ನಂಗೆ ಅವನನ್ನ ಕಂಡ್ರೆ ಆಗಲ್ಲ ಎಂಬ ವಿಲಕ್ಷಣ ಕೆಮ್ಮಿಸ್ಟ್ರಿ! -I hate you, but no reason!

ನಿಮಗೆ ಗೊತ್ತಿರಲಿ : ಅವನನ್ನ ಕಂಡ್ರೆ ನಂಗಾಗಲ್ಲ ಅನ್ನುವುದು ನಮ್ಮ ಹೆಗ್ಗಳಿಕೆಯಲ್ಲ. ಅದರಿಂದ ನಮಗೆ ನಷ್ಟವೇ ಹೊರತು ಲಾಭವಿಲ್ಲ. ಲಾಭನಷ್ಟಗಳನ್ನು ಮೀರಿದ ಸಂಗತಿಯೆಂದರೆ, ಅವರಿವರನ್ನು ಕಂಡರಾಗುವುದಿಲ್ಲ ಅನ್ನುವುದು ನಮ್ಮದೇ ವ್ಯಕ್ತಿತ್ವದ ಕುರೂಪ!

I hate you, but no reason!ಆತ ಅವರು ನಮಗೆ ಏನೂ ಮಾಡಿರುವುದಿಲ್ಲ. ಅವರಿಂದ ಯಾವ ಕೆಡಕೂ ಆಗಿರುವುದಿಲ್ಲ. ಕೆಲವೊಮ್ಮ ಅವರ ಪರಿಚಯ ಕೂಡ ನಮಗಿರುವುದಿಲ್ಲ. ಆದರೂ ಅವರನ್ನು ಕಂಡರೆ ನಮಗೆ ಆಗುತ್ತಿರುವುದಿಲ್ಲ! ಅವನನ್ನ ಕಂಡ್ರಾಗಲ್ಲ ನೋಡಿ ನಂಗೆ ಅನ್ನುತ್ತಿರುತ್ತೇವೆ.

ಅದೇ ಮಾತನ್ನ ಇನ್ಯನಾರೋ ನಮ್ಮ ಬಗ್ಗೆ ಅನ್ನುತ್ತಿರುತ್ತಾರೆ!

ಯಾಕೆ ಹೀಗಾಗುತ್ತದೆ? ನನ್ನ ಪ್ರಕಾರ ಪ್ರೀತಿ ನಿಷ್ಕಾರಣವಾಗಿರ ಬೇಕು. ಆದರೆ ತುಂಬ ಸಲ ಕಾರಣವೇ ಇಲ್ಲದ ತಿರಸ್ಕಾರ, ಇಷ್ಟವಿಲ್ಲದಿರುವಿಕೆ, ರಿಪಲ್ಷನ್ ಇತ್ಯಾದಿಗಳೆಲ್ಲ ಕೆಲವರ ಬಗ್ಗೆ ಬೆಳೆದುಬಿಡುತ್ತವೆ. ಸುಮ್ಮನೆ ಮುಖ ನೋಡಿದರೇನೇ ಅವರೆಡೆಗೆ ಹೇವರಿಕೆ ಬೆಳೆದು ಬಿಡುತ್ತದೆ. ಕೆಲವರ ದನಿಯೇ ಕಿರಿಕಿರಿಯುಂಟು ಮಾಡಿಬಿಡುತ್ತದೆ. ಯಾಕೆ ಹೀಗೆ? ಇದು ಬಾಡಿ ಕೆಮ್ಮಿಸ್ಟ್ರಿಗೆ ಸಂಬಂಧಿಸಿದ್ದಾ? ಸ್ವಭಾವ ವೈರುಧ್ಯದ ಮಾತಾ? ಸೈದ್ಧಾಂತಿಕ ವೈರುಧ್ಯದ ಮಾತಾ? ಸೈದ್ಧಾಂತಿಕ ಏರುಪೇರಾ? ಏನಿದು?

ನಾನು ಬೈ ಅಂಡ್ ಲಾರ್ಜ್ ಮಠಾಧೀಶರನ್ನ, ಮುಲ್ಲಾಗಳನ್ನು, ಪಾದ್ರಿಗಳನ್ನು ತಿರಸ್ಕಾರದಿಂದ ನೋಡುತ್ತೇನೆ. ಆದರೆ ಮದರ್ ಥೆರೇಸಾ ನನಗೆ ಇಷ್ಟ! ಸಿದ್ದೇಶ್ವರ ಸ್ವಾಮಿಗಳಿಷ್ಟ. ತುಮಕೂರಿನ ಸಿದ್ಧಗಂಗೆ ಸ್ವಾಮಿಗಳಿಷ್ಟ. ಕಬೀರ ಇಷ್ಟ. ಇವರಲ್ಲಿ ಕೆಲವರನ್ನು ನಾನು ನೋಡಿಯೇ ಇಲ್ಲ. ಅವರು ನನಗೆ ಇಷ್ಟ ವಾಗುವುದಕ್ಕೆ ಅವರ ವ್ಯಕ್ತಿತ್ವ ಕಾರಣವಿರಬಹುದು. ಬೋಧನೆ , ಸಿದ್ಧಾಂತ, ನಿಲುವುಗಳು ಕಾರಣವಿರಬಹುದು.

ಅಂಥ ಪರಮ ಕುರೂಪಿ ಹೆಣ್ಣು ಮಗಳು ಥೆರೇಸಾ :ಆದರೆ ಆಕೆಯ ಆ ಕುರೂಪ, ಮುಖದ ನೆರಿಗೆಗಳು, ನಗುವ ಕಣ್ಣು, ಕುಬ್ಜ ದೇಹ, ಪೇಲವ ದನಿ -ಅವುಗಳಿಂದಾಗಿ ಆಕೆ ಅಷ್ಟೊಂದು ಅಮ್ಮ ಅನ್ನಿಸಿಕೊಂಡು ಬಿಡುತ್ತಾಳೆ. ಹಾಗೆ ಅನ್ನಿಸುವುದಕ್ಕೆ ನಿಜಕ್ಕೂ ಆಕೆಯ ವ್ಯಕ್ತಿತ್ವ ಇಷ್ಟವಾದದ್ದು ಕಾರಣವಾ? ಅಥವಾ ನನ್ನಲ್ಲಿರುವ ಅಮ್ಮನೆಡೆಗಿನ ಪ್ರೀತಿ, ಮದರ್ ಥೆರೇಸಾಳಂಥವಳನ್ನು ಗೌರವಿಸುವಂತೆ ಮಾಡಿ, ಆಕೆಯನ್ನು ಇಷ್ಟವಾಗಿಸುತ್ತದೆಯಾ? ಇದು ಪ್ರಶ್ನೆ.

ಸಾಮಾನ್ಯವಾಗಿ, ಇಪ್ಪತ್ತರ ಆಸುಪಾಸಿನ ಲಕಲಕ ಹೊಳೆಯುವ ಆರೋಗ್ಯವಂತ ಸ್ಫುರದ್ರೂಪಿ ಹುಡುಗಿಯರು ಎಲ್ಲರಿಗೂ ಇಷ್ಟವಾಗುತ್ತಾರೆ. ಆದರೆ ನನಗೆ ನಲವತ್ತರ ಹೊಸ್ತಿಲಿನಲ್ಲಿರುವ, ಬದುಕಿನ ಏಳುಬೀಳುಗಳನ್ನು ಸಾಕಷ್ಟು ಅನುಭವಿಸಿರುವ, ನೋಡಿದ ಕೂಡಲೇ ಪಾಪದವರು ಅನ್ನುಸುವ, ಬಡ ಬಡ ಬಡ ಮಾತಾಡುವ, ಅತ್ತೆಗೆ ಹೆದರುವ, ಗಂಡನ ಶ್ರೇಯಸ್ಸು ಕೋರುವ, ಮಕ್ಕಳ ಬಗ್ಗೆ ಆತಂಕಗೊಂಡಿರುವ, ಹುಡುಗುತನದ ಆಸೆಗಳನ್ನಿಟ್ಟುಕೊಂಡ ಮಧ್ಯಮ ವರ್ಗದ ಹೆಣ್ಣು ಮಕ್ಕಳು ಇಷ್ಟವಾಗುತ್ತಾರೆ. ಹದಿನೆಂಟರ ಹುಡುಗಿಯರೊಂದಿಗೆ ಹರಟುವುದಕ್ಕಿಂತ ಈ ನಲವತ್ತರ ಗೃಹಿಣಿಯರೊಂದಿಗೆ ಹೆಚ್ಚು ಅಪ್ಯಾಯಮಾನವಾಗಿ ಹರಟುತ್ತೇನೆ. ಸುಲಭವಾಗಿ ಮಿಂಗಲ್ ಆಗುತ್ತೇನೆ. ಗೇಲಿ ಮಾಡಿ, ರೇಗಿಸಿ , ಕಾಲು ಎಳೆದು ಸ್ವಲ್ಪೇ ಹೊತ್ತಿನಲ್ಲಿ ಇವನು ನಮ್ಮ ಅಣ್ಣ ತಮ್ಮನಂಥವನು ಅನ್ನುವಂತಾಗಿ ಬಿಡುತ್ತೇನೆ.

ಯಾಕೆ ಹೀಗೆ?

ನನಗೆ ಬೆನ್ನಲ್ಲಿ ಹುಟ್ಟಿದ ಅಕ್ಕ ತಂಗಿಯರಿಲ್ಲವೆಂಬ ಕಾರಣಕ್ಕೆ ಹೀಗಾಗುತ್ತದಾ?

ಆ ಕೊರತೆಯನ್ನು ಯಾರೋ ಅಪರಿಚಿತ ಹೆಣ್ಣು ಮಕ್ಕಳು ತುಂಬುತ್ತಾರಾ? ಇಪ್ಪತ್ತರ ಆಸುಪಾಸಿನ ಹೆಣ್ಣು ಮಕ್ಕಳು ನನಗೆ ಇದ್ದಾರೆ. ಅಷ್ಟರ ಮಟ್ಟಿಗೆ ನನ್ನ ಕೊರತೆ ನೀಗಿದೆ. ನನಗೆ ಕೊರತೆ ಅನ್ನಿಸುವುದೇನಿದ್ದರೂ ಅಮ್ಮ ಮತ್ತು ಅಕ್ಕ ತಂಗಿಯರು! ಈ ಕಾರಣಕ್ಕಾಗಿ ಮಧ್ಯಮ ವರ್ಗದ ಹೆಣ್ಣು ಮಕ್ಕಳು ನನಗೆ ಇಷ್ಟವಾಗುತ್ತಾರಾ?

ಹೀಗೆ ಯೋಚಿಸುತ್ತಾ ಹೋಗುತ್ತೇನೆ. ನನ್ನನ್ನು ಕೆಲವರು ನಿಷ್ಕಾರಣವಾಗಿ ತಿರಸ್ಕ್ಕರಿಸುತ್ತಾರೆ, ಹೇಟ್ ಮಾಡುತ್ತಾರೆ. ಟೀವಿಯಲ್ಲಿ ಅಚಾನಕ್ಕಾಗಿ ಮುಖ ಕಾಣಿಸಿದರೆ ನೋಡೇ ನಿಮ್ಮ ರವಿ ಬರ್ತಿದಾನೆ ಅಂತ ಕೆಲವರು ಅಂದರೆ ಮತ್ತೆ ಕೆಲವರು ಅವನ್ನೇನು ನೋಡೋದು ಅಂತ ಸಿಡುಕಿ ಪಟ್ಟನೆ ಚಾನೆಲ್ ಬದಲಾಯಿಸುತ್ತಾರೆ. ವಿಚಾರಿಸಿ ನೋಡಿದರೆ ಇಬ್ಬರಿಗೂ ನನ್ನ ಪರಿಚಯವಿರುವುದಿಲ್ಲ. ಹಾಗಾದರೆ ಈ ರಾಗ ದ್ವೇಷಗಳ ಕೆಮ್ಮಿಸ್ರ್ಟಿ ಕೆಲಸ ಮಾಡುತ್ತದಾದರೂ ಹೇಗೆ?

ಇಂಥದ್ದೊಂದು ಕೆಮ್ಮಿಸ್ಟ್ರಿ, ನನ್ನಲ್ಲೂ ಕೆಲಸ ಮಾಡುತ್ತದೆ. ರಾಗ ದ್ವೇಷಗಳು, ಕಂಪಲ್ಷನ್‌ಗಳು, ರಿಪಲ್ಷನ್ನುಗಳು ನನಗೂ ಇವೆ. ಎಲ್ಲವನ್ನೂ ಮೀರಿದ ಸಂತನೇನಲ್ಲ ನಾನು. ಆದರೆ ಒಂದು ಕಡೆ ಎಲ್ಲವನ್ನೂ ಬದಿಗಿಟ್ಟು ಹೀಗೆ ವಿನಾಕಾರಣ ಯಾರನ್ನಾದರೂ ತಿರಸ್ಕರಿಸಲಿಕ್ಕೆ ನನ್ನೊಲಗಿನ ಹೊಟ್ಟೆ ಕಿಚ್ಚು ಕಾರಣವಾ ಅಂತ ಯೋಚಿಸತೊಡಗುತ್ತೇನೆ. ನನ್ನ ಓರಗೆಯವರು ನನಗಿಂತ ದೊಡ್ಡ ಸಾಧನೆ ಮಾಡಿದಾಗ ಸಣ್ಣದೊಂದು ಮುಳ್ಳು ಪುಟಿದು ನಿಲ್ಲುತ್ತದಾ? ಆ ಕಾರಣಕ್ಕೆ ನಾನು ಅವರನ್ನು ತಿರಸ್ಕರಿಸುತ್ತೇನಾ? ಅದೇ ಕಾರಣಕ್ಕಾಗಿ ಕೆಲವರು ನನ್ನನ್ನು ಕಂಡರೆ ತಿರಸ್ಕಾರ ಭಾವನೆಗೊಳಗಾಗುತ್ತಾರಾ? ಕೇಳಿ ಕೊಳ್ಳುತ್ತೇನೆ.

ಕೆಲವರು ವ್ಯಕ್ತಿತ್ವದಲ್ಲೇ ದೊಡ್ಡ ಸಂಖ್ಯೆಯ ಮಿತ್ರರನ್ನು ಆಕರ್ಷಿಸುವ ಗುಣುವಿರುತ್ತದೆ. ಮತ್ತೆ ಕೆಲ ವ್ಯಕ್ತಿತ್ವದಲ್ಲೇ ಅಷ್ಟೇ ಸಮಾನ ಸಂಖ್ಯೆಯ ಶತ್ರುಗಳನ್ನು ಸೃಷ್ಟಿಸಿಕೊಳ್ಳುವ ತಾಕತ್ತು ಇರುತ್ತದೆ. ಸಾರ್ವಜನಿಕ ಜೀವನದಲ್ಲಿ ರಾಗ ದ್ವೇಷಗಳ ಕೆಮಿಸ್ಟ್ರಿ ಕೆಲಸ ಮಾಡತೊಡಗಿದರೆ ಭರಿಸುವುದು ಕಷ್ಟ . ಕಾರಣವೇ ಇಲ್ಲದೆ ಹೆಂಡತಿಯ ತಮ್ಮನನ್ನು ದ್ವೇಷಿಸುವುದು, ಓರಗಿತ್ತಿಯ ಮುಖ ಕಂಡರಾಗದಿರುವುದು, ಮಕ್ಕಳ ಪೈಕಿಯೇ ಒಬ್ಬರೆಡೆಗೆ ತಿರಸ್ಕಾರ …. ಇವು ತೀವ್ರವಾಗಿ ಬಿಟ್ಟರೆ ಬದುಕು ದುರ್ಭರವಾಗುತ್ತದೆ.

ಅಂಥ ಸಂದರ್ಭದಲ್ಲಿ ನಾವೇ ಕೆಲವು ಪ್ರಶ್ನೆ ಕೇಳಿಕೊಳ್ಳಬೇಕು. ಇವರನ್ನು ಯಾಕೆ ದ್ವೇಷಿಸುತ್ತೇನೆ? ಇವರ ಯಾವ ಗುಣ ನನಗಿಷ್ಟವಾಗಿಲ್ಲ? ಅಥವ ನನ್ನದು ವಿನಾಕಾರಣದ ನಿರಾಕರಣೆಯಾ? ಅಕಸ್ಮಾತು ನನ್ನ ದ್ವೇಷಕ್ಕೆ ಒಂದು ಕಾರಣ ಅಂತ ಇದ್ದದ್ದೇ ಆದರೆ ಅದನ್ನು ಇಗ್ನೋರ್ ಮಾಡಿ ಅವರೊಂದಿಗೆ ಹೊಂದಿಕೊಂಡು ಹೋಗಲು ಸಾಧ್ಯವಿಲ್ಲವಾ? ಎದುರಿನ ವ್ಯಕ್ತಿಯನ್ನು ನಾವೆಷ್ಟೇ ತಿರಸ್ಕಾರದಿಂದ ಕಂಡರೂ ಅಂಥವರಲ್ಲೂ ನಾವು ಇಷ್ಟಪಡಬಹುದಾದ ಒಂದೆರಡು ಪಾಸಿಟೀವ್ ಗುಣಗಳು ಇದ್ದೇ ಇರುತ್ತವಲ್ಲ?

ಆ ಪಾಸಿಟೀವ್ ಗುಣಗಳಿಗಾಗಿ ನಾವು ಅವರನ್ನು ಇಷ್ಟಪಡಬಹುದಲ್ಲವೆ? ಹೀಗೆಲ್ಲ ಅಂದುಕೊಂಡಾಗ ನಮ್ಮ ತಿರಸ್ಕಾರ, ನೆಗೆಟಿವ್ ಕೆಮಿಸ್ಟ್ರಿಗಳು ತೆಳ್ಳಗಾಗಿ ಎಂಥವರನ್ನೂ ಸಹಿಸಿಕೊಳ್ಳಬಲ್ಲ attitude ಬೆಳೆಯುತ್ತದೆ. ನಿಮಗೆ ಗೊತ್ತಿರಲಿ : ಅವನನ್ನ ಕಂಡ್ರೆ ನಂಗಾಗಲ್ಲ ಅನ್ನುವುದು ನಮ್ಮ ಹೆಗ್ಗಳಿಕೆಯಲ್ಲ. ಅದರಿಂದ ನಮಗೆ ನಷ್ಟವೇ ಹೊರತು ಲಾಭವಿಲ್ಲ. ಲಾಭನಷ್ಟಗಳನ್ನು ಮೀರಿದ ಸಂಗತಿಯೆಂದರೆ, ಅವರಿವರನ್ನು ಕಂಡರಾಗುವುದಿಲ್ಲ ಅನ್ನುವುದು ನಮ್ಮದೇ ವ್ಯಕ್ತಿತ್ವದ ಕುರೂಪ!

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: