗುವುದು ಹೇಗೆ? – Eliminate H.D. Devegowda

ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನು ಗಾಳಿಗೆ ತೂರಿದ ಚಾಣಕ್ಯ, ಜಾತಿರಾಜಕಾರಣವನ್ನು ಪರಾಕಾಷ್ಠೆಗೆ ಕೊಂಡೊಯ್ದ ಸೆಕ್ಯುಲರ್ ಭೀಷ್ಮ, ಜತೆಗಾರರ ಬೆನ್ನಿಗೆ ಚೂರಿ ಹಾಕುವ ಬ್ರೂಟಸ್, ವಚನ ಭ್ರಷ್ಟತೆಯನ್ನು ಪೋಷಿಸಿದ ಪಾಪಕೋಟಿ, ಕುಟುಂಬದ ಏಳಿಗೆಯನ್ನು ಮಾತ್ರ ಬಯಸುವ ಹಿರಿಯ ತಲೆ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ರಾಜಕೀಯ ಹಾವಳಿಯನ್ನು ತಪ್ಪಿಸುವ ಬಗೆಯಾದರೂ ಹೇಗೆ? ಇಲ್ಲಿ ಕೆಲವು ಸಲಹೆಗಳಿವೆ. ಓದಿ. ನಿಮ್ಮ ಪ್ರತಿಕ್ರಿಯೆಗಳನ್ನು ದಟ್ಸ್‌ಕನ್ನಡ ಎಲೆಕ್ಟ್ರಾನಿಕ್ ಮತಗಟ್ಟೆಯಲ್ಲಿ ತಪ್ಪದೆ ಹಾಕಿ!!
No party can form govt without JDS support : Gowdaರಾಜ್ಯದ ಪ್ರಜ್ಞಾವಂತ ಮತದಾರ,

ಇಂಥದ್ದೊಂದು ಪತ್ರವನ್ನು ನಿನಗೆ ಬರೆಯಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಹಾಗಂತ ನಿನಗೆ ಗೊತ್ತಿರದ ಯಾವುದೋ ವಿಷಯದ ಬಗ್ಗೆ ಗಮನ ಸೆಳೆಯುವ ಅಥವಾ ಯಾರದ್ದೋ ಬಣ್ಣ ಬಯಲು ಮಾಡುವ ಗುರಿಯಾಗಲಿ, ಉದ್ದೇಶವಾಗಲಿ ಇಲ್ಲಿಲ್ಲ. ‘ಹಣವೆಂದರೆ ಹೆಣವೂ ಬಾಯ್ಬಿಡುತ್ತದೆ” ಎಂಬ ಗಾದೆ ಮಾತೇ ಇರುವಾಗ ಚುನಾವಣೆಗೆ ನಿಂತಿರುವ ‘ದುಡ್ಡಪ್ಪ”ಗಳ ಬಗ್ಗೆ ಪ್ರತ್ಯೇಕವಾಗಿ ಹೇಳುವುದಕ್ಕಾದರೂ ಏನಿದೆ? ಅಷ್ಟಕ್ಕೂ ಸ್ವಂತ ಸೈಟು, ಮನೆ, ಕಾರು, ಕಾಸು ಬೇಕೆನ್ನುವ ಆಸೆ ಹೊಂದಿರುವ ನಾವೂ ಕೂಡ ಮೂಲತಃ ಕ್ಯಾಪಿಟಲಿಸ್ಟ್‌ಗಳೇ. ಆ ವಿಷಯ ಬೇಡ ಬಿಡು.

ಆದರೆ “ನಮ್ಮನ್ನು ಬಿಟ್ಟು ಯಾರು ಸರಕಾರ ರಚಿಸುತ್ತಾರೋ ನೋಡ್ತೀನಿ” ಅಂತ ಮಾಜಿ ಪ್ರಧಾನಿ ದೇವೇಗೌಡರು ಗುಡುಗಿದ್ದಾರಲ್ಲಾ ಅವರ ಮಾತಿನ ಒಳಾರ್ಥದ ಬಗ್ಗೆ, ಮುಂದೆ ಎದುರಾಗಲಿರುವ ಅಪಾಯದ ಬಗ್ಗೆ ಒಂದಿನಿತಾದರೂ ಯೋಚಿಸಿದ್ದೀಯಾ? ಒಂದು ವೇಳೆ ಈ ಬಾರಿಯೂ ನೀನು ಅರೆಮನಸ್ಸಿನಿಂದ ಯಾರ್‍ಯಾರಿಗೋ ವೋಟು ಮಾಡಿ ಜೆಡಿಎಸ್ ಕೈಗೆ ಮತ್ತೆ ಕೀ ಕೊಟ್ಟರೆ ಆಗುವ ಅನಾಹುತದ ಬಗ್ಗೆ ಎಂದಾದರೂ ಯೋಚನೆ ಮಾಡಿದ್ದೀಯಾ? ಅದಕ್ಕಾಗಿಯೇ ಈ ಪತ್ರ.

ನೀನೇ ಹೇಳು, ಅವಧಿಗಿಂತ ಮುಂಚೆ ನಡೆಯುತ್ತಿರುವ ಈ ಚುನಾವಣೆಯನ್ನು ನಿನ್ನ ಮೇಲೆ ಹೇರಿದವರಾರು? ಏಳು ತಿಂಗಳು ಸರಕಾರವೇ ಇಲ್ಲದಂತಹ ಅತಂತ್ರ ಸ್ಥಿತಿಯನ್ನು ಎದುರಿಸಬೇಕೆಂದು, ಉರಿ ಬಿಸಿಲಿನಲ್ಲಿ ಇರುವ ಕೆಲಸ ಬಿಟ್ಟು ಮತಗಟ್ಟೆಗೆ ಹೋಗಬೇಕೆಂದು ನೀನೇ ಬಯಸಿದ್ದೆಯೋ? ಅದಿರಲಿ, ಮತ್ತೆ ನಿನ್ನ ಮುಂದೆ ಕೈಜೋಡಿಸಿ ಮತ ಕೇಳುತ್ತಿರುವ ವ್ಯಕ್ತಿಗಳಾರು? ಅದೇ ‘ನಟ ಭಯಂಕರ” ದೇವೇಗೌಡ, ಅದದೇ ಮುಖಗಳು. ಕನ್ನಡ ನಾಡನ್ನು ಡೋಲಾಯಮಾನ ಸ್ಥಿತಿಗೆ ತಂದಿದ್ದು ಇದೇ ದೇವೇಗೌಡರೇ ಅಲ್ಲವೆ? ಹಾಗಿರುವಾಗ ನೀನೂ ಕೂಡ ‘ನಮ್ಮವರು”, ‘ನಮ್ಮವನು” ಅಂತ ವೋಟು ಹಾಕಲು ಹೊರಟರೆ ಸಮಗ್ರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಯೋಚನೆ ಮಾಡುವವರಾರು?

ದೇವೇಗೌಡರು ಬಂದರೆ ಮಾತ್ರ ಒಕ್ಕಲಿಗರ ಉದ್ಧಾರವಾಗುತ್ತದೆ, ಯಡಿಯೂರಪ್ಪ ಬಂದರಷ್ಟೇ ಲಿಂಗಾಯತರ ಪ್ರಗತಿ ಸಾಧ್ಯ, ಸಿದ್ದರಾಮಯ್ಯ ಬಂದರೆ ಕುರುಬರ ಶ್ರೇಯೋಭಿವೃದ್ಧಿಯಾಗುತ್ತದೆ, ಖರ್ಗೆ ಬಂದರೆ ದಲಿತರು ಶ್ರೀಮಂತರಾಗುತ್ತಾರೆ ಎನ್ನಲು ಕರ್ನಾಟಕವೇನು ಒಕ್ಕಲಿಗರು, ಲಿಂಗಾಯತರು, ಕುರುಬರು, ದಲಿತರ ಖಾಸಗಿ ಆಸ್ತಿಯೇ? ಈಡಿಗರು, ಉಪ್ಪಾರರು, ನಾಯ್ಕರು, ಕೊಡವರು, ಬಣಜಿಗರು, ಬಂಟರು ಇನ್ನು ಮುಂತಾದ ಸಣ್ಣಪುಟ್ಟ ಜಾತಿಗಳು ಎಲ್ಲಿಗೆ ಹೋಗಬೇಕು? ಈ ಜನಾಂಗಕ್ಕೆ ಸೇರಿದ ಯಾವ ನಾಯಕರೂ ಮುಖ್ಯಮಂತ್ರಿಯಾಗುವ ಸಾಧ್ಯತೆಯೇ ಇಲ್ಲ. ಹಾಗಂತ ಅವರು ಮತಹಾಕದೆ ಇರಬೇಕಾ?

ನಾವೆಲ್ಲರೂ ಕನ್ನಡಿಗರು ಎಂಬ ಭಾವನೆಯಿಂದ ವೋಟು ಹಾಕುವ ಕಾಲ ಹೊರಟೇ ಹೋಯಿತಾ? ಪ್ರತಿನಿತ್ಯ ಯಾವ ಪತ್ರಿಕೆ ತೆರೆದರೂ, ಯಾವ ಚಾನೆಲ್ ಹಾಕಿದರೂ ಬರೀ ಜಾತಿ ಲೆಕ್ಕಾಚಾರ, ಜಾತಿವಾರು ಮತದಾರರ ಪ್ರಮಾಣದ ಮಾತುಗಳೇ. ಅಭ್ಯರ್ಥಿಯ ಯೋಗ್ಯಾಯೋಗ್ಯತೆಯನ್ನು ಪರಿಗಣಿಸುವುದು ಬಿಟ್ಟು, ಆತನ ಜಾತಿಯ ಆಧಾರದ ಮೇಲೆ ಫಲಿತಾಂಶವನ್ನು ಲೆಕ್ಕಹಾಕುವ ಪರಿಸ್ಥಿತಿ ಸೃಷ್ಟಿಯಾಗಿದ್ದಾದರೂ ಏಕೆ? ಒಮ್ಮೆ ದೇವರಾಜ ಅರಸರನ್ನು ನೆನಪಿಸಿಕೋ. ಅವರು ಜಾರಿಗೆ ತಂದ “ಉಳುವವನೇ ಭೂಮಿಯ ಒಡೆಯ” ಎಂಬ ನೀತಿಯಿಂದಾಗಿ ಕೂಲಿ ಕಾರ್ಮಿಕನೂ ಭೂಮಿಯ ಒಡೆಯನಾದ. ಸಮಾಜದ ಎಲ್ಲ ಜಾತಿ, ವರ್ಗಗಳ ಶ್ರೇಯೋಭಿವೃದ್ಧಿಯಾಯಿತು. ಅಂತಹ ಅರಸರು ಆಳಿದ ನಾಡನ್ನು ಜಾತಿಯಿಂದ ಒಡೆದವರಾರು? ಇದೇ ದೇವೇಗೌಡರೇ ಅಲ್ಲವೆ?

ಈ ಹಿಂದೆಯೂ ಜಾತಿ ಲೆಕ್ಕಾಚಾರಗಳು ನಡೆಯುತ್ತಿದ್ದವು. ಒಂದಿಷ್ಟು ಜನರೂ ಕೂಡ ತಮ್ಮ ಜಾತಿಯವನು ಎಂಬ ಪ್ರೇಮದಿಂದ ವೋಟು ಹಾಕುತ್ತಿದ್ದರು. ಆದರೆ ಇಡೀ ರಾಜ್ಯವೇ ಜಾತಿಯ ಆಧಾರದ ಮೇಲೆ ಎಂದೂ ಒಡೆದಿರಲಿಲ್ಲ. 1994ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ‘ಇನ್ನು ಮುಂದೆ ತಪ್ಪು ಮಾಡುವುದಿಲ್ಲ, ಕ್ಷಮಿಸಿ ಮತ್ತೊಂದು ಅವಕಾಶ ಕೊಡಿ” ಅಂತ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರು ಒಂದೇ ವೇದಿಕೆ ಮೇಲೆ ನಿಂತು, ಪರಸ್ಪರ ಅಪ್ಪಿ, ಮುತ್ತಿಕ್ಕಿಕೊಂಡು ಬೇಡಿಕೊಂಡಿದ್ದು ನಿನಗೆ ನೆನಪಿದೆಯಲ್ಲವೆ? ಆದರೆ ಆಗಿದ್ದೇನು? ದೇವೇಗೌಡರು ಮುಖ್ಯಮಂತ್ರಿಯಾದರು, ಹೆಗಡೆ ಕೇಂದ್ರ ರಾಜಕೀಯದತ್ತ ಮುಖಮಾಡಿದರು.

1996ರಲ್ಲಿ ಸೃಷ್ಟಿಯಾದ ವಿಚಿತ್ರ ಸನ್ನಿವೇಶವೊಂದರಲ್ಲಿ ಕರ್ನಾಟಕದ ವ್ಯಕ್ತಿಯೊಬ್ಬರು ಪ್ರಧಾನಿಯಾಗುವ ಸುಯೋಗ ಒದಗಿ ಬಂದಾಗ ನ್ಯಾಯಯುತವಾಗಿ ಪ್ರಧಾನಿಯಾಗಬೇಕಿದ್ದು ಹೆಗಡೆ. ಆದರೆ ಆಗಿದ್ದೇ ಬೇರೆ. ಆದರೂ ನಮ್ಮ ಕನ್ನಡಿಗನೊಬ್ಬ ಪ್ರಧಾನಿಯಾದನಲ್ಲಾ ಅಂತ ದೇವೇಗೌಡರ ದುರಾಸೆಯನ್ನೂ ನುಂಗಿಕೊಂಡಿದ್ದಾಯಿತು. ಹಾಗಂತ ಪ್ರಧಾನಿಯಾದ ನಂತರವಾದರೂ ದೇವೇಗೌಡರ ಕುತಂತ್ರವಾಗಲಿ, ಜಿದ್ದಾಜಿದ್ದಿ ರಾಜಕಾರಣವಾಗಲಿ ಅಂತ್ಯವಾಯಿತೇ? ಚುನಾವಣೆಯಲ್ಲಿ ಜತೆಗೂಡಿ ಗೆಲುವಿಗೆ ಕಾರಣರಾಗಿದ್ದ ಹೆಗಡೆಯವರನ್ನು ದೇವೇಗೌಡರು ಪಕ್ಷದಿಂದಲೇ ಹೊರಹಾಕಿದರು. ಸಹಜವಾಗಿಯೇ ಹೆಗಡೆಯವರ ಸಮುದಾಯಕ್ಕೆ ನೋವಾಯಿತು. ಅದರೊಂದಿಗೆ ವಿನಾಕಾರಣ ಜಾತಿ ಜಾತಿಗಳ ನಡುವೆ ದ್ವೇಷ ಆರಂಭವಾಯಿತು.

ಅದರ ಬೆನ್ನಲ್ಲೆ ಲಿಂಗಾಯತರು ಸಿಟ್ಟಿಗೇಳುವ ಸಾಧ್ಯತೆಯೂ ಇತ್ತು. ಆದರೆ ದೇವೇಗೌಡರ ಕುತಂತ್ರಕ್ಕೆ ತಕ್ಕ ಪ್ರತ್ಯುತ್ತರ ನೀಡಿದ ಜೆ.ಎಚ್. ಪಟೇಲ್, ಮುಖ್ಯಮಂತ್ರಿಯಾಗುವುದರೊಂದಿಗೆ ಅಪಾಯ ತಪ್ಪಿತು. 1999ರಲ್ಲಿ ಎಸ್.ಎಂ. ಕೃಷ್ಣ ಅಧಿಕಾರಕ್ಕೆ ಬಂದಾಗಲೂ ಹಾಸನದ ಎಸ್ಪಿ ವರ್ಗಾವಣೆ ಮಾಡಬೇಕು ಅಂತ ಧರಣಿ, ವಿಠಲೇನಹಳ್ಳಿ ಗೋಲಿಬಾರ್ [^] ವಿರುದ್ಧ ಪ್ರತಿಭಟನೆ ಅಂತ ದೇವೇಗೌಡರು ಕ್ಯಾತೆ ತೆಗೆದೂ ಉಪಯೋಗವಾಗಲಿಲ್ಲ. ಈ ನಡುವೆ ಜೆಡಿಎಸ್ ಎಂಬ ಪಕ್ಷ ಕಟ್ಟಿಕೊಂಡು ‘ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ” ಎಂದು ಘೋಷಣೆ ಮಾಡಿದ ದೇವೇಗೌಡರ ಲೆಕ್ಕಾಚಾರ ಸರಿಯಾಗಿಯೇ ಇತ್ತು. 2004ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದರೂ ಅಧಿಕಾರ ಅನುಭವಿಸುವ ಸದವಕಾಶ ಸಿಕ್ಕಿತು.

ಆದರೆ, ಹೆಗಡೆಗೆ ಆದ ಗತಿಯೇ ಸಿದ್ದರಾಮಯ್ಯನವರಿಗಾಯಿತು. ಮುಂದಿನ ಬಲಿಪಶು ಯಾರು ಅಂತ ನಿನಗೆ ಗೊತ್ತೇ ಇದೆ. ಯಡಿಯೂರಪ್ಪನವರಿಗೆ ಮೋಸ ಮಾಡಿದ್ದಲ್ಲದೆ ಅನ್ಯಾಯದ ವಿರುದ್ಧ ಧ್ವನಿಯೆತ್ತಿದ ಹಿರಿಯ ಚೇತನ ಹಾಗೂ ಜಾತಿ ಮೀರಿ ನಾಡಿನ ಪ್ರೀತಿ ಗಳಿಸಿರುವ ಶಿವಕುಮಾರಸ್ವಾಮೀಜಿಯವರ ಬಗ್ಗೆ ಕೀಳಾಗಿ ಮಾತನಾಡಿದ ದೇವೇಗೌಡರ ಸುಪುತ್ರ ಕುಮಾರಸ್ವಾಮಿಯವರು ಒಂದು ದೊಡ್ಡ ಸಮುದಾಯದ ಮನನೋಯಿಸಿದರು. ಅದರ ಪರಿಣಾಮವನ್ನು ಇಂದು ನೋಡುತ್ತಿದ್ದೇವೆ. ದೇವು ಕುಟುಂಬದ ಅಧಿಕಾರದಾಹಕ್ಕೆ ಸಮಾಜದ ಏಕತೆಯೇ ಬಲಿಯಾಗಬೇಕಾಗಿ ಬಂದಿದ್ದು ನಿಜಕ್ಕೂ ದುರದೃಷ್ಟಕರ. ಹೆಗಡೆಗೆ ದ್ರೋಹ ಬಗೆದ ಕಾರಣ ಬ್ರಾಹ್ಮಣರು, ಸಿದ್ದರಾಮಯ್ಯನವರಿಗೆ ಚೂರಿ ಹಾಕಿದ ಕಾರಣ ಕುರುಬರು, ಯಡಿಯೂರಪ್ಪನವರಿಗೆ ಮೋಸ ಮಾಡಿದ ಕಾರಣ ಲಿಂಗಾಯತರು ವಿರುದ್ಧವಾದರು. ದೇವೇಗೌಡರಿಂದಾಗಿ ಒಕ್ಕಲಿಗ ಸಮುದಾಯವೇ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಾಗಿ ಬಂತು.

ಹೀಗೆ ಸಮಾಜವನ್ನು ಒಡೆದ ವ್ಯಕ್ತಿ ಮತ್ತೆ ವೋಟು ಕೇಳಲು ಬಂದಿದ್ದಾರೆ. ಅವರ ಮಾತನ್ನು ಹೇಗೆ ನಂಬುತ್ತೀಯಾ? ಕೊಟ್ಟ ಮಾತು ತಪ್ಪುವುದಿಲ್ಲ ಅಂತ ಸಾರ್ವಜನಿಕವಾಗಿ ಹೇಳುತ್ತಲೇ ಯಡಿಯೂರಪ್ಪನವರಿಗೆ ಮೋಸ ಮಾಡಿದ ಕುಮಾರಸ್ವಾಮಿ ಮತ್ತು ಅವರಪ್ಪ ಈಗ ಆಡುತ್ತಿರುವ ಮಾತುಗಳ ಬಗ್ಗೆ ಹೇಗೆ ವಿಶ್ವಾಸವಿಡುತ್ತೀಯಾ? “ನಮ್ಮನ್ನು ಬಿಟ್ಟು ಯಾರು ಸರಕಾರ ರಚಿಸುತ್ತಾರೋ ನೋಡ್ತೀನಿ” ಅಂತ ದರ್ಪ, ದಾರ್ಷ್ಟ್ಯ, ಉಡಾಫೆಯ ಮಾತನಾಡುತ್ತಿರುವ ವ್ಯಕ್ತಿಯೇ ಅಲ್ಲವೆ ನಮ್ಮ ರಾಜ್ಯವನ್ನು ಜಾತಿಯ ಆಧಾರದ ಮೇಲೆ ಒಡೆದಿದ್ದು?

ಇತ್ತ ದೇವೇಗೌಡರ ಕಾಟ ತಾಳಲಾರದೆ ಮಹಾರಾಷ್ಟ್ರದಲ್ಲಿ ಅಜ್ಞಾತವಾಸ ಅನುಭವಿಸುತ್ತಿದ್ದ ಎಸ್.ಎಂ. ಕೃಷ್ಣ ಈಗ ಮತ್ತೆ ಆಗಮಿಸಿದ್ದಾರೆ. ಆದರೆ 1999ರಿಂದ 2004ರವರೆಗಿನ ಕೃಷ್ಣಭಾರ ಹೇಗೆ ಹಗರಣಗಳ ಪರ್ವವಾಯಿತು ಎಂಬುದು ನಿನಗೆ ತಿಳಿದೇ ಇದೆ. ರಾಷ್ಟ್ರ ಕಂಡ ಅತಿದೊಡ್ಡ ಹಗರಣವಾದ ‘ಛಾಪಾ ಕಾಗ”ದ ಹಗರಣ ಜಿನುಗಿದ್ದೇ ಎಸ್.ಎಂ. ಕೃಷ್ಣ ಅವರ ಮೂಗಿನ ಕೆಳಗೆ. ಹಾಗೆ ಜಿನುಗಿ ಅವರ ಬಾಯಿ ಸೇರಿರುವ ಸಾಧ್ಯತೆಯನ್ನು ಯಾರೂ ತಳ್ಳಿಹಾಕಲು ಸಾಧ್ಯವಿಲ್ಲ. ಇಡೀ ರಾಜ್ಯವೇ ಬರಗಾಲ ಎದುರಿಸುತ್ತಿದ್ದಾಗ ಅರಮನೆ ಮೈದಾನದಲ್ಲಿ ಕೋಟ್ಯಂತರ ರೂ. ಖರ್ಚುಮಾಡಿ ಅದ್ಧೂರಿಯಾಗಿ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿದ್ದ ಎಸ್.ಎಂ. ಕೃಷ್ಣ ಅವರನ್ನು ಬಹುವಾಗಿಯೇ ನೋಡಿದ್ದಾಗಿದೆ. ಹಾಗಿರುವಾಗ ಅದೇ ‘ಅತೃಪ್ತ ಆತ್ಮ” ದೇವೇಗೌಡ, ಅದೇ ‘ಮಾತು ತಪ್ಪಿದ ಮಗ” ಕುಮಾರಸ್ವಾಮಿ, ಅದೇ ಬೆಣ್ಣೆ ಮಾತಿನ ಕೃಷ್ಣನಿಗೆ ಮತ್ತೆ ಮಣೆಹಾಕುತ್ತೀಯಾ?

ಅದೇ ಹಳಸಲು ಮುಖಗಳನ್ನು ಇನ್ನೆಷ್ಟು ದಿನ ನೋಡುತ್ತೀಯಾ? ಅದೇ ಹಳಸಲು ಮುಖಗಳಿಗೆ ವೋಟು ಹಾಕಿ ಹೊಸದೇನನ್ನು ನಿರೀಕ್ಷಿಸುತ್ತೀಯಾ? ಇವೆರಡೂ ಪಕ್ಷಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಹೊರಗಿನ ಕವರ್ ಮಾತ್ರ ಬೇರೆ ಬೇರೆ, ಒಳಗಿನ ಹೂರಣ ಒಂದೇ. ಹಾಗಾಗಿಯೇ ಚುನಾವಣೆಗೂ ಮೊದಲೇ ಕಾಂಗ್ರೆಸ್-ಜೆಡಿಎಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಸಲಿಂಗಕಾಮ ಆರಂಭವಾಗಿದೆ! ನೀನೇ ಯೋಚನೆ ಮಾಡಿ ನೋಡು, ಒಕ್ಕಲಿಗರೇ ತುಂಬಿರುವ ರಾಮನಗರದಲ್ಲಿ ಮಮತಾ ನಿಚ್ಚಾನಿ ಎಂಬ ಆಗಂತುಕ ಮಹಿಳೆಯನ್ನು ನಿಲ್ಲಿಸಿ ಕಾಂಗ್ರೆಸ್ ಯಾರನ್ನು ಮೂರ್ಖರನ್ನಾಗಿಸಲು ಹೊರಟಿದೆ? ಕುಮಾರಸ್ವಾಮಿಯವರ ವಿರುದ್ಧ ಡಮ್ಮಿ ಅಭ್ಯರ್ಥಿ ಹಾಕಿ ಅವರ ಗೆಲುವಿಗೆ ದಾರಿ ಸುಲಭ ಮಾಡಿಕೊಡಲು ಕಾಂಗ್ರೆಸ್ ಹೊರಟಿದ್ದರೆ, ಸಿದ್ದರಾಮಯ್ಯನವರ ವಿರುದ್ಧ ಸುನೀತಾ ವೀರಪ್ಪಗೌಡರಿಗೆ ಟಿಕೆಟ್ ಕೊಡುವ ಬದಲು ಕೃಷ್ಣಸ್ವಾಮಿ ಡಮ್ಮಿಯನ್ನು ಹಾಕಿರುವ ಜೆಡಿಎಸ್, ಕಾಂಗ್ರೆಸ್‌ಗೆ ಸಹಕಾರ ಕೊಡುತ್ತಿದೆ.

ಶಿಕಾರಿಪುರದಲ್ಲಂತೂ ಜೆಡಿಎಸ್ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಿಲ್ಲ. ಲವಲೇಶವೂ ಗೊತ್ತಿಲ್ಲದ ನವಲೇಶ ಎಂಬವರಿಗೆ ಟಿಕೆಟ್ ನೀಡಿ, ಕೊನೆಗೆ ಅವರನ್ನೂ ಕಣದಿಂದ ಹಿಂದಕ್ಕೆ ತೆಗೆದುಕೊಂಡಿರುವ ಕಾಂಗ್ರೆಸ್‌ನ ಉದ್ದೇಶವೂ ಯಡಿಯೂರಪ್ಪನವರನ್ನು ಸೋಲಿಸುವುದೇ ಆಗಿದೆ. ಇವು ಒಂದೆರಡು ಸ್ಯಾಂಪಲ್‌ಗಳಷ್ಟೇ. ಜೆಡಿಎಸ್, ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷದ ನಡುವೆ ರಾಜ್ಯಾದ್ಯಂತ ಏರ್ಪಟ್ಟಿರುವ ಇಂತಹ ಹಲವಾರು ಹೊಂದಾಣಿಕೆಗಳನ್ನು(ಸಲಿಂಗಕಾಮ) ಪಟ್ಟಿ ಮಾಡಬಹುದು. ಒಂದು ವೇಳೆ ನೀನೇನಾದರೂ 2004ರಂತೆಯೇ ಹರಕು ಜನಾದೇಶ ನೀಡಿದರೆ ಮತ್ತದೇ ಕಾಂಗ್ರೆಸ್-ಜೆಡಿಎಸ್ ಮೈತ್ರಿಯನ್ನು ನೋಡಬೇಕಾಗುತ್ತದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿಮಾಡಿಕೊಳ್ಳುವುದನ್ನು ತಪ್ಪಿಸಬೇಕು ಅಂತ ಹೇಳುತ್ತಿಲ್ಲ. ಆದರೆ ಮತ್ತೆ ಮೈತ್ರಿ ಮಾಡಿಕೊಳ್ಳಬೇಕಾಗಿ ಬಂದರೆ ಅತಂತ್ರ ಪರಿಸ್ಥಿತಿ ಸೃಷ್ಟಿಯಾಗುವುದು ಖಚಿತ. ನೀನೇ ಹೇಳು, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಎಲ್ಲೂ ಅಧಿಕಾರಾವಧಿಯನ್ನು ಪೂರ್ಣಗೊಳಿಸಿಲ್ಲದ ದೇವೇಗೌಡರ ಅತೃಪ್ತ ಆತ್ಮ ಸುಮ್ಮನಿರುತ್ತದೆಯೇ?

ಅಷ್ಟಕ್ಕೂ ದೇವೇಗೌಡರಿಗೆ ವೈಯಕ್ತಿಕ ಹಿತಾಸಕ್ತಿಯ ಮುಂದೆ ಎಲ್ಲವೂ ನಗಣ್ಯ. ಸಿದ್ದರಾಮಯ್ಯ, ಯಡಿಯೂರಪ್ಪ [^]ನವರ ವಿಷಯ ಬಿಡಿ, ಮತ್ತೊಬ್ಬ ಒಕ್ಕಲಿಗ ನಾಯಕ ಬೆಳೆಯುವುದನ್ನೂ ಅವರು ಸಹಿಸುವುದಿಲ್ಲ. 2004ರಲ್ಲಿ ಆಗಿದ್ದೂ ಅದೇ. ಒಂದು ವೇಳೆ, ದೇವುಗೆ ನಿಜವಾಗಿಯೂ ಒಕ್ಕಲಿಗರ ಮೇಲೆ ಪ್ರೀತಿ ಇದ್ದಿದ್ದರೆ ಮೈತ್ರಿ ಸರಕಾರ ರಚನೆಯಾದಾಗ ಧರ್ಮಸಿಂಗ್ ಬದಲು ಎಸ್.ಎಂ. ಕೃಷ್ಣ ಅವರೇ ಮುಖ್ಯಮಂತ್ರಿಯಾಗಲು ಬಿಡಬಹುದಿತ್ತಲ್ಲವೆ? ಅಷ್ಟೇಕೆ ಸ್ವಜಾತಿಯ ಡಿ.ಕೆ. ಶಿವಕುಮಾರ್‌ಗೇ ಮಂತ್ರಿಸ್ಥಾನವನ್ನು ತಪ್ಪಿಸುತ್ತಾರೆಂದರೆ ದೇವೇಗೌಡರು ಇನ್ನೆಂತಹ ಸ್ವಾರ್ಥಿ, ಕುಟುಂಬ ವ್ಯಾಮೋಹಿ ಎಂಬುದನ್ನು ಊಹೆ ಮಾಡಿಕೋ. ಈ ಬಾರಿ ಮತ್ತೆ ನೀನು ಸ್ಪಷ್ಟ ಜನಾದೇಶ ನೀಡದೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರ ರಚಿಸಬೇಕಾಗಿ ಬಂತೆಂದರೆ ‘ನನಗೆ ಕೃಷ್ಣ ಬೇಡ” ಎಂದು ದೇವೇಗೌಡರು ಅಡ್ಡಗಾಲು ಹಾಕುವುದು ಖಚಿತ.

ಮಲ್ಲಿಕಾರ್ಜುನ ಖರ್ಗೆಯನ್ನೇ ಮುಖ್ಯಮಂತ್ರಿ ಮಾಡಬೇಕು ಅನ್ನುತ್ತಾರೆ. ಆದರೆ ದಲಿತರ ಮೇಲಿನ ಪ್ರೀತಿಯಿಂದಲ್ಲ. ಅದೂ ಕೂಡ ಒಡೆದು ಆಳುವ ನೀತಿ. ಖರ್ಗೆ ಮುಖ್ಯಮಂತ್ರಿಯಾದ ಕೂಡಲೇ ಒಳಮೀಸಲು ಎಂದು ತಗಾದೆ ತೆಗೆಯುತ್ತಾರೆ. ಎಡ, ಬಲ ಅನ್ನುತ್ತಾ ದಲಿತರನ್ನೇ ಒಡೆಯುತ್ತಾರೆ, ಖರ್ಗೆಯನ್ನೂ ಕೆಳಗಿಳಿಸುತ್ತಾರೆ. ಕಳೆದ ಮೂವತ್ತು ವರ್ಷಗಳಿಂದಲೂ ಒಳ ಮೀಸಲು, ಸಾಮಾಜಿಕ ನ್ಯಾಯ ಅಂತ ದೇವೇಗೌಡರು ಹೇಳುತ್ತಾ ಬಂದಿದ್ದಾರೆ. ಆದರೆ ದೇವೇಗೌಡರ ಪಾರ್ಟಿಯಲ್ಲಿದೆಯೇ ಸಾಮಾಜಿಕ ನ್ಯಾಯ? ಹಿಂದುಳಿದ ಜನಾಂಗವಾದ ನಾಯಕ ಸಮುದಾಯಕ್ಕೆ ಸೇರಿದ ಡಿ.ಟಿ. ಜಯಕುಮಾರ್‌ಗೆ ಟಿಕೆಟ್ ತಪ್ಪಿಸಿದ ದೇವೇಗೌಡರ ಸಾಮಾಜಿಕ ನ್ಯಾಯ ಎಂಥದ್ದು ಎಂಬುದು ನಿನಗೆ ಇನ್ನೂ ಅರಿವಾಗಿಲ್ಲವೆ? ಮತ್ತೆ ತಪ್ಪು ಮಾಡಬೇಡ.

ಜಾತಿ ರಾಜಕಾರಣ ಹೋಗಬೇಕಾದರೆ ಜಿದ್ದಾಜಿದ್ದಿನ ರಾಜಕಾರಣ ಹೋಗಬೇಕು. ಹಾಗಾಗಬೇಕಾದರೆ ದೇವೇಗೌಡರು ತೊಲಗಬೇಕು. ಎಲ್ಲಿಯವರೆಗೂ ಅಭಿವೃದ್ಧಿ ಅನ್ನುವುದು ಚುನಾವಣೆಯ ವಿಷಯವಾಗುವುದಿಲ್ಲವೋ ಅಲ್ಲಿಯವರೆಗೂ ದೇವೇಗೌಡರಂತಹ ಜಾತಿ ಹುಳುಗಳು ಜೀವಂತವಾಗಿರುತ್ತವೆ. ಇದೇನು ಲಿಂಗಾಯತರ ಕರ್ನಾಟಕವೂ ಅಲ್ಲ, ಒಕ್ಕಲಿಗರ ಸಾಮ್ರಾಜ್ಯವೂ ಅಲ್ಲ, ದಲಿತ, ಕುರುಬರಿಗೆ ಸೇರಬೇಕಾದ ಸ್ವತ್ತೂ ಅಲ್ಲ. ಈ ರಾಜ್ಯ ನಮ್ಮೆಲ್ಲರದ್ದು ಹಾಗೂ ನಮಗೆ ಬೇಕಾಗಿರುವುದು ಸಮಗ್ರ ಕರ್ನಾಟಕದ ಅಭಿವೃದ್ಧಿ. ಒಬ್ಬ ಮುಖ್ಯಮಂತ್ರಿಯಾದ ಮಾತ್ರಕ್ಕೆ ಆತ ತನ್ನ ಜಾತಿಯನ್ನು ಮಾತ್ರ ಉದ್ಧಾರ ಮಾಡಲು ಸಾಧ್ಯವೆ?

‘ನಮ್ಮವನು” ಮುಖ್ಯಮಂತ್ರಿ [^]ಯಾಗಬೇಕು ಎನ್ನುವ ಭಾವನೆ ಬಿಟ್ಟು ಕರ್ನಾಟಕಕ್ಕೊಬ್ಬ ಒಳ್ಳೆಯ ಮುಖ್ಯಮಂತ್ರಿ ಬೇಕು ಅನ್ನುವುದಾದರೆ ಯೋಚನೆ ಮಾಡಿ ಮತಹಾಕು. ಆದರೆ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡು. ಒಂದು ವೇಳೆ ನಿನಗೆ ವಿಕೃತ ಖುಷಿ ಬೇಕೆಂದರೆ ಜೆಡಿಎಸ್‌ಗೇ 120 ಸೀಟು ಕೊಟ್ಟುಬಿಡು, ಆದರೆ ಅವರಿಗೆ 20 ಸೀಟು ಕೊಟ್ಟು 80 ಸೀಟು ಪಡೆದವರನ್ನು ದೇವೇಗೌಡರು ರಿಂಗ್‌ಮಾಸ್ಟರ್‌ನಂತೆ ಆಟವಾಡಿಸಲು ಅವಕಾಶ ಮಾಡಿಕೊಡಬೇಡ. ಅವರಿಗೆ 20 ಸೀಟು ಕೊಡುವುದಕ್ಕಿಂತ 120 ಕೊಡುವುದೇ ಮೇಲು. ಅಷ್ಟಕ್ಕೂ 79 ಸೀಟು ಹೊಂದಿದ್ದ ಬಿಜೆಪಿಗೂ ಸರಿಯಾಗಿ ಅಧಿಕಾರ ಸಿಗಲಿಲ್ಲ, 65 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ ಕೂಡ ಸಂಪೂರ್ಣವಾಗಿ ಆಧಿಕಾರ ಅನುಭವಿಸಲಿಲ್ಲ. ಎಲ್ಲರಿಗಿಂತ ಕಡಿಮೆ ಸೀಟು ಪಡೆದಿದ್ದ ಜೆಡಿಎಸ್ ಮಾತ್ರ ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳಿಗೂ ಸೆರಗು ಹಾಸಿ ಸಂಪೂರ್ಣ ಸುಖ ಅನುಭವಿಸಿತು. ಅಂತಹ ಕೊಳಕು ರಾಜಕಾರಣ ಪುನರಾವರ್ತನೆಯಾಗಬೇಕಾ? ಉತ್ತರ ಪ್ರದೇಶ, ಬಿಹಾರದ ರಾಜಕಾರಣವನ್ನು ನಮ್ಮ ರಾಜ್ಯಕ್ಕೂ ತಂದಿರುವ ಜೆಡಿಎಸ್‌ನ ಹೊಲಸುತನವನ್ನು 2008ರಲ್ಲೂ ಸಹಿಸಿಕೊಳ್ಳುತ್ತೀಯಾ? ಇನ್ನಾದರೂ ಹೊಸತನಕ್ಕೆ ಅವಕಾಶ ಮಾಡಿಕೊಡು.

ಬರೀ ಕಾಂಗ್ರೆಸ್ [^] ಮತ್ತು ಜೆಡಿಎಸ್‌ಗಳೇ ಕರ್ನಾಟಕವನ್ನು ಆಳಬೇಕೆ? ಅವೆರಡು ಪಕ್ಷಗಳಿಗೆ ರಾಜ್ಯವನ್ನು ಟೆಂಡರ್ ಕೊಟ್ಟಿದ್ದೇವೆಯೇ? ಅಂದಮಾತ್ರಕ್ಕೆ ಕುಮಾರಸ್ವಾಮಿ [^] ಮತ್ತು ದೇವೇಗೌಡರು ಬಿಜೆಪಿಗೆ ಮೋಸ ಮಾಡಿದರು ಅಂತ ಅನುಕಂಪದಿಂದ ಬಿಜೆಪಿಗೆ ಮತಹಾಕಬೇಡ. ಹೊಸತನಕ್ಕೆ ಮಣೆಹಾಕು. ಹೊಸತನವಿದ್ದಾಗ ಮಾತ್ರ ಒಂದಿಷ್ಟು ಬದಲಾವಣೆ, ಕ್ರಿಯಾಶೀಲತೆಯನ್ನು ಕಾಣಲು ಸಾಧ್ಯ. ಕುಮಾರಸ್ವಾಮಿಯವರ ಮುಖದಲ್ಲೇ ಹೊಸತನ ಕಾಣುತ್ತದೋ, ಹಳೇಮುಖವಾದ ಎಸ್.ಎಂ. ಕೃಷ್ಣ ಅವರಲ್ಲಿಯೇ ಹೊಸತನವನ್ನು ಹುಡುಕುತ್ತೀಯೋ ಅಥವಾ ಬಿಜೆಪಿ, ಬಿಎಸ್‌ಪಿಯಲ್ಲಿ ಹೊಸತನವನ್ನು ಕಂಡುಕೊಳ್ಳುತ್ತೀಯೋ ಅದು ನಿನ್ನ ವಿವೇಚನೆಗೆ ಬಿಟ್ಟಿದ್ದು. ಮತ್ತೆ ಭೇಟಿಯಾಗೋಣ. ಆದರೆ ಮತಹಾಕುವುದನ್ನು ಮರೆಯಬೇಡ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: