ಶಿವ ಶಿವಾ ಇದೆಲ್ಲ ಏನು ದೇವಾ? – Basavanna-Dr.Banjagere Jayaprakash-Ravi Belegere

ಬಸವ ಮಾದಿಗನೇ? ಬ್ರಾಹ್ಮಣನೇ? ಬಂಜಗೆರೆ ಪುಸ್ತಕದಲ್ಲಿ ಇರೋದಾದರೂ ಏನು? ಜಾತಿ ಬೇಡವೆಂದ ಬಸವನಿಗೆ, ನಾವೀಗ ಜಾತಿ ಅಂಟಿಸುವುದು ತಪ್ಪಲ್ಲವೇ?

Jagajyoti Basavannaಬಸವ ಬ್ರಾಹ್ಮಣನಲ್ಲ. ಆತ ಮಾದಿಗನಿದ್ದಿರಬೇಕು ಎಂಬ ಅನುಮಾನವನ್ನಿಟ್ಟುಕೊಂಡು, ಕ್ರಮೇಣ ಆ ಅನುಮಾನವನ್ನು ಅನುಮಾನಿತ ಸತ್ಯವಿರಬೇಕು ಅಂತಭಾವಿಸಿ, ಒಂದು ಡಾಕ್ಟರಲ್ ಥೀಸಿಸ್ ಗೆ ಮುನ್ನುಡಿ ಬರೆಯಬಹುದಾದ ಶೈಲಿಯಲ್ಲಿ ಪುಸ್ತಕವನ್ನು ಬರೆದು ಅದಕ್ಕೆ ಅನುದೇವಾ ಹೊರಗಣವನು ಅಂತ ಹೆಸರಿಟ್ಟಿದ್ದಾರೆ ಡಾ.ಬಂಜಗೆರೆ ಜಯಪ್ರಕಾಶ್.

ಜಾತಿಯಿಂದ ಬಸವ ಬ್ರಾಹ್ಮಣನಾಗಿದ್ದುದರಿಂದಲೇ ಲಿಂಗಾಯತ ಧರ್ಮದಂತಹ ಶ್ರೇಷ್ಠ ಧರ್ಮವನ್ನು ಕಲ್ಪಿಸಿಕೊಂಡ. ಬ್ರಾಹ್ಮಣನಾಗಿದ್ದುದರಿಂದಲೇ ಆತನಲ್ಲಿ ಅಂಥ ಉದಾತ್ತ ಭಾವಗಳಿದ್ದವು. ಬ್ರಾಹ್ಮಣನಾಗಿದುದರಿಂದಲೇ ಆತ ಕ್ರಾಂತಿ ಪುರುಷ. ಹಾಗಂತ ಎಲ್ಲರೂ ಭಾವಿಸಿಕೊಂಡಿದ್ದಾರೆ! ಆದರೆ ಬಸವ ಮೂಲತಃ ಮಾದಿಗನಾಗಿದ್ದ ಎಂಬುದನ್ನು ಸಾಬೀತು ಪಡಿಸುವ ಮುಖಾಂತರ ನಾನು ದಲಿತರಲ್ಲಿ ಸಂತಸ, ಆತ್ಮ ವಿಶ್ವಾಸ, ಧೈರ್ಯ ಉಂಟು ಮಾಡಿ, ಬ್ರಾಹ್ಮಣ ಶ್ರೇಷ್ಠತೆಯ ವಿರುದ್ಧ ವಿಗ್ರಹ ಭಂಜಕ ಹೋರಾಟ ಮಾಡುತ್ತಿದ್ದೇನೆ. ಬಸವ ಮಾದಿಗನಾಗಿರಬಹುದು ಎಂಬ ವಾದಕ್ಕೆ ಚಾಲನೆ ಕೊಡುತ್ತಿದ್ದೇನೆ ಅಂದುಕೊಂಡೇ ಅವರು ಬರೆಯಲು ಕುಳಿತಿದ್ದಾರೆ.

ಮಾದಾರನ ಮಗ ನಾನಯ್ಯ

ಡಾ.ಬಂಜಗೆರೆ ಜಯಪ್ರಕಾಶ್ ತುಂಬ ಬೇಜವಾಬ್ದಾರಿಯಿಂದ ಈ ಪುಸ್ತಕ ಬರೆದಿದ್ದಾರೆ ಅಂತ ಒಂದು ವರ್ಗ ಹೇಳುತ್ತಿದೆ. ಆ ಮಾತಿನಲ್ಲಿ ಅರ್ಥವಿದೆ. ಬಸವಣ್ಣನವರ ವಚನಗಳನ್ನು ಎಂಟು ನೂರು ವರ್ಷಗಳಿಂದ ಓದಿದ ಕೋಟ್ಯಂತರ ಜನರ ಪೈಕಿ ಯಾರಿಗೂ ಬಾರದ ಅನುಮಾನಗಳು, ಬಂಜಗೆರೆಯವರಿಗೆ ಬಂದಿರುವುದು ನಿಜಕ್ಕೂ ತಮಾಷೆಯ ಸಂಗತಿ. ಅವರ ಅನುಮಾನಗಳ ಪ್ರಕಾರ ಬಸವಣ್ಣ ಮಾದಿಗರವನು. ಆನಂತರ ಕುಲೀನರ ಮನೆಯಲ್ಲಿ ಬೆಳೆದಿರಬಹುದಾದವನು. ಮುಂದೆ ಪವಾಡ ಮೆರೆದು ಬಿಜ್ಜಳನ ಭಂಡಾರಿಯಾದವನು.

ಬಂಜಗೆರೆ ಅವರ ಅನುಮಾನಿತ ಸತ್ಯಗಳು ಇಲ್ಲಿಗೇ ಮುಗಿಯುವುದಿಲ್ಲ. ಇದೆಲ್ಲವನ್ನೂ ಅವರು ಬಂಜಗೆರೆ ಜಯಪ್ರಕಾಶ್ ಅವರು ಬಸವಣ್ಣನವರ ವಚನಗಳಲ್ಲಿ ಸಿಕ್ಕುವ ಸಾಲುಗಳಿಂದ ಸಪೋರ್ಟ್ ಪಡೆದು, ಸಾಬೀತು ಪಡಿಸಲು ನೋಡುತ್ತಾರೆ.

ಬಳ ಬಳಿಯಲು ಬಂದ ಮಾದಾರನ ಮಗ ನಾನಯ್ಯ.. ಕಳೆದ ಹೊಲೆಯನೆಮ್ಮಯ್ಯ.. ಜಾತಿ ಸೂತಕ ಮಾದಾರನ ಮಗ ನಾನಯ್ಯ.. ಪನ್ನಗ ಭೂಷಣ ಕೂಡಲ ಸಂಗಯ್ಯಾ.. ಚನ್ನಯ್ಯನ ನೆನ್ನ ಮುತ್ತಯ್ಯ ನಜ್ಜನಪ್ಪಯ್ಯಾ ಅಂತ ಬರೆದು ಬಸವೇಶ್ವರ ಒದಗಿಸಿರಬಹುದಾದ ಕ್ಯಾಸ್ಟ್ ಸರ್ಟಿಫಿಕೀಟು ಎಂಬಂತೆ ಬಂಜಗೆರೆ ಭಾವಿಸುತ್ತಾರೆ.

ಅನುಮಾನಿತ ಸತ್ಯ!

ಅಪ್ಪನು ದೋಹರ ಕಕ್ಕಯ್ಯನಾಗಿ, ಮುತ್ತಯ್ಯ ಚನ್ನಯ್ಯನಾದರೆ, ಆನು ಬದುಕೆನೆ ಎಂಬುದನ್ನೇ ಹಿಡುದುಕೊಂಡು ಬಸವೇಶ್ವರ ಜಾತಿಯಿಂದ ಮಾದಿಗನಿರಬಹುದು, ಜನ್ಮತಃ ಪರಿಶಿಷ್ಟನಿರಬಹುದು, ಕರಸಂಜಾತನಿರಬಹುದು ಅಂತ ವಾದಿಸುವುದು ಡಾ.ಬಂಜಗೆರೆ ಜಯಪ್ರಕಾಶ್ ಅವರ ಬಾಲಿಶತನ.

ನಾಲ್ಕು ಸಾಲು ವಚನಗಳು, ಒಂದು ಅಸ್ಪಷ್ಟ ಶಾಸನ ಮತ್ತು ಇಬ್ಬರು ಕನ್ನಡ ವಿದ್ವಾಂಸರಾದ ಡಾ.ಕಲಬುರ್ಗಿ ಮತ್ತು ಡಾ.ಚಿದಾನಂದಮೂರ್ತಿ ಅವರು ಬರೆದದಷ್ಟನ್ನೇ ಎದುರಿಗಿಟ್ಟುಕೊಂಡು ಬಸವೇಶ್ವರ ಮಾದಿಗರವನು ಅಂತ ಘೋಷಿಸಲು ಹೊರಡುತ್ತಾರೆ. ಆ ಘೋಷಣೆಯಾದರೂ ಸ್ಪಷ್ಟವಾಗಿದೆಯೇ ಆಂದರೆ, ಅದೂ ಇಲ್ಲ. ಮಾದಿಗನಿರಬಹುದೇನೋ? ಈ ಬಗ್ಗೆ ಸಂಶೋಧನೆ ನಡೆಯಬೇಕಿದೆ. ಪ್ರಾಜ್ಞರು ಬೆಳಕು ಚೆಲ್ಲ ಬೇಕಿದೆ ಎಂದು ಮುಗುಮ್ಮಾಗಿ ಸೂಚನೆ ಕೊಡುತ್ತಾರೆ. ಬರೆಯುತ್ತ ಬರೆಯುತ್ತ, ಬಸವಣ್ಣನನ್ನು ಮಾದಿಗನೆಂದು ಸಾಬೀತು ಮಾಡುವ ಕೆಲಸ ಮೈಮೇಲೆ ಬರುತ್ತಿದೆ ಅನ್ನಿಸಿದಾಗ ನನ್ನದು ಅನುಮಾನಿತ ಸತ್ಯ ಅನ್ನುತ್ತಾರೆ!

ವೈಜ್ಞಾನಿಕ ವಾದ?

ಬಂಜಗೆರೆ ಅವರ ಪ್ರಕಾರ ಬಸವಣ್ಣ ತನ್ನ ಜಾತಿಯನ್ನು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಐವತ್ತು ವಚನಗಳಲ್ಲಿ ಸೂಚಿಸಿದ್ದಾನೆ. ಈ ವಚನಗಳಲ್ಲಿ ಬಸವಣ್ಣ, ತಾನು ಮಾದಾರ ಚನ್ನಯ್ಯನ ವಂಶದವನು ಎಂದು ಹೇಳಿಕೊಳ್ಳುತ್ತಾನೆ. ಬೇರೆ ವಚನಕಾರರಿಗಿಂತ ಹೆಚ್ಚಿನ ಸಲ ತನ್ನನ್ನು ತಾನು
ತೊತ್ತಿನ ಮಗ, ಡೋಹರ ಕಕ್ಕಯ್ಯನ ಮಗ ಅಂತ ಹೇಳಿಕೊಂಡಿದ್ದರಿಂದಲೇ ಬಸವಣ್ಣ ಮಾದಿಗನಿರಬಹುದು ಎಂಬುದು ಬಂಜಗೆರೆ ಅವರ ವೈಜ್ಞಾನಿಕ ವಾದ! ಆತ ಬ್ರಾಹ್ಮಣನಾಗಿದ್ದರೇ ಯಾಕೆ ಹೀಗೆ ಮಾತಿಗೊಮ್ಮೆ ತನ್ನನ್ನು ಮಾದಿಗ ಮಾದಿಗ ಅಂತ ಹೇಳಿಕೊಳ್ಳುತ್ತಿದ್ದ ಅಂತ ಕೇಳುತ್ತಾರೆ ಬಂಜಗೆರೆ.

ಯಾವ ಬ್ರಾಹ್ಮಣ?

ಬಸವಣ್ಣ ಬ್ರಾಹ್ಮಣ. ಆತ ಮಾದಿಗನಾದಿದ್ದನೆಂಬುದಕ್ಕೆ ಚಾರಿತ್ರಿಕ ಆಧಾರವಿಲ್ಲ. ಡಾ.ಬಂಜಗೆರೆ ಆಶಯ ಒಳ್ಳೆಯದೇ ಇರಬಹುದು. ಆದರೆ ಆಶಯ ಇಲ್ಲಿ ಮುಖ್ಯವಲ್ಲ. ಸಂಶೋಧನೆಯಲ್ಲಿ ಚರಿತ್ರೆಯನ್ನು ಅಲಕ್ಷ್ಯ ಮಾಡುವಂತಿಲ್ಲ. ಎಂಟು ನೂರು ವರ್ಷಗಳಲ್ಲಿ ಸಾಹಿತ್ಯ ಮತ್ತು ಇತಿಹಾಸದಲ್ಲಿ ಈ ಬಗ್ಗೆ ಎಲ್ಲೂ ಭಿನ್ನಾಭಿಪ್ರಾಯವಿಲ್ಲ. ವಕೀಲರು ತಮ್ಮನೇರಕ್ಕೆ ವಾದ ಮೂಡುವಂತೆ, ಬಂಜಗೆರೆಯವರೂ ಮಾಡಬಹುದು. ಆದರೆ ಆಧಾರ ಬೇಕಲ್ಲ?

ಬಸವಣ್ಣನನ್ನು ಜನರಲ್ ಆಗಿ ಎಲ್ಲರೂ ಬ್ರಾಹ್ಮಣ ಅಂದು ಬಿಡುತ್ತಾರೆ. ಆದರೆ ಆತ ಯಾವ ಬ್ರಾಹ್ಮಣ ಅನ್ನೋದು ಸೂಕ್ಷ್ಮ. ಶೈವ ಬ್ರಾಹ್ಮಣ ಅಂದ ಮಾತ್ರಕ್ಕೆ ಆತ ಶಂಕರ ಅನುಯಾಯಿಯಾದ ವೈದಿಕ ಶೈವ(ಸ್ಮಾರ್ತ) ಬ್ರಾಹ್ಮಣನಲ್ಲ. ಬಸವಣ್ಣ ಆಗಮಿಕ ಬ್ರಾಹ್ಮಣನಾಗಿದ್ದ. ಆಗಮಿಕ ಬ್ರಾಹ್ಮಣ್ಯವನ್ನು ಬಿಟ್ಟು ಕ್ರಾಂತಿ ಮಾಡಿ, ಆಗಮಿಕ ಬ್ರಾಹ್ಮಣರಿಗೆಲ್ಲ ನಿಬ್ಬೆರಗಾಗುವಂತೆ ವೀರಶೈವ ಸಮಾಜವನ್ನು ಬೆಳೆಸಿದ.

ಹಾಗಾದರೆ ಆವತ್ತಿನ ಇತರೆ ಆಗಮಿಕ ಬ್ರಾಹ್ಮಣರೆಲ್ಲ ಏನಾದರು ಅಂತ ನೀವು ಕೇಳಬಹುದು. ಆವತ್ತಿನ ಆಗಮಿಕ ಶೈವ ಬ್ರಾಹ್ಮಣರೇ ಇವತ್ತು ಉತ್ತರ ಕರ್ನಾಟಕದಲ್ಲಿ ಜಂಗಮರು ಅಂತ ಕರೆಸಿಕೊಳ್ಳುತ್ತಿರುವ ಅಯ್ಯನವರು! ಇವತ್ತಿಗೂ ಉತ್ತರ ಕರ್ನಾಟಕದಲ್ಲಿ ಜುಟ್ಟಿನ ಅಯ್ಯಗಳಿದ್ದಾರೆ.

ಯಾವ ದಿಕ್ಕಿನಿಂದ ನೋಡಿದರೂ ಡಾ.ಬಂಜಗೆರೆ ಜಯಪ್ರಕಾಶ್ ಅವರ ವಾದಕ್ಕೆ ಪುಷ್ಟಿ, ಪುಸ್ತಕ ಬರೆದುದಕ್ಕೆ ಸಮರ್ಥನೆ ಸಿಗುವುದಿಲ್ಲ. ಹಾಗಾದರೆ, ಅವರು ಪ್ರಚಾರಕ್ಕಾಗಿ ಅನುದೇವಾ ಹೊರಗಣವನು ಪುಸ್ತಕ ಬರೆದರಾ? ನನಗೆ ಹಾಗನ್ನಿಸುವುದಿಲ್ಲ. ಬಂಜಗೆರೆ ಆ ತೆರನಾದ ಪ್ರಚಾರಪ್ರಿಯರಲ್ಲ. ಅವರದು ಸಂಕೋಚದ ಸ್ವಭಾವ. ಒಳ ಸಮಸ್ಯೆ ಇರುವುದು ಅವರ ಮಾರ್ಕ್ಸಿಸ್ಟ್ ಮತ್ತು ಲೆನಿನಿಸ್ಟ್ ಅವಗಾಹನೆಯಲ್ಲಿ.

ಅವರ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಖಂಡ್ರೆ ಅಥವಾ ಮಾತೆ ಮಹಾದೇವಿ ಥರದವರು ಅಬ್ಬರಿಸಿದರೆ ಅದರಲ್ಲಿ ಆಶ್ಚರ್ಯ ಮತ್ತು ಹೆಗ್ಗಳಿಕೆ ಎರಡೂ ಇಲ್ಲ. ಅವರಿಗೆ ಪ್ರತಿಭಟನೆಯೂ ಅನ್ನವೇ. ಆದರೆ ಪಾಪು ತರಹದ ಹಿರಿಯರು ಆವೇಶಕ್ಕೆ ಒಳಗಾಗಬಾರದು. ಬಂಜಗೆರೆ ಅರ್ಥವಾಗದಿದ್ದರೆ ಅಡ್ಡಿಯಿಲ್ಲ : ಅವರಿಗೆ ಬಸವ ಅರ್ಥವಾಗಬೇಕಿತ್ತು.

ಇನ್ನು ಕಡೆಯದಾಗಿ ವಾಕ್ ಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯ ಇತ್ಯಾದಿಗಳ ಸಂಗತಿಗೆ ಬಂದರೆ : ಪಿ.ಎನ್. ಓಕ್ ಎಂಬ ಸ್ವಘೋಷಿತ ವಿದ್ವಾಂಸನೊಬ್ಬ ತಾಜಮಹಲನ್ನು ಶೈವಮಂದಿರ ಅಂತ ಅನೇಕ ದಶಕಗಳಿಂದ ಬಾಯಿಬಡಿದುಕೊಳ್ಳುತ್ತಲೇ ಇದ್ದಾನೆ. ಆತನ ಮಾತಿಗೆ ಯಾವ ಕಿಮ್ಮತ್ತು ಸಿಕ್ಕಿದೆ?

ಬಸವ ಮಾದಿಗ ಜಾತಿಗೆ ಸೇರಿದವನೆಂಬ ಮಾತಿಗೆ ಸಿಗುವ ಕಿಮ್ಮತ್ತೂ ಅಷ್ಟೇ.

(ಇದು ರವಿ ಬೆಳಗೆರೆ ಲೇಖನದ ಆಯ್ದ ಭಾಗ)

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: