‘ಮುಖ್ಯಮಂತ್ರಿ ಐ ಲವ್ ಯೂ’ಚಿತ್ರಕ್ಕೆ ವಿಘ್ನಗಳು ಶುರು! -Technic gowda and not scheming gowda!

ಗಿರುವ ಅನಾಹುತವನ್ನು ಸರಿಪಡಿಸಿಕೊಳ್ಳಲು ತಂದೆಮಕ್ಕಳಿಗೆ ಕೆಲವೇ ತಿಂಗಳುಗಳ ಗಡುವಿದೆ. ಎಲ್ಲ ಬಿಟ್ಟು ಭಂಗಿ ನೆಟ್ಟ ಎಂಬಂತೆ, ಕುಮಾರಸ್ವಾಮಿ ಅಭಿವ್ಯಕ್ತಿ ಸ್ವಾತಂತ್ರ್ಯದ ತಂಟೆಗೆ ಹೋಗಿ ಮತ್ತಷ್ಟು ಯಡವಟ್ಟು ಮಾಡಿಕೊಳ್ಳದಿರಲಿ.

ತಂತ್ರೇಗೌಡನ ಪಾತ್ರದಲ್ಲಿ ಅಂಕಲ್ ಲೋಕನಾಥ್ಇದೆಂಥ ದಿಗಿಲು? ಗೊತ್ತಿಲ್ಲ. ದೇವೇಗೌಡ ಮತ್ತು ಕುಮಾರಸ್ವಾಮಿ ಆಕಾಶ ಕಳಚಿ ಬಿದ್ದವರಂತೆ ದಿಗಿಲುಗೊಂಡು ನನ್ನ ಮೇಲಕ್ಕೆ ದಂಡು ಕಳಿಸುತ್ತಿದ್ದಾರೆ; ದಾಳಿಗೆ. ಇತ್ತೀಚೆಗೆ ಸುಮಾರು ನೂರು ಜನ ಆಫೀಸಿನ ಬಳಿ ಬಂದಿದ್ದರು. ಅವರ ಪೈಕಿ ಹತ್ತು ಜನರನ್ನು ನಾನೇ ಒಳಕ್ಕೆ ಕರೆದು ಮಾತಾನಾಡಿಸಿದೆ. ಅವರಿಗೆ ‘ಮುಖ್ಯಮಂತ್ರಿ ಐ ಲವ್ ಯೂ’ಸಿನಿಮಾ ಬಗ್ಗೆ ದಿಗಿಲು. ‘ನೀವು ಒಬ್ಬ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಹಾಗೂ ಒಕ್ಕಲಿಗ ಜನಾಂಗಕ್ಕೆ ಕೆಟ್ಟ ಹೆಸರನ್ನಿಟ್ಟು(ತಂತ್ರೇಗೌಡ), ಕೆಟ್ಟ ಪಾತ್ರವನ್ನು ಸೃಷ್ಟಿಸುತ್ತಿರುವುದಾಗಿ ತಿಳಿಸಿರುತ್ತೀರಿ. ಆದ್ದರಿಂದ ನೀವು ನಿರ್ಮಿಸುತ್ತಿರುವ ಚಿತ್ರದಲ್ಲಿನ ಪಾತ್ರಗಳ ಹೆಸರು ಬದಲಿಸಬೇಕೆಂದು ಕೋರುತ್ತೇವೆ’ಅಂತ ಬರೆಯಲಾದ ಒಂದು ಮನವಿ ಪತ್ರಕೊಟ್ಟರು.

‘ನೀವಿನ್ನೂ ಸಿನಿಮಾ ನೋಡಿಲ್ಲ. ಅಸಲಿಗೆ ಚಿತ್ರೀಕರಣವೇ ಪೂರ್ತಿಯಾಗಿ ಆಗಿಲ್ಲ. ನಾನು ಜಾತಿಗಳನ್ನು ಪ್ರೀತಿಸುವ ಅಥವಾ ದ್ವೇಷಿಸುವ ಮನುಷ್ಯ ಅಲ್ಲ. ಯಾವ ಜಾತಿಯನ್ನೂ ಹೀಗಳೆದು ಇವತ್ತಿನ ತನಕ ಒಂದಕ್ಷಕರ ಬರೆದವನಲ್ಲ. ಅಂಥದರಲ್ಲಿ ಒಂದು ಕುಟುಂಬದ ಮೇಲೆ ಅಥವಾ ಒಂದು ಜಾತಿಯ ಮೇಲೆ ಹಗೆ ಸಾಧಿಸುವುದಕ್ಕೋಸ್ಕರ ಇಷ್ಟೆಲ್ಲ ಹಣ, ಅದಕ್ಕಿಂತ ಹೆಚ್ಚು ಬೆಲೆ ಬಾಳುವ ನನ್ನ ಸಮಯ ಖರ್ಚು ಮಾಡಿ ನಾನು ಸಿನಿಮಾ ಮಾಡುತ್ತೇನಾ? ಅನವಶ್ಯಕವಾಗಿ ಅವಸರ ಪಟ್ಟುಕೊಂಡು ದಿಗಿಲಿಗೆ ಬೀಳಬೇಡಿ’ ಅಂದೆ. ‘ಆದರೂ ತಂತ್ರೇಗೌಡ ಅಂತ ನೀವು ಆ ಪಾತ್ರಕ್ಕೆ ಹೆಸರಿಡಬಾರದಿತ್ತು’ ಅಂದರು.

ತಮಾಷೆ ಅನ್ನಿಸಿದ್ದೇ ಆವಾಗ. ‘ತಂತ್ರ ಅಂದರೆ tactic. ಅದನ್ನು ಇಂಜಿನಿಯರಿಂಗ್ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ಯಂತ್ರ ತಂತ್ರ ಎಂಬ ಪದಗಳು ಒಟ್ಟೊಟ್ಟಿಗೆ ಬಳಸಲ್ಪಡುತ್ತವೆ. ತಾಂತ್ರಿಕ ವರ್ಗ, ರಾಜ ತಾಂತ್ರಿಕರು, ಪ್ರತಿ ತಂತ್ರ ಅಂತೆಲ್ಲ ಬಳಸುತ್ತೇವೆ. ಕುತಂತ್ರ ಅಂತ ಬಳಸಿದರೆ ಅದಕ್ಕೆ ಬೇಸರ ಪಡಬೇಕೇ ಹೊರತು, ತಂತ್ರ ಅಂದದ್ದಕ್ಕೆ ಸಿಟ್ಟು ಮಾಡಿಕೊಳ್ಳಬೇಕೇ’ ಅಂತ ಕೇಳಿದೆ. ‘ಅದಕ್ಕೆ ನಮ್ಮ ತಕರಾರಿಲ್ಲ. ತಂತ್ರದ ಜೊತೆಗೆ ಗೌಡ ಅಂತ ಸೇರಿಸಿದ್ದೀರಿ’ಅಂದರು.

‘ಆಯ್ತು ಬಿಡಿ, ಆ ಪಾತ್ರಕ್ಕೆ ತಂತ್ರಗಾರ ಅಂತ ಹೆಸರಿಡೋಣ’ಅಂದೆ. ಬಂದವರು ನಕ್ಕರು. ನಾನೂ ನಕ್ಕು ಸುಮ್ಮನಾದೆ.

ಇಂಥವುಗಳ ಬಗ್ಗೆ ತುಂಬ ಹೊತ್ತು ಯೋಚಿಸುವ ವ್ಯವಧಾನ ನನಗಿಲ್ಲ. ಒಂದು ಕಡೆ ಹತ್ತು ಹನ್ನೆರಡು ತಾಸಿನ ಚಿತ್ರೀಕರಣ. ಇನ್ನೊಂದು ಕಡೆ ರಾಶಿರಾಶಿ ಬರವಣಿಗೆ. ಈ ಮಧ್ಯೆ, ಜಗತ್ತಿನಲ್ಲಿ ಉಳಿದೆಲ್ಲವುಗಳಿಗಿಂತ ಆರೋಗ್ಯವೇ ಮುಖ್ಯ ಎಂದು ನಿರ್ಧರಿಸಿರುವುದರಿಂದ ದಿನಕ್ಕಿಷ್ಟು ಹೊತ್ತು ಅಂತ gymಗೆ ಸಮಯ ಮೀಸಲಿಟ್ಟಿರುವ ಅನಿವಾರ್ಯತೆ. ಇವೆಲ್ಲವುಗಳ ಮಧ್ಯೆ ಸ್ಮರಣೆಗೂ ಅರ್ಹರಲ್ಲದ ದೇವೆಗೌಡ ಮತ್ತು ಅವರ ಮಕ್ಕಳ ಬಗ್ಗೆ ಎಲ್ಲಿ ತಲೆ ಕೆಡಿಸಿಕೊಂಡು ಕೂಡಲಿ? ಈ ದೇಶ ಮತ್ತು ಇದರ ಸಂವಿಧಾನ ನನಗೆ ಕೆಲವು ಹಕ್ಕುಗಳನ್ನು ಕೊಟ್ಟಿದೆ. ಕೆಲವು ಜವಾಬ್ಧಾರಿಗಳನ್ನೂ ಕೊಟ್ಟಿದೆ. ಇಪ್ಪತ್ತೈದು ವರ್ಷ ಪತ್ರಿಕೋದ್ಯಮ ಮಾಡಿದವನು ನಾನು. ಯಾರ ಮೇಲಾದರೂ ಕೆಸರು ಎರಚುವುದನ್ನು ಕಾಯಕ ಮಾಡಿಕೊಂಡು ಅದಕ್ಕೋಸ್ಕರ, ಎಲ್ಲ ಬಿಟ್ಟು ಸಿನಿಮಾ ಮಾಡುತ್ತೇನಾ?

ಮೊದಲ ದಿನ ಬಂದವರನ್ನು ಕೂಡಿಸಿ ಮಾತಾಡಿಸಿ ಕಳಿಸಿಕೊಟ್ಟದ್ದಾಯಿತಲ್ಲ? ಅದರ ಮರುದಿನವೇ ಮತ್ತೊಂದು ದಂಡು ಕಚೇರಿಯ ಕಡೆ ಹೊರಟಿದೆ ಎಂಬ ಸುದ್ದಿ ಬಂತು.

ನಾನು ಎರಡನೇ ಬಾರಿಯೂ ತಲೆ ಕೆಡಿಸಿಕೊಳ್ಳಲಿಲ್ಲ. ಪ್ರತಿಭಟನೆಗಳು ನನಗೆ ಹೊಸದಲ್ಲ. ಸರಿಸುಮಾರು ಇಪ್ಪತ್ತು ವರ್ಷ ಚಳವಳಿಗಳೊಂದಿಗೆ ಬೆಳೆದವನು ನಾನು. ಆದರೆ ಎರಡನೆಯ ದಿನ ಬಂದವರು ಸಂಭಾವಿತರಂತೆ, ಪ್ರತಿಭಟನಾಕಾರರಂತೆ, ಕನಿಷ್ಠ ಪಕ್ಷ ಒಂದು ಪಕ್ಷದ ಕಾರ್ಯಕರ್ತರಂತೆ ಕೂಡು ವರ್ತಿಸಿಲ್ಲ. ಕಳೆದ ಅ.3ರಂದು ಅಧಿಕಾರ ಬಿಟ್ಟುಕೊಡದಿದ್ದಾಗ ಕುಮಾರಸ್ವಾಮಿ ಬಾಯಲ್ಲಿ ಚಪ್ಪಲಿ, ದೇವೇಗೌಡರ ಬಾಯಲ್ಲಿ ಕಾಳಸರ್ಪ ಇಟ್ಟಂತೆ ಚಿತ್ರಿಸಿ ಪ್ರತಿಭಟಿಸಿದರಲ್ಲ, ಬಿಜೆಪಿಯವರು? ಅವರಷ್ಟೇ ಅಸಹ್ಯಕರವಾಗಿ ಇವರೂ ಕೂಗಾಡಿ ಹೋಗಿದ್ದಾರೆ.

ಒಂದು ಪ್ರತಿಭಟನೆಯ ಸ್ವರೂಪ ಏನು ಎಂಬುದು ಅರ್ಥವಾಗುವುದಕ್ಕೆ ಇಷ್ಟು ವಿವರಣೆ ಸಾಕಲ್ಲವೇ ? ವಿಪರ್ಯಾಸವೆಂದರೆ, ಪ್ರತಿಭಟನೆಯ ಮುಖಂಡರು ಟೆಂಪೋಗಳಲ್ಲಿ ಕರೆತಂದಿದ್ದ ಅಮಾಯಕರನ್ನ, ಮುದುಕರನ್ನ, ಮುದುಕಿಯರನ್ನ ನಮ್ಮ ಹುಡುಗರೇ ಸಂದರ್ಶನ ಮಾಡಿದ್ದಾರೆ. ‘ದ್ಯಾವೇಗೌಡ್ರು ಮೀಟಿಂಗಿಗೆ ಅಂತ ಕರ್ಕಂಡು ಬಂದ್ರು. ದಿನಕ್ಕೆ 35ರೂಪಾಯಿ ಕೊಡ್ತಾರೆ’ಅಂತ ಸ್ಪಷ್ಟವಾಗಿ ಅವರು ಹೇಳಿದ್ದು ನನ್ನ ಕೆಮೆರಾದಲ್ಲಿ ದಾಖಲಾಗಿದೆ.

ಇದೆಲ್ಲದರಿಂದಾಗಿ ಯಾವುದೇ ಪ್ರಜ್ಞಾವಂತರಿಗೆ ಸಿಟ್ಟುಬರುವಂತೆ ನನ್ನ ಮಿತ್ರರೂ, ಪ್ರಾಜ್ಞರೂ ಆದ ಟಿ.ಎನ್.ಸೀತಾರಾಂ ಅವರಿಗೆ ಸಿಟ್ಟು ಬಂದು ಕುಮಾರಸ್ವಾಮಿಗೆ ಫೋನು ಮಾಡಿದ್ದಾರೆ. ‘ಪ್ರಜಾಪ್ರಭುತ್ವವಾದಿಯಾದ ನೀವು ಇದ್ಯಾತರ ಪ್ರತಿಭಟನೆ ಮಾಡಿಸುತ್ತಿದ್ದೀರಿ’ಅಂತ ಕೇಳಿದ್ದಕ್ಕೆ, ‘ಓ ಹೌದಾ ಸಾರ್? ನನಗೆ ವಿಷಯವೇ ಗೊತ್ತಿಲ್ಲ. ವಿಚಾರಿಸಿ ನೋಡ್ತೀನಿ. ಹಂಗೇನಾದ್ರೂ ನಡೀತಿದ್ರೆ, ನಾನು ನಿಲ್ಸೋಕೆ ಹೇಳ್ತೀನಿ ಬಿಡಿ ‘ಅಂದರಂತೆ ಕುಮಾರಸ್ವಾಮಿ. ಅವರು ಹಾಗಂದ ಮಾರನೇ ದಿನವೇ ಪ್ರತಿಭಟನೆಯ ಪೆರೇಡು ನಡೆದಿದೆ. ‘ಕುಮಾರಸ್ವಾಮಿ ಅಭಿಮಾನಿಗಳ ಸಂಘ’ಅಂತ ವಾಹನಗಳಿಗೆ ಬೋರ್ಡ್ ಕಟ್ಟಿಕೊಂಡು ಬಂದದ್ದಕ್ಕೆ ನಮ್ಮ ಬಳಿ ದಾಖಲೆಗಳೂ ಇವೆ.

ಇರಲಿ, ಪ್ರಜಾಪ್ರಭುತ್ವದಲ್ಲಿ ನಾವು ಪ್ರತಿಭಟನೆಯನ್ನೂ ಗೌರವಿಸಬೇಕು. ನನ್ನ ಸಿನಿಮಾ ಬಿಡುಗಡೆಯಾಗಿ, ಅದು ನೂರು ದಿನ ಓಡಿದರೆ, ನೂರು ದಿನದುದ್ದಕ್ಕೂ ಕುಮಾರಣ್ಣನ ಪ್ರೀತ್ಯರ್ಥ ಪ್ರತಿಭಟನೆಗಳು ನಡೆಯಲಿ. ಆದರೆ ಕುಮಾರಸ್ವಾಮಿಯವರಿಗೆ ಈ ಸಂದರ್ಭದಲ್ಲಿ ನಾನು ಒಂದು ಮಾತು ಹೇಳುವುದಿದೆ.

ಕರ್ನಾಟಕ ರಾಜ್ಯಕ್ಕೆ ಇಪ್ಪತ್ತು ತಿಂಗಳ ಕಾಲ ಸಮರ್ಥ ಆಡಳಿತ, ಸಂಯಮದ ನಾಯಕತ್ವ ನೀಡಿ, ಇಪ್ಪತ್ತೇ ನಿಮಿಷದಲ್ಲಿ ಅದೆಲ್ಲವನ್ನೂ ತಿಪ್ಪೆಗೆ ಸುರಿದಂತೆ ಮಾಡಿಕೊಂಡ ನತದೃಷ್ಟ ಮತ್ತು ಶತಮೂರ್ಖ ಆತ. ಆಗಿರುವ ಅನಾಹುತವನ್ನು ಸರಿಪಡಿಸಿಕೊಳ್ಳಲು ತಂದೆಮಕ್ಕಳಿಗೆ ಕೆಲವೇ ತಿಂಗಳುಗಳ ಗಡುವಿದೆ. ಎಲ್ಲ ಬಿಟ್ಟು ಭಂಗಿ ನೆಟ್ಟ ಎಂಬಂತೆ, ಅಭಿವ್ಯಕ್ತಿ ಸ್ವಾತಂತ್ರ್ಯದ ತಂಟೆಗೆ ಹೋಗಿ ಮತ್ತಷ್ಟು ಯಡವಟ್ಟು ಮಾಡಿಕೊಳ್ಳದಿರಲಿ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: