ಬೆಳಕಿನ ಹಬ್ಬದಲಿ, ಆರದಿರಲಿ ದೃಷ್ಟಿದೀಪ! – Dispell Inner Darkness on this Deepavali

Helen Keller with her teacher Anne Sullivan
ಅಂತಹ Thrilling ಕಥೆಗಳನ್ನು ನಾವೆಲ್ಲರೂ ಕೇಳಿಯೇ ಕೇಳಿರುತ್ತೇವೆ. ಹೀರೋ ಸಾಯುವುದಕ್ಕೆ ಇಂತಿಷ್ಟೇ ಸಮಯ ಉಳಿದಿರುತ್ತದೆ. ಆ ಸಮಯ ಕೆಲವೊಮ್ಮೆ ಒಂದು ವರ್ಷದಷ್ಟು ದೀರ್ಘವೂ ಆಗಿರಬಹುದು, ಇಪ್ಪತ್ತನಾಲ್ಕು ಗಂಟೆಗಳಷ್ಟು ಕ್ಷಣಿಕವೂ ಆಗಿರಬಹುದು. ಆದರೆ ಆ ಅವಧಿಯಲ್ಲಿ ಹೀರೋ ಏನು ಮಾಡಲಿದ್ದಾನೆ, ಹೇಗೆ ಸಂಕಷ್ಟದಿಂದ ಪಾರಾಗುತ್ತಾನೆ ಎಂಬುದನ್ನು ತಿಳಿದುಕೊಳ್ಳುವ ಆಸಕ್ತಿ, ಉತ್ಸಾಹ ನಮ್ಮೆಲ್ಲರಿಗೂ ಇರುತ್ತದೆ. ಅಷ್ಟೇ ಅಲ್ಲ, ಒಂದು ವೇಳೆ ನಾವೇ ಅಂತಹ ಪರಿಸ್ಥಿತಿಯಲ್ಲಿದ್ದಿದ್ದರೆ ಏನು ಮಾಡುತ್ತಿದ್ದೆವು, ಯಾವ ರೀತಿ ಎದುರಿಸುತ್ತಿದ್ದೆವು ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿ ನಮ್ಮನ್ನೂ ಚಿಂತೆಗೆ ಹಚ್ಚಬಲ್ಲದು ಆ ಕಥೆ. ಅಷ್ಟಕ್ಕೂ, ನಾಳೆ ಅನ್ನೋದು ಕನಸುಗಳ ಗೊಂಚಲು.

ವಿಶಾಲವಾದ ಬದುಕಿನ ಹರವಿನಲ್ಲಿ ಈ `ನಾಳೆ’ ರಮ್ಯ ಅನುಭೂತಿಗಳ ಭಂಡಾರ. ಒಂದು ವೇಳೆ `ನಾಳೆ’ ಎಂಬುದು ಇಲ್ಲದಿದ್ದರೆ ಅಥವಾ ಇಂದೇ ನಮ್ಮ ಬದುಕಿನ ಕೊನೆಯ ಪಯಣ ಎಂಬ ದಟ್ಟ ವಾಸ್ತವ ಅವರಿಸಿಕೊಂಡರೆ ಬದುಕೇ ಬದಲಾಗಿ ಬಿಡುತ್ತದೆ. ನಾವು ಬದುಕನ್ನು ನೋಡುವ, ಅನುಭವಿಸುವ, ಪ್ರೀತಿಸುವ ವಿಧಾನವೂ ಏಕಾಏಕಿ ಬದಲಾಗುತ್ತದೆ. ಕಲ್ಲು ಹೃದಯಗಳೂ ಕರಗಿ ಬಿಡುತ್ತವೆ. ಸಮಯದ ಸೆರಗಿನಲ್ಲಿ ಆಲಸ್ಯವನ್ನು ಮರೆಮಾಚಲು ಅವಕಾಶವೇ ಇಲ್ಲದಂತಾಗುತ್ತದೆ. ಇದ್ದ ಹಾಗೇ ಬದುಕುವ ಉಡಾಫೆಯ ಜಾಗದಲ್ಲಿ ಇಲ್ಲದ್ದನ್ನು ಅನುಭವಿಸುವ ಆತುರ ಆವರಿಸುತ್ತದೆ. ಈ ಆತುರ ಬದುಕನ್ನು ಹದವಾಗಿಸುತ್ತದೆ. ಬದುಕಿನ ಹಂದರದಲ್ಲಿನ ಓರೆಕೋರೆಗಳು ಮುಚ್ಚಿಕೊಂಡು ಅದರ ಮೌಲ್ಯ ಇಮ್ಮಡಿಸುತ್ತದೆ. ಪ್ರತಿಕ್ಷಣವನ್ನೂ ಸಾರ್ಥಕವಾಗಿ ಕಳೆಯುವ ಅನಿವಾರ್ಯತೆ ಎದುರಾಗಿ ಬದುಕು ಪರಿಪೂರ್ಣತೆಯೆಡೆಗೆ ಸಾಗುತ್ತದೆ. ಆ ಕೊನೆಯ ಕ್ಷಣಗಳಲ್ಲಿ ನಾವು ನೋಡದ, ಅನುಭವಿಸದ, ತಿಳಿದುಕೊಳ್ಳದ ಸತ್ಯಗಳನ್ನು ಬೊಗಸೆ ತುಂಬಾ ತುಂಬಿಕೊಂಡು ಆಸ್ವಾದಿಸಿ ಬಿಡುವ ತವಕ ಮನೆ ಮಾಡುತ್ತದೆ. ನಿನ್ನೆಯ ತಪ್ಪಿಗೆ, ನೋವಿಗೆ ಇಂದೇ ಮುಲಾಮು ಹಾಕುತ್ತೇವೆ. ಸಾವಿನ ನೆರಳು ಬದುಕಿನ ನಿಜಾರ್ಥವನ್ನು ಬಿಚ್ಚಿಬಿಡುತ್ತದೆ. ಆದರೆ ಇದು ಕಥೆಗಳಲ್ಲಿ ಮಾತ್ರ ಕಾಣಬಹುದಾದ ಕಲ್ಪನೆ.

ಅಷ್ಟಕ್ಕೂ, ಕಥೆಗಳಲ್ಲಿ ಮಾತ್ರ ಕೊನೇ ಕ್ಷಣದಲ್ಲಿ ಆ Stroke of fortune ಅಂತಾರಲ್ಲ ಅದರಿಂದಾಗಿ ಹೀರೋ ಬದುಕುಳಿಯುವುದು ಸಾಧ್ಯ.
ನಾವೆಲ್ಲರೂ ಜೀವನವನ್ನು ಭಾರೀ ಹಗುರವಾಗಿ ತೆಗೆದುಕೊಳ್ಳುತ್ತೇವೆ. ಹುಟ್ಟಿದ ಮೇಲೆ ಎಂದಾದರೂ ಸಾಯಲೇಬೇಕು. ಅಲ್ಲಿಯ ತನಕ “ಮಸ್ತಿ ಮಾಡೋಣ ಬಾ” ಎಂಬ ಧೋರಣೆಯಲ್ಲಿಯೇ ಎಲ್ಲರೂ ಬದುಕು ದೂಡುತ್ತಾರೆ. ಈ ಉಡಾಫೆ ಸ್ವಸ್ಥ ಮನುಷ್ಯನ ಜೀವನದ ಎಲ್ಲ ರಂಗಗಳಲ್ಲಿಯೂ ಕಾಣಬಹುದು. ಬದುಕು ಸಾದರಪಡಿಸುವ ಬೆಳಕಿನ, ಬಣ್ಣದ ಚಿತ್ತಾರದಲ್ಲಿ ಕತ್ತಲಿನ ಅರ್ಥ ಕಳೆದುಹೋಗುತ್ತದೆ. ಸಪ್ತಸ್ವರಗಳ ನಿನಾದದಲ್ಲಿ ಗಾಢ ಮೌನದ ಮೌಲ್ಯ ಮರೆಯಾಗುತ್ತದೆ. ನಾವು ಎಲ್ಲವನ್ನೂ ನೋಡಬಹುದು, ಎಲ್ಲವನ್ನೂ ಕೇಳಬಹುದು ಎಂಬ ಭ್ರಮೆಯಲ್ಲಿ ನೋಡ ಬೇಕಾದುದನ್ನು ನೋಡದೆ, ಕೇಳಬೇಕಾದುದನ್ನು ಕೇಳದೆ ಇರುವ ಸಂಭವವೇ ಹೆಚ್ಚು. ನೀಜ ಹೇಳಿ, ನಮ್ಮಲ್ಲಿ ಎಷ್ಟು ಜನ ಸುತ್ತಲಿನ ಪರಿಸರದ ವೈಶಿಷ್ಟ್ಯಗಳನ್ನು ಸ್ಮೃತಿಪಟಲದಲ್ಲಿ ಸೆರೆಹಿಡಿಯುತ್ತೇವೆ? ಎಷ್ಟು ಜನರು ಹಕ್ಕಿಗಳ ಇಂಚರ ಪ್ರಪಂಚವನ್ನು ಪ್ರವೇಶಿಸುತ್ತೇವೆ? ಹೂತೋಟಗಳಿಗೆ ನಿತ್ಯ ಭೇಟಿ ಕೊಟ್ಟರೂ ಅರಳಿ ನಿಂತ ಹೂಗಳ ಸೌಂದರ್ಯವನ್ನು ಎಷ್ಟು ಮಂದಿ ಸವಿಯುತ್ತಾರೆ? ಸಂಗೀತ ಕೇಳುವ ಎಷ್ಟು ಕಿವಿಗಳು ನಾದಲೋಕದ ಒಳಪ್ರವೇಶಿಸಿ ಅವು ನೀಡುವ ಪುಳಕವನ್ನು ಅನುಭವಿಸುತ್ತವೆ?

ನನಗಂತೂ ಆ ಭಾಗ್ಯ ಇಲ್ಲ! ಅದಕ್ಕಾಗಿಯೇ ಇಷ್ಟೆಲ್ಲ ಪ್ರಶ್ನೆ. ಒಮ್ಮೆ ನನ್ನ ಆಪ್ತ ಗೆಳತಿ ಯೊಬ್ಬಳು ಕಾಡು ಸುತ್ತಿಕೊಂಡು ಮನೆಗೆ ಬಂದಿದ್ದಳು. “ಕಾಡಿನಲ್ಲಿ ಏನನ್ನು ಕಂಡೆ” ಎಂದು ಆಕೆಯನ್ನು ಪ್ರಶ್ನಿಸಿದೆ. “Nothing in particular”, ಅಂಥದ್ದೇನೂ ಕಾಣಲಿಲ್ಲ ಎಂದಳು! ಆದರೆ ಕಣ್ಣಿಲ್ಲದ ನಾನೇ ತೋಟಕ್ಕೆ ಹೋದಾಗ ಏನೆಲ್ಲ ಕಾಣುತ್ತೇನೆ, ಅನುಭವಿಸುತ್ತೇನೆ. ಆದರೆ ದೃಷ್ಟಿ ಭಾಗ್ಯ ಇರುವ ಮಂದಿಗೆ ಇದೇಕೆ ಕಾಣುವುದಿಲ್ಲ ಅನಿಸುತ್ತದೆ. ಸ್ಪರ್ಶದಿಂದಲೇ ಎಲೆಗಳ ರಚನೆ, ಹೂ ಪಕಳೆಗಳ ಮಾಟ, ಚಳಿಗಾಲದ ನಿದ್ದೆಯ ನಂತರ ವಸಂತಾಗಮನಕ್ಕೆ ಮೈಕೊಡವಿಕೊಂಡು ಏಳುವ ಗಿಡಮರಗಳ ವೈಶಿಷ್ಟ್ಯವನ್ನು ಹಿಡಿದಿಟ್ಟುಕೊಳ್ಳುತ್ತೇನೆ. ತನ್ನಷ್ಟಕ್ಕೆ ತಾನು ಹರಿಯುವ ಝರಿಗಳಿಗೆ ಕೈಯೊಡ್ಡಿ ನೀರಿನ ಕಲರವಕ್ಕೆ ಮನಸೋತಿದ್ದೇನೆ. ವಿಶಾಲವಾದ ಹುಲ್ಲು ಹಾಸಿನ ಮೇಲೆ ಮೈಚಾಚಿ ಹಂಸತೂಲಿಕಾ ತಲ್ಪದ ವೈಭೋಗಕ್ಕೆ ತಿಲಾಂಜಲಿ ಇತ್ತಿದ್ದೇನೆ. ಅಂಧಕಾರದಲ್ಲಿದ್ದುಕೊಂಡೇ ಪಡೆವ ಈ ಅನುಭವ ಬೆಳಕಿನ ಪ್ರಪಂಚದಲ್ಲಿ ಇನ್ನೆಂಥಾ ಸುಖ ತರಬಹುದು ಎಂದು ಹಪಹಪಿಸಿದ್ದೇನೆ. ಬಣ್ಣದ ಚಿತ್ತಾರದಲ್ಲಿ ಕ್ಷಣವಾದರೂ ಕಳೆದು ಹೋಗುವ ಮನಸ್ಸಾಗುತ್ತದೆ. ಆದರೆ ಕಣ್ಣಿರುವ ಮಂದಿ ಇದನ್ನೆಲ್ಲ ಏಕೆ ಕಾಣುವುದಿಲ್ಲ, ಏಕೆ ಆಸ್ವಾದಿಸುವುದಿಲ್ಲ ಎಂದೂ ಕೊರಗುತ್ತೇನೆ. ದೃಷ್ಟಿ ಕೊಡುವ ಅನುಭೂತಿ, ಅದು ತೆರೆದಿಡುವ ಹೊಸ ಪ್ರಪಂಚ ಏಕೆ ಸಾಮಾನ್ಯರಿಗೂ ಅರ್ಥವಾಗುವುದಿಲ್ಲ ಎಂದೆನಿಸುತ್ತದೆ. ಪ್ರಾಯಶಃ, ಬದುಕಿನ ಪ್ರೌಢ ಘಟ್ಟದಲ್ಲಿ ಪ್ರತಿಯೊಬ್ಬರೂ ಕುರುಡು, ಕಿವುಡಾದರೆ ಆಗ ಅವರಿಗೆ ಬೆಳಕು ಮತ್ತು ಸ್ವರಗಳ ಮಹತ್ವದ ಅರಿವು ಮೂಡುತ್ತದೇನೋ ಎಂಬ ಭಾವನೆ ನನ್ನಲ್ಲಿ ಸುಳಿಯುತ್ತದೆ. ಕೆಲವೊಮ್ಮೆ ನನ್ನ ಹೃದಯ ಮೂಕವಾಗಿ ರೋದಿಸುತ್ತದೆ. ಕಣ್ಣೇ ಇಲ್ಲದ ನನಗೆ ಸ್ಪರ್ಶದಿಂದಲೇ ಇಂತಹ ಅನುಭವ ಸಿಗುವುದಾದರೆ ಆ ನೋಟದಲ್ಲಿ ಅದೆಂಥ ಸುಖವಿದ್ದೀತು? ಹೇ ದೇವರೇ, ನನಗೆ ಮೂರೇ ಮೂರು ದಿನ ದೃಷ್ಟಿ ಕೊಡು!

ಹಾಗೊಂದು ವೇಳೆ ಯಾವುದಾದರೂ ಪವಾಡ ಸಂಭವಿಸಿ ನನಗೆ ಮೂರು ದಿನಗಳ ಕಾಲ ದೃಷ್ಟಿಯನ್ನು ದಯಪಾಲಿಸಿದರೆ ನಾನೇನನ್ನು ನೋಡಲು ಬಯಸುತ್ತೇನೆ ಗೊತ್ತೆ? ಮೊದಲನೆ ದಿನ ನನ್ನ ಬದುಕನ್ನು ಅರ್ಥಪೂರ್ಣವಾಗಿಸಿದ ಎಲ್ಲರನ್ನೂ ನೋಡಬೇಕು. ಮೊಟ್ಟಮೊದಲಿಗೆ ನನ್ನ ಬದುಕಿನ ಕದ ತಟ್ಟಿ ಹೊರಜಗತ್ತನ್ನು ತೆರೆದಿಟ್ಟ ನನ್ನ ಟೀಚರ್ ಆನ್ ಸುಲ್ಲಿವನ್ ಮ್ಯಾಸಿಯ ಮುಖವನ್ನು ದಿಟ್ಟಿಸಿ ನೋಡಬೇಕು. ನನ್ನ ಕಣ್ಣುಗುಡ್ಡೆಯೊಳಗೆ ಆಕೆಯ ಮುಖವನ್ನು ಸೆರೆ ಹಿಡಿದುಕೊಂಡು ದೃಷ್ಟಿ ಹೋದ ನಂತರವೂ ಕಲ್ಪಿಸಿಕೊಂಡು ಧನ್ಯತೆಯಿಂದ ಬೀಗುವುದಕ್ಕಲ್ಲ. ಆ ಮುಖದಲ್ಲಿ ಆಕೆಯ ತಾಳ್ಮೆ, ಅನುಕಂಪದ ಜೀವಂತ ಗುರುತುಗಳನ್ನು ನಾನು ಕಾಣಬೇಕು. ಆಕೆಯ ಕಣ್ಣುಗಳಲ್ಲಿ ಸೋಲಿನ ಸವಾಲನ್ನೂ ಹಿಮ್ಮೆಟ್ಟಿಸುವ ಗಟ್ಟಿತನವಿದೆಯಲ್ಲಾ ಅದನ್ನು ನೋಡಬೇಕು. ಆತ್ಮದ ಕಿಟಕಿಯಾದ ಕಣ್ಣಿನಿಂದ ಸ್ನೇಹಿತೆಯ ಹೃದಯವನ್ನು ಇಣುಕಿ ನೋಡುವ ಅನುಭವ ಹೇಗಿರುತ್ತದೆ ಎಂಬುದು ನನಗೆ ಗೊತ್ತಿಲ್ಲ. ನನ್ನ ಬೆರಳುಗಳ ತುದಿಯಿಂದ ಮುಖವನ್ನು ಸ್ಪರ್ಶಿಸಿ ಆಕಾರವನ್ನು ಕಲ್ಪಿಸಿಕೊಂಡಷ್ಟೇ ನನಗೆ ಗೊತ್ತು. ಹಾಗೆ ಸ್ಪರ್ಶಿಸುವುದರಿಂದಲೇ ಅವರ ದುಃಖ-ದುಮ್ಮಾನ, ನೋವು-ನಲಿವುಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಅವರು ಹೇಗಿದ್ದಾರೆಂಬುದನ್ನು ಕಲ್ಪಿಸಿಕೊಳ್ಳಲು ನನ್ನಿಂದಾಗದು. ಅಂಥ ಭಾಗ್ಯ ನನಗಿಲ್ಲ. ಆದರೆ ನೋಡುವ ನೋಟದಲ್ಲೇ ಅರ್ಥಮಾಡಿಕೊಳ್ಳುವ, ಹೃದಯವನ್ನು ಹೊಕ್ಕಿ ನೋಡುವ, ಮುಖದ ಹಾವ-ಭಾವಗಳಲ್ಲಿ ಮನಸ್ಸನ್ನು ಅರಿಯುವ ಅನುಭವ ಹೇಗಿರಬಹುದು? ದೇವರು ನನಗೆ ಮೂರು ದಿನ ದೃಷ್ಟಿಕೊಟ್ಟರೆ ಮೊದಲನೇ ದಿನ ಈ ಅನುಭವಗಳನ್ನು ಪಡೆಯುತ್ತೇನೆ.

ಮರುದಿನ ಬೆಳಗ್ಗೆ ಎದ್ದಾಗ ಮೊದಲು ಸೂರ್ಯನ ಉದಯವನ್ನು, ಹೊತ್ತು ಜಾರಿದ ಮೇಲೆ ಕತ್ತಲು ಆವರಿಸುವ ಪರಿ, ಅದರಿಂದ ಸಿಗುವ ಸುಖ ನನಗೆ ಬೇಕು. ನಿದ್ರೆಯಲ್ಲಿರುವ ಭುವಿಯನ್ನು ಏಳಿಸುವಾಗ ಸೂರ್ಯ ಚೆಲ್ಲುವ ಬೆಳಕಿನ ವೈಭವವನ್ನು ನನ್ನ ಕಣ್ಣುಗಳಲ್ಲಿ ಸೆರೆಹಿಡಿಯಬೇಕು. ಆ ದಿನ ನಾನು ಜಗತ್ತನ್ನೇ ಕಾಣಬೇಕು. ಜಗತ್ತಿನ ಅದ್ಭುತ ಸೃಷ್ಟಿಗಳನ್ನು ಕಂಡು ಬೆಚ್ಚಿ ಬೆರಗಾಗಬೇಕು. ಮೂರನೇ ದಿನ ಬೆಳಗಾದಾಗಲೂ ಸೂರ್ಯನ ಪ್ರಖರತೆ ಯಲ್ಲಿ ಹೊಸ ಹರ್ಷವನ್ನು ಕಾಣಲು ಪ್ರಯತ್ನಿಸುತ್ತೇನೆ. ಆದರೆ ಮೂರನೆಯ ದಿನ ರಾತ್ರಿ ಬರುವ ಕತ್ತಲು ಮತ್ತೆ ಬದುಕನ್ನು ಅಂಧಕಾರಕ್ಕೆ ತಳ್ಳುತ್ತದೆ, ನನ್ನ ಬದುಕಲ್ಲಿ ಮತ್ತೆಂದೂ ಸೂರ್ಯ ಉದಯಿಸುವುದಿಲ್ಲ ಎಂಬುದನ್ನು ಊಹಿಸಿಕೊಂಡಾಗ……..”

1933ರಲ್ಲಿ `Atlantic Monthly’ ಪತ್ರಿಕೆಯಲ್ಲಿ ಹೆಲೆನ್ ಕೆಲ್ಲರ್ ತೋಡಿಕೊಂಡಿದ್ದ ಮನದಾಳದ ಈ ಬೇಗುದಿ ಎಂಥ ಕಟುಕರ ಮನಸೂ ಒಮ್ಮೆ ಕಲಕಿ ಬಿಡುತ್ತದೆ. ಆದರೆ ಹೆಲೆನ್ ಕೆಲ್ಲರ್ ಹುಟ್ಟು ಕುರುಡಿಯಲ್ಲ. 1880, ಜೂನ್ 27ರಂದು ಜನಿಸಿದ ಆಕೆ ಕ್ಯಾಪ್ಟನ್ ಅರ್ಥರ್ ಎಚ್. ಕೆಲ್ಲರ್ ಅವರ ಮಗಳು. ಆಕೆ ಕೂಡ ಹದಿನೆಂಟು ತಿಂಗಳು ತುಂಬುವವರೆಗೂ ಎಲ್ಲ ಮಕ್ಕಳಂತೆಯೇ ಇದ್ದಳು. ಆದರೆ ಅನಾರೋಗ್ಯ ಆಕೆಯನ್ನು ಶಾಶ್ವತವಾಗಿ ಕುರುಡು, ಕಿವುಡಾಗಿಸಿತು. ಆರು ವರ್ಷ ತುಂಬುವವರೆಗೂ ಹೆಲೆನ್‌ಳೊಂದಿಗೆ communicate ಮಾಡುತ್ತಿದ್ದುದು ಮನೆಯ ಅಡುಗೆಯವಳ ಪುತ್ರಿ ಮಾರ್ಥಾ ವಾಷಿಂಗ್ಟನ್ ಮಾತ್ರ. ಹೆಲೆನ್‌ಳೊಂದಿಗೆ communicate ಮಾಡುವ ಸಲುವಾಗಿ ಆಕೆಯೇ 60 ಸಂಜ್ಞೆಗಳನ್ನು ರೂಪಿಸಿದ್ದಳು. ಆದರೆ ಆಕೆಯ ಬದುಕಿಗೆ ಹೊಸ ದಿಕ್ಕು, ಅರ್ಥ ನೀಡಿದ್ದು ಆಕೆಯ ಟೀಚರ್ ಆನ್ ಸುಲ್ಲಿವನ್ ಮ್ಯಾಸಿ. ಮೊದಲಿಗೆ ಹೆಲನ್‌ಳನ್ನು ಮನೆಯವರಿಂದ ಬೇರ್ಪಡಿದ ಆನ್, ಆಕೆಯ ತುಂಟತನಕ್ಕೆ ಕಡಿವಾಣ ಹಾಕಿ ಶಿಸ್ತನ್ನು ತುಂಬಿದರು. ಆದರೂ ಹೆಲೆನ್‌ಗಳೊಂದಿಗೆ ಹೇಗೆ ಸಂವಹನ ಮಾಡಬೇಕೆಂಬುದೇ ತಿಳಿಯದಾಯಿತು. ಒಮ್ಮೆ ಅಂಗೈ ಮೇಲೆ ತಣ್ಣೀರನ್ನು ಸುರಿಯುತ್ತಾ ಇರುವಾಗ ಅದು `water’ ಎಂಬ ಅರಿವು ಹೆಲೆನ್‌ಗಾಗುತ್ತದೆ! ಆನಂತರ ಅದಕ್ಕೇನೆನ್ನುತ್ತಾರೆ, ಇದಕ್ಕೇನೆನ್ನುತ್ತಾರೆ ಎಂದು ಒಂದರ ಹಿಂದೆ ಮತ್ತೊಂದು ಪ್ರಶ್ನೆಗಳನ್ನು ಹಾಕುತ್ತಾ ಹೋದ ಹೆಲೆನ್, ಆನ್ ಅವರನ್ನು ಸುಸ್ತಾಗಿಸುತ್ತಾಳೆ. ಹೀಗೆ ಅರಿವು ತಂದುಕೊಂಡ ಹೆಲೆನ್ ಅಮೆರಿಕದ ಮೊಟ್ಟ ಮೊದಲ ಕುರುಡು-ಕಿವುಡು ಪದವೀಧರೆ ಎನಿಸಿಕೊಳ್ಳುತ್ತಾಳೆ! ಅಷ್ಟೇ ಅಲ್ಲ “ಕುರುಡು-ಕಿವುಡು ಮಕ್ಕಳು” ಎಂಬ ವಿಷಯದ ಮೇಲೆ ಮಹಾಪ್ರಬಂಧ ಬರೆದು ಡಾಕ್ಟರೇಟ್ ಪದವಿಯನ್ನೂ ಪಡೆಯುತ್ತಾಳೆ. ಇಪ್ಪತ್ಮೂರನೇ ವಯಸ್ಸಿಗೆ “The Story of My Life ” ಎಂಬ ಆತ್ಮಕಥೆ, 1927ರಲ್ಲಿ “Light in my Darkness” ಎಂಬ ಎರಡನೇ ಆತ್ಮಕಥೆ ಬರೆದ ಆಕೆ ಒಟ್ಟು 12 ಪುಸ್ತಕಗಳನ್ನು ಬರೆದಿದ್ದಾಳೆ. 1962ರಲ್ಲಿ ಬಿಡುಗಡೆಯಾದ ಆಸ್ಕರ್ ವಿಜೇತ “The Miracle Worker” ಚಿತ್ರಕ್ಕೆ ಆಕೆಯ ಜೀವನವೇ ಪ್ರೇರಣೆ.
ಅವಳಿಂದ ನಾವೂ ಕಲಿಯಬೇಕಾದುದು ಸಾಕಷ್ಟಿದೆ.

ಅಷ್ಟಕ್ಕೂ, ದೇವರು ಏನು ಕೊಟ್ಟಿದ್ದಾನೋ ಅದರಲ್ಲಿಯೇ ಖುಷಿಪಡಬೇಕು ಎಂಬುದು ಇರುವುದನ್ನೂ ಕಳೆದು ಕೊಳ್ಳುವವರೆಗೂ ನಮಗೆ ಗೊತ್ತಾಗುವುದಿಲ್ಲ, ಹಾಸಿಗೆ ಹಿಡಿಯುವವರೆಗೂ ಆರೋಗ್ಯದ ಬೆಲೆ ತಿಳಿಯುವುದಿಲ್ಲ, ಕಣ್ಣಿದ್ದವರಿಗೆ ದೃಷ್ಟಿಯ ಬೆಲೆ ಗೊತ್ತಾಗುವುದಿಲ್ಲ ಅಲ್ವಾ? ಬಹುಶಃ ನಮಗೆ ಅಂಧಕಾರದ ಅರಿವಿಲ್ಲದಿರುವುದೇ ಈ ಪ್ರವೃತ್ತಿಗೆ ಕಾರಣವಿರಬಹುದು. ಕಣ್ಣಿನಲ್ಲಿ ಸಾಧ್ಯವಾದಷ್ಟು ಬಿಂಬಗಳನ್ನು ತುಂಬಿಕೊಂಡು, ಅರ್ಥಪೂರ್ಣ ನೋಟವನ್ನೇ ಕಳೆದುಕೊಂಡು ಬಿಟ್ಟಿರುತ್ತೇವೆ. ದೃಷ್ಟಿ ದೈವೀದತ್ತವಾಗಿ ಬಂದ ವರ ಎಂಬ ಭ್ರಮೆಯಲ್ಲಿ ಅದು ಬದುಕಿನ ಪರಿಪೂರ್ಣತೆಗೆ ಒಂದು ಸಾಧನ ಎಂಬ ವಾಸ್ತವವನ್ನೇ ಮರೆ ತಿರುತ್ತೇವೆ.

ಇದನ್ನೆಲ್ಲ ಏಕೆ ನೆನಪಿಸಿಕೊಳ್ಳಬೇಕಾಯಿತೆಂದರೆ ಇವತ್ತು ಬೆಳಕಿನ ಹಬ್ಬ. ಪ್ರತಿವರ್ಷವೂ ಈ ಹಬ್ಬದ ಮರುದಿನ ಪ್ರಕಟವಾಗುವ ಪತ್ರಿಕೆಗಳಲ್ಲಿ ಆಚರಣೆಗಿಂತ ಅವಘಡಗಳ ವರದಿಗಳೇ ತುಂಬಿ ತುಳುಕುತ್ತಿರುತ್ತವೆ. ಈ ಒಂದು ದಿನದ ಸಂಭ್ರಮದಲ್ಲಿ ಸಂಭವಿಸುವ ಅನಾಹುತಗಳು ಎಷ್ಟೋ ಮಕ್ಕಳನ್ನು ಶಾಶ್ವತವಾಗಿ ಊನವಾಗಿಸಿ ಬಿಡುತ್ತದೆ. ಆದರೆ ಅರಿಯದ ಮಕ್ಕಳನ್ನು ಹತೋಟಿಯಲ್ಲಿಡಬೇಕಾದುದು ಹಿರಿಯ ಕರ್ತವ್ಯ.

ದೀಪಗಳ ಹಬ್ಬದಲಿ, ಆರದಿರಲಿ `ದೃಷ್ಟಿ’ದೀಪ!

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: