ಸಂಗೀತ ಸರಸ್ವತಿ ಒಲಿಸಿಕೊಳ್ಳಲು ಅವರೇನು ಮಾಡಿದರು? – Nadagrama : Abode of Classical Indian Music

ಸಂಗೀತನಿಧಿ ಪಂಡಿತ ಗಣಪತಿ ಭಟ್ ಅವರ ‘ನಾದಗ್ರಾಮ’ದ ಯಶಸ್ಸು ಮತ್ತು ಭೈರುಂಜಿಯಂತಹ ಹಳ್ಳಿಯಲ್ಲಿ ಟಿಕೆಟು ಕೊಂಡು ಶಾಸ್ರ್ತೀಯ ಸಂಗೀತ ಆಲಿಸುತ್ತಾರೆಂಬ ವೃತ್ತಾಂತ ವಿಸ್ಮಯ ಮೂಡಿಸುವಂಥಹುದು.

Pundit Ganapati Bhat of Naadagramaಯಲ್ಲಾಪುರ ತಾಲೂಕಿನಲ್ಲಿ ಹರಿಯುವ ಎರಡು ನದಿಗಳೆಂದರೆ, ಬೇಡತಿ ಮತ್ತು ತುಡುಗುಣಿ. ಇಲ್ಲಿಯ ಜಾನಪದ-ಕೃಷಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಎರಡು ಪ್ರಮುಖ ಹೆಸರುಗಳೆಂದರೆ ಹೆಗಡೆ ಮತ್ತು ಭಟ್. ಇವೆರಡರ ಸಂಗಮ ಪಂಡಿತ ಗಣಪತಿ ಭಟ್.

ಗಣಪತಿ ಜನನ ಹೆಗಡೆ ಮನೆಯಲ್ಲಾದರೂ, ಗಂಡು ಸಂತಾನವಿಲ್ಲದ ಹಾಸಣಗಿಯ ಅಜ್ಜ(ಮಾತಮಹ)ನಿಗೆ ಇವರು ಆರು ವರ್ಷದವರಿರುವಾಗ ದತ್ತುಹೋಗಿ ಗಣಪತಿ ಭಟ್ಟರಾದರು. ಅವರ ಅಜ್ಜನ ಮನೆತನವು ಕೃಷಿ ಅವಲಂಬಿಸಿದ ವೈದಿಕ ಮನೆತನ. ಮಗುವನ್ನು ಒಂದು ವೇದಶಾಲೆಗೆ ಸೇರಿಸಿ ಪುರೋಹಿತನನ್ನಾಗಿಸುವುದು ಮನೆಯವರ ಇಚ್ಛೆಯಾಗಿದ್ದರೆ, ಇವನನ್ನು ಸಂಗೀತ ಲೋಕದ ಪುರೋಹಿತ ಮಾಡುವುದೆ ದೈವೇಚ್ಛೆಯಾಗಿತ್ತು.

ಸಮೀಪದ ಮಂಚಿಕೇರಿ ಗ್ರಾಮದಲ್ಲಿ ಎಸ್.ಎಸ್.ಸಿ. ವರೆಗೆ ಓದಿದರು ಗಣಪತಿ ಅವರಿಗೆ ನಾಟಕದಲ್ಲಿ ಅಭಿನಯಿಸುವುದರಲ್ಲಿ ವಿಶೇಷ ಆಸಕ್ತಿ. ಚೆನ್ನಾಗಿ ಪದಗಳನ್ನು ಹಾಡುತ್ತಿದ್ದರು.ತಂದೆ ವೆಂಕಟರಮಣ ಹೆಗೆಡೆಯವರು ಯಕ್ಷಗಾನದ ಪದಗಳ ಹಾಡುಗಾರ. ತಾಯಿ ಮಹಾದೇವಿ ಹಳ್ಳಿಯ ಹಾಡುಗಳ ಕಣಜ. ಇವರ ಪ್ರಭಾವ ಎಳಮೆಯಲ್ಲಿ ಕುಮಾರ ಗಣಪತಿಯ ಮೇಲಾಯಿತು. ಸಮೀಪದಲ್ಲಿರುವ ಶಿರಸಿಯ ಕಾಲೇಜು ಸೇರದೆ ಧಾರವಾಡದ ಕರ್ನಾಟಕ ಕಾಲೇಜು ಸೇರಿದರು. ಇದಕ್ಕೆ ಇವರ ಪ್ರಥಮ ಆಕರ್ಷಣೆ ಸಂಗೀತವಾಗಿತ್ತು. ಬಿ.ಎ. ಇಂಗ್ಲೀಷು ಸಾಹಿತ್ಯದ ಜೊತೆಗೆ ಸಿತಾರ ಅಧ್ಯಯನದ ವಿಷಯವಾಗಿತ್ತು.

ನಿತ್ಯ ಕಾಲೇಜಿಗೆ ಹೋಗುವ ದಾರಿಯಲ್ಲಿ ಪಂ. ಬಸವರಾಜ ರಾಜಗುರು ಅವರ ಮನೆಯಿತ್ತು. ಅಲ್ಲಿಂದ ಹೊರಹೊಮ್ಮುವ ಸಂಗೀತ ಇವರನ್ನು ಮಂತ್ರಮುಗ್ಧಗೊಳಿಸಿತ್ತು. ಸಂಗೀತದ ಮೇಲಿನ ಸ್ವಾಭಾವಿಕ ಅನುರಕ್ತಿಯಿಂದಾಗಿ, ಸಿತಾರ್ ಬದಿಗಿಟ್ಟರು, ಪಂಡಿತ ರಾಜಗುರುಗಳ ಶಿಷ್ಯತ್ವ ವಹಿಸಿ, ಅವರಲ್ಲಿ ಗಂಡ ಕಟ್ಟಿಸಿಕೊಂಡು ಶಾಸ್ತ್ರೀಯ ಸಂಗೀತದ ಅಭ್ಯಾಸ ಇಪ್ಪತ್ತು ವರ್ಷ ನೆರವೇರಿತು.

ಸಂಗೀತ ಕಲಿಯಲು ಮೂರು ಸಂಗತಿ ಮಹತ್ವದವು ಎಂದು ಗಣಪತಿಯವರು ಹೇಳುತ್ತಾರೆ. ಒಂದು ಪ್ರತಿಭೆ, ಎರಡು ಯೋಗ್ಯ ಗುರುಗಳ ಮಾರ್ಗದರ್ಶನ, ಮೂರು ಅದೃಷ್ಟ. ಇವರಿಗೆ ಜನ್ಮಜಾತ ಪ್ರತಿಭೆ ಇತ್ತು, ಯೋಗ್ಯ ಗುರುಗಳೂ ದೊರೆತರು, ಇವರ ದೈವ ಇವರನ್ನು ಇದಕ್ಕಾಗಿಯೇ ಧಾರವಾಡದತ್ತ ಎಳೆದು ತಂದಿತ್ತು. ಒಂದು ವರ್ಷಕಾಲ ಗುರುಗಳು ಇವರಿಗೆ ಅಲಂಕಾರ ಸ್ವರಗಳನ್ನು ಹೇಳಿಕೊಟ್ಟರು. ನಂತರ ಎರಡು ವರ್ಷ ಕೇವಲ ಎರಡು ರಾಗ ಕಲಿಸಿದರಂತೆ. ಸಾಯಂಕಾಲದ ಪಾಠದಲ್ಲಿ ‘ಯಮನ’ ರಾಗ ಮತ್ತೆ ಮುಂಜಾನೆಯ ಪಾಠದಲ್ಲಿ ‘ಭೈರವ’. ಗುರುಗಳು ಶಿಷ್ಯನನ್ನು ಚೆನ್ನಾಗಿ ದುಡಿಸಿದರು. ‘ದುಡಿಯುವವನೇ ಪಡೆಯುತ್ತಾನೆ’ ಎಂದು ರಾಜಗುರುಗಳು ಸದಾ ಹೇಳುತ್ತಿದ್ದರಂತೆ. ದಿನಾಲೂ ತಪ್ಪದೆ ದೇವಸ್ಥಾನಕ್ಕೆ ಹೋಗುವ ಭಕ್ತನಂತೆ ಇವರು ಎರಡೂ ಹೊತ್ತು ಗುರುಗಳ ಮನೆಗೆ ಹೋಗುತ್ತಿದ್ದರು.

1979 ರಲ್ಲಿ ಧಾರವಾಡದ ‘ಪಂ. ಮಲ್ಲಿಕಾರ್ಜುನ ಮನ್ಸೂರ್ ಕಲಾಭವನ’ದಲ್ಲಿ ಉಸ್ತಾದ್ ರೆಹಮತ್‌ಖಾನ ಸಾಹೇಬರ ಪುಣ್ಯತಿಥಿ ಸಂಗೀತ ಸಮಾರಂಭ. ಆಗ ಗಣಪತಿ ಭಟ್ಟರು ತಮ್ಮ ಗುರುಗಳ ಬಳಿಯಲ್ಲಿ 12 ವರ್ಷ ಸಂಗೀತ ತರಬೇತಿ ಪಡೆದಿದ್ದರು. ಇವರಿಗೆ ಹಾಡಲು ಅವಕಾಶ ದೊರೆಯಿತು. ಇದಕ್ಕೆ ಕಾರಣರಾದವರು ಸಂಗೀತ ವಿಮರ್ಶಕ ಪ್ರೊ. ಸದಾನಂದ ಕನವಳ್ಳಿ ಮತ್ತು ಸಂಗೀತಜ್ಞ ಬಾಲೇಖಾನ. ದೊಡ್ಡ ಸಮಾರಂಭದಲ್ಲಿ ಹಾಡುವ ಧೈರ್ಯ, ವಿಶ್ವಾಸ ಇವರಲ್ಲಿ ಇರಲಿಲ್ಲ. ಒಂದೆಡೆ ಮಿತ್ರರ, ಹಿತೈಷಿಗಳ ಒತ್ತಾಯವಿತ್ತು, ಇನ್ನೊಂದೆಡೆ ಗುರುಗಳ ಅನುಗ್ರಹ ಹಾಗೂ ಶ್ರೀರಕ್ಷೆ ಇತ್ತು.

‘ಚೊಚ್ಚಿಲು ಸಂಗೀತ ಕಚೇರಿ’ಯಲ್ಲೇ ಭೇಷ್‌ ಎನಿಸಿಕೊಂಡರು ಗಣಪತಿ. ಇವರ ಯಶಸ್ಸು ಸಹಿಸದ ಕೆಲವರು ಸಂಗೀತದಿಂದ ಹೊಟ್ಟೆ ತುಂಬುತ್ತದೆಯೇ? ಎಂದು ಕೇಳಿದ್ದರಂತೆ. ಮುಂದೆ ಕಾರ್ಯಕ್ರಮಗಳಲ್ಲಿ ಇವರಿಗೆ ಅವಕಾಶ ದೊರೆಯಹತ್ತಿತು. 1985ರಲ್ಲಿ ನಡೆದ ಒಂದು ಸಂಗೀತ ಸಭೆಯಲ್ಲಿ ಇವರಿಗೆ ಬಹಳ ಪ್ರಸಿದ್ಧಿ ಲಭಿಸಿತು. ಮರಾಠಿ ಪತ್ರಿಕೆಯ ಮುಖಪುಟದಲ್ಲಿ, ‘ಗಣಪತಿ ಭಟ್ಟರು ಶ್ರೋತೃಗಳನ್ನು ಗೆದ್ದರು’ ಎಂಬ ಶಿರೋನಾಮೆಯಲ್ಲಿ ಇವರನ್ನು ಮೆಚ್ಚಿ ವರದಿ ಪ್ರಕಟವಾದವು. ಅವರಿಗೆ ಸಾಮಾಜಿಕ ಮನ್ನಣೆ ದೊರೆತಿತ್ತು. ಭಾರತದಲ್ಲಿ ಪ್ರಮುಖ ಸಂಗೀತ ಕಚೇರಿಗಳಲ್ಲಿ ಇವರಿಗೆ ಅವಕಾಶ ದೊರೆಯತೊಡಗಿತು. 1992 ರಲ್ಲಿ, 42ರ ಹರಯದಲ್ಲಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು.

1991ರಲ್ಲಿ ‘ಪಂ. ಬಸವರಾಜ ರಾಜಗುರು ಸಂಗೀತ ಪ್ರತಿಷ್ಠಾನ’ವನ್ನು ಆರಂಭಿಸಿದರು. 1993ರಲ್ಲಿ ಗಣಪತಿ ಭಟ್‌ ಅವರು ನಡೆಸಿದ ‘ಸ್ಮೃತಿ ಸಂಗೀತ ಸಮ್ಮೇಲನ’ವು ಇವರ ಜೀವನದಲ್ಲಿಯೇ ಅವಿಸ್ಮರಣೀಯವಾಗಿತ್ತು. ಡಾ| ಶಿವರಾಮ ಕಾರಂತರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. 15000 ಶ್ರೋತೃಗಳ ಸಭೆಯಲ್ಲಿ ಕಾರಂತರು ಮಾತಾಡಿದ್ದರು. ಇದೇ ಸಭೆಯಲ್ಲಿ ಪಂ. ಭೀಮಸೇನ ಜೋಶಿಯವರನ್ನು ಸನ್ಮಾನಿಸಲಾಯಿತು. ಪಂಡಿತ ಭಿಮಸೇನ ಜೋಶಿಯವರು ತಮ್ಮ ಕಂಠಶ್ರೀಯಿಂದ ಶ್ರೋತೃಗಳನ್ನು ತಣಿಸಿದರು. ಅಂದಿನಿಂದ ಇಂದಿನ ವರೆಗೆ ಪ್ರತಿ ವರ್ಷ ‘ಪಂ. ಬಸವರಾಜ ರಾಜಗುರು ಪರ್ತಿಷ್ಠಾನ’ದ ವತಿಯಿಂದ ‘ಸ್ಮೃತಿ ಸಂಗೀತ ಸಮ್ಮೇಲನ’ ಆಯೋಜಿಸಲಾಗುತ್ತಿದೆ. 1994ರಲ್ಲಿ ಪಂ. ಜಿತೇಂದ್ರ ಅಭಿಷೇಕಿ, 1996ರಲ್ಲಿ ಪಂ. ಸಿ.ಆರ್.ವ್ಯಾಸ ಅವರ ಸಂಗೀತ ಕಚೇರಿಗಳು ಆಕರ್ಷಣೆಯಾಗಿದ್ದವು.

ಆ ವೇದಿಕೆಯಲ್ಲಿ ಹಾಡಿದ ಪ್ರತಿಭಾವಂತ ಕಲಾವಿದರಲ್ಲಿ ಹುಬ್ಬಳ್ಳಿಯ ಕೃಷ್ಣಾ ಹಾನಗಲ್; ಧಾರವಾಡದ ಪಂ. ಮಾಧವ ಗುಡಿ, ಉಸ್ತಾದ ಬಲೇಖಾನ್(ಸಿತಾರ್), ರಘುನಾಥ ನಾಕೋಡ, ಪಂ. ವಸಂತಕುಮಾರ, ಶ್ರೀಪಾದ ಹೆಗಡೆ, ಬಿ.ಎಸ್. ಮಠದ ಹಾಗೂ ಅಕ್ಕಮಹಾದೇವಿ, ಜಯತೀರ್ಥ ಮೇವುಂಡಿ, ಕುಮಾರದಾಸ, ಕುಮಾರ ಮರಡೂರು; ಬೆಳಗಾವಿಯ ಪಂ. ಅನಂತ ತೇರದಾಳ; ಬೆಂಗಳೂರಿನ ಮದನಮೋಹನ, ಸಂಗೀತಾ ಕಟ್ಟಿ(ಕುಲಕರ್ಣಿ), ಪಂ. ಪರಮೇಶ್ವರ ಹೆಗಡೆ, ಪ್ರವೀಣ ಗೋಡಖಿಂಡಿ(ಕೊಳಲು); ಮುಂಬೈಯ ಶಿವಾನಂದ ಪಾಟೀಲ, ಸಂಜೀವ ಚಿಮ್ಮಲಗಿ, ಪ್ರಭಾಕರ ಕಾರೇಕರ, ಶುಭಾ ಪರಾಡಕರ; ಪುಣೆಯಿಂದ ವಿಜಯಾ ಕೋಪಾರಕರ, ಮೂಕೇಶ ಜಾಧವ, ಶೌನಕ್ ಅಭಿಷೇಕಿ, ಪೂರ್ಣಿಮಾ ಕುಲಕರ್ಣಿ, ಶ್ರೀನಿವಾಸ ಜೋಶಿ, ಅರವಿಂದ ಥತ್ತೆ, ಸುಹಾಸ ವ್ಯಾಸ, ಅರ್ಚನಾ ಕಾನ್ಹೇರ್ ಮತ್ತು ವಿಶ್ವನಾಥ ಕಾನ್ಹೇರ್, ಶ್ರೀಕಾಂತ ಕಾಶೀಕರ, ಉಸ್ತಾದ ಉಸ್ಮಾನ ಖಾನ್(ಸಿತಾರ); ಗೋವಾದಿಂದ ಶಶಾಂಖ ಮುಖ್ತೇದಾರ, ರೆಹಮತ್ ಖಾನ್(ಸಿತಾರ); ದೇವಾಸದಿಂದ ಕಲಾಪನಿ ಕೋಮಕಾಲಿ ಮುಂತಾದ ಕಲಾವಿದರು ಇಲ್ಲಿಗೆ ಬಂದು ಭಾಗವಹಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆ ಯಕ್ಷಗಾನಕ್ಕೆ ಪ್ರಸಿದ್ಧ. ‘ಸಭಾಹಿತ ತಿಟ್ಟು’ ಪ್ರಕಾರ ದಕ್ಷಿಣಾದಿ ಸಂಗೀತ ಅಳವಡಿಸುತ್ತದೆ. ಉತ್ತರಾದಿ ಸಂಗೀತದ ಗಾಳಿ 20ನೆಯ ಶತಮಾನದಲ್ಲಿ ಇಲ್ಲಿ ಬೀಸಿತು. ಹೊನ್ನಾವರದ ಜವಳೆಕೆರೆ ಶಾಸ್ತ್ರಿ ಗೋಕರ್ಣದ ಗಿರಿಯನ್ ಗುಂಪಿ ಇವರು ಪದ ಹೇಳುವವರಾಗಿದ್ದರು. ನಂತರ ದಿ. ಮೊಹನ ಚಕ್ರಮನೆ, ದಿ. ದೇವೇಂದ್ರ ಮುರುಡೇಶ್ವರ, ದಿ. ರಮೇಶ ನಾಡಕರ್ಣಿ, ದಿನಕರ ಕಾಯ್ಕಿಣಿ, ಸುಗುಣಾ ಚಂದಾವರಕರ, ಲಲಿತಾ ಅಭ್ಯಂಕರ ಮುಂತಾದವರು ಶಾಸ್ತ್ರೀಯ ಸಂಗೀತದ ಕಂಪನ್ನು ಈ ಜಿಲ್ಲೆಯಲ್ಲಿ ಹರಡತೊಡಗಿದರು.

ಯಲ್ಲಾಪುರ ಪರಿಸರದಲ್ಲಿ ದೊಡ್ಡಪ್ರಮಾಣದ ಸಂಗೀತ ಉತ್ಕ್ರಾಂತಿಯನ್ನು ತಂದ ಕೀರ್ತಿ ಪಂ. ಗಣಪತಿ ಭಟ್ಟರಿಗೆ ಸಲ್ಲುತ್ತದೆ ಅನ್ನಬಹುದು. ಅವರು ಒಮ್ಮೆ ಅಮೇರಿಕೆಯ ಪ್ರವಾಸ ಯಶಸ್ವಿಯಾಗಿ ಮಾಡಿದ್ದಾರೆ. ಎರಡನೆಯ ಸಲ ಪ್ರವಾಸದ ಸಿದ್ಧತೆಯಲ್ಲಿದ್ದಾರೆ. ಅವರಿಗೆ ಪ್ರಚಾರ ಮೋಹ ತಿಲಮಾತ್ರ ಇಲ್ಲ. ಅವರ ಬಳಿ ಬಯೋಡೇಟಾ ಇಲ್ಲ. ಅನೇಕ ಧ್ವನಿಸುರುಳಿಗಳು ಲಭ್ಯವಾಗಿವೆ. ತಮ್ಮ ಕಲೆಯೇ ತಮ್ಮ ಗುರುತುಪತ್ರ ಎಂದು ನಂಬಿರುವ ಕೆಲವೇ ಕಲಾವಿದರಲ್ಲಿ ಇವರೂ ಒಬ್ಬರು.

ಗುರುತಿಸಬೇಕಾದ ಕೆಲವು ಹೊಸ ಬೆಳವಣಿಗೆಗಳೆಂದರೆ ‘ಕಲಾಸಂಗಮ’ ಮೊದಲಾದ ಅನೇಕ ಸಂಸ್ಥೆಗಳು ತಲೆಯೆತ್ತಿದವು. 2001 ರಲ್ಲಿ ಪದ್ಮಭೂಷಣ ಡಾ| ಗಂಗೂಬಾಯಿ ಹಾನಗಲ್ ಅವರು ‘ಪಂ.ಗಣಪತಿ ಭಟ್ ಮ್ಯುಜಿಕ್ ಅಕಾಡೆಮಿ’ಯನ್ನು ಉದ್ಘಾಟಿಸಿದರು. ಸಂಗೀತ ಕ್ಷೇತ್ರದಲ್ಲಿ ಇದೊಂದು ಮೈಲಿಕಲ್ಲು. ಅದೇವರ್ಷ ಹಾಸಣಗಿಯಲ್ಲಿ ಗುರುಭವನ ಸಿದ್ಧವಾಯ್ತು. ಕಲಾವಿದರ ಸಹಾಯಾರ್ಥ ‘ವೆಲ್‌ಪೇರ್ ಫಂಡ್’ ಪ್ರಾರಂಭವಾಯ್ತು. ಸರಕಾರದ ಸಹಾಯ ದೊರೆತರೆ ಉತ್ತರ ಕನ್ನಡ [^]ವು ‘ಸಂಗೀತ ಕಾಶಿ’ಯಾಗುವ ಭರವಸೆ ಇವರಿಗೆ ಇದೆ.

ಒಂದು ಕಾಲಕ್ಕೆ ಪುಕ್ಕಟೆ ಸಂಗೀತ ಸಭೆ ಇಟ್ಟರೆ ಜನ ಕೂಡಿಸುವುದು ದುಸ್ತರವಾಗುತ್ತಿತ್ತು. ಇಂದು ‘ಕಲಾಸಂಗಮ’ದ ಕಾರ್ಯಕ್ರಮಕ್ಕೆ ಜನರು ಉತ್ಸಾಹದಿಂದ ನೂರಾರು ರೂಪಾಯಿಗಳ ಟಿಕೇಟ್ ಕೊಂಡು ಸಂಗೀತ ಕೇಳಲು ಸಹಸ್ರ ಸಂಖ್ಯೆಯಲ್ಲಿ ಬರುತ್ತಾರೆಂದರೆ ಇದು ಪ್ರಗತಿಯಲ್ಲವೇ? ಭೈರುಂಜೆಯಂತಹ ಹಳ್ಳಿಯಲ್ಲಿ ಕೂಡ ಟಿಕೆಟ್ ಇಟ್ಟ ಸಂಗೀತ ಕಾರ್ಯಕ್ರಮ ಯಶಸ್ವಿಯಾಯಿತು ಎಂಬ ಮಾತು ಕೇಳಿದಾಗ ಕರ್ನಾಟಕದಲ್ಲಿ ಸಂಗೀತಕ್ಕೆ ಆಶಾದಾಯಕ ಸ್ಥಿತಿ ಇದೆ ಎಂದು ವಿಶ್ವಾಸ ಇಟ್ಟುಕೊಳ್ಳಬಹುದು.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. 1 ಟಿಪ್ಪಣಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: