ನೀವೇ ಹೇಳಿ, ದೇಶವನ್ನು ದಾರಿತಪ್ಪಿಸುತ್ತಿರುವವರಾರು?

“ಈ ದೇಶ ಕಂಡ ಅತ್ಯಂತ ದುರ್ಬಲ ಪ್ರಧಾನಿಯೆಂದರೆ ಮನಮೋಹನ್ ಸಿಂಗ್” ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ ಆಡ್ವಾಣಿಯವರು ಹೇಳುತ್ತಲೇ ಬಂದಿದ್ದಾರೆ. ಅಷ್ಟು ಸಾಲದೆಂಬಂತೆ ಈಗ ಹೊಸ ರಾಗ ಎಳೆದಿದ್ದಾರೆ. ಅಮೆರಿಕದೊಂದಿಗಿನ ನಾಗರಿಕ ಅಣು ಸಹಕಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ಮೇಲೆ ಹರಿಹಾಯ್ದಿರುವ ಆಡ್ವಾಣಿಯವರು, ‘ಪ್ರಧಾನಿ ಮನಮೋಹನ್ ಸಿಂಗ್ ದೇಶವನ್ನು ದಾರಿತಪ್ಪಿಸಿದ್ದಾರೆ’ ಎಂದು ಹೊಸ ಆರೋಪ ಮಾಡಿದ್ದಾರೆ. ಆದರೆ ಮನಮೋಹನ್ ಸಿಂಗ್ ನಿಜಕ್ಕೂ ದೇಶವನ್ನು ದಾರಿತಪ್ಪಿಸಿದ್ದಾರೆಯೇ? ಒಂದು ವೇಳೆ ಆಡ್ವಾಣಿಯವರು ಹೇಳಿದಂತೆ ಅವರು ದುರ್ಬಲ ಪ್ರಧಾನಿಯಾಗಿದ್ದರೆ, ಕುರ್ಚಿಗೆ ಅಂಟಿಕೊಳ್ಳುವ ಬುದ್ಧಿ ಅವರದ್ದಾಗಿದ್ದರೆ ದೇಶದ ಹಿತಾಸಕ್ತಿಗಾಗಿ ಮಾಡಿಕೊಂಡಿರುವ ಅಣು ಸಹಕಾರ ಒಪ್ಪಂದಕ್ಕಾಗಿ ಅವರು ತಮ್ಮ ಪ್ರಧಾನಿ ಸ್ಥಾನವನ್ನೇ ಅಪಾಯಕ್ಕೆ ತಂದೊಡ್ಡಿಕೊಳ್ಳುತ್ತಿದ್ದರೆ? ನಿಮಗೆ ಎಡಪಕ್ಷಗಳು ಹಾಗೂ ಬಿಜಪಿಯ ತಥಾಕಥಿತ ವಾದದಲ್ಲಿ ವಿಶ್ವಾಸವಿದೆಯೊ ಅಥವಾ ಮಧ್ಯಮ ವರ್ಗದ ಕನಸುಗಳನ್ನು ಸಾಕಾರಗೊಳಿಸಿದ ಹಾಗೂ ೧೯೯೧ರಲ್ಲಿ ದಿವಾಳಿ ಅಂಚಿಗೆ ತಲುಪಿದ್ದ ದೇಶದ ಅರ್ಥವ್ಯವಸ್ಥೆಯನ್ನು  ಸರಿಪಡಿಸಿ ಇಂದು ವಿಶ್ವದ ಬಲಿಷ್ಠ ಅರ್ಥವ್ಯವಸ್ಥೆಗಳಲ್ಲಿ ಒಂದಾಗುವಂತೆ ಮಾಡಿರುವ ಮನಮೋಹನ್ ಸಿಂಗ್ ಸಾಮರ್ಥ್ಯ ಮತ್ತು ಸಮಗ್ರತೆಯ ಮೇಲೆ ವಿಶ್ವಾಸವಿಡುತ್ತರೋ? ಈ ಹಿನ್ನೆಲೆಯಲ್ಲಿ ಕಳೆದ ಆಗಸ್ಟ್‌ನಲ್ಲಿ ಇದೇ ಅಂಕಣದಲ್ಲಿ ಪ್ರಕಟವಾಗಿದ್ದ ಲೇಖನವೊಂದನ್ನು ಮತ್ತೆ ನೆನಪಿಸಿಕೊಳ್ಳಬೇಕಾಗಿ ಬಂದಿದೆ.

ಇದು ಎರಡು ಬೀದಿ ನಾಯಿಗಳ ಕಥೆ.

ಒಂದು ಭಾರತದ್ದು. ಮತ್ತೊಂದು ಚೀನಾದ್ದು. ಭಾರತದ ನಾಯಿ ಚೀನಾಕ್ಕೆ ಹೊರಟಿತ್ತು. ಚೀನಾದ ನಾಯಿ ಭಾರತದತ್ತ ಹೊರಟಿತ್ತು. ಹೀಗೆ ದೇಶ ಬಿಟ್ಟು ಹೊರಟಿದ್ದ ಆ ಎರಡೂ ನಾಯಿಗಳು ಭಾರತ- ಚೀನಾ ಗಡಿಯಲ್ಲಿ ಮುಖಾಮುಖಿಯಾಗುತ್ತವೆ. ಭಾರತದ ನಾಯಿ ಸೊರಗಿ  ಬಡಕಲಾಗಿ ಹೋಗಿರುತ್ತದೆ. ಇತ್ತ ಮೈ ಕೈ ತುಂಬಿಕೊಂಡು ದಷ್ಟ-ಪುಷ್ಟವಾಗಿದ್ದ ಚೀನಿ ನಾಯಿ, “ಯಾಕೆ ಚೀನಾಕ್ಕೆ ಹೊರಟಿದ್ದೀಯಾ?” ಅಂತ ಭಾರತದ ನಾಯಿಯನ್ನು ಪ್ರಶ್ನಿಸುತ್ತದೆ. “ಭಾರತದಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲ. ಆಹಾರ ಹುಡುಕಿಕೊಂಡು ಹೋದರೆ ಜನ ಕಲ್ಲು ಹೊಡೆಯುತ್ತಾರೆ. ಆದರೆ ನಿಮ್ಮ ದೇಶದಲ್ಲಿ ಸರಕಾರದವರೇ ಹೊಟ್ಟೆ ತುಂಬಾ ಊಟ ಹಾಕುತ್ತಾರಂತಲ್ಲ. ಅದಕ್ಕೇ ಚೀನಾಕ್ಕೆ ಹೊರಟಿದ್ದೀನಿ” ಅನ್ನುತ್ತದೆ ಭಾರತದ ನಾಯಿ. ಅಷ್ಟಕ್ಕೇ ಸುಮ್ಮನಾಗುವುದಿಲ್ಲ, “ಅಲ್ಲಾ, ಹೊಟ್ಟೆ ತುಂಬ ಊಟ ಕೊಡುವ ದೇಶ ಬಿಟ್ಟು ನೀನೇಕೆ ಭಾರತಕ್ಕೆ ಹೊರಟಿದ್ದೀಯಾ?” ಅಂತ ಚೀನಿ ನಾಯಿಯಮ್ನಿ ಕೇಳುತ್ತದೆ. “ಚೀನಾದಲ್ಲಿ ಹೊಟ್ಟೆ-ಬಟ್ಟೆಗೆ ಯಾವ ಕೊರತೆ ಇಲ್ಲದಿದ್ದರೂ ಅಲ್ಲಿ ಬೊಗಳುವ ಸ್ವಾತಂತ್ರ್ಯವೇ ಇಲ್ಲ! ನಮ್ಮ ಹುಟ್ಟು ಗುಣವನ್ನು ಬಿಟ್ಟಿರುವುದಾದರೂ ಹೇಗೆ? ಭಾರತದಲ್ಲಿ ಊಟಕ್ಕೆ ಕೊರತೆಯಿದ್ದರೂ ಬೊಗಳುವ ಸ್ವಾತಂತ್ರ್ಯಕ್ಕೆ ಯಾವ ಅಡ್ಡಿಯೂ ಇಲ್ಲ, ಅಷ್ಟು ಸಾಕು” ಎನ್ನುತ್ತದೆ ಚೀನಾ ನಾಯಿ!!

ನಮ್ಮ ಕಮ್ಯುನಿಸ್ಟರನ್ನು ನೋಡಿದರೇ ಗೊತ್ತಾಗುವುದಿಲ್ಲವೇ ಚೀನಿ ನಾಯಿಯ ಮಾತಿನಲ್ಲಿ ಎಷ್ಟೊಂದು ಸತ್ಯ ಅಡಗಿದೆ ಎಂಬುದು?! ಅವರು ಅಧಿಕಾರದಲ್ಲಿರುವುದು ಕೇವಲ ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಾದರೂ ಅವರ ಬೊಬ್ಬೆ ಮಾತ್ರ ದೇಶದುದ್ದಗಲಕ್ಕೂ ಕೇಳುತ್ತದೆ. ಆದರೆ ಯಾಕೆ ಬೊಬ್ಬೆ ಹಾಕುತ್ತಾರೆನ್ನುವುದು ಮಾತ್ರ ಯಾರಿಗೂ ಗೊತ್ತಾಗುವುದಿಲ್ಲ.

ಈ ಮಾತನ್ನು ಏಕೆ ಪದೇ ಪದೆ ಹೇಳಬೇಕಾಗಿ ಬಂದಿದೆಯೆಂದರೆ…. ಪ್ರಸ್ತುತ ನಮ್ಮ ದೇಶದಲ್ಲಿ (ತಾರಾಪುರ, ಕೈಗಾ, ಕಕಾಪಾರ್, ನರೋರಾ, ಕಲ್ಪಾಕಂ ಹಾಗೂ ರಾವತ್‌ಭಾಟ) ಒಟ್ಟು ೧೭ ನ್ಯೂಕ್ಲಿಯರ್ ಪವರ್(ಅಣುಶಕ್ತಿ) ರಿಯಾಕ್ಟರ್‌ಗಳಿದ್ದು, ಅವುಗಳಿಂದ ೩,೭೭೯ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಆದರೆ ಯಾವುದೇ ಒಂದು ರಾಷ್ಟ್ರದ ಅಭಿವೃದ್ಧಿಗೆ ಅಪಾರ ಶಕ್ತಿ ಮೂಲಗಳು ಬೇಕೇ ಬೇಕು. ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದು ತ್ತಿರುವ ಭಾರತದ ಅರ್ಥವ್ಯವಸ್ಥೆಯ ಬೆಳವಣಿಗೆಗೂ ಆಗಾಧ ಪಮಾಣದ ಶಕ್ತಿಯ ಅಗತ್ಯವಿದೆ. ಅದಕ್ಕಾಗಿಯೇ ರಾಷ್ಟ್ರಪತಿ ಸ್ಥಾನದಿಂದ ನಿರ್ಗಮಿಸುವ ಮೊದಲು ಅಬ್ದುಲ್ ಕಲಾಂ ಅವರು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ, “ನಮಗೆ ಪೊಲಿಟಿಕಲ್ ಇಂಡಿಪೆಂಡೆನ್ಸ್ ಸಿಕ್ಕಿದೆ. ಫುಡ್ ಇಂಡಿಪೆಂಡೆನ್ಸ್ ಅನ್ನೂ ಸಾಧಿಸಿದ್ದಾಗಿದೆ. ಒಂದು ವೇಳೆ ನಮ್ಮ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವೆನಿಸಿಕೊಳ್ಳಬೇಕೆಂದಾದರೆ ನಾವು ‘ಎನರ್ಜಿ ಇಂಡಿಪೆಂಡೆನ್ಸ್’ ಅನ್ನೂ  ಸಾಧಿಸಬೇಕು” ಎಂದು ಹೇಳಿದ್ದು. ಆದರೆ ಇಂತಹ ಎನರ್ಜಿ ಎಲ್ಲಿಂದ ಬರಬೇಕು? ಇದ್ದಿಲು, ಕಲ್ಲಿದ್ದಿಲು, ಹೈಡೋಕಾರ್ಬನ್ಸ್, ಪೆಟೋಲಿಯಂ ಮುಂತಾದ Fossil fuels ಎಷ್ಟು ದಿನ ಉಳಿದಾವು? ಬಸಿದಷ್ಟೂ ಬರಲು ಅವುಗಳೇನೂ ಅಕ್ಷಯ ಪಾತ್ರೆಗಳಲ್ಲ. ಅವು ಒಂದಲ್ಲ ಒಂದು ದಿನ ಬರಿದಾಗುವಂತಹ ನೈಸರ್ಗಿಕ ಶಕ್ತಿ ಮೂಲಗಳು. ಇನ್ನು ಅಣೆಕಟ್ಟು ಕಟ್ಟಿ ಜಲವಿದ್ಯುಚ್ಛಕ್ತಿ ಉತ್ಪಾದನೆ ಮಾಡೋಣವೆಂದರೆ ಒಂದೊಂದು ಅಣೆಕಟ್ಟು ಕಟ್ಟಲು ಕನಿಷ್ಠ ೪೦೦-೫೦೦ ಕೋಟಿ ರೂ.ಗಳು ಬೇಕಾಗುತ್ತವೆ. ಇಷ್ಟೊಂದು ಹಣವನ್ನು ಕಲೆ ಹಾಕಿದರೂ ಅಣೆಕಟ್ಟೊಂದನ್ನು ನಿರ್ಮಾಣ ಮಾಡಲು ಕನಿಷ್ಠ ೧೫ರಿಂದ ೨೦ ವರ್ಷಗಳು ಬೇಕಾಗುತ್ತವೆ. ಲಕ್ಷಾಂತರ ಎಕರೆ ಭೂಮಿಯೂ ಮುಳುಗಡೆಯಾಗಬೇಕಾಗುತ್ತದೆ. ಜತೆಗೆ ಪರಿಸರ ಹಾನಿ, ನಿರ್ವಸತಿ ಎಂಬ ಕೂಗು ಪಾರಂಭವಾಗುತ್ತದೆ. ಕೋರ್ಟು-ಖಟ್ಲೆ ಅಂತ ಕಾಟ ಶುರುವಾಗುತ್ತದೆ. ಇಂತಹ ಅಡ್ಡಿ-ಆತಂಕಗಳೆಲ್ಲವನ್ನೂ ಮೀರಿ ಅಣೆಕಟ್ಟು ನಿರ್ಮಾಣ ಮಾಡಿದರೂ ಮಳೆಯೇ ಕೈಕೊಟ್ಟರೆ? ಹಾಗಾಗಿ, ನಾವು ಬದಲಿ ಶಕ್ತಿ ಮೂಲಗಳನ್ನು ಅನಿವಾರ್ಯವಾಗಿಯಾದರೂ ಕಂಡುಕೊಳ್ಳಲೇಬೇಕಾಗಿದೆ.  ಈ ಹಿನ್ನೆಲೆಯಲ್ಲಿ ಅಣುಶಕ್ತಿ ಪ್ರಾಮುಖ್ಯತೆ ಪಡೆಯುತ್ತದೆ. ಅದು ಸರ್ವಋತು ಸಂಪನ್ಮೂಲ. ಹಾಗಾಗಿಯೇ ಕೈಗಾ, ರಾವತ್‌ಭಾಟ, ಕುಂದಂಕುಲಂ ಹಾಗೂ ಕಲ್ಪಾಕಂನಲ್ಲಿ ೬ ನೂತನ ಫಾಸ್ಟ್ ಬೀಡರ್ ರಿಯಾಕ್ಟರ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಟ್ಟು ೨,೯೭೬ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶ ಇಟ್ಟುಕೊಳ್ಳಲಾಗಿದೆ. ಕಕಾಪಾರ್, ರಾವತ್‌ಭಾಟ,  ಕುಂದಂಕುಲಂ ಹಾಗೂ ಜೈತಾಪುರಗಳಲ್ಲಿ  ಇನ್ನೂ ೮ ಹೊಸ ಅಣುಶಕ್ತಿ ಕೇಂದಗಳನ್ನು ಸ್ಥಾಪಿಸುವ ಬಗ್ಗೆಯೂ ಗಂಭೀರವಾಗಿ ಯೋಚಿಸಲಾಗುತ್ತಿದೆ. ಒಟ್ಟಿನಲ್ಲಿ ೨೦೨೦ರೊಳಗೆ ೨೦ ಸಾವಿರ ಮೆಗಾವ್ಯಾಟ್ ಅಣು ವಿದ್ಯುತ್ ಉತ್ಪಾದನೆ ಮಾಡಲು ಸರಕಾರ ತಯಾರಿ ನಡೆಸುತ್ತಿದೆ. ಅದು ಅನಿವಾರ್ಯವೂ ಹೌದು.
ಆದರೆ ಅಣು ವಿದ್ಯುತ್ ಉತ್ಪಾದನೆ ಮಾಡುವ ನ್ಯೂಕ್ಲಿಯರ್ ರಿಯಾಕ್ಟರ್‌ಗಳಿಗೆ ಇಂಧನವನ್ನು ಎಲ್ಲಿಂದ ತರಬೇಕು?

ನಮ್ಮಲ್ಲಿ ಲಭ್ಯವಿರುವ ಯುರೇನಿಯಂ ಹಾಗೂ ಥೋರಿಯಂ ಪ್ರಮಾಣ ತೀರಾ ಕಡಿಮೆ. ಅಷ್ಟೇಕೆ ಅಣು ಇಂಧನದ ಕೊರತೆಯಿಂದಾಗಿ ಕೈಗಾ, ತಾರಾಪುರದಂತಹ ರಿಯಾಕ್ಟರ್‌ಗಳನ್ನು ಕಾರ್ಯಸ್ಥಗಿತ ಗೊಳಿಸಬೇಕಾದ ಸ್ಥಿತಿ ಬಂದೊಂದಗಿತ್ತು. ಹಾಗಾಗಿ ವಿದೇಶಗಳಿಂದ ಅಣು ಇಂಧನವನ್ನು ಆಮದು ಮಾಡಿಕೊಳ್ಳಲೇಬೇಕಾಗಿದೆ. ಹಾಗೆ ಆಮದು ಮಾಡಿಕೊಳ್ಳಲು ಎನ್‌ಪಿಟಿ (ಅಣು ಪ್ರಸರಣ ನಿಷೇಧ) ಒಪ್ಪಂದ ದೊಡ್ಡ ಅಡಚಣೆಯಾಗಿದೆ. ಏಕೆಂದರೆ ಭಾರತ ಎನ್‌ಪಿಟಿಗೆ ಸಹಿಯನ್ನೇ ಹಾಕಿಲ್ಲ. ಸಹಿ ಹಾಕಿರದ ರಾಷ್ಟ್ರಗಳಿಗೆ ಅಣು ಇಂಧನ ಪೂರೈಸಲು ೪೫ ರಾಷ್ಟ್ರಗಳ ‘ನ್ಯೂಕ್ಲಿಯರ್ ಸಪ್ಲೈಯರ್‍ಸ್ ಗ್ರೂಪ್’ಗೆ ಕಾನೂನು ತೊಡಕಾಗಿದೆ. ಇಂತಹ ಅನಿವಾರ್ಯ ಪರಿಸ್ಥಿತಿಯಿಂದಾಗಿಯೇ, ದೇಶದ ಭವಿಷ್ಯದ ಆರ್ಥಿಕ ಪ್ರಗತಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ೧೯೯೮ರ ಪೋಖ್ರಣ್ ಅಣು ಪರೀಕ್ಷೆಯ ನಂತರ ಅಮೆರಿಕದೊಂದಿಗೆ ಅಣು ಸಹಕಾರ ಒಪ್ಪಂದ ಮಾಡಿಕೊಳ್ಳಲು ಮಾತುಕತೆಗೆ ಮುಂದಾದರು. ಆದರೆ ೨೦೦೪ ಮೇ.ನಲ್ಲಿ ವಾಜಪೇಯಿ ಸರಕಾರ ಪತನಗೊಂಡು ಮನಮೋಹನ್ ಸಿಂಗ್ ಪಧಾನಿಯಾದರು. ಅವರು ೨೦೦೫, ಜುಲೈ ೧೮ರಂದು ಅಮೆರಿಕಕ್ಕೆ ನೀಡಿದ್ದ ಭೇಟಿಯ ಸಂದರ್ಭದಲ್ಲಿ ಅಧಿಕೃತವಾಗಿ ಒಪ್ಪಂದ ಮಾಡಿಕೊಳ್ಳುವುದಕ್ಕೆ ಬದ್ಧತೆ ವ್ಯಕ್ತಪಡಿಸಿದರು.

ಆಗ ನನೆಗುದಿಗೆ ಬಿದ್ದಿದ್ದೇ ‘123 agreement‘

ಅಂದರೆ US Atomic Energy Actನ ಸೆಕ್ಷನ್ ೧೨೩ರ ಪ್ರಕಾರ ಒಂದು ವೇಳೆ ಅಮೆರಿಕ ಯಾವುದಾದರೂ ರಾಷ್ಟ್ರಕ್ಕೆ ಅಣು ಸಹಕಾರ ನೀಡಬೇಕೆಂದಾದರೆ ಮೊದಲಿಗೆ ಅಣು ಸಹಕಾರ ಒಪ್ಪಂದವನ್ನು ಮಾಡಿಕೊಳ್ಳಲೇಬೇಕು. ಇಂತಹ ನಿಯಮದ ಸಲುವಾಗಿಯೇ ಭಾರತ ಹಾಗೂ ಅಮೆರಿಕ ನಡುವೆ ಮಾತುಕತೆಗಳು ಆರಂಭವಾಗಿದ್ದು. ಅಣಕವೆಂದರೆ ಅಮೆರಿಕದ ಜತೆ ಅಣು ಸಹಕಾರ ಮಾಡಿಕೊಳ್ಳಲು ಮೊದಲು ಪ್ರಸ್ತಾಪವಿಟ್ಟಿದ್ದ ಬಿಜೆಪಿಯೇ ಮೊದಲು ಅಪಸ್ವರವೆತ್ತಿತ್ತು. ಕೆಲವು ವಿeನಿಗಳೂ ವಿರೋಧ ವ್ಯಕ್ತಪಡಿಸಿದರು. ಅವರಲ್ಲಿ ಅಣು ಶಕ್ತಿ ಆಯೋಗದ ಅಧ್ಯಕ್ಷರಾದ ಅನಿಲ್ ಕಾಕೋಡ್ಕರ್ ಪ್ರಮುಖರು. ಇಂತಹ ವಿರೋಧದ ಹಿನ್ನೆಲೆಯಲ್ಲಿ ಸರಕಾರ ಕರಡು ಒಪ್ಪಂದದ ಬಗ್ಗೆ ಮತ್ತಷ್ಟು ಪರಾಮರ್ಶೆ ನಡೆಸಿತು. ಅಂತಿಮವಾಗಿ ಅನಿಲ್ ಕಾಕೋಡ್ಕರ್ ಅವರನ್ನೂ ಒಳಗೊಂಡ ನಮ್ಮ ವಿeನಿಗಳನ್ನು ಅಮೆರಿಕಕ್ಕೆ ನಿಯೋಗದಲ್ಲಿ ಕರೆದುಕೊಂಡು ಹೋಗಿ ನೇರಾನೇರ ಚರ್ಚೆ ನಡೆಸಿತು. ಈ ಚರ್ಚೆಯ ನಂತರ ವಿeನಿಗಳೂ ಸಮಾಧಾನಗೊಂಡರು. ಹಾಗಾಗಿ ಸರಕಾರ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ಆದರೆ ವಿರೋಧಿಸುವುದನ್ನೇ ವೃತ್ತಿಯಾಗಿಸಿಕೊಂಡಿರುವ ಕಮ್ಯುನಿಸ್ಟರು ತಗಾದೆ ತೆಗೆದಿದ್ದಾರೆ. ಆಶ್ಚರ್ಯವೆಂದರೆ, ಬಿಜೆಪಿ ಕೂಡ ಕಮ್ಯುನಿಸ್ಟರಂತೆಯೇ ವರ್ತಿಸಲಾರಂಭಿಸಿದೆ.

ಆದರೆ ಈ ಬಿಜೆಪಿ ಮತ್ತು ಕಮ್ಯುನಿಸ್ಟರಿಗೆ ಏನಾಗಿದೆ?

ಅಣು ಸಹಕಾರ ಒಪ್ಪಂದದ ಬಗ್ಗೆ ಪಾರಂಭದಲ್ಲಿ ಸಾಕಷ್ಟು ಗೊಂದಲಗಳಿದ್ದಿದ್ದಂತೂ ನಿಜ. ಆದರೆ ಈಗ ಅನುಮಾನಕ್ಕೆ ಯಾವ ಆಸ್ಪದವೂ ಇಲ್ಲ. ಭವಿಷ್ಯದಲ್ಲಿ ಅಣು ಪರೀಕ್ಷೆ ನಡೆಸುವ ಭಾರತದ ಹಕ್ಕು ಮತ್ತು ಅಧಿಕಾರಕ್ಕೆ ಒಪ್ಪಂದದಿಂದ ಯಾವ ಚ್ಯುತಿಯೂ ಎದುರಾಗುವುದಿಲ್ಲ. ಒಂದು ವೇಳೆ,  ಅಣುಬಾಂಬ್ ತಯಾರಿಸಲು ಅಥವಾ ಪರೀಕ್ಷೆ ನಡೆಸಲು ಮುಂದಾದರೂ ಅದಕ್ಕೆ ನಾವು ಸೂಕ್ತ ಕಾರಣವನ್ನು ನೀಡಬೇಕೇ ಹೊರತು, ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಇತ್ತ ಒಪ್ಪಂದದಿಂದಾಗಿ ನಾವು ಅಮೆರಿಕ ಸೇರಿದಂತೆ ವಿಶ್ವದ ಯಾವುದೇ ರಾಷ್ಟ್ರದಿಂದ ಬೇಕಾದರೂ ನ್ಯೂಕ್ಲಿಯರ್ ರಿಯಾಕ್ಟರ್‌ಗಳನ್ನು ಆಮದು ಮಾಡಿಕೊಳ್ಳಬಹುದು. ಯುರೇನಿಯಂ ಸಂವರ್ಧನೆ, ಸಂಸ್ಕರಣೆ ಹಾಗೂ ಹೆವಿ ವಾಟರ್ ಉತ್ಪಾದನಾ ತಂತeನದ ವರ್ಗಾವಣೆಗೂ ಅವಕಾಶವಿದೆ. ಇಂತಹ ಅವಕಾಶ ವನ್ನು ಅಮೆರಿಕ ಬೇರಾವ ರಾಷ್ಟ್ರಕ್ಕೂ ನೀಡಿಲ್ಲ. ಜತೆಗೆ ಅಣು ಇಂಧನ ತ್ಯಾಜ್ಯವನ್ನು ಪುನರ್‌ಸಂಸ್ಕರಣೆ ಮಾಡಿಕೊಳ್ಳುವ ಹಕ್ಕೂ ಭಾರತಕ್ಕಿದೆ. ಅದು ಅಣ್ವಸ್ತ್ರ  ತಯಾರಿಕೆಗೆ ಅತ್ಯಗತ್ಯ. ಅಲ್ಲದೆ ನಮ್ಮ ರಿಯಾಕ್ಟರ್‌ಗಳಿಗೆ ಅಗತ್ಯವಿರುವ ಅಣು ಇಂಧನವನ್ನು ರಷ್ಯಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ‘ನ್ಯೂಕ್ಲಿಯರ್ ಸಪ್ಲೈರ್‍ಸ್ ಗ್ರೂಪ್’ನ ಯಾವುದೇ ೪೫ ಸದಸ್ಯ ರಾಷ್ಟ್ರಗಳಿಂದ ಬೇಕಾದರೂ ಆಮದು ಮಾಡಿಕೊಳ್ಳಬಹುದು. ಮುಂದೊಂದು ದಿನ ಅಮೆರಿಕದ ಜತೆ ಸಂಬಂಧ ಹಳಸಿಕೊಂಡರೂ ಒಪ್ಪಂದವನ್ನು ಏಕಾಏಕಿ ಮುರಿಯುವಂತಿಲ್ಲ. ಒಂದು ವರ್ಷ ಮುಂಗಡವಾಗಿ ನೋಟಿಸ್ ನೀಡಬೇಕು. ಹಾಗೆ ನೋಟಿಸ್ ನೀಡಿ, ಒಪ್ಪಂದದಿಂದ ಹಿಂದೆ ಸರಿದರೂ ಇತರ ರಾಷ್ಟ್ರಗಳಿಂದ ನಾವು ಅಣು ಇಂಧನವನ್ನು ಆಮದು ಮಾಡಿಕೊಳ್ಳುವುದಕ್ಕೆ ಯಾವ ಅಡ್ಡಿಯೂ ಇರುವುದಿಲ್ಲ. ಇನ್ನು ಅಮೆರಿಕದ ಅಧಿಕಾರಿಗಳು ನಮ್ಮ ಅಣು ಸ್ಥಾವರಗಳ ತಪಾಸಣೆ ನಡೆಸಲಿದ್ದಾರೆ, ದೇಶದ ಸೌರ್ವಭೌಮತ್ವವೇ ಕಳೆದುಹೋಗುತ್ತದೆ ಎಂಬ ಟೀಕೆಯಲ್ಲೂ ಯಾವ ತಿರುಳೂ ಇಲ್ಲ. ತಪಾಸಣೆ ನಡೆಸುವುದು ಅಮೆರಿಕದ ಇನ್‌ಸ್ಪೆಕ್ಟರ್‌ಗಳಲ್ಲ, ಇಂಟರ್ ನ್ಯಾಷನಲ್ ಆಟಾಮಿಕ್ ಎನರ್ಜಿ ಏಜೆನ್ಸಿ(ಐಎಇಎ). ಈಗಾಗಲೇ ತಾರಾಪುರ ಸೇರಿದಂತೆ ಶೇ.೧೯ರಷ್ಟು ಭಾರತೀಯ ಅಣುಸ್ಥಾವರಗಳು ಐಎಇಎ ತಪಾಸಣೆಗೆ ಒಳಪಟ್ಟಿವೆ. ಅದರ ಪ್ರಮಾಣವನ್ನು ೨೦೧೪ರ ವೇಳೆಗೆ ಶೇ.೬೫ಕ್ಕೆ ಏರಿಸಬೇಕಷ್ಟೆ. ಆದರೇನಂತೆ, ಉಳಿದ ಶೇ.೩೫ರಷ್ಟು ರಿಯಾಕ್ಟರ್‌ಗಳನ್ನು ಮಿಲಿಟರಿ ಉದ್ದೇಶಕ್ಕಾಗಿ ಬಳಸಿಕೊಳ್ಳುವ ಹಕ್ಕು ಭಾರತಕ್ಕಿದೆ.

ಮತ್ತೇಕೆ ಅಪಸ್ವರ?

ಮನಮೋಹನ್ ಸಿಂಗ್ ಅವರು ದೇಶವನ್ನೇ ಮಾರಲು ಹೊರಟಿದ್ದಾರೆ ಎಂಬಂತೆ ಬೊಬ್ಬೆ ಹಾಕುತ್ತಿರುವುದೇಕೆ? ಅಷ್ಟಕ್ಕೂ, ಈ ದೇಶದಲ್ಲಿ ಕಮ್ಯುನಿಸ್ಟರು ಮತ್ತು ಬಿಜೆಪಿಯವರನ್ನು ಬಿಟ್ಟರೆ ಬೇರೆ ಯಾರೂ ದೇಶಪ್ರೇಮಿಗಳೇ  ಇಲ್ಲವೇ? ಅಮೆರಿಕವನ್ನು ಸದಾ ಅನುಮಾನದಿಂದಲೇ ನೋಡುವುದೇಕೆ? ಅಣ್ವಸ್ತ್ರ ತಯಾರಿಸದಂತೆ ಇರಾನನ್ನು ತಡೆಯಲು ಬೆದರಿಕೆ ತಂತ್ರ ಸೇರಿದಂತೆ ಎಲ್ಲ ಪಯತ್ನ ಗಳನ್ನೂ ಮಾಡುತ್ತಿರುವ ಅಮೆರಿಕದ ಕ್ರಮದಿಂದ ಲಾಭ ಭಾರತಕ್ಕೆ ಅಲ್ಲವೆ? ಅಷ್ಟಕ್ಕೂ, ಈಗಾಗಲೇ ನೆರೆಯ ಪಾಕಿಸ್ತಾನದ ಬಳಿ ಅಣ್ವಸ್ತ್ರಗಳಿದ್ದು, ಇರಾನ್ ರೂಪದಲ್ಲಿ ಮತ್ತೊಂದು ನೆರೆಯ ಮುಸ್ಲಿಂ ರಾಷ್ಟ್ರ ಅಣ್ವಸ್ತ್ರಗಳನ್ನು ಹೊಂದಿದರೆ ಅದರಿಂದ ಭಾರತಕ್ಕೆ ಅಪಾಯ ಹೆಚ್ಚಲ್ಲವೆ? ಹಾಗಾಗಿಯೇ ‘ನಮಗೆ ಮತ್ತೊಂದು ನೆರೆಯ ಅಣ್ವಸ್ತ್ರ ರಾಷ್ಟ್ರ ಬೇಕಿಲ್ಲ’ ಅಂತ ಪ್ರಧಾನಿ ಹೇಳಿರುವುದು!  ಆದರೂ ಅಮೆರಿಕವನ್ನು ದೂರುತ್ತೇವೆ.

ಅದಿರಲಿ, ಭಾರತವೇನಾದರೂ ಅಮೆರಿಕದ ಬದಲು ರಷ್ಯಾದೊಂದಿಗೆ ಇಂತಹದ್ದೇ ಅಣು ಸಹಕಾರ ಒಪ್ಪಂದ ಮಾಡಿಕೊಂಡಿದ್ದರೆ ಕಮ್ಯುನಿಸ್ಟರು ವಿರೋಧಿಸುತ್ತಿದ್ದರೆ? ‘ಫ್ಲೈಯಿಂಗ್ ಕಾಫಿನ್ಸ್’ ಎಂದೇ ಹೆಸರಾಗಿರುವ ಮಿಗ್ ವಿಮಾನಗಳನ್ನು ಕೊಟ್ಟಿರುವುದೇ ರಷ್ಯಾ. ಆದರೆ ರಷ್ಯಾದ ಬಗ್ಗೆ ನಮ್ಮ ಕಮ್ಯುನಿಸ್ಟರೆಂದಾದರೂ ಚಕಾರವೆತ್ತಿದ್ದಾರೆಯೇ? ಅಷ್ಟಕ್ಕೂ ೧೯೯೮ರ ಅಣ್ವಸ್ತ್ರ  ಪರೀಕ್ಷೆಯನ್ನೇ ವಿರೋಧಿಸಿದ್ದ ಕಮ್ಯುನಿಸ್ಟರ ನಿಜಬಣ್ಣ ಯಾರಿಗೂ ತಿಳಿದಿಲ್ಲವೆ? ಸಿದ್ಧಾಂತದ ಹೆಂಡ ಕುಡಿದು ಬುದ್ಧಿ ಮಂಕಾಗಿರುವ ಕಮ್ಯುನಿಸ್ಟರು ವಿರೋಧಿಸುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. ಆದರೆ ಬಿಜೆಪಿಗೇನಾಗಿದೆ?

ಅದು ಯಾರೇ ಆಗಿರಲಿ, ಚಿಕ್ಕವರಿರುವಾಗ ಯಾವುದೋ ಒಂದು ಸಿದ್ಧಾಂತದಿಂದ ಪ್ರಭಾವಿತರಾಗುವುದು, ಪ್ರಚೋದಿತರಾಗುವುದು ಸಹಜ. ಅದರಲ್ಲಿ ತಪ್ಪೂ ಇಲ್ಲ. ಆದರೆ ವಯಸ್ಸು ಹೆಚ್ಚಾದಂತೆ ಬುದ್ಧಿ ವಿಕಾಸಗೊಳ್ಳುತ್ತದೆ. ಆಗ ಈ ಸಿದ್ಧಾಂತ, ನಂಬಿಕೆಗಳ ಬಗ್ಗೆ ಅನುಮಾನ, ಪ್ರಶ್ನೆಗಳೇಳುತ್ತವೆ.  ಏಕೆಂದರೆ ತಪ್ಪು-ಸರಿಗಳನ್ನು ಪರಾಮರ್ಶೆ ಮಾಡುವ ಸಾಮರ್ಥ್ಯ ನಮಗೆ ಬಂದಿರುತ್ತದೆ. ಆದರೆ ವಯಸ್ಸು ಎಷ್ಟೇ ಹೆಚ್ಚಾದರೂ ಬುದ್ಧಿಯೇ ಬೆಳೆಯದವರೆಂದರೆ ಸಿದ್ಧಾಂತನಿಷ್ಠ ಕಮ್ಯುನಿಸ್ಟರು ಮಾತ. ಇತ್ತ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ, ಅಫ್ಘಾನಿಸ್ಥಾನದಿಂದ ಬರ್ಮಾದವರೆಗೂ ಪುಂಖಾನುಪುಂಖವಾಗಿ ಮಾತನಾಡುತ್ತಾ ಅಖಂಡ ಭಾರತದ ಕಲ್ಪನೆ ನೀಡುವ ಬಿಜೆಪಿಯವರು ೨೦೦೭ ಬಂದರೂ ೧೯೪೭ರಲ್ಲೇ ಇದ್ದಾರೆ. ಅಮೆರಿಕವನ್ನು ‘Evil Empire’ ಅಂತ, ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ‘Neo-Colonialism’ ಎಂಬಂತೆ ಕಾಣುವ ಈ ‘ಕೆಂಪು’ ಮತ್ತು ‘ಕೇಸರಿ’ಗಳು ಒಂಥರಾ strange bed fellows!

ಇಂಥ ಅರ್ಥಹೀನ ಬೊಬ್ಬೆಯಿಂದ ದೇಶವನ್ನು ದಾರಿತಪ್ಪಿಸುತ್ತಿರುವವರಾರು? ನೀವೇ ನಿರ್ಧರಿಸಿ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: