ನೀನ್ಯಾಕೋ, ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲವೊಂದಿದ್ದರೆ ಸಾಕು!

pg8-25-3-1

ಹಾನ್ಸ್ ಲೂಥರ್ ಅಂದರೆ ಬಹುಶಃ ಯಾರಿಗೂ ಅರ್ಥವಾಗುವುದಿಲ್ಲ. ಮಾರ್ಟಿನ್ ಲೂಥರ್ ಅಂದರೆ ಅಮೆರಿಕದ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಎಂದು ತಪ್ಪಾಗಿ ಗ್ರಹಿಸುವವರೇ ಹೆಚ್ಚು. ಅಣಕವೆಂದರೆ ಕಿಂಗ್‌ಗೆ ಆ ಹೆಸರು ಬಂದಿದ್ದೇ ಜರ್ಮನಿಯ ಮಾರ್ಟಿನ್ ಲೂಥರ್ ಅವರಿಂದ. ಮಾರ್ಟಿನ್ ಲೂಥರ್ ಸಾಮಾನ್ಯ ವ್ಯಕ್ತಿಯಲ್ಲ. ಕ್ರೈಸ್ತಮತಕ್ಕೆ ಒಂದು ಮಹತ್ತರ ತಿರುವು ನೀಡಿದ ಧರ್ಮಸುಧಾರಕ. ಮಾರ್ಟಿನ್ ಲೂಥರ್ ಅವರ ಮೂಲ ಹೆಸರು ಹಾನ್ಸ್ ಲುದರ್, ತದನಂತರ ಲೂಥರ್ ಆಯಿತು. ಅವರು ಹುಟ್ಟಿದ್ದು 1483, ನವೆಂಬರ್ 10ರಂದು, ಜರ್ಮನಿಯಲ್ಲಿ. ಆಗ ಜರ್ಮನಿ ರೋಮನ್ ಸಾಮ್ರಾಜ್ಯದ ಆಡಳಿತಕ್ಕೊಳಪಟ್ಟಿತ್ತು. ಚರ್ಚ್‌ನ ಪ್ರಭಾವ ಅಪರಿಮಿತವಾಗಿತ್ತು. ಇತ್ತ ಮಾರ್ಟಿನ್ ಅವರದ್ದು ಶ್ರಮಜೀವಿಗಳ ಕುಟುಂಬ. ಮಗ ನಾಗರಿಕ ಸೇವೆಗೆ ಸೇರಿ ಕುಟುಂಬಕ್ಕೆ ಒಳ್ಳೆಯ ಹೆಸರು ತರಬೇಕೆಂಬುದು ಅಪ್ಪನ ಹೆಬ್ಬಯಕೆ. 1501ರಲ್ಲಿ 17ನೇ ವಯಸ್ಸಿಗೆ ಎರ್ಫ್‌ರ್ಟ್ ವಿಶ್ವವಿದ್ಯಾಲಯ ಸೇರಿದ ಮಾರ್ಟಿನ್, 1502ರಲ್ಲಿ ಅಂದರೆ ಒಂದೇ ವರ್ಷದಲ್ಲಿ ಪದವಿ ಪೂರೈಸಿದರು. ಮೂರು ವರ್ಷಗಳಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದುಕೊಂಡರು. ಇತ್ತ ಅಪ್ಪನಿಗೆ ಆತನನ್ನು ವಕೀಲನನ್ನಾಗಿ ಮಾಡಬೇಕೆಂಬ ತುಡಿತ ಆರಂಭವಾಯಿತು. ಮಾರ್ಟಿನ್, ಕಾನೂನು ಕಾಲೇಜು ಸೇರಿದರು. ಆದರೆ ಕೆಲವೇ ಸಮಯದಲ್ಲಿ ಬದುಕಿನ ದಿಕ್ಕನ್ನೇ ಬದಲಾಯಿಸುವಂತಹ ಘಟನೆ ಯೊಂದು ಸಂಭವಿಸಿತು.

ಒಂದು ದಿನ ಅವರು ಕಾಲೇಜಿನಿಂದ ಹಿಂದಿರುಗುತ್ತಿರುವಾಗ ಸಮೀಪದಲ್ಲೇ ಭಾರೀ ಸಿಡಿಲೊಂದು ಅಪ್ಪಳಿಸಿತು.

ಭಯಭೀತರಾದ ಮಾರ್ಟಿನ್ ದೇವರಲ್ಲಿ ಮೊರೆಯಿಟ್ಟರು. “ಸಂತ ಆನಾ, ದಯವಿಟ್ಟು ಕಾಪಾಡು, ನಾನೂ  ಸನ್ಯಾಸಿಯಾಗು ತ್ತೇನೆ” ಎಂದು ಮನದಲ್ಲೇ ವಾಗ್ದಾನ ಮಾಡಿದರು. ಹಾಗಾಗಿ ಕಾನೂನು ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು ಧರ್ಮಶಾಸ್ತ್ರ, ತತ್ತ್ವಶಾಸ್ತ್ರ ಗಳನ್ನು ಅಧ್ಯಯನ ಮಾಡಲು ಆರಂಭಿಸಿದರು. 1507ರಲ್ಲಿ ಪಾದ್ರಿಯಾಗಿ ನಿಯುಕ್ತಿಗೊಂಡರು.  ಮರುವರ್ಷವೇ ವಿಟೆನ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ಧರ್ಮಶಾಸ್ತ್ರದ ಬೋಧನೆಯನ್ನೂ ಆರಂಭಿಸಿದರು. 1512ರಲ್ಲಿ ಧರ್ಮಶಾಸ್ತ್ರದಲ್ಲಿನ ಹೆಚ್ಚಿನ ಸಂಶೋ ಧನೆಗಾಗಿ ಮಾರ್ಟಿನ್ ಲೂಥರ್ ಅವರಿಗೆ ವಿಟೆನ್‌ಬರ್ಗ್ ವಿವಿ ಡಾಕ್ಟರೇಟ್ ಪದವಿಯನ್ನೂ ನೀಡಿತು. ಈ ರೀತಿಯ ಉನ್ನತ ವ್ಯಾಸಂಗ, ಶೈಕ್ಷಣಿಕ ಸಂಶೋಧನೆಗಳು ಧರ್ಮಶಾಸ್ತ್ರ, ತತ್ತ್ವಶಾಸ್ತ್ರ, ಧಾರ್ಮಿಕ ನಿಯಮಗಳನ್ನು ಆಳವಾಗಿ ತಿಳಿದುಕೊಳ್ಳಲು ಅನುವು ಮಾಡಿಕೊಟ್ಟವು. ಹಾಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳುತ್ತಾ ಹೋದಂತೆ ಮಾರ್ಟಿನ್‌ರಲ್ಲಿ ಪೋಪ್ ಮತ್ತು ಪಾದ್ರಿಗಳ ಮಾತು-ನಡೆ-ನುಡಿ-ವರ್ತನೆಯ ಬಗ್ಗೆ ಅನುಮಾನ, ಪ್ರಶ್ನೆಗಳೇಳಲಾರಂಭಿಸಿದವು. ಇತ್ತ 1516-17ರಲ್ಲಿ ಜೊಹಾನ್ ಟೆಟ್ಝೆಲ್ ಎಂಬವರನ್ನು ಜರ್ಮನಿಗೆ ಕಳುಹಿಸಿದ ರೋಮನ್ ಕ್ಯಾಥೋಲಿಕ್ ಚರ್ಚ್, ಪಾಪ ವಿಮುಕ್ತಿ ಹೆಸರಿನಲ್ಲಿ ಹಣಸಂಗ್ರಹಣೆ ಮಾಡಲು ಆರಂಭಿಸಿತು. “ಭಗವಂತನಲ್ಲಿನ ಅಚಲ ನಂಬಿಕೆಯೊಂದೇ ಮನುಷ್ಯನ ಪಾಪವನ್ನು ತೊಳೆಯುವುದಿಲ್ಲ, ಅದಕ್ಕೆ ಸತ್ಕಾರ್ಯ, ಔದಾರ್ಯವೂ ಅಷ್ಟೇ ಅಗತ್ಯ” ಎಂದು ಪ್ರತಿಪಾದಿಸಿತು.  ಕ್ಯಾಥೋಲಿಕ್ ಚರ್ಚ್‌ನ ಪ್ರಕಾರ ಸತ್ಕಾರ್ಯವೆಂದರೆ ಚರ್ಚಿಗೆ ದೇಣಿಗೆ ನೀಡುವುದಾಗಿತ್ತು! ಮನುಷ್ಯ ಎಷ್ಟೇ ಪಾಪ ಕಾರ್ಯಗಳನ್ನು ಮಾಡಿದ್ದರೂ ಬಡವ-ಶ್ರೀಮಂತರೆನ್ನದೆ ಎಲ್ಲರೂ ಚರ್ಚ್‌ಗೆ ಇಂತಿಷ್ಟು ವಂತಿಗೆ ನೀಡಿ, ಅದು ಕೊಡುವ ಪ್ಯಾಂಪ್ಲೆಟ್(ಕರಪತ್ರ) ಖರೀದಿ ಮಾಡಿ ಪಾಪವಿಮೋಚನೆ ಮಾಡಿಕೊಳ್ಳಬಹುದಾಗಿತ್ತು!! ರೋಮ್‌ನ ಸೇಂಟ್ ಪೀಟರ್‍ಸ್ ಬ್ಯಾಸಿಲಿಕಾದ ನಿರ್ಮಾಣಕ್ಕೆ ಪೋಪ್ ಈ ರೀತಿ ಹಣ ವಸೂಲಿ ಮಾಡುತ್ತಿದ್ದರು! ಸ್ವತಃ ಕ್ಯಾಥೋಲಿಕ್ ಪಾದ್ರಿಯಾಗಿದ್ದರೂ ಮಾರ್ಟಿನ್ ಲೂಥರ್‌ಗೆ ಇದೇಕೋ ಸರಿ ಕಾಣಲಿಲ್ಲ. ಚರ್ಚ್‌ನ ಇಂತಹ ಧೋರಣೆ ಹಾಗೂ ನಡಾವಳಿಗಳ ವಿರುದ್ಧ ಮಾರ್ಟಿನ್ ಲೂಥರ್ ೯೫ ಪ್ರಶ್ನೆಗಳನ್ನು ಮುಂದಿಟ್ಟರು. “ಒಬ್ಬ ರಾಜನಿಗಿಂತಲೂ ಪೋಪ್  ಶ್ರೀಮಂತರು. ಹಾಗಿರುವಾಗ ಬಡ ಭಕ್ತರ ಹಣದ ಬದಲು ತನ್ನ ಸ್ವಂತ ಹಣದಿಂದ ಪೋಪ್ ಅವರೇಕೆ ಸೇಂಟ್ ಪೀಟರ್ಸ್ ಚರ್ಚ್ ಕಟ್ಟಬಾರದು?”-ಇಂತಹ ಒಂದೊಂದು ಪ್ರಶ್ನೆಗಳೂ ಚರ್ಚ್ ತನ್ನ ಆತ್ಮಾವಲೋಕನ ಮಾಡಿಕೊಳ್ಳುವಂತಿದ್ದವು, ಚರ್ಚ್‌ನ ಸ್ಥಾನಮಾನಕ್ಕೇ ಸವಾಲೆಸೆ ಯುವಂತಿದ್ದವು.

೧೫೧೭ರಲ್ಲಿ ವಿಟೆನ್‌ಬರ್ಗ್‌ನಲ್ಲಿ ಮುಂದಿಟ್ಟ ಇಂತಹ ಪ್ರಶ್ನೆಗಳು “””95 Theses””ಎಂದೇ ಪ್ರಸಿದ್ಧವಾದವು. Protestantism ಪ್ರಾರಂಭವಾಗಿದ್ದೇ ಹಾಗೆ. ಪಾಪ ವಿಮೋಚನೆ ಎಂಬುದು ಹಣ ಕೊಟ್ಟು ಖರೀದಿಸುವ ವಸ್ತುವಲ್ಲ. ಕ್ರೈಸ್ತರು ಇಂತಹ ಹುಸಿ ಭರವಸೆ ಹಾಗೂ ಆಮಿಷಗಳಿಗೆ ಬಲಿಯಾಗಬಾರದು. ಶ್ರದ್ಧೆ, ಭಕ್ತಿ ಹಾಗೂ ಅಚಲ ನಂಬಿಕೆಯ ಮೂಲಕ ಎಲ್ಲರೂ ನೇರವಾಗಿ ದೇವರನ್ನು ತಲುಪಬಹುದು. ದೇವರಿಗೆ ಯಾರೂ ಏಜೆಂಟರಿಲ್ಲ. ಬೈಬಲ್ಲೇ ಅಂತಿಮ ಎಂದರು ಮಾರ್ಟಿನ್. ಪಾದ್ರಿಗಳು ಸನ್ಯಾಸಿಯಾಗಿರಬೇಕೆಂದು ಯಾವ ಧರ್ಮಶಾಸ್ತ್ರವೂ ಹೇಳಿಲ್ಲ ಎಂದ ಅವರು, ಕ್ಯಾಥರಿನಾ ವೊನ್ ಬೋರಾ ಅವರನ್ನು ವಿವಾಹ ಮಾಡಿಕೊಂಡು ಹೊಸ ಮೇಲ್ಪಂಕ್ತಿ ಹಾಕಿಕೊಟ್ಟರು. ಲ್ಯಾಟಿನ್‌ನಲ್ಲಿ ಮಾತ್ರವಿದ್ದ ಬೈಬಲ್ಲನ್ನು ಜರ್ಮನ್‌ಗೆ ಭಾಷಾಂತರ ಮಾಡಿ ಜನಸಾಮಾನ್ಯರೂ ಓದಿ ಅರ್ಥೈಸಿಕೊಳ್ಳುವಷ್ಟು ಸರಳಗೊಳಿಸಿದರು. ಅವರ ಬೋಧನೆಗಳು ಇತರ ಭಾಷೆಗಳಿಗೆ ತರ್ಜುಮೆಗೊಂಡು ಪ್ರಸಾರವಾದವು. ಚರ್ಚೆ ಜತೆ ಕ್ಯಾಥೋಲಿಕ್ ಚರ್ಚ್‌ನೊಂದಿಗೆ ಸಂಘರ್ಷವೂ ಆರಂಭವಾಯಿತು. ಈ ಮಧ್ಯೆ, ಮಾರ್ಟಿನ್ ಲೂಥರ್ ಅವರ ಬರವಣಿಗೆಗಳು ಫ್ರಾನ್ಸ್, ಇಂಗ್ಲೆಂಡ್, ಇಟಲಿ ಯನ್ನೂ ತಲುಪಿದವು. Protestant Reformation  ಆರಂಭವಾಯಿತು. ಏಕೆಂದರೆ ಕ್ಯಾಥೋಲಿಕ್ ಪಂಥ ಗೊಡ್ಡು ಹಿಡಿದಿತ್ತು, ಪ್ರಗತಿಗೆ ಅಡ್ಡವಾಗಿ ನಿಂತಿತ್ತು, ಮೌಢ್ಯವನ್ನು ತುಂಬುತ್ತಿತ್ತು, ಧರ್ಮವನ್ನು ದೈನಂದಿನ ಜೀವನದಿಂದ ಜಗತ್ತಿನ ಎಲ್ಲ ಆಗು-ಹೋಗುಗಳಿಗೂ ಅನ್ವಯಿಸಲಾರಂಭಿಸಿತ್ತು. ಆದರೆ  ವಿeನದ ಪ್ರಗತಿ ಕ್ಯಾಥೋಲಿಕ್ಕರ ಥಿಯರಿಗಳನ್ನೆಲ್ಲ ಅಲ್ಲಗಳೆಯುತ್ತಾ, ಪೊಳ್ಳು ಎಂದು ಸಾಬೀತುಪಡಿಸುತ್ತಾ ಬಂದವು. ಹಾಗಾಗಿ ಕ್ಯಾಥೋಲಿಕ್ಕರು ನಿಕೋಲಸ್ ಕೋಪರ್‌ನಿಕಸ್‌ನ  Heliocentrism ಅನ್ನು ಖಂಡಿಸಿದರು. ಮುಂದೆ Heliocentrism ಅನ್ನು ಸರಿ ಎಂದ ಗೆಲಿಲಿಯೋನನ್ನು ಗೃಹಬಂಧನದಲ್ಲಿಟ್ಟರೆ, ಬ್ರೂನೋನನ್ನು ಸುಟ್ಟುಹಾಕಿದರು. ಡಾರ್ವಿನ್ನನ ವಿಕಾಸವಾದವನ್ನೂ (Evolution Theory) ಒಪ್ಪಲಿಲ್ಲ. ಇದನ್ನೆಲ್ಲಾ ಜನ ಒಂದು ಹಂತದವರೆಗೂ ಸಹಿಸಿಕೊಂಡಿದ್ದರು. ಆದರೆ ಯಾವಾಗ ಕ್ಯಾಥೋಲಿಕ್ ಚರ್ಚ್ ವಿeನಕ್ಕೇ ಅಡ್ಡವಾಗಿ ನಿಲ್ಲಲಾರಂಭಿಸಿತೋ ಆಗ ಕ್ರೈಸ್ತರಾಷ್ಟ್ರಗಳೇ ಕ್ಯಾಥೋಲಿಕ್ ಪಂಥವನ್ನು ಧಿಕ್ಕರಿಸಲಾರಂಭಿಸಿದವು. ಒಂದು ಕಾಲದಲ್ಲಿ ಜಗತ್ತಿನ ಎಲ್ಲ ಕ್ತೈಸ್ತ ರಾಷ್ಟ್ರಗಳನ್ನೂ ಧರ್ಮವೆಂಬ ಕಡಿವಾಣದ ಮೂಲಕ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದ್ದ ಕೇವಲ 110 ಎಕರೆ ವಿಸ್ತಾರದ ವ್ಯಾಟಿಕನ್ ಹಿಡಿತ ಹೆಚ್ಚೂಕಡಿಮೆ ಸಂಪೂರ್ಣವಾಗಿ ಬಿಟ್ಟುಹೋಯಿತು. ಚರ್ಚ್ ಅನ್ನು ಆಡಳಿತದಿಂದ ದೂರವಿಟ್ಟು ಸಂವಿಧಾನಗಳೇ ರಚನೆಯಾದವು.

ಇವತ್ತಿಗೂ ಕ್ಯಾಥೋಲಿಕ್ ಪಂಥ ಗೊಡ್ಡನ್ನು ಬಿಟ್ಟಿಲ್ಲ, ಆದರೆ ದೈನಂದಿನ ಜೀವನವನ್ನೂ ನಿರ್ದೇಶಿಸಲಾರಂಭಿಸಿದ ಗೊಡ್ಡು ಸಂಪ್ರದಾಯಗಳನ್ನು ದೂರತಳ್ಳಿದ ಪ್ರೊಟೆಸ್ಟೆಂಟರು ಪ್ರಗತಿಯನ್ನು ಕಂಡಿದ್ದಾರೆ. ನಿಮಗೇನಾದರೂ ಅನುಮಾನವಿದ್ದರೆ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟೆಂಟ್ ದೇಶಗಳ ಸ್ಥಿತಿಗತಿಗಳನ್ನು ಹೋಲಿಕೆ ಮಾಡಿ ನೋಡಿ… ಗ್ರೀಸ್, ಪೋರ್ಚುಗಲ್, ಆಫ್ರಿಕಾ ಖಂಡ, ದಕ್ಷಿಣ ಅಮೆರಿಕ ಖಂಡ-ಈ ಎಲ್ಲ ಭಾಗಗಳಲ್ಲೂ ಕ್ಯಾಥೋಲಿಕ್ಕರದ್ದೇ ದರ್ಬಾರು. ಈ ಎಲ್ಲ ದೇಶ, ಖಂಡಗಳೂ ದಾರಿದ್ರ್ಯದಿಂದ ಕೂಡಿವೆ. ಇಟಲಿ ತಕ್ಕಮಟ್ಟಿಗೆ ಪರವಾಗಿಲ್ಲ. ಇನ್ನು ಜರ್ಮನಿ, ಫ್ರಾನ್ಸ್, ಬ್ರಿಟನ್, ಅಮೆರಿಕ (ಇವರು ತಮ್ಮನ್ನು ‘Born Again Christians’ ಎಂದು ಕರೆದುಕೊಳ್ಳುತ್ತಾರೆ. ಆದರೂ ಅಮೆರಿಕ ಪ್ರೊಟೆಸ್ಟೆಂಟ್ ದೇಶ) ಮತ್ತು ನೆದರ್‌ಲ್ಯಾಂಡ್, ಸ್ವೀಡನ್, ನಾರ್ವೆ, ಡೆನ್ಮಾರ್ಕ್, ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್-ಮುಂತಾದ ಎಲ್ಲ ಸ್ಕ್ಯಾಂಡಿನೇವಿಯನ್ ರಾಷ್ಟ್ರಗಳೂ ಪ್ರೊಟೆಸ್ಟೆಂಟ್‌ರ ಏಕಸ್ವಾಮ್ಯ ಹೊಂದಿವೆ. ಇವಿಷ್ಟೂ ರಾಷ್ಟ್ರಗಳು ವಿಶ್ವದ ಅತ್ಯಂತ ಅಭಿವೃದ್ಧಿ ಹೊಂದಿದ ಇಲ್ಲವೆ, ಮುಂದುವರಿದ ದೇಶಗಳ ಸಾಲಿನಲ್ಲಿವೆ. ರಷ್ಯಾವಂತೂ ದೇವರ ಮೇಲಿನ ನಂಬಿಕೆಯನ್ನೇ ಕಿತ್ತೊಗೆದಿದ್ದ ರಾಷ್ಟ್ರ. ಈ ರಾಷ್ಟ್ರಗಳು ಯಾವಾಗ ಪೋಪ್ ಮಾತು ಕೇಳುವುದನ್ನು ಬಿಟ್ಟವೋ, ಕ್ರಿಶ್ಚಿಯನ್ ಸೈನ್ಸ್ ಅನ್ನು ದೂರತಳ್ಳಿದವೋ ಆಗ ಉದ್ಧಾರವಾಗಲು ಆರಂಭಿಸಿದವು. ದುರದೃಷ್ಟವಶಾತ್, ಕಾಲದ ಜತೆ ಹೆಜ್ಜೆ ಹಾಕುತ್ತಾ, ಅನಾದಿ ಕಾಲದ ಉದಾಹರಣೆ ಕೊಟ್ಟು ವಿeನದ ಪ್ರಗತಿಯನ್ನು ಒಪ್ಪಿಕೊಳ್ಳುತ್ತಾ, ವೈದ್ಯಪದ್ಧತಿಯನ್ನೂ ಜಗತ್ತಿಗೆ ಕೊಡುತ್ತಾ ಬಂದ ಹಿಂದೂ ಧರ್ಮ, ಕೆಲವು ಬೂದಿ ದಾಸರು, ಅಲ್ಪeನಿ ಜ್ಯೋತಿಷಿಗಳು, ವಾಸ್ತುಶಾಸ್ತ್ರದ ಹೆಸರಿನಲ್ಲಿ ಸುಲಿಗೆಗಿಳಿದಿರುವವರು, ಟಿವಿ ಚಾನೆಲ್‌ಗಳಲ್ಲಿ, ಪತ್ರಿಕೆಗಳಲ್ಲಿ ಹತ್ತು ಬೆರಳಿಗೂ ಉಂಗುರ, ಕುತ್ತಿಗೆಗೊಂದು ದಪ್ಪನೆ ರುದ್ರಾಕ್ಷಿ ಮಾಲೆ ಹಾಕಿಕೊಂಡು ದೈವಾಂಶಸಂಭೂತರಂತೆ ಕಾಣಿಸಿಕೊಳ್ಳುವವರಿಂದಾಗಿ ಡಾಂಭಿಕತೆಯನ್ನು ಪ್ರತಿಪಾದಿಸುವ ಧರ್ಮವಾಗಿ ಗೋಚರಿಸ ಲಾರಂಭಿಸಿದೆ. ಎರಡು ದಿನದ ಹಿಂದೆ ಸಂಭವಿಸಿದ ಸೂರ್ಯ ಗ್ರಹಣವನ್ನೇ ತೆಗೆದುಕೊಳ್ಳಿ. “ಈ ಗ್ರಹಣ ಮೇಷ, ವೃಷಭ ಹಾಗೂ ಕರ್ಕಾಟಕ ರಾಶಿಯವರಿಗೆ ಶುಭಸೂಚಕವಲ್ಲ, ದೋಷ ಪರಿಹಾರಕ್ಕೆ ಇಂತಿಂಥ ಪೂಜೆ, ಶಾಂತಿ ಮಾಡಿಸಬೇಕು, ಇಂತಿಂಥ ಪೂಜೆಗೆ ಇಂತಿಷ್ಟು ಹಣ” ಎಂಬ ಬ್ಯಾನರ್‌ಗಳು ಹಲವಾರು ದೇವಾಲಯಗಳ ಮುಂದೆ ರಾರಾಜಿಸುತ್ತಿದ್ದವು!! ಪಾಪ ಪರಿಹಾರ ಮಾಡಿಕೊಳ್ಳಬೇಕೆಂದರೆ ಹಣ ಕೊಟ್ಟು ಕರಪತ್ರ ಖರೀದಿಸಿ ಎಂದು ಹದಿನೈದನೇ ಶತಮಾನದಲ್ಲಿ ಹೇಳಿದ ರೋಮನ್ ಕ್ಯಾಥೋಲಿಕ್ ಚರ್ಚ್‌ಗೂ, ೨೧ನೇ ಶತಮಾನದಲ್ಲಿ ದೇವಾಲಯಗಳ ಮುಂದೆ ಬ್ಯಾನರ್ ಕಟ್ಟಿ ಹೋಟೆಲ್ ಮೆನು ಥರಾ ಇಂತಿಂಥ ಪೂಜೆಗೆ ಇಂತಿಷ್ಟು ಬೆಲೆ ಬರೆಯುವ ನಮ್ಮ ಪೂಜಾರಿಗಳಿಗೂ ಮತ್ತು ಅವರ ಬಳಿಗೆ ಕಳುಹಿಸುವ ಜ್ಯೋತಿಷಿಗಳಿಗೂ ಏನು ವ್ಯತ್ಯಾಸವಿದೆ? ಇದು Medieval Bullshit ಅಂತ ಅನಿಸುವುದಿಲ್ಲವೆ? ಜ್ಯೋತಿಷಿಗಳೆಂಬ ಬೋರ್ಡು ಹಾಕಿಕೊಂಡಿರುವ ಇವರು  ತಮ್ಮನ್ನು ಏನೆಂದುಕೊಂಡಿ ದ್ದಾರೆ?

ಸಿವಿಲ್ ಎಂಜಿನಿಯರ್‌ಗಳು, ವೈದ್ಯರು, ಖಗೋಳ ಶಾಸ್ತ್ರಜ್ಞರು, ಹವಾಮಾನ ತಜ್ಞರು(ಸೆಟಲೈಟ್) ಎಲ್ಲರ ಕೆಲಸವನ್ನೂ ಇವರೇ ನಿರ್ವಹಿಸುತ್ತಿದ್ದಾರೆ. “ಗ್ರಹಣ ಕಾಲದಲ್ಲಿ ಶಿಶು ಜನನವಾದರೆ ಆ ಮಗುವು ಮರಣವನ್ನು ಹೊಂದೀತು ಅಥವಾ ವ್ಯಾಧಿಗಳು, ಪೀಡೆಗಳು, ದಾರಿದ್ರ್ಯ, ಶೋಕ, ಕಲಹಗಳು ಉಂಟಾದಾವು. ಅದಕ್ಕೆ ಪ್ರಯತ್ನಪೂರ್ವಕವಾಗಿ ಶಾಂತಿಯನ್ನು ಮಾಡಬೇಕು. ಗ್ರಹಣ ಕಾಲದ ನಕ್ಷತ್ರ ಅಥವಾ ನಕ್ಷತ್ರ ದೇವತೆಯ ಚಿನ್ನದ ಪ್ರತಿಮೆಯನ್ನು ಮಾಡಿ, ಸೂರ್ಯಗ್ರಹಣವಾದರೆ ಸೂರ್ಯನ ಚಿನ್ನದ ಪ್ರತಿಮೆ, ಚಂದ್ರಗ್ರಹಣವಾದರೆ ಚಂದ್ರನ ಬೆಳ್ಳಿಯ ಪ್ರತಿಮೆಯನ್ನು ತಯಾರಿಸಿಕೊಂಡು, ರಾಹುವಿನ ಸರ್ಪಾಕಾರದ ಸೀಸದ ಪ್ರತಿಮೆಯನ್ನು ಮಾಡಿ ಗೋಮಯಾದಿ ಲಿಪ್ತವಾದ ಶುದ್ಧ ಪ್ರದೇಶದಲ್ಲಿ ಬಿಳಿವಸ್ತ್ರವನ್ನು ಹಾಸಿ ಅದರಲ್ಲಿ ಈ ಮೂರು ಪ್ರತಿಮೆಗಳನ್ನು ಇಟ್ಟು ಪೂಜಿಸಬೇಕು”.

“ಗ್ರಹಣ ಕಾಲದಲ್ಲಿ ಭೋಜನ ಹಾಗೂ ಸ್ತ್ರೀಪುರುಷ ಸಂಸರ್ಗ ಕೂಡದು”!

ಇಂಥದ್ದನ್ನೆಲ್ಲಾ ಸಮಾಜ ಸಹಿಸಿಕೊಳ್ಳಬೇಕಾಗಿದೆಯೆಂದರೆ ಅದು ಹಿಂದೂ ಧರ್ಮಕ್ಕೆ ದುರ್ಗತಿ ಬಂದಿರುವ ಸಂಕೇತವೋ ಅಥವಾ ಸಮಾಜ ಇಂಥದ್ದನ್ನೆಲ್ಲಾ ನಂಬುವಷ್ಟು ದುಃಸ್ಥಿತಿಗಿಳಿದಿದೆಯೋ ತಿಳಿಯುತ್ತಿಲ್ಲ. ಅಲ್ಲಾ ಗ್ರಹಣದಿಂದಾಗಿ ಗರ್ಭದಲ್ಲಿರುವ, ಗ್ರಹಣದಂದು ಹುಟ್ಟುವ ಮಕ್ಕಳು ಸಾಯು ತ್ತಾರೆ, ಊನ, ಪೀಡೆಗಳಿಗೆ ತುತ್ತಾಗುತ್ತಾರೆ ಎನ್ನುವುದಾದರೆ ವರ್ಷಕ್ಕೊಮ್ಮೆ ಗ್ರಹಣ ಬಂದೇ ಬರುತ್ತದೆ. ಮಹಿಳೆಯೊಬ್ಬಳು ಒಂಬತ್ತು ತಿಂಗಳು ಗರ್ಭ ಧರಿಸಿರುತ್ತಾಳೆ. ಹಾಗಾದರೆ ಗ್ರಹಣದಿಂದಾಗಿ ಈ ದೇಶದಲ್ಲಿ ಜಗತ್ತಿನಲ್ಲಿ ಜನಿಸುವ ೭೦ ಪರ್ಸೆಂಟ್‌ಗೂ ಅಧಿಕ ಮಕ್ಕಳು ಒಂದಲ್ಲ ಒಂದು ವ್ಯಾಧಿ, ಊನಗಳಿಗೆ ತುತ್ತಾಗಬೇಕಲ್ಲವೆ? ವಸ್ತುಸ್ಥಿತಿ ಹಾಗಿದೆಯೇ? ಜ್ಯೋತಿಷ್ಯಶಾಸ್ತ್ರವೆಂಬ ವಿeನದ ಹೆಸರಿನಲ್ಲಿ ಈ ಸೋಗಲಾಡಿ ಜ್ಯೋತಿಷಿಗಳು ಸಮಾಜವನ್ನು ದಾರಿ ತಪ್ಪಿಸುತ್ತಿರುವುದನ್ನು, ಧರ್ಮಕ್ಕೆ ಮೌಢ್ಯದ ಕಳಂಕ ಅಂಟಿಸುತ್ತಿರುವುದನ್ನು ಎಷ್ಟು ದಿನ ಅಂತ ಸಹಿಸಿಕೊಳ್ಳುವುದು? ಅಷ್ಟಕ್ಕೂ ಧರ್ಮ ಅನ್ನುವುದು Wisdom Based (ವಿವೇಕ ಆಧಾರಿತ) ಆಗಿರಬೇಕು. ಶ್ರದ್ಧೆ, ವಿಶ್ವಾಸಕ್ಕೆ ಅಧ್ಯಾತ್ಮದ ಬುನಾದಿ ಬೇಕು. ಇಲ್ಲವೆಂದರೆ ಕಂದಾಚಾರವಾಗುತ್ತದೆ. ನಾವು ಯಾವಾಗ ಧರ್ಮವನ್ನು “Ritual Based” ಅಥವಾ ಆಚಾರ ಆಧಾರಿತ ವನ್ನಾಗಿ ಮಾಡಲು ಹೊರಡುತ್ತೇವೋ ಆಗ ಅದು ನಮ್ಮನ್ನು ಕೊಂಡೊಯ್ಯುವುದು ಕಂದಾಚಾರದತ್ತಲೇ. ಅಣಕವೆಂದರೆ ಜಗತ್ತಿನ ಆಗು-ಹೋಗುಗಳನ್ನು, ರಾಜಕಾರಣಿಗಳ ಚುನಾವಣಾ ಭವಿಷ್ಯವನ್ನು, ಗ್ರಹಗತಿಗಳನ್ನು, ಯಾವಾಗ ಶೌಚಕ್ಕೆ ಹೋಗಬಾರದು ಎಂಬುದನ್ನೂ ಹೇಳುವ ಈ ಜ್ಯೋತಿಷಿ ಮಹಾಪ್ರಭುಗಳು ತಮ್ಮ ದೇಹದೊಳಗಿನ ಬಿಪಿ, ಶುಗರ್ ಮಟ್ಟವನ್ನು ಪರೀಕ್ಷಿಸಿಕೊಳ್ಳಲು, ಹೃದಯ ಬಡಿತವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ವೈದ್ಯರ ಬಳಿಗೇ ಹೋಗುತ್ತಾರೆ.

ಗುರು ವಸಿಷ್ಠ ತೋ ಪಂಡಿತ eನಿ ಸೀತಾರಾಮ ಮಿಲನಕರೆ!
ದಶರಥ ಮರಣ ಸೀತಾ ಹರಣ ಧರ ಧರ ಭಟಕತ ರಾಮ ಫಿರೆ!!

ಅಂದರೆ ಕಾಲeನಿಯಾದ ವಸಿಷ್ಠ ಮಹರ್ಷಿಗಳು ನಿಂತು ಮಾಡಿಸಿದ ರಾಮ-ಸೀತೆಯರ ವಿವಾಹವೇ ಬಿರುಗಾಳಿಗೆ ಸಿಕ್ಕುತ್ತದೆ, ದಶರಥ ಸಾಯುತ್ತಾನೆ, ಸೀತೆಯ ಅಪಹರಣವಾಗುತ್ತದೆ ಅಂತ ಸಂತ ಕಬೀರರು ಹೇಳುತ್ತಾರೆ.  ಇನ್ನು “ಅನಾಥಾಲಯ” ಅನ್ನುವ ಬದಲು ‘ಜ್ಯೋತಿಷ್ಯಾಲಯ” ಎಂಬ ಬೋರ್ಡು ನೇತುಹಾಕಿಕೊಂಡಿರುವ ದುಡ್ಡಿನ ಪೀಡೆಗಳು ನಮ್ಮ ಗ್ರಹಗತಿ ಬದಲಿಸಿಯಾವೆ? ಮೊನ್ನೆ ಗ್ರಹಣದ ದಿನದಂದು ಒಬ್ಬ ಕೂಲಿ ಕಾರ್ಮಿಕನ ಮನೆಯಲ್ಲಿ ಶಿಶು ಜನನವಾಗಿದ್ದರೆ ಆತ ಏನು ಮಾಡಬೇಕು? ಚಿನ್ನ, ಬೆಳ್ಳಿ ಪ್ರತಿಮೆ ಮಾಡಿ, ಹೋಮ-ಹವನ ಮಾಡಿಸಲು ಅವನಿಗೆ ಸಾಧ್ಯವಿದೆಯೇ? ಮಾಡಿಸಲಿಲ್ಲ ಅಂದರೆ ಅವನು ಸಾಯುವವರೆಗೂ ನರಕ ಅನುಭವಿಸಬೇಕೇ? ಕಷ್ಟಕಾರ್ಪಣ್ಯದಲ್ಲೇ ಬದುಕು ಸವೆಸಬೇಕೆ? ಆತನ ಮಕ್ಕಳು ವ್ಯಾಧಿಗೆ ತುತ್ತಾಗುತ್ತಾರೆಯೇ? ದುಡ್ಡಿದ್ದವರು ಕಾಳಹಸ್ತಿಗೆ ಹೋಗುತ್ತಾರೆ, ನಾಗ ಪ್ರತಿಷ್ಠಾನ, ಸರ್ಪ ಸಂಸ್ಕಾರ ಮಾಡಿಸುತ್ತಾರೆ, ಗೋದಾನ ಮಾಡುತ್ತಾರೆ. ದುಡ್ಡಿಲ್ಲದ ಬಡ ಹಿಂದೂ ಏನು ಮಾಡಬೇಕು? ಬಡವರಾರೂ ಹಿಂದೂ ಧರ್ಮದಲ್ಲಿ ಹುಟ್ಟಬಾರದೆ? ಕೂಲಿ ಕಾರ್ಮಿಕನೊಬ್ಬನನ್ನು ಹುಟ್ಟಿನಿಂದಲೇ ಶನಿ ಅಂಟಿಕೊಂಡಿರುತ್ತಾನೆ, ಅವನೇನು ಮಾಡಬೇಕು? ಒಬ್ಬ ದಲಿತನಾದವನು ಧರ್ಮವನ್ನೇ ಬಿಟ್ಟು ಹೋಗಬೇಕೇ?

ನೀವು ಬೆಳಗ್ಗೆ ಎದ್ದು ಯಾವುದೇ ಟಿವಿ ಚಾನೆಲ್ ಹಾಕಿ, ಒಂದೊಂದು ಚಾನೆಲ್‌ನಲ್ಲಿ ಒಬ್ಬೊಬ್ಬ ಜ್ಯೋತಿಷಿ ಕುಳಿತುಕೊಂಡಿರು ತ್ತಾರೆ. ಅವರ ಪಕ್ಕದಲ್ಲೇ ಸುಂದರ ಯುವತಿಯೂ ಆಸೀನಳಾಗಿರು ತ್ತಾಳೆ. ಅವಳು, ಫೋನ್ ಕನೆಕ್ಟ್ ಆದ ಕೂಡಲೇ ಒಂದೆರಡು ಪ್ರಾಸ್ತಾವಿಕ ಮಾತುಗಳನ್ನಾಡಿ, “ಓವರ್ ಟು ಸ್ವಾಮೀಜಿ” ಎನ್ನುವಂತೆ ಕರೆ ಮಾಡಿದ ಪೆಕರರನ್ನು ಸ್ವಾಮೀಜಿ ಮಹಾಶಯರಿಗೆ ಒಪ್ಪಿಸಿ ಬಿಡುತ್ತಾಳೆ. ಆ ಮೇಲೆ ನೋಡಿ ಗಿಲೀಟು ಆರಂಭವಾಗುತ್ತದೆ.

ನಿನ್ನ ಹೆಸರೇನಮ್ಮಾ?
ಏನು ಸಮಸ್ಯೆ?
ಸ್ವಾಮೀಜಿ ನನ್ನ ಮಗಳದ್ದು ಸ್ವಲ್ಪ ಪ್ರಾಬ್ಲಮ್ಮು…
ಹೌದಾ, ಮಗಳ ಹೆಸರೇನು?
ವಯಸ್ಸೆಷ್ಟು?
ರಾಶಿ ಯಾವುದು?
ನಕ್ಷತ್ರ?
ಹೌದಾ… ಅವಳಿಗೆ ಮನಸ್ಸು ಸ್ವಲ್ಪ ಸರಿಯಿಲ್ಲಾ, ಚಂಚಲ, ಮನಸ್ಸನ್ನು ಕಂಟ್ರೋಲ್ ಮಾಡಿಕೊಂಡರೆ ಮುಂದೆ ಒಳ್ಳೆಯ ಸಾಧನೆ ಮಾಡುತ್ತಾಳೆ. ಒಳ್ಳೆಯದಾಗಲಿ. ನಮಸ್ಕಾರ…. ‘ಉಷೆ’ ಚಾನೆಲ್ ಆಂಕರ್‌ಗಳಿಗೂ  ಟಿವಿ ಜ್ಯೋತಿಷಿಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರೂ ಯಾಂತ್ರಿಕ. ಇವರಿಗೆ “ಶ್ರೀ, ಶ್ರೀ, ಶ್ರೀ”, “ಸ್ವಾಮೀಜಿ” ಎಂಬ “”Pre-Fix”, “”Post-Fix”
ಗಳನ್ನು ಕೊಟ್ಟಿದ್ದು ಯಾವ ವಿಶ್ವವಿದ್ಯಾಲಯ?

“ಯಾರಿಗೆ ಆತ್ಮಬಲ, ಬುದ್ಧಿ ಬಲ, ಬಾಹುಬಲವಿಲ್ಲವೋ ಅವರಿಗೆ ಆಕಾಶದಲ್ಲಿರುವ ತಾರಾಬಲ ಏನು ಮಾಡುತ್ತದೆ?” ಎಂದು ಕರ್ನಾಟಕದ ಸಂಸ್ಕೃತ ವಿದ್ವಾಂಸ ಸೋಮದೇವ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ. ಸುಖದಿಂದ ಇದ್ದವರಾರೂ ಇತಿಹಾಸ ಸೃಷ್ಟಿಸಲಿಲ್ಲ. ಇತಿಹಾಸ ಸೃಷ್ಟಿಯಾಗಿದ್ದು ಕಷ್ಟಸಾಧಕರಿಂದಲೇ. ಆದರೆ ಬುದ್ಧಿವಂತರಾಗಿರುವವರು ವಾಸ್ತು, ಜ್ಯೋತಿಷ್ಯ ಅಂತ ಮೋಸ ಮಾಡಬಾರದು. ಸಾಮಾನ್ಯವಾಗಿ ಜ್ಯೋತಿಷಿಗಳ ಬಳಿಗೆ ಹೋಗುವವರು, ಟಿವಿ ಜ್ಯೋತಿಷಿಗಳಿಗೆ ಕರೆ ಮಾಡುವವರು ಸಂಕಷ್ಟದಲ್ಲಿರುವವರು, ನೊಂದವರು ಆಗಿರುತ್ತಾರೆ. ಇಂಥವರನ್ನು ದಾರಿ ತಪ್ಪಿಸಿ ಸುಲಿಗೆ ಮಾಡಿದರೆ ಸಮಾಜ ಮೌಢ್ಯ ಹಾಗೂ ಅಧಃಪತನದತ್ತ ಸಾಗದೇ ಇದ್ದೀತೆ? ಇವತ್ತೂ ಕ್ರೈಸ್ತರಲ್ಲಿ ಯಾರಾದರು ಪಾದ್ರಿಗಳ ಬಳಿಗೆ ಹೋಗಿ ಕಷ್ಟ ಹೇಳಿಕೊಂಡರೆ, ನೋವು ತೋಡಿಕೊಂಡರೆ ಮೊದಲು ತಾಳ್ಮೆಯಿಂದ ಸಮಸ್ಯೆಯನ್ನು ಆಲಿಸಿ, ಅನುಕಂಪದಿಂದ ಒಂದೆರಡು ಮಾತುಗಳನ್ನಾಡಿ ಧೈರ್ಯ ತುಂಬಿ ನಂತರ ದೇವರನ್ನು ಪ್ರಾರ್ಥಿಸು ಎಂದು ಕಳುಹಿಸುತ್ತಾರೆ. ನಮ್ಮ ಜ್ಯೋತಿಷಿಗಳೂ ಅಂತಹ ತಾಳ್ಮೆ, ಅನುಕಂಪವನ್ನು ಬೆಳೆಸಿಕೊಳ್ಳಬೇಕೇ ಹೊರತು ಕಿಸೆಗೆ ಕತ್ತರಿ ಹಾಕುವ ಬಗ್ಗೆಯೇ ಚಿಂತಿಸಬಾರದು. “”Pump and Pray”  ಅನ್ನುವ ಹಾಗೆ ದುರ್ಬಲ ಮನಸ್ಸುಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಮಿಗಿಲಾಗಿ, ಜನಸಾಮಾನ್ಯರಾದ ನಾವೂ ಕೂಡ ಜ್ಯೋತಿಷಿಗಳು, ಸೋಗಲಾಡಿಗಳು ನಮ್ಮ ದೈನಂದಿನ ಜೀವನವನ್ನು Dictate ಮಾಡಲು ಬಿಡಬಾರದು. ಅಷ್ಟಕ್ಕೂ,””When you are in doubt, refer to your mind, not book”- (ಸಂದೇಹ ಬಂದಾಗ ಮನದ ಮಾತು ಕೇಳು, ಪುಸ್ತಕದ್ದಲ್ಲ.) ಎಂದು ಗೌತಮ ಬುದ್ಧ ಹೇಳಿರುವ ಮಾತೇ ಇದೆಯಲ್ಲವೆ?

ಈ ಹಿಂದೆ ಕೇಂದ್ರ ಮಾನವ ಸಂಪನ್ಮೂಲ ಸಚಿವರಾಗಿದ್ದ ಮುರಳಿ ಮನೋಹರ ಜೋಶಿಯವರು ಜ್ಯೋತಿಷ್ಯವನ್ನು ಒಂದು ವಿಷಯವಾಗಿ ವಿವಿಗಳಲ್ಲಿ ಅಳವಡಿಸಲು ಹೊರಟಿದ್ದು ಹೋಮ- ಹವನ ಮಾಡುವವರ ಸಂಖ್ಯೆಯನ್ನು ಹೆಚ್ಚು ಮಾಡುವುದಕ್ಕಲ್ಲ. ಅಷ್ಟಕ್ಕೂ ಮಂತ್ರ ಹೇಳುವುದಕ್ಕೆ ಎಷ್ಟು ಬೇಕೋ ಅಷ್ಟು ಸಂಸ್ಕೃತ ಉಚ್ಚಾರಣೆಯನ್ನು ಕಲಿತಿರುವವರಿಂದ ಜ್ಯೋತಿಷ್ಯಕ್ಕೂ ಒಳ್ಳೆಯ ಹೆಸರು ಬರುವುದಿಲ್ಲ, ಸಮಾಜಕ್ಕೂ ಒಳ್ಳೆಯದಾಗುವುದಿಲ್ಲ. ಜ್ಯೋತಿಷ್ಯ ಖಂಡಿತ ಗೊಡ್ಡಲ್ಲ,ಆದರೆ ಹಾದಿ-ಬೀದಿಗೊಬ್ಬರಂತಿರುವ ಜ್ಯೋತಿಷಿ ಎಂಬ ಹಣೆಪಟ್ಟಿಹಾಕಿಕೊಂಡಿರುವವರು ಖಂಡಿತ ಜ್ಯೋತಿಷ್ಯ ಶಾಸ್ತ್ರಕ್ಕೆ ಅಪಚಾರವೆಸಗುತ್ತಿದ್ದಾರೆ. ಜ್ಯೋತಿಷ್ಯವನ್ನು ನಾವು ಒಂದು ವಿeನದಂತೆ ಕಾಣಬೇಕು. ಪ್ರಕೃತಿಯ ಏರುಪೇರು, ಗ್ರಹಣ, ಕಾಲಮಾನ ಪತ್ತೆಗೆ ಸದ್ವಿನಿಯೋಗ ಮಾಡಿಕೊಳ್ಳಬಹುದು. ಖಗೋಳಶಾಸ್ತ್ರದ ಬಗ್ಗೆ ಅರಿತುಕೊಳ್ಳುವಲ್ಲಿ ಜ್ಯೋತಿಷ್ಯಶಾಸ್ತ್ರ  ಸಾಕಷ್ಟು ಉಪಯೋಗವಾಗಿದೆ. ಈ ಹಿನ್ನೆಲೆಯಲ್ಲಿ ಜ್ಯೋತಿಷ್ಯವನ್ನು ಒಂದಿಷ್ಟು ವಿeನದಂತೆ, ಮತ್ತೊಂದಿಷ್ಟು ಮನಃಶಾಸ್ತ್ರದಂತೆ ತೆಗೆದುಕೊಳ್ಳಿ. ಅದನ್ನೂ ಮೀರಿ ನೋಡುವುದಾದರೆ ಜ್ಯೋತಿಷ್ಯವನ್ನು  ‘Speculative Science” ಥರಾ ಕಾಣ ಬೇಕೇ ಹೊರತು, ಅದರ ಕೈಗೆ ನಮ್ಮ ಬುದ್ಧಿಯನ್ನೇ ಕೊಡುವುದು, ಅದು ವಿಚಾರಪರತೆಯನ್ನೇ ಡಾಮಿನೇಟ್ ಮಾಡಲು ಬಿಡುವುದು ಎಷ್ಟು ಸರಿ?

ಸಕಲ ಗ್ರಹಬಲ ನೀನೇ ಸರಸಿಜಾಕ್ಷ ನಿಖಿಲ ವ್ಯಾಪಕ ನೀನೇ ವಿಶ್ವ ರಕ್ಷಾ…
ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕು…

ಎಂದು ಪುರಂದರ ದಾಸರು ಹೇಳುತ್ತಾರೆ. ದೇವರ ಮೇಲೆ ವಿಶ್ವಾಸವಿಟ್ಟು ಸ್ವಪ್ರಯತ್ನ ಮುಂದುವರಿಸಿ. ಅಷ್ಟಕ್ಕೂ ದುಡಿಮೆಯೇ ದೇವರೆಂಬ ಮಾತಿಲ್ಲವೆ?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: