ಬಾಂಬಿಡುವವರ ಬಾಯ್ಮುಚ್ಚಿಸಲು ಬೇಕೊಬ್ಬ ಬರಾಕ್ ಒಬಾಮ!

“ನನಗೆ ಅರ್ಥವಾಗುತ್ತದೆ, ಮುಷರ್ರಫ್ ಅವರಿಗೆ ಅವರದ್ದೇ ಆದ ಸಮಸ್ಯೆ, ಸವಾಲುಗಳಿವೆ. ಆದರೆ ನಾನೊಂದು ಮಾತನ್ನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಮೂರು ಸಾವಿರ ಅಮೆರಿಕನ್ನರನ್ನು ಕೊಲೆಗೈದ ಭಯೋತ್ಪಾದಕರು ಇಂದಿಗೂ ಪಾಕ್ ಹಾಗೂ ಅಫ್ಘಾನಿಸ್ತಾನದ ಪರ್ವತ ಶ್ರೇಣಿಗಳಲ್ಲಿ ಅಡಗಿ ಕುಳಿತಿದ್ದಾರೆ. ಒಸಾಮಾ ಬಿನ್ ಲಾಡೆನ್ ಹಾಗೂ ಆಯ್‌ಮನ್ ಅಲ್ ಝವಾಹಿರಿ ಸೇರಿದಂತೆ ಪ್ರಮುಖ ಅಲ್ ಖಾಯಿದಾ ನಾಯಕರು ೨೦೦೫ರಲ್ಲಿ ಪಾಕಿಸ್ತಾನದ ಗಡಿಯೊಳಗಿನ ಪ್ರದೇಶವೊಂದರಲ್ಲಿ ಸಭೆ ಸೇರಿದ್ದರು. ಈ ಬಗ್ಗೆ ಅಮೆರಿಕಕ್ಕೆ ಸ್ಪಷ್ಟ ಮಾಹಿತಿಯೂ ದೊರೆತಿತ್ತು. ಆದರೆ ಅವರ ಮೇಲೆ ದಾಳಿ ಮಾಡಿದರೆ ಎಲ್ಲಿ ಪಾಕಿಸ್ತಾನದ ಜತೆಗಿನ ಸಂಬಂಧ ಹಾಳಾಗುತ್ತದೋ ಎಂಬ ಭಯದಿಂದ ಸುವರ್ಣ ಅವಕಾಶ ಸಿಕ್ಕಿದ್ದರೂ ಅಮೆರಿಕ ಆಕ್ರಮಣ ಮಾಡಲಿಲ್ಲ. ಅದೊಂದು ದೊಡ್ಡ ತಪ್ಪು. ಒಂದು ವೇಳೆ, ಇಂತಹ ಖಚಿತ ಮಾಹಿತಿ ದೊರೆತರೆ, ಪಾಕಿಸ್ತಾನದ ಅನುಮತಿಯಿಲ್ಲದಿದ್ದರೂ ಪಾಕ್ ನೆಲದಲ್ಲಿ ಅಡಗಿಕೊಂಡಿರುವ ಭಯೋತ್ಪಾದಕರ ಮೇಲೆ ದಾಳಿ ಮಾಡುತ್ತೇನೆ”.
-ಆಗಸ್ಟ್ ೧, ೨೦೦೭.

“ನಾನು ಇರಾಕ್ ಯುದ್ಧವನ್ನು ಪ್ರಾರಂಭದಲ್ಲೇ ವಿರೋಧಿಸಿದೆ. ನಾವು ಮೊದಲು ಬಿನ್ ಲಾಡೆನ್ ಹಾಗೂ ಅಲ್‌ಖಾಯಿದಾ ವಿರುದ್ಧ ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಯುದ್ಧವನ್ನು ಪೂರ್ಣಗೊಳಿಸಬೇಕು ಎಂದು ವಾದಿಸಿದೆ. ಪಾಕ್ ಮತ್ತು ಅಫ್ಘಾನಿಸ್ತಾನದ ಗಡಿಯಲ್ಲಿರುವ ಅಲ್ ಖಾಯಿದಾ ಅಡಗುತಾಣವನ್ನು ನಾಶಪಡಿಸಬೇಕು, ಮುಷರ್ರಫ್ ಅವರ ಖಜಾನೆಯನ್ನು ತುಂಬಿಸುತ್ತಾ ಆತನಿಂದ ಏನನ್ನೋ ನಿರೀಕ್ಷಿಸುತ್ತಾ ಕುಳಿತುಕೊಳ್ಳಬಾರದು ಎಂದು ತಿಳಿ ಹೇಳಿದೆ, ಪಾಕಿಸ್ತಾನಕ್ಕೆ ಹಣಕಾಸು ಸಹಾಯ ನೀಡುವ ಮೊದಲು ಅಲ್ ಖಾಯಿದಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸಬೇಕೆಂಬ ಪೂರ್ವ ಷರತ್ತು ಹಾಕಬೇಕೆಂದು ವಾದ ಮಾಡಿದೆ. ಪಾಕಿಸ್ತಾನದ ವಿಷಯದಲ್ಲಿ ನಾವು ಅನುಸರಿ ಸುತ್ತಿರುವ ನೀತಿಯನ್ನು ಬದಲಾಯಿಸದ ಹೊರತು ಅಫ್ಘಾನಿಸ್ತಾನದಲ್ಲಿ ನಾವು ಯಶಸ್ಸು ಗಳಿಸಲು ಸಾಧ್ಯವಿಲ್ಲ. ಅಮೆರಿಕದ ಅಧ್ಯಕ್ಷನಾಗಿ, ಅಲ್ ಖಾಯಿದಾ ಹಾಗೂ ತಾಲಿಬಾನ್ ವಿರುದ್ಧದ ಹೋರಾಟಕ್ಕೆ ಮೊದಲ ಆದ್ಯತೆ ನೀಡುತ್ತೇನೆ. ಪಾಕ್ ಮತ್ತು ಅಫ್ಘಾನಿಸ್ತಾನದಲ್ಲಿರುವ ಭಯೋ ತ್ಪಾದಕರನ್ನು ಮಟ್ಟಹಾಕಲೇಬೇಕು ಹಾಗೂ ಆ ಯುದ್ಧವನ್ನು ನಾವು ಗೆಲ್ಲಲೇಬೇಕು”.
-ಜುಲೈ ೧೬, ೨೦೦೮.

“ಪಾಕಿಸ್ತಾನ ಮೊದಲಿನಿಂದಲೂ ಮುಜಾಹಿದ್ದೀನ್ ಗಳ ಚಟುವಟಿಕೆಗಳನ್ನು ಒಂದೋ ಮೂಕಪ್ರೇಕ್ಷಕನಂತೆ ನೋಡುತ್ತಾ ಬಂದಿದೆ, ಇಲ್ಲವೆ ಕೆಲವೊಂದು ಸಂದರ್ಭ ಗಳಲ್ಲಿ ಹಣಕಾಸು ಸಹಾಯ ನೀಡಿ ಪೋಷಣೆ ಮಾಡಿದೆ. ಹಾಗೆ ಮಾಡುವುದರಿಂದ ಕಾಶ್ಮೀರದಲ್ಲಿ ತನಗೆ ಸಹಾಯಕವಾಗಬಹುದೆಂಬ ಯೋಚನೆ ಪಾಕಿಸ್ತಾನದ್ದಾ ಗಿತ್ತು. ಈ ರೀತಿ ಕುಮ್ಮಕ್ಕು ನೀಡುವುದು ಹೇಗೆ ತಿರುಗುಬಾಣ ವಾಗಬಹುದು ಎಂಬುದರ ಬಗ್ಗೆ ಪ್ರಾಮಾಣಿಕ ಮಾತುಕತೆ ನಡೆಯಬೇಕು. ಇಂದು ಪಾಕಿಸ್ತಾನ ‘terrorists sanctuary’ ಆಗಿದೆ”.
-ಜುಲೈ ೨೮, ೨೦೦೮.

ಈ ಎಲ್ಲ ದಿಟ್ಟ ಹೇಳಿಕೆಗಳನ್ನಿತ್ತವರು ಅಮೆರಿಕದ ಮುಂದಿನ ಅಧ್ಯಕ್ಷರಾಗುವತ್ತ ದಾಪುಗಾಲಿಡುತ್ತಿರುವ ಬರಾಕ್ ಒಬಾಮ. ಅಮೆರಿಕದ ಮೇಲೆ ದಾಳಿ ನಡೆದು ೭ ವರ್ಷಗಳಾಗುತ್ತ ಬಂದಿವೆ. ಆದರೂ ಅಮೆರಿಕವಾಗಲಿ, ಅದರ ನಾಯಕರಾಗಲಿ ತಮ್ಮ ದೇಶದ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಮರೆತಿಲ್ಲ. ೨೦೦೧ರಲ್ಲಿ ನಡೆದ ದಾಳಿಯ ಬೆನ್ನಲ್ಲೇ ಜಾರ್ಜ್ ಬುಷ್ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿದರೆ, ಮುಂದಿನ ಅಧ್ಯಕ್ಷರೆನಿಸಿಕೊಂಡಿರುವ ಒಬಾಮ, ಲಾಡೆನ್ ಮತ್ತು ಅಲ್ ಖಾಯಿದಾವನ್ನು ನಾಶ ಪಡಿಸುವ ಸಲುವಾಗಿ ಸಾವಿರಾರು ಮೈಲು ದೂರದಲ್ಲಿರುವ ಪಾಕಿಸ್ತಾನದ ಭೂಭಾಗದ ಮೇಲೆಯೇ ದಾಳಿ ಮಾಡುವ ಮಾತನಾಡುತ್ತಿದ್ದಾರೆ.

ಆದರೆ ನಾವು?

ಎಲ್ಲೇ ಬಾಂಬ್ ಸ್ಫೋಟವಾದರೂ ‘ಪೋಟಾ’ ಇಲ್ಲ ದಿರುವುದೇ ಭಯೋತ್ಪಾದಕ ದಾಳಿಗೆ ಕಾರಣ ಎನ್ನುತ್ತಾರೆ ಮುಂದಿನ ಪ್ರಧಾನಿ ಎನಿಸಿಕೊಂಡಿರುವ ಲಾಲ್ ಕೃಷ್ಣ ಆಡ್ವಾಣಿ, ಎಷ್ಟೇ ಜನ ಸತ್ತರೂ ಶಾಂತಿಯಿಂದಿರಿ ಎಂದು  ಸಂದೇಶ ನೀಡುತ್ತಾರೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಪ್ರಧಾನಿ ಮನಮೋಹನ್ ಸಿಂಗ್ ಅವರಂತೂ ಮಾತನಾಡು ವುದೇ ಇಲ್ಲ, ಇನ್ನು ಯಥಾಪ್ರಕಾರ ಘಟನೆ ನಡೆದ ಸ್ಥಳಕ್ಕೆ ಭೇಟಿ ಕೊಡುವ ಸೋನಿಯಾ ಗಾಂಧಿಯವರು ನೆರೆದ ಜನರತ್ತ ಕೈಬೀಸಿ ಹೋಗುತ್ತಾರೆ. ಇಂತಹವರ ನಡುವೆ, ಪಕ್ಕದಲ್ಲಿ ಬಾಂಬ್ ಸಿಡಿದು ಅಮಾಯಕರು ಹೆಣವಾಗಿ ಬಿದ್ದಿದ್ದರೂ ಮರುದಿನ ಎಂದಿನಂತೆ ಬಸ್ ಹತ್ತಿ, ಕಾರು ಏರಿ ಕಚೇರಿಗೆ ಹೋಗುವುದನ್ನು ಮಾಧ್ಯಮಗಳು ‘ರಿಸೈಲಿಯೆನ್ಸ್’ ಎಂದು ಹೊಗಳುತ್ತವೆ. ಆದರೆ ‘ರಿಸೈಲಿಯೆನ್ಸ್’ ಅಂದರೆ ಏನು? ನಿರ್ಭಾವುಕತೆಯನ್ನು ಹೇಗೆತಾನೇ ರಿಸೈಲಿಯೆನ್‌ಎನ್ನುತ್ತೀರಿ? “ನಮ್ಮ ನೆಲದ ಮೇಲೆ ಮೂರು ಸಾವಿರ ದೇಶವಾಸಿಗಳನ್ನು ಕೊಂದ ಭಯೋತ್ಪಾದಕ ದಾಳಿ ನಡೆದು ೭ ವರ್ಷಗಳಾಗುತ್ತಾ ಬಂದಿದ್ದರೂ ಅದಕ್ಕೆ ಕಾರಣಕರ್ತರಾದ ಉಗ್ರರು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ” ಎಂದು ಒಬಾಮ ಇಂದಿಗೂ ಗುಡುಗುತ್ತಿದ್ದರೆ, ಅಹಮದಾಬಾದ್ ಸ್ಫೋಟ ನಡೆದು ೭ ದಿನಗಳಾಗುವಷ್ಟರಲ್ಲೇ ನಾವದನ್ನು ಮರೆತು ಬಿಟ್ಟಿದ್ದೇವೆ. ನಮ್ಮವರ ಬಗ್ಗೆಯೇ ಇಂತಹ ನಿರ್ಭಾವುಕತೆ ತೋರುವ ನಾವು ಇರಾಕ್ ಮೇಲೆ ಅಮೆರಿಕ ಆಕ್ರಮಣ ಮಾಡಿದ ಕೂಡಲೇ ಭಾವುಕರಾಗಿ ಬಿಡುತ್ತೇವೆ. ಎಲ್ಲೋ ನಡೆಯುವ ದಾಳಿ, ಸಾವು, ನೋವುಗಳಿಗೆ ಇಲ್ಲಿ ಕಣ್ಣೀರು ಸುರಿಸುತ್ತೇವೆ, ಅಮೆರಿಕದ ವಿರುದ್ಧ ಪ್ರತಿಭಟನೆ ಮಾಡುತ್ತೇವೆ, ಜಾರ್ಜ್ ಬುಷ್ ಅವರನ್ನು ಕಟುವಾಗಿ ಟೀಕಿಸುತ್ತೇವೆ.

ಏಕೆ?

ನಮ್ಮಿಂದಂತೂ ಭಯೋತ್ಪಾದಕರನ್ನು, ಭಯೋತ್ಪಾದಕರಿಗೆ ಕುಮ್ಮಕ್ಕು ನೀಡುವ ರಾಷ್ಟ್ರಗಳನ್ನು ಮಟ್ಟಹಾಕುವ ತಾಕತ್ತಿಲ್ಲ. ಆದರೆ ಮಟ್ಟಹಾಕುವವರನ್ನೂ ಟೀಕಿಸುವುದೇಕೆ? ಒಂದು ಕ್ಷಣ ಶಾಂತಚಿತ್ತರಾಗಿ ಕುಳಿತು ಯೋಚನೆ ಮಾಡಿ. ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಅವರಿಂದ ಲಾಭವಾಗಿರುವುದು ಯಾರಿಗೆ, ಯಾವ ದೇಶಕ್ಕೆ?

೧೯೯೯, ಡಿಸೆಂಬರ್ ೨೪ರಂದು ನಮ್ಮ ಇಂಡಿಯನ್ ಏರ್‌ಲೈನ್ಸ್ ವಿಮಾನವನ್ನು ಕಂದಹಾರ್‌ಗೆ ಅಪಹರಣ ಮಾಡಿದಾಗ ತಾಲಿಬಾನ್ ಆಡಳಿತ ಅದರಲ್ಲಿ ಭಾಗಿಯಾಗಿದೆ ಎಂದು ಗೊತ್ತಾದರೂ ನಮ್ಮಿಂದ ಏನೂ ಮಾಡಲಾಗಲಿಲ್ಲ. ಮೌಲಾನ ಮಸೂದ್  ಅಜರ್‌ನಂತಹ ಕಟ್ಟಾ ಭಯೋ ತ್ಪಾದಕನನ್ನು ನಮ್ಮ ವಿದೇಶಾಂಗ ಸಚಿವರೇ ಸ್ವತಃ ಬಿಟ್ಟುಬರ ಬೇಕಾಯಿತು. ಇಂತಹ ಅವಮಾನವನ್ನೂ ಮೌನವಾಗಿ ನುಂಗಿಕೊಳ್ಳಬೇಕಾಗಿ ಬಂತು. ಆದರೆ ೨೦೦೧, ಸೆಪ್ಟೆಂಬರ್ ೧೧ರಂದು ನಡೆದ ದಾಳಿಯ ನಂತರ ನಡೆದ ಘಟನೆಗಳನ್ನು ನೆನಪಿಸಿಕೊಳ್ಳಿ. ಅಂತಹ ಸೋವಿಯತ್ ರಷ್ಯಾದಿಂದಲೇ ನೆರೆಯಲ್ಲೇ ಇರುವ ಅಫ್ಘಾನಿಸ್ತಾನವನ್ನು ಸೋಲಿಸಲು ಸಾಧ್ಯ ವಾಗಲಿಲ್ಲ, ಇನ್ನು ಸಾವಿರಾರು ಕಿ.ಮೀ. ದೂರದಲ್ಲಿರುವ ಅಮೆರಿಕವೇನು ಮಾಡೀತು? ಎಂಬ ಅಭಿಪ್ರಾಯ, ಅನುಮಾನ ಎಲ್ಲರಿಂದಲೂ ವ್ಯಕ್ತವಾಯಿತು. ಇಷ್ಟಾಗಿಯೂ ಅಫ್ಘಾನಿಸ್ತಾನದ ಮೇಲೆ ಆಕ್ರಮಣ ಮಾಡಿದ ಜಾರ್ಜ್ ಬುಷ್ ಒಂದೂವರೆ ತಿಂಗಳಲ್ಲಿ ಇಡೀ ಅಫ್ಘಾನಿಸ್ತಾನವನ್ನೇ ವಶಪಡಿಸಿಕೊಂಡರು. ಅಲ್ಲಿನ ತಾಲಿಬಾನ್ ಭಯೋತ್ಪಾದಕರು ಜೀವ ಉಳಿಸಿಕೊಳ್ಳಲು ಪಲಾಯನ ಮಾಡಬೇಕಾಗಿ ಬಂತು. ಹಾಗೆ ಅಮೆರಿಕ ತಾಲಿಬಾನನ್ನು ಮಟ್ಟಹಾಕಿದ್ದರಿಂದ ಲಾಭವಾಗಿದ್ದು ಯಾರಿಗೆ? ನಮ್ಮ ಕಾಶ್ಮೀರದಲ್ಲಿ ಭಯೋ ತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ್ದವರಿಗೆ ತರಬೇತಿ ನೀಡುತ್ತಿದ್ದುದೇ ತಾಲಿಬಾನ್. ಆದರೆ ಅಮೆರಿಕ ಇರಾಕ್ ಮೇಲೆ ದಾಳಿ ಮಾಡಿ ಆಕ್ರಮಿಸಿಕೊಂಡ ಕಾರಣ, ಅಫ್ಘಾನಿ ಸ್ತಾನವನ್ನು ವಶಕ್ಕೆ ತೆಗೆದುಕೊಂಡ ಕಾರಣ ಮುಸ್ಲಿಂ ಭಯೋತ್ಪಾದಕರು ಕಾಶ್ಮೀರವನ್ನು ಕಸಿದುಕೊಳ್ಳುವುದಕ್ಕಾಗಿ ಹೋರಾಡುವ ಬದಲು ತಮ್ಮ ಸ್ವಂತ ನೆಲೆಯನ್ನೇ ಮೊದಲು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಯಿತು. ಹಾಗಾಗಿ ಇರಾಕ್ ಮತ್ತು ಅಫ್ಘಾನಿಸ್ತಾನವನ್ನು ಮರಳಿ ಕಿತ್ತುಕೊಳ್ಳುವುದರ ಬಗ್ಗೆಯೇ ಅವರು ಚಿಂತಿತರಾಗಿದ್ದಾರೆ, ಅಲ್ಲಿ ಹೋರಾಟಕ್ಕಿಳಿದಿದ್ದಾರೆ. ಅಮೆರಿಕದ ಉದ್ದೇಶ, ಹಿತಾಸಕ್ತಿ ಏನೇ ಆಗಿರಬಹುದು. ಆದರೆ ಅಮೆರಿಕ ಅಂತಹ ಪರಿಸ್ಥಿತಿ ಸೃಷ್ಟಿಸಿದ ಕಾರಣ ನಮ್ಮ ಕಾಶ್ಮೀರದಲ್ಲಿ ಉಗ್ರರ ಉಪಟಳ ಕಡಿಮೆಯಾಗಿದೆ. ಒಂದು ವೇಳೆ, ಅಮೆರಿಕವೇನಾದರೂ ಅಫ್ಘಾನಿಸ್ತಾನದ ಹಾಗೂ ಇರಾಕ್ ಮೇಲೆ ದಾಳಿ ಮಾಡಿ ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳದೇ ಹೋಗಿದ್ದರೆ ವಿದೇಶಿ ಭಯೋತ್ಪಾದಕರು ಕಾಶ್ಮೀರ ಕಣಿವೆ ಸೇರಿ ನಮ್ಮ ಸೇನಾ ಪಡೆಗಳ ವಿರುದ್ಧ ನಿತ್ಯವೂ ಕಾದಾಟಕ್ಕಿಳಿದಿರುತ್ತಿದ್ದರು. ಕಾಶ್ಮೀರ ನಮಗೆ ದೊಡ್ಡ ತಲೆನೋವಾಗಿರುತ್ತಿತ್ತು. ಕಾಶ್ಮೀರದಲ್ಲಿದ್ದ ಹಿಂದೂಗಳನ್ನು ಹೇಗೆ ಹತ್ಯೆಗೈಯ್ಯಲಾಯಿತೋ, ಹಾಗೆಯೇ ಈ ವೇಳೆಗಾಗಲೇ ಜಮ್ಮುವಿನಿಂದಲೂ ಹಿಂದೂಗಳನ್ನು ಹೊರದಬ್ಬಿರುತ್ತಿದ್ದರು! ಆದರೆ ತಾಲಿಬಾನ್ ಆಡಳಿತವನ್ನು ಕಿತ್ತೊಗೆದಿದ್ದರಿಂದ ಕಾಶ್ಮೀರದಲ್ಲಿನ ಭಯೋತ್ಪಾದನೆ ಕುಂದಿದ್ದು ಮಾತ್ರವಲ್ಲ, ಇಂದು ಅಫ್ಘಾನಿಸ್ತಾನದಲ್ಲಿ ರಸ್ತೆ, ಹೆದ್ದಾರಿ, ಸಂಪರ್ಕ ವ್ಯವಸ್ಥೆ ನಿರ್ಮಾಣ ಮುಂತಾದ ಕಾಮಗಾರಿಗಳ ಗುತ್ತಿಗೆ ಭಾರತಕ್ಕೆ ದೊರೆತಿದೆ. ಭಾರತ ಹಾಗೂ ಅಫ್ಘಾನಿಸ್ತಾನಗಳ ನಡುವೆ ಉತ್ತಮ ಬಾಂಧವ್ಯವೇರ್ಪಡುತ್ತಿದೆ. ಅಫ್ಘಾನಿಸ್ತಾನದಲ್ಲಿ ನಾವು ನಿರ್ಮಾಣ ಮಾಡುತ್ತಿರುವ ಹೆದ್ದಾರಿ ಮಧ್ಯ ಏಷ್ಯಾದ ಜತೆ ವಾಣಿಜ್ಯ ಸಂಪರ್ಕ ಹೊಂದಲು ನಮಗೇ ಸಹಕಾರಿಯಾಗಲಿದೆ. ಇದು ಪಾಕಿಸ್ತಾನವನ್ನು ಎಷ್ಟು ಚಿಂತೆಗೀಡು ಮಾಡಿದೆಯೆಂದರೆ ಕಾಬೂಲ್‌ನಲ್ಲಿರುವ ನಮ್ಮ ರಾಯಭಾರ ಕಚೇರಿ ಬಳಿ ಬಾಂಬ್ ಸ್ಫೋಟ ಮಾಡುವಂತಹ ಹೇಯ ಕೃತ್ಯಕ್ಕಿಳಿದಿದೆ. ಇದರಿಂದಾಗಿ ಪಾಕಿಸ್ತಾನದ ಬಣ್ಣ ಮತ್ತಷ್ಟು ಬಯಲಾಗುತ್ತಿದೆ. ಅಂತಾರಾಷ್ಟ್ರೀಯ ಸಮು ದಾಯ ಪಾಕಿಸ್ತಾನಕ್ಕೆ ಕವಡೆ ಕಿಮ್ಮತ್ತು ಕೊಡುತ್ತಿಲ್ಲ.

ಅಷ್ಟೇ ಅಲ್ಲ, ಅಮೆರಿಕ ವಿಶ್ವದ ಮತ್ತೊಂದು ಬೇಜವಾಬ್ದಾರಿ ರಾಷ್ಟ್ರವಾದ ಉತ್ತರ ಕೊರಿಯಾವನ್ನೂ ಮಟ್ಟಹಾಕುವ ಮಾತನಾಡುತ್ತಿದೆ, ಇರಾನನ್ನು ಹೆದರಿಸುತ್ತಿದೆ. ಅದರಿಂದಲೂ ಭಾರತಕ್ಕೇ ಲಾಭ. ಅಷ್ಟಕ್ಕೂ ಪಾಕಿಸ್ತಾನಕ್ಕೆ ಕ್ಷಿಪಣಿಗಳನ್ನು ನೀಡಿದ್ದೇ ಉತ್ತರ ಕೊರಿಯಾ. ಅದರ ಬಳಿ ಖಂಡಾಂತರ ಕ್ಷಿಪಣಿ(ಐಸಿಬಿಎಂ)ಗಳೂ ಇವೆ. ಇದುವರೆಗೂ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನಷ್ಟೇ ಪಾಕಿಸ್ತಾನಕ್ಕೆ ನೀಡಲಾಗಿದ್ದು ಒಂದು ವೇಳೆ ದೂರವ್ಯಾಪ್ತಿಯ ಖಂಡಾಂತರ ಕ್ಷಿಪಣಿಗಳನ್ನೂ ನೀಡಿದರೆ ಪರಿಸ್ಥಿತಿ ಏನಾದೀತು? ಭಾರತದ ಎಲ್ಲ  ಭಾಗ ಗಳೂ ಪಾಕಿಸ್ತಾನದ ಕ್ಷಿಪಣಿಗಳ ವ್ಯಾಪ್ತಿಗೆ ಒಳಪಡುತ್ತವೆ. ಇಂತಹ ಅಪಾಯದ ಹಿನ್ನೆಲೆಯಲ್ಲಿ ಯೋಚಿಸಿದಾಗ, ಅಮೆರಿಕವೇನಾದರೂ ಉತ್ತರ ಕೊರಿಯಾವನ್ನು ಹತ್ತಿಕ್ಕಿದರೆ ನಮಗೆ ಎದುರಾಗಬಹುದಾದ ಸಂಭವನೀಯ ಅಪಾಯ ತಪ್ಪಿದಂತಾಗುತ್ತದೆ ಎಂದೆನಿಸುವುದಿಲ್ಲವೆ? ಇನ್ನು ಇರಾನನ್ನು ಬಗ್ಗುಬಡಿದರೆ ಮತ್ತೊಂದು ನೆರೆಯ ಇಸ್ಲಾಮಿಕ್ ರಾಷ್ಟ್ರ ಅಣುಬಾಂಬ್ ಹೊಂದುವುದನ್ನು ತಪ್ಪಿಸಿದಂತಾಗುತ್ತದೆ. ಜಾರ್ಜ್ ಬುಷ್ ಅವರನ್ನು ನೀವು ಇಷ್ಟಪಡಿ, ಬಿಡಿ. ಆದರೆ ಅವರಿಂದ ಖಂಡಿತ ಭಾರತಕ್ಕೆ ಲಾಭವಾಗಿದೆ. ಒಂದು ವೇಳೆ, ಅಮೆರಿಕದ ಅಧ್ಯಕ್ಷನ ಸ್ಥಾನದಲ್ಲಿ ಬೇರೆ ಯಾವುದೇ ವ್ಯಕ್ತಿ ಆಸೀನರಾಗಿದ್ದರೂ ಜಾರ್ಜ್ ಬುಷ್ ಅವರಂತೆ ಭಾರತಕ್ಕೆ ಲಾಭದಾಯಕವಾದ ಅಣು ಸಹಕಾರ ಒಪ್ಪಂದವನ್ನು ಮಾಡಿಕೊಳ್ಳುತ್ತಿರಲಿಲ್ಲ! ಈ ಒಪ್ಪಂದವನ್ನು ಪಾಕಿಸ್ತಾನ ಮತ್ತು ಚೀನಾಗಳು ವಿರೋಧಿಸುತ್ತಿವೆ. ನಮ್ಮ ಕಟ್ಟಾ ಶತ್ರು ರಾಷ್ಟ್ರಗಳು ವಿರೋಧಿಸುತ್ತಿವೆ ಎಂದಾದರೆ ಒಪ್ಪಂದ ಭಾರತಕ್ಕೆ ಪೂರಕವಾಗಿದೆ ಎಂದೇ ಅರ್ಥವಲ್ಲವೆ? ಅಷ್ಟೇಕೆ, ತಮಗೂ ಅಂತಹದ್ದೇ ಅಣುಸಹಕಾರ ಒಪ್ಪಂದವನ್ನು ನೀಡಬೇಕೆಂದು ಪಾಕಿಸ್ತಾನ ಒತ್ತಾಯಿಸಿದೆ. ಆದರೆ ಪಾಕಿಸ್ತಾನದ ಬೇಡಿಕೆಗೆ ಪ್ರತಿಕ್ರಿಯೆ ನೀಡುವ ಗೋಜಿಗೂ ಹೋಗಿಲ್ಲ ಅಂದರೆ ಅಮೆರಿಕ ಪಾಕ್ ವಿಷಯದಲ್ಲಿ ಅದೆಂತಹ ಅಸಡ್ಡೆ ತೋರುತ್ತಿದೆ ಎಂಬುದನ್ನು ಯೋಚಿಸಿ. ಅಷ್ಟೇ ಅಲ್ಲ, ಅಮೆರಿಕದ ಮುಂದಿನ ಅಧ್ಯಕ್ಷರಾಗುವ ಎಲ್ಲ ಸಾಧ್ಯತೆ ಇರುವ ಬರಾಕ್ ಒಬಾಮ ಅವರಂತೂ ಪಾಕಿಸ್ತಾನದ ವಿರುದ್ಧ ತೀರಾ ಕಟುವಾಗಿ ಮಾತನಾಡುತ್ತಿದ್ದಾರೆ, ಪಾಕ್ ನೆಲದಲ್ಲಿ ಅಡಗಿಕೊಂಡಿರುವ ಭಯೋತ್ಪಾದಕರ ಮೇಲೆ ಪಾಕಿಸ್ತಾನದ ಅನುಮತಿಯಿಲ್ಲದಿದ್ದರೂ ದಾಳಿ ಮಾಡುವ ಬೆದರಿಕೆ ಹಾಕಿದ್ದಾರೆ.  ೧೯೪೮ರಿಂದ ೨೦೦೮ವರೆಗೂ, ಐಸೆನ್ ಹೋವರ್ ಅವರಿಂದ ಜಾರ್ಜ್ ವಾಕರ್ ಬುಷ್‌ವರೆಗೂ ಅಮೆರಿಕದ ಯಾವ ಅಧ್ಯಕ್ಷರೂ ತನ್ನ ಮಿತ್ರರಾಷ್ಟ್ರವಾದ ಪಾಕಿಸ್ತಾನದ ಬಗ್ಗೆ ಇಂತಹ ಮಾತನಾಡಿರಲಿಲ್ಲ, ಪಾಕಿಸ್ತಾನದ ಬೂಟಾಟಿಕೆಯನ್ನು ಇಷ್ಟು ಚೆನ್ನಾಗಿ ಗುಣಗಾನ ಮಾಡಿರ ಲಿಲ್ಲ! ಒಬಾಮ ಅಂತಹ ಗಟ್ಟಿತನ ತೋರಿದ್ದಾರೆ. ಇದು ಭಾರತಕ್ಕಂತೂ ಖುಷಿ ಕೊಡುವ ವಿಚಾರ. ಅಮೆರಿಕವೇನಾದರೂ ಅಫ್ಘಾನಿಸ್ತಾನ, ಇರಾಕ್‌ನಂತೆ ಪಾಕಿಸ್ತಾನವನ್ನೂ ಬಗ್ಗುಬಡಿದರೆ ಅದರಿಂದ ಭಾರತಕ್ಕೇ ಒಳ್ಳೆಯದು! ಪಾಕಿಸ್ತಾನದ ಸದ್ದಡಗಿದರೆ ಬೆಂಗಳೂರು, ಜೈಪುರ, ಅಹಮದಾಬಾದ್, ಮುಂಬಯಿ, ದಿಲ್ಲಿಗಳಲ್ಲಿ ಬಾಂಬಿಡುವ ದೇಶದ್ರೋಹಿ ಭಾರತೀಯರೂ ತೆಪ್ಪಗಾಗುತ್ತಾರೆ!

ಅಷ್ಟಕ್ಕೂ ನಮ್ಮ ನಾಯಕರಿಗಂತೂ ಪಾಕಿಸ್ತಾನಕ್ಕೆ ಬಾಯಿಮಾತಿನಲ್ಲಿ ಎಚ್ಚರಿಕೆ ಕೊಡುವ ತಾಕತ್ತೇ ಇಲ್ಲ, ಬಾಂಗ್ಲಾದೇಶದಂತಹ ಮುಷ್ಟಿ ಗಾತ್ರದ ದೇಶ ಎಷ್ಟೆಲ್ಲಾ ಉಪದ್ರವ ಕೊಟ್ಟರೂ ಒಂದು ಗಟ್ಟಿ ಹೇಳಿಕೆ ಕೊಡುವ ಧೈರ್ಯ ತೋರುವುದಿಲ್ಲ. ಕೆಲವೊಮ್ಮೆ ‘ಆರ್ ಯಾ ಪಾರ್’, ‘ಆಪರೇಶನ್ ಪರಾಕ್ರಮ್’ ಎನ್ನುತ್ತಾ ಗಡಿಯಲ್ಲಿ ತಿಂಗಳುಗಟ್ಟಲೆ ಸೇನೆಯನ್ನು ನಿಯೋಜನೆ ಮಾಡಿದರೂ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಎದೆಗಾರಿಕೆ ತೋರುವುದಿಲ್ಲ. ಇಂತಹವರನ್ನು ನಂಬಿಕೊಂಡು ಕುಳಿತು ಕೊಳ್ಳುವುದಕ್ಕಿಂತ ಅಮೆರಿಕದ ಮೇಲೆ ವಿಶ್ವಾಸವಿಡುವುದೇ ಒಳಿತು ಅಲ್ಲವೆ?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: