ಸೋಮನಾಥ ಚಟರ್ಜಿಗೆ ಕಿವಿ ಕೇಳಿಸುವುದಿಲ್ಲವಂತೆ! -The real face of communists

ಅಂದು ಗುಜರಾತ್ ಹಿಂಸಾಚಾರದ ವೇಳೆ ಹರಿದಿದ್ದೂ ಮುಸ್ಲಿಮರ ರಕ್ತವೇ, ಇಂದು ನಂದಿಗ್ರಾಮದಲ್ಲಿ ಹರಿಯುತ್ತಿರುವುದೂ ಹೆಚ್ಚಾಗಿ ಬಡ ಮುಸ್ಲಿಮರ ರಕ್ತವೇ! ಆದರೆ ಗುಜರಾತ್‌ನಲ್ಲಿ ತ್ರಿಶೂಲ ಹಿಡಿದಿದ್ದವರನ್ನು ರಾಕ್ಷಸರೆಂಬಂತೆ ಚಿತ್ರಿಸುವ ಕಾಂಗ್ರೆಸ್, ನಂದಿಗ್ರಾಮದಲ್ಲಿ ಗನ್ ಹಿಡಿದಿರುವವರು ಕಮ್ಯುನಿಸ್ಟರು ಎಂಬ ಕಾರಣಕ್ಕೆ ‘ಸೈದ್ಧಾಂತಿಕ ಹೇಡಿತನ” (Idelogica; Cowardice) ತೋರುತ್ತಿರುವುದೇಕೆ? ಸಾಚಾರ್ ಸಮಿತಿ ವರದಿಯನ್ನಿಟ್ಟುಕೊಂಡು ಮುಸ್ಲಿಮರ ಉದ್ಧಾರದ ಮಾತನಾಡುವ ಕಾಂಗ್ರೆಸ್, ಮುಸ್ಲಿಮರು ಹಾಗೂ ದಲಿತರೇ ಹೆಚ್ಚಾಗಿರುವ ನಂದಿಗ್ರಾಮವನ್ನೇ ಎಸ್‌ಇಝೆಡ್‌ಗೆ ನೀಡಿದ್ದೇಕೆ? ಕಣ್ಣೆದುರಿಗೇ ಪ್ರಳಯ ಸಂಭವಿಸುತ್ತಿದ್ದರೂ ಮಣ್ಣೊಳಗೆ ತಲೆಯನ್ನು ಹೂತುಕೊಂಡು ಕುಳಿತಿರುವುದೇಕೆ?
ಸೋಮನಾಥ ಚಟರ್ಜಿಗೆ ಕಿವಿ ಕೇಳಿಸುವುದಿಲ್ಲವಂತೆ!ಎಲ್ಲೆಲ್ಲಿ ಅನ್ಯಾಯ, ಅರಾಜಕತೆ, ದುರಾಡಳಿತ, ದೌರ್ಜನ್ಯ, ಬಡತನ, ನಿರುದ್ಯೋಗಗಳು ಇರುತ್ತವೋ ಅಲ್ಲೆಲ್ಲ ಕಮ್ಯುನಿಸಂ ಕೂಡ ಇರುತ್ತದೆ ಹಾಗೂ ಎಲ್ಲಿಲ್ಲಿ ಕಮ್ಯುನಿಸಂ ಇರುತ್ತದೋ ಅಲ್ಲೆಲ್ಲ ಅರಾಜಕತೆ, ಅನ್ಯಾಯ, ದುರಾಡಳಿತ, ದೌರ್ಜನ್ಯಗಳೂ ನಡೆಯುತ್ತಿರುತ್ತವೆ! ಈ ಸತ್ಯ ಅಮೆರಿಕದ ಅಧ್ಯಕ್ಷ ಹ್ಯಾರಿ ಎಸ್. ಟ್ರೂಮನ್‌ಗೆ  60ವರ್ಷ ಗಳ ಹಿಂದೆಯೇ ಅರ್ಥವಾಗಿತ್ತು. ಅದರ ಫಲವೇ Truman Doctrine.

ಅಂದರೆ 1947, ಮಾರ್ಚ್ 12ರಂದು ಅಮೆರಿಕದ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಟ್ರೂಮನ್,  “ಜಗತ್ತನ್ನು ದೌರ್ಜನ್ಯ ಹಾಗೂ ಸರ್ವಾಧಿಕಾರ ದಿಂದ ವಿಮೋಚನೆಗೊಳಿಸಬೇಕಾದರೆ ಕಮ್ಯುನಿಸಮ್‌ಗೆ ಕಡಿವಾಣ ಹಾಕಲೇಬೇಕು” ಎಂಬುದನ್ನು ವಿವರಿಸಿ ಹೇಳುತ್ತಾರೆ. ಒಂದು ವೇಳೆ, ಸೋವಿಯತ್ ಒಕ್ಕೂಟಕ್ಕೆ ಸಮೀಪದಲ್ಲಿರುವ ಗ್ರೀಸ್ ಹಾಗೂ ಟರ್ಕಿಗಳಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಎರಡನೇ ಮಹಾಯುದ್ಧ ದಲ್ಲಿ ಅನುಭವಿಸಿರುವ ಹಾನಿಯಿಂದ ಚೇತರಿಸಿಕೊಳ್ಳಲು ಅವಕಾಶ ಮಾಡಿಕೊಡದಿದ್ದರೆ ಆ ರಾಷ್ಟ್ರಗಳು ಕಮ್ಯುನಿಸ್ಟರ ಕಪಿಮುಷ್ಟಿಗೆ ಸಿಲುಕುವುದು ಖಚಿತ ಎನ್ನುತ್ತಾರೆ.

ಟ್ರೂಮನ್ ಅವರ ಮನವಿಯನ್ನು ಪುರಸ್ಕರಿಸಿದ ಅಮೆರಿಕದ ಸಂಸತ್ತು ೪ ದಶಲಕ್ಷ ಡಾಲರ್ ನೆರವು ನೀಡಲು ಒಪ್ಪಿಗೆ ನೀಡುತ್ತದೆ. ಈ ಸಹಾಯದ ಫಲವಾಗಿ ಗ್ರೀಸ್ ಹಾಗೂ ಟರ್ಕಿಗಳು ಸಂಕಷ್ಟದಿಂದ ಪಾರಾಗುವುದಲ್ಲದೆ ‘ನೇಟೋ”ದ ಸದಸ್ಯರಾಗುವ ಮೂಲಕ ಕಮ್ಯುನಿಸ್ಟರ ಆಕ್ರಮಣವನ್ನು ಹಿಮ್ಮೆಟ್ಟಿಸಿ ಪ್ರಜಾತಂತ್ರ ರಾಷ್ಟ್ರಗಳಾಗಿ ಹೊರಹೊಮ್ಮುತ್ತವೆ. ಇಂದು ಜಗತ್ತಿನಲ್ಲಿಯೇ ಅತ್ಯಂತ ಪ್ರಗತಿಪರ ಇಸ್ಲಾಮಿಕ್ ರಾಷ್ಟ್ರವೆಂದರೆ ಟರ್ಕಿ. ಅಷ್ಟೇ ಅಲ್ಲ, 1947, ಜೂನ್ 5ರಂದು ಅಮೆರಿಕದ ವಿದೇಶಾಂಗ ಸಚಿವ ಜಾರ್ಜ್ ಸಿ. ಮಾರ್ಷಲ್ ಅವರು ಎರಡನೇ ಮಹಾಯುದ್ಧದಿಂದಾಗಿ ಸ್ಮಶಾನದಂತಾಗಿದ್ದ ಯುರೋಪ್ ಖಂಡದ 16ರಾಷ್ಟ್ರಗಳನ್ನು rebuildಮಾಡುವುದಕ್ಕಾಗಿ 13ಶತಕೋಟಿ ಡಾಲರ್ ವೆಚ್ಚದ ಯೋಜನೆಯೊಂದನ್ನು ರೂಪಿಸುತ್ತಾರೆ. ಅದೇ ‘ಮಾರ್ಷಲ್ ಪ್ಲಾನ್”.

ಅಮೆರಿಕದ ಸಹಾಯದಿಂದಾಗಿ ನಾಲ್ಕು ವರ್ಷಗಳಲ್ಲಿ ಇಡೀ ಯುರೋಪ್ ಖಂಡವೇ ಚೇತರಿಸಿಕೊಳ್ಳುತ್ತದೆ. ಇತ್ತ ಜನರಲ್ ಮ್ಯಾಕ್ ಆರ್ಥರ್ ಅವರನ್ನು ಕಳುಹಿಸಿದ ಅಮೆರಿಕ ತಾನೇ ನಾಶಪಡಿಸಿದ್ದ  ಜಪಾನನ್ನೂ ಪುನರುಜ್ಜೀವಗೊಳಿಸಲು ಮುಂದಾಗುತ್ತದೆ. ದಕ್ಷಿಣ ಕೊರಿಯಾವನ್ನು ಮೇಲೆತ್ತಿದ್ದೂ ಅಮೆರಿಕವೇ. ಅಷ್ಟೇಕೆ, ಕಮ್ಯುನಿಸ್ಟ್ ಚೀನಾ ಕೂಡ ಅಮೋಘ ಆರ್ಥಿಕ ಪ್ರಗತಿಯನ್ನು ಕಾಣಲಾರಂಭಿಸಿದ್ದು ೧೯೭೨ರಲ್ಲಿ ಅಮೆರಿಕದ ಅಧ್ಯಕ್ಷ ನಿಕ್ಸನ್ ಜತೆ  ‘ಶಾಂಘೈ ಡಿಕ್ಲರೇಶನ್” ಮಾಡಿಕೊಂಡು ಅಮೆ ರಿಕದ ತಂತ್ರಜ್ಞಾನ ಹಾಗೂ ಬಂಡವಾಳ ಹರಿದು ಬರಲು ಆರಂಭಿಸಿದ ನಂತರವೇ.

ಈಗ ಹೇಳಿ, ಅಮೆರಿಕದ ಸಹಾಯ ಪಡೆದ ಪಶ್ಚಿಮ ಜರ್ಮನಿ ಹಾಗೂ ಇತರ ಯುರೋಪ್ ರಾಷ್ಟ್ರಗಳು, ಟರ್ಕಿ, ದಕ್ಷಿಣ ಕೊರಿಯಾ, ಜಪಾನ್, ತೈವಾನ್‌ಗಳು ಆರ್ಥಿಕವಾಗಿ ವಿಶ್ವದ ಬಲಿಷ್ಠ ರಾಷ್ಟ್ರಗಳ ಗುಂಪಿಗೆ ಸೇರಿದ್ದರೆ, ಸೋವಿಯತ್ ಒಕ್ಕೂಟ ಜತೆ ಸೇರಿ ಕಮ್ಯುನಿಸಮ್ಮನ್ನು ಅಪ್ಪಿಕೊಂಡ ಉತ್ತರ ಕೊರಿಯಾ, ಪೆರು, ಕಾಂಬೋಡಿಯಾ, ಪೂರ್ವ ಜರ್ಮನಿ, ವಿಯೆಟ್ನಾಂ, ಕ್ಯೂಬಾಗಳು ಯಾವ ಸ್ಥಾನದಲ್ಲಿವೆ? ಅಮೆರಿಕ ದ್ವೇಷವನ್ನೇ ಧ್ಯೇಯವಾಗಿಟ್ಟುಕೊಂಡಿರುವ ಈ ಒಣ ಸಿದ್ಧಾಂತ ವಾದಿ ರಾಷ್ಟ್ರಗಳಲ್ಲಿ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲ. ಅತಿ ಹೆಚ್ಚು ದೌರ್ಜನ್ಯಗಳು ನಡೆಯುತ್ತಿರುವುದೇ ಈ ರಾಷ್ಟ್ರ ಗಳಲ್ಲಿ. ಮಾಧ್ಯಮ ಸ್ವಾತಂತ್ರ್ಯವಾಗಲಿ, ಜನರ ಧ್ವನಿಗೆ ಬೆಲೆಯಾಗಲಿ ಈ ರಾಷ್ಟ್ರಗಳಲಿಲ್ಲ. ಅಷ್ಟಕ್ಕೂ, ಕಮ್ಯುನಿಸಂ ಅಂದರೆ ಕೂಡ ಇನ್ನೊಂದು ವಿಧದ ದೌರ್ಜನ್ಯವೇ. ಈಗ ನಮಗೂ ಅದರ ಅರಿವಾಗುತ್ತಿದೆಯಲ್ಲವೆ?

“ಕಳೆದ ಒಂದು ವಾರದಲ್ಲಿ ನಂದಿಗ್ರಾಮದಲ್ಲಿ 600ಕ್ಕೂ ಹೆಚ್ಚು ದಲಿತ ಹಿಂದೂಗಳು ಹಾಗೂ ಮುಸಲ್ಮಾನರನ್ನು ಹತ್ಯೆಗೈಯ್ಯಲಾಗಿದೆ” ಎಂದು ದಲಿತ ಹೋರಾಟಗಾರ ಡಾ. ಉದಿತ್ ರಾಜ್ ಹೇಳಿದ್ದಾರೆ. ಈ ಮಾತನ್ನು ತಳ್ಳಿಹಾಕುವುದೂ ಸಾಧ್ಯವಿಲ್ಲ. ಏಕೆಂದರೆ 1700ರಷ್ಟಿದ್ದ ಶಸ್ತ್ರಸಜ್ಜಿತ ಸಿಪಿಎಂ ಕಾರ್ಯಕರ್ತರು Human shield ರಚಿಸುವ ಮೂಲಕ ನಂದಿಗ್ರಾಮಕ್ಕೆ ಕಾಲಿಡಲು ಮಾಧ್ಯಮಗಳಿಗಷ್ಟೇ ಅಲ್ಲ, ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಗೂ ಅವಕಾಶ ನೀಡಿರಲಿಲ್ಲ. ಅಂದರೆ ವಸ್ತುಸ್ಥಿತಿ ಎಷ್ಟು ಭೀಕರವಾಗಿದ್ದಿರಬಹುದು? ಐದು ಸಾವಿರ ಸುತ್ತು ಗುಂಡು ಹಾರಿಸಲಾಗಿದೆ ಎಂದಾದರೆ ಅದೆಷ್ಟು ಜನರು ಸತ್ತಿರಬಹುದು? ಸತ್ತವರ ಅಧಿಕೃತ ಸಂಖ್ಯೆಯೇ 50ದಾಟಿದೆ ಎಂದಾದರೆ ನೈಜ ಸಂಖ್ಯೆ ಇನ್ನೆಷ್ಟಿದ್ದೀತು?

ಇಂತಹ ಘೋರ ಅನ್ಯಾಯ ಕಣ್ಣೆದುರಿಗೇ ನಡೆಯುತ್ತಿ ದ್ದರೂ ಲೋಕಸಭೆಯ ಸ್ಪೀಕರ್ ಹಾಗೂ ಸಿಪಿಎಂನ ಲೋಕಸಭಾ ಸದಸ್ಯ ಸೋಮನಾಥ ಚಟರ್ಜಿಯವರು  “I cannot hear” ಅಂತ ಉದ್ಧಟತನದಿಂದ ಉತ್ತರಿಸಿದ್ದಾರೆ! ನಂದಿಗ್ರಾಮದಲ್ಲಿ ನೊಂದವರೂ ಕೂಡ ಈ ದೇಶದ ನಾಗರಿಕರೇ ಅಲ್ಲವೆ ಎಂದು ಮಾಧ್ಯಮಗಳು ಪ್ರಶ್ನಿಸಿದರೆ  “I cannot listen” ಅಂತ ಉತ್ತರಿಸುತ್ತಾರೆಂದರೆ ಇವರ ನಿಜರೂಪ ಯಾವುದೆಂದು ಅರ್ಥವಾಗುವುದಿಲ್ಲವೆ? ಅಷ್ಟಕ್ಕೂ “ನನಗೆ ಕೇಳಿಸುತ್ತಿಲ್ಲ”  ಎನ್ನಲು ಸೋಮನಾಥ ಚಟರ್ಜಿಯವರಿಗೇನು ಕಿವಿ ಕೇಳಿಸುವುದಿಲ್ಲವೆ? ಐದು ವರ್ಷಗಳ ಹಿಂದೆ ಗುಜರಾತ್‌ನಲ್ಲಿ ನಡೆದ ಕೋಮು ಹಿಂಸಾಚಾರವನ್ನು ಇಂದಿಗೂ ಕೆದಕುವ ಅವರ ಕಣ್ಣಿಗೆ ನಂದಿಗ್ರಾಮದಲ್ಲಿ ಇನ್ನೂ ಹಸಿಯಾಗಿರುವ ನೆತ್ತರ ಕೋಡಿ ಕಾಣಿಸುತ್ತಿಲ್ಲವೆ?

ಲೋಕಸಭೆಯಲ್ಲಿ ಗದ್ದಲವೆಬ್ಬಿಸುವ ಎಂ.ಪಿ. ಗಳಿಗೆ  ‘ಸ್ಕೂಲ್ ಹೆಡ್ ಮಾಸ್ಟರ್” ಥರಾ ಕಿವಿ ಹಿಂಡಲು ಪ್ರಯತ್ನಿಸುವ ಚಟರ್ಜಿಯವರಲ್ಲಿ ಎಂತಹ ನೈತಿಕತೆ ಇದೆ ಎಂಬುದು ಇದರಿಂದಲೇ ಗೊತ್ತಾಗುವುದಿಲ್ಲವೆ? ಇತ್ತ “ನಂದಿಗ್ರಾಮವನ್ನು ಮತ್ತೆ ವಶಪಡಿಸಿಕೊಂಡಿದ್ದೇವೆ” ಎನ್ನಲು ನಂದಿಗ್ರಾಮವೇನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ [^] ಬುದ್ಧದೇವ ಭಟ್ಟಾಚಾರ್ಜಿಯವರ ಅಪ್ಪನ ಆಸ್ತಿಯೇ? ಅಥವಾ  ಸಿಪಿಎಂನ ಸ್ವತ್ತೇ?  “ತೃಣಮೂಲ ಕಾಂಗ್ರೆಸ್ ಮಾವೋವಾದಿಗಳ ಜತೆ ಕೈಜೋಡಿಸಿತ್ತು”ಎನ್ನುತ್ತಿರುವ ಹಾಗೂ “ಮಾವೋವಾದಿಗಳೇ ಈ ದೇಶಕ್ಕೆ ಅತಿದೊಡ್ಡ ಅಪಾಯ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರೇ ಹೇಳಿದ್ದಾರೆ” ಎಂದು ಕಗ್ಗೊಲೆಯನ್ನೂ ಸಮರ್ಥಿಸಿ ಕೊಳ್ಳುತ್ತಿರುವ ಸಿಪಿಎಂ ನಾಯಕ ಪ್ರಕಾಶ್ ಕಾರಟ್‌ಗೆ ನಾಚಿಕೆ ಅನ್ನೋದೇ ಇಲ್ಲವೆ?

ನಾವೆಲ್ಲರೂ ಸುಭಾಷ್ ಚಂದ್ರ ಬೋಸ್, ಚಂದ್ರಶೇಖರ ಆಜಾದ್, ತಿಲಕ್, ಭಗತ್‌ಸಿಂಗ್ ಅವರನ್ನು ಆರಾಧಿಸಿದರೆ ನಮ್ಮ ಭಾರತೀಯ ಕಮ್ಯುನಿಸ್ಟರು ಆರಾಧಿಸುವುದು ಲೆನಿನ್, ಸ್ಟಾಲಿನ್‌ಗಳನ್ನ, ಭಾರತದ ಮೇಲೆ ಆಕ್ರಮಣ ಮಾಡಿದ ಮಾವೋ ಝೆಡಾಂಗ್‌ನನ್ನ. ಹಾಗಾಗಿಯೇ 1962ರಲ್ಲಿ ಚೀನಾ ಆಕ್ರಮಣ ಮಾಡಿದಾಗ ಕಮ್ಯುನಿಸ್ಟರು ಮಾವೋಗೆ ನಿಷ್ಠೆ ವ್ಯಕ್ತಪಡಿಸಿದ್ದರು. ಮಾವೋ ನಿಂದ ಪ್ರೇರಿತರಾದವರೇ ಮಾವೋವಾದಿಗಳು. ಅಂತಹ ಮಾವೋವಾದಿಗಳನ್ನೇ ದೂರುತ್ತಿರುವ ಪ್ರಕಾಶ್ ಕಾರಟ್ ಯಾರನ್ನು ಮೂರ್ಖರನ್ನಾಗಿಸಲು ಯತ್ನಿಸುತ್ತಿದ್ದಾರೆ?

ಇದೇ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿ ಅವರು 2006, ಜುಲೈ 2ರಂದು ನೇಪಾಳದ ಮಾವೋವಾದಿ ನಾಯಕ ಪ್ರಚಂಡ, ಬಾಬುರಾಮ್ ಭಟ್ಟಾರಾಯ್, ಮಹಾರ ಅವರನ್ನು ಕಠ್ಮಂಡುವಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ಭಾರತಕ್ಕೆ ಭೇಟಿ ನೀಡುವಂತೆ ಪ್ರಚಂಡ ಅವರಿಗೆ ಆಹ್ವಾನಿಸಿದ್ದು ಯಾರಿಗೂ ಗೊತ್ತಿಲ್ಲವೆ? ಅದೇ ಮಾವೋ ವಾದಿಗಳು ಭಾರತಕ್ಕೂ ಅತಿದೊಡ್ಡ ಅಪಾಯವಾಗಿ ಪರಿಣಮಿಸಿದ್ದಾರೆ ಎಂಬ ಸತ್ಯ ಆಗ ಗೊತ್ತಿರಲಿಲ್ಲವೆ? ಪ್ರಚಂಡ ಅವರನ್ನು ಭಾರತಕ್ಕೆ ಆಹ್ವಾನಿಸುವಾಗ, ಮಾತುಕತೆ ನಡೆಸಿದಾಗ ದೇಶ ನೆನಪಾಗಲಿಲ್ಲವೆ? ‘ಕ್ವಿಟ್ ಇಂಡಿಯಾ” ಚಳವಳಿಯನ್ನೇ ವಿರೋಧಿಸಿದ್ದ, ಸುಭಾಷ್ ಚಂದ್ರ ಬೋಸ್ ಅವರನ್ನು ಜಪಾನಿ ಸೇನಾ ನಾಯಕ ತೋಜೋನನ್ನು ಹೊರುತ್ತಿರುವ ಕತ್ತೆಯಂತೆ ಚಿತ್ರಿಸಿದ್ದ ಕಮ್ಯುನಿಸ್ಟರ ದೇಶ ನಿಷ್ಠೆ ಎಷ್ಟು ಎಂಬುದು ನಮಗೆ ಗೊತ್ತಿಲ್ಲವೆ?

ಜಾರ್ಖಂಡ್ ಹಾಗೂ ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ನಡೆಸುತ್ತಿರುವ ಹತ್ಯಾಕಾಂಡದ ಬಗ್ಗೆ ಕಮ್ಯುನಿಸ್ಟರು ಒಮ್ಮೆಯಾದರೂ ಸೊಲ್ಲೆತ್ತಿದ್ದಾರೆಯೇ? ಅದಿರಲಿ ಅರುಂಧತಿ ರಾಯ್, ಅಂಗನಾ ಚಟರ್ಜಿ, ತೀಸ್ತಾ ಸೆತಲ್ವಾಡ್‌ಗಳು ಈಗ ಎಲ್ಲಿದ್ದಾರೆ? ಪ್ರಜಾತಾಂತ್ರಿಕವಾಗಿ ಬಿಜೆಪಿ ಸರಕಾರ ರಚನೆಯಾಗುವುದನ್ನು ತಡೆಯುವ ಸಲುವಾಗಿ ರಾಜಭವನಕ್ಕೆ ‘ದಂಡ”ಯಾತ್ರೆ ನಡೆಸಿದ್ದ ನಮ್ಮ ನಂಬರ್ 5, 6ಜ್ಞಾನಪೀಠಿಗಳು ಎಲ್ಲಿ ಕಾಣೆಯಾಗಿದ್ದಾರೆ? ಸತ್ಯಶೋಧನಾ ಸಮಿತಿಯವರು ಎಲ್ಲಿ ಅಡಗಿ ಕುಳಿತಿದ್ದಾರೆ? ಇನ್ನು ಗುಜರಾತ್ ಹಿಂಸಾಚಾರವನ್ನು ಐದು ವರ್ಷಗಳ ನಂತರವೂ ಕೆದಕುತ್ತಿರುವ ತೆಹಲ್ಕಾದವರು ನಂದಿಗ್ರಾಮದ ಬಗ್ಗೆಯೂ ಒಂದು ‘ಸ್ಟಿಂಗ್ ಆಪರೇಶನ್” ನಡೆಸಿಯಾರೆ? ಮೋದಿಯನ್ನು ಬಂಧಿಸಬೇಕೆಂದು ಪ್ರಧಾನಿ [^] ನಿವಾಸಕ್ಕೆ ತೆರಳಿದ್ದ ಲಾಲು ಪ್ರಸಾದ್ ಯಾದವ್ ಅವರ ಧ್ವನಿ ಈಗೇಕೆ ಕೇಳುತ್ತಿಲ್ಲ? ಬೃಂದಾ ಕಾರಟ್ ಹಾಗೂ ಆಕೆಯ ಅಕ್ಕನ ಗಂಡ ಪ್ರಣಯ್ ರಾಯ್(ಎನ್‌ಡಿಟೀವಿ) ಈಗ ಏನು ಮಾಡುತ್ತಿದ್ದಾರೆ? ಇಂತಹ ಇಬ್ಬಂದಿ ನಿಲುವಿಗೆ ಕೊನೆಯೇ ಇಲ್ಲವೆ?

ಎಸ್‌ಇಝೆಡ್‌ಗಳ ವಿರುದ್ಧ ಚಳವಳಿ ರೂಪಿಸುವುದಾಗಿ ನಮ್ಮ ರಾಜ್ಯ ಕಮ್ಯುನಿಸ್ಟ್ ನಾಯಕರು ಬೊಬ್ಬೆ ಹಾಕುತ್ತಿದ್ದಾರೆ. ದೇಶಾದ್ಯಂತ ‘ಲ್ಯಾಂಡ್ ಸ್ಟ್ರಗಲ್” ಮಾಡುವುದಾಗಿ ಪ್ರಕಾಶ್ ಕಾರಟ್ ಕೂಡ ಹೇಳುತ್ತಿದ್ದಾರೆ. ಆದರೆ ಇದೇ ಕಮುನಿಸ್ಟರು ಇಂಡೋನೇಷ್ಯಾದ ‘ಸಲೀಂ ಗ್ರೂಪ್”ಗೆ ನಂದಿಗ್ರಾಮವನ್ನು ನೀಡಿದ್ದು ಎಸ್‌ಇಝೆಡ್ ಮಾಡುವುದಕ್ಕೇ ಅಲ್ಲವೆ? ಇವತ್ತು ನಂದಿಗ್ರಾಮದಲ್ಲಿ ನೆತ್ತರ ಕೋಡಿ ಹರಿಯುತ್ತಿರುವುದು ಎಸ್‌ಇಝೆಡ್ ಸ್ಥಾಪಿಸಲು ಮುಂದಾಗಿದ್ದರಿಂದಲೇ ಅಲ್ವಾ? ಮಾರ್ಚ್ 14ರಂದು ನಂದಿಗ್ರಾಮದಲ್ಲಿ ನಡೆದ ಪೊಲೀಸರ ಗೋಲಿಬಾರ್‌ನಲ್ಲಿ ಸತ್ತವರಿಗೆ ಇನ್ನೂ ಪರಿಹಾರ ನೀಡಿಲ್ಲ ಎಂದರೆ ನಂಬುತ್ತೀರಾ? ಇಂತಹ ವ್ಯಕ್ತಿಗಳು ನಮಗೆ ಪ್ರಜಾಪ್ರಭುತ್ವದ ಬಗ್ಗೆ, ಸಮಾನತೆಯ ಬಗ್ಗೆ ಪಾಠ ಹೇಳಿ ಕೊಡುತ್ತಿದ್ದಾರೆಂದರೆ ಅದೆಂತಹ ವಿಪರ್ಯಾಸ?!

2002ರಲ್ಲಿ ಗುಜರಾತ್ ಕೋಮು ಹಿಂಸಾಚಾರ ಭುಗಿಲೆದ್ದಾಗ ಮಾಧ್ಯಮಗಳು ಅದನ್ನು ‘Live telecast” ಮಾಡಿದ್ದವು. ಆದರೆ ಸಿಪಿಎಂ ಗೂಂಡಾಗಳು ನಂದಿಗ್ರಾಮಕ್ಕೆ ಕಾಲಿಡುವುದಕ್ಕೂ ಮಾಧ್ಯಮಗಳಿಗೆ ಅವಕಾಶ ನೀಡಲಿಲ್ಲ. ಪೆಟ್ಟು ಕೊಟ್ಟು ಕಳುಹಿಸಿದರು. ನಂದಿಗ್ರಾಮದಲ್ಲಿ ‘ಯುದ್ಧದ ವಾತಾವರಣ” ನಿರ್ಮಾಣವಾಗಿದೆ ಎಂದು ಹೇಳಿದ ರಾಜ್ಯಪಾಲ ಗೋಪಾಲ್‌ಕೃಷ್ಣ  ಗಾಂಧಿಯವರ ಮೇಲೆಯೇ ಟೀಕಾಪ್ರಹಾರ ನಡೆಸಿದರು. ಅಂದು ವಾಜಪೇಯಿಯವರು ‘ರಾಜಧರ್ಮ” ಪಾಲಿಸು ಎಂದು ನರೇಂದ್ರ ಮೋದಿಯವರಿಗೆ ಕಟುವಾಗಿ ಹೇಳುವ ಕಾರ್ಯವನ್ನಾದರೂ ಮಾಡಿದ್ದರು. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರೇಕೆ ಬಾಯಿ ಬಿಡುತ್ತಿಲ್ಲ?

ಅಂದು ಗುಜರಾತ್ ಹಿಂಸಾಚಾರದ ವೇಳೆ ಹರಿದಿದ್ದೂ ಮುಸ್ಲಿಮರ ರಕ್ತವೇ, ಇಂದು ನಂದಿಗ್ರಾಮದಲ್ಲಿ ಹರಿಯುತ್ತಿರುವುದೂ ಹೆಚ್ಚಾಗಿ ಬಡ ಮುಸ್ಲಿಮರ ರಕ್ತವೇ! ಆದರೆ ಗುಜರಾತ್‌ನಲ್ಲಿ ತ್ರಿಶೂಲ ಹಿಡಿದಿದ್ದವರನ್ನು ರಾಕ್ಷಸರೆಂಬಂತೆ ಚಿತ್ರಿಸುವ ಕಾಂಗ್ರೆಸ್, ನಂದಿಗ್ರಾಮದಲ್ಲಿ ಗನ್ ಹಿಡಿದಿರುವವರು ಕಮ್ಯುನಿಸ್ಟರು ಎಂಬ ಕಾರಣಕ್ಕೆ ‘ಸೈದ್ಧಾಂತಿಕ ಹೇಡಿತನ” (Idelogica; Cowardice) ತೋರುತ್ತಿರುವುದೇಕೆ? ಸಾಚಾರ್ ಸಮಿತಿ ವರದಿಯನ್ನಿಟ್ಟುಕೊಂಡು ಮುಸ್ಲಿಮರ ಉದ್ಧಾರದ ಮಾತನಾಡುವ ಕಾಂಗ್ರೆಸ್, ಮುಸ್ಲಿಮರು ಹಾಗೂ ದಲಿತರೇ ಹೆಚ್ಚಾಗಿರುವ ನಂದಿಗ್ರಾಮವನ್ನೇ ಎಸ್‌ಇಝೆಡ್‌ಗೆ ನೀಡಿದ್ದೇಕೆ? ಕಣ್ಣೆದುರಿಗೇ ಪ್ರಳಯ ಸಂಭವಿಸುತ್ತಿದ್ದರೂ ಮಣ್ಣೊಳಗೆ ತಲೆಯನ್ನು ಹೂತುಕೊಂಡು ಕುಳಿತಿರುವುದೇಕೆ? ಇಂತಹ ‘ಆಸ್ಟ್ರಿಚ್ ಮೆಂಟಾಲಿಟಿ”ಯನ್ನು, Ideological impotenceಅನ್ನು ಬಿಡುವುದು ಯಾವಾಗ?

ಗುಜರಾತ್ ಹಿಂಸಾಚಾರದ ವೇಳೆ 160ಮಂದಿ ಹಿಂದೂಗಳೂ ಗೋಲಿ ಬಾರ್‌ನಲ್ಲಿ ಸತ್ತಿದ್ದರು. ಆದರೆ ನಂದಿಗ್ರಾಮದಲ್ಲಿ ಸಿಪಿಎಂ ರೈತರ ಮೇಲೆಯೇ ಗೋಲಿಬಾರ್ [^] ಮಾಡಿಸಿತು. ಇಷ್ಟಾಗಿಯೂ  ‘ಅಭಿವೃದ್ಧಿ” ಹೆಸರಿನಲ್ಲಿ ತಮ್ಮ  ದೌರ್ಜನ್ಯವನ್ನೂ ಸಮರ್ಥಿಸಿಕೊಳ್ಳುತ್ತಿರುವ ಇವರು, ಅದೇ ‘ಅಭಿವೃದ್ಧಿ ಮಂತ್ರ”ವನ್ನಿಟ್ಟುಕೊಂಡು ಚುನಾವಣೆಗೆ ಮುಂದಾಗಿರುವ ನರೇಂದ್ರ ಮೋದಿಯವರನ್ನು ಐದು ವರ್ಷಗಳ ಹಿಂದಿನ ಹಳೆಯ ಗಾಯವನ್ನು ಕೆದಕಿ ಟೀಕಿಸುತ್ತಿರುವುದೇಕೆ? ಗುಜರಾತ್ ಹಿಂಸಾಚಾರದ ಬಗ್ಗೆ ‘ನಾನಾವತಿ” ಸಮಿತಿ ವಿಚಾರಣೆ ನಡೆಸುತ್ತಿರುವಾಗಲೇ ‘ಮುಖರ್ಜಿ ಆಯೋಗ”ವನ್ನು ರಚಿಸಿದ ಇವರು, ನಂದಿಗ್ರಾಮದಲ್ಲಿ ನಡೆದಿದ್ದು ರಾಜ್ಯವೊಂದರ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಘಟನೆ, ಅದನ್ನು ಸಂಸತ್ತಿನಲ್ಲಿ ಚರ್ಚಿಸುವ ಅಗತ್ಯವಿಲ್ಲ ಎಂದು ಸಮರ್ಥನೆ ನೀಡುತ್ತಿದ್ದಾರೆ! ಅದಕ್ಕಾಗಿ ಸೋಮನಾಥ ಚಟರ್ಜಿಯವರು ಸರ್ವಪಕ್ಷ ಸಭೆ ಕರೆದು ಕಳ್ಳಬೆಕ್ಕಿನಂತೆ ವಿಷಯವನ್ನೇ ಮರೆಮಾಚಲು ಯತ್ನಿಸಿದ್ದಾರೆ.

ಇವರೆಂತಹ ಲಜ್ಜೆಗೇಡಿಗಳೆಂದರೆ, ಹಿಂದೂ ಯುವತಿಯನ್ನು ಪ್ರೇಮ ವಿವಾಹವಾಗಿದ್ದ  ಮುಸ್ಲಿಮ್ ಯುವಕ ರಿಜ್ವಾನುರ್ ಅವರ ಕೊಲೆಯ ಆರೋಪಿ ಅಶೋಕ್ ತೋಡಿಯವರನ್ನು ರಕ್ಷಿಸಲು ಯತ್ನಿಸಿ ಹೈಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಕಮ್ಯುನಿಸ್ಟರ ಅಲ್ಪಸಂಖ್ಯಾತ ಪ್ರೇಮ ಎಂಥದ್ದು ಎಂಬುದು ಇದರಿಂದ ತಿಳಿಯುವುದಿಲ್ಲವೆ? ಇರಾಕ್ ಮೇಲೆ ಅಮೆರಿಕ ಮಾಡಿದ ಯುದ್ಧವನ್ನು ಟೀಕಿಸುವ, ಆ ರಾಷ್ಟ್ರದೊಂದಿಗೆ ಯಾವ ಸಂಬಂಧವನ್ನೂ ಇಟ್ಟು ಕೊಳ್ಳಬಾರದು ಎಂದು ನೀತಿ ಪಾಠ ಹೇಳುವ ಕಮ್ಯುನಿಸ್ಟರು, ನಂದಿಗ್ರಾಮದಲ್ಲಿ ಮಾಡಿದ್ದೇನು? ಬಡ ಮುಸ್ಲಿಮ್ ಹಾಗೂ ದಲಿತರ ಹತ್ಯೆಯನ್ನೇ ಅಲ್ಲವೆ?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: