ಪ್ರಚಾರ ಗಿಟ್ಟಿಸಲು ಹೇಳಿದ್ದರೆ ಪರ್ವಾಗಿಲ್ಲ ಬಿಡಿ, ಆದರೆ ನೀವು ಗಂಭೀರವಾಗಿದ್ದರೆ?

IND2995B

ಅವರು ಹೇಳುತ್ತಿರುವುದೆಲ್ಲ ಕೇಳಲು ಚೆನ್ನಾಗಿಯೇ ಇದೆ. ಮಾನವ ಸಂಪನ್ಮೂಲ ಖಾತೆ ಸಚಿವ ಕಪಿಲ್ ಸಿಬಲ್ ಅವರು ಜೂನ್ 25ರಂದು “ಶತದಿನಗಳ ಯೋಜನೆ” ಯನ್ನು ಘೋಷಣೆ ಮಾಡುತ್ತಾ ಆಡಿರುವ ಮಾತುಗಳು, ಮುಂದಿಟ್ಟಿರುವ ಹೊಸ Plan ಖಂಡಿತ ಕುತೂಹಲಕಾರಿಯಾಗಿದೆ. “ಪರೀಕ್ಷೆ ಬಂತೆಂದರೆ ವಿದ್ಯಾರ್ಥಿಗಳು ತೀವ್ರ ಒತ್ತಡಕ್ಕೊಳಗಾಗು ತ್ತಾರೆ. ಮಕ್ಕಳ ಜತೆಗೆ ತಂದೆ-ತಾಯಂದಿರ ಮೇಲೂ ಅನಗತ್ಯ ಒತ್ತಡವುಂಟಾಗುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಆತ್ಮಹತ್ಯೆ ಮಾಡಿಕೊಂಡು ಬಿಡುತ್ತಾರೆ. ವಿದ್ಯಾರ್ಥಿಗಳ ಮೇಲಿನ ಹೊರೆ, ಒತ್ತಡವನ್ನು ಕಡಿಮೆ ಮಾಡಲೇಬೇಕು. ಆದ ಕಾರಣ, 10ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಯೇ ಬೇಡ. ಯಾವ ವಿದ್ಯಾರ್ಥಿಗಳು ಹತ್ತನೇ ತರಗತಿಯ ನಂತರವೂ ಅದೇ ಶಾಲೆಯಲ್ಲಿ ವ್ಯಾಸಂಗ ಮುಂದುವರಿಸಲು ಬಯಸುತ್ತಾರೋ ಅವರು ಬೋರ್ಡ್ ಪರೀಕ್ಷೆಗೆ ಕುಳಿತುಕೊಳ್ಳುವ ಅಗತ್ಯವಿಲ್ಲ. 11ನೇ ತರಗತಿಗೆ ನೇರವಾಗಿ ಪ್ರವೇಶ ಪಡೆಯಬಹುದು. ಒಂದು ವೇಳೆ ಪದವಿ ಪೂರ್ವ ಕಾಲೇಜು ಸೇರಬೇಕೆಂದೆನಿಸಿದರೆ ಅಂತಹ ವಿದ್ಯಾರ್ಥಿಗಳು ಮಾತ್ರ ಬೋರ್ಡ್ ಪರೀಕ್ಷೆಗೆ ಕುಳಿತು ಕೊಂಡರೆ ಸಾಕು. ಮೊದಲಿಗೆ ಸಿಬಿಎಸ್‌ಇ (Central Board of Secondary Education) ಶಾಲೆಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಮಾರ್ಕ್ಸ್ (ಅಂಕ) ಬದಲು ಗ್ರೇಡ್(ಶ್ರೇಣಿ) ನೀಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ನಾನಾ ಬೋರ್ಡ್‌ಗಳ ಅಗತ್ಯವಿಲ್ಲ. ರಾಷ್ಟ್ರಮಟ್ಟದಲ್ಲಿ ಒಂದು ಸಾಮಾನ್ಯ ಮಂಡಳಿಯನ್ನು ರೂಪಿಸ ಲಾಗುವುದು. ಅದು 12ನೇ ತರಗತಿ ಪರೀಕ್ಷೆ ಹಾಗೂ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಎರಡನ್ನೂ ನಡೆಸುತ್ತದೆ. ವಿದ್ಯಾರ್ಥಿಗಳು ದೇಶಾದ್ಯಂತ ಎಲ್ಲಿ, ಯಾವ ಕಾಲೇಜಿನಲ್ಲಿ ಬೇಕಾದರೂ ಪ್ರವೇಶ ಪಡೆದುಕೊಳ್ಳಬಹುದು” ಎಂದಿದ್ದಾರೆ ಸಿಬಲ್.

ನಮ್ಮ ದೇಶಕ್ಕೆ ಶೈಕ್ಷಣಿಕ ಸುಧಾರಣೆಗಳ ಅಗತ್ಯ ಇರುವ ಬಗ್ಗೆ ಯಾರೂ ತಕರಾರು ಎತ್ತಲು ಸಾಧ್ಯವಿಲ್ಲ.

ಈ ದೇಶದ ಎಷ್ಟೋ ಮಕ್ಕಳು ಪರೀಕ್ಷೆಯ ಭಯದಿಂದಲೇ ಶಾಲೆಗೆ ಶರಣು ಹೊಡೆಯುತ್ತಾರೆ, ಪ್ರವರ್ಧಮಾನದಲ್ಲಿ ಫೇಲಾಗಿ ನೇಣಿಗೆ ಶರಣಾಗುವವರೂ ಇದ್ದಾರೆ. ಇನ್ನು ಒಂದೊಂದೇ ಮಕ್ಕಳನ್ನು ಹಡೆದುಕೊಂಡು, ಆ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿ, ಅವುಗಳ ಹೋಂವರ್ಕ್ ಅನ್ನು ತಾವೇ ಮಾಡಿ, ಮಕ್ಕಳಿಗೆ ಪರೀಕ್ಷೆ ಬಂದಾಗ ತಾವು ಕೆಲಸಕ್ಕೆ ರಜೆಹಾಕಿ ಜಗತ್ತೇ ತಮ್ಮ ತಲೆಮೇಲೆ ಬಂದು ಕುಳಿತಿದೆಯೋ ಎಂಬಂತೆ ವರ್ತಿಸುವ ಪೋಷಕರೂ ಬಹಳಷ್ಟಿದ್ದಾರೆ. ಈ ಎಲ್ಲ ಅಂಶಗಳನ್ನೂ ಗಣನೆಗೆ ತೆಗೆದುಕೊಂಡರೆ ಕಪಿಲ್ ಸಿಬಲ್ ಮಾತಿನಲ್ಲಿ ಯಾವ ತಪ್ಪೂ ಇಲ್ಲ. ಜತೆಗೆ ನಮ್ಮಲ್ಲಿ ಪರೀಕ್ಷೆಯೆಂದರೆ ‘Marks comparison exercise’ ಆಗಿ, ಮಾರ್ಕ್ಸೇ ಮಾನದಂಡವಾಗಿ ಪರಿಣಮಿಸಿದೆ. ಅಂತಹ ಅಂಕಗಳನ್ನಿಟ್ಟುಕೊಂಡೇ ಒಂದಿಷ್ಟು ಪೋಷಕರು ಬಹಾದ್ದೂರಿಕೆ ಪ್ರದರ್ಶಿಸುತ್ತಾರೆ, ಉಳಿದವರು ತಮ್ಮ ಮಕ್ಕಳ ಮೇಲೆ ವಿನಾಕಾರಣ ಒತ್ತಡ ಹೇರುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರೌಢ ಶಿಕ್ಷಣ ಹಂತದ ಮೊದಲ ಅಡೆ-ತಡೆಯಾದ 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಬರ್ಖಾಸ್ತುಗೊಳಿಸುವ ಹಾಗೂ ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ ಮಾರ್ಕ್ಸ್ ಬದಲು ಶ್ರೇಣಿಯನ್ನು ಕೊಟ್ಟು ಮುಂದಿನ ತರಗತಿಗೆ ಭಡ್ತಿ ಕೊಡುವ ವ್ಯವಸ್ಥೆ ಯೋಗ್ಯ ಮಾರ್ಗವೆಂಬಂತೆ ಕಾಣುತ್ತದೆ.

ಇಂತಹ ವ್ಯವಸ್ಥೆ ಭಾರತಕ್ಕೆ ಹೊಸದೇನೂ ಅಲ್ಲ.

ನಮ್ಮ ವಿಶ್ವವಿಖ್ಯಾತ ಐಐಟಿ, ಐಐಎಂಗಳಲ್ಲಿ ಈಗಾಗಲೇ ಗ್ರೇಡಿಂಗ್ ವ್ಯವಸ್ಥೆಯಿದೆ. ಪ್ರತಿ ವಾರವೂ, ವಾರದ ಕಡೆಯ ದಿನ ಆ ಹಿಂದಿನ ದಿನಗಳಂದು ಬೋಧಿಸಲಾದ ವಿಷಯಗಳ ಬಗ್ಗೆ ಪರೀಕ್ಷೆ ನಡೆಸುತ್ತಾರೆ. ಅಂತಹ ವಾರದ ಪರೀಕ್ಷೆಗಳ ಆಧಾರದ ಮೇಲೆ ಒಟ್ಟಾರೆ ಗ್ರೇಡ್ ಕೊಡುತ್ತಾರೆ. ಅದನ್ನು ‘Percentage’ ಎನ್ನುವುದಿಲ್ಲ, ‘Percentile’ ಅನ್ನುತ್ತಾರೆ. ಹತ್ತಕ್ಕೆ 5 ತೆಗೆದವರು ಸಾಮಾನ್ಯ ವಿದ್ಯಾರ್ಥಿಗಳು (ಚೇತನ್ ಭಗತ್ ಅವರ ‘ಫೈವ್ ಪಾಯಿಂಟ್ ಸಮ್‌ವನ್’ ಪುಸ್ತಕ ನೆನಪಿಸಿಕೊಳ್ಳಿ), 7-8 ತೆಗೆದವರು ಪ್ರತಿಭಾನ್ವಿತರು, ಹತ್ತಕ್ಕೆ ಹತ್ತು ತೆಗೆದವರು ಪ್ರಚಂಡರು! ಇಂತಹ ಗ್ರೇಡಿಂಗ್ ವ್ಯವಸ್ಥೆಯ ಬಹುಮುಖ್ಯವಾದ ಅಂಶವೆಂದರೆ ಯಾರೋ ಒಬ್ಬ ವಿದ್ಯಾರ್ಥಿ ಎಲ್ಲರಿಗಿಂತ ಹೆಚ್ಚು ಅಂಕ ಪಡೆದಿದ್ದಾನೆ ಎಂಬ ‘ಸ್ಥಾನ’ಮಾನ ಗಳಿರುವುದಿಲ್ಲ, ಆ ಸ್ಥಾನಕ್ಕಾಗಿ ಎಲ್ಲರೂ ಪ್ರಯತ್ನಿಸುವಂತಹ ಅಗತ್ಯವಿರುವುದಿಲ್ಲ. ಅಂದರೆ ಒಂದೇ ಗ್ರೇಡನ್ನು ಇಡೀ ತರಗತಿಯೇ ಪಡೆದುಕೊಳ್ಳಬಹುದು. ಒಬ್ಬ ಎಲ್ಲರಿಗಿಂತ ಹೆಚ್ಚು ಮಾರ್ಕ್ಸ್ ತೆಗೆದುಕೊಳ್ಳುವುದಕ್ಕಿಂತ ಒಂದು ಕ್ಲಾಸಿನ 10-15 ವಿದ್ಯಾರ್ಥಿಗಳು ಒಂದೇ ಗ್ರೇಡ್ ಎನಿಸಿಕೊಳ್ಳುವುದು ಖಂಡಿತ ಒಳ್ಳೆಯದು. ಅನಾರೋಗ್ಯಕರ ಸ್ಪರ್ಧೆ, ಒತ್ತಡಗಳೂ ತಪ್ಪುತ್ತವೆ. ಇಲ್ಲಿ ಕೂಡ ಗ್ರೇಡ್ ಇಟ್ಟುಕೊಂಡು ಕಾಲರ್ ಏರಿಸಿಕೊಳ್ಳಬಹುದು, ಆದರೆ ಅರ್ಧ ಮಾರ್ಕ್ಸ್‌ನಿಂದ ಮೊದಲ ಸ್ಥಾನ, ಎರಡನೇ ಸ್ಥಾನ ತಪ್ಪಿಹೋಯಿತು ಎಂದು ಹೊಟ್ಟೆ ಉರಿದುಕೊಳ್ಳಲು, ಪೋಷಕರು ಅದೇ ವಿಷಯವನ್ನಿಟ್ಟುಕೊಂಡು ಮಕ್ಕಳ ಮೇಲೆ ಒತ್ತಡ ಹೇರಲು ಅವಕಾಶವಿರುವುದಿಲ್ಲ. ಅಲ್ಲದೆ ಸೆಮಿಸ್ಟರ್ ಅಥವಾ ವಾರ್ಷಿಕ ಪರೀಕ್ಷೆಯೊಂದನ್ನೇ ಪ್ರತಿಭೆಯನ್ನಳೆಯುವ ಮಾನದಂಡವಾಗಿಟ್ಟು ಕೊಳ್ಳುವ ಬದಲು ಕಾಲಕಾಲಕ್ಕೆ ನಿಯಮಿತವಾಗಿ ನಡೆಯುವ ಪರೀಕ್ಷೆಗಳಲ್ಲಿ ತೋರುವ ಒಟ್ಟಾರೆ ಸಾಧನೆಯ ಆಧಾರದ ಮೇಲೆ ನೀಡುವ ಗ್ರೇಡ್ ತೀರಾ ನಿರ್ದಿಷ್ಟವಾಗಿರುತ್ತವೆ. ಪರೀಕ್ಷೆ ಸಂದರ್ಭದಲ್ಲೇ ಅನಾರೋಗ್ಯಕ್ಕೊಳಗಾಗಿ ಒಂದು ವರ್ಷವನ್ನೇ ಕಳೆದುಕೊಳ್ಳುವಂತಹ ಅಪಾಯಗಳೂ ಇಲ್ಲವಾಗುತ್ತವೆ. ಇನ್ನು ನಮ್ಮಲ್ಲಿ ಸದ್ಯ ನಡೆಯುತ್ತಿರುವ ಪರೀಕ್ಷೆಗಳಾದರೂ ಎಂಥವು? ಅರ್ಥಮಾಡಿಕೊಂಡು ಓದುವವರ ಜತೆ Rote memorisation, Mugging ಅಥವಾ Parrot learning ಅನ್ನುತ್ತಾರಲ್ಲಾ ಹಾಗೆ ಬಾಯಿಪಾಠ ಮಾಡಿಕೊಂಡು ಬಂದು ಉತ್ತರ ಪತ್ರಿಕೆ ಮೇಲೆ ಕಕ್ಕುವವರಿಗೂ ಒಳ್ಳೆಯ ಅಂಕಗಳು ಬಂದು ಬಿಡುತ್ತವೆ. ಅದರಿಂದ ನಿಜವಾದ ಪ್ರತಿಭೆಯನ್ನು ಹೊರ ತಂದಂತಾದೀತೆ? ಈ ಅಂಶಗಳನ್ನೆಲ್ಲ ಲೆಕ್ಕಹಾಕಿದ್ದಾಗ ನಮ್ಮ ಶಿಕ್ಷಣವನ್ನು De-traumatise ಮಾಡಬೇಕಾಗಿದೆ, 10ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ತೆಗೆದುಹಾಕಬೇಕಾದ ಅಗತ್ಯವಿದೆ ಎಂದಿರುವ ಕಪಿಲ್ ಸಿಬಲ್ ಮಾತು ಅರ್ಥಪೂರ್ಣವಾಗಿ ಕಾಣುತ್ತದೆ.

ಆದರೆ ಸಿಬಲ್ ಯೋಜನೆಯ ಸಾಧಕ-ಬಾಧಕಗಳು ಇಷ್ಟೇನಾ?

ಹತ್ತನೇ ತರಗತಿಗೆ ನಡೆಯುವ ಬೋರ್ಡ್ ಪರೀಕ್ಷೆಯನ್ನು ಬರ್ಖಾಸ್ತುಗೊಳಿಸುವುದು ಒಂದು ಸರಿಯಾದ ಕ್ರಮವೇ? ಮಾರ್ಕ್ಸ್ ಬದಲು ಗ್ರೇಡಿಂಗ್ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಕಾಲ ಪಕ್ವವಾಗಿದೆಯೇ? ಇಂತಹ ಪದ್ಧತಿಯಿಂದ ಶಿಕ್ಷಣ ವ್ಯವಸ್ಥೆ ಸುಧಾರಣೆಯಾದೀತೆ? ವಿದ್ಯಾರ್ಥಿಗಳಿಗೆ ಯೋಗ್ಯ ಹಾಗೂ ಗುಣಮಟ್ಟದ ಶಿಕ್ಷಣ ದೊರೆತೀತೆ? ಅನಗತ್ಯ ಒತ್ತಡ ತಪ್ಪುವುದೇ? ಹತ್ತನೇ ತರಗತಿಗೆ ಬೋರ್ಡ್ ಪರೀಕ್ಷೆಯೇ ಬೇಡವೆಂದಾದರೆ ಉನ್ನತ ಶಿಕ್ಷಣ ಮಾಡಬಯಸುವವರಿಗೆ ಅನನು ಕೂಲಗಳುಂಟಾಗುವುದಿಲ್ಲವೆ? ಪ್ರಾರಂಭದಲ್ಲಿ ಸಿಬಿಎಸ್‌ಇ ಶಾಲೆಗಳಲ್ಲಿ ಮಾತ್ರ ಈ ಯೋಜನೆಯನ್ನು ಅನುಷ್ಠಾನಗೊಳಿಸ ಲಾಗುವುದು ಎಂಬುದೇನೋ ಸರಿ. ಆದರೆ ನಾನಾ ರಾಜ್ಯಗಳ ಎಸ್‌ಎಸ್‌ಎಲ್‌ಸಿ ಬೋರ್ಡ್ ಹಾಗೂ ರಾಜ್ಯ ಸರಕಾರದ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿದ್ಯಾರ್ಥಿಗಳ ಗತಿಯೇನು? ಈಗಿರುವ ಪರೀಕ್ಷಾ ಪದ್ಧತಿಯನ್ನು ಬದಲಾಯಿಸುವುದೇ ದೊಡ್ಡ ಶೈಕ್ಷಣಿಕ ಸುಧಾರಣೆ, ಒತ್ತಡ ನಿವಾರಣೆ ಮಾರ್ಗ ಎಂದು ಭಾವಿಸುವುದು ಎಷ್ಟು ಸರಿ ಕಪಿಲ್ ಸಿಬಲ್ ಅವರೇ? ಅಷ್ಟಕ್ಕೂ ಸಮಸ್ಯೆಯಿರುವುದು ಪರೀಕ್ಷಾ ವಿಧಾನದಲ್ಲೋ ಅಥವಾ ಪಠ್ಯದಲ್ಲೋ? ಮಾರ್ಕ್ಸ್ ಬದಲು ಗ್ರೇಡಿಂಗ್ ಕೊಟ್ಟ ಮಾತ್ರಕ್ಕೆ ತಕ್ಕಮಟ್ಟಿಗೆ ವಿದ್ಯಾರ್ಥಿಗಳ ಮೇಲಿನ ಒತ್ತಡ, ಪರೀಕ್ಷೆಯ ಭಯ ಕಡಿಮೆಯಾಗಬಹುದು. ಆದರೆ ಅದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾದಂತಾಗುತ್ತದೆಯೇ?

ಅಷ್ಟಕ್ಕೂ ಹಾಲಿ ಪರೀಕ್ಷಾ ಪದ್ಧತಿಯಲ್ಲಿ ಇರುವ ಲೋಪಗಳಾ ದರೂ ಏನು?

ಹತ್ತನೇ ತರಗತಿಯಲ್ಲಿ ನಡೆಯುವ ಬೋರ್ಡ್ ಪರೀಕ್ಷೆಯನ್ನು ತೆಗೆದುಕೊಳ್ಳಿ. ಒಂದರಿಂದ ಹತ್ತನೇ ತರಗತಿವರೆಗೆ ಎಲ್ಲ ವಿದ್ಯಾರ್ಥಿ ಗಳಿಗೂ ಭಾಷಾ ವಿಷಯ ಬಿಟ್ಟರೆ ಉಳಿದಂತೆ ಸಮಾನ ಶಿಕ್ಷಣ ದೊರೆಯುತ್ತದೆ. ಗಣಿತ, ವಿeನ, ಸಮಾಜ, ಇಂಗ್ಲಿಷ್ ಹೀಗೆ ಎಲ್ಲ ವಿಷಯಗಳ ಬಗ್ಗೆಯೂ ಬೋಧನೆ ಮಾಡಲಾಗುವುದು. ಅದರಿಂದ ವಿದ್ಯಾರ್ಥಿಗಳ ಸಮಗ್ರeನವೃದ್ಧಿಯೂ ಆಗುತ್ತದೆ. ಹತ್ತನೇ ತರಗತಿಯ ಬೋರ್ಡ್ ಪರೀಕ್ಷೆಯ ನಂತರ ವಿದ್ಯಾರ್ಥಿ ಗಳು ತಮಗೆ ಬೇಕಾದ ವಿಷಯಗಳನ್ನು ಅಧ್ಯಯನ ಮಾಡುವ ಆಯ್ಕೆ ಅವಕಾಶ ದೊರೆಯುತ್ತದೆ. ಕಲೆ, ವಾಣಿಜ್ಯ, ವಿeನ, ಡಿಪ್ಲೊಮಾ ಅಥವಾ ವೃತ್ತಿಪರ ತರಬೇತಿ ವಿಷಯಗಳನ್ನು ಆಯ್ದುಕೊಳ್ಳುವ ಮೂಲಕ ತಮ್ಮ ಶೈಕ್ಷಣಿಕ ಭವಿಷ್ಯಕ್ಕೆ ಸರಿಯಾದ ದಿಕ್ಕನ್ನು ಕಂಡುಕೊಳ್ಳಬಹುದು. ಈ ಹಿನ್ನೆಲೆಯಲ್ಲಿ 10ನೇ ತರಗತಿಗೆ ನಡೆಯುವ ಬೋರ್ಡ್ ಪರೀಕ್ಷೆ ನಿಜಕ್ಕೂ ಅನುಕೂಲಕರ. ಅಂತಹ ಪರೀಕ್ಷೆಯನ್ನು ಬರ್ಖಾಸ್ತುಗೊಳಿಸುವುದರಿಂದ ತಾತ್ಕಾ ಲಿಕವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯ, ಒತ್ತಡ ಹಾಗೂ ಪೋಷಕರಿಗೆ ತಲೆನೋವು ತಪ್ಪಬಹುದು. ಒಂಬತ್ತು ಮತ್ತು ಹತ್ತನೇ ತರಗತಿಯಲ್ಲಿ ಗ್ರೇಡ್ ಕೊಟ್ಟು 11ನೇ ತರಗತಿಗೆ ಭಡ್ತಿ ನೀಡುವುದರಿಂದ ವಿದ್ಯಾರ್ಥಿಗಳ ಮೇಲಿನ ಒತ್ತಡ ಹಾಗೂ ಭಯವನ್ನು ಮುಂದುಹಾಕಿದಂತಾಗುತ್ತದೆಯೇ ಹೊರತು ತಲೆನೋವು ತಪ್ಪಿದಂತಾಗುವುದಿಲ್ಲ! ಹತ್ತನೇ ತರಗತಿಯಲ್ಲಿ ಬೋರ್ಡ್ ಪರೀಕ್ಷೆಯೇ ಇಲ್ಲವೆಂದಾದರೆ 11ನೇ ತರಗತಿಯಲ್ಲಿ ಐಚ್ಛಿಕ ವಿಷಯಗಳನ್ನು ಆಯ್ದುಕೊಳ್ಳುವ ಅವಕಾಶ ಇರುವುದಿಲ್ಲ. ಒಂಥರಾ ರಣಜಿ ಕ್ರಿಕೆಟ್ ಆಡದೇ ನೇರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಂತಾಗಬಹುದು!! ಅಂದರೆ 12ನೇ ತರಗತಿಯಲ್ಲಿ ನೇರವಾಗಿ ಒಮ್ಮೆಲೇ ಬೋರ್ಡ್ ಪರೀಕ್ಷೆಯನ್ನು ಬರೆಯುವುದರಿಂದ ಎಲ್ಲ ವಿಷಯಗಳನ್ನೂ ಅಧ್ಯಯನ ಮಾಡಿರಬೇಕಾದ ಹಾಗೂ ಒಳ್ಳೆಯ ಅಂಕ ಪಡೆದುಕೊಳ್ಳಬೇಕಾದ ಒತ್ತಡ ಇನ್ನೂ ಹೆಚ್ಚಾಗಿರುತ್ತದೆ. ಜತೆಗೆ ಐಚ್ಛಿಕ ವಿಷಯಗಳನ್ನು ಅಧ್ಯಯನ ಮಾಡದ ಕಾರಣ ಉನ್ನತ ಶಿಕ್ಷಣಕ್ಕೆ ಯಾವ ಸಬ್ಜೆಕ್ಟ್ ಆರಿಸಿಕೊಳ್ಳಬೇಕು ಎಂಬ ಗೊಂದಲ ಕಾಡುತ್ತದೆ. ಅದೇ ಹತ್ತನೇ ತರಗತಿಯಲ್ಲಿ ಬೋರ್ಡ್ ಪರೀಕ್ಷೆ ಬರೆದ ವಿದ್ಯಾರ್ಥಿ, ಐಚ್ಛಿಕ ವಿಷಯಗಳನ್ನು ಆಯ್ದುಕೊಳ್ಳುವುದರಿಂದ ಮುಂದಿನ ಎರಡು ವರ್ಷಗಳಲ್ಲಿ ಯಾವ ವಿಷಯದಲ್ಲಿ ತನಗೆ ಹೆಚ್ಚು ಆಸಕ್ತಿಯಿದೆ, ಯಾವುದರಲ್ಲಿ ತಾನು ಹೆಚ್ಚು ಅಂಕ ಗಳಿಸಿಕೊಳ್ಳಬಲ್ಲೆ ಎಂಬುದನ್ನು ಕಂಡುಕೊಳ್ಳಬಹುದು. ವಿeನ, ವಾಣಿಜ್ಯ ವಿಷಯ ಕಲಿಯುತ್ತಿದ್ದ ವಿದ್ಯಾರ್ಥಿ ಕಠಿಣವೆನಿಸಿದರೆ ದ್ವಿತೀಯ ಪಿಯುಸಿ ಮುಗಿದ ನಂತರ ವಿಷಯ ಬದಲಾಯಿಸಿಕೊಳ್ಳಬಹುದು. ಬೋರ್ಡ್ ಪರೀಕ್ಷೆ ಬರೆಯದವರಿಗೆ ಈ ಯಾವ ಅನುಕೂಲಗಳೂ ಇರುವುದಿಲ್ಲ, 2 ವರ್ಷ ಪರೀಕ್ಷೆಯಿಂದ ತಪ್ಪಿಸಿಕೊಂಡು ನಿಶ್ಚಿಂತೆಯಿಂದಿರಬಹುದಷ್ಟೇ.

ಇನ್ನು ಗ್ರೇಡಿಂಗ್ ಎಂಬುದು ಮೇಲ್ನೋಟಕ್ಕೆ ಒಳ್ಳೆಯ ವ್ಯವಸ್ಥೆ ಎಂದು ಅನಿಸಬಹುದು.

ಒಬ್ಬ ವಿದ್ಯಾರ್ಥಿಯ ಒಟ್ಟಾರೆ ಸಾಧನೆಯನ್ನು ಗಣನೆಗೆ ತೆಗೆದುಕೊಂಡು ಗ್ರೇಡ್ ಕೊಟ್ಟರೂ ನೂರಕ್ಕೆ ನೂರು, 99, 85 ಎಲ್ಲರೂ ‘ಎ’ ಗ್ರೇಡ್ ಎಂದಾದರೆ 100 ಹಾಗೂ 85 ತೆಗೆದವರನ್ನು ಪ್ರತ್ಯೇಕಿಸುವುದು ಹೇಗೆ? ಸಮಾನ ಗ್ರೇಡ್ ಕೊಡುವುದರಿಂದ ಕಷ್ಟಪಟ್ಟು ನೂರಕ್ಕೆ ನೂರು, 99 ತೆಗೆದವರಿಗೆ ಅನ್ಯಾಯವಾದಂತಾಗುವುದಿಲ್ಲವೆ? ಮೆರಿಟ್ ಗುರುತಿಸುವ ಪರಿ ಯಾವುದು? ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡವುಂಟಾಗುತ್ತದೆ, ಪೋಷಕರ ಮೇಲೆ ಒತ್ತಡ ಬೀಳುತ್ತದೆ ಎಂಬುದು ಬೋರ್ಡ್ ಪರೀಕ್ಷೆಯನ್ನೇ ಬರ್ಖಾಸ್ತುಗೊಳಿಸುವಂತಹ ಗಂಭೀರ ಸಮಸ್ಯೆಯೇ? ‘ಬಿ’ ಗ್ರೇಡ್ ಬಂದರೆ ಆಗಲೂ ಏಕೆ ‘ಎ’ ಗ್ರೇಡ್ ಬರಲಿಲ್ಲ ಎಂದು ಪೋಷಕರು ಮಕ್ಕಳನ್ನು ಪ್ರಶ್ನಿಸದೇ, ‘ಎ’ ಗ್ರೇಡ್ ಅನ್ನೇ ಗಳಿಸ ಬೇಕೆಂದು ಒತ್ತಡ ಹೇರದೇ ಇರುತ್ತಾರೆಯೇ? ಇತ್ತ ಗ್ರೇಡ್ ಕೊಡುವವರು ಆಯಾ ಶಾಲೆಯ ಶಿಕ್ಷಕರೇ ಆಗಿರುವುದರಿಂದ ವಿದ್ಯಾರ್ಥಿಗಳು ಶೋಷಣೆ, ದೌರ್ಜನ್ಯಕ್ಕೊಳಗಾಗುವ ಹಾಗೂ ಜಾತೀಯತೆ, ಧರ್ಮೀಯತೆಗಳು ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ವಿದ್ಯಾರ್ಥಿಗಳನ್ನು ಶಾಲಾ ಹಂತದಲ್ಲೇ ಗುಲಾಮಗಿರಿಗೆ ತಳ್ಳುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಶಿಕ್ಷಕರು ಸೇಡು ತೀರಿಸಿಕೊಳ್ಳಲು ಅವಕಾಶ ಸಿಕ್ಕಂತೆಯೂ ಆಗುತ್ತದೆ. ಇದಕ್ಕೆಲ್ಲ ಯಾರ ಮೊರೆ ಹೋಗಬೇಕು? ಒಬ್ಬ ವಿದ್ಯಾರ್ಥಿಗೆ ಶಿಕ್ಷಕರಿಂದಲೇ ಅನ್ಯಾಯವಾದರೆ ಆತನಿಗೆ ನ್ಯಾಯ ದೊರಕಿಸಿ ಕೊಡುವವರು ಯಾರು? ಶಾಲೆಗಳಿಗೂ ಗ್ರೇಡಿಂಗ್ ಕೊಡುವ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ಕಪಿಲ್ ಹೇಳಿದ್ದಾರೆ. ಆಗ ಶಾಲೆಗಳೂ ಕೂಡ ಉತ್ತಮ ಗ್ರೇಡಿಂಗ್ ಪಡೆದುಕೊಳ್ಳಲು ಪ್ರಯತ್ನಿಸುವ, ವಿದ್ಯಾರ್ಥಿಗಳ ಮೇಲೆ ಒತ್ತಡ ಹೇರುವ ಪರಿಸ್ಥಿತಿ ಸೃಷ್ಟಿಯಾಗುವುದಿಲ್ಲವೆ? ಪರೀಕ್ಷೆಯೇ ಇಲ್ಲವೆಂದಾದರೆ ವಿದ್ಯಾರ್ಥಿ ಹಾಗೂ ಶಿಕ್ಷಕರಿಬ್ಬರೂ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದಿಲ್ಲವೆ? ಗ್ರೇಡ್ ಕೊಡುವುದೇನೋ ಸರಿ. ಉದ್ಯೋಗಕ್ಕೆ ಹೇಗೆ ನೇಮಕಾತಿ ಮಾಡಿಕೊಳ್ಳುತ್ತೀರಿ? ಈಗಾಗಲೇ ಡೀಮ್ಡ್ ಯೂನಿವರ್ಸಿಟಿ ಹಾಗೂ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಲ್ಲಿ ಗ್ರೇಡಿಂಗ್ ವ್ಯವಸ್ಥೆ ಬಂದಿದೆ. ಅದು ಸಾಫ್ಟ್‌ವೇರ್‌ನಂತಹ ಕ್ಷೇತ್ರಕ್ಕೆ ಸರಿ. ಆದರೆ ಭಾರತದ ಅತಿ ದೊಡ್ಡ ಉದ್ಯೋಗದಾತ ಸರಕಾರವೇ ಆಗಿದೆ. ಅಂಕದ ಆಧಾರದ ಮೇಲೆ ನೇಮಕಾತಿ ಮಾಡಿ ಕೊಳ್ಳು ವಾಗಲೇ ವ್ಯಾಪಕ ಅನ್ಯಾಯಗಳಾಗುತ್ತವೆ. ಹಾಗಿರುವಾಗ ಗ್ರೇಡ್ ತಂದರೆ ಗತಿಯೇನು? ನಮ್ಮ ಸರಕಾರಗಳೆಷ್ಟು ಪಾರದರ್ಶಕ ಹಾಗೂ ಪ್ರಾಮಾಣಿಕ ಎಂಬುದು ಎಲ್ಲರಿಗೂ ಗೊತ್ತು. ಏಕಾಏಕಿ, ಏಕಪಕ್ಷೀಯವಾಗಿ ಬೋರ್ಡ್ ಮತ್ತು ಬೋರ್ಡ್ ಪರೀಕ್ಷೆಯನ್ನೇ ಬರ್ಖಾಸ್ತುಗೊಳಿಸುವ ಘೋಷಣೆ ಮಾಡುವ ಮೊದಲು ಕಪಿಲ್ ಸಿಬಲ್ ಅವರು ನುರಿತ ಶಿಕ್ಷಕರು, ಶಿಕ್ಷಣ ತಜ್ಞರು, ವಿವಿಧ ಬೋರ್ಡ್ ಅಧ್ಯಕ್ಷರು, ರಾಜ್ಯ ಸರಕಾರಗಳ ಸಭೆ ಕರೆದು ಚಿಂತನೆ ಯನ್ನು ನಡೆಸಬಹುದಿತ್ತಲ್ಲವೆ?

ಕಪಿಲ್ ಸಿಬಲ್ ಅವರೇ, ಪ್ರಚಾರ ಗಿಟ್ಟಿಸುವ ಸಲುವಾಗಿ ನೀವು ಬೋರ್ಡ್ ಪರೀಕ್ಷೆಯನ್ನು ಬರ್ಖಾಸ್ತುಗೊಳಿಸುವ ಮಾತನಾಡಿ ದ್ದರೆ ಪರ್ವಾಗಿಲ್ಲ ಬಿಡಿ. ನಾವೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಈ ವಿಷಯದಲ್ಲಿ ನೀವು ಗಂಭೀರವಾಗಿದ್ದರೆ ಕೆಲವು ಅಗತ್ಯ ಕೆಲಸಗಳನ್ನು ಮೊದಲು ಮಾಡಿ. ಬೋರ್ಡ್ ಪರೀಕ್ಷೆಯನ್ನು ಬರ್ಖಾಸ್ತುಗೊಳಿಸುವ ಬದಲು ರಾಷ್ಟ್ರಾದ್ಯಂತ ಸಾಮಾನ್ಯ ಪರೀಕ್ಷಾ ಪದ್ಧತಿಯನ್ನು ಜಾರಿಗೆ ತನ್ನಿ. ಅಂದರೆ ಹತ್ತನೇ ತರಗತಿಗೆ ರಾಜ್ಯಕ್ಕೊಂದು ಬೋರ್ಡ್‌ಗಳಿದ್ದು ಅವುಗಳ ಬದಲಿಗೆ ಕೇಂದ್ರ ಮಟ್ಟದ ಒಂದೇ ಬೋರ್ಡ್ ಸ್ಥಾಪನೆ ಮಾಡಿ. ಪ್ರೌಢ ಶಾಲಾ ಹಂತದಲ್ಲಿ ಭಾಷಾ ವಿಷಯವನ್ನು ಹೊರತು ಪಡಿಸಿ ದೇಶಾದ್ಯಂತ ಏಕರೂಪದ ಪಠ್ಯವನ್ನು ಜಾರಿಗೆ ತನ್ನಿ.  ಸಾಮಾನ್ಯ ಪ್ರಶ್ನೆಪತ್ರಿಕೆ ರೂಪಿಸಿ ಏಕಕಾಲಕ್ಕೆ ಪರೀಕ್ಷೆ ನಡೆಸಿ, ಫಲಿತಾಂಶ ಪ್ರಕಟಿಸಿ. ಇದರಿಂದ ಎಲ್ಲರಿಗೂ ಸಮಾನ ಕಲಿಕಾ ಅವಕಾಶವನ್ನು ಕಲ್ಪಿಸಿದಂತಾಗುತ್ತದೆ. ಬೋರ್ಡ್ ಪರೀಕ್ಷೆಯೇ ಬೇಡವೆನ್ನಬೇಡಿ. ಬೋರ್ಡ್ ಪರೀಕ್ಷೆಯನ್ನು ಉಳಿಸಿಕೊಳ್ಳುವ ಮೂಲಕ 11ನೇ ತರಗತಿಯಲ್ಲಿ ಐಚ್ಛಿಕ ವಿಷಯಗಳನ್ನು ಅಧ್ಯ ಯನ ಮಾಡುವ ಅವಕಾಶ ಕಲ್ಪಿಸಿ. ಇದೆಲ್ಲಕ್ಕಿಂತ ಮೊದಲು ದೇಶದ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಹೆಚ್ಚಿನ ಆದ್ಯತೆ ಕೊಡಿ. ವಾಜಪೇಯಿ ಸರಕಾರ ‘ಸರ್ವ ಶಿಕ್ಷಾ ಅಭಿಯಾನ’ ಮತ್ತು ‘ಮಧ್ಯಾಹ್ನದ ಊಟ’ದಂತಹ ಯೋಜನೆಯನ್ನು ರಾಷ್ಟ್ರದ್ಯಂತ ಜಾರಿಗೆ ತಂದ ಕಾರಣ ಶಾಲೆ ತೊರೆಯುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಯಿತು ಹಾಗೂ ಶಾಲೆಗೆ ಆಗಮಿಸುವವರ ಸಂಖ್ಯೆ ಗಣನೀಯವಾಗಿ ಏರಿಕೆಯನ್ನೂ ಕಂಡಿತು. ಇಂತಹ ಪರಿಣಾಮಕಾರಿ ಕ್ರಮಗಳತ್ತ ಗಮನಹರಿಸಿ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸ್ಟೇಟ್ ಸಬ್ಜೆಕ್ಟ್ ಆಗಿರಬಹುದು. ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶದ ಶಿಕ್ಷಣ ಹಾಗೂ ಶೈಕ್ಷಣಿಕ ಸ್ಥಿತಿಗತಿಯನ್ನು ಸುಧಾರಿಸಲು ಪ್ರಯತ್ನಿಸಬಹುದಲ್ಲವೆ? ಅಷ್ಟಕ್ಕೂ ಇಂದಿಗೂ ಗ್ರಾಮೀಣ ಭಾಗಗಳಲ್ಲಿನ ಹೆಚ್ಚಿನ ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಸರಿಯಾದ ಬೋಧಕ ವರ್ಗವಿಲ್ಲ, ಕಟ್ಟಡಗಳೂ ಇಲ್ಲದ ಶಾಲೆಗಳಿವೆ. ಇವುಗಳನ್ನು ಮೊದಲು ಸುಧಾರಣೆ ಮಾಡಿ ಸ್ವಾಮಿ. ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಯದ್ವಾತದ್ವಾ ಡೀಮ್ಡ್ ಯೂನಿವರ್ಸಿಟಿ ಹಾಗೂ ಆಟೊನೋಮಸ್ ಸ್ಟೇಟಸ್ ಕೊಟ್ಟು ಉನ್ನತ ಶಿಕ್ಷಣವನ್ನು ದಂಧೆಯನ್ನಾಗಿ ಮಾಡುತ್ತಿರುವುದಕ್ಕೆ ಕಡಿವಾಣ ಹಾಕಿ, ನಂತರ ಶಿಕ್ಷಣದ ಆಮೂಲಾಗ್ರ ಬದಲಾವಣೆ ಬಗ್ಗೆ ಮಾತನಾಡಿ.

ಮೊಹಮದ್ ಬಿನ್ ತುಘಲಕ್‌ನ ಹೆಸರನ್ನು ನೀವೆಲ್ಲ ಕೇಳಿರುತ್ತೀರಿ ಬಿಡಿ.

ಎಲ್ಲರೂ ಆತನನ್ನು ಹುಚ್ಚು ಮೊಹಮದ್ ಎನ್ನುತ್ತಿದ್ದರು. ಭಾರತದ ಮೇಲೆ ಆಧಿಪತ್ಯ ಸ್ಥಾಪಿಸಿದ ಮೊಹಮದ್ ಬಿನ್ ತುಘಲಕ್, ದಕ್ಷಿಣ ಭಾರತದ ಪ್ರಾಂತ್ಯಗಳ ಮೇಲಿನ ಹಿಡಿತವನ್ನು ಗಟ್ಟಿಗೊಳಿಸಿಕೊಳ್ಳುವ ಸಲುವಾಗಿ 1327ರಲ್ಲಿ ರಾಜಧಾನಿಯನ್ನು ದಿಲ್ಲಿಯಿಂದ ದೇವಗಿರಿಗೆ ವರ್ಗಾವಣೆ ಮಾಡಿದ. ರಾಜಧಾನಿ ಜತೆಗೆ ರಾಜಧಾನಿಯಲ್ಲಿದ್ದ ಜನರೂ ದೇವಗಿರಿಗೆ ಸ್ಥಳಾಂತರಗೊಳ್ಳಬೇಕು ಎಂದು ಆದೇಶ ನೀಡಿದ. ಆದರೆ ಸೂಕ್ತ ಪೂರ್ವ ವ್ಯವಸ್ಥೆಯನ್ನು ಮಾಡದ ಕಾರಣ, ನೀರು, ಸಂಪರ್ಕ ಹಾಗೂ ಇನ್ನಿತರ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ಎರಡೇ ವರ್ಷಗಳಲ್ಲಿ ರಾಜಧಾನಿಯನ್ನು ದೇವಗಿರಿಯಿಂದ ದಿಲ್ಲಿಗೆ ಮರಳಿ ಬದಲಾಯಿಸಬೇಕಾಗಿ ಬಂತು. ಇಂದು ನಮ್ಮ ರಾಜಧಾನಿ ದಿಲ್ಲಿ ಪಾಕಿಸ್ತಾನದಿಂದ ಕೇವಲ 260 ಮೈಲಿಯಷ್ಟು ದೂರದಲ್ಲಿದೆ. ಪಾಕಿಸ್ತಾನ ನಮ್ಮ ಮೇಲೆ ಯಾವ ಕ್ಷಣದಲ್ಲಿ ಬೇಕಾದರೂ ಭೂಮಿ ಅಥವಾ ಸಮುದ್ರ ಮಾರ್ಗದಿಂದ ದಾಳಿ ಮಾಡಿ ನಾಶಪಡಿಸಿಬಿಡಬಹುದು. ಇಂತಹ ಭಯದೊಂದಿಗೇ ನಮ್ಮನ್ನಾಳುವವರು ಬದುಕಬೇಕಾಗಿದೆ. ಆದರೆ ದೇವಗಿರಿ ಹೆಚ್ಚೂಕಡಿಮೆ ನಮ್ಮ ದೇಶದ ಮಧ್ಯಭಾಗದಲ್ಲಿದೆ. ಭೂ ಅಥವಾ ಸಮುದ್ರ ಮಾರ್ಗದಿಂದ ಅಷ್ಟು ಸುಲಭವಾಗಿ ಅದರ ಮೇಲೆ ದಾಳಿ ಮಾಡಲು ಸಾಧ್ಯವಿಲ್ಲ. ದಾಳಿ ಮಾಡಲು ಯತ್ನಿಸಿದರೂ ಆಗಸದಲ್ಲೇ ಶತ್ರುಗಳ ಕ್ಷಿಪಣಿಗಳನ್ನು ಹೊಡೆದುರುಳಿಸಬಹುದು. ಒಂದು ವೇಳೆ ತುಘಲಕ್‌ನೇನಾದರೂ ಸೂಕ್ತ ತಯಾರಿಯೊಂದಿಗೆ ದೇವಗಿರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ್ದಿದ್ದರೆ ಇಂದು ನಾವು ಎದುರಿಸುತ್ತಿರುವ ಎಷ್ಟೋ ಅಪಾಯಗಳು ಇಲ್ಲವಾಗಿರುತ್ತಿದ್ದವು!

ಅಂದರೆ ಯಾವುದೇ ಯೋಜನೆ ಅಥವಾ ನಿರ್ಧಾರಗಳನ್ನು ಪೂರ್ವತಯಾರಿ, ಪೂರ್ವ ಪರಾಮರ್ಶೆಗಳಿಲ್ಲದೆ ತೆಗೆದುಕೊಂಡರೆ, ಇತರರ ಅಭಿಪ್ರಾಯ ಪಡೆದುಕೊಳ್ಳದೇ ಹೋದರೆ, ದೂರದೃಷ್ಟಿಯಿಲ್ಲದಿದ್ದರೆ ಅಪಾಯ, ಅನಾಹುತ ತಪ್ಪಿದ್ದಲ್ಲ. ಗ್ರೇಡಿಂಗ್ ಎಂಬುದು ಮೇಲ್ನೋಟಕ್ಕೆ ಒಳ್ಳೆಯ ವ್ಯವಸ್ಥೆಯೆಂಬಂತೆ ಕಂಡುಬರುತ್ತಿದ್ದರೂ ಅದರ ಸಾಧಕ-ಬಾಧಕಗಳನ್ನು ಪರಾಮರ್ಶೆ ಮಾಡದೇ, ವಿವಿಧ ರಾಜ್ಯ ಶಿಕ್ಷಣ ಸಚಿವರ ಅಭಿಪ್ರಾಯ ಪಡೆದುಕೊಳ್ಳದೇ, ‘ಪೈಲಟ್ ಪ್ರಾಜೆಕ್ಟ್’ ಮೂಲಕ ಪೂರ್ವ ಪರೀಕ್ಷೆ ಮಾಡದೇ ಅನುಷ್ಠಾನಗೊಳಿಸಲು ಹೊರಟರೆ ಸಿಬಲ್ ಅವರೂ ಕೂಡ ಹುಚ್ಚು ಮೊಹಮದ್‌ನಂತಾಗಬೇಕಾಗುತ್ತದೆ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: