ನಿಮ್ಮನ್ನು ಅಭಿನಂದಿಸಬೇಕಿತ್ತೆ ಮುಖ್ಯಮಂತ್ರಿಯವರೇ?!

“ಅಗತ್ಯ ಬಿದ್ದಾಗಲೆಲ್ಲ ನಿವೃತ್ತ ಶಿಕ್ಷಕರು, ಉಪ ನ್ಯಾಸಕರು, ವೈದ್ಯರು ಹಾಗೂ ಇತರ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಮತ್ತೆ ನೇಮಕ ಮಾಡಿಕೊಳ್ಳುತ್ತಾ ಬರಲಾಗಿದೆ. ಹಾಗೆ ನಿವೃತ್ತ ರಾಗಿರುವವರನ್ನೇ ನೇಮಕ ಮಾಡಿಕೊಳ್ಳುತ್ತಿರುವಾಗ ಹಾಲಿ ನೌಕರರ ಸೇವಾವಧಿಯನ್ನು ಎರಡು ವರ್ಷ ಹೆಚ್ಚಿಸುವುದರಲ್ಲಿ ತಪ್ಪೇನಿದೆ? ಆಡಳಿತದಲ್ಲಿ ದಕ್ಷತೆಯನ್ನು ತರಲು ಅನುಭವದ ಅಗತ್ಯವಿದೆ. ಹಾಗಾಗಿ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು ೫೮ರಿಂದ ೬೦ಕ್ಕೆ ಏರಿಸಿದ್ದೇವೆ. ಅದಕ್ಕಾಗಿ ನನ್ನನ್ನು ಅಭಿನಂದಿಸುತ್ತೀರಿ ಎಂದು ಭಾವಿಸಿದ್ದೆ” ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಜುಲೈ ೨೦ರಂದು ಕರ್ನಾಟಕ ವಿದ್ಯುತ್ ನಿಗಮದ ೩೯ನೇ ಸಂಸ್ಥಾಪನಾ ದಿನವನ್ನು ಉದ್ಘಾಟಿಸಿ ಮಾತನಾಡುತ್ತಾ ಹೇಳಿದ್ದಾರೆ, ತಾವು ತೆಗೆದುಕೊಂಡಿರುವ ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಸಲುವಾಗಿ ಇಂಥದ್ದೊಂದು ವಾದ ಸರಣಿಯನ್ನೂ ಮುಂದಿಟ್ಟಿದ್ದಾರೆ!

ಅಲ್ಲ, ಅದ್ಯಾವ ಘನ ಕಾರ್ಯ ಮಾಡಿದ್ದೀರಿ ಅಂತ ನಿಮ್ಮನ್ನು ಅಭಿನಂದಿಸಬೇಕಿತ್ತು ಮುಖ್ಯಮಂತ್ರಿಯವರೇ?

ಯಾವ “ಅನುಭವ”ದ ಮಾತನಾಡುತ್ತಿದ್ದೀರಿ ಸ್ವಾಮಿ? ‘ಅನುಭವ ಬೇಕು’ ಎನ್ನುವುದಕ್ಕೆ ಸರಕಾರಿ ಉದ್ಯೋಗಿ ಗಳು, ಗೆಝೆಟೆಡ್ ಅಧಿಕಾರಿಗಳೇನು ವಿeನಿಗಳೇ? ಅಥವಾ ಸರಕಾರಿ ಕೆಲಸ ಅಂದರೆ “ರಿಸರ್ಚ್ ಆಂಡ್ ಡೆವೆಲಪ್‌ಮೆಂಟಾ”? ಸರಕಾರಿ ನೌಕರರೇನು ಇಸ್ರೋ, ಡಿಆರ್‌ಡಿಓ, ಎಚ್‌ಎಎಲ್, ಬಾರ್ಕ್, ಐಐಎಸ್‌ಸಿಗಳಲ್ಲಿ ಕೆಲಸ ಮಾಡುವವರಾ? ಸಮಾಜಕ್ಕೆ ಅನುಕೂಲವಾಗುವಂತಹ ಯಾವುದಾದರೂ ಹೊಸ ಸಂಶೋಧನೆಯಲ್ಲಿ ತೊಡಗಿದ್ದಾರಾ? ಹೊಸದೇನನ್ನೋ ಕಂಡುಹಿಡಿಯುತ್ತಿರುವರೋ? ಸರಕಾರಿ ಉದ್ಯೋಗಿಗಳೆ ಲ್ಲರೂ ಸೋಮಾರಿಗಳು ಎಂದು ಹೇಳುತ್ತಿಲ್ಲ. ಆದರೆ ಕೆಲಸ ಮಾಡಬೇಕಾದ ವಯಸ್ಸಿನಲ್ಲೇ ಕ್ಯಾಂಟಿನ್, ಕಾಫಿ, ಟೀ ಅಂತ ಕಾಲಹರಣ ಮಾಡುವವರೇ ಹೆಚ್ಚು. ಇನ್ನು ಮೊಮ್ಮಕ್ಕಳನ್ನು ಆಡಿಸಿಕೊಂಡು ಮನೆಯಲ್ಲಿರಬೇಕಾದ ಕಾಲದಲ್ಲಿ ಅದ್ಯಾವ ಮಹತ್ಕಾರ್ಯ ಮಾಡಿಯಾರು? ಇವರ ಕಾರ್ಯಕ್ಷಮತೆ, ದಕ್ಷತೆ ಎಂಥದ್ದು ಎಂಬುದು ಕಳೆದ ೬೦ ವರ್ಷಗಳಿಂದ ಸಾಬೀತಾಗುತ್ತಲೇ ಬಂದಿದೆ. ಲೋಕಾಯುಕ್ತಕ್ಕೆ  ಸ್ವತಂತ್ರವಾಗಿ ಶಿಕ್ಷಿಸುವ, ದಂಡಿಸುವ ಅಧಿಕಾರ ಕೊಟ್ಟು ನೋಡಿ. ಸೈಟು, ಮನೆ, ಆಭರಣದ ರೂಪದಲ್ಲಿ ಸಂಗ್ರಹವಾಗಿರುವ ಇವರ ‘ಅನುಭವದ ಖನಿ’ ಬಟಾ ಬಯಲಾಗುತ್ತದೆ. ನೀವೊಬ್ಬ ಯುವ ಉದ್ಯೋಗಾಕಾಂಕ್ಷಿಯಾಗಿದ್ದರೆ ಅಥವಾ ಪದವಿ ಪಡೆದ ಮಗ/ಮಗಳು ನಿಮ್ಮ ಮನೆಯಲ್ಲಿ ಖಾಲಿ ಕುಳಿತಿದ್ದರೆ ಮುಖ್ಯಮಂತ್ರಿಯವರ ಮಾತು, ಅವರು ತೆಗೆದುಕೊಂಡಿ ರುವ ನಿರ್ಧಾರ, ಮಂಡಿಸುತ್ತಿರುವ ವಾದ ನಿಮ್ಮನ್ನೂ ರೊಚ್ಚಿ ಗೇಳಿಸಿರುತ್ತದೆ.

ಅಷ್ಟಕ್ಕೂ ಸರಕಾರಿ ನೌಕರರ ನಿವೃತ್ತಿ ವಯಸ್ಸನ್ನು ಅರ ವತ್ತಕ್ಕೇರಿಸಿದ್ದು ಯಾವ ಉದ್ದೇಶ ಸಾಧನೆಗಾಗಿ?

ನಮ್ಮ ದೇಶದ ಸರಾಸರಿ ಜೀವಿತಾವಧಿಯೇ ೬೩ ವರ್ಷ. ಹಾಗಿರುವಾಗ ನಿವೃತ್ತಿ ವಯಸ್ಸನ್ನು ೬೦ಕ್ಕೇರಿಸಿದರೆ ದೇಶದ ಒಟ್ಟು ಜನಸಂಖ್ಯೆಯ ಶೇ.೭೦ ಕ್ಕೂ ಹೆಚ್ಚಿರುವ ೩೫ ವರ್ಷಕ್ಕೂ ಕಡಿಮೆ ವಯೋಮಾನದ ಯುವ ಜನಾಂಗ ಏನು ಮಾಡಬೇಕು ಯಡಿಯೂರಪ್ಪನವರೇ? ಪದವಿ ಪಡೆದರೂ ಕೆಲಸವಿಲ್ಲದೆ ಎಷ್ಟು ದಿನ ಅಂತ ಕೈಕಟ್ಟಿ ಕುಳಿತುಕೊಳ್ಳಬೇಕು? ಕೆಲಸ ಮಾಡಬೇಕಾದ ಕಾಲದಲ್ಲಿ ವೃಥಾ ಕಾಲಹರಣ ಮಾಡಬೇಕಾಗಿ ಬಂದರೆ ಅಮೂಲ್ಯ ಯುವಶಕ್ತಿ ಪೋಲಾಗುವುದಿಲ್ಲವೆ? ಯುವ ಜನಾಂಗ ಅಡ್ಡದಾರಿ ಹಿಡಿಯಲು ನೀವು ತೆಗೆದುಕೊಂಡಿರುವಂತಹ ನಿರ್ಧಾರಗಳು ದಾರಿ ಮಾಡಿಕೊಡುವುದಿಲ್ಲವೆ? ನಿಮ್ಮಿಂದ ಬೋಧನೆ ಮಾಡಿಸಿ ಕೊಳ್ಳುವುದಕ್ಕಾಗಿ ಜನ ವೋಟು ಕೊಟ್ಟು ನಿಮ್ಮನ್ನು ಅಧಿಕಾರಕ್ಕೇರಿಸಿಲ್ಲ. ಮೊದಲ ಬಾರಿಗೆ ಸೆನೆಟರ್ ಆಗಿರುವ ಕೇವಲ ೪೩ ವರ್ಷದ ಬರಾಕ್ ಒಬಾಮಾ ಅಮೆರಿಕದಂತಹ ವಿಶ್ವದ ಅತ್ಯಂತ ಬಲಿಷ್ಠ ಪ್ರಜಾತಂತ್ರ ಹಾಗೂ ಭಾರತದ ನಾಲ್ಕು ಪಟ್ಟು ದೊಡ್ಡದಾಗಿರುವ ರಾಷ್ಟ್ರದ ಅಧ್ಯಕ್ಷನಾಗುವತ್ತ ದಾಪುಗಾಲಿಡುತ್ತಿದ್ದಾರೆ. ಇವತ್ತು ಕಠಿಣಾತಿ ಕಠಿಣ ಕೆಲಸ ಮಾಡುತ್ತಿರುವವರು ಯುವ ಜನತೆಯೇ ಹೊರತು ಕೂದಲು ಬೆಳ್ಳಗಾಗಿರುವ ವಯಸ್ಸು ಮೀರಿದವರಲ್ಲ. ವಯಸ್ಸು ಹೆಚ್ಚಾದಂತೆ ಬುದ್ಧಿ ಕೂಡ ಹೆಚ್ಚಾಗುತ್ತದೆ ಎಂಬ ಕಾಲ ಹೋಯಿತು ಸ್ವಾಮಿ. ಅನುಭವ ಬೇಕಾಗಿರುವುದು ಮಧ್ಯ ವಯಸ್ಸಿನಲ್ಲಿ. ವಯಸ್ಸು ೫೫ ವರ್ಷ ದಾಟಿ ಬಿ.ಪಿ., ಶುಗರ್, ಹಾರ್ಟ್ ಪ್ರಾಬ್ಲಮ್, ಐ ಪ್ರಾಬ್ಲಮ್ ಬಂದಿರುವವರ ಅನುಭವ ಇಟ್ಟುಕೊಂಡು ಏನು ಮಾಡುತ್ತೀರಿ? ಅಲ್ಲದೆ ನಿವೃತ್ತಿ ವಯಸ್ಸನ್ನು ೬೦ ವರ್ಷಕ್ಕೇರಿಸುವುದರ ಇನ್ನೊಂದು ಅಪಾಯವೆಂದರೆ  ಬಹಳಷ್ಟು ಜನರು ಸೇವಾವಧಿಯಲ್ಲೇ ತೀರಿ ಹೋಗುವ ಸಾಧ್ಯತೆ ಇದೆ. ಆಗ ಅರ್ಹತೆಯ ಬದಲಿಗೆ ಅನುಕಂಪದ ಮೇಲೆ ಕುಟುಂಬದ ಸದಸ್ಯರೊಬ್ಬರಿಗೆ ಪುಕ್ಕಟೆಯಾಗಿ ಕೆಲಸವನ್ನೂ ನೀಡಬೇಕಾಗುತ್ತದೆ!

ನಮ್ಮ ರಾಜ್ಯದಲ್ಲಿ ಒಟ್ಟು ೫.೨೫ ಲಕ್ಷ ಸರಕಾರಿ ನೌಕರರಿ ದ್ದಾರೆ. ಅವರಲ್ಲಿ ೧೨ ಸಾವಿರ ನೌಕರರು ನಿವೃತ್ತಿಯನ್ನು ಎದುರು ನೋಡುತ್ತಿದ್ದಾರೆ. ಇವರ ಸೇವಾವಧಿಯನ್ನು ಇನ್ನೂ ಎರಡು ವರ್ಷ ಹೆಚ್ಚು ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ? ಸರಕಾರದಿಂದ ಏನಾದರೂ ಒಳಿತಾಗಬೇಕಾಗಿರುವುದು ಭವಿಷ್ಯ ಮುಂದಿರುವ ಯುವಜನಾಂಗಕ್ಕೋ, ಭವಿಷ್ಯ ಮುಗಿದು ನಿವೃತ್ತಿ ಎದುರು ನೋಡುತ್ತಿರುವ ಹಿರಿಯ ನೌಕರ ವರ್ಗಕ್ಕೋ? ಮುಖ್ಯಮಂತ್ರಿಯವರೇ, ನಿವೃತ್ತಿ ವಯಸ್ಸನ್ನು ಹೆಚ್ಚಿಸುವುದರಿಂದ ಯಾವ ಸಾಧನೆಯನ್ನೂ ಮಾಡಿದಂತಾಗುವುದಿಲ್ಲ. ಗ್ರಾಚುಯಿಟಿ, ಪಿಎಫ್ ಹೀಗೆ ಕೊಡಬೇಕಾದ ಇಡುಗಂಟನ್ನು ಇನ್ನೆರಡು ವರ್ಷ  ತಡೆಯ ಬಹುದು, ಮುಂದಕ್ಕೆ ಹಾಕಬಹುದು ಅಷ್ಟೆ. ಆ ತಪ್ಪಿಗಾಗಿ ‘ಮೀಟರ್ ಬಡ್ಡಿ’ ನೀಡಬೇಕಾಗುತ್ತದೆ. ಅಷ್ಟಕ್ಕೂ ಸೇವಾ ವಧಿಯ ಕೊನೆಯ ಭಾಗದಲ್ಲಿರುವ ಸರಕಾರಿ ನೌಕರರಿಗೆ ಸಾಮಾನ್ಯವಾಗಿ ದೊಡ್ಡ ಸಂಬಳವಿರುತ್ತದೆ. ಹಾಗಾಗಿ ಸರಕಾರದ ಮೇಲಿನ ಹೊರೆ ಇನ್ನೂ ಹೆಚ್ಚಾಗುತ್ತದಷ್ಟೆ. ಅಲ್ಲದೆ ಒಬ್ಬ ಹಿರಿಯ ನೌಕರನಿಗೆ ನೀಡುವ ಸಂಬಳಕ್ಕೆ ನಾಲ್ಕು ಜನ ಯುವಕರನ್ನು ನೇಮಕ ಮಾಡಿಕೊಳ್ಳಬಹುದು. ಹಾಗಿರುವಾಗ ೮೦೦, ೧೦೦೦ ರೂ.ಗಳಿಗೆ ಅತಿಥಿ ಉಪನ್ಯಾಸಕರಾಗಿ, ಮಾಸ್ತರ್ ಆಗಿ ಕೆಲಸ ಮಾಡುತ್ತಿರುವವರಿಗೆ ಒಳ್ಳೆಯದಾಗುವಂತಹ ಕ್ರಮವನ್ನು ಜನ ನಿರೀಕ್ಷಿಸುತ್ತಿದ್ದಾರೆಯೇ ಹೊರತು, ೨೫-೩೦ ವರ್ಷ ಸವಲತ್ತು ಅನುಭವಿಸಿರುವ ಹಿರಿಯ ನೌಕರ ವರ್ಗದ ಕಲ್ಯಾಣವನ್ನಲ್ಲ. ಅದಕ್ಕೂ ಮಿಗಿಲಾಗಿ, ಆಡಳಿತದಲ್ಲಿ ಕಾರ್ಯದಕ್ಷತೆ ತರಬೇಕೆಂದಾಗಿದ್ದರೆ ಯುವಕರನ್ನು ನೇಮಕ ಮಾಡಿಕೊಳ್ಳಬೇಕಾಗಿತ್ತೇ ಹೊರತು ಹಳೆ ತಲೆಗಳನ್ನು ಉಳಿಸಿ ಕೊಳ್ಳುವುದಲ್ಲ. ಅವರಿಗೆ ದಯೆ ತೋರುವ ಅಗತ್ಯವೂ ಇಲ್ಲ. ಮಳೆ ಬರದಿದ್ದರೂ, ಬೆಳೆಯಾಗದಿದ್ದರೂ ಪಿಂಚಣಿ ಬರುತ್ತಲೇ ಇರುತ್ತದೆ. ಐವತ್ತೆಂಟಕ್ಕೆ ನಿವೃತ್ತಿಯಾಗುವವರು ಮಾನಸಿಕವಾಗಿಯೂ ಸಿದ್ಧರಾಗಿತ್ತಾರೆ, ನಿವೃತ್ತಿ ತರುವಾಯ ಬದುಕಿಗೆ ಬೇಕಾದ ತಕ್ಕ ತಯಾರಿಯನ್ನೂ ಮಾಡಿ ಕೊಂಡಿರುತ್ತಾರೆ. ಅಲ್ಲದೆ ನಿವೃತ್ತಿಯ ವೇಳೆ ಇಡುಗಂಟು ಸಿಗುವುದರಿಂದ ಮುಂದಿನ ಹೊಟ್ಟೆಪಾಡಿನ ಬಗ್ಗೆ ಚಿಂತೆ ಮಾಡುವ ಅಗತ್ಯವೂ ಇರುವುದಿಲ್ಲ.

ನೀವೇ ಯೋಚನೆ ಮಾಡಿ, ಕಳೆದ ಜುಲೈ ೧ರಿಂದಲೇ ಜಾರಿಗೆ ಬರಲಿರುವ ಸೇವಾ ಅವಧಿ ಹೆಚ್ಚಳ ನಿರ್ಧಾರದ ಪ್ರತಿಕೂಲ ಪರಿಣಾಮಗಳೇನಾಗಬಹುದು?

ಮುಂದಿನ ಎರಡು ವರ್ಷ ಸರಿಯಾಗಿ ಯಾವುದೇ ನೇಮಕಾತಿ ನಡೆಯುವುದಿಲ್ಲ. ಹಾಗಾದಾಗ ಡಿಗ್ರಿ ಪಡೆದು ಉದ್ಯೋಗಕ್ಕಾಗಿ ಕಾದು ಕುಳಿತಿರುವವರ ಗತಿ ಯೇನು? ವರ್ಷವೊಂದಕ್ಕೆ ಕನಿಷ್ಠ ಒಂದೂವರೆ ಲಕ್ಷ ವಿವಿಧ ಪದವೀಧರರು ಹೊರಬರುತ್ತಾರೆ. ಇನ್ನೂ ಎರಡು ವರ್ಷ ಕಳೆಯುವಷ್ಟರಲ್ಲಿ ಸ್ಪರ್ಧೆ ಮತ್ತೂ ಹೆಚ್ಚಾಗಿರುತ್ತದೆ. ವಯಸ್ಸು ಕೂಡ ಮೀರಿ ಹೋಗಿ, ಕೆಲವರು ಶೈಕ್ಷಣಿಕವಾಗಿ ಅರ್ಹತೆ ಹೊಂದಿದ್ದರೂ ಕೈಸುಟ್ಟುಕೊಳ್ಳಬೇಕಾಗುತ್ತದೆ. ಸೇವೆ ಕಾಯಂ ಆಗುತ್ತದೆ ಎಂದು ಎದುರು ನೋಡು ತ್ತಿರುವವರು  ಇನ್ನೂ ಎರಡು ವರ್ಷಗಳನ್ನು ಆತಂಕದಿಂದ ದೂಡಬೇಕಾಗಿ ಬಂದಿದೆ. ಅದಿರಲಿ, ಅಗತ್ಯ ಬಿದ್ದಾಗಲೆಲ್ಲ ನಿವೃತ್ತ ಶಿಕ್ಷಕರು, ಉಪನ್ಯಾಸಕರು, ವೈದ್ಯರು ಹಾಗೂ ಇತರ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಮತ್ತೆ ನೇಮಕ ಮಾಡಿಕೊಳ್ಳುತ್ತಾ ಬರಲಾಗಿದೆ. ಹಾಗೆ ನಿವೃತ್ತರಾಗಿರುವವ ರನ್ನೇ ನೇಮಕ ಮಾಡಿಕೊಳ್ಳುತ್ತಿರುವಾಗ ಹಾಲಿ ನೌಕರರ ಸೇವಾವಧಿಯನ್ನು ಎರಡು ವರ್ಷ ಹೆಚ್ಚಿಸುವುದರಲ್ಲಿ ತಪ್ಪೇನಿದೆ?” ಎಂದಿದ್ದೀರಲ್ಲಾ ನಿಮ್ಮ ಮಾತಿನ ಅರ್ಥವೇನು? ನಿವೃತ್ತಿಯಾದವರನ್ನೇ ನಿಯುಕ್ತಿ ಮಾಡಿಕೊಳ್ಳುವುದಾದರೆ, ಹಾಲಿ ನೌಕರರ ಸೇವಾವಧಿಯನ್ನು ವಿಸ್ತರಿಸುವುದೇ ಆದರೆ, ರಾಜ್ಯಾದ್ಯಂತ ೭೨೬ ಡಿಎಡ್ ಹಾಗೂ ೩೯೫ ಬಿಎಡ್ ಕಾಲೇಜುಗಳನ್ನು ನಾಯಿಕೊಡೆಗಳಂತೆ ಸ್ಥಾಪಿಸಿ ನಿರುದ್ಯೋಗಿಗಳನ್ನು ತಯಾರು ಮಾಡುತ್ತಿರುವುದೇಕೆ? ಖಾಸಗಿ ಕಾಲೇಜುಗಳಿಗೆ ಡೊನೇಶನ್ ಕೊಟ್ಟು, ಕಷ್ಟಪಟ್ಟು ಓದಿ ಪದವಿ ಪಡೆದುಕೊಂಡ ನಂತರ ಕೈಕಟ್ಟಿ ಕುಳಿತುಕೊಳ್ಳಬೇಕೆ? ರಾಜ್ಯದ ವಿವಿಧ ಇಲಾಖೆ, ಶಾಲೆ, ಕಾಲೇಜು, ಕಚೇರಿಗಳಲ್ಲಿ ಒಟ್ಟು ೧.೦೭ ಲಕ್ಷ ಹುದ್ದೆಗಳನ್ನು ಭರ್ತಿ ಮಾಡದೆ ಖಾಲಿ ಉಳಿಸಿಕೊಂಡಿರುವುದೇಕೆ? ಪದವಿ ಪಡೆದವರು ಸರ್ಟಿಫಿಕೆಟ್‌ಗಳನ್ನು ಪ್ರದರ್ಶನಕ್ಕಿಟ್ಟುಕೊಂಡು ಕುಳಿತುಕೊಳ್ಳಬೇಕೆ? ಸೇವಾವಧಿಯನ್ನು ೬೦ಕ್ಕೆ ಏರಿಸದೇ ಹೋಗಿದ್ದರೆ ನಿವೃತ್ತಿಯಾಗಲಿರುವ ೧೨ ಸಾವಿರ ಹಿರಿಯ ನೌಕರರ ಸ್ಥಾನಗಳಿಗೆ ೧೨ ಸಾವಿರ ಯುವಕ/ಯುವತಿ ಯರನ್ನು ನೇಮಕ ಮಾಡಿಕೊಂಡು ದುಡಿಯುವ ಮಾರ್ಗ ಕಲ್ಪಿಸಬಹುದಿತ್ತಲ್ಲವೆ?

ಇಲ್ಲಿ ಗಮನಿಸಬೇಕಾದ ಮತ್ತೊಂದು ಬಹುಮುಖ್ಯ ಅಂಶವೆಂದರೆ ೩೦-೩೫ ವರ್ಷ ಸೇವೆ ಸಲ್ಲಿಸಿರುವ ಹಿರಿಯ ಅಧಿಕಾರಿಗಳು, ಉದ್ಯೋಗಿಗಳು ವ್ಯವಸ್ಥೆಗೆ ಒಗ್ಗಿಹೋಗಿ ರುತ್ತಾರೆ. ವಿಳಂಬ ಮಾಡುವುದು, ಅಲೆದಾಡಿಸುವುದು, ಕಡತಗಳನ್ನು ಕೊಳೆಯಲು ಬಿಡುವುದು ಇವು ನಮ್ಮ ಹಾಲಿ ವ್ಯವಸ್ಥೆಯ ಮುಖ್ಯ ಗುಣಲಕ್ಷಣಗಳಾಗಿವೆ. ಇಂತಹ ವ್ಯವಸ್ಥೆಯನ್ನು ಬದಲಾಯಿಸಲು ಅವರು ಖಂಡಿತ ಮುಂದಾಗುವುದಿಲ್ಲ. ಖಠಿZಠ್ಠಿo ಕ್ಠಿಟಜಿoಞ ಅಥವಾ ಯಥಾಸ್ಥಿತಿಯನ್ನೇ ಮುಂದುವರಿಸುತ್ತಾರೆ, ರಾಜೀ ಮಾಡಿಕೊಳ್ಳುತ್ತಾರೆ, ಹೊಸ ಬದಲಾವಣೆಯನ್ನು ತರುವುದಿಲ್ಲ. ನಿಮಗೆ ಉಷಾ ಗಣೇಶನ್ ಎಂಬ ಹಿರಿಯ ಅಧಿಕಾರಿ ನೆನಪಿರಬಹುದು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗಲೇ ಸರಕಾರ ‘ರಕ್ಷಾ ಕವಚ’ ಎಂಬ ಯೋಜನೆಯನ್ನು ಜಾರಿಗೆ ತರಲು ಮುಂದಾಗಿತ್ತು. ಅಂದರೆ ರಾಜ್ಯದ ಯಾವುದೇ ಸ್ಥಳದಲ್ಲಿ ಅಪಘಾತವಾದರೂ ೧೫ ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಸೇವೆ ಒದಗಿಸುವುದು ಯೋಜನೆಯ ಉದ್ದೇಶವಾಗಿತ್ತು. ಅದಕ್ಕಾಗಿ ಸಂಪರ್ಕ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸಲು ‘ಸತ್ಯಂ’ ಸಂಸ್ಥೆ ಸಾಫ್ಟ್‌ವೇರ್ ಸಹಾಯ ನೀಡಲೂ ಮುಂದಾಗಿತ್ತು. ಆದರೆ ಪೃಷ್ಠದಡಿ ಫೈಲ್ ಇಟ್ಟುಕೊಂಡು ಕುಳಿತ ಉಷಾ ಗಣೇಶನ್, ನಿವೃತ್ತಿಯಾಗುವವರೆಗೂ ಯೋಜನೆ ಕಡತದಿಂದಲೇ ಹೊರಬರಲಿಲ್ಲ. ಒಂದು ವರ್ಷದ ಹಿಂದೆ ಜಾರಿಗೆ ಬರಬೇಕಾಗಿದ್ದ ‘ರಕ್ಷಾ ಕವಚ’ ಯೋಜನೆಯನ್ನು ಈಗ ಅನುಷ್ಠಾನಗೊಳಿಸಲು ಮುಂದಾಗಿದ್ದಾರೆ!

ಇಂತಹ ಅನುಭವ ಹಾಗೂ ಇಂತಹ ಅನುಭವಿಗಳು ಯಾಕೆ ಬೇಕೆ?

ಇವತ್ತು ಅಪಾಯವನ್ನು ಮೈಮೇಲೆಳೆದುಕೊಂಡು ನಿರ್ಧಾರ ಕೈಗೊಳ್ಳುವವರು, ತೀವ್ರತರ ಬದಲಾವಣೆ ತರುವವರು, ಶೀಘ್ರ ನಿರ್ಧಾರ ಕೈಗೊಳ್ಳುವವರು ಯುವಕ/ಯುವತಿಯರೇ ಹೊರತು, ದುಡಿಯುವ ವಯಸ್ಸು ಮೀರಿದ ಊಳಿಗಮಾನ್ಯ ಮನಃಸ್ಥಿತಿಯ ಹೆಚ್ಚಿನ ಹಿರಿಯ ನೌಕರರಲ್ಲ. ಅಷ್ಟಕ್ಕೂ ೨೫-೩೦ ವರ್ಷ ಅನುಭವ ಇರುವವರು ವ್ಯವಸ್ಥೆಗೆ ಹೊಂದಿಕೊಂಡಿರುತ್ತಾರೆ, ಭ್ರಷ್ಟಾಚಾರದಲ್ಲೂ ಪಳಗಿರುತ್ತಾರೆ. (ಎಲ್ಲರೂ ಅಲ್ಲ, ಆದರೆ ಬಹುಸಂಖ್ಯಾತರು). ಖಂಡಿತ ಅವರಿಂದ ವ್ಯವಸ್ಥೆ ಅನ್ನುವುದು ನಿಂತ ನೀರಾಗುತ್ತದೆಯೇ ಹೊರತು, ಚಲನಶೀಲವಾಗುವುದಿಲ್ಲ. ಅದೇ ಒಬ್ಬ ಯುವಕ ನಿಗೆ ಕೆಲಸ ನೀಡಿದರೆ ಒಂದಿಷ್ಟು ಹೊಸತನವನ್ನು ನಿರೀಕ್ಷೆ ಮಾಡಬಹುದು. ಈಗಿನ ಯುವ ಜನತೆಗೆ ಸಮಾಜಕ್ಕೆ ಏನಾದರೂ ಒಳ್ಳೆಯದನ್ನು ಮಾಡಬೇಕೆಂಬ ಇಚ್ಛೆ, ತುಡಿತ, ಉತ್ಸಾಹ ಇದೆ. ಇಂತಹ ಮನಃಸ್ಥಿತಿ ಹೊಂದಿರುವವರು ವ್ಯವಸ್ಥೆಗೆ ಅಷ್ಟು ಸುಲಭವಾಗಿ ಹೊಂದಿಕೊಳ್ಳುವುದಿಲ್ಲ. ಬದಲಾಗಿ ವ್ಯವಸ್ಥೆಗೆ ಸಡ್ಡು ಹೊಡೆಯುತ್ತಾರೆ. ಉದಾಹರ ಣೆಗೆ ಐಟಿ ಕ್ಷೇತ್ರವನ್ನೇ ತೆಗೆದುಕೊಳ್ಳಿ. ಇವತ್ತು ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಒಳ್ಳೆಯ ಹೆಸರು ಬಂದಿದ್ದರೆ ಅದು ಐಟಿ ಕ್ಷೇತ್ರದಿಂದ. ಐಟಿಯಲ್ಲಿರುವವರು ಯುವಕರೇ ಹೊರತು, ‘ಬಾಲ್ಡ್ ಹೆಡ್’ಗಳಲ್ಲ. ೫೧ ವರ್ಷದ ವಿಕ್ರಂ ಪಂಡಿತ್ ಸಿಟಿ ಗ್ರೂಪ್‌ನ ಚೇರ್‌ಮನ್ ಆಗಿದ್ದರೆ, ೫೪ ವರ್ಷದ ಅರುಣ್ ಸರೀನ್ ಜಗತ್ತಿನ ಅತ್ಯಂತ ಲಾಭ ದಾಯಕ ಮೊಬೈಲ್ ಹಾಗೂ ಸ್ಥಿರ ದೂರವಾಣಿ ಕಂಪನಿ ವೊಡಾಫೋನ್‌ನ ಮುಖ್ಯಸ್ಥರಾಗಿದ್ದಾರೆ. ಇವರ ವಯಸ್ಸನ್ನು ನೋಡಿ ಆ ಹುದ್ದೆಗಳನ್ನು ನೀಡಿದ್ದಲ್ಲ. ಅತ್ಯಂತ ಚಿಕ್ಕವಯಸ್ಸಿನಲ್ಲಿ ತೋರಿದ ಗುರುತರ ಸಾಧನೆಯಿಂದಾಗಿ ಈ ಮಟ್ಟಕ್ಕೇರಿದ್ದಾರೆ ಹಾಗೂ ೫೫ ವರ್ಷ ದಾಟುವ ಮೊದಲೇ ಸ್ವಯಿಚ್ಛೆಯಿಂದ ನಿವೃತ್ತಿಗೊಳ್ಳುವ ಮಾತನಾಡುತ್ತಿದ್ದಾರೆ. ಇಂತಹ ನಿದರ್ಶನಗಳು ಕಣ್ಣಮುಂದಿದ್ದರೂ ಯಾವ ಅನುಭವದ ಮಾತನಾಡುತ್ತಿದ್ದೀರಿ?

ಮುಖ್ಯಮಂತ್ರಿಯವರೇ, ನಿವೃತ್ತಿ ವಯೋಮಾನವನ್ನು ೫೮ರಿಂದ ೬೦ಕ್ಕೆ ಏರಿಸಿರುವುದರ ಒಂದು ಲಾಭವೆಂದರೆ ಅದರ ಅನುಕೂಲ ಪಡೆದ ಅಧಿಕಾರಿಗಳು ನಿಮಗೆ ನಿಯತ್ತಾಗಿ ಇರುತ್ತಾರಷ್ಟೆ. ಮುಂದಿನ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೌಕರ ವರ್ಗವನ್ನು ಬುಟ್ಟಿಗೆ ಹಾಕಿಕೊಳ್ಳುವ ಸಲುವಾಗಿಯೇ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದರಲ್ಲಿ ಯಾವ ಸಂಶಯವೂ ಬೇಡ. ಈ ಹಿಂದೆ ರಾಮಕೃಷ್ಣ ಹೆಗಡೆಯವರು ನಿವೃತ್ತಿ ವಯೋಮಾನವನ್ನು ೫೫ರಿಂದ ೫೮ಕ್ಕೇರಿಸುವ ಮೂಲಕ ನೌಕರ ವರ್ಗವನ್ನು ಪಾಕೆಟ್ ಮಾಡಿಕೊಳ್ಳಲು ಪ್ರಯತ್ನಿಸಿದ್ದರು. ಆ ಪರಂಪರೆಯನ್ನು ಹಾಲಿ ಮುಖ್ಯಮಂತ್ರಿಯಾದ ನೀವು ಮುಂದುವರಿಸಿದ್ದೀರಿ ಅಷ್ಟೇ. ಅಲ್ಲದೆ ಜನರನ್ನು ಮೆಚ್ಚಿಸುವುದಕ್ಕಾಗಿಯೇ ಮಂಡಿಸಿ ರುವ ದೂರದೃಷ್ಟಿಯಿಲ್ಲದ ನಿಮ್ಮ ‘ಪಾಪ್ಯುಲಿಸ್ಟ್ ಬಜೆಟ್’ ನಿಂದಾಗಿ ೩ ಸಾವಿರ ಕೋಟಿ ದಾಟಿದ್ದ ರಾಜ್ಯದ ಒಟ್ಟು ಆದಾಯ  ಸಂಗ್ರಹ ೧ ಸಾವಿರ ಕೋಟಿಗಿಳಿದಿದೆ. ನೀವೇನೋ ಮೂರು ಬಜೆಟ್ ಮಂಡಿಸಿ ‘ಹ್ಯಾಟ್ರಿಕ್’ ಮಾಡಿದ್ದೇನೆ ಎಂದು ಬೀಗಬಹುದು. ಆದರೆ ನಿಮ್ಮ ಹ್ಯಾಟ್ರಿಕ್‌ನಲ್ಲಿ ಯುವಜನಾಂಗ ಹಾಗೂ ರಾಜ್ಯದ ಅರ್ಥವ್ಯವಸ್ಥೆಯೇ ಕ್ಲೀನ್ ಬೌಲ್ಡ್ ಆಗುವ ಅಪಾಯವಿದೆ. ಅಲ್ಲದೆ ಶಿಕ್ಷಣ ಕ್ಷೇತ್ರದ ಖಾಸಗೀಕರಣದಿಂದಾಗಿ ವಿದ್ಯೆ ಕೂಡ ದುಬಾರಿಯಾಗಿದೆ. ಈಗಿನ ಯುವಜನಾಂಗ ಸಾಲ ಮಾಡಿಕೊಂಡು ವ್ಯಾಸಂಗ ಮುಗಿಸಿ ಡಿಗ್ರಿ ಪಡೆಯುತ್ತಿದೆ. ಹಾಗಿದ್ದರೂ ಅನುಭವ, ದಕ್ಷತೆಯ ನೆಪ ನೀಡಿ ಯುವಜನಾಂಗವನ್ನೇಕೆ ಅತಂತ್ರ ಸ್ಥಿತಿಗೆ ತಳ್ಳುತ್ತಿದ್ದೀರಿ? ಅವರ ಬದುಕನ್ನೇಕೆ ಅನಿಶ್ಚಯತೆಯಡೆಗೆ ದೂಡುತ್ತೀರಿ?
ಇನ್ನಾದರೂ ತಪ್ಪನ್ನು ಅರಿತುಕೊಂಡು, ದುಡಿಯುವ ವಯಸ್ಸು ಮುಗಿದಿರುವ ಅಪ್ಪನಿಗಿಂತ, ಬದುಕು ಕಟ್ಟಿಕೊಳ್ಳ ಬೇಕಾಗಿರುವ ಮಗ/ಮಗಳಿಗೆ ಅವಕಾಶ ಮಾಡಿಕೊಡಿ.

ಈ ಮಾತು ತಪ್ಪಾ?

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: