ಸ್ವಿಸ್ ಹೆಸರೆತ್ತಿದರೆ ಕಾಂಗ್ರೆಸ್‌ಗೇಕೆ ಹೆಗಲು ಮುಟ್ಟಿಕೊಳ್ಳುವ ದಿಗಿಲು?

LOTUS-POTUS!

ಹಾಗೆಂದರೆ ಈಗಿನ ತಲೆಮಾರಿನವರಿಗೆ ಅರ್ಥವಾಗೊಲ್ಲ ಬಿಡಿ. ಇಂದಿರಾ ಗಾಂಧಿಯವರು ಪ್ರಧಾನಿ ಯಾಗಿದ್ದ ಕಾಲದಲ್ಲಿ ಪತ್ರಕರ್ತರು ‘ಲೋಟಸ್-ಪೋಟಸ್’ ಎಂದು ಜೋಕ್ ಮಾಡುತ್ತಿದ್ದರು. ಆ ಜೋಕಿಗೆ ಕಾಲು-ಬಾಲ ಎಲ್ಲ ಸೇರಿಕೊಂಡು ಜಾನಪದ ಕಥೆಗಳಂಥ ಸ್ಟೋರಿಗಳು ಸೃಷ್ಟಿ ಯಾಗಿದ್ದವು. ಅವತ್ತು ಸಂಜಯ್ ಗಾಂಧಿಯವರ ಹೆಲಿಕಾಪ್ಟರ್ ದುರಂತಕ್ಕೀಡಾದಾಗ, ಘಟನೆ ನಡೆದ ಸ್ಥಳಕ್ಕೆ ಓಡಿಬಂದ ಇಂದಿರಾ ಗಾಂಧಿಯವರು ಮಗನ ಸಾವಿಗೆ ದುಃಖಿಸುವ ಬದಲು ಸಂಜಯ್ ಕೈಯಲ್ಲಿದ್ದ ವಾಚ್ ಹುಡುಕುತ್ತಿದ್ದರಂತೆ! ಅದರೊಳಗೆ ಸ್ವಿಸ್ ಬ್ಯಾಂಕ್‌ನಲ್ಲಿಟ್ಟಿರುವ ಕಳ್ಳ ಹಣದ ಕೋಡ್ ಇತ್ತಂತೆ. ಆ ಕೋಡ್ ಮೊದಲ ಮಗ ರಾಜೀವ್(LOTUS) ಗಾಂಧಿಯವರ ಹೆಸರೇ ಆಗಿತ್ತಂತೆ!
ಇಂತಹ ಊಹಾಪೋಹಗಳು ಆ ಕಾಲದಲ್ಲಿ ಆಗಾಗ್ಗೆ ಕೇಳಿ ಬರುತ್ತಿದ್ದವು.

ಇತ್ತ ಅಪ್ಪ ನೆಹರು ಅವರಂತೆಯೇ ಸೋವಿಯತ್ ರಷ್ಯಾವನ್ನು ಓಲೈಸಲು ಪ್ರಯತ್ನಿಸುತ್ತಿದ್ದ ಇಂದಿರಾಗಾಂಧಿಯವರು, ಯಾವುದೇ ಸಮಸ್ಯೆ ಎದುರಾದರೂ Invisible Forces’, “Foreign Hand’ ಅಂತ ಯಾವಾಗಲೂ ಯಾರತ್ತಲೋ ಬೆರಳು ತೋರುತ್ತಿದ್ದರು, ಯಾರನ್ನೋ ದೂರುತ್ತಿದ್ದರು. ಅಂದರೆ ನಮ್ಮೆಲ್ಲ ಸಮಸ್ಯೆಗಳಿಗೂ ಅಮೆರಿಕವೇ (POTUS-President of the United States)  ಕಾರಣ, ಅಮೆರಿಕದ ಗುಪ್ತಚರ ಸಂಸ್ಥೆ  CIA ಕಾರಣ (Invisible hand) ಎಂಬುದು ಅವರ ಪರೋಕ್ಷ ಆರೋಪವಾಗಿರುತ್ತಿತ್ತು. ಅಮೆರಿಕದ ಸಿಐಎ ಅಧ್ಯಕ್ಷ ರಿಚರ್ಡ್ ಹೆಲ್ಮ್ಸ್‌ಗೆ ಇದನ್ನು ಕೇಳಿ ಕೇಳಿ ಎಷ್ಟು ಜುಗುಪ್ಸೆ, ಕಸಿವಿಸಿಯಾಯಿತೆಂದರೆ, ‘ಭಾರತದಲ್ಲಿ ಭೂಕಂಪ ಆದರೂ, ಸುಂಟರಗಾಳಿ ಬೀಸಿದರೂ ಅಮೆರಿಕ ಕಾರಣ ಎನ್ನುತ್ತಾರೆ ಈ ಇಂದಿರಾಗಾಂಧಿ’ ಎಂದು ಕಿಚಾಯಿಸಿದ್ದರು. ಹಾಗಾಗಿಯೇ ಪರ್ತಕರ್ತರ ವಲಯದಲ್ಲಿ ‘LOTUS-POTUS’ ಎಂಬ ಜೋಕು ಹುಟ್ಟಿಕೊಂಡಿತ್ತು.

ಅವತ್ತಿನ ಜೋಕು ಇವತ್ತು ಗಂಭೀರ ರೂಪ ಪಡೆದುಕೊಳ್ಳಲಾರಂಭಿಸಿದೆ!

ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ, ಪಂಜಾಬ್ ಪೊಲೀಸ್‌ನ ಮಾಜಿ ಮುಖ್ಯಸ್ಥ ಕೆ.ಪಿ.ಎಸ್. ಗಿಲ್ ಹಾಗೂ ಇತರ ನಾಲ್ವರು ಪ್ರತಿಷ್ಠಿತ ನಾಗರಿಕರು ಏಪ್ರಿಲ್ 21ರಂದು ಸುಪ್ರೀಂಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು (PIL) ಸಲ್ಲಿಸಿದ್ದಾರೆ. ಒಟ್ಟು 71 ಲಕ್ಷ ಕೋಟಿ ರೂ.ಗಳನ್ನು ನಮ್ಮ ದೇಶದಿಂದ ದೋಚಿಕೊಂಡು ಹೋಗಿ ಸ್ವಿಸ್ ಸೇರಿದಂತೆ ಹಲವಾರು ವಿದೇಶಿ ಬ್ಯಾಂಕ್‌ಗಳಲ್ಲಿಡಲಾಗಿದೆ. ಒಂದು ವೇಳೆ ಆ ಹಣವನ್ನು ವಾಪಸ್ ತಂದರೆ ಭಾರತದ ಪ್ರತಿಯೊಂದು ಕುಟುಂಬಕ್ಕೂ ತಲಾ 2 ಲಕ್ಷ ರೂ. ಹಂಚಬಹುದು. ಹಾಗಾಗಿ ಹಣವನ್ನು ಭಾರತಕ್ಕೆ ವಾಪಸ್ ತರಬೇಕಾದುದು ಅತ್ಯಗತ್ಯ ಎಂದು PILನಲ್ಲಿ ಹೇಳಲಾಗಿದೆ. ಇದಕ್ಕೆ ಕೇಂದ್ರ ಸರಕಾರ, ರಿಸರ್ವ್ ಬ್ಯಾಂಕ್, ಸೆಬಿ, ಜಾರಿ ನಿರ್ದೇಶನಾಲಯ ಹಾಗೂ ಹಣಕಾಸು ಖಾತೆಯನ್ನು ಹೊಣೆಗಾರರನ್ನಾಗಿ ಹೆಸರಿಸಲಾಗಿದೆ. ಕ್ರಮವಾಗಿ 40 ಸಾವಿರ ಹಾಗೂ 20 ಸಾವಿರದ 580 ಕೋಟಿ ರೂ. ತೆರಿಗೆ ಹಣವನ್ನು ವಂಚಿಸಿದ್ದಾರೆ ಎಂದು ಹವಾಲಾ ಜಾಲದ ನೇತಾರ ಪುಣೆ ಮೂಲದ ಹಸನ್ ಅಲಿ ಹಾಗೂ ಆತನ ಸಹಯೋಗಿಗಳ ವಿರುದ್ಧ ತೆರಿಗೆ ಇಲಾಖೆ ನೀಡಿರುವ ನೋಟೀಸನ್ನೂ PILನಲ್ಲಿ ಪ್ರಮುಖವಾಗಿ ಎತ್ತಿತೋರಲಾಗಿದೆ.

ಈ ವಿಷಯದ ಬಗ್ಗೆ ಮೊದಲು ಸಾರ್ವಜನಿಕವಾಗಿ ಮಾತನಾಡಿದ್ದು ಯೋಗ ಗುರು ಬಾಬಾ ರಾಮ್‌ದೇವ್. ಆದರೆ ಅದರ ಬಗ್ಗೆ ಈಗ ಜನರ ಗಮನ ಸೆಳೆಯುತ್ತಿರುವುದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ಲಾಲ್ ಕೃಷ್ಣ ಆಡ್ವಾಣಿ. ಏಪ್ರಿಲ್ 17ರಂದು ಮುಂಬೈನಲ್ಲಿ ಚುನಾವಣಾ ರ್‍ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಲಾಲ್ ಕೃಷ್ಣ ಆಡ್ವಾಣಿಯವರು, ‘ಒಂದು ವೇಳೆ ಎನ್‌ಡಿಎ ಅಧಿಕಾರಕ್ಕೆ ಬಂದರೆ ಸ್ವಿಸ್ ಬ್ಯಾಂಕಿನಲ್ಲಿ ಅಡಗಿಸಿಟ್ಟಿರುವ ಕಳ್ಳ ಹಣವನ್ನು ವಾಪಸ್ ತರಲು 100 ದಿನಗಳೊಳಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ’ ವಾಗ್ದಾನ ಮಾಡಿದ್ದಾರೆ. ಅದಕ್ಕೂ ಮೊದಲೇ, ಅಂದರೆ ಏಪ್ರಿಲ್ 2ರಿಂದ ಲಂಡನ್‌ನಲ್ಲಿ ಆರಂಭವಾಗಲಿದ್ದ ಜಿ-20 ಶೃಂಗಸಭೆಗೂ ಪೂರ್ವದಲ್ಲೇ, ‘ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಅಡಗಿಸಿಟ್ಟಿರುವ ಕಳ್ಳಹಣದ ಬಗ್ಗೆ ಜಿ-20 ಶೃಂಗದಲ್ಲಿ ಪ್ರಸ್ತಾಪ ಮಾಡಿ’ ಎಂದು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಆಡ್ವಾಣಿ ಮನವಿ ಮಾಡಿಕೊಂಡಿದ್ದರು.

ಇದರಲ್ಲಿ ತಪ್ಪೇನಿದೆ ಹೇಳಿ?

ತೆರಿಗೆ ವಂಚಿಸಿ ದೇಶದಿಂದ ಹೊರಸಾಗಿಸಿರುವ ಸಾರ್ವಜನಿಕರ ಹಣವನ್ನು ವಾಪಸ್ ತರಲು ಪ್ರಯತ್ನಿಸಿ ಎಂದು ಮನವಿ ಮಾಡಿಕೊಂಡರೆ ಅದು ತಪ್ಪಾಗುವುದಕ್ಕಾದರೂ ಹೇಗೆ ಸಾಧ್ಯ? ಹಾಗಿದ್ದರೂ ಆಡ್ವಾಣಿಯವರ ಮನವಿಗೆ ಕಾಂಗ್ರೆಸ್‌ನ ಲೋಕಸಭಾ ಚುನಾವಣಾ ಪ್ರಚಾರಾಂದೋಲನದ ಜವಾಬ್ದಾರಿ ಹೊಂದಿರುವ ಜೈರಾಮ್ ರಮೇಶ್ ನೀಡಿದ ಉತ್ತರವೇನು ಗೊತ್ತೆ?

“ಆತ್ಮೀಯ ಶ್ರೀ ಆಡ್ವಾಣಿಯವರೇ,
ಸಂಸತ್ತು ಹಾಗೂ ಸಂಸತ್ತಿನಾಚೆ ನೀವು ಮಾಡುತ್ತಿದ್ದ ಭಾಷಣಗಳಲ್ಲಿ ಕೊಡುತ್ತಿದ್ದ ಅಂಕಿ-ಅಂಶಗಳ ಮೂಲಗಳ ಬಗ್ಗೆ ಮೊದಲಿನಿಂದಲೂ ನನಗೆ ನಗು ಬರುತ್ತಿತ್ತು. ಆದರೆ ಸ್ವಿಸ್ ಬ್ಯಾಂಕಿನಲ್ಲಿ ಇಡಲಾಗಿರುವ ಭಾರತದ ಕಳ್ಳಹಣದ ಒಟ್ಟು ಮೊತ್ತದ ಬಗ್ಗೆ ಹೇಳುವಾಗ ನೀವು ಇಂಟರ್‌ನೆಟ್‌ನಲ್ಲಿ ಸಿಗುವ ಹುಸಿ ಹಾಗೂ ಆಧಾರರಹಿತ ಮೂಲಗಳನ್ನು ಬಳಸಿಕೊಂಡಿರುವುದು ನಿಜಕ್ಕೂ ಅಂಕೆ ಮೀರಿದೆ. ನಿಮ್ಮಂತಹ ನಾಯಕರು ಅಂತಹ ಮೂಲಗಳಿಗೆ ಜೋತು ಬಿದ್ದಿರುವುದು ಅಪಹಾಸ್ಯಕಾರಿ ಮಾತ್ರವಲ್ಲ, ಆಘಾತಕಾರಿಯೂ ಹೌದು. ಅದನ್ನೇ ನೇರವಾಗಿ ಹೇಳುವುದಾದರೆ, ಶ್ರೀ ಆಡ್ವಾಣಿಯವರೇ ನೀವು ಸುಳ್ಳು ಹೇಳುತ್ತಿದ್ದೀರಿ!”.

ಹಾಗೆಂದು ಜೈರಾಮ್ ರಮೇಶ್ ಪತ್ರ ಬರೆದಿದ್ದಾರೆ!

ಅಲ್ಲಾ, ಈ ಜೈರಾಮ್ ರಮೇಶ್‌ಗೇನಾಗಿದೆ? ‘ಸುಳ್ಳುಗಾರ’ ಎಂದು ನಿಂದಿಸಲು ಆಡ್ವಾಣಿಯವರು ಅದ್ಯಾವ ಎಂದು ಯಾವ ಮಹಾ ತಪ್ಪೆಸಗಿದ್ದಾರೆ? ಎಪ್ಪತ್ತೊಂದು ಲಕ್ಷ ಕೋಟಿ ರೂ. ಕಳ್ಳಹಣವಿದೆ ಎನ್ನುತ್ತಿರುವ ಆಡ್ವಾಣಿಯವರ ಮೊತ್ತ ತಪ್ಪಾಗಿರಲೂಬಹುದು. ಆದರೆ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತದ ಕಳ್ಳಹಣ ಇರುವುದೇ ಸುಳ್ಳಾ? ಮೊತ್ತಕ್ಕಿಂತ ಮೊತ್ತದ ‘ಪ್ರಮಾಣ’ದ ಬಗ್ಗೆಯೇ ಕಾಂಗ್ರೆಸ್‌ಗೇಕೆ ಚಿಂತೆ? ‘ಪ್ರಮಾಣ’ವನ್ನೇ ಮುಂದಿಟ್ಟು ಕೊಂಡು ‘ಸುಳ್ಳುಗಾರ’ ಎಂದು ನಿಂದಿಸುವುದು ಎಷ್ಟು ಸರಿ? ಇನ್ನು ಸ್ವಿಸ್ ಬ್ಯಾಂಕ್‌ನವರು ಮಾಹಿತಿ ನೀಡುವ ವಾಗ್ದಾನ ಮಾಡಿ 2 ತಿಂಗಳೂ ಆಗಿಲ್ಲ, ಆದರೆ ಬಿಜೆಪಿಯವರು 6 ವರ್ಷ ಅಧಿಕಾರದಲ್ಲಿದ್ದಾಗೇಕೆ ಹಣ ವಾಪಸ್ ತರಲು ಪ್ರಯತ್ನಿಸಲಿಲ್ಲ ಎಂದು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಯಾರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದೆ?

ಇದು ನಿಜಕ್ಕೂ ಒಂದು ಗಂಭೀರ ವಿಷಯ.

ಈ ವಿಷಯದಲ್ಲಿ ಎಲ್ಲರಿಗಿಂತಲೂ ಮೊದಲು ಜರ್ಮನಿಗೆ ನಾವೊಂದು ಸಲಾಮು ಹಾಕಬೇಕು. ಅಷ್ಟಕ್ಕೂ ಪ್ರಕರಣವನ್ನು ದಾಖಲೆ ಸಮೇತ ಬೆಳಕಿಗೆ ತಂದಿದ್ದೇ ಜರ್ಮನಿ. ಸ್ವಿಜರ್‌ಲೆಂಡ್, ಲೀಚ್ಟೆನ್‌ಸ್ಟೀನ್, ಆಸ್ಟ್ರಿಯಾ, ಲಕ್ಸಂಬರ್ಗ್, ಜಿಬ್ರಾಲ್ಟರ್, ಪನಾಮಾ, ಮೊನಾಕೊ, ಸಿಂಗಪುರ್, ಹಾಂಕಾಂಗ್ ಮುಂತಾದ ಸ್ಥಳಗಳಲ್ಲಿರುವ ಜಗತ್ತಿನ ಸುಮಾರು ೭೦ ಬ್ಯಾಂಕ್‌ಗಳನ್ನು ‘Tax Havens’ (ತೆರಿಗೆಗಳ್ಳರ ಸ್ವರ್ಗ) ಎನ್ನುತ್ತಾರೆ. ಅದು ಯಾವುದೇ ದೇಶವಾಗಿರಲಿ, ಎಲ್ಲ ದೇಶಗಳ ಕಳ್ಳರೂ ತಮ್ಮ ಕಪ್ಪುಹಣವನ್ನು ಇಡುವುದೇ ಈ ಬ್ಯಾಂಕ್‌ಗಳಲ್ಲಿ. ಕಳ್ಳರಿಗಾಗಿಯೇ ಜನ್ಮತಳೆದಂತಿರುವ ಈ ಬ್ಯಾಂಕ್‌ಗಳು ತನ್ನಲ್ಲಿ ಖಾತೆ ಹೊಂದಿರುವವರ ಬಗೆಗಿನ ಯಾವುದೇ ವಿವರವನ್ನು ಎಂತಹ ಸಂದರ್ಭದಲ್ಲೂ ಯಾರಿಗೂ ನೀಡುವುದಿಲ್ಲ. ಹಾಗಾಗಿಯೇ ತೆರಿಗೆ ವಂಚಕರ ಸ್ವರ್ಗಗಳಾಗಿ ಪರಿಣಮಿಸಿವೆ. ಅದರಲ್ಲೂ ಜಗತ್ತಿನ ಒಟ್ಟು ವಾರ್ಷಿಕ ಕಳ್ಳಸಾಗಣೆಯಾಗುವ ಹಣದಲ್ಲಿ ಶೇ.27ರಷ್ಟು ಸ್ವಿಸ್ ಬ್ಯಾಂಕೊಂದಕ್ಕೇ(UBS) ಹರಿದು ಬರುತ್ತದೆ. ಈ ವಿಷಯದಲ್ಲಿ ಲೀಚ್ಟೆನ್‌ಸ್ಟೀನ್‌ನ ಎಲ್‌ಜಿಟಿ ಬ್ಯಾಂಕ್ ಕೂಡ ಸಾಮಾನ್ಯದ್ದೇನಲ್ಲ. ಜರ್ಮನಿಯ ಕಣ್ಣು ಈ ಬ್ಯಾಂಕಿನ ಮೇಲೆ ಬಿದ್ದಿತ್ತು. ತನ್ನ ದೇಶದ ಕಳ್ಳರೆಲ್ಲ ಈ ಬ್ಯಾಂಕ್‌ನಲ್ಲೇ ಹಣ ಇಟ್ಟಿದ್ದಾರೆಂಬ ಬಲವಾದ ಗುಮಾನಿಯೂ ಅದಕ್ಕೆ ಬಂದಿತ್ತು. ಆದರೆ ನೇರ ಮಾರ್ಗದಲ್ಲಿ ಹೋದರೆ ಬರಿಗೈಲಿ ಮರಳಬೇಕಾಗುತ್ತದೆ, ತನ್ನ ಮಾತಿಗೆ ಎಲ್‌ಜಿಟಿ ಬ್ಯಾಂಕ್ ಕಿಮ್ಮತ್ತನ್ನೂ ಕೊಡುವುದಿಲ್ಲ ಎಂಬುದು ಜರ್ಮನಿಗೆ ತಿಳಿದಿತ್ತು. ಹಾಗಾಗಿ ಜರ್ಮನಿ ಕೂಡ ಅಡ್ಡಮಾರ್ಗಕ್ಕೇ ಇಳಿಯಿತು. ಎಲ್‌ಜಿಟಿ ಬ್ಯಾಂಕ್‌ನ ಕೆಲವು ಅಧಿಕಾರಿಗಳಿಗೆ 6 ದಶಲಕ್ಷ ಡಾಲರ್ ಲಂಚ ಕೊಟ್ಟ ಜರ್ಮನಿ, ಕಳ್ಳ ಹಣ ಇಟ್ಟಿರುವ 1500 ಮಂದಿ ವಂಚಕರ ಹೆಸರುಗಳನ್ನು ಹೊಂದಿರುವ ಗೌಪ್ಯ ಸಿ.ಡಿ.ಯನ್ನು ಪಡೆದುಕೊಂಡು ಹೆಸರುಗಳನ್ನು ಪರಿಶೀಲಿಸತೊಡಗಿತು. 1500 ಹೆಸರುಗಳಲ್ಲಿ ಸುಮಾರು 600 ಜರ್ಮನ್ನರದ್ದಾಗಿದ್ದವು. ಅವರಲ್ಲಿ ಜರ್ಮನಿಯ ಅಂಚೆ ವ್ಯವಸ್ಥೆಯ ಮುಖ್ಯಸ್ಥನ ಹೆಸರೂ ಇತ್ತು. ಹೀಗೆ ಸೂಕ್ತ ಮಾಹಿತಿಯೊಂದಿಗೆ ಕೂಲಂಕಷ ತನಿಖೆ ನಡೆಸಿದ ಜರ್ಮನಿ ಅಷ್ಟೂ ಜನರ ವಿರುದ್ಧ ಕ್ರಮಕೈಗೊಂಡಿತು.

ಹಾಗಾದರೆ 1500ರಲ್ಲಿ ಉಳಿದ 900 ಹೆಸರುಗಳು ಯಾವ ದೇಶದವರದ್ದು?

ಮೊದಲು ತನ್ನ ದೇಶದವರ ವಿರುದ್ಧ ಕ್ರಮ ಕೈಗೊಂಡ ಜರ್ಮನಿ, “ಒಂದು ವೇಳೆ 1500 ಜನರ ಪಟ್ಟಿಯಲ್ಲಿ ತಮ್ಮ ದೇಶದವರ ಹೆಸರೂ ಇರಬಹುದು ಎಂದು ಯಾವ ದೇಶಕ್ಕಾದರೂ ಗುಮಾನಿಯಿದ್ದರೆ ಮನವಿ ಮಾಡಿಕೊಳ್ಳಬಹುದು. ನಾವು ಉಚಿತವಾಗಿ ಹೆಸರುಗಳು ನೀಡುತ್ತೇವೆ” ಎಂದು ಸಾರ್ವಜನಿಕ ವಾಗಿ ಘೋಷಣೆ ಮಾಡಿತು. ಹಾಗೆ ಘೋಷಣೆ ಮಾಡಿದ್ದೇ ತಡ, ಎಲ್ಲ ದೇಶಗಳೂ ಜರ್ಮನಿಗೆ ಮನವಿ ಮಾಡಿಕೊಂಡವು. ಆದರೆ ಭಾರತವೊಂದನ್ನು ಬಿಟ್ಟು!! ಹಾಗಾಗಿ ಕಳೆದ ವರ್ಷದ ಏಪ್ರಿಲ್‌ನಲ್ಲಿ ವಿವರಣೆ ಕೇಳಿ ಆಡ್ವಾಣಿಯವರು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು. ಆದರೆ ಸಿಕ್ಕಿದ್ದು ಗೊಂದಲಮಯ ಉತ್ತರ. ಈ ಮಧ್ಯೆ, ಸ್ವಿಸ್ ಬ್ಯಾಂಕ್ ವಿರುದ್ಧ ಸಂಘರ್ಷಕ್ಕಿಳಿದ ಅಮೆರಿಕದ ನ್ಯಾಯಾಂಗ ಇಲಾಖೆ ತನ್ನ ದೇಶದ ಕಳ್ಳರ ಸ್ವತ್ತನ್ನು ಹಿಂದಿರುಗಿಸುವಂತೆ ಒತ್ತಡ ಹಾಕತೊಡಗಿತು. ಅದರಲ್ಲಿ ಯಶಸ್ವಿಯೂ ಆಯಿತು. ತನ್ನಲ್ಲಿ ಅನಧಿಕೃತವಾಗಿ ಇಡಲಾಗಿರುವ 780 ದಶಲಕ್ಷ ಡಾಲರ್ ಹಣವನ್ನು ಹಿಂದಿರುಗಿಸಲು 2009, ಫೆಬ್ರವರಿ 19ರಂದು ಒಪ್ಪಿಕೊಂಡ ಸ್ವಿಸ್ ಬ್ಯಾಂಕ್, ಇನ್ನೂ 20 ಶತಕೋಟಿ ಡಾಲರ್ ಹಣ ಇಟ್ಟಿರುವ 250 ಅಮೆರಿಕ ನಾಗರಿಕರ ಹೆಸರು ಮತ್ತು ವಿವರ ನೀಡಲೂ ಒಪ್ಪುಗೆ ಕೊಟ್ಟಿತು. ಅದರಿಂದ ಉತ್ಸಾಹಗೊಂಡ ಅಮೆರಿಕ, ಇನ್ನೂ ದೊಡ್ಡ ಬೇಡಿಕೆ ಮುಂದಿಟ್ಟಿತು. ಅಮೆರಿಕದ  52 ಸಾವಿರ ತೆರಿಗೆಗಳ್ಳರ ಹಣಕಾಸು ವ್ಯವಹಾರದ ಮಾಹಿತಿ ನೀಡುವಂತೆ ಒತ್ತಡ ಹೇರಲಾಂಭಿಸಿತು. ಇಂತಹ ಒತ್ತಡಕ್ಕೆ ಸ್ವಿಸ್ ಬ್ಯಾಂಕ್ ಪ್ರತಿರೋಧವೊಡ್ಡಿದ್ದೇನೂ ನಿಜ.

ಆದರೆ ಎಷ್ಟು ದಿನ ಹಾಗೆ ಮಾಡಲು ಸಾಧ್ಯ?

ಇತ್ತ ಜರ್ಮನಿ ಎಲ್‌ಜಿಟಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದವರ ವಿರುದ್ಧ ಕ್ರಮಕೈಗೊಂಡ ನಂತರ ಜರ್ಮನಿ ಹಾಗೂ ಲೀಚ್ಟೆನ್‌ಸ್ಟೀನ್ ನಡುವೆ ರಾಜತಾಂತ್ರಿಕ ಸಂಘರ್ಷವೇ ಏರ್ಪಟ್ಟಿತು. ಅಷ್ಟಕ್ಕೂ ಗೌಪ್ಯವಾಗಿ ಟ್ರಸ್ಟ್‌ಗಳನ್ನು ಸೃಷ್ಟಿ ಮಾಡಿ, ಅಲ್ಲಿಂದ ಸ್ವಿಸ್ ಬ್ಯಾಂಕ್‌ಗೆ ಹಣಸಂದಾಯ ಮಾಡುವುದೇ ಅತ್ಯಂತ ಸಣ್ಣ ಪ್ರಾಂತ್ಯವಾದ ಲೀಚ್ಟೆನ್‌ಸ್ಟೀನ್‌ನಿಂದ! ಆದಕಾರಣ 17 ದೇಶಗಳ ವೇದಿಕೆಯಾದ ‘ಆರ್ಗನೈಜೇಶನ್ ಫಾರ್ ಇಕಾನಾಮಿಕ್ ಕೋ-ಆಪರೇಶನ್ ಆಂಡ್ ಡೆವಲಪ್‌ಮೆಂಟ್’ನ(OECD) ಸಭೆಯಲ್ಲಿ ಜರ್ಮನಿ ವಿಷಯವನ್ನೆತ್ತಿಕೊಂಡಿತು. ಅದಕ್ಕೂ ಕಾರಣವಿತ್ತು. ಸ್ವಿಜರ್‌ಲೆಂಡ್ ಕೂಡ ಆ ವೇದಿಕೆಯ ಸದಸ್ಯ ರಾಷ್ಟ್ರ. ಇದನ್ನೆಲ್ಲಾ ಪರಿಗಣಿಸಿಯೇ ವಿಷಯ ಪ್ರಸ್ತಾಪಿಸಿದ ಜರ್ಮನಿ, ಸ್ವಿಜರ್‌ಲೆಂಡ್‌ನ್ನು ಕಳಂಕಿತ ರಾಷ್ಟ್ರಗಳ ಪಟ್ಟಿಗೆ ಸೇರಿಸಿ ಆರ್ಥಿಕ ದಿಗ್ಬಂಧನೆಯನ್ನು ಹೇರಬೇಕೆಂದು ಒತ್ತಾಯಿ ಸಿತು. ಮತ್ತೊಂದು ಬಲಿಷ್ಠ ರಾಷ್ಟ್ರವಾದ ಫ್ರಾನ್ಸ್ ಕೂಡ ಜರ್ಮನಿಯ ಬೆಂಬಲಕ್ಕೆ ನಿಂತಿತು. ಆಗ ಸ್ವಿಜರ್‌ಲೆಂಡ್‌ಗೆ ದಾರಿ ಕಾಣದಾಯಿತು. ಹೇಗಾದರೂ ಮಾಡಿ ತಪ್ಪಿಸಿಕೊಳ್ಳೋಣವೆಂದು ಲಾಬಿ ಮಾಡಲಾರಂಭಿಸಿತು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ೨೦೦೯, ಏಪ್ರಿಲ್ ೨ರಂದು ಲಂಡನ್‌ನಲ್ಲಿ ನಡೆಯ ಬೇಕಿದ್ದ ಜಿ-20 ಶೃಂಗಕ್ಕೆ ಮೊದಲು ನಡೆದ ಪೂರ್ವಭಾವಿ ಸಭೆಯಲ್ಲೂ ಜರ್ಮನಿ ಮತ್ತು ಫ್ರಾನ್ಸ್‌ಗಳು ವಿಷಯವನ್ನು ಪ್ರಸ್ತಾಪಿಸಿದವು. ಸ್ವಿಜರ್‌ಲೆಂಡ್ ಹಾಗೂ ಸಹಕಾರ ನೀಡದ ಇತರ ರಾಷ್ಟ್ರಗಳನ್ನು ಕಳಂಕಿತ ದೇಶಗಳ ಪಟ್ಟಿಗೆ ಸೇರಿಸಿ ಆರ್ಥಿಕ ದಿಗ್ಬಂಧನೆ ವಿಧಿಸುವಂತೆ ಏಪ್ರಿಲ್ ೨ರ ಲಂಡನ್ ಶೃಂಗದ ವೇಳೆ ಒತ್ತಡ ಹೇರಲಾಗುವುದು ಎಂದು ಬಹಿರಂಗವಾಗಿ ಘೋಷಣೆ ಮಾಡಿದವು. ಅದಕ್ಕೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕೂಡ ಧ್ವನಿಗೂಡಿಸಿದರು
.
ಐರೋಪ್ಯ ರಾಷ್ಟ್ರಗಳಿಂದಲೇ ಸುತ್ತುವರಿದಿರುವ ಸ್ವಿಜರ್‌ಲೆಂಡ್ ಎಷ್ಟು ಅಂತ ನುಣುಚಿಕೊಳ್ಳಲು ಸಾಧ್ಯ? ಜಿ-20 ಶೃಂಗವೇನಾದರೂ ತನ್ನನ್ನು ಕಳಂಕಿತ ರಾಷ್ಟ್ರಗಳ ಪಟ್ಟಿಗೆ ಸೇರಿಸಿದರೆ, ಆರ್ಥಿಕ ದಿಗ್ಬಂಧನೆ ಹೇರಿದರೆ ಗತಿಯೇನು? ಬ್ಯಾಂಕಿಂಗ್ ಸೇವೆಯನ್ನೇ ಜೀವಾಳವಾಗಿಟ್ಟುಕೊಂಡಿರುವ ತನ್ನ ಅರ್ಥವ್ಯವಸ್ಥೆ ಅವನತಿಯತ್ತ ಸಾಗದೇ ಇದ್ದೀತೆ? ಇಂತಹ ಭಯ ಸ್ವಿಜರ್‌ಲೆಂಡನ್ನು ಕಾಡತೊಡಗಿತು. ಹಾಗಾಗಿ, “ಒಂದು ವೇಳೆ ತೆರಿಗೆ ವಂಚನೆ ಮಾಡಿರುವ ವ್ಯಕ್ತಿಗಳ ಬಗ್ಗೆ ಸೂಕ್ತ ದಾಖಲೆ ಒದಗಿಸಿದರೆ ಯಾವುದೇ ದೇಶಕ್ಕಾದರೂ ತಾನು ಮಾಹಿತಿ ನೀಡುವೆ” ಎಂದು 2009ರ ಮಾಚ್ 13ರಂದು ಸ್ವಿಸ್ ಬ್ಯಾಂಕ್ ಘೋಷಣೆ ಮಾಡಿತು! ಅದರ ಬೆನ್ನಲ್ಲೇ, ಜಿ-20 ಶೃಂಗದಲ್ಲಿ ಎದುರಾಗಲಿದ್ದ ಆರ್ಥಿಕ ದಿಗ್ಬಂಧನೆಯ ಅಪಾಯಕ್ಕೆ ಹೆದರಿ ಆಸ್ಟ್ರಿಯಾ ಮತ್ತು ಲಕ್ಸಂಬರ್ಗ್ ಕೂಡ ಸ್ವಿಸ್ ಬ್ಯಾಂಕ್‌ನಂತೆ ತಾವೂ ಮಾಹಿತಿ ನೀಡುವುದಾಗಿ ಘೋಷಿಸಿದವು. ಮುಂದಿನ ಹಾದಿ ಇನ್ನೂ ದೀರ್ಘವಾಗಿದ್ದರೂ, ಹಣವನ್ನು ವಾಪಸ್ ತರುವುದು ದೂರದ ಮಾತಾಗಿದ್ದರೂ ಇದೇನು ಸಣ್ಣ ಸಾಧನೆಯಲ್ಲ. ಜಗತ್ತಿನ ಬಲಿಷ್ಠ ರಾಷ್ಟ್ರಗಳೆಲ್ಲ ಒಂದಾಗಿ ನಿಂತರೆ ಯಾವ ಬ್ಯಾಂಕ್ ತಾನೇ ಬಗ್ಗದೇ ಇದ್ದೀತು? ಸಹಕಾರ ನೀಡದ ದೇಶ ಹಾಗೂ ಬ್ಯಾಂಕುಗಳನ್ನು ಕಳಂಕಿತರ ಪಟ್ಟಿಗೆ ಸೇರಿಸುತ್ತೇವೆ ಎಂದು ಹೆದರಿಸಿದರೆ ಯಾವ ರಾಷ್ಟ್ರತಾನೇ ಬೆದರದೇ ಇದ್ದೀತು? ಅದರಲ್ಲೂ ಇಡೀ ಜಗತ್ತೇ ಆರ್ಥಿಕ ಸಂಕಷ್ಟದಲ್ಲಿರುವಾಗ ಕಳ್ಳರನ್ನು ಯಾವ ರಾಷ್ಟ್ರ ತಾನೆ ಸಹಿಸೀತು?

ಇಷ್ಟಾಗಿಯೂ ಕೇಂದ್ರದ ನಮ್ಮ ಯುಪಿಎ ಸರಕಾರ ಮಾಡಿದ್ದೇನು?

ನಮಗೂ ಕಳ್ಳರ ಪಟ್ಟಿಯನ್ನು ನೀಡಿ ಎಂದು ಜರ್ಮನಿಯನ್ನು ಬಲವಾಗಿ ಕೇಳಿಕೊಳ್ಳದೇ ಇದ್ದಿದ್ದಕೆ ಕಾರಣವೇನು? ‘ಆರ್ಗ ನೈಜೇಶನ್ ಫಾರ್ ಇಕಾನಾಮಿಕ್ ಕೋಪರೇಶನ್ ಆಂಡ್ ಡೆವೆಲಪ್‌ಮೆಂಟ್’ನ ಸಭೆಯಲ್ಲಿ ಜರ್ಮನಿ ಹಾಗೂ ಫ್ರಾನ್ಸ್ ಗಳು ಕಳ್ಳಹಣದ ವಿಚಾರವೆತ್ತಿದಾಗ ಭಾರತ ಸರಕಾರವೇಕೆ ಅದನ್ನು ಸ್ವಾಗತಿಸಲಿಲ್ಲ? ಜಿ-20 ಶೃಂಗಕ್ಕೂ ಮೊದಲು ನಡೆದ ಪೂರ್ವಭಾವಿ ಸಭೆಯಲ್ಲಿ ಭಾರತವೇಕೆ ಈ ವಿಷಯವಾಗಿ ಧ್ವನಿಯೆತ್ತಲಿಲ್ಲ? ಕನಿಷ್ಠ ಜರ್ಮನಿ ಹಾಗೂ ಫ್ರಾನ್ಸ್‌ಗೆ ಬೆಂಬಲವನ್ನಾದರೂ ಕೊಡಬಹುದಿತ್ತಲ್ಲವೆ? ಇಷ್ಟಾಗಿಯೂ ಆಡ್ವಾಣಿಯವರನ್ನೇ ಸುಳ್ಳುಗಾರ ಎಂದು ಕರೆಯುತ್ತಿದ್ದಾರಲ್ಲಾ ಜೈರಾಮ್ ರಮೇಶ್‌ಗೇನಾಗಿದೆ? ಅಡ್ವಾಣಿ ಹೇಳುತ್ತಿರುವುದು ಸುಳ್ಳು ಎನ್ನುವುದಾದರೆ ಗ್ಲೋಬಲ್ ಫೈನಾನ್ಷಿಯಲ್(GFI) ಹೇಳುತ್ತಿರುವುದೂ ಸುಳ್ಳಾ? 2002ರಿಂದ 2006ರ ಅವಧಿಯಲ್ಲಿ ವಾರ್ಷಿಕ ಸುಮಾರು 27 ಶತಕೋಟಿ ಡಾಲರ್ ಹಣವನ್ನು ಭಾರತದಿಂದ ಹೊರಸಾಗಿಸಲಾಗಿದೆ! ಅಂದರೆ 6 ವರ್ಷಗಳಲ್ಲಿ 6 ಲಕ್ಷದ 88 ಸಾವಿರ ಕೋಟಿ ರೂ.ಗಳನ್ನು ಕೊಳ್ಳೆಹೊಡೆದು ಕಳ್ಳಬ್ಯಾಂಕುಗಳಲ್ಲಿಡಲಾಗಿದೆ ಎಂದು ಜಿಎಫ್‌ಐ ಹೇಳಿದೆ!! ಆರು ವರ್ಷಗಳಲ್ಲೇ ಇಷ್ಟು ಹಣ ದೇಶದಿಂದ ಹೊರಹೋಗಿದೆ ಎಂದಾದರೆ, ಕಳೆದ ೬೩ ವರ್ಷಗಳಲ್ಲಿ  ಇನ್ನೆಷ್ಟು ಹಣವನ್ನು ಕೊಳ್ಳೆ ಹೊಡೆದಿರಬಹುದು? 1934ರಲ್ಲಿ ಸ್ಥಾಪನೆಯಾಗಿರುವ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು ಇದುವರೆಗೂ ಇಟ್ಟಿರುವ ಹಣದ ಪ್ರಮಾಣ ಅದೆಷ್ಟಾಗಿರಬಹುದು? ಹಣದ ಪ್ರಮಾಣದ ಬಗ್ಗೆ ತಕರಾರು ಎತ್ತಬಹುದಾಗಿದ್ದರೂ, ಅಭಿಪ್ರಾಯಭೇದ ಇಟ್ಟುಕೊಳ್ಳಬಹುದಾಗಿದ್ದರೂ ಹಣವನ್ನು ಲೂಟಿ ಹೊಡೆದಿರುವುದನ್ನು ತಳ್ಳಿಹಾಕಲು ಸಾಧ್ಯವೆ? ಆಡ್ವಾಣಿಯವರ ವೈಯಕ್ತಿಕ ನಿಂದನೆಗಿಳಿಯುವ ಮೂಲಕ ಇಡೀ ಪ್ರಕರಣವನ್ನೇ ಬದಿಗೆ ತಳ್ಳಲು, ಮರೆಮಾಚಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವುದೇಕೆ?

ಇಲ್ಲಿ ಆಡ್ವಾಣಿ, ಜೇಠ್ಮಲಾನಿ Immaterial. ಕಳ್ಳಹಣ ಮುಖ್ಯ. ಅದನ್ನು ವಾಪಸ್ ತನ್ನಿ ಅಂತ ಆಡ್ವಾಣಿ ಹೇಳಲಿ, ಯಾವುದೇ ಕಳ್ಳ ಬೇಕಾದರೂ ಹೇಳಲಿ. ಒಳ್ಳೆಯ ಕೆಲಸ ಮಾಡುವುದಕ್ಕೇಕೆ ಅಂಜಿಕೆ? ಈ ಹಿನ್ನೆಲೆಯಲ್ಲಿ ಆಡ್ವಾಣಿ, ಜೇಠ್ಮಲಾನಿ ಎತ್ತಿರುವ ಗಂಭೀರ ಸಮಸ್ಯೆಯ ಬಗ್ಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವ ಬದಲು ಕಾಂಗ್ರೆಸ್ ಮೊತ್ತದ ‘ಪ್ರಮಾಣ’ಕ್ಕೇಕೆ  ಜೋತು ಬಿದ್ದಿದೆ? ಮೊತ್ತ ಎಷ್ಟಾದರೂ ಇರಲಿ, ಕನಿಷ್ಠ ವಾಪಸ್ ತರುತ್ತೇವೆ, ತರಲು ನಾವೂ ಪ್ರಯತ್ನಿಸುತ್ತೇವೆ ಎಂದು ದೃಢವಾಗಿ, ಪೂರ್ಣ ಮನಸ್ಸಿನಿಂದ ಹೇಳುವುದಕ್ಕೂ ಕಾಂಗ್ರೆಸ್‌ಗೇನು ನೋವು? ಒಬಾಮ ಅವರಂತೂ ಕಾನೂನನ್ನೇ ತರುವ ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ‘ಮೊತ್ತದ ಪ್ರಮಾಣ’ದ ನಿರಾಕರಣೆ ಕೆಲಸಕ್ಕೇಕೆ ಕೈಹಾಕಿದೆ? ಸ್ವಿಸ್ ಬ್ಯಾಂಕ್ ಎಂದ ಕೂಡಲೇ ಕಾಂಗ್ರೆಸ್‌ಗೇಕೆ ದಿಗಿಲು?

ಕಾಂಗ್ರೆಸ್‌ನ LOTUS ಕೂಡ ಸ್ವಿಸ್ ಬ್ಯಾಂಕಿನಲ್ಲಿದೆಯೇ?!

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: