ಸಾರ್ವಕಾಲಿಕ ಶ್ರೇಷ್ಠ! ಯಾರು ಸಾರ್?

ಈ Federphiles,  Fed freaks ಅಥವಾ ಫೆಡರರ್ ಅವರ ಹುಚ್ಚು ಅಭಿಮಾನಿಗಳಿದ್ದಾರಲ್ಲಾ ಇವರು, ಕಳೆದ ಭಾನುವಾರದಿಂದ ತಮ್ಮ ಆರಾಧ್ಯ ದೈವವೇ  “Best Ever’, “Best Ever’  ಎಂದು ಹಿಂದೆಂದಿಗಿಂತಲೂ ಜೋರಾಗಿ ಬೊಬ್ಬೆಹಾಕಲಾ ರಂಭಿಸಿದ್ದಾರೆ. ಖ್ಯಾತ ಟೆನಿಸ್ ಆಟಗಾರ ರೋಜರ್ ಫೆಡರರ್‌ನೇ ‘ಸಾರ್ವಕಾಲಿಕ ಶ್ರೇಷ್ಠ ಆಟಗಾರ’ ಎಂಬ ವಾದವನ್ನು ಈ ಹಿಂದೆಯೇ ಆರಂಭಿಸಿದ್ದರು. ಆದರೆ ಫ್ರೆಂಚ್ ಓಪನ್ ಅವರ ವಾದಕ್ಕೆ ಅಡ್ಡವಾಗಿ, ಅಡ್ಡಿಯಾಗಿ ನಿಂತಿತ್ತು. ಸ್ಪೇನ್‌ನ Clay King (ಮಣ್ಣಿನ ಮಗ) ರಾಫೆಲ್ ನಡಾಲ್ ಪೆಡಂಭೂತವಾಗಿ ಇವರನ್ನು ಕಾಡುತ್ತಿದ್ದ. ಕಳೆದ ಭಾನುವಾರ ಮುಕ್ತಾಯಗೊಂಡ 2009ರ ಫ್ರೆಂಚ್ ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಅನಿರೀಕ್ಷಿತವಾಗಿ ಸೋತು ನಡಾಲ್ ಟೂರ್ನಿಯಿಂದ ಹೊರಬಿದ್ದಾಗ, ಅಂತಹ ಫಾರ್ಮ್‌ನಲ್ಲಿರದಿದ್ದರೂ ಫೆಡರರ್ ಅಭಿಮಾನಿಗಳಿಗೆ ಮತ್ತೆ ರೆಕ್ಕೆ-ಪುಕ್ಕ ಬಂದಿತ್ತು. ಅದರಲ್ಲೂ ನಡಾಲ್ ಇಲ್ಲದ ಫೈನಲ್‌ನಲ್ಲಿ ಸೋಡರ್‍ಲಿಂಗ್‌ನನ್ನು ನೇರ ಸೆಟ್‌ಗಳಲ್ಲಿ ಸೋಲಿಸಿ ಮೊಟ್ಟಮೊದಲ ಬಾರಿಗೆ ಫ್ರೆಂಚ್ ಓಪನ್ ಜಯಿಸಿದ ನಂತರವಂತೂ ಫೆಡರರ್ ಅಭಿಮಾನಿಗಳ ವಾದಕ್ಕೆ ಅಂಕೆಯೇ ಇಲ್ಲದಂತಾಗಿದೆ. ಇವರ ಕಣ್ಣೆದುರು ರಾಡ್ ಲೆವರ್, ಬ್ಯೋರ್ನ್ ಬೋರ್ಗ್, ಮೆಕೆನ್ರೊ, ಇವಾನ್ ಲೆಂಡ್ಲ್, ಪೀಟ್ ಸ್ಯಾಂಪ್ರಾಸ್ ಎಲ್ಲರೂ ಗೌಣವಾಗಿ ಬಿಟ್ಟಿದ್ದಾರೆ. ಎಲ್ಲರಿಗಿಂತಲೂ ಫೆಡರರ್‌ನೇ ಮಹಾನ್ ಆಟಗಾರ, All time great’ ಎನ್ನಲಾರಂಭಿಸಿದ್ದಾರೆ.

ಇದೇಕೋ ಅತಿಯಾಯಿತು ಅನಿಸುತ್ತಿದೆ!

ನಿಮ್ಮ ಬಳಿ ಸಮಯವಿದ್ದರೆ, ಬ್ಯೋರ್ನ್ ಬೋರ್ಗ್ ಹಾಗೂ ಜಾನ್ ಮೆಕೆನ್ರೋ ನಡುವೆ ನಡೆದ  1980ರ ವಿಂಬಲ್ಡನ್ ಫೈನಲ್ ಪಂದ್ಯವನ್ನು ‘ಯುಟ್ಯೂಬ್’ನಲ್ಲಿ ನೋಡಿ. ಇಲ್ಲವೇ ಜೂನ್ 22ರಿಂದ ವಿಂಬಲ್ಡನ್ ಟೆನಿಸ್ ಟೂರ್ನಿ ಪ್ರಾರಂಭವಾಗಲಿದ್ದು, ನಿತ್ಯವೂ ಮಧ್ಯರಾತ್ರಿ ಸ್ಟಾರ್-ಇಎಸ್‌ಪಿಎನ್ ಚಾನೆಲ್ ನೋಡುತ್ತಿರಿ, ಆ ಪಂದ್ಯವನ್ನು ಖಂಡಿತ ಮರುಪ್ರಸಾರ ಮಾಡುತ್ತಾರೆ. 1980ರ ವೇಳೆಗಾಗಲೇ ಬೋರ್ಗ್ ಟೆನಿಸ್‌ನ ಜೀವಂತ ದಂತಕಥೆಯಾಗಿದ್ದ. ಸತತ 4 ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದ ಆತ, ಐದನೆಯದಕ್ಕಾಗಿ ಕಾಯುತ್ತಿದ್ದ. ಇತ್ತ ಯುವಕ ಜಾನ್ ಮೆಕೆನ್ರೊ ಆಗಿನ್ನೂ ಟೆನಿಸ್ ಅಂಗಳದಲ್ಲಿ ಕಣ್ಣುಬಿಡುತ್ತಿದ್ದ. ಇವರಿಬ್ಬರೂ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದರು. ಬೋರ್ಗ್ ಪ್ರತಿಭೆಯ ಜತೆ ಉತ್ತಮ ನಡತೆಯಿಂದಲೂ ಹೆಸರಾಗಿದ್ದರೆ, ಮೆಕೆನ್ರೊನ ಕ್ಯಾತೆಗಳು ಅದಾಗಲೇ ಆರಂಭವಾಗಿದ್ದವು. ಜಿಮ್ಮಿ ಕಾನರ್ಸ್ ಜತೆಗಿನ ಸೆಮಿಫೈನಲ್ ಹಣಾಹಣಿ ವೇಳೆ ಅಂಪೈರ್ ಹಾಗೂ ಇತರ ಅಧಿಕಾರಿಗಳ ಜತೆ ಕಿತ್ತಾಡಿಕೊಂಡಿದ್ದ ಮೆಕೆನ್ರೊ, ಫೈನಲ್ ಆಡಲು ‘ಸೆಂಟರ್ ಕೋರ್ಟ್’ಗೆ ಕಾಲಿಡುತ್ತಿದ್ದಂತೆಯೇ ಪ್ರೇಕ್ಷಕರು ಅಣಕಿಸಿ ಸ್ವಾಗತ ನೀಡಿದರು. ಆದರೆ ಪಂದ್ಯ ಆರಂಭವಾದ ನಂತರ ಪರಿಸ್ಥಿತಿಯೇ ಬದಲಾಗತೊಡಗಿತು. ಇಪ್ಪನ್ನಾಲ್ಕು ವರ್ಷದ ಬೋರ್ಗ್ ಒಬ್ಬ ಮಾಸ್ಟರ್ ಆದರೆ, 21 ವರ್ಷದ ಮೆಕೆನ್ರೊ ಪ್ರಳಯಾಂತಕ. ಒಬ್ಬ ಸೌಮ್ಯವಾದಿಯಾದರೆ, ಮತ್ತೊಬ್ಬ ಗಲಾಟೆ ಸ್ವಭಾವದವ. ಇವರಿಬ್ಬರ ಸೆಣಸಾಟ ಆಟವನ್ನೇ ರಂಗೇರಿಸಿತು. ಎಲ್ಲರನ್ನೂ ನೇರ ಸೆಟ್‌ಗಳಲ್ಲಿ ಸೋಲಿಸುತ್ತಿದ್ದ ಬೋರ್ಗ್ ಮೊದಲನೇ ಸೆಟ್ಟನ್ನು 1-6ರಿಂದ ಸೋತು ಬಿಟ್ಟ! ಎರಡನೇ ಸೆಟ್ ಟೈಬ್ರೇಕರ್‌ಗೆ ಹೋಯಿತು. ಆತನ ನಾಗಾಲೋಟಕ್ಕೆ ಕಡಿವಾಣ ಬಿತ್ತು ಎಂದು ಎಲ್ಲರೂ ಅಂದುಕೊಳ್ಳಲಾರಂಭಿಸಿದರು. ಅಷ್ಟರಲ್ಲಿ ಹೇಗೋ ಪರದಾಡಿ ಎರಡನೆ ಸೆಟ್ ಗೆದ್ದುಕೊಂಡ ಬೋರ್ಗ್, ಮೂರನೇ ಸೆಟ್ಟನ್ನು  6&3ರಿಂದ ತನ್ನದಾಗಿಸಿಕೊಂಡ. ಮತ್ತೆ ನಿರೀಕ್ಷೆಗಳು ಜೋರ್ಗ್ ಪರ ವಾಲತೊಡಗಿದವು. ಆದರೆ ನಾಲ್ಕನೇ ಸೆಟ್ ವಿಂಬಲ್ಡನ್ ಟೆನಿಸ್ ಇತಿಹಾಸಕ್ಕೆ ಒಂದು ಅದ್ಭುತ ಅಧ್ಯಾಯವನ್ನು ಸೇರ್ಪಡೆ ಮಾಡಲಿದೆ ಎಂದು ಬಹುಶಃ ಯಾರೂ ಊಹಿಸಿರಲಿಲ್ಲ. ಮಾಮೂಲಿನಂತೆ ಬೇಸ್‌ಲೈನ್‌ನಲ್ಲಿ ನಿಂತು ಆಡತೊಡಗಿದ ಬೋರ್ಗ್‌ನ ಪ್ರತಿ ಹೊಡೆತಕ್ಕೂ ಮೆಕೆನ್ರೊ ತಕ್ಕ ಪ್ರತ್ಯುತ್ತರ ನೀಡಲಾರಂಭಿದ. ಆ ಸೆಟ್‌ನಲ್ಲಿ ಒಟ್ಟು ೩೪ ಪಾಯಿಂಟ್‌ಗಳು ಜಿದ್ದಾಜಿದ್ದಿಯಿಂದ ಕೂಡಿದ್ದವು. ಒಂದೊಂದು ಪಾಯಿಂಟ್‌ಗೂ ದೊಡ್ಡ ಹೋರಾಟವನ್ನೇ ಮಾಡಿದರು. ಹಾಗಾಗಿ ನಾಲ್ಕನೆ ಸೆಟ್ ಕೂಡ ಟೈಬ್ರೇಕರ್‌ಗೆ ಹೋಯಿತು. ಒಂದೇ ಒಂದು ಟೈಬ್ರೇಕರ್ 22 ನಿಮಿಷಗಳ ಕಾದಾಟಕ್ಕೆ ಕಾರಣವಾಯಿತು ಎಂದರೆ ನಂಬುತ್ತೀರಾ? ಈ ಕಾದಾಟದಲ್ಲಿ ಬೋರ್ಗ್‌ಗೆ 5 ಚಾಂಪಿಯನ್‌ಶಿಪ್ ಪಾಯಿಂಟ್‌ಗಳು ದೊರಕಿದ್ದವು. ಅಷ್ಟನ್ನೂ ಮೆಕೆನ್ರೊ ನಿಷ್ಫಲಗೊಳಿಸಿದ. ಮೆಕೆನ್ರೊಗೆ 7 ಸೆಟ್ ಪಾಯಿಂಟ್‌ಗಳು ದೊರೆತಿದ್ದವು. ಒಂದನ್ನೂ ಸದುಪಯೋಗಪಡಿಸಿಕೊಳ್ಳಲು ಬೋರ್ಗ್ ಬಿಡಲಿಲ್ಲ. ಕೊನೆಗೆ ಟೈಬ್ರೇಕರ್‌ನಲ್ಲಿ 18&16ರಲ್ಲಿ ಸೆಟ್ ಗೆದ್ದ ಮೆಕೆನ್ರೊ, ಪಂದ್ಯವನ್ನು ಐದನೇ ಸೆಟ್‌ಗೆ ಕೊಂಡೊಯ್ದ. ಐದನೇ ಸೆಟ್ ಮತ್ತೆ ಟೈಬ್ರೇಕರ್‌ಗೆ ಹೋಯಿತು. ಇಷ್ಟಾಗಿಯೂ 8-&ಆ ಸೆಟ್ ಗೆದ್ದ ಬೋರ್ಗ್ 5ನೇ ಬಾರಿಗೆ ವಿಂಬಲ್ಡನ್ ಚಾಂಪಿಯನ್ ಆಗಿ ಹೊರಹೊಮ್ಮಿದ. ಅಷ್ಟರಲ್ಲಿ ಮೆಕೆನ್ರೊ ಬೋರ್ಗ್‌ನ ಆತ್ಮಸ್ಥೈರ್ಯವನ್ನೇ ಉಡುಗಿಸಿದ್ದ. ಆಡಲು ಆಗಮಿಸಿದಾಗ ಯಾವ ಪ್ರೇಕ್ಷಕರು ಮೆಕೆನ್ರೋನನ್ನು ಅಣಕಿಸಿದ್ದರೋ ಅದೇ ಪ್ರೇಕ್ಷಕರು ಎದ್ದು ನಿಂತು ಮೆಕೆನ್ರೋಗೆ ಗೌರವ ಸೂಚಿಸಿದರು. ಅದೇ ವರ್ಷದ ಕೊನೆಯಲ್ಲಿ ನಡೆದ ಯುಎಸ್ ಒಪನ್ ಫೈನಲ್‌ನಲ್ಲಿ ಮೆಕೆನ್ರೊ-ಬೋರ್ಗ್ ಮತ್ತೆ ಮುಖಾಮುಖಿಯಾದರು. ಆ ಪಂದ್ಯ ಕೂಡ ಐದು ಸೆಟ್‌ಗಳಿಗೆ ಸಾಗಿತು. ಈ ಬಾರಿ ಗೆದ್ದ ಮೆಕೆನ್ರೊ ಸೇಡು ತೀರಿಸಿಕೊಂಡ. ಮರು ವರ್ಷ ವಿಂಬಲ್ಡನ್ ಹಾಗೂ ಯುಎಸ್ ಓಪನ್ ಎರಡಲ್ಲೂ ಫೈನಲ್‌ನಲ್ಲಿ ಇಬ್ಬರಿಬ್ಬರೇ ಎದುರಾಳಿಗಳಾದರು. ಎರಡರಲ್ಲೂ ಗೆದ್ದ ಮೆಕೆನ್ರೊ ನವತಾರೆಯಾಗಿ ಹೊರಹೊಮ್ಮಿದರೆ ಬೋರ್ಗ್ ನಿವೃತ್ತಿ ಘೋಷಣೆ ಮಾಡಿಬಿಟ್ಟ.

ಆಗ ಆತನಿಗೆ ಕೇವಲ 26 ವರ್ಷ!

ಇದೇನೇ ಇರಲಿ, ಬೋರ್ಗ್ ನಿವೃತ್ತಿ ಹೊಂದಿದ ನಂತರ ಮೆಕೆನ್ರೊ, ಕಾನರ್ಸ್, ಇವಾನ್ ಲೆಂಡ್ಲ್ ಆಟ ಮುಂದು ವರಿಸಿದರೂ ಟೆನಿಸ್ ಮಾತ್ರ ರಂಗೇರಲಿಲ್ಲ. ಪ್ರತಿಭೆಯನ್ನೇ ಪ್ರಶ್ನಿಸುವಂತಹ, ಪ್ರತಿಭೆಗೇ ಸವಾಲೆಸೆಯು ವಂತಹ ಸರಿಯಾದ ಎದುರಾಳಿಯಿಲ್ಲದೆ ಮೆಕೆನ್ರೊ ಆಟವೇ ಕಳೆಗುಂದಿತು. 1990ರ ದಶಕದಲ್ಲಿ ಪೀಟ್ ಸ್ಯಾಂಪ್ರಾಸ್ ಹಾಗೂ ಆಂಡ್ರೆ ಅಗಾಸಿ ಬಂದು ಟೆನಿಸ್ ಅಂಕಣಕ್ಕೆ ಜಿದ್ದಾಜಿದ್ದಿಯನ್ನು ಮತ್ತೆ ತರಬೇಕಾಗಿ ಬಂತು. ಅದಂತೂ ಮತ್ತೊಂದು ಅಮೋಘ ಪರ್ವ. ಬ್ಯೋರ್ನ್ ಬೋರ್ಗ್, ಮೆಕೆನ್ರೋ, ಲೆಂಡ್ಲ್, ಕಾನರ್ಸ್ ಮುಖಾಮುಖಿಯಾಗಿದ್ದ ಯಾವ ಪಂದ್ಯಗಳೂ ನೇರ ಸೆಟ್‌ಗಳಲ್ಲಿ ಮುಗಿಯುವ ಪ್ರಮೇಯವೇ ಇರುತ್ತಿರಲಿಲ್ಲ. ಸ್ಯಾಂಪ್ರಾಸ್ ಬಂದಾಗಲೂ ಅದೇ ಪರಿಸ್ಥಿತಿ ಇತ್ತು. ಕ್ರೀಡಾ ಜೀವನದ ಸಂಧ್ಯಾ ಕಾಲದಲ್ಲಿದ್ದರೂ ಮೆಕೆನ್ರೊ, ಲೆಂಡ್ಲ್, ಕಾನರ್ಸ್ ಅವರಲ್ಲಿ  ಹೋರಾಟದ ಛಲ ಇನ್ನೂ ಸ್ವಲ್ಪ ಉಳಿದಿತ್ತು. ಜತೆಗೆ ಬೆಕರ್, ಕುರಿಯರ್ ಅಂತಹ ಅನುಭವಿಗಳು ಹಾಗೂ ಅಗಾಸಿ ಸೇರಿದಂತೆ ಹಲವಾರು ಯುವ ಆಟಗಾರರು ಅತಿದೊಡ್ಡ ಸವಾಲಾಗಿ ಪರಿಣಮಿಸಿದ್ದರು. ಹಾಗಾಗಿ 1990ರ ಯುಎಸ್ ಓಪನ್‌ನಲ್ಲಿ ಇವಾನ್ ಲೆಂಡ್ಲ್ ಹಾಗೂ ಜಾನ್ ಮೆಕೆನ್ರೊ ಅವರನ್ನು ಸೋಲಿಸಿದ ಸ್ಯಾಂಪ್ರಾಸ್, ಫೈನಲ್ ಗೇರಿದ್ದರೂ ೩ನೇ ಶ್ರೇಯಾಂಕ ಹೊಂದಿದ್ದ ಆಗಾಸಿ ಮೇಲೆಯೇ ಎಲ್ಲರೂ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೂ ನೇರ ಸೆಟ್‌ಗಳಲ್ಲಿ ಪಂದ್ಯ ಗೆದ್ದ ಸ್ಯಾಂಪ್ರಾಸ್ ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದ. ಅಲ್ಲಿಂದ 12 ವರ್ಷಗಳ ಕಾಲ ಇಬ್ಬರ ನಡುವೆ ತುರುಸಿನ ಸ್ಪರ್ಧೆ ನಡೆಯಿತು. ಇವರಿಬ್ಬರೂ ನಾಲ್ಕನೇ ಸುತ್ತು, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಎಲ್ಲಿಯೇ ಮುಖಾಮುಖಿಯಾಗಲಿ ಅದೇ ಫೈನಲ್ ಎನಿಸುತ್ತಿತ್ತು. ಸ್ಯಾಂಪ್ರಾಸ್ 286 ವಾರಗಳ ಕಾಲ ವಿಶ್ವದ ನಂಬರ್ 1 ಟೆನಿಸ್ ಆಟಗಾರ ಎಂಬ ಹೆಗ್ಗಳಿಕೆ ಪಡೆದುಕೊಂಡರೆ ಅಗಾಸಿ 101 ವಾರಗಳ ಕಾಲ ಗೌರವಕ್ಕೆ ಪಾತ್ರನಾಗಿದ್ದ. ಅದರಲ್ಲೂ 1995ರ ಸುಮಾರಿಗಂತೂ ನಂ-1 ಸ್ಥಾನ ಇಬ್ಬರ ನಡುವೆ ಮ್ಯೂಸಿಕಲ್ ಚೇರ್‌ನಂತಾಗಿತ್ತು ಎಂದರೆ ಸ್ಪರ್ಧೆ ಹೇಗಿದ್ದಿರಬಹುದು ಎಂಬುದನ್ನು ಊಹಿಸಿ?

ಬೆಂಗಳೂರಿನ ರೇಡಿಯೋ ಸಿಟಿಯಲ್ಲಿ ಯಾವಾಗಲು ಒಂದು ತಮಾಷೆ ಮಾಡುತ್ತಿದ್ದರು.

ಪಾಕಿಸ್ತಾನದ ಕ್ರಿಕೆಟ್ ಆಟಗಾರ ಇಂಜಮಾಮ್ ಉಲ್-ಹಕ್ 40 ಬಾರಿ ರನೌಟ್ ಆಗಿ ವಿಶ್ವದಾಖಲೆ(ಈಗ ಅಟ್ಟಪಟ್ಟು ಆ ಕುಖ್ಯಾತಿಗೆ ಭಾಜನರಾಗಿದ್ದಾರೆ) ನಿರ್ಮಿಸಿದ್ದಾರೆ. ಅಣಕವೆಂದರೆ, ಇಂಜಮಾಮ್ ಅವರಿಂದ ಎಷ್ಟು ಜನ ರನೌಟ್ ಆಗಿದ್ದಾರೆ ಎಂದು ಯಾರೂ ಲೆಕ್ಕ ಹಾಕಿಲ್ಲ! ಇಲ್ಲದಿದ್ದರೆ ಅದು ಮತ್ತೊಂದು ವಿಶ್ವದಾಖಲೆಯಾಗುತ್ತಿತ್ತು!! ಅದೇ ರೀತಿ ಹೀಗೊಂದು ಪ್ರಶ್ನೆಯನ್ನು ನಾವೂ ಕೇಳಿಕೊಂಡರೆ-ಸ್ಯಾಂಪ್ರಾಸ್ 14 ಗ್ರ್ಯಾನ್ ಸ್ಲ್ಯಾಮ್‌ಗಳನ್ನು ಗೆದ್ದಿದ್ದಾರೆ, ಸ್ಯಾಂಪ್ರಾಸ್ ಅವರಿಂದಾಗಿ ಅಗಾಸಿ ಎಷ್ಟು ಗ್ರ್ಯಾನ್ ಸ್ಲ್ಯಾಮ್‌ಗಳನ್ನು ಕಳೆದುಕೊಂಡಿದ್ದಾರೆ? 1990ರಿಂದ 2002ರವರೆಗೂ ಈ 12 ವರ್ಷಗಳ ಅವಧಿಯಲ್ಲಿ ಅಗಾಸಿ-ಸ್ಯಾಂಪ್ರಾಸ್ ಫೈನಲ್‌ನಲ್ಲಿಯೇ 5 ಬಾರಿ ಎದುರಾಳಿಗಳಾಗಿದ್ದರು. ಅದರಲ್ಲಿ ಸ್ಯಾಂಪ್ರಾಸ್ 4 ಬಾರಿ ಗೆದ್ದಿದ್ದಾನೆ. ಒಂದು ವೇಳೆ ಸ್ಯಾಂಪ್ರಾಸ್ ಬದಲು ಬೇರಾರೋ ಎದುರಾಳಿಯಾಗಿದ್ದರೆ ಅಗಾಸಿ ಗಳಿಸಿದ ಒಟ್ಟು ಗ್ರ್ಯಾನ್‌ಸ್ಲ್ಯಾಮ್‌ಗಳ ಸಂಖ್ಯೆ 8ರ ಬದಲು 12 ಆಗಿರುತ್ತಿತ್ತೇನೋ! ಜತೆಗೆ ಇನ್ನೂ ಹೆಚ್ಚು ಬಾರಿ ಫೈನಲ್ ತಲುಪಿರುತ್ತಿದ್ದ. ಅಷ್ಟಕ್ಕೂ 2001ರ ಯುಎಸ್ ಓಪನ್ ಕ್ವಾರ್ಟರ್ ಫೈನಲ್ಲನ್ನು ಮರೆಯಲು ಸಾಧ್ಯವಿದೆಯೇ? ಆ ಪಂದ್ಯವನ್ನು ಸ್ಯಾಂಪ್ರಾಸ್, 6&7, 7&6, 7&6, 7&6 ರಿಂದ ಗೆದ್ದುಕೊಂಡರು. ವಿಶೇಷವೇನೆಂದರೆ ನಾಲ್ಕೂ ಸೆಟ್‌ಗಳು ಟೈಬ್ರೇಕರ್‌ಗೆ ಹೋದರೂ ಒಬ್ಬರು ಮತ್ತೊಬ್ಬರ ಸರ್ವ್ ಮುರಿಯಲು ಸಾಧ್ಯವಾಗಿರಲಿಲ್ಲ! ಇಬ್ಬರ ನಡುವೆ ಅಂತಹ ಸ್ಪರ್ಧೆ ನಡೆಯುತ್ತಿತ್ತು. ಸ್ಯಾಂಪ್ರಾಸ್ 14 ಗ್ರ್ಯಾನ್ ಸ್ಲ್ಯಾಮ್‌ಗಳನ್ನು ಗೆದ್ದು ವಿಶ್ವದಾಖಲೆ ನಿರ್ಮಾಣ ಮಾಡಿದರೆ ಅಗಾಸಿ 17 ಎಟಿಪಿ ಟೂರ್ನಿಗಳನ್ನು ಗೆದ್ದು ಅಂತಹ ಸಾಧನೆಗೈದ ಏಕೈಕ ಆಟಗಾರನೆನಿಸಿದರು. ಜತೆಗೆ ಒಲಿಂಪಿಕ್‌ನಲ್ಲೂ ಚಿನ್ನದ ಪದಕ ಗೆದ್ದರು. ಹುಲ್ಲಿನ ಅಂಕಣದಲ್ಲಿ ಮೀರಿಸಲು ಯಾರಿಗೂ ಸಾಧ್ಯವಿಲ್ಲ ಎಂಬಂತಿದ್ದ ಸ್ಯಾಂಪ್ರಾಸ್, 14 ಗ್ರ್ಯಾನ್ ಸ್ಲ್ಯಾಮ್‌ಗಳಿಗಾಗಿ 15 ವರ್ಷ ಟೆನಿಸ್ ಆಡಬೇಕಾಯಿತು, ೮ ಗ್ರ್ಯಾನ್‌ಸ್ಲ್ಯಾಮ್‌ಗಳಿಗಾಗಿ ಅಗಾಸಿ 20 ವರ್ಷ ಟೆನಿಸ್ ಆಡಿದ. ಅಂದರೆ ಸ್ಪರ್ಧೆ ಯಾವ ಮಟ್ಟಕ್ಕಿತ್ತೆಂದು ಯೋಚಿಸಿ, ಆಗ ಅವರು ಗೆದ್ದಿರುವ ಒಂದೊಂದು ಗ್ರ್ಯಾನ್‌ಸ್ಲ್ಯಾಮ್‌ಗಳ ಮಹತ್ವ ಅರಿವಾಗುತ್ತದೆ.

ಇಂತಹವರ ಸಾಧನೆಯನ್ನೆಲ್ಲಾ ಬದಿಗೆ ತಳ್ಳಿ, ಒಂದು ಫ್ರೆಂಚ್ ಓಪನ್ ಗೆದ್ದು ಸ್ಯಾಂಪ್ರಾಸ್‌ನ ಸಾಧನೆಯನ್ನು ಸರಿಗಟ್ಟಿದ ಕೂಡಲೇ ರೋಜರ್ ಫೆಡರರ್‌ನನ್ನು “”Greatest ever”, “Best ever” ಎಂದರೆ ಹೇಗೆ ತಾನೇ ಒಪ್ಪಿಕೊಳ್ಳುವುದು? ಆತನನ್ನು ಅತ್ಯುತ್ತಮ ಹಾಲಿ ಆಟಗಾರ, ಸಾರ್ವಕಾಲಿಕ ಅತ್ಯುತ್ತಮ ಆಟಗಾರರಲ್ಲಿ ಒಬ್ಬ ಎಂದರೆ ಖಂಡಿತ ಸುಮ್ಮನಿರಬಹುದು, ಆದರೆ “”All time great” ಎಂದರೆ ಮನಸ್ಸಿಗೆ ಕಸಿವಿಸಿಯಾಗದೇ ಇದ್ದೀತೆ? ಅಷ್ಟಕ್ಕೂ ಐದಾರು ವರ್ಷಗಳಲ್ಲಿ 14 ಗ್ಲ್ಯಾನ್‌ಸ್ಲ್ಯಾಮ್‌ಗಳನ್ನು ಗೆದ್ದಿದ್ದೇ ಸಾರ್ವಕಾಲಿಕ ಸಾಧನೆಯೇ? ಹಾಗಾದರೆ 19 ಬಾರಿ ಫೈನಲ್ ತಲುಪಿದ್ದ ಇವಾನ್ ಲೆಂಡ್ಲ್ ಅವರೇನು ಸಾಮಾನ್ಯ ವ್ಯಕ್ತಿಯೇ? ರಾಡ್ ಲೆವರ್ ಅವರೇ “”All time great”  ಎನ್ನುವವರೂ ಇದ್ದಾರೆ. ಅವರ ಅಭಿಪ್ರಾಯ ತಪ್ಪೆ?

ಸ್ಯಾಂಪ್ರಾಸ್ ಅವರಂತೆ ಸರ್ವ್, ಕುರ್ಟನ್‌ನಂತೆ ಬ್ಯಾಕ್‌ಹ್ಯಾಂಡ್, ಅಗಾಸಿಯಂತೆ ರಿಟರ್ನ್, ಎಡ್ಬರ್ಗ್‌ರಂತೆ ವಾಲಿ ಮಾಡುತ್ತಾರೆ, ರಾಡ್‌ಲೆವರ್ ಹಾಗೂ ಬೋರ್ಗ್‌ಗಿಂತ ವೈಶಿಷ್ಟ್ಯಪೂರ್ಣ ಆಟ ಹೊಂದಿದ್ದಾರೆ, ಬೋರ್ಗ್‌ಗಿಂತ ವೇಗವಾಗಿ ಪ್ರತಿಕ್ರಿಯಿಸುತ್ತಾರೆ, ಸಫಿನ್‌ನಷ್ಟೇ ಬಲಾಢ್ಯ, ಲೆಂಡ್ಲ್ ಹಾಗೂ ಮೆಕೆನ್ರೊ ಅವರಷ್ಟೇ ಚೆನ್ನಾಗಿ ಬೇಸ್‌ಲೈನ್‌ನಲ್ಲಿ ನಿಂತು ಆಟವಾಡುತ್ತಾರೆ ಎಂದು ಫೆಡರರ್ ಅಭಿಮಾನಿಗಳು ತಮ್ಮ ಆರಾಧ್ಯದೈವವನ್ನು ಹೊಗಳಿಕೊಳ್ಳುತ್ತಾರೆ. ಇವಿಷ್ಟೂ ವೈಶಿಷ್ಟ್ಯಗಳು ಅವರೊಬ್ಬರೊಳಗೇ ಇದ್ದಿದ್ದರೆ ನಡಾಲ್‌ಗೆ ಹೆದರಿ ನಡುಗುವ, ಸತತವಾಗಿ ಸೋಲುವ ಅಗತ್ಯ ಬರುತ್ತಿರಲಿಲ್ಲ! ಖಂಡಿತ ಫೆಡರರ್ ಟೆನಿಸ್ ಕಂಡ ಅತ್ಯಂತ ಪರಿಪೂರ್ಣ ಆಟಗಾರ. ಈ ಮೇಲಿನ ಬಹಳಷ್ಟು ಅಂಶಗಳಲ್ಲಿ ಕೆಲವನ್ನು ಪೂರ್ಣವಾಗಿ ಉಳಿದವುಗಳನ್ನು ಅಲ್ಪಸ್ವಲ್ಪ ಹೊಂದಿದ್ದಾರೆ. ಆದರೆ ಅವುಗಳನ್ನು ಒರೆಗಲ್ಲಿಗೆ ಹಚ್ಚುವುದು ಹೇಗೆ? ಸಾಂಪ್ರಾಸ್‌ಗೆ ಸವಾಲೆಸೆದ ಎದುರಾಳಿಗಳನ್ನು ಹಾಗೂ ಫೆಡರರ್ ಎದುರು ಸೆಣಸುತ್ತಿರುವ ಆಟಗಾರರನ್ನು ಅಳೆದುತೂಗಿ, ಹೋಲಿಸಿ ನೋಡಿ, ಆಗ ಸತ್ಯ ಗೊತ್ತಾಗುತ್ತದೆ. ಹದಿನಾಲ್ಕು ಗ್ರ್ಯಾನ್ ಸ್ಲಾಮ್‌ಗಳನ್ನು ಗೆಲ್ಲುವಾಗ ಸ್ಟೀಫನ್ ಎಡ್ಬರ್ಗ್, ಜಿಮ್ ಕುರಿಯರ್, ಮೈಕೆಲ್ ಚಾಂಗ್, ಪ್ಯಾಟ್ರಿಕ್ ರ್‍ಯಾಫ್ಟರ್, ಬೆಕರ್, ಗೊರಾನ್ ಇವಾನಿಸೆವಿಚ್, ಯವಗೆನಿ ಕಫೆಲ್ನಿಕೋವ್, ರಿಚರ್ಡ್ ಕ್ರಾಜಿಸೆಕ್, ಮಾರ್ಕ್ ಫಿಲಿಪ್ಪೋಸಿಸ್, ಮಾರ್ಸೆಲೋ ರಿಯೋಸ್(ಈತ ಯಾವ ಗ್ರ್ಯಾನ್ ಸ್ಲ್ಯಾಮ್ ಗೆಲ್ಲದಿದ್ದರೂ ಕೆಲಕಾಲ ನಂಬರ್ 1 ಆಗಿದ್ದ ಎಂಬುದನ್ನು ಮರೆಯಬೇಡಿ) ಮುಂತಾದವರನ್ನು ಸ್ಯಾಂಪ್ರಾಸ್ ಎದುರಿಸಬೇಕಾಗಿ ಬಂತು. ಅದರಲ್ಲೂ 1995&96ರ ಸುಮಾರಿಗೆ ಸ್ಯಾಂಪ್ರಾಸ್ ಉಚ್ಛ್ರಾಯ ಸ್ಥಿತಿಗೇರಿದಾಗ ಟಾಪ್ 10 ಆಟಗಾರರಾಗಿದ್ದ ಚಾಂಗ್, ಕಫೆಲ್ನಿಕೋವ್, ಇವಾನಿಸೆವಿಚ್, ಮಸ್ಟರ್, ಬೋರಿಸ್ ಬೆಕರ್, ಕ್ರಾಜಿಸೆಕ್, ಅಗಾಸಿ, ಎನ್‌ಕ್ವಿಸ್ಟ್ ಹಾಗೂ ಫೆರೇರಾ ಅವರಲ್ಲಿ 7 ಜನ “Hall of Fame” ಆಟಗಾರರಾಗಿದ್ದರು. ಇಂತಹವರ ನಡುವೆ ಸೆಣಸಾಡಿ 14 ಗ್ರ್ಯಾನ್‌ಸ್ಲ್ಯಾಮ್ ಗೆದ್ದ ಸ್ಯಾಂಪ್ರಾಸ್ ಎಲ್ಲಿ, ಫೆಡರರ್ ಎಲ್ಲಿ? ಆಂಡ್ರೆ ಮರ್ರೆ, ಆಂಡಿ ರಾಡಿಕ್, ಬ್ಲೇಕ್, ಲೇಟನ್ ಹೆವಿಟ್, ಮರಾಟ್ ಸಫಿನ್, ನಲ್ಬಾಂಡಿಯನ್, ಜೋಕೋವಿಚ್, ಮೆಂಫಿಸ್ ಇವರ್‍ಯಾವ ಮಹಾನ್ ಆಟಗಾರರು? ಇದ್ದಿದ್ದರಲ್ಲಿ ಗಟ್ಟಿಗನೆಂದರೆ ಮರಾಟ್ ಸಫಿನ್. ಆದರೆ ಸಫಿನ್ 6 ತಿಂಗಳು ಆಟವಾಡಿದರೆ 12 ತಿಂಗಳು ಗಾಯದಿಂದ ಮಲಗಿಕೊಳ್ಳುತ್ತಾನೆ. ಒಂದು ಪಂದ್ಯದಲ್ಲಿ ಎಚ್ಚೆತ್ತವನಂತೆ ಆಟವಾಡಿದರೆ, ಮರು ಪಂದ್ಯದಲ್ಲಿ ಜೀವವೇ ಇಲ್ಲದ ದೇಹದಂತೆ ಕೈಕಾಲು ಆಡಿಸದೆ ನಿಂತಿರುತ್ತಾನೆ. ಇನ್ನು ರಾಡಿಕ್‌ಗಂತೂ 3 ಸೆಟ್‌ಗಿಂತ ಜಾಸ್ತಿ ಹೊತ್ತು ಆಡುವುದಕ್ಕಾಗುವುದಿಲ್ಲ. ಮೂರು ಸೆಟ್ ಮುಗಿಯುವಷ್ಟರಲ್ಲಿ ಮುಚ್ಚಳ ತೆಗೆದಿಟ್ಟಿರುವ ಸೋಡಾ ಬಾಟಲಿಯಂತಾಗುತ್ತಾನೆ. ಇವರೆಲ್ಲರದ್ದೂ ಒಂದೇ ಕಥೆ-Here today, Gone tomorrow! ಇಂತಹವರಿಂದಾಗಿ ಫೆಡರರ್ ಮೂರು ವರ್ಷ, ವರ್ಷಕ್ಕೆ ಮೂರರಂತೆ ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆಲ್ಲಲು ಸಾಧ್ಯವಾಯಿತು. ಸ್ಯಾಂಪ್ರಾಸ್ ತನ್ನ 15 ವರ್ಷಗಳ ಕ್ರೀಡಾ ಜೀವನದಲ್ಲಿ ಒಂದು ವರ್ಷವೂ ಮೂರು ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆಲ್ಲಲಾಗಲಿಲ್ಲ, ಏಕೆಂದರೆ ಎದುರಾಳಿಗಳು ಅಂತಹ ಗಟ್ಟಿಗರಿದ್ದರು. ಕಳೆದ ವರ್ಷ ರಾಫೆಲ್ ನಡಾಲ್ ಎಂಬ ಕೋರ್ಟ್ ತುಂಬಾ ಓಡಾಡುವ ಒಬ್ಬ ಗಟ್ಟಿ ಎದುರಾಳಿ ಹುಟ್ಟಿದ ಕೂಡಲೇ ಸತತ ಮೂರು ಗ್ಲ್ಯಾನ್‌ಸ್ಲ್ಯಾಮ್‌ಗಳಲ್ಲಿ ಸೋತ ಫೆಡರರ್ ಗೊಳೋ ಎಂದು ಅಳುತ್ತಿದ್ದ. ಮೊನ್ನೆ ನಡೆದ ಫ್ರೆಂಚ್ ಓಪನ್‌ನಲ್ಲಿ ನಾಲ್ಕನೇ ಸುತ್ತಿನಲ್ಲಿ ಸೋಲದೆ ನಡಾಲ್ ಈ ವರ್ಷವೂ ಫೈನಲ್‌ಗೆ ಬಂದಿದ್ದರೆ ಫೆಡರರ ಕಥೆ ಏನಾಗುತಿತ್ತು?! ಸ್ಯಾಂಪ್ರಾಸ್ ಜತೆ ಸರಿಸುಮಾರು ಒಂದೇ ಅವಧಿಗೆ ವೃತ್ತಿಪರ ಟೆನಿಸ್‌ಗೆ ಕಾಲಿಟ್ಟ ಹಾಗೂ ಒಂದೇ ಅವಧಿಯಲ್ಲಿ Peakಗೇರಿದ ಅಗಾಸಿಯಂತಹ ಎದುರಾಳಿ ಕ್ರೀಡಾಜೀವನದ ಪ್ರಾರಂಭದಿಂದಲೂ ಫೆಡರರ್‌ಗೆ ಎದುರಾಗಿದ್ದರೆ ಇಷ್ಟೊಂದು ಗ್ರ್ಯಾನ್‌ಸ್ಲ್ಯಾಮ್‌ಗಳನ್ನು ಗೆಲ್ಲಲು ಸಾಧ್ಯವಾಗುತ್ತಿತ್ತೆ?

Let the debate continue..!!

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: