ನನ್ನ ಮಗನಿಗೆ ದರ್ಶನ ಕೊಟ್ಟರು ಶ್ರೀ ಗುರುರಾಯರು! – The Miracles of Sri Raghavendra Swami(Part-2)

ರಾಮದೇವರ ವಿಗ್ರಹ ಹೇಗಿತ್ತು?’ ಎಂದು ನಾವು ಕೇಳಿದರೆ, ‘ಮೂರ್ತಿ ಇರಲಿಲ್ಲ, ದೇವರೇ ನಿಂತಿದ್ದರು’ ಎಂದಿದ್ದ ಬಾಲಕ. ರಾಯರ ವೃಂದಾವನದ ಎದುರು ಹುಡುಗ ಕುಳಿತಾಗ ಅವನು ಧ್ಯಾನಾಸಕ್ತನಾಗಿದ್ದ. ಅವನಿಗೆ ಕೇಳಿದಾಗ, ರಾಯರು ವೃಂದಾವನದಲ್ಲಿ ಕುಳಿತು ನನ್ನೊಡನೆ ಮಾತಾಡಿದರುಎಂದಿದ್ದ.

The Miracles of Sri Raghavendra Swami1970 ಬಹಳ ಮಹತ್ವದ ವರುಷ. ಜಗತ್ತಿನ ದೃಷ್ಟಿಯಿಂದ ಅದು ಶ್ರೀ ರಾಘವೇಂದ್ರ ಸ್ವಾಮಿಗಳು ವೃಂದಾವನ ಪ್ರವೇಶ ಮಾಡಿದ 300ನೆಯ ವರ್ಷವಾಗಿದ್ದರೆ, ನನ್ನ ದೃಷ್ಟಿಯಲ್ಲಿ, ನಮ್ಮ ಜೀವನದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳು ಬಂದು ಅನುಗ್ರಹಿಸಿ ಪವಾಡ ತೋರಿಸಿದ ಪವಿತ್ರ ವರುಷವಾಗಿದೆ. ಅದರ ಬಗ್ಗೆ ನಾನು ಇಂದಿನ ವರೆಗೆ ಎಲ್ಲಿಯೂ ಬರೆದಿಲ್ಲ. ನನಗೆನಿಸುತ್ತದೆ, ಆಗ ಮಂತ್ರಾಲಯಕ್ಕೆ ನಮ್ಮನ್ನು ಕರೆಸಿಕೊಂಡು ನನ್ನ ಮಗನಿಗೆ ಒದಗಿಬಂದ ಕುತ್ತಿನಿಂದ ಶ್ರೀಗುರುರಾಯರು ಪಾರುಮಾಡಿದರು ಎಂದು. ಮೂವತ್ತಾರು ವರ್ಷಗಳ ಹಿಂದೆ ನಡೆದ ಘಟನೆಯನ್ನು ಮತ್ತೆ ನೆನೆದು, ಪ್ರಥಮ ಬಾರಿ ಅದನ್ನು ದಾಖಲಿಸುತ್ತಿದ್ದೇನೆ.

1971 ಅಗಸ್ಟ್ 8, ರವಿವಾರವಾಗಿತ್ತು. ಅಂದು ಮಧ್ಯ ಆರಾಧನೆಯ ದಿನ. ಈ ಐತಿಹಾಸಿಕ ಮಹತ್ವದ ದಿನ ಮಂತ್ರಾಲಯಕ್ಕೆ ಹೋಗಬೇಕೆಂದು ನಿಶ್ಚಯಿಸಿದೆ. ಅದೇ ಸಮಯ ಮುಂಬಯಿಯಲ್ಲಿಯ ಜೋಗೇಶ್ವರಿಯಲ್ಲಿ ಹೊಸತಾಗಿ ಸ್ಥಾಪಿತವಾದ ಶ್ರೀರಾಘವೇಂದ್ರಸ್ವಾಮಿಗಳ ಮಠದಲ್ಲಿ ವಿಶೇಷ ಉತ್ಸವವಿತ್ತು. ಮಂತ್ರಾಲಯಕ್ಕೆ ಹೋಗಲು ಸೆಳೆತ ಹೆಚ್ಚಾಯಿತು, ರಿಜರ್ವೇಶನ್ ದೊರೆಯಲಿಲ್ಲ. ಹಾಗೆಯೇ ಹೊರಡಲು ಸಿದ್ಧನಾದೆ. ಜೊತೆಗೆ ಮಿತ್ರರಾದ ಎಲ್.ಬಿ.ಗಣಾಚಾರಿ ಹಾಗೂ ಎಸ್.ಎಚ್.ಕಾಳೆ ಬರಲು ಸಿದ್ಧರಾದರು.

ನಾನು ಹೊರಟು ನಿಂತಾಗ ನನ್ನ ಆರು ವರ್ಷದ ಮಗ ರಾಘವೇಂದ್ರ ತಾನೂ ಬರುವುದಾಗಿ ದುಂಬಾಲುಬಿದ್ದ. ಅವನನ್ನೂ ಕರೆದುಕೊಂಡು ಹೊರಟೆ. ದಾದರ್‌ನಿಂದ 2.20ಕ್ಕೆ ಬಿಡುವ ಮದ್ರಾಸ್ ಎಕ್ಸಪ್ರೆಸ್ ಗಾಡಿ ಹಿಡಿದೆವು. ಹಮಾಲರ ಸಹಕಾರದಿಂದ ಕೂಡಲು ಸೀಟು ದೊರೆತವು. ರವಿವಾರ(8.8.1971) ಮಧ್ಯ ಆರಾಧನೆಯ ದಿನ ನಸುಕಿನಲ್ಲಿ ಮಂತ್ರಾಲಯ ರೋಡ್ ಸ್ಟೇಶನ್ ತಲುಪಿದೆವು.

ಭಕ್ತರ ವಿಪರೀತ ಗದ್ದಲವಿತ್ತು. ಎರಡು ಗಂಟೆ ಕಾಯ್ದರೂ ಬಸ್ ಸಿಗುವ ಭರವಸೆ ಇರಲಿಲ್ಲ. ನಮ್ಮ ಒದ್ದಾಟ ನೋಡಿದ ಒಬ್ಬ ವ್ಯಕ್ತಿ ನಮ್ಮೆಡೆ ಬಂದ. “ನೀವು ಎಷ್ಟು ಜನ?” ಎಂತ ಕೇಳಿದ. ನಾವು ಮೂವರು ಜೊತೆಗೆ ಒಂದು ಮಗು ಎಂದಾಗ, “ನಮ್ಮ ಟ್ಯಾಕ್ಸಿಯಲ್ಲಿ ಅಷ್ಟು ಜಾಗ ಇದೆ, ಬನ್ನಿರಿ.” ಎಂದ. ಎಷ್ಟು ಹಣ ಕೊಡಬೇಕು? ಎಂದು ಕೇಳಿದರೆ, “ಏನೂ ಕೊಡಬೇಕಾಗಿಲ್ಲ. ನಿಮ್ಮನ್ನು ಕರೆದುಕೊಂಡು ಹೋಗಲು ನನಗೆ ಪ್ರೇರಣೆಯಾಗಿದೆ.” ಎಂದ. ನಾವೇ ಪುಣ್ಯವಂತರು ಎಂದುಕೊಂಡು ವಾಹನದಲ್ಲಿ ಮಂತ್ರಾಲಯ ತಲುಪಿದೆವು.

ಆ ಕಾಲದಲ್ಲಿ ಹೆಚ್ಚಿನ ಛತ್ರಗಳಾಗಲು ವಸತಿಗೃಹಗಳಾಗಲಿ ಇರಲಿಲ್ಲ. ಹುಬ್ಬಳ್ಳಿ ಛತ್ರಕ್ಕೆ ಹೋದೆವು. ಅಲ್ಲಿಯ ಮೆನೆಜರ್ ಪರಿಚಯದವರಿದ್ದರು. ನಮಗೆ ಒಂದು ರೂಮು ಕೊಟ್ಟರು. ತುಂಗಾ ನದಿ ತುಂಬಿ ಹರಿಯುತ್ತಿತ್ತು. ಸ್ನಾನ, ಸಂಧ್ಯಾವಂದನೆ ಮುಗಿಸಿ ರಾಯರ ದರ್ಶನಕ್ಕೆ ಹೊರಟೆವು. ನನ್ನ ಮಗ ನದಿಯ ಸ್ನಾನ ಬಹಳ ಮೆಚ್ಚಿದ. ತಾನೂ ಗೋಪೀಚಂದನ ಧರಿಸಿದ, ಪಂಚೆ ಉಟ್ಟುಕೊಂಡ. ಬಾಲ ವಟುವಿನಂತೆ ಕಂಡ. ಸುಮಾರಿ 25 ಸಾವಿರ ಜನರಿದ್ದರು. ಆ ಕಾಲಕ್ಕೆ ಅದು ವಿಕ್ರಮ ಸಾಧಿಸಿದ ಜನಜಾತ್ರೆಯಾಗಿತ್ತು. ಬಹಳ ದೊಡ್ಡ ಕ್ಯೂ ಇತ್ತು.

ಮೊದಲನೆಯ ಪಂಕ್ತಿಯ ಭೋಜನಕ್ಕೆ 6 ಗಂಟೆಯಾಯಿತು. ಗಣಾಚಾರಿ ಮತ್ತು ಕಾಳೆ ಎದುರು ಸಾಲಿನಲ್ಲಿ ಆಸೀನರಾಗಿದ್ದರು. ಮೊದಲು ಅವರ ಮಧ್ಯದಲ್ಲಿ ಕುಳಿತಿದ್ದ ನನ್ನ ಮಗ ಎದ್ದು ನನ್ನ ಬದಿಯಲ್ಲಿ ಬಂದು ಕುಳಿತ. ಊಟ ಮುಗಿಯುವ ಹೊತ್ತಿಗೆ ಒಂದು ಅನಾಹುತ ನಡೆಯಿತು. ಎರಡನೆಯ ಪಂಕ್ತಿಗಾಗಿ ಅನ್ನ ಹಾಗೂ ಸಾರಿನ ಸ್ಟಾಕು ಬದಿಯಲ್ಲಿಡುತ್ತಿರುವಾಗ ನಾಲ್ಕು ಬಕೆಟ್‌ನಷ್ಟು ಕುದಿಯುವ ಸಾರು ತುಂಬಿರುವ ಕೊಳಗವನ್ನು ತರುತ್ತಿದ್ದ ಇಬ್ಬರು ಜಾರಿದ ಕಾರಣ ಸಾರು ಚೆಲ್ಲಿತ್ತು. ಊಟಕ್ಕೆ ಕುಳಿತ ಹತ್ತು ಜನರಿಗೆ ಗಾಯವಾಯ್ತು. ಅದರಲ್ಲು ಎಲ್ಲಕ್ಕಿಂತ ಹೆಚ್ಚು ಮೈಸುಟ್ಟುಕೊಂಡವ ಆರು ವರ್ಷದ ಎಳೆಯ ಬಾಲಕ, ಅವನು ನನ್ನ ಮಗನೇ ಆಗಿದ್ದ. ಕೂಡಲೇ ದವಾಖಾನೆಗೆ ಧಾವಿಸಿದೆವು.

ಕೆಲವು ಮಠದ ಸೇವಕರು ಹುಣಿಸೆಹಣ್ಣಿನ ರಾಡಿಯನ್ನು ತಂದು ನನ್ನ ಮಗನ ಮೈಮೇಲೆ ಸುರಿದರು. ನಾವು ಡಾಕ್ಟರರ ಕಡೆಗೆ ತಲುಪುವಾಗ ಮಗನ ಮೈತುಂಬ ಬದನೆ ಗಾತ್ರದ ಗುಳ್ಳೆಗಳಾದವು. ಮಗುವಿನ ಆಕ್ರಂದನ ಹೇಳತೀರದು. ಅಲ್ಲಿಯ ಡಾಕ್ಟರ್ ಮಗುವನ್ನು ಮುಟ್ಟಲಿಲ್ಲ. “ಇದು ಎಕ್ಸಿಡೆಂಟು. ಪೋಲೀಸ್ ಕೇಸು, ಅಲ್ಲದೆ ನಮ್ಮ ಬಳಿ ಇದನ್ನು ಉಪಚರಿಸಲು ಔಷಧಗಳೇ ಇಲ್ಲ. ನೀವು ಕೂಡಲೆ ಮಗುವನ್ನು ಆದೋನಿಯ(ಆದವಾನಿಯ) ಸಿವಿಲ್ ಆಸ್ಪತ್ರೆಯಲ್ಲಿ ಸೇರಿಸಿರಿ.” ಎಂದರು.

ನನಗೆ ಆಕಾಶ ಕಳಚಿ ತಲೆಯಮೇಲೆ ಬಿದ್ದಂತಾಯಿತು. ಪರಸ್ಥಳ, ಹೆಚ್ಚು ಹಣ ತಂದಿಲ್ಲ, ಅಲ್ಲಿಯ ಟ್ಯಾಕ್ಸಿಯವರು ಸಿಕ್ಕಾಪಟ್ಟೆ ದುಡ್ಡು ಕೇಳತೊಡಗಿದರು. ಅಷ್ಟರಲ್ಲಿ ಸ್ವಾಮಿಗಳಿಗೆ ಈ ವಿಷಯ ತಿಳಿಯಿತು. ಅವರು ಪ್ರೋಕ್ಷಣೆಗೆ ತೀರ್ಥ ಹಾಗೂ ಮಂತ್ರಾಕ್ಷತೆ ಕಳಿಸಿಕೊಟ್ಟರು. ಕಿಂಕರ್ತವ್ಯ ಮೂಢನಾಗಿ ನಾನು ನಿಂತಾಗ, ಕಾಳೆ ರೂಮಿಗೆ ಹೋಗಿ ನಮ್ಮ ಬ್ಯಾಗು-ಬಟ್ಟೆಗಗಳನ್ನೆಲ್ಲ ತಂದರು.

ಕೃಷ್ಣಮೂರ್ತಿ ಎಂಬ ಒಬ್ಬ ಬೆಂಗಳೂರ ವ್ಯಾಪಾರಿ ನಮ್ಮೆಡೆ ಬಂದ. ನಮ್ಮ ಪರಿಸ್ಥಿತಿ ತಿಳಿದು ತಾನು ತಂದ ಹೊಸ ಎಂಬೆಸಡರ್ ಕಾರನ್ನು ತಂದು, ಡ್ರೈವರನಿಗೆ ಪೆಟ್ರೋಲ್ ತುಂಬಲು ಹಣ ಕೊಟ್ಟು, “ಈ ಗಾಡಿಯಲ್ಲಿ ನಿಮ್ಮ ಮಗುವನ್ನು ಅದೋನಿಗೆ ಕರೆದೊಯ್ಯಿರಿ. ಏನೂ ಹಣ ಕೊಡಬೇಕಾಗಿಲ್ಲ. ನಿಮಗೆ ಔಷಧಿಕೊಳ್ಳಲು ಹಣ ಬೇಕಿದ್ದರೆ ಡ್ರೈವರ ಬಳಿ ಪಡೆಯಿರಿ. ಬೇಗ ಹೊರಡಿ. ರಾಯರು ಕಾಪಾಡುತ್ತಾರೆ.” ಅಂದ.

ನಾವು ಅದೋನಿ ತಲುಪಿದಾಗ ಎಂಟು ಗಂಟೆ. ಸಿವಿಲ್ ಆಸ್ಪತ್ರೆ ಮುಚ್ಚಿತ್ತು. ಅಲ್ಲಿಯ ಡಾಕ್ಟರ ಮನೆಗೆ ಹೋಗಿ ಎಮರ್‌ಜನ್ಸಿ ಇದೆ ಅಂದೆವು. ಅವರು ಬಂದು, “ಇದು ಸೀರಿಯಸ್ ಬರ್ನ್ ಇಂಜರಿ ಇದೆ. ಇದು ಪೋಲೀಸು ಕೇಸು.” ಅಂದರು. “ಸ್ವಾಮಿ ನಾವು ರಾಯರ ಭಕ್ತರು. ಮುಂಬೈಯಿಂದ ಬಂದವರು. ದಯಮಾಡಿ ಬೇಗ ಚಿಕಿತ್ಸೆ ಮಾಡಿ. ಕಾಯದೆ ಕಾನೂನು ಅನ್ನುತ್ತ ಕುಳಿತುಕೊಳ್ಳಬೇಡಿ.” ಎಂದೆ.

“ಇಲ್ಲಿಯ ಚೀಫ್ ಸರ್ಜನ ಡಾ.ರಾಮದಾಸ್ ಊರಲ್ಲಿಲ್ಲ. ನಾಳೆ ಮುಂಜಾನೆ ಅವರಿಗೆ ತೋರಿಸಿರಿ. ನಾನು ಪ್ರಿವೆಂಟಿವ್ ಔಷಧಿ ಕೊಡುವೆ. ನೀವು ಪೇಟೆಯಿಂದ ಔಷಧಿ ಕೊಂಡು ತರಬೇಕು.” ಎಂದು ಹೇಳಿ ಡಾಕ್ಟರ್ ದೊಡ್ಡ ಪಟ್ಟಿ ಬರೆದುಕೊಟ್ಟ.

“8.30ಕ್ಕೆ ಫಾರ್ಮಸಿ ಬಂದಾಗುತ್ತವೆ, ಬೇಗ ಹೋರಡಿ.” ಎಂದಾಗ 8.25ಆಗಿತ್ತು. ಅಲ್ಲೇ ಒಂದು ಬೆಂಚಿನ ಮೇಲೆ ಮಗುವನ್ನು ಮಲಗಿಸಿ, ಕಾಳೆಯವರಿಗೆ ಅಲ್ಲಿರಲು ಹೇಳಿ ಪೇಟೆಗೆ ಹೊರಟೆ. ಸುದೈವದಿಂದ ಕಾರ್ ಡ್ರೈವರ್ ಇನ್ನು ಅಲ್ಲೇ ಇದ್ದ. ಅವನೂ ಊರಿಗೆ ಹೊಸಬ, ನಾವಂತೂ ಹೊಸಬರೆ. ಎಲ್ಲ ಅಂಗಡಿಯ ಬಾಗಿಲು ಹಾಕಿದ್ದವು. ಯಾರೂ ಬಾಗಿಲು ತೆರೆಯಲಿಲ್ಲ. ಆದರೆ ಒಂದು ಅಂಗಡಿಯವ ನಮ್ಮನ್ನು ಹಿಂದಿನ ಬಾಗಿಲಿನಿಂದ ಒಳಕ್ಕೆ ಕರೆದುಕೊಂಡು ಹೋಗಿ ಔಷಧಿಕೊಟ್ಟ. ಮರಳಿ ಆಸ್ಪತ್ರೆಗೆ ಬಂದಾಗ ರಾತ್ರಿ 9.30ಆಗಿತ್ತು.

ನಾನು ಡಾಕ್ಟರರನ್ನು ಕಂಡೆ. ಅವರು ಪೆನ್‌ಸಿಲಿನ್ ಇಂಜೆಕ್ಟ ಮಾಡಲು ಮುಂದೆ ಬಂದರು. ನಾನು ರೀಡರ್ಸ್ ಡೈಜೆಸ್ಟ್‌ನಲ್ಲಿ ಒಂದು ಲೇಖನ ಓದಿದ್ದೆ. ಕೆಲ ಸಲ ಇದು (ಪೆನ್‌ಸಿಲಿನ್)‘ಫೇಟಲ್ ಪರಿಣಾಮ ಬೀರುತ್ತದೆ’ ಎಂದು ಬರೆದಿತ್ತು. ಈ ಮಾತು ತಿಳಿಸಿದಾಗ ಡಾಕ್ಟರರು, “ಹಾಗಾದರೆ, ಆ ರಿಸ್ಕ್ ಬೇಡ. ಬರಿ ನೋವುನಿವಾರಕ ಔಷಧಿ ಕೊಡುವೆ, ನಿದ್ದೆಯ ಗುಳಿಗೆ ಕೊಡುವೆ. ನಾಳೆ ಸರ್ಜನರೇ ಬಂದು ನೋಡಲಿ.” ಎಂದು ಹೇಳಿ, ಒಂದು ಬೆಡ್ ಅಲಾಟ್ ಮಾಡಿ ತೆರಳಿದರು.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: