ಮಾತಿಗಿಂತ ಅವಳ ಅಳುವೇ ಜೋರಾಗಿ ಕೇಳುತಿತ್ತು! – Girls cry as the Culprits receive medals!

Campus dramasಫಾಕಲ್ಟಿಗಳ ದಾಹಕ್ಕೆ ಬಲಿಯಾದವರ ವಿದ್ಯಾರ್ಥಿನಿಯರ ಗೋಳು ಕೇಳುವವರೇ ಇಲ್ಲ. ಅವುಗಳನ್ನೆಲ್ಲ ಬರೆಯುತ್ತಾ ಕುಳಿರೆ ಕೊನೆಯೇ ಇಲ್ಲ. ನಮ್ಮ ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಅತ್ಯಾಚಾರ, ದೌರ್ಜನ್ಯದ ಕಥೆಗಳು ದುರ್ಯೋಧನ, ದುಶ್ಯಾಸನರನ್ನು ನಾಚಿಸುವಂತಿದೆ. ಅಲ್ಲಾರೀ, ವಿದ್ಯಾರ್ಥಿನಿಯೊಬ್ಬಳ ಮೇಲೆ ಅಸಭ್ಯವಾಗಿ ವರ್ತಿಸಿದ ಉಪನ್ಯಾಸಕರಿಗೆ “ವಿಶ್ವಮಾನವ ಪ್ರಶಸ್ತಿ ಕೊಡೋದಾ ?” ಭಲೆ ಭಲೆ !

ಅದೊಂದು Sunny day!

ಮೊಲವೊಂದು ತನ್ನ ಪೊದೆಯ ಮುಂದೆ ಲ್ಯಾಪ್-ಟಾಪ್ ಇಟ್ಟುಕೊಂಡು ಟೈಪ್ ಮಾಡುತ್ತಾ ಕುಳಿತಿರುತ್ತದೆ. ಅಷ್ಟರಲ್ಲಿ ನರಿಯೊಂದು ಅದೇ ಮಾರ್ಗವಾಗಿ ಬರುತ್ತದೆ. ಹಾಗೆ ಬಂದ ನರಿ ಮೊಲವನ್ನು ಪ್ರಶ್ನಿಸುತ್ತದೆ-ಏನೋ ಮಾಡುತ್ತಿರುವ ಹಾಗಿದೆ?
ಮೊಲ: ಹೌದು thesis ಬರೆಯುತ್ತಿದ್ದೇನೆ!
ನರಿ: ಯಾವ ಸಬ್ಜೆಕ್ಟ್?
ಮೊಲ: ಓ ಅದಾ… “ಮೊಲಗಳು ಹೇಗೆ ನರಿಯನ್ನು ತಿನ್ನುತ್ತವೆ” ಎಂಬ ಬಗ್ಗೆ !!
ನರಿ: ridiculous ಎಂತಹ ಮೂರ್ಖನಿಗೂ ಗೊತ್ತಿದೆ ಮೊಲಗಳಿಗೆ ನರಿಯನ್ನು ತಿನ್ನಲು ಸಾಧ್ಯವಿಲ್ಲ ಅಂತ.
ಮೊಲ: ಹಾಗಾದರೆ ಬಾ ತೋರಿಸುತ್ತೇನೆ.

ನರಿಯನ್ನು ತನ್ನ ಪೊದೆಯೊಳಕ್ಕೆ ಕರೆದುಕೊಂಡು ಹೋದ ಮೊಲ, ಕೆಲವೇ ನಿಮಿಷಗಳಲ್ಲಿ ಬಾಯಿಚಪ್ಪರಿಸುತ್ತಾ ಹೊರಬಂದು ಮತ್ತೆ ಲ್ಯಾಪ್-ಟಾಪ್ ಮುಂದೆ ಕುಳಿತು ಟೈಪ್ ಮಾಡಲು ಆರಂಭಿಸುತ್ತದೆ. ಸ್ವಲ್ಪ ಹೊತ್ತಿನಲ್ಲಿಯೇ ತೋಳವೊಂದು ಬರುತ್ತದೆ. ಹಾಗೆ ಬಂದ ತೋಳ ‘ಏನು ಮಾಡುತ್ತಿದ್ದೀಯಾ? ಎಂದು ಮೊಲವನ್ನು ಕೇಳುತ್ತದೆ. ಮಾಮೂಲಿ ಉತ್ತರ- ‘ಥೀಸಿಸ್”. ವಿಷಯ ಏನು? “ಮೊಲಗಳು ಹೇಗೆ ತೋಳವನ್ನು ತಿನ್ನುತ್ತವೆ”! ಮೊಲದ ಮಾತನ್ನು ಕೇಳಿದ ತೋಳ ಕೇಕೆ ಹಾಕಿ ನಗಲಾರಂಭಿಸುತ್ತದೆ. ಹಾಗಾದರೆ ಬಾ ತೋರಿಸುತ್ತೇನೆ ಎಂದು ತೋಳವನ್ನೂ ತನ್ನ ಪೊದೆಯೊಳಕ್ಕೆ ಕರೆದುಕೊಂಡು ಹೋದ ಮೊಲ ಸ್ವಲ್ಪ ಸಮಯದಲ್ಲೇ ಹೊಟ್ಟೆ ಸವರಿಕೊಂಡು ಹೊರಬರುತ್ತದೆ. ಮತ್ತೆ ಲ್ಯಾಪ್‌ಟಾಪನ್ನು ಕುಟ್ಟಲು ಶುರು ಮಾಡುತ್ತದೆ. ಅಷ್ಟರಲ್ಲಿ ಎದುರಿಗೆ ಕರಡಿ ಬರುತ್ತಿರುತ್ತದೆ. ಕರಡಿಯೂ ಕೂಡ ಅದೇ ಪ್ರಶ್ನೆ ಹಾಕುತ್ತದೆ. ಮೊಲದ ಉತ್ತರವೂ ಸಿದ್ಧವಾಗಿರುತ್ತದೆ. ‘ಮೊಲಗಳು ಹೇಗೆ ಕರಡಿಯನ್ನು ತಿನ್ನುತ್ತವೆ”! ಬಾ ತೋರಿಸುತ್ತೇನೆ ಎಂದು ಮೊಲ ಕರೆಯುತ್ತದೆ. ಆದರೆ ಮೊಲವನ್ನು ಹಿಂಬಾಲಿಸುತ್ತಾ ಪೊದೆಯೊಳಕ್ಕೆ ಹೋದ ಕರಡಿಗೆ ಆಶ್ಚರ್ಯವೋ ಆಶ್ಚರ್ಯ! ಪೊದೆಯ ಒಂದು ಮೂಲೆಯಲ್ಲಿ ನರಿಯ ಮೂಳೆಗಳ ರಾಶಿಯಿದೆ, ಇನ್ನೊಂದು ಮೂಲೆಯಲ್ಲಿ ತೋಳದ ಮೂಳೆಗಳನ್ನು ರಾಶಿ ಹಾಕಲಾಗಿದೆ. ಆದರೆ ಮಧ್ಯದಲ್ಲಿ ದೈತ್ಯ ಸಿಂಹವೊಂದು ಬಾಯಿ ತೆರೆದುಕೊಂಡು ಗುರ್ರ್….ಗುರ್ರ್…. ಎನ್ನುತ್ತಿರುತ್ತದೆ!

ಏನಿದರ ನೀತಿ? ನೀವು ಥೀಸಿಸ್‌ಗೆ ಯಾವ ವಿಷಯ ಆರಿಸಿಕೊಳ್ಳುತ್ತೀರಿ ಎಂಬುದು ಮುಖ್ಯವಲ್ಲ. ಯಾವ ಅಂಕಿ-ಅಂಶಗಳನ್ನು ಕಲೆಹಾಕುತ್ತೀರಿ ಎಂಬುದೂ ಮುಖ್ಯವಲ್ಲ. ನೀವು ಥೀಸಿಸ್ ಬರೆಯುವ ಸಬ್ಜೆಕ್ಟ್‌ನಿಂದ ಯಾರಿಗೂ ಯಾವ ಲಾಭವಾಗದೇ ಇದ್ದರೂ ಚಿಂತೆಯಿಲ್ಲ. ಆದರೆ ನೀವು ಯಾರ ಕೆಳಗೆ(ಗೈಡ್) ಥೀಸಿಸ್ ಬರೆಯುತ್ತೀರಿ ಎಂಬುದು ಖಂಡಿತ ಮುಖ್ಯವಾಗುತ್ತದೆ!!

ನಮ್ಮ ವಿಶ್ವವಿದ್ಯಾಲಯಗಳ ಕರ್ಮಕಾಂಡದ ಬಗ್ಗೆ ಏಕೆ ಮತ್ತೆ ಮತ್ತೆ ಬರೆಯಬೇಕಾಗಿದೆಯೆಂದರೆ ಬಾಕ್ಸಿಂಗ್ ರಿಂಗ್‌ನ ಹೊರಗೆ ನಿಂತು ನೋಡುವವರಿಗೆ(ringside viewers) ಗುದ್ದು ತಿನ್ನುವವರ ನೋವು, ವೇದನೆ ಅರ್ಥವಾಗುವುದಿಲ್ಲ. “ನಾನು ಮಾನಸಗಂಗೋತ್ರಿಯಲ್ಲಿ ಎಂಎಸ್ಸಿ ಪದವೀಧರೆ. ಬಯೋಕೆಮಿಸ್ಟ್ರಿಯಲ್ಲಿ ನನಗೇ ಗೋಲ್ಡ್ ಮೆಡಲ್ ಬರಬೇಕಾಗಿತ್ತು. ಆದರೆ ನಮ್ಮ ಪ್ರೊಫೆಸರ್ ‘ಬೇಡಿಕೆ”ಯನ್ನು ಈಡೇರಿಸಲಿಲ್ಲ ಎಂಬ ಕಾರಣಕ್ಕೆ ಗೋಲ್ಡ್ ಮೆಡಲ್ ಕೈತಪ್ಪಿ ಹೋಯಿತು. ಅಷ್ಟೇಅಲ್ಲ, ಮಾರ್ಕ್ಸ್‌ನಲ್ಲೂ ಖೋತಾ ಆಯಿತು. ಆದರೇನಂತೆ ಪಿಎಚ್‌ಡಿಗಾಗಿ CSIR(Council of scientific and industrial research)ಗೆ ಸೇರಿದಾಗ ಕಾಮಪೀಡೆಗಳಾಗಿರುವ ಅಲ್ಲಿನ ಪ್ರೊಫೆಸರ್‌ಗಳಿಂದ ತಪ್ಪಿಸಿ ಕೊಳ್ಳಲಾಗಲಿಲ್ಲ. ಆ ಸ್ಟುಪಿಡ್ ಪಿಎಚ್‌ಡಿಗಾಗಿ ನನ್ನ ಶೀಲವನ್ನೇ ಕಳೆದುಕೊಳ್ಳಬೇಕಾಯಿತು. ಇದು ನನ್ನೊಬ್ಬಳದ್ದೇ ಕಥೆಯಲ್ಲ. ಅದರಲ್ಲೂ ಹಾಸ್ಟೆಲ್‌ನಲ್ಲಿ ಇರುವ ಹುಡುಗಿಯರನ್ನು ನಮ್ಮ ವಯಸ್ಸಿನಷ್ಟು ದೊಡ್ಡ ಮಕ್ಕಳನ್ನು ಹೊಂದಿರುವ ಪ್ರೊಫೆಸರ್‌ಗಳು call girls ಥರಾ ನಡೆಸಿಕೊಳ್ಳುತ್ತಿದ್ದರು. ಅವರು ಕರೆದಾಗಲೆಲ್ಲ ಹೋಗಬೇಕಿತ್ತು. Facultyಯಲ್ಲಿ ಇರುವವರೆಲ್ಲರೂ ಅಂಥವರೇ. ಮಾಸ್ಟರ್ಸ್ ಅಥವಾ ಪಿಎಚ್‌ಡಿಗಾಗಿ ನನ್ನ ಶತ್ರುಗಳೂ ಆ ಡಿಪಾರ್ಟ್‌ಮೆಂಟ್‌ಗೆ ಹೋಗುವುದು ಬೇಡ. ನಿತ್ಯವೂ ನೋವು ನುಂಗುತ್ತಾ ಕಾಲ ದೂಡುತ್ತಿದ್ದೇನೆ”: ಇಂತಹ ಇ-ಮೇಲ್‌ಗಳನ್ನು ಓದುತ್ತಿದ್ದರೆ ಕರುಳನ್ನೇ ಹಿಂಡಿದಂತಾಗುತ್ತದೆ.

“ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಡಿಗ್ರಿ” ಲೇಖನವನ್ನು ಓದಿ ಇಂತಹ ನೂರಾರು ಇ-ಮೇಲ್‌ಗಳು, ಕರೆಗಳು ಬಂದಿವೆ. ಅದರಲ್ಲೂ ಎಂ.ಎಸ್. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿರುವ ಒಬ್ಬ ವಿದ್ಯಾರ್ಥಿನಿಯಂತೂ ನೋವು ತೋಡಿಕೊಳ್ಳುವುದಕ್ಕೋಸ್ಕರ ಕರೆ ಮಾಡಿದ್ದಳು. ಆದರೆ ಮಾತು ಮಾತಿಗೂ ಬಿಕ್ಕಳಿಸಲು ಆರಂಭಿಸುತ್ತಿದ್ದಳು. ಮಾತಿಗಿಂತ ಅವಳ ಅಳುವೇ ಜೋರಾಗಿ ಕೇಳುತ್ತಿತ್ತು. “ನನ್ನ ಅಪ್ಪ-ಅಮ್ಮ ಚಿಕ್ಕಂದಿನಿಂದಲೂ ಒಳ್ಳೆಯದನ್ನೇ ಹೇಳಿಕೊಟ್ಟಿದ್ದಾರೆ. ಕೆಟ್ಟದರ ಬಗ್ಗೆ ಅಪ್ಪಿ-ತಪ್ಪಿ ಮಾತನ್ನೂ ಆಡುತ್ತಿರಲಿಲ್ಲ. ಇಂತಹ ಹಿನ್ನೆಲೆಯಿಂದ ಬಂದ ನನ್ನಂತಹ ಎಷ್ಟೋ ಹೆಣ್ಣುಮಕ್ಕಳಿಗೆ ಏಕಾಏಕಿ ಕ್ರೂರ ಪ್ರಚಂಚ ಎದುರಾದರೆ ಹೇಗೆ ಎದುರಿಸಬೇಕೆಂದೇ ಗೊತ್ತಾಗುವುದಿಲ್ಲ. ಈಗಿರುವಷ್ಟು ಬುದ್ಧಿ ಎರಡು ವರ್ಷಗಳ ಹಿಂದೆ ಇದ್ದಿದ್ದರೆ ಮೈಮೇಲೆ ಕೈಹಾಕಿದ ಆ ಪ್ರೊಫೆಸರ್‌ನ ಕಪಾಳಕ್ಕೆ ಬಿಗಿಯುತ್ತಿದ್ದೆ. ಅಂತಹ ಅವಕಾಶವನ್ನು ಕಳೆದು ಕೊಂಡಿದ್ದಕ್ಕಾಗಿ ಇಂದಿಗೂ ಪಶ್ಚಾತ್ತಾಪ ಪಡುತ್ತಿದ್ದೇನೆ. ಅದರ ಜತೆಗೆ ಮೆಡಿಕಲ್ ಓದಿದ ಹುಡುಗಿಯರೆಂದರೆ ಚಾರಿತ್ಯ್ರವನ್ನೇ ಅನುಮಾನಿಸುವ ಸಮಾಜ ಮತ್ತೊಂದು ಕಡೆ ಇದೆ”.

ಎಲ್ಲರದ್ದೂ, ಎಲ್ಲಾ ಕಾಲೇಜುಗಳಲ್ಲೂ ಅದೇ ಗೋಳು.ಇವು ಅಲ್ಲೊಂದು ಇಲ್ಲೊಂದು ನಡೆಯುವ Isolated cases ಅಲ್ಲ. There is a silent majority ಅವರು ಬಾಯಿ ಬಿಡುತ್ತಿಲ್ಲ ಎಂಬ ಮಾತ್ರಕ್ಕೆ ಸಮಸ್ಯೆಯೇ ಇಲ್ಲ ಎಂದರ್ಥವಲ್ಲ. ಅದೊಂಥರಾ forbidden ಅಥವಾ Supressed silence. ತುಂಬಾ ಅನುಮಾನಾಸ್ಪದವಾದ ಮೌನ. ಏಕೆಂದರೆ ಒಂದು ಹುಡುಗಿ ತನ್ನ ಮೇಲೆ ದೌರ್ಜನ್ಯ ನಡೆಯಿತೆಂದರೆ, ಸಮಸ್ಯೆಗಳನ್ನು ಹೇಳಿಕೊಂಡರೆ ಕಾಲೇಜಿಗೇ ಹೋಗಬೇಡ ಎಂದು ಬಿಡುವ ಪೋಷಕರೇ ಹೆಚ್ಚಿದ್ದಾರೆ, ಸಂಕಷ್ಟದಲ್ಲಿರುವ ವಿದ್ಯಾರ್ಥಿನಿಯ ನಡತೆಯನ್ನೇ ಶಂಕಿಸುವ, ಅವಳಲ್ಲೇ ತಪ್ಪಿದೆ ಎಂದು ಅನುಮಾನಿಸುವ ಜನರಿದ್ದಾರೆ. ಹುಡುಗಿಯರೇ ಮಾರ್ಕ್ಸ್‌ಗೋಸ್ಕರ ಏನು ಮಾಡುವುದಕ್ಕೂ ಸಿದ್ಧರಾಗಿರುತ್ತಾರೆ ಎಂದು ಲಜ್ಜೆಯಿಲ್ಲದೆ ಹೇಳುವವರೂ ಇದ್ದಾರೆ.

ಹಾಗಿರುವಾಗ ಒಬ್ಬ ಹೆಣ್ಣಾದವಳು ಯಾವ ರೀತಿ ಇದನ್ನು ಎದುರಿಸಬೇಕು? ಯಾರ ಬಳಿ ನೋವು ತೋಡಿಕೊಳ್ಳಬೇಕು? ಯಾರು ಅವಳ ಸಹಾಯಕ್ಕೆ ಬರುತ್ತಾರೆ? ಅಷ್ಟಕ್ಕೂ, ಮಲಗಿದರೆ ಮಾತ್ರ ಮಾರ್ಕ್ಸ್ ಕೊಡುವಂತಹ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರು? ಅಂತಹ ಅನಿವಾರ್ಯತೆಯನ್ನು ತಂದಿಟ್ಟಿರುವವರಾರು? ಹೆಣ್ಣನ್ನು ಜಾರಿಣಿ ಎಂದು ಟೀಕಿಸುವುದು ಸುಲಭ. ಆದರೆ ಆಕೆಯನ್ನು ಸೂಳೆಯನ್ನಾಗಿ ಮಾಡಿದವನು ಗಂಡಸೇ ಅಲ್ಲವೆ? ಬೆಂಗಳೂರು ವಿವಿಯಲ್ಲಿ ಭವಿಷ್ಯದ ಪತ್ರಕರ್ತರನ್ನು ರೂಪಿಸುತ್ತಿರುವ ಪ್ರಾಧ್ಯಾಪಕ ಮಹಾಶಯರೊಬ್ಬರು, ಮಾಸ್ಟರ್ಸ್ ಗೆಂದು ಬರುವ ವಿವಾಹಿತ ಮಹಿಳೆಯರನ್ನುದ್ದೇಶಿಸಿ ‘you are a safe bet” ಎನ್ನುತ್ತಾರೆಂದರೆ ನಂಬುತ್ತೀರಾ?

ಅದಿರಲಿ, ನಿಮಗೆ ಹಾಸನದಲ್ಲಿ ವಿದ್ಯಾರ್ಥಿಗಳಿಂದ ಪೆಟ್ಟು ತಿಂದ ಉಪನ್ಯಾಸಕರೊಬ್ಬರ ಹೆಸರು ನೆನಪಿದೆಯೇ? ಮೈಸೂರು ವಿಶ್ವವಿದ್ಯಾಲಯದ ಹಾಸನ ಬ್ರಾಂಚ್‌ನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾಗಿದ್ದ ಅವರು ವಿದ್ಯಾರ್ಥಿನಿಯೊಬ್ಬಳನ್ನು ತಮ್ಮ ಕೊಠಡಿಯೊಳಕ್ಕೆ ಕರೆಸಿಕೊಂಡು ಆಕೆಯ ಜತೆ ಅಸಭ್ಯವಾಗಿ ವರ್ತಿಸಿ ವಿದ್ಯಾರ್ಥಿಗಳಿಂದ ಪೆಟ್ಟು ತಿಂದಿದ್ದು, ಪತ್ರಿಕೆಗಳಲ್ಲಿ ವರದಿಯಾಗಿದ್ದನ್ನು ನೆನಪಿಸಿಕೊಳ್ಳಿ. ಈ ಘಟನೆಯ ನಂತರ ಅವರನ್ನು 6 ತಿಂಗಳು ಸಸ್ಪೆಂಡ್ ಕೂಡ ಮಾಡಲಾಯಿತು. ಆದರೆ ‘ಸ್ವಯಂ ನಿವೃತ್ತಿ” ತೆಗೆದುಕೊಂಡ ಆತ ಈಗ ಮೈಸೂರಿನಲ್ಲಿ ದೊಡ್ಡ ಸಾಹಿತಿಯಂತೆ ಸೋಗು ಹಾಕಿಕೊಂಡು ತಿರುಗುತ್ತಿದ್ದಾರೆ. ಇತ್ತ ಕುವೆಂಪು ಅವರನ್ನು ಗುತ್ತಿಗೆ ತೆಗೆದುಕೊಂಡಿರುವ ಹಾಗೂ ಕುವೆಂಪು ಹೆಸರು ಹೇಳಿಕೊಂಡೇ ತಮ್ಮ ಅಸ್ತಿತ್ವ ಉಳಿಸಿಕೊಂಡಿರುವ ‘ನಾಡೋಜ” ದೇ.ಜವರೇಗೌಡರು ಆ ವ್ಯಕ್ತಿಗೆ ‘ವಿಶ್ವಮಾನವ ಪ್ರಶಸ್ತಿ” ಕೊಡಮಾಡಿದ್ದಾರೆ!! ವಿದ್ಯಾರ್ಥಿನಿಯ ಜತೆ ಅನುಚಿತವಾಗಿ ವರ್ತಿಸಿ ವಿದ್ಯಾರ್ಥಿಗಳಿಂದ ಪೆಟ್ಟು ತಿಂದು ಸಸ್ಪೆಂಡ್ ಆಗಿದ್ದ ವ್ಯಕ್ತಿಗೆ ‘ವಿಶ್ವಮಾನವ ಪ್ರಶಸ್ತಿ” ಕೊಡುತ್ತಾರೆಂದರೆ ಆ ಪ್ರಶಸ್ತಿಯ ಮೌಲ್ಯ ಯಾವ ಮಟ್ಟಕ್ಕಿಳಿಯಬಹುದು ಯೋಚಿಸಿ? ವಿಶ್ವವಿದ್ಯಾಲಯಗಳನ್ನೂ ಕಾಡುತ್ತಿರುವ ಜಾತಿ ರಾಜಕಾರಣದ ಕಬಂಧಬಾಹುಗಳ ಆಳ, ವಿಸ್ತಾರ ಇನ್ನೆಷ್ಟಿರಬಹುದು?

ಇದು ಒಬ್ಬಿಬ್ಬರ ಕಥೆಯಲ್ಲ. ನಮ್ಮ ಎಷ್ಟೋ ಗುರುಗಳ ಒಳಗೂ ಒಬ್ಬೊಬ್ಬ ಮಹೇಶ್ಚಂದ್ರ ಗುರುಗಳಿದ್ದಾರೆ. ಧಾರವಾಡ ವಿವಿಯ ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿದ್ದ ಪ್ರೊ. ನರಗಲ್ ಅವರು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿ ಒಂದು ವರ್ಷ ಸಸ್ಪೆಂಡ್ ಆಗಿದ್ದರು. ಹಿಂದೊಮ್ಮೆ ಬೆಂಗಳೂರು ವಿವಿಯ ಕಾಮರ್ಸ್ ಆಂಡ್ ಮ್ಯಾನೇಜ್‌ಮೆಂಟ್ ವಿಭಾಗದ ಮುಖ್ಯಸ್ಥರಾಗಿದ್ದ ಕೆ. ಹನುಮಂತಪ್ಪ ಅವರ ವಿರುದ್ಧ ವಿದ್ಯಾರ್ಥಿನಿಯೊಬ್ಬರು ಉಪಕುಲಪತಿಗೆ ದೂರು ನೀಡಿದ್ದರು. ಪೊಲೀಸ್ ಕಂಪ್ಲೇಂಟ್ ಕೂಡ ಆಗಿತ್ತು. ಕೊನೆಗೆ ಹನುಮಂತಪ್ಪನವರನ್ನು ಗುಲ್ಬರ್ಗಕ್ಕೆ ವರ್ಗಾವಣೆಯನ್ನೂ ಮಾಡಲಾಗಿತ್ತು. ಈ ಬಗ್ಗೆ ಪತ್ರಿಕೆಗಳಲ್ಲೂ ವಿಸ್ತೃತವಾಗಿ ವರದಿಯಾಗಿತ್ತು. ಅಷ್ಟೇಕೆ, ಮಹಾರಾಜ ಹಾಗೂ ಮಹಾಜನ ಕಾಲೇಜಿನಲ್ಲಿ ಕಳೆದ ವರ್ಷ ಅರೆಕಾಲಿಕ ಉಪನ್ಯಾಸಕರಾಗಿದ್ದ ಡಾ. ಬಾಲಾಜಿ ವಿರುದ್ಧ ವಿದ್ಯಾರ್ಥಿನಿಯೊಬ್ಬಳು ವಿವಿಗೆ ದೂರು ನೀಡಿದ್ದು ತನಿಖೆ ನಡೆಯುತ್ತಿದೆ. ಕಾಮಪೀಡಿತ ಗುರುಗಳಿಂದಾಗಿ ಗುರು-ಶಿಷ್ಯರ ಸಂಬಂಧವೇ ಬದಲಾಗುತ್ತಿದೆ. ಒಂದೆಡೆ, ತನ್ನ ಗರ್ಲ್‌ಫ್ರೆಂಡ್‌ಗೆ ಕಿರುಕುಳ ನೀಡಿದ ಪ್ರೊಫೆಸರ್‌ನನ್ನು ಪ್ರಶ್ನಿಸಲು ಹೋಗಿ ಫೇಲಾದ ಬಾಯ್‌ಫ್ರೆಂಡ್‌ಗಳಿದ್ದರೆ, ಇನ್ನೊಂದೆಡೆ ತನ್ನ ಮಗಳ ವಯಸ್ಸಿನ ಶಿಷ್ಯೆಯನ್ನೇ ವಿವಾಹ ವಾಗುವ ಸಲುವಾಗಿ ಮೊದಲ ಹೆಂಡತಿಗೆ ಡೈವೋರ್ಸ್ ನೀಡಿದ ಉದಾಹರಣೆ ಕುವೆಂಪು ವಿವಿಯಲ್ಲಿದೆ!

ಇಷ್ಟಾಗಿಯೂ ನಮ್ಮ ವಿವಿಗಳು ತಪ್ಪಿತಸ್ಥರ ವಿರುದ್ಧ ಯಾವ ಕ್ರಮಕೈಗೊಂಡಿವೆ? ಮಹೇಶ್ಚಂದ್ರ ಗುರು ಅವರು ತಪ್ಪಿತಸ್ಥರೆಂದು ಕಳೆದ ಸೆಪ್ಟೆಂಬರ್‌ನಲ್ಲಷ್ಟೇ ‘ಮಹಿಳಾ ದೌರ್ಜನ್ಯ ತಡೆ ಸಮಿತಿ” ವರದಿ ನೀಡಿದ್ದರೂ, ಕೋ. ಚೆನ್ನಬಸಪ್ಪ ಸಮಿತಿಯೂ ದೋಷಿಯನ್ನಾಗಿ ಮಾಡಿದ್ದರೂ ಹೊಸದಾಗಿ ಪರೀಕ್ಷಾಂಗ ಕುಲಸಚಿವರಾಗಿ(ರಿಜಿಸ್ಟ್ರಾರ್ ಇವ್ಯಾಲ್ಯುಯೇಶನ್) ಬಂದಿರುವ ಎ.ಬಿ. ಇಬ್ರಾಹಿಂ ಅವರು ಮಹೇಶ್ಚಂದ್ರ ಗುರುವನ್ನು reinstate ಮಾಡಲು ತಯಾರಿ ನಡೆಸುತ್ತಿದ್ದಾರೆ! ಅತ್ಯಾಚಾರ ಮಾಡಿದವರನ್ನು ಗಲ್ಲಿಗೆ ಹಾಕಬೇಕು ಅಂತ ಇಡೀ ಸಮಾಜವೇ ಒಕ್ಕೊರಲಿನಿಂದ ಹೇಳುತ್ತದೆ. ಆದರೆ ಜ್ಞಾನದೇಗುಲಗಳಲ್ಲಿ ನಡೆಯುತ್ತಿರುವ ನಿರಂತರ ಅತ್ಯಾಚಾರಗಳ ಬಗ್ಗೆ ಇದುವರೆಗೂ ಯಾವ ವಿವಿ ಕ್ರಮ ಕೈಗೊಂಡಿದೆ? ತಪ್ಪಿತಸ್ಥರೆಂದು ಸಾಬೀತಾದ ಮೇಲೂ ನಮ್ಮನ್ನು ಯಾರೂ ಕಿತ್ತು ಹಾಕಲು ಸಾಧ್ಯವಿಲ್ಲ ಎನ್ನುವ ಧೈರ್ಯ, ಹೆಚ್ಚೆಂದರೆ ಸಸ್ಪೆಂಡ್ ಮಾಡಬಹುದು ಎಂಬ ನಿರಾಳತೆಗಳೇ ವಿವಿಗಳು ಅನೈತಿಕ ಮಾರ್ಗ ಹಿಡಿಯಲು ಮುಖ್ಯ ಕಾರಣವಾಗಿದೆ.

‘ಎಷ್ಟು ಜನ ಪ್ರೊಫೆಸರ್‌ಗಳು, ಉಪನ್ಯಾಸಕರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪಗಳಿವೆ” ಎಂದು ಮೈಸೂರು ವಿವಿಯ ‘ಮಹಿಳಾ ದೌರ್ಜನ್ಯ ತಡೆ ಸಮಿತಿ”ಯ ಸದಸ್ಯರನ್ನು ಪ್ರಶ್ನಿಸಿದರೆ ಮಾಹಿತಿ ಕೊಡುವುದಕ್ಕೂ ಹೆದರುತ್ತಾರೆಂದರೆ ಇವರಿಂದ ಯಾವ ನ್ಯಾಯವನ್ನು ನಿರೀ ಕ್ಷಿಸಬಹುದು? ಅದೆಷ್ಟು ಜನರ ವಿರುದ್ಧ ದೂರು ದಾಖಲಾ ಗಿರಬಹುದು? ಮೈಸೂರು, ಕುವೆಂಪು, ಹಂಪಿ ವಿವಿಗಳ ಕಾಲೇಜ್, ಲೇಡೀಸ್ ಹಾಸ್ಟೆಲ್‌ಗಳ ನೋಟಿಸ್ ಬೋರ್ಡ್ ಮೇಲೆ ‘ಮಹಿಳಾ ದೌರ್ಜನ್ಯ ತಡೆ ಸಮಿತಿ” ಎಂಬ ಕಮಿಟಿ ಇದೆ, ವಿದ್ಯಾರ್ಥಿನಿಯರ ರಕ್ಷಣೆಗೆ ಕಾಯಿದೆ ರೂಪಿಸಲಾಗಿದೆ, ಅನ್ಯಾಯಕ್ಕೊಳಗಾದವರು ದೂರು ನೀಡಬಹುದು ಎಂದು ಸೂಚನೆ ಹಾಕುತ್ತಾರೆಂದರೆ ಕೆಲ ಪ್ರೊಫೆಸರ್‌ಗಳು ಅದೆಂತಹ ಪೀಡೆಗಳಾಗಿ ಪರಿಣಮಿಸಿರಬಹುದು? ಅಷ್ಟಕ್ಕೂ, ಲೈಂಗಿಕ ಕಿರುಕುಳದಂತಹ ಸಮಸ್ಯೆಯೇ ಇಲ್ಲ ಅನ್ನುವುದಾದರೆ ಅಥವಾ ಸಮಸ್ಯೆ ಇಷ್ಟೊಂದು ವ್ಯಾಪಕವಾಗಿಲ್ಲ ಅನ್ನೋದಾದರೆ ಇಂತಹ ಸಮಿತಿಗಳನ್ನೇಕೆ ರೂಪಿಸುತ್ತಿದ್ದರು? ಸಮಿತಿಯ ಸದಸ್ಯರು ಖುದ್ದಾಗಿ ಲೇಡಿಸ್ ಹಾಸ್ಟೆಲ್‌ಗಳಿಗೆ ಬಂದು ಕಿರುಕುಳ ಅನುಭವಿಸುತ್ತಿರುವವರು ಧೈರ್ಯದಿಂದ ದೂರು ನೀಡಿ ಎಂದು ಏಕೆ ವಿದ್ಯಾರ್ಥಿನಿಯರಿಗೇಕೆ ಮನವಿ ಮಾಡುತ್ತಿದ್ದರು? ನೀವೇ ಯೋಚಿಸಿ…

ಇಂತಹ ಘೋರ ಅನ್ಯಾಯ ಕಣ್ಣೆದುರಿಗೇ ನಡೆಯುತ್ತಿದ್ದರೂ ಉನ್ನತ ಶಿಕ್ಷಣ ಸಚಿವರಾಗಿದ್ದ ಡಿ.ಎಚ್. ಶಂಕರ ಮೂರ್ತಿಯವರು ಮಾಡಿದ್ದೇನು? ವಿಶ್ವವಿದ್ಯಾಲಯದ ವೆಚ್ಚದಲ್ಲಿ 72 ಸಾವಿರ ರೂ. ನೀಡಿ ಚಿನ್ನದ ಕನ್ನಡಕ ಖರೀದಿ ಮಾಡಿದ್ದ ಮಹಿಳಾ ವಿವಿಯ ಕುಲಪತಿ ಸಯೀದಾ ಅಖ್ತರ್ ಅವರ ಭ್ರಷ್ಟತನ ಸಾಬೀತಾದರೂ ಕ್ರಮ ಕೈಗೊಳ್ಳದ ಶಂಕರ ಮೂರ್ತಿಯವರಂತಹ ಅಸಮರ್ಥ ಹಾಗೂ ಪುಕ್ಕಲ ಸಚಿವರನ್ನು ನಂಬಿ ಕುಳಿತುಕೊಳ್ಳಲು ಸಾಧ್ಯವೆ? ಹಾಗಾದರೆ ವಿದ್ಯಾರ್ಥಿಗಳಾದ ನಾವೇನು ಮಾಡಬೇಕು?

yet to end…

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: