ಭಾರತ ಗೆದ್ದರೆ ಸೋಲುವುದು ಯಾರು? -Who fails if India wins?

ಈ ರಾಜೀವ್ ದಿಕ್ಷೀತ್, ಬಾಬು ಭಜರಂಗಿ, ಪ್ರವೀಣ್ ತೊಗಾಡಿಯಾ, ಪ್ರಕಾಶ್ ಕಾರಟ್, ಬೃಂದಾ ಕಾರಟ್, ಡಿ. ರಾಜಾ, ಗುರುದಾಸ್ ದಾಸ್‌ಗುಪ್ತ ಅವರಂತೆ ಬೊಬ್ಬೆ ಹಾಕಿದರೆ, ದೇವೇಗೌಡ, ಲಾಲು ಯಾದವ್ ಅವರಂತೆ ದಿನಕ್ಕೊಂದು ಕೆಟ್ಟ ಹೇಳಿಕೆ ನೀಡಿದರೆ ಮಾತ್ರ ಬಹಳ ಸಮರ್ಥ ವ್ಯಕ್ತಿ ಎಂದರ್ಥವೆ? ನಮ್ಮ ಕನಸಿನ ನಾಳೆಗಳಿಗಾಗಿ ತನ್ನ ಮಂತ್ರಿ ಪದವಿಯನ್ನೇ ಒತ್ತೆಯಿಟ್ಟು ಗಟ್ಟಿ ನಿರ್ಧಾರ ಕೈಗೊಂಡ ಮನಮೋಹನ್ ಸಿಂಗ್ ಅವರನ್ನು ದುರ್ಬಲ ವ್ಯಕ್ತಿ ಅಂತ ಹೇಗೆ ಕರೆಯುತ್ತೀರಿ?

ಭಾರತ ಗೆದ್ದರೆ ಸೋಲುವುದು ಯಾರು?“ಆತ ವರ್ಲ್ಡ್ ಬ್ಯಾಂಕ್ ಏಜೆಂಟ್. ಭಾರತದ ಮುಂದಿನ ಹಣಕಾಸು ಸಚಿವ ಆತನೇ ಆಗಬೇಕು ಎಂದು ವರ್ಲ್ಡ್ ಬ್ಯಾಂಕ್, ಐಎಂಎಫ್, ಎಡಿಬಿಯಂತಹ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಚುನಾವಣೆಗೂ ಮೊದಲೇ ನಿರ್ಧರಿಸಿದ್ದವು. ಅದು ಜಾಗತೀಕರಣವನ್ನು ಜಾರಿಗೆ ತರಲು ಮಾಡಿದ್ದ ಹುನ್ನಾರ “! ಈ ಕಥೆಯನ್ನು ಯಾರು ತಾನೇ ಕೇಳಿಲ್ಲ ಹೇಳಿ?

ಅಷ್ಟಕ್ಕೂ “ಆಜಾದಿ ಬಚಾವೋ ಆಂದೋಲನ”ದ ರಾಜೀವ್ ದೀಕ್ಷಿತ್ ಅವರು ಕರ್ನಾಟಕದ ಮೂಲೆ ಮೂಲೆಗಳಿಗೂ ಹೋಗಿ ಹೇಳಿದ್ದು ಇದೆ ಕಥೆಯನ್ನೇ ಅಲ್ಲವೆ? ಇವತ್ತು ಹಳ್ಳಿಯ ರಂಗ, ತಿಮ್ಮನಿಂದ ಪೇಟೆಯ ಎಂಕಣ್ಣನವರೆಗೂ, “ಭಾರತದ ಅತ್ಯಂತ ದುರ್ಬಲ ಪ್ರಧಾನಿ ಯಾರು?” ಎಂದು ಯಾರನ್ನೇ ಕೇಳಿದರೂ ‘ಮನಮೋಹನ್ ಸಿಂಗ್” ಎನ್ನುತ್ತಾರೆ. ಅಷ್ಟೇಕೆ, 1991ರಲ್ಲಿ ಕೇಂದ್ರ ಹಣಕಾಸು ಸಚಿವನಾಗುವಂತೆ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರು ಆಹ್ವಾನಿಸಿದಾಗ “ನೀನು ಬಲಿಪಶು ಆಗುತ್ತೀಯಾ. ನೀನು fail ಆಗುವುದು ಖಂಡಿತ. ಆರು ತಿಂಗಳೊಳಗೆ ನಿನ್ನನ್ನು ಮಂತ್ರಿ ಪದವಿಯಿಂದ ಕಿತ್ತೊಗೆಯುತ್ತಾರೆ” ಅಂತ ಮನಮೋಹನ್ ಸಿಂಗ್ ಅವರ ಆಪ್ತ ಸ್ನೇಹಿತರು, ಜತೆಗಾರರೇ ಹೇಳಿದ್ದರು. ಅವರ ಸ್ನೇಹಿತ ರಿಗೆ ಮನಮೋಹನ್ ಸಿಂಗ್ ಅವರ ಸಾಮರ್ಥ್ಯದ ಬಗ್ಗೆ ವಿಶ್ವಾಸವಿರಲಿಲ್ಲ. ಅದಕ್ಕೆ ತಕ್ಕಂತೆ ಪರಿಸ್ಥಿತಿ ಕೂಡ ಅಷ್ಟೇ ಬಿಗಡಾಯಿಸಿತು. ಅದಕ್ಕೂ ಮೊದಲು ಪ್ರಧಾನಿಯಾಗಿದ್ದ ಚಂದ್ರಶೇಖರ್ ಇದ್ದ ಚಿನ್ನವನ್ನೂ ಅಡವಿಟ್ಟು ಬಂದಿದ್ದರು. ಭಾರತದ ಕೈಯಲ್ಲಿದ್ದಿದ್ದು 1 ಶತಕೋಟಿ ಡಾಲರ್ ವಿದೇಶಿ ವಿನಿಮಯ ಮೀಸಲು ನಿಧಿ ಮಾತ್ರ. ಕೇವಲ 15ದಿನಗಳಲ್ಲಿ ಭಾರತ ದಿವಾಳಿಯಾಗುವ ಹಂತಕ್ಕೆ ಬಂದಿತ್ತು. ಇಂತಹ ಸಂದರ್ಭದಲ್ಲಿ ದೇಶದ ಹಣಕಾಸು ಸಚಿವನಾಗುವಂತೆ ಬಂದ ಆಹ್ವಾನದ ಬಗ್ಗೆ ಸಹಜವಾಗಿಯೇ ಎಲ್ಲರೂ ಅಳುಕು ತೋರಿದರು.

“ನಾನು ಎಲ್ಲ ಬಗೆಯ ಉನ್ನತ ಆಡಳಿತಾತ್ಮಕ ಹುದ್ದೆಗಳನ್ನೂ ಅಲಂಕರಿಸಿದ್ದೇನೆ. ಈಗ ರಾಜಕೀಯ ಪಾತ್ರ ನಿರ್ವಹಿಸುವ ವಿರಳ ಅವಕಾಶವೊಂದು ಬಂದಿದೆ. ಅದರಲ್ಲಿ ಯಶಸ್ವಿಯಾಗಲು ಕಿಂಚಿತ್ತಷ್ಟೇ ಅವಕಾಶವಿದೆ ಎಂಬುದು ನನಗೂ ಗೊತ್ತು. ಒಂದು ವೇಳೆ ಯಶಸ್ವಿಯಾದರೆ ಭಾರತದ ಇತಿಹಾಸದಲ್ಲಿ ನನ್ನದೂ ಒಂದು ಕಿರುಕಾಣಿಕೆ ದಾಖಲಾಗುತ್ತದೆ. ಅಕಸ್ಮಾತ್, ವಿಫಲನಾದರೆ ಅದರಿಂದ ಭಾರೀ ನಷ್ಟವೇನಾಗುವುದಿಲ್ಲ. ಆದರೆ, Who fails if India wins??” ಹಾಗೆಂದ ಮನಮೋಹನ್ ಸಿಂಗ್ ಅಪಾಯವನ್ನು ಮೈಮೇಲೇಳೆದುಕೊಂಡು ಹಣಕಾಸು ಸಚಿವರಾದರು. ಅಂತಹ ವ್ಯಕ್ತಿಯನ್ನು ದುರ್ಬಲ ಪ್ರಧಾನಿ ಅಂತ ಕರೆಯುತ್ತಿರುವುದು ಸರಿಯೇ?

1991ರಲ್ಲಿ ಹಣಕಾಸು ಸಚಿವರಾದ ಮನಮೋಹನ್ ಸಿಂಗ್ ಒಬ್ಬ ಕಾಂಗ್ರೆಸ್ಸಿಗನಾಗಿ ನೆಹರು ಪ್ರಣೀತ“Quasi-socialist” ನೀತಿಗಳನ್ನು ಏಕಾಏಕಿ ಕೈ ಬಿಟ್ಟು ಹೊಸ ಬದಲಾವಣೆಯನ್ನು ತರುವುದು ಸಾಮಾನ್ಯ ಮಾತಾಗಿರಲಿಲ್ಲ. ಹಾಗಾಗಿ ಮೊದಲ ಎರಡು ವರ್ಷಗಳ ಕಾಲ Tinkering ಕೆಲಸ ಮಾಡಿದರು. ಅಲ್ಪ-ಸ್ವಲ್ಪ ಬದಲಾವಣೆ ಮಾಡಿ ಅರ್ಥವ್ಯವಸ್ಥೆಯನ್ನು ಸರಿದಾರಿಗೆ ತಂದ ಅವರು 1994,95ರ ಸಾಲಿನ ಬಜೆಟ್‌ನಲ್ಲಿ ಭಾರೀ ಬದಲಾವಣೆಗೆ ಮುಂದಾದರು. ಅವತ್ತು ಸಂಸತ್ತಿನ ಮುಂದೆ ಬಜೆಟ್ ಮಂಡಿಸಿದ ಮನಮೋಹನ್ ಸಿಂಗ್ ಮಾಡಿದ್ದು ಭಾರತದ ಇತಿಹಾಸದಲ್ಲೇ ಒಂದು ಐತಿಹಾಸಿಕ ಭಾಷಣ! “ಬದಲಾವಣೆ ಸನ್ನಿಹಿತವಾದಾಗ ಅದನ್ನು ಯಾರೂ ತಡೆಯುವುದಕ್ಕೂ ಆಗುವುದಿಲ್ಲ, ಮುಂದೂಡುವುದು ಸಾಧ್ಯವಿಲ್ಲ” (No power on earth can stop an idea whose time has come)-ಎಂಬ ವಿಕ್ಟರ್ ಹ್ಯೂಗೋ ಅವರ ಮಾತನ್ನು ಉಲ್ಲೇಖಿಸಿದ ಅವರು ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಬೇಕಾದ ಅನಿವಾರ್ಯತೆಯನ್ನು ಒತ್ತಿ ಹೇಳಿದರು. ಇತ್ತ ಪ್ರಧಾನಿ ನರಸಿಂಹರಾವ್ ಬೆಂಗಾವಲಿಗೆ ನಿಂತರು. “All I can promise is blood, sweat, and tears” ಎಂದ ಮನಮೋಹನ್ ಸಿಂಗ್, ಆರ್ಥಿಕ ಉದಾರೀಕರಣ ನೀತಿಗಳನ್ನು ಜಾರಿಗೆ ತರುವ ಮೂಲಕ ಭ್ರಷ್ಟಾಚಾರಕ್ಕೆ ಕತ್ತರಿಹಾಕಿದರು, ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಿದರು, ಕಾನೂನನ್ನು ಸಡಿಲಗೊಳಿಸುವ ಮೂಲಕ ಉದ್ಯ ಮಕ್ಕೆ ಹಿತಕರ ವಾತಾವರಣವನ್ನು ಸೃಷ್ಟಿಸಿದರು. ಅದರ ಪರಿಣಾಮವಾಗಿ ವಿದೇಶಿ ಬಂಡವಾಳ ಮಾತ್ರವಲ್ಲ, ವಿದೇಶಿ ತಂತ್ರಜ್ಞಾನವೂ ಹರಿದು ಬಂತು.

ಇವತ್ತು ಯಾವ ಐಟಿ, ಬಿಟಿ ಕ್ರಾಂತಿಯನ್ನು ನಾವು ಕಾಣುತ್ತಿದ್ದೇವೊ ಅದಕ್ಕೆ ಮನಮೋಹನ್ ಸಿಂಗ್ ಅವರು ಅಂದು ತೆಗೆದುಕೊಂಡ ದಿಟ್ಟ ನಿರ್ಧಾರಗಳೇ ಕಾರಣ. ಅವರು ‘ಆರ್ ಯಾ ಪಾರ್” ಅಂತ ಪಾಕಿಸ್ತಾನದ ಜತೆ ಕಾಲು ಕೆರೆದುಕೊಂಡು ಯುದ್ಧಕ್ಕೆ ಹೋಗಲಿಲ್ಲ. ಆದರೆ ವಿಧವಿಧದ ಟೀವಿ, ಬೈಕ್, ಸ್ಕೂಟರ್, ಕಾರುಗಳು ಕೈಗೆಟುಕುವ ಬೆಲೆಯಲ್ಲಿ ನಮ್ಮೆಲ್ಲರಿಗೂ ಸಿಗುವಂತೆ ಮಾಡಿದರು. ಈ ಮಧ್ಯಮ ವರ್ಗದ ಕನಸುಗಳೇನಿದ್ದವು ಅವು ಸಾಕಾರಗೊಂಡಿದ್ದೇ ಮನಮೋಹನ್ ಸಿಂಗ್ ಅವರ ನೀತಿಗಳಿಂದಾಗಿ. ಇಂದು ನಮ್ಮೆಲ್ಲರ ಕೈಯಲ್ಲೂ ಓಡಾಡುವ ‘ಪ್ಲಾಸ್ಟಿಕ್ ಮನಿ”ಯ ಹಿಂದೆಯೂ ಅವರ ಪರಿಶ್ರಮವಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಭೂತಪೂರ್ವ ಬದಲಾವಣೆ ಕಂಡುಬಂದಿದ್ದರೆ, ಒಬ್ಬ ಸಾಮಾನ್ಯನಿಗೂ ಕಂಪ್ಯೂಟರ್, ಟೀವಿ, ಡಿವಿಡಿಗಳು ನಿಲುಕುವಂತಾಗಿದ್ದರೆ ಅದಕ್ಕೆ ಅವರಲ್ಲಿದ್ದ ದೂರದೃಷ್ಟಿಯೇ ಕಾರಣ.

ಗ್ಯಾಸ್ ಸಿಲಿಂಡರ್, ಫೋನ್‌ಗಾಗಿ ಮೊದಲೇ ಹಣ ಕಟ್ಟಿದರೂ ವರ್ಷಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು. ಆದರೆ ಇಂದು ಎಲ್ಲವೂ ಸುಲಭ ಹಾಗೂ ಸರಳ. ಇವತ್ತು ಭಾರತದ ಅರ್ಥವ್ಯವಸ್ಥೆ ಈ ಪರಿ ಅಭಿವೃದ್ಧಿ ಕಾಣುತ್ತಿದ್ದರೆ ಅದು ಕೈಗಾರಿಕೀಕರಣ ಹಾಗೂ ಖಾಸಗೀಕರಣದ ಫಲವಾಗಿ, ಸಂಪರ್ಕ ಕ್ರಾಂತಿಯಿಂದಾಗಿ. ಅಂತಹ ಕ್ರಾಂತಿಕಾರಿ ಬದಲಾವಣೆಯನ್ನು ತರದೇ ಹೋಗಿದ್ದರೆ, ಖಾಸಗಿ ಕ್ಷೇತ್ರವೇ ಇಲ್ಲದೇ ಇದ್ದಿದ್ದರೆ ನಮಗೆಲ್ಲ ಯಾರು ಕೆಲಸ ಕೊಡುತ್ತಿದ್ದರು? ಅಷ್ಟೇ ಅಲ್ಲ, ಈ ಹಿಂದೆ, ಒಂದು ಉಪಗ್ರಹ ಬಿದ್ದರೆ 200 ಕೋಟಿ, 300 ಕೋಟಿ ಬಂಗಾಳಕೊಲ್ಲಿಯ ಪಾಲಾಯಿತು ಅನ್ನುತ್ತಿದ್ದರು. ಆದರೆ ಇವತ್ತು ಇನ್ನೂರಲ್ಲ 50 ಸಾವಿರ ಕೋಟಿ ಹೋದರೂ ಕ್ಯಾರೆ ಅನ್ನಬೇಕಾದ ಅಗತ್ಯವಿಲ್ಲ. ಅಂತಹ ತಾಕತ್ತು ನಮ್ಮ ಅರ್ಥವ್ಯವಸ್ಥೆಗಿದೆ.

ಇಂತಹ ಬದಲಾವಣೆಯ ಹರಿಕಾರರಾದ ಮನಮೋಹನ್ ಸಿಂಗ್ ಅವರನ್ನು ಹೇಗೆತಾನೇ ‘ವರ್ಲ್ಡ್ ಬ್ಯಾಂಕ್ ಏಜೆಂಟ್” ಅನ್ನುವುದು?

ಪ್ರತಿಕೂಲ ಪರಿಣಾಮಗಳನ್ನೂ ಹೊಂದಿರುವ ಜಾಗತೀಕರಣದ ಬಗ್ಗೆ ಬೊಟ್ಟು ಮಾಡಿ ಅವರನ್ನು ಟೀಕಿಸಬಹುದು. ಷೇರು ಪೇಟೆಯ ಇಂಡೆಕ್ಸ್ ಜಾಸ್ತಿಯಾದ ಮಾತ್ರಕ್ಕೆ ಬಡವರಿಗೆ ರೊಟ್ಟಿ, ಉಪ್ಪಿನಕಾಯಿ ಸಿಗುತ್ತಾ ಅಂತ ಕೇಳಬಹುದು. ಆದರೆ ಬಡವನಿಗೆ ನೇರವಾಗಿ ರೊಟ್ಟಿ ಸಿಗದಿದ್ದರೂ ದೇಶ ಖಂಡಿತ ಆರ್ಥಿಕವಾಗಿ ಬಲಶಾಲಿಯಾಗುತ್ತದೆ. ಹಾಗೆ ಬಲಶಾಲಿಯಾದಾಗ ಸಂಪನ್ಮೂಲವನ್ನು ಬಡವರ ಕಲ್ಯಾಣಕ್ಕಾಗಿ ವಿನಿಯೋಗ ಮಾಡುವ ಕಾರ್ಯವನ್ನು ಸರಕಾರ ಮಾಡಬೇಕು. ಹಾಗಾಗಿಯೇ ಜಾಗತೀಕರಣವನ್ನು ಅಪ್ಪಿಕೊಂಡಾಗ “It offers opportunities, ಆದರೆ ಅಂತಹ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕಷ್ಟೇ” ಎನ್ನುತ್ತಿದ್ದ ಮನಮೋಹನ್ ಸಿಂಗ್ ಅವರು ಒಬ್ಬ ಹಣಕಾಸು ಸಚಿವನಾಗಿ ಜಾಗತೀಕರಣದಿಂದ ಸೃಷ್ಟಿಯಾದ ಅವಕಾಶಗಳನ್ನು ಬಳಸಿಕೊಂಡು ಸಂಪನ್ಮೂಲವನ್ನು ಕ್ರೋಡೀಕರಿಸಲು (Wealth Creation) ಪ್ರಯತ್ನಿಸಿದರು. ಈಗ ಪ್ರಧಾನಿಯಾಗಿ ಆ ಸಂಪನ್ಮೂಲವನ್ನು ತಳಮಟ್ಟದಲ್ಲಿರುವವರಿಗೆ ಹಂಚಲು ಮುಂದಾಗಿದ್ದಾರೆ. ಅದಕ್ಕಾಗಿ, ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯನ್ನು ಹಮ್ಮಿಕೊಂಡಿದ್ದಾರೆ. ಖಾಸಗಿ ಕ್ಷೇತ್ರಕ್ಕೆ ಸಾಮಾಜಿಕ ಜವಾಬ್ದಾರಿಯೂ ಇದೆ ಎಂದು ಮೀಸಲು ನೀತಿಯನ್ನು ಖಾಸಗೀ ಕ್ಷೇತ್ರಕ್ಕೂ ತರಲು ಹೊರಟಿರುವ ಅವರ ಪ್ರಯತ್ನ ಎಷ್ಟರ ಮಟ್ಟಿಗೆ ಫಲಕೊಡುತ್ತದೋ ಗೊತ್ತಿಲ್ಲ. ಆದರೆ ಜಾಗತೀಕರಣದಿಂದಾಗಿ ಸೃಷ್ಟಿಯಾದ ಸಂಪನ್ಮೂಲದಲ್ಲಿ ದುರ್ಬಲರಿಗೂ ಪಾಲು ಕೊಡಬೇಕೆಂಬುದರ ಅರಿವು ಅವರಿಗಿದೆ.

ಇಷ್ಟೆಲ್ಲಾ ಬದಲಾವಣೆಗೆ ಕಾರಣರಾಗಿದ್ದರೂ ಅವರನ್ನು ದುರ್ಬಲ ಪ್ರಧಾನಿ ಅಂತ ಕರೆಯುತ್ತಿರುವುದೇಕೆ? ಈ ರಾಜೀವ್ ದಿಕ್ಷೀತ್, ಬಾಬು ಭಜರಂಗಿ, ಪ್ರವೀಣ್ ತೊಗಾಡಿಯಾ, ಪ್ರಕಾಶ್ ಕಾರಟ್, ಬೃಂದಾ ಕಾರಟ್, ಡಿ. ರಾಜಾ, ಗುರುದಾಸ್ ದಾಸ್‌ಗುಪ್ತ ಅವರಂತೆ ಬೊಬ್ಬೆ ಹಾಕಿದರೆ, ದೇವೇಗೌಡ, ಲಾಲು ಯಾದವ್ ಅವರಂತೆ ದಿನಕ್ಕೊಂದು ಕೆಟ್ಟ ಹೇಳಿಕೆ ನೀಡಿದರೆ ಮಾತ್ರ ಬಹಳ ಸಮರ್ಥ ವ್ಯಕ್ತಿ ಎಂದರ್ಥವೆ? ನಮ್ಮ ಕನಸಿನ ನಾಳೆಗಳಿಗಾಗಿ ತನ್ನ ಮಂತ್ರಿ ಪದವಿಯನ್ನೇ ಒತ್ತೆಯಿಟ್ಟು ಗಟ್ಟಿ ನಿರ್ಧಾರ ಕೈಗೊಂಡ ಅವರನ್ನು ದುರ್ಬಲ ವ್ಯಕ್ತಿ ಅಂತ ಹೇಗೆ ಕರೆಯುತ್ತೀರಿ? ಅಮೆರಿಕದೊಂದಿಗಿನ ‘ಅಣು ಸಹಕಾರ ಒಪ್ಪಂದ”ವೊಂದನ್ನೇ ಎತ್ತಿಕೊಂಡು “One issue Prime Minister” ಅಂತ ಕೂಗುತ್ತಿರುವ ಈ ಬಿಜೆಪಿಯವರಿಗೇನಾಗಿದೆ?

ಮನಮೋಹನ್ ಸಿಂಗ್ ಅವರಿಗೆ ಈ ಎಲೆಕ್ಟೋರಲ್ ರಾಜಕೀಯ ಗೊತ್ತಿಲ್ಲದೇ ಇರಬಹುದು, ಒಮ್ಮೆ ಸ್ಪರ್ಧಿಸಿ ಸೋತಿರಬಹುದು, ಜನರಿಂದ ನೇರವಾಗಿ ಆಯ್ಕೆಯಾಗಿಲ್ಲದೇ ಇರಬಹುದು. ಎಡಪಕ್ಷಗಳ ಒತ್ತಡಕ್ಕೆ ಮಣಿದು ಅಣು ಸಹಕಾರ ಒಪ್ಪಂದವನ್ನು ಕೈಬಿಡಬೇಕಾದ ಅನಿವಾರ್ಯ ತೆಯಲ್ಲಿರಬಹುದು. ಹಾಗಂತ ಅವರನ್ನು ದುರ್ಬಲ ವ್ಯಕ್ತಿ ಎನ್ನಲಾದೀತೆ?

ಮೈತ್ರಿ ರಾಜಕಾರಣದಲ್ಲಿ ಅಂಕಿ-ಸಂಖ್ಯೆಗಳೇ ಮುಖ್ಯವಾಗುತ್ತವೆ. ಅಂತಹ ವಾಜಪೇಯಿಯವರೂ ‘ಇಂಡಿಯನ್ ಫೆಡರಲ್ ಡೆಮೊಕ್ರಾಟಿಕ್ ಪಾರ್ಟಿ” ಎಂಬ ಪಕ್ಷದ ಏಕೈಕ ಸಂಸದ ಪಿ.ಸಿ. ಥಾಮಸ್ ಅವರನ್ನೂ ಮಂತ್ರಿ ಮಾಡಬೇಕಾಗಿ ಬಂದಿತ್ತು. ಬೆಂಬಲ ಪತ್ರ ನೀಡದೆ ಜಯಲಲಿತಾ ಆಟವಾಡಿಸಿದ್ದು, ಭೇಟಿ ಮಾಡುವುದಕ್ಕೂ ಅವಕಾಶ ನೀಡದೇ ಪ್ರಮೋದ್ ಮಹಾಜನ್ ಅವರನ್ನು ಚೆನ್ನೈನಿಂದ ವಾಪಸ್ ಕಳಿಸಿದ್ದು ನೆನಪಿಲ್ಲವೆ? ಅಷ್ಟೇಕೆ, ಮೌಲಾನಾ ಅಜರ್ ಮಸೂದ್‌ನಂತಹ ಭಯೋತ್ಪಾದಕನನ್ನು ಬಿಡುಗಡೆ ಮಾಡಿ ಕಂದಹಾರ್ ನಲ್ಲಿ ಬಿಟ್ಟು ಬಂದಾಗ ಆಗಿನ ಆರೆಸ್ಸೆಸ್ ಸಂಚಾಲಕರಾಗಿದ್ದ ರಾಜೇಂದ್ರ ಸಿಂಗ್ ಅವರು “It’s an act of Hindu cowardiee” ಎಂದು ಟೀಕಾಪ್ರಹಾರ ಮಾಡಿದ್ದರು. ಆಗೇಕೆ ವಾಜಪೇಯಿಯವರನ್ನೂ ದುರ್ಬಲ ಪ್ರಧಾನಿ [^] ಅಂತ ಕರೆಯಲಿಲ್ಲವೇ? ಸಂಸತ್ ದಾಳಿಯ ನಂತರ ‘ಆರ್ ಯಾ ಪಾರ್’ಅಂತ ಗಡಿಯಲ್ಲಿ ಸೇನೆಯನ್ನು ನಿಯೋಜನೆ ಮಾಡಿದ್ದ ವಾಜಪೇಯಿಯವರು ಯುದ್ಧ ಮಾಡಿದರೆ? ಅಮೆರಿಕಾದ ಒತ್ತಡಕ್ಕೆ ಮಣಿದು ಸೇನೆಯನ್ನು ವಾಪಸ್ ತೆಗೆದುಕೊಂಡಾಗ ವಾಜಪೇಯಿಯವರನ್ನೇಕೆ ಹೇಡಿ ಎನ್ನಲಿಲ್ಲ?

ಅಷ್ಟಕ್ಕೂ ಶಕ್ತಿ, ಸಾಮರ್ಥ್ಯವನ್ನು ಅಳೆಯುವುದು ಮೈಕ್ ಮುಂದೆ ನಿಂತು ಹಾಕುವ ಬೊಬ್ಬೆಯ ತರಂಗಗಳಿಂದಲ್ಲ.

ಇಲ್ಲದಿದ್ದರೆ ಈ ಬಾಬು ಭಜರಂಗಿ, ರಾಜೀವ್ ದಿಕ್ಷೀತ್, ಪ್ರವೀಣ್ ತೊಗಾಡಿಯಾ, ಪ್ರಕಾಶ್ ಕಾರಟ್‌ಗಳೇ ಮಹಾನ್ ಪೌರುಷಶಾಲಿಗಳೆನಿಸುತ್ತಿದ್ದರು. ಮನಮೋಹನ್ ಸಿಂಗ್ ಅವರಿಗೆ ರಾಜಕೀಯ ಗೊತ್ತಿಲ್ಲ. ಹಾಗಾಗಿ ರಾಜಕೀಯ ಮಾಡುವುದಿಲ್ಲ. ಆ ಕೆಲಸವನ್ನು ಸೋನಿಯಾ ಗಾಂಧಿಯವರು ಮಾಡುತ್ತಿದ್ದಾರೆ. ಮನಮೋಹನ್ ಸಿಂಗ್ ಅವರ ಸಾಮರ್ಥ್ಯವೇನಿದ್ದರೂ ಅರ್ಥವ್ಯವಸ್ಥೆಗೆ ಅರ್ಥಪೂರ್ಣ ರೂಪ ನೀಡುವುದರಲ್ಲಿದೆ. ಆ ಕೆಲಸವನ್ನು ಅವರು ಸಮರ್ಥ ವಾಗಿಯೇ ನಿರ್ವಹಿಸುತ್ತಿದ್ದಾರೆ. ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್ ಅವರಂತೆ ಮೈಕ್ ಮುಂದೆ ನಿಂತು ‘ಪೇಪರ್ ಟೈಗರ್” ಆಗದೆ, ವಾಸ್ತವದಲ್ಲಿ ಬದಲಾವಣೆ ತರುವ ಮೂಲಕ ನಿಜವಾದ ಅರ್ಥಶಾಸ್ತ್ರಜ್ಞನೆಂಬುದನ್ನು ಸಾಬೀತುಪಡಿಸಿದ್ದಾರೆ. ಇನ್ನೇನು ಬೇಕು?

ಅಂದು ಹಣಕಾಸು ಸಚಿವರಾಗುವ ಅವಕಾಶ ಬಂದಾಗ, “ಒಂದು ವೇಳೆ ಭಾರತ ಗೆದ್ದರೆ ಸೋಲುವುದು ಯಾರು? ಅಂತ ಮನಮೋಹನ್ ಸಿಂಗ್ ಮಾರ್ಮಿಕವಾಗಿ ಹೇಳಿದ್ದರು. ಅಂದರೆ ‘ದೇಶದ ಗೆಲುವು ನಮ್ಮೆಲ್ಲರ ಗೆಲುವೂ ಆಗಿರುತ್ತದೆ” ಎಂದರ್ಥ. ಅಂತಹ ಗೆಲುವಿಗೆ ಕಾರಣರಾಗಿರುವ ಅವರನ್ನು ದುರ್ಬಲ ವ್ಯಕ್ತಿ ಅಂದರೆ ತಪ್ಪಾಗುತ್ತದೆ ಅಲ್ಲವೆ?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: