ನಮ್ಮ ಸಂಸಾರ ಅತೃಪ್ತರ ಸಾಗರ, ಅಧಿಕಾರವೆಂಬ ದೈವವೇ ನಮಗೆ ಆಧಾರ!

“ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಗಳ ಬಂಡವಾಳಶಾಹಿ ಆರ್ಥಿಕ ನೀತಿಯ ವಿರುದ್ಧವಾಗಿ, ಸಾಮಾಜ್ರಶಾಹಿ ಧೋರಣೆ ಹಾಗೂ ಕೋಮುವಾದಿ ಮತ್ತು ಫ್ಯಾಸಿಸ್ಟ್ ಶಕ್ತಿಗಳ ಬೆಳವಣಿಗೆ ಇವುಗಳ ವಿರುದ್ಧವಾಗಿ
ಮತ್ತು
ರೈತರು, ಬಡವರು, ಶೋಷಿತರು, ಕಾರ್ಮಿಕರು, ಹಿಂದುಳಿದ ವರ್ಗದವರು, ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಜನತಂತ್ರಪ್ರೇಮಿಗಳು, ಪ್ರಗತಿಪರರು ಮತ್ತು ಯುವಜನತೆ ಇವರುಗಳ ಪರವಾಗಿ ರಾಷ್ಟ್ರ ರಾಜಕಾರಣದಲ್ಲಿ ತೃತೀಯ ರಂಗಕ್ಕೆ ಚಾಲನೆ”.

ಮೊನ್ನೆ ಬುಧವಾರ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟ ವಾದ ಈ ಮೇಲಿನ ಜಾಹೀರಾತನ್ನು ನೋಡಿದಾಗ ಕಥೆಯೊಂದು ನೆನಪಾಯಿತು.

ಒಮ್ಮೆ ಕಾಶಿಯ ಮಣಿಕರ್ಣಿಕ ಘಟ್ಟದಲ್ಲಿ ಮದುಕನೊಬ್ಬ “ಡುಕೃಞಕರಣೆ… ಡುಕೃಞಕರಣೆ… ಡುಕೃಞಕರಣೆ…” ಎಂದು ವ್ಯಾಕರಣದ ಬಾಲ ಪಾಠಗಳನ್ನು ಕಂಠಪಾಠ ಮಾಡುತ್ತಾ ಕುಳಿತಿದ್ದನು. ಆದರೆ ಆ ವಯಸ್ಸಿಗೆ ಬೇಕಾಗಿರುವ ಮನಶಾಂತಿಯನ್ನು ಹುಡುಕಿಕೊಳ್ಳುವುದನ್ನೋ ಅಥವಾ ಸಮಾಜ ಸೇವೆಯ ಉಪಕಾರ ವನ್ನೋ ಮಾಡದೆ ತನ್ನ ವಯಸ್ಸಿಗೆ ಅಪ್ರಸ್ತುತವಾಗಿದ್ದ ಶುಷ್ಕ ವ್ಯಾಕರಣದ ಗೋಜಿನಲ್ಲಿ ಗಿಣಿಪಾಠ ಮಾಡುತ್ತಿರುವುದನ್ನು ಕಂಡ, ಶಂಕರಾಚಾರ್ಯರು, ‘ಸಂಪ್ರಾಪ್ತೇ ಸನ್ನಿಹಿತೇ ಕಾಲೇ ನ ಹಿ ನ ಹಿ  ರಕ್ಷತಿ ಡುಕೃಞಕರಣೆ’ ಎನ್ನುತ್ತಾರೆ. ಅಂದರೆ ಯಾವ ವಯಸ್ಸಿಗೆ ಯಾವುದನ್ನು ಮಾಡಬೇಕು ಅದನ್ನೇ ಮಾಡಬೇಕು. ಈ ವಯಸ್ಸಿಗೆ ಆತ್ಮಶಾಂತಿಯನ್ನು ಹುಡುಕಬೇಕೇ ಹೊರತು ಬರೀ ಭಾಷಾ ಪಾಂಡಿತ್ಯ ಸಂಪಾದನೆ ವ್ಯರ್ಥ. ಅರ್ಥವಾಗದ ಸೂತ್ರಗಳ ಬಾಯಿಪಾಠ ಮತ್ತೂ ಹಾಸ್ಯಾಸ್ಪದ. ಸಾವು ಹತ್ತಿರ ಬಂದಾಗ ಬಾಯಿಪಾಠ ಮಾಡಿದ ಸೂತ್ರಗಳು ಉಪಯೋಗ ಬರುವುದಿಲ್ಲ ಎನ್ನುತ್ತಾರೆ.

ಎಡಪಂಥೀಯವಾದಕ್ಕೆ ಸಾವು ಸನ್ನಿಹಿತವಾಗಿ ಎಷ್ಟೋ ದಶಕಗಳೇ ಆಗಿವೆ. ಆದರೂ ೨೧ನೇ ಶತಮಾನದಲ್ಲಿ ಭಾರತವನ್ನಾಳುವ ಕನಸು ಕಾಣುತ್ತಿರುವ ಎಡಪಂಥೀಯರು ಹಾಗೂ ಅವರ ಹೊಸ ಸಂಗಾತಿ ಗಳು ಮಾತ್ರ ‘ಡುಕೃಙಕರಣೆ’ಯಂತೆ ೧೯ನೇ ಶತಮಾನದ ಕೊನೆ ಹಾಗೂ ೨೦ನೇ ಶತಮಾನದ ಆದಿಯ “ಮಾರ್ಕ್ಸು, ಲೆನಿನ್ನು, ಸಾಮ್ರಾಜ್ಯಶಾಹಿ, ಬಂಡವಾಳಶಾಹಿ’ ಎಂಬ ಕುರುಡು ಪಾಠದ ಸೂತ್ರಗಳನ್ನು ಇಂದಿಗೂ ಪಠಿಸುತ್ತಿದ್ದಾರೆ. ಗುರುವಾರ ಬೆಂಗಳೂರು ಬಳಿಯ ದಾಬಸ್‌ಪೇಟೆಯಲ್ಲಿ ನಡೆದ ತೃತೀಯ ರಂಗದ ಸಾರ್ವಜನಿಕ ಸಭೆಯಲ್ಲಿ ಮೊಳಗಿದ್ದೂ ಇಂತಹ ಮಾಮೂಲಿ ಮಂತ್ರಘೋಷವೇ. ಇವತ್ತಿಗೂ Sloganeeringನಿಂದ ಅವರಿಗೆ ಹೊರಬರಲಾಗಿಲ್ಲ, ಬವಣೆಯೇ ಇವರ ಘೋಷಣೆ. ಅದರಿಂದಾಚೆಗಿನ ಪರಿಹಾರವನ್ನು ಕಂಡುಕೊಳ್ಳುವ ದೂರದೃಷ್ಟಿಯಾಗಲಿ, ಸಾಮರ್ಥ್ಯವಾಗಲಿ ಇವರಲ್ಲಿಲ್ಲ. ಇನ್ನು ಬಹಳ ನಗು ತರುವ ವಿಚಾರ ವೆಂದರೆ, ಆ ಜಾಹೀರಾತಿಗೆ ಕೊಟ್ಟಿದ್ದ ಶೀರ್ಷಿಕೆ.

“ಅದೂ ಇದೂ ಸಾಕಿನ್ನು: ಮೂರನೆಯ ಶಕ್ತಿ ಬೇಕಿನ್ನು!”

ಇವರ ಮಾತಿನಂತೆ ತೃತೀಯ ರಂಗವೇ ಪರಿಹಾರವೆನ್ನುವು ದಾದರೆ ಶೀರ್ಷಿಕೆಗೆ “ಆಶ್ಚರ್ಯಕರ”(!) ಚಿಹ್ನೆಯನ್ನು ಹಾಕುವ ಅಗತ್ಯವೇನಿತ್ತು?! ಬಹುಶಃ ನಾವೆಲ್ಲ ಏಕೆ ಒಂದೆಡೆ ಸೇರಿದ್ದೇವೆ ಎಂಬುದನ್ನು ಯೋಚಿಸಿದರೆ ಅವರಿಗೇ ಆಶ್ಚರ್ಯ ವಾಗಬಹುದೇನೋ? ಅಷ್ಟೇ ಅಲ್ಲ, ಪ್ರಕಾಶ್ ಕಾರಟ್, ಎ.ಬಿ. ಬಧನ್, ಚಂದ್ರಬಾಬು ನಾಯ್ಡು, ಎಚ್.ಡಿ. ದೇವೇಗೌಡ, ಮಾಯಾವತಿಯವರ ಪ್ರತಿನಿಧಿಯಾಗಿ ಬಂದ ಅವರ ಬಂಟ ಸತೀಶ್‌ಚಂದ್ರ ಮಿಶ್ರಾ, ಜಯಲಲಿತಾ ಪರವಾಗಿ ಬಂದ ಮೈತ್ರೇಯನ್, ಹರಿಯಾಣದ ಕುಲದೀಪ್ ಬಿಷ್ಣೋಯ್, ಟಿಆರ್‌ಎಸ್ ಮುಖ್ಯಸ್ಥ ಚಂದ್ರಶೇಖರ ರಾವ್ ಪುತ್ರ… ಇವರನ್ನೆಲ್ಲಾ ಒಂದೇ ವೇದಿಕೆಯ ಮೇಲೆ ನೋಡಿದರೆ ಯಾರಿಗೆ ತಾನೇ ಆಶ್ಚರ್ಯವಾಗುವುದಿಲ್ಲ? ಇವರು ಯಾವ ಸಾಧನೆಯಾಗಿ ತೃತೀಯ ರಂಗ ಕಟ್ಟಲು ಹೊರಟಿದ್ದಾರೆ? ಈ ಒಬ್ಬೊಬ್ಬರ ಹೆಸರು ಕೇಳಿದರೆ ಯಾವ ಸಾಧನೆ ನೆನಪಾಗುತ್ತದೆ ಹೇಳಿ? ಅಲ್ಲಿ ಇಲ್ಲಿ ಸಂಸಾರ ಮಾಡಿ, ಫೇಲಾದವರೇ ಮತ್ತೆ ಕೈ ಕೈ ಹಿಡಿದುಕೊಂಡು ನವ ದಾಂಪತ್ಯದ ಮಾತನಾಡುತ್ತಿದ್ದಾರೆ ಅಷ್ಟೇ. ಈ ಮಾಜಿ ವಿಚ್ಛೇದಿತ ಪತಿ, ಪತ್ನಿಯರ ಮಿಲನದಿಂದ ಯಾವ ಹೊಸತನವನ್ನು ನಿರೀಕ್ಷಿಸಲು ಸಾಧ್ಯ? ಇನ್ನು ಕಮ್ಯುನಿಸ್ಟರಿಗಂತೂ ದಾಂಪತ್ಯದ ಸುಖ ಬೇಕು, ಜವಾಬ್ದಾರಿ ಬೇಡ.

ಪ್ರಸ್ತುತ ಸುದ್ದಿ ಮಾಡುತ್ತಿರುವ ತೃತೀಯ ರಂಗವನ್ನು ಗೇಲಿ ಮಾಡಿ ಮರೆಯುವ ವಿಚಾರ ಇದಲ್ಲ.

ಈ ಬಾರಿ ದೇಶವೇನಾದರೂ ತೃತೀಯ ರಂಗದ ಕೈಗೆ ಜಾರಿದರೆ ಪರಿಸ್ಥಿತಿ ಏನಾಗಬಹುದೆಂಬುದನ್ನು ಯೋಚಿಸಿ ನೋಡಿ? ಇಡೀ ಜಗತ್ತೇ ‘ಆರ್ಥಿಕ ಹಿಂಜರಿತ’ವೆಂಬ ದೊಡ್ಡ ಕಂಟಕವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಸಮಸ್ಯೆಗಳಿಗೆ ‘ಪ್ರಾಕ್ಟಿಕಲ್ ಸೊಲೂಷನ್’ ಕಂಡುಹುಡುಕುವವರು ಬೇಕೋ, ಎಲ್ಲದಕ್ಕೂ ‘ಐಡಿಯಾಲಜಿಕಲ್ ಸೊಲೂಷನ್’ ಹುಡುಕುವ ಈ ಎಡಬಿಡಂಗಿಗಳ ಮೊರೆಹೋಗುತ್ತೀರೋ? ಅಷ್ಟಕ್ಕೂ ತೃತೀಯ ರಂಗಕ್ಕೆ ಜೋತು ಬೀಳಲು (a+b)2=a2+b2+2ab  ಎಂಬ ಸಿದ್ಧ ಸೂತ್ರ ಗಣಿತ ಹಾಗೂ ಕೆಲ ಸಂದರ್ಭಗಳಲ್ಲಿ ಮಾತ್ರ ವರ್ಕ್ ಆಗುತ್ತದೆಯೇ ಹೊರತು ಎಲ್ಲ ಕಾಲ, ಸಂದರ್ಭಕ್ಕೂ ಹೊಂದುವಂಥದ್ದಲ್ಲ. ಹಾಗಿರುವಾಗ, ಹಾಲಿ ಸಮಸ್ಯೆಗಳಿಗೆ ನಾಯ್ಡು, ಗೌಡ, ಕಾರಟ್‌ಗಳ ಕ್ಯಾಪಿಟಲಿಸ್ಟ್, ಫ್ಯಾಸಿಸ್ಟ್, ಕಮ್ಯುನಲ್ ಎನ್ನುವ “ಸಿದ್ಧಾಂತ ಆಧಾರಿತ”(Ideology Based) ಸಿದ್ಧ ಸೂತ್ರ, ಮಂತ್ರಗಳು ಪರಿಹಾರವಾದಾವೆ? ಈ ಹಿನ್ನೆಲೆಯಲ್ಲಿ ನಾವೆಲ್ಲರೂ ದೇಶದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟು ಕೊಂಡು ಚಿಂತನೆ ಮಾಡಬೇಕಾದ ಕಾಲ ಬಂದಿದೆ. ನಮ್ಮ ಮುಂದೆ ಮೂರು ಆಯ್ಕೆಗಳಿವೆ.

ಯುಪಿಎ, ಎನ್‌ಡಿಎ, ತೃತೀಯ ರಂಗ.

ಒಂದೆಡೆ ತೃತೀಯ ರಂಗದವರು ಈ ಬಾರಿ ದೇಶವನ್ನಾಳುವವರು ನಾವೇ ಎಂದು ಬೀಗುತ್ತಿದ್ದಾರೆ. ಇನ್ನೊಂದೆಡೆ ಎನ್‌ಡಿಎ, ಯುಪಿಎ ಎರಡನ್ನೂ ನೋಡಿದ್ದಾಗಿದೆ, ಇವರನ್ನೂ ಒಮ್ಮೆ ಟೆಸ್ಟ್ ಮಾಡೋಣ ಎಂಬ ನಿರ್ಧಾರಕ್ಕೆ ನೀವು ಬರುವ ಮುನ್ನ ಹಳೆಯ ಘಟನೆಗಳು ಹಾಗೂ ಮುಂದೆ ಎದುರಾಗಲಿರುವ ಅಪಾಯಗಳ ಬಗ್ಗೆ ಒಂದಿಷ್ಟು ಯೋಚನೆ ಮಾಡಿ.

೧೯೪೭ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯವೇನೋ ಬಂತು. ಆದರೆ ಗೋಧಿ ಮತ್ತು ಬ್ರೆಡ್ಡನ್ನೂ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ  ಇತ್ತು. ಒಂಬೈನೂರು ವರ್ಷ ಮುಸ್ಲಿಂ ಆಡಳಿತಗಾರರ ನಿಯಂತ್ರಣದಲ್ಲಿದ್ದೆವು, ಸುಮಾರು ಇನ್ನೂರು ವರ್ಷ ಬ್ರಿಟಿಷರ ಆಳ್ವಿಕೆಯಲ್ಲಿದ್ದೆವು. ಹಾಗಾಗಿ ನಮಗೆ ಆದೇಶ ಪಾಲಿಸಿದ ಆನುಭವವಿತ್ತೇ ಹೊರತು, ಆಡಳಿತ ನಡೆಸಿದ ಅನುಭವಿರಲಿಲ್ಲ. ಅದರ ಜತೆಗೆ ಕಿತ್ತುತಿನ್ನುವ ಆರ್ಥಿಕ ಸಂಕಷ್ಟ. ಅಂತಹ ಸಂದರ್ಭದಲ್ಲಿ ಸ್ವಾಮಿನಾಥನ್, ಚಿಂತಾಮಣಿ ದೇಶಮುಖ್, ವಿ.ಕೆ. ಮೆನನ್ , ಬಾಲಸುಬ್ರಹ್ಮಣ್ಯಂ, ಮಹಾಲನೋಬಿಸ್ ಮುಂತಾದ “Non-profit Thinkers” ನಮ್ಮ ದೇಶದ ಅರ್ಥವ್ಯವಸ್ಥೆಯನ್ನು ಸರಿಯಾದ ದಿಕ್ಕಿನೆಡೆಗೆ ಕೊಂಡೊಯ್ದರು. ೧೯೪೭ರ ನಂತರ ಈ ದೇಶ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು ೧೯೮೯ರಲ್ಲಿ. ಆಗಲೂ ಯುನೈಟೆಡ್ ಫ್ರಂಟ್ ಎಂಬ ತೃತೀಯ ರಂಗವೇ ಅಧಿಕಾರದಲ್ಲಿತ್ತು. ಒಂದು ಕಡೆ ಚಿನ್ನವನ್ನು ಅಡವಿಟ್ಟು ಬಂದರು, ಇನ್ನೊಂದು ಕಡೆ ದೇಶ ಆರ್ಥಿಕವಾಗಿ ಎಂತಹ ಪರಿಸ್ಥಿತಿಗೆ ತಲುಪಿತೆಂದರೆ ಜನ ಪಡಿತರ ಚೀಟಿಯನ್ನು ನಂಬಿ ಕುಳಿತುಕೊಳ್ಳಬೇಕಾಯಿತು. ರೇಶನ್ ಕಾರ್ಡ್ ಮೂಲಕ ಅಕ್ಕಿ, ಬಟ್ಟೆ, ಸೀಮೇಎಣ್ಣೆ ವಿತರಿಸಬೇಕಾಯಿತು. ಹಣ ಹಾಗೂ ಸಾಲಕ್ಕಾಗಿ ಸಾರ್ವಜನಿಕ ಬ್ಯಾಂಕ್‌ಗಳ ದುಂಬಾಲು ಬೀಳಬೇಕಾ ಯಿತು. ೧೯೯೬ರಲ್ಲಿ ಮತ್ತೆ ತೃತೀಯ ರಂಗ ರಚನೆಯಾಗಿ ದೇವೇಗೌಡರು ಪ್ರಧಾನಿಯಾದಾಗಲೂ, ಅವರ ನಂತರ ಐ.ಕೆ. ಗುಜ್ರಾಲ್ ಪ್ರಧಾನಿ ಸ್ಥಾನಕ್ಕೇರಿದಾಗಲೂ ಮತ್ತದೇ ಪರಿಸ್ಥಿತಿ ಸೃಷ್ಟಿಯಾಗುವಂತಾಗಿತ್ತು.

ಒಂದು ವೇಳೆ ತೃತೀಯ ರಂಗಕ್ಕೇನಾದರೂ ಅಧಿಕಾರ ದಕ್ಕಿದರೆ ಮತ್ತೆ ಅಂತಹದ್ದೇ ಪರಿಸ್ಥಿತಿ ಸೃಷ್ಟಿಯಾದರೂ ಆಶ್ಚರ್ಯಪಡಬೇಡಿ. ಈ ಬಾರಿ ತೃತೀಯ ರಂಗದ ಮಾತ ನಾಡುತ್ತಿರುವವರಂತೂ ಈ ದೇಶ ಕಂಡ ಅತ್ಯಂತ ಹೊಣೆಗೇಡಿ ರಾಜಕಾರಣಿಗಳು. ಇವರೆಲ್ಲರೂ ಕಾಂಗ್ರೆಸ್, ಬಿಜೆಪಿ ಜತೆ ಸಂಸಾರ ನಡೆಸಿ ಹೊರಬಂದಿ ರುವ ಅವಕಾಶವಾದಿಗಳೇ ಆಗಿದ್ದಾರೆ. ಇವರಲ್ಲಿ ತತ್ವ ಸಿದ್ಧಾಂತ ನಿಷ್ಠೆಯಾಗಲಿ, ಜನಪರ ಕಾಳಜಿಯಾಗಲಿ ಇಲ್ಲ ಎಂಬುದೂ ಕಾಲಾಂತರದಲ್ಲಿ ಸಾಬೀತಾಗಿದೆ. ಅಷ್ಟಕ್ಕೂ ಈ ಜಯಲಲಿತಾ, ಗೌಡ, ಕಾರಟ್‌ಗೆ ಗೊತ್ತಿರುವುದಾದರೂ ಏನು? ಜಗತ್ತಿನ ಸಮಸ್ಯೆಗಳಿಗೆಲ್ಲ ಅಮೆರಿಕ ಕಾರಣ, ಭಾರತ ಅಮೆರಿಕದ ಜತೆ ಸೇರಿದ್ದೇ ನಮ್ಮೆಲ್ಲರ ಸಂಕಷ್ಟಗಳಿಗೆ ಕಾರಣ ಎನ್ನುವ ಕಾರಟ್ ಅವರಂತಹವರ ಕೈಗೆ ಈ ಸಂದರ್ಭದಲ್ಲಿ ಅಧಿಕಾರ ಸೇರಬೇಕೇ ಯೋಚಿಸಿ ನೋಡಿ?

ಇವತ್ತು ಬರಾಕ್ ಒಬಾಮ ಅವರಂತಹ ನಾಯಕರೇ ಅರ್ಥವ್ಯವಸ್ಥೆಯನ್ನು ಸರಿಪಡಿಸಲು ಒಂದು ಅವಧಿಯೂ (ನಾಲ್ಕು ವರ್ಷ) ಸಾಲದೇ ಹೋಗಬಹುದು ಎನ್ನುತ್ತಿದ್ದಾರೆ. ಇತ್ತ ನಮ್ಮ ಆರ್ಥಿಕ ಅಭಿವೃದ್ಧಿ ದರವೂ(ಜಿಡಿಪಿ) ಶೇ.೮ರಿಂದ ಶೇ.೬ಕ್ಕೂ ಕಡಿಮೆಗೆ ಕುಸಿದಿರುವ ಈ ಸಂದರ್ಭದಲ್ಲಿ ತೃತೀಯ ರಂಗಕ್ಕೇ ನಾದರೂ ಅಧಿಕಾರ ಜಾರಿದರೆ ನಾವು ಮತ್ತೊಂದು ‘ಆರ್ಥಿಕ ಹಿಂಜರಿತ’ಕ್ಕೆ ಆಹ್ವಾನ ನೀಡಿದಂತೆಯೇ ಸರಿ. ಒಂದು ವೇಳೆ ನಾವು ಎಚ್ಚರ ತಪ್ಪಿದರೆ ಇಂದಿರಾಗಾಂಧಿಯವರ ಕಾಲದಲ್ಲಾದಂತೆ ‘ನೆಗೆಟಿವ್ ಡೆವೆಲಪ್‌ಮೆಂಟ್’ಗೂ ಹೋಗಿ ಬಿಡಬಹುದು. ಹಾಗಾಗಿ ಪ್ರಸ್ತುತ ಸಂದರ್ಭದಲ್ಲಿ ನಮ್ಮ ಮುಂದಿರುವುದು ಎರಡೇ ಆಯ್ಕೆಗಳು-ಯುಪಿಎ ಅಥವಾ ಎನ್‌ಡಿಎ.

ಅದಕ್ಕೂ ಕಾರಣವಿದೆ.

ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಅಧಿಕಾರಕ್ಕೇರ ಬಹುದು ಎಂಬುದು ನಿಜವಾದರೂ, ಗೊಡ್ಡು ಹಸುಗಳಿಂದ ಕೂಡಿರುವ ತೃತೀಯ ರಂಗದಂತಹ ಮತ್ತೊಂದು ಹಳಸಲು ಪ್ರಯೋಗ ನಡೆಸಲು ಕಾಲ ಸೂಕ್ತವಾಗಿಲ್ಲ. ನಮ್ಮ ಅರ್ಥವ್ಯವಸ್ಥೆ ಸಂಕಷ್ಟದಲ್ಲಿರುವುದರಿಂದ ಸೈದ್ಧಾಂತಿಕ ಮಾರ್ಗಗಳಿಗಿಂತ ಇನೊ ವೇಟಿವ್ ಮತ್ತು ಪ್ರಾಕಿಕ್ಟಲ್ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಅವಶ್ಯಕತೆ ಇದ್ದು, ಅದಕ್ಕೆ ದೂರದೃಷ್ಟಿಯ ಅಗತ್ಯವಿದೆ. ಸರಕಾರ ನಡೆಸಿ ಅನುಭವ ಇರುವುದು ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡು ಪಕ್ಷಗಳಿಗೆ ಮಾತ್ರ. ಕಾಂಗ್ರೆಸ್‌ಗೆ ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತಂದ ಅನುಭವವೂ ಇದೆ, ಉದಾರೀಕರಣ ತರುವಾಯ (Post-liberalisation) ಸವಾಲುಗಳನ್ನು ನಿಭಾಯಿಸಿಯೂ ಗೊತ್ತು. ಇತ್ತ ಉದಾರೀಕರಣವನ್ನು ಇನ್ನೂ ವಿಸ್ತರಿಸಿದ ಹಾಗೂ ಉದಾರೀಕರಣವನ್ನು ಉಪಯೋಗಿಸಿಕೊಂಡು ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಅನುಭವ ಬಿಜೆಪಿ ನೇತೃತ್ವದ ಎನ್‌ಡಿಎಗಿದೆ. ಅಂದರೆ ಉದಾರೀಕರಣವನ್ನು ಜಾರಿಗೆ ತಂದಿದ್ದು ಕಾಂಗ್ರೆಸ್ಸಾದರೂ ಅದರಿಂದ ಬರೀ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗದೆ ಸಾಮಾನ್ಯ ಜನರಿಗೂ ಆರ್ಥಿಕ ಉದಾರೀಕರಣದ ಫಲವನ್ನು ತಲುಪಿಸುವ ಕೆಲಸ ಮಾಡಿದ್ದು ಎನ್‌ಡಿಎ. ಅದನ್ನು ಇನ್ನೂ ಸರಳವಾಗಿ ಹೇಳಬೇಕೆಂದರೆ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರ ಅಧಿಕಾರದಲ್ಲಿದ್ದಾಗ ಕಿಸೆಯಲ್ಲಿ ೩ ಸಾವಿರ ರೂ. ಹಾಗೂ ಅಡ್ರೆಸ್ ಪ್ರೂಫ್ ಇಟ್ಟುಕೊಂಡು ಹೋದರೆ ಎಲ್‌ಪಿಜಿ ಸಿಲಿಂಡರ್ ಮತ್ತು ಸ್ಟವ್‌ನೊಂದಿಗೆ ಮನೆಗೆ ಹಿಂದಿರುಗಬಹುದಿತ್ತು. ಅರ್ಜಿ ಹಾಕಿಕೊಂಡು ಭಕಪಕ್ಷಿಗಳಂತೆ ಸಿಲಿಂಡರ್‌ಗಾಗಿ ಕಾಯುವ ಪರಿಸ್ಥಿತಿಯನ್ನೇ ವಾಜಪೇಯಿ ಬದಲಾಯಿಸಿದರು. ಸಾಮಾನ್ಯ ಜನರಿಗೂ ಸುಲಭ, ಸರಳ ಹಾಗೂ ಸಿದ್ಧವಾಗಿ ಎಲ್‌ಪಿಜಿ ಸಂಪರ್ಕ ಸಿಗುವಂತೆ ಮಾಡಿದ್ದರು. ಇನ್ನು ಇಂಧನ ವಿಚಾರವನ್ನು ತೆಗೆದುಕೊಳ್ಳಿ. ನಾವು ಬಳಸುವ ಪೆಟ್ರೋಲ್, ಡೀಸೆಲ್, ಸೀಮೇಎಣ್ಣೆ ಮುಂತಾದ ತೈಲ ಹಾಗೂ ಅವುಗಳ ಬೆಲೆ ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿವೆ. ಒಂದು ವೇಳೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ತೈಲದ ಬೆಲೆ ಜಾಸ್ತಿಯಾದರೆ ಸರಕಾರ ತಡ ಮಾಡದೆ ಬೆಲೆ ಹೆಚ್ಚಳ ಮಾಡಿಬಿಡುತ್ತದೆ. ಆದರೆ ಬೆಲೆಯಲ್ಲಿ ಇಳಿತವಾದರೂ ಹೆಚ್ಚಳವಾಗಿದ್ದಾಗ ಯಾವ ದರದಲ್ಲಿ ನೀಡುತ್ತಿದ್ದರೋ ಅದನ್ನು ಕಡಿಮೆ ಮಾಡುವುದಿಲ್ಲ. ಇತ್ತೀಚೆಗೆ ಯುಪಿಎ ಸರಕಾರ ಮಾಡಿದ್ದೂ ಇದೇ ಕೆಲಸವನ್ನು. ಆದರೆ ಹೊಸದಾದ ಇಂಧನ ನೀತಿಯನ್ನೂ ಜಾರಿಗೆ ತಂದ ವಾಜಪೇಯಿ, ಪ್ರತಿ ೧೫ ದಿನಗಳಿಗೊಮ್ಮೆ ತೈಲ ಬೆಲೆಯನ್ನು ಪರಿಷ್ಕರಣೆ ಮಾಡಲು ಮುಂದಾಗಿದ್ದರು. ಬೆಲೆ ಹೆಚ್ಚಾದರೆ ಅದನ್ನು ಗ್ರಾಹಕರು ನೀಡಬೇಕು, ಕಡಿಮೆಯಾದರೆ ಮರು ಕ್ಷಣದಲ್ಲೇ ಲಾಭ ಗ್ರಾಹಕರಿಗೆ ಸಿಗುತ್ತಿತ್ತು. ಅಲ್ಲದೆ ಟೆಲಿಫೋನ್, ಸೆಲ್‌ಫೋನ್ ವಿಷಯದಲ್ಲೂ ಎನ್‌ಡಿಎ ಪ್ರಯೋಗ ಮಾಡಿತು. ಬಿಎಸ್‌ಎನ್‌ಎಲ್‌ಗೆ ಜನ ಜೋತುಬೀಳುವುದು ಬೇಡ ಎಂದು ಖಾಸಗಿ ಉದ್ಯಮಿಗಳೂ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಡಲು ಅವಕಾಶ ಕಲ್ಪಿಸಿತು. ಹಾಗೆ ಟೆಲಿಕಾಂ ಕ್ಷೇತ್ರವನ್ನು ತೆರೆದ ಪರಿಣಾಮವಾಗಿಯೇ ಭಾರತದಲ್ಲಿ ಸೆಲ್‌ಫೋನ್ ಕ್ರಾಂತಿಯಾಗಿದ್ದು. ಒಳಬರುವ ಕರೆಗೂ ದಂಡ ತೆರುವಂತಹ ಕಾಲ ಹೋಗಿ ಮೊಬೈಲ್ ಅತ್ಯಂತ ಸುಲಭ ಹಾಗೂ ಅಗ್ಗದ ಸಂಪರ್ಕವಾಗಿ ಮಾರ್ಪಟ್ಟಿತ್ತು. ಹೀಗೆ ಎನ್‌ಡಿಎ ಮಾಡಿದ ಪ್ರಯೋಗಗಳಿಂದ ಸಾಮಾನ್ಯ ಜನರಿಗೂ ಉದಾರೀಕರಣದ ಫಲ ದೊರೆಯುವಂತಾಯಿತು.

ಅಷ್ಟೇ ಅಲ್ಲ, ಎನ್‌ಡಿಎ ಸರಕಾರ ಮಾಡಿದ ಮತ್ತೊಂದು ಗಮನಾರ್ಹ ಕೆಲಸವೆಂದರೆ ‘ಪ್ರಧಾನ್ ಮಂತ್ರಿ ಗ್ರಾಮೀಣ ಸಡಕ್ ಯೋಚನೆ’. ಅಂದರೆ ಹಿಂದೆಲ್ಲ ನಿಮ್ಮೂರಿನ ಒಂದು ರಸ್ತೆ ಹಾಳಾಯಿತೆಂದರೆ ಗ್ರಾಮ ಪಂಚಾಯಿತಿ ಆ ರಸ್ತೆ ರಿಪೇರಿ ಮಾಡಬೇಕಿತ್ತು. ಗ್ರಾಮ ಪಂಚಾಯಿತಿಗೆ ನಗರ, ಅದಕ್ಕೆ ಜಿಲ್ಲಾ ಪಂಚಾಯಿತಿ ಹಣ ಬಿಡುಗಡೆ ಮಾಡಬೇಕಿತ್ತು. ಎಲ್ಲ ದುಡ್ಡೂ ರಾಜ್ಯ ಸರಕಾರದಿಂದಲೇ ಬರಬೇಕಿತ್ತು. ಜತೆಗೆ ರಿಪೇರಿ ಕೆಲಸವನ್ನು ಯಾರು ಮಾಡಬೇಕು ಎಂಬುದೂ ಒಂದು ಸಮಸ್ಯೆಯಾಗುತ್ತಿತ್ತು. ಆದರೆ ‘ಪ್ರಧಾನ ಮಂತ್ರಿ ಗ್ರಾಮೀಣ ಸಡಕ್’ ಯೋಜನೆಯನ್ನು ಜಾರಿಗೆ ತಂದ ವಾಜಪೇಯಿ, ನಿಮ್ಮೂರಿನ ರಸ್ತೆ ರಿಪೇರಿ ಹಾಗೂ ನಿರ್ಮಾಣಕ್ಕೆ ಕೇಂದ್ರ ಸರಕಾರದಿಂದ ನೇರವಾಗಿ ಹಣ ಪಡೆದುಕೊಳ್ಳುವಂತಹ ವ್ಯವಸ್ಥೆ ಮಾಡಿದರು. ಇಡೀ ದೇಶಾದ್ಯಂತ ‘ಕನ್‌ಸ್ಟ್ರಕ್ಷನ್ ಆಕ್ಟಿವಿಟಿ’ ಚುರುಕುಗೊಂಡಿತು. ಅಂದರೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯನ್ನೇ ಸರಳಗೊಳಿಸಿದ ಕಾರಣ ವಿಳಂಬಗಳು ಕಡಿಮೆಯಾದವು. ಎಲ್ಲಿ ಸಮಸ್ಯೆ ಇದೆಯೋ ಅದನ್ನು ಯಾರಾದರೂ ಒಬ್ಬರು ಮುಂದಾಗಿ ಪರಿಹರಿಸೋಣ ಎನ್ನುವ ಮನಸ್ಥಿತಿ ಸೃಷ್ಟಿಯಾಯಿತು.

ನಮ್ಮ ಸೇನೆಗೆ ಬೇಕಾದ ಯುದ್ಧ ಸಾಮಗ್ರಿಗಳನ್ನು ಖರೀದಿ ಮಾಡುವ (ಡಿಫೆನ್ಸ್ ಪ್ರೊಕ್ಯೂರ್‌ಮೆಂಟ್) ಪ್ರಕ್ರಿಯೆಯನ್ನೂ ಸರಳ ಗೊಳಿಸಿದರು. ರಷ್ಯಾವೊಂದನ್ನೇ ನಂಬಿ ಕುಳಿತು ಕೊಳ್ಳುವ ಬದಲು ಇಸ್ರೇಲ್, ಫ್ರಾನ್ಸ್, ಬ್ರಿಟನ್‌ಗಳತ್ತಲೂ ಗಮನಹರಿಸಲಾಯಿತು. ಜತೆಗೆ ದೇಶ ಸೇವೆ ಮಾಡುವ ಆಸಕ್ತಿ ಹೊಂದಿರುವ ಡಾಕ್ಟರ್, ಎಂಜಿನಿಯರ್‌ಗಳೂ ಕೂಡ ಸೇನೆ ಸೇರಲು ಅವಕಾಶ ಮಾಡಿ ಕೊಡುವ ಸಲುವಾಗಿ ೫ ವರ್ಷದ ‘ಶಾರ್ಟ್ ಸರ್ವೀಸ್ ಕಮೀಶನ್’ ಪ್ರಾರಂಭಿಸಿದರು.

ಆರ್ಥಿಕ ಉದಾರೀಕರಣ, ಖಾಸಗೀಕರಣ ಎಂದ ಕೂಡಲೇ ಬರೀ ವಿದೇಶಿ ಬಂಡವಾಳದ ಆಗಮನ ಹಾಗೂ ಸಂಪನ್ಮೂಲದ ನಿರ್ಗಮನ ಎಂದು ಭಾವಿಸಬೇಡಿ.

ಈ ಮೇಲಿನ ಉಪಯೋಗಗಳೂ ಕಾಂಗ್ರೆಸ್ ಆರಂಭಿಸಿದ ಉದಾರೀಕರಣ ಹಾಗೂ ಎನ್‌ಡಿಎ ಮಾಡಿದ ಪ್ರಯೋಗಗಳ ಫಲಗಳೇ. ಇಂತಹ ನೀತಿಗಳಿಂದಾಗಿಯೇ ನಮ್ಮ ಖಾಸಗೀ ಕ್ಷೇತ್ರ ಪ್ರಾಮುಖ್ಯತೆಗೆ ಬಂದಿದ್ದು, ಪ್ರತಿಭಾನ್ವಿತರು ಸರಕಾರಿ ಉದ್ಯೋಗವನ್ನೇ ನಂಬಿ ಕುಳಿತುಕೊಳ್ಳದೆ ಹೊಸ ಆಶ್ರಯ, ಅವಕಾಶ ಕಂಡುಕೊಳ್ಳಲಾಗಿದ್ದು. ಖಂಡಿತ ಉದಾರೀಕರಣ ನೀತಿಗಳಿಂದ ಅನಾನುಕೂಲಗಳೂ ಆಗಿವೆ. ಆದರೆ ಉಪಯೋಗ ಗಳು ಅನಾನುಕೂಲಗಳಿಗಿಂತ ಹೆಚ್ಚಿವೆ. ಹಾಗಿದ್ದರೂ ಇವುಗಳನ್ನು ‘ಕ್ಯಾಪಿಟಲಿಸ್ಟ್’ ನೀತಿಗಳು ಎಂದು ದೂರುತ್ತಾರಲ್ಲಾ ಈ ತೃತೀಯ ರಂಗದವರು ಅಂತಹವರ ಕೈಗೆ ದೇಶವನ್ನು ಕೊಡುತ್ತೀರಾ? ಅಷ್ಟಕ್ಕೂ ಇವರ ಸಾಧನೆಯಾದರೂ ಏನು? ಪಶ್ಚಿಮ ಬಂಗಾಳದ ಹೆಗ್ಗಣಗಳಾದ ಕಮ್ಯುನಿಸ್ಟರು ಇಡೀ ರಾಜ್ಯವನ್ನು ಕೊಳೆಗೇರಿ ಮಾಡಿದ್ದೇ ಅವರ ದೊಡ್ಡ ಸಾಧನೆ. ಇನ್ನು ವಿ.ಪಿ. ಸಿಂಗ್, ಗುಜ್ರಾಲ್, ದೇವೇಗೌಡ ಮುಂತಾದ ತೃತೀಯ ರಂಗದ ಪ್ರಧಾನಿಗಳು ಮಾಡಿದ ಘನ ಕಾರ್ಯಗಳಾವುವು ತಿಳಿಸಿ ನೋಡೋಣ?

ಜಗತ್ತೇ ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿರುವುದರಿಂದ ಮುಂದಿನ ಐದು ವರ್ಷಗಳು ಎಲ್ಲ ದೇಶಗಳಿಗೂ ಅತ್ಯಂತ ಸಂದಿಗ್ಧ ಹಾಗೂ ಸಂಕೀರ್ಣ ಸಮಸ್ಯೆಗಳನ್ನು ತಂದಿಡಬಹುದು. ಅಂತಹ ಸಂಕಷ್ಟಗಳು ಬಂದಾಗ ಎದುರು ನೋಡಲು ಕಾಂಗ್ರೆಸ್ ನೇತೃತ್ವದ ಯುಪಿಎಗೆ ಮನಮೋಹನ್ ಸಿಂಗ್, ಚಿದಂಬರಂ, ಪ್ರಣವ್ ಮುಖರ್ಜಿ ಇದ್ದಾರೆ. ಎನ್‌ಡಿಎಗೆ ಜಸ್ವಂತ್ ಸಿಂಗ್, ಯಶವಂತ್ ಸಿನ್ಹಾ, ಅರುಣ್ ಶೌರಿ, ಅರುಣ್ ಜೇಟ್ಲಿಗಳಿದ್ದಾರೆ. ಈ ತೃತೀಯ ರಂಗಕ್ಕೆ ಯಾರಿದ್ದಾರೆ? ನಾಯ್ಡು, ಜಯಲಲಿತಾ ಅವರಿಗೆ ಬ್ಲ್ಯಾಕ್‌ಮೇಲ್ ತಂತ್ರಗಳು, ಮಾಯಾವತಿಗೆ ಅನ್ಯರನ್ನು ಮೆಟ್ಟುವ ವಿದ್ಯೆ, ಕಾರಟ್‌ಗಂತೂ ನಕ್ಸಲರನ್ನು ಮುಂದೆ ಕಳುಹಿಸಿ ಹಿಂದಿನಿಂದ ಅಧಿಕಾರ ಕಬಳಿಸುವ  ಹಾಗೂ ಚೀನಾಕ್ಕೆ ಸಲಾಂ ಹೊಡೆಯುವುದಷ್ಟೇ ಗೊತ್ತು. ಇವರನ್ನು ನಂಬಿ ಕುಳಿತುಕೊಳ್ಳಲು ಸಾಧ್ಯವೆ?

ಒಂದು ದೇಶದ ಅಳಿವು-ಉಳಿವು, ಪ್ರಗತಿ-ದುರ್ಗತಿಗಳನ್ನು ನಿರ್ಧರಿಸುವುದು ಕೃಷಿ, ವ್ಯಾಪಾರ, ಕೈಗಾರಿಕೋದ್ಯಮ ಹಾಗೂ ಸೇವಾ ಕ್ಷೇತ್ರ. ಕೃಷಿ ಅಗತ್ಯತೆಯ ಬಗ್ಗೆ ಹೇಳುವ ಅಗತ್ಯವಿಲ್ಲ. ಜಗತ್ತಿನ ಎಲ್ಲ ಮಾರುಕಟ್ಟೆಗಳೂ ಕುಸಿದಿರುವುದರಿಂದ ಭಾರತ ‘Western Looking’ ನೀತಿಗಳನ್ನು ಕೈಬಿಟ್ಟು ‘Internal Looking’ ನೀತಿಯನ್ನು ಅನುಸರಿಸಬೇಕಾದ ಅಗತ್ಯವಿದೆ. ಅಂದರೆ ನಾವು ರಫ್ತನ್ನು ನಂಬಿ ಕುಳಿತುಕೊಳ್ಳುವ ಬದಲು ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನೇ ಹೆಚ್ಚಿಸುವ ಮೂಲಕ ವ್ಯಾಪಾರ ವಹಿವಾಟನ್ನು ಚುರುಕುಗೊಳಿಸಬೇಕು. ಪ್ರತಿ ಜಿಲ್ಲೆಗೊಂದು “ಕೃಷಿ ಸಂಸ್ಕರಣ” ಘಟಕವನ್ನು (ಅಗ್ರಿಕಲ್ಚರ್ ಪ್ರೊಸೆಸಿಂಗ್) ಸ್ಥಾಪಿಸಿ, ಸರಕಾರವೇ ಇಂತಿಷ್ಟು ಪ್ರಮಾಣದ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿದರೆ ರೈತನಿಗೂ ಮಾರುಕಟ್ಟೆ ಸಿಕ್ಕಿದಂತಾಗುತ್ತದೆ, ವಾಣಿಜ್ಯ ವ್ಯವಹಾರವೂ ತ್ವರಿತಗೊಳ್ಳುತ್ತದೆ. ಇನ್ನು ಕೈಗಾರಿಕಾ ಅಭಿವೃದ್ಧಿಯೆಂಬುದು ಸುಲಭ ಸಾಲ(Easy Credit) ಮತ್ತು ಸರಳ ಪ್ರಕ್ರಿಯೆ (ಪಾಲಿಸಿ ಅಬ್‌ಸ್ಟೆಕಲ್ಸ್ ಇಲ್ಲದ) ಮೇಲೆ ನಿಂತಿದೆ. ಇನ್ನು ಸೇವಾ (ಕನ್ಸಲ್ಟೆನ್ಸಿ, ಟ್ಯಾಕ್ಸಿ, ಹೇರ್‌ಕಟ್, ನರ್ಸಿಂಗ್‌ನಿಂದ ಸಾಫ್ಟ್‌ವೇರ್‌ವರೆಗೂ)ಕ್ಷೇತ್ರದ ಸಮಸ್ಯೆಗಳಿಗೆ Ideology based  ಪರಿಹಾರಗಳನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಉದಾಹರಣೆಗೆ ತೈವಾನ್, ಸಿಂಗಪುರ್, ಜಪಾನ್, ಥಾಯ್ಲೆಂಡ್‌ಗಳನ್ನು ತೆಗೆದುಕೊಳ್ಳಿ. ಅವರು ‘ಲೇಬರ್ ಮಾರ್ಕೆಟ್’ ಮೇಲೆಯೇ ಹೆಚ್ಚು ಗಮನಹರಿಸಿದರು. ಹಾಗಾಗಿ ಅಲ್ಲಿ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರ ಬೆಳೆಯಿತು. ಆದರೆ ಭಾರತ “Non-Labour Market” ಮೇಲೆ ಗಮನಹರಿಸಿತು. ಹತ್ತು, ಹದಿನೈದು ವರ್ಷಗಳ ಹಿಂದೆ ಸೃಷ್ಟಿಯಾಗಿದ್ದ ಸನ್ನಿವೇಶವನ್ನು ನೆನಪಿಸಿಕೊಳ್ಳಿ. ದೇಶಾದ್ಯಂತ ಆಪ್ಟೆಕ್, ಎನ್‌ಐಐಟಿ ಮುಂತಾದ ಕಂಪ್ಯೂಟರ್ ತರಬೇತಿ ಕೇಂದ್ರಗಳು ಆರಂಭವಾಗಿದ್ದವು. ಅವು ನೀಡುತ್ತಿದ್ದ ಡಿಗ್ರಿಗಳು ವಿಶ್ವವಿದ್ಯಾಲಯಗಳು ನೀಡುತ್ತಿದ್ದ ಪದವಿಗೆ ಸಮಾನ ಅಥವಾ ಇನ್ನೂ ಯೋಗ್ಯ ಎಂಬ ಕಾಲವಿತ್ತು. ಆನಂತರ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಹಾಗೂ ಕಂಪ್ಯೂಟರ್ ಕೋರ್ಸ್‌ಗಳು ಭಾರೀ ಪ್ರಮಾಣದಲ್ಲಿ ಸ್ಥಾಪನೆ ಯಾದವು. ಕಂಪ್ಯೂಟರ್ ಮತ್ತು ಇನ್‌ಫರ್ಮೇಶನ್ ಸೈನ್ಸ್ ವಿಭಾಗಗಳು ಹೆಚ್ಚಾದವು. ಹಾಗಾಗಿಯೇ ನಮ್ಮಲ್ಲಿ ಸೇವಾ ಕ್ಷೇತ್ರ ಈ ಪರಿ ಬೆಳೆಯಲು ಸಾಧ್ಯವಾಗಿದ್ದು. ಆದರೆ ಇಂದು ಜಾಗತಿಕ ಆರ್ಥಿಕ ಹಿಂಜರಿತವುಂಟಾಗಿರುವುದರಿಂದ Non-Labour Marketಗೂ ಹೊಡೆತ ಬಿದ್ದಿದೆ. ನಮ್ಮ ಎಷ್ಟೋ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಕೆಲಸ ಕಳೆದುಕೊಂಡು ಸ್ವದೇಶಕ್ಕೆ ಆಗಮಿಸುವ ಅಪಾಯವೂ ಇದೆ. ಅಂತಹ ಪ್ರತಿಭಾನ್ವಿತರ ಪುನರ್ವಸತಿ ಅಂದರೆ Rehabilitation of the Intelligent ಮತ್ತು ಪ್ರತಿ ವರ್ಷವೂ ಕಾಲೇಜುಗಳಿಂದ ಹೊರಬರುತ್ತಿರುವ ಐದೂವರೆ ಲಕ್ಷ ಎಂಜಿನಿಯರ್‌ಗಳಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಕೆಲಸವಿದೆಯಲ್ಲಾ ಅದು ತೀರಾ ಕಷ್ಟದ್ದು. ಕೊಲ್ಲಿ ಯುದ್ಧ ನಡೆದಾಗಲೂ ೩೦ ಸಾವಿರ ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಬಂದಿದ್ದನ್ನು ನೆನಪಿಸಿಕೊಳ್ಳಿ. ಈ ಹಿನ್ನೆಲೆಯಲ್ಲಿ “Future thinking” ಇದ್ದವರು ಮಾತ್ರ ದೇಶ ಮತ್ತು ಅರ್ಥವ್ಯವಸ್ಥೆಯನ್ನು ಮುನ್ನಡೆಸಬಲ್ಲರು. ಹಾಗಿರುವಾಗ ಸ್ವಂತ ಭವಿಷ್ಯವನ್ನೇ ಸರಿಯಾಗಿ ರೂಪಿಸಿಕೊಳ್ಳದ ಹಾಗೂ ಮಾರ್ಕ್ಸು, ಲೆನ್ನಿನ್ನು, ಬಡವ-ಬಲ್ಲಿದ, ಸಾಮ್ರಾಜ್ಯಶಾಹಿ, ಬಂಡವಾಳಶಾಹಿ ಎಂಬ Regressive ನೀತಿಗಳಿಗೆ ಅಂಟಿಕೊಂಡಿರುವವ ತೃತೀಯ ರಂಗದವರನ್ನು ನಂಬಿ ವೋಟು ಹಾಕುತ್ತೀರಾ? ಅಲ್ಲಿ ಇರುವವ ರಾದರೂ ಯಾರು? ದೇವೇಗೌಡ, ನಾಯ್ಡು, ಜಯಲಲಿತಾ, ಮಾಯಾವತಿ ಈ ಎಲ್ಲರೂ ಪ್ರಧಾನಿ ಸ್ಥಾನದ ಆಕಾಂಕ್ಷಿಗಳೇ. ಅಧಿಕಾರವೆಂಬ ದೈವವೇ ಇವರನ್ನು ಒಂದು ಮಾಡಿರುವುದು. ಇಂಥವರೆಲ್ಲ ಸೇರಿ ಸರಕಾರ ರಚಿಸಿದರೆ ಖಾಸಗಿ ಕ್ಷೇತ್ರದಲ್ಲೂ ಮೀಸಲು ನೀತಿ ತಂದು ಇಡೀ ಸಾಫ್ಟ್‌ವೇರ್ ಹಾಗೂ ಇತರ ಸೇವಾ ಕ್ಷೇತ್ರಗಳನ್ನೂ ಹಾಳುಗೆಡವಿ ಭಾರತವನ್ನು ಮತ್ತೊಂದು ಕ್ಯೂಬಾ, ಕಾಂಬೋಡಿಯಾ ಮಾಡಿದರೂ ಆಶ್ಚರ್ಯವಿಲ್ಲ. ಆ ಮೇಲೆ, “ತೃತೀಯ ರಂಗಕ್ಕೆ ಅಧಿಕಾರ: ದೇಶದ ತುಂಬ ಹಾಹಾಕಾರ” ಎಂದು ಬರೆಯಬೇಕಾಗುತ್ತದೆ. ಆ ಕಾರಣಕ್ಕಾಗಿಯೇ ಹೇಳಿದ್ದು ನಮ್ಮ ಮುಂದಿರುವುದು ಎರಡೇ ಆಯ್ಕೆ-ಯುಪಿಎ ಅಥವಾ ಎನ್‌ಡಿಎ. ಇವರಿಬ್ಬರಲ್ಲಿ ಯಾರೂ ಆದೀತು.

ಆಯ್ಕೆ ನಿಮ್ಮದು.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: