‘ಲೆಗ್ ಶೇಕ್’ ಮಾಡಲು ಸಂಗೀತವೊಂದೇ ಸಾಕಾ ‘ನಂಬರ್ 7’?

“ಕೋಲ್ಕತಾದ ಹೋಟೆಲ್‌ನಿಂದ ನಿರ್ಗಮಿಸುವಾಗ ಲಗೇಜ್ ತುಂಬಿಕೊಳ್ಳಲು ಸಹಾಯ ಮಾಡಿದ ವ್ಯಕ್ತಿಯೇ ಬಹುಶಃ ಆ ಡ್ರಗ್ಸ್ ಪ್ಯಾಕ್ ಹಾಕಿರಬೇಕು. Send-off  ಪಾರ್ಟಿ ಯೊಂದರ ಸಂದರ್ಭದಲ್ಲಿ ಸ್ನೇಹಿತರೊಬ್ಬರು ನನ್ನ ಹೋಟೆಲ್ ಕೊಠಡಿಗೆ ಆ ಡ್ರಗ್ಸನ್ನು ತಂದಿದ್ದರು. ನಾನು ಆತುರದಲ್ಲಿದ್ದ ಕಾರಣ ದುಬೈ ವಿಮಾನವೇರುವ ಮೊದಲು ಬ್ಯಾಗನ್ನು ಚೆಕ್ ಮಾಡಿಕೊಳ್ಳಲಾಗಲಿಲ್ಲ. ಆದರೆ ದುಬೈ ಏರ್‌ಪೋರ್ಟ್ ಅಧಿಕಾರಿಗಳಿಗೆ ನನ್ನ ಬ್ಯಾಗ್‌ನಲ್ಲಿ ಡ್ರಗ್ಸ್ ಸಿಕ್ಕಿದಾಗ ನಿಜಕ್ಕೂ ದಿಗ್ಭ್ರಮೆಗೊಳಗಾದೆ. ಅದು ನನ್ನ ಜೀವಮಾನದ ಅತ್ಯಂತ ಕೆಟ್ಟ ರಾತ್ರಿ”.

“ಎಂಬತ್ತರ ದಶಕದಲ್ಲಿ ಒಂದೋ, ಎರಡೋ ಬಾರಿ ಮರಿಜುವಾನಾ ಸೇವಿಸಿದ್ದೆ! ದುಬೈನಲ್ಲಿ ಮಾದಕ ವಸ್ತು ಸಾಗಾಟದ ವಿಷಯದಲ್ಲಿ ಭಾರೀ ಕಟ್ಟುನಿಟ್ಟಾದ ನಿಯಮ ಗಳಿರುವುದರಿಂದ ತಪ್ಪೊಪ್ಪಿಕೊಂಡು ಮನ್ನಿಸುವಂತೆ ಕೇಳಿಕೊಂಡೆ”.

“ಐವರು ಹಿತೈಷಿಗಳು ನೀಡಿದ ಶಿಫಾರಸು ಪತ್ರಗಳಿಂದಾಗಿ ಕೊನೆಗೂ ಬಿಡುಗಡೆಯಾಗಿ ಬಂದೆ. ಆ ಪತ್ರಗಳೇ ನನ್ನ ಜೀವ ಉಳಿಸಿದವು ಎಂದೆನಿಸುತ್ತದೆ”.

2005, ಜೂನ್ 11 ರಂದು ದುಬೈ ಏರ್‌ಪೋರ್ಟ್‌ನಲ್ಲಿ 2 ಗ್ರಾಮ್ ಮರಿಜುವಾನಾದೊಂದಿಗೆ ಸಿಕ್ಕಿಬಿದ್ದು 33 ದಿನ ಗಳ ಕಾಲ ಜೈಲಿನಲ್ಲಿದ್ದು ಕೊನೆಗೂ ಆಗಿನ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ, ವಿಪ್ರೊ ಮುಖ್ಯಸ್ಥ ಅಜೀಮ್ ಪ್ರೇಮ್‌ಜಿ, ವಿಜಯ್ ಮಲ್ಯ ಮುಂತಾದವರ ಪ್ರಭಾವ ಬಳಸಿಕೊಂಡು ಬಚಾವ್ ಆಗಿ ಬೆಂಗಳೂರಿಗೆ ಬಂದಾಗ ಫ್ಯಾಶನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಹೀಗೆ ಹೇಳಿದ್ದರು! ಅವರ ಮಗ ಅಡಮ್ ಬಿದ್ದಪ್ಪ ಕೂಡ ಸಾಮಾನ್ಯ ಭೂಪನಲ್ಲ. 2005, ಅಕ್ಟೋಬರ್ 20 ರಂದು ನಡುರಾತ್ರಿ ಕಳೆದಿದ್ದರೂ ತೆರೆದುಕೊಂಡಿದ್ದ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯಲ್ಲಿರುವ ‘ಸ್ಪಿನ್’ ಎಂಬ ನೈಟ್‌ಕ್ಲಬ್ಬನ್ನು ಮುಚ್ಚಿಸಲು ಬಂದ ಪೊಲೀಸರನ್ನು ಕಂಡು ಕುಪಿತನಾದ ಅಡಮ್ ‘ಏಕೆ ಪಾರ್ಟಿ ಹಾಳು ಮಾಡಲು ಬಂದಿದ್ದೀರಿ?’ ಎಂದು ರೇಗಾಡಿದ್ದಲ್ಲದೆ ಕೈ ಮಾಡಲೂ ಮುಂದಾಗಿದ್ದ. ಈ ಘಟನೆಯ ನಂತರ ಆತನನ್ನು ಬಂಧಿಸಿದ ಪೊಲೀಸರು ಅಶೋಕ್ ನಗರ ಪೊಲೀಸ್ ಠಾಣೆಗೆ ಕರೆದೊಯ್ದಾಗ ಅಮ್ಮ ಜುಡಿತ್ ಬಿದ್ದಪ್ಪ ಠಾಣೆಗೆ ಆಗಮಿಸಿ ಪೊಲೀಸರ ಮೇಲೆ ಕೂಗಾಡಿದ್ದರು. ಮಗನನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಕೆ ಒತ್ತಾಯಿಸಿದಾಗ ವೈದ್ಯಕೀಯ ಪರೀಕ್ಷೆ ನಡೆಸಿ, ಮದ್ಯ ಸೇವಿಸಿರುವುದನ್ನು ಖಚಿತ ಪಡಿಸಿಕೊಂಡ ಪೊಲೀಸರು ನಡುರಾತ್ರಿಯಲ್ಲೇ ಅಡಮ್‌ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಒಂದು ದಿನ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿದಾಗ ಅಡಮ್‌ಗೆ ಪರಪ್ಪನ ಅಗ್ರಹಾರವನ್ನು ಪರಿಚಯಿಸಲು ಕರೆದುಕೊಂಡು ಹೋಗಲಾಗಿತ್ತು!

ಇಂತಹ ಹಿನ್ನೆಲೆಯನ್ನು ಹೊಂದಿರುವ ಪ್ರಸಾದ್ ಬಿದ್ದಪ್ಪ ಕಳೆದ ಭಾನುವಾರ ಪೊಲೀಸ್ ಕಮಿಷನರ್ ಶಂಕರ ಬಿದರಿಯವರು ಹೊರಡಿಸಿರುವ ಆದೇಶದಿಂದ ಉಂಟಾ ಗಿರುವ “ಅನ್ಯಾಯ”ದ ವಿರುದ್ಧ ಬೀದಿಗಿಳಿದಿದ್ದರು. ಅವರ ಜತೆಗೆ ಸಹಜವಾಗಿಯೇ ಮನೋವಿರಾಜ್ ಖೋಸ್ಲಾ ಎಂಬ ಮತ್ತೊಬ್ಬ ಫ್ಯಾಶನ್ ಡಿಸೈನರ್, ಕೆಲವು ಡಿಸ್ಕೊ ಜಾಕಿ (ಡಿಜೆ)ಗಳು ಮತ್ತು ಹೊರರಾಜ್ಯದ ಒಂದಷ್ಟು ಮುಖಗಳು ಅಂದದ ಭಿತ್ತಿಪತ್ರ ಹಿಡಿದು ಮಾಧ್ಯಮಗಳ ಮುಂದೆ ಪೋಸು ಕೊಡುತ್ತಿದ್ದರು. ಬರೀ ಇವರೇ ಕೂಗಾಡಿದ್ದರೆ ನಾವೂ ನಿರ್ಲಕ್ಷಿಸಿ ಸುಮ್ಮನಾಗಬಹುದಿತ್ತು. ಆದರೆ ಅವರ ನಡುವೆ ಕುರ್ತಾ ಹಾಕಿದ್ದ ನಮ್ಮ ಕನ್ನಡದ ಒಂದು ಮುಖವೂ ಎದ್ದು ಕಾಣುತ್ತಿತ್ತು. ಅಷ್ಟೇ ಅಲ್ಲ, “ಬೆಂಗಳೂರು ಪೊಲೀಸರು ಕಳ್ಳರನ್ನು ಬಿಟ್ಟು ಕಲಾವಿದರ ಬೆನ್ನಟ್ಟಿದ್ದಾರೆ. ಪೊಲೀಸರು ಬೇಕಾದರೆ ಮದ್ಯ ಸೇವನೆಯನ್ನು ನಿಷೇಧ ಮಾಡಲಿ, ಆದರೆ ಸಂಗೀತದ ಮೇಲೆ ನಿಷೇಧವೇಕೆ? ಮ್ಯೂಸಿಕ್‌ಗೂ ಮದ್ಯಕ್ಕೂ ಏನು ಸಂಬಂಧ? ಈ ನಿಯಮ ಶುದ್ಧ ನಾನ್‌ಸೆನ್ಸ್” ಎಂದು ಟಿವಿ ಕ್ಯಾಮರಾಗಳ ಮುಂದೆ ಚೀರಾಡುತ್ತಿದ್ದರು! ಅವರು ಮತ್ತಾರು ಅಲ್ಲ, ನಮ್ಮ “eನಪೀಠ ನಂಬರ್-7″!!

ನೀವೇ ಯೋಚನೆ ಮಾಡಿ, “ಮ್ಯೂಸಿಕ್‌ಗೂ ಮದ್ಯಕ್ಕೂ ಏನು ಸಂಬಂಧ?” ಅಂತ ಬಹಳ ಮುಗ್ಧರಂತೆ ಪ್ರಶ್ನಿಸುತ್ತಿದ್ದಾರಲ್ಲಾ ಅವರ ಮಾತಿನಲ್ಲಿ ಅದೆಷ್ಟು ಪ್ರಾಮಾ ಣಿಕತೆ ಇದೆ? ಅಷ್ಟಕ್ಕೂ ‘ಲೆಗ್ ಶೇಕ್’ ಮಾಡಲು ಸಂಗೀತವೊಂದೇ ಸಾಕಾ? ಬರೀ ಸಂಗೀತ ಸುಧೆಯನ್ನು ಉಣಬಡಿಸುವುದಕ್ಕಾಗಿ ಬೆಂಗಳೂರಿನಲ್ಲಿ 67 ಡಿಸ್ಕೋಥೆಕ್, ನೈಟ್‌ಕ್ಲಬ್‌ಗಳಿವೆಯೆ? ಸಂಗೀತವೊಂದೇ ಆಗಿದ್ದರೆ, ಊಟ-ಉಪಾಹಾರ ಒದಗಿಸುವುದೇ ಇವುಗಳ ಉದ್ದೇಶವಾಗಿದ್ದರೆ ಡಿಸ್ಕೋಥೆಕ್‌ಗಳು ನಷ್ಟ ಅನುಭವಿಸಿ ಬಾಗಿಲಿಗೆ ಬೀಗಬೀಳದೇ ಇರುತ್ತಿತ್ತಾ? ಅದಿರಲಿ, ನೀವು ಯಾವುದಾದರೂ ಡಿಸ್ಕೋಥೆಕ್‌ಗೆ ಎಂದಾದರೂ ಹೋಗಿ ನೋಡಿದ್ದೀರಾ? ಅಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ಕಂಡಿದ್ದೀರಾ? eನಪೀಠ ಪಡೆದವರೇ ಹೀಗೆ ಅeನ ಪ್ರದರ್ಶಿಸಿದರೆ ಸಾಮಾನ್ಯರ ಗತಿಯೇನು? ಅಮೆರಿಕ, ಗ್ಲೋಬಲೈಜೇಶನ್ ವಿರುದ್ಧ ಮಾತನಾಡುವ ನೀವೇ ಪ್ರಸಾದ್ ಬಿದ್ದಪ್ಪ, ಮನೋವಿರಾಜ್ ಖೋಸ್ಲಾ ಜತೆ ಸೇರುತ್ತೀರೆಂದರೆ ಏನು ಹೇಳಬೇಕು? ನಿಮ್ಮ ಮನಃಸಾಕ್ಷಿಯಾದರೂ ಹೇಗೆ ಒಪ್ಪಿತು? ಇದೇ ಪ್ರತಿಭಟನೆಯನ್ನು ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ನೀಡುವ ವಿಷಯದಲ್ಲಿ, ತಮಿಳರು ಹಾಕುತ್ತಿರುವ ಅಡ್ಡಗಾಲಿನ ವಿರುದ್ಧ ಏಕೆ ಮಾಡುವುದಿಲ್ಲ?

ಅಷ್ಟಕ್ಕೂ ಇವರ ಅಪಸ್ವರಕ್ಕೆ ಕಾರಣವಾದರೂ ಏನು?

“ಟಫ್ ಕಾಪ್” ಎಂದೇ ಹೆಸರಾಗಿರುವ ಶಂಕರ ಬಿದರಿಯವರು ಪೊಲೀಸ್ ಕಮೀಷನರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಬೆಂಗಳೂರಿನಲ್ಲಿ ನಡೆಯುವ ಅಹಿತಕರ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ಕೆಲವು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ, ಕಟ್ಟುನಿಟ್ಟಿನ ಆದೇಶವೊಂದನ್ನೂ ಹೊರಡಿಸಿದ್ದಾರೆ. ಅನಧಿಕೃತವಾಗಿ ನಡೆಯುತ್ತಿದ್ದ ೩೨ ಡಿಸ್ಕೋಥೆಕ್‌ಗಳನ್ನು ಮುಚ್ಚಿಹಾಕಿಸಿರುವ ಬಿದರಿ, ಪರವಾನಗಿ ಹೊಂದಿರುವ ಬಾರ್, ರೆಸ್ಟುರಾ, ನೈಟ್‌ಕ್ಲಬ್, ಡಿಸ್ಕೋಥೆಕ್‌ಗಳಿಗೆ ಕಾನೂನುರೀತ್ಯಾ ರಾತ್ರಿ ೧೧.೩೦ರ ಗಡುವನ್ನು ಮೀರಬಾರದು ಎಂದು ಕಟ್ಟಾe ಹೊರಡಿಸಿದ್ದಾರೆ. ಇದರಿಂದಾಗಿ ಬೆಳಗಿನ ಜಾವ 3,4 ಗಂಟೆವರೆಗೂ ಕಂಠಪೂರ್ತಿ ಕುಡಿದು ಓಲಾಡುತ್ತಿದ್ದವರಿಗೆ, ಕಿವಿ ಗಡಚಿಕ್ಕುವಂತೆ ಮ್ಯೂಸಿಕ್ ಬಾರಿಸುತ್ತಿದ್ದ ‘ಕಲಾ’ವಿದರಿಗೆ ಕುತ್ತು ಬಂದಿದೆ. ನಮ್ಮ eನಪೀಠಿಗಳು ಧ್ವನಿಯೆತ್ತಿರುವುದು ಇದೇ ‘ಕಲಾ’ವಿದರ ‘ರಾತ್ರಿ ಹಕ್ಕಿನ’ ಬಗ್ಗೆ! ಹಾಗಾಗಿಯೇ ಕಳೆದ ಭಾನುವಾರ “Give our life back” ಅಂತ ಪ್ರತಿಭಟನೆಗಿಳಿದಿದ್ದರು. ಅಷ್ಟಕ್ಕೂ ಬಿದರಿಯವರು ಹೊರಡಿಸಿರುವ ಆದೇಶದಲ್ಲಿ ಜನರ ಹಕ್ಕನ್ನು ಕಸಿದುಕೊಳ್ಳುವಂಥದ್ದೇನಿದೆ? eನಪೀಠ ಪುರಸ್ಕೃತರು ಬೀದಿಗಿಳಿದು ಹೋರಾಡುವಂಥ ಯಾವ ಅನ್ಯಾಯ ನಡೆದಿದೆ? ಖಂಡಿತ ಬೆಂಗಳೂರಿನಂತಹ ಮೆಟ್ರೊಪಾಲಿಟನ್ ನಗರದಲ್ಲಿ ಕೆಲವೊಮ್ಮೆಯಾದರೂ ‘ನೈಟ್ ಲೈಫ್’ ಬೇಕು. ಈ ಹಿನ್ನೆಲೆಯಲ್ಲಿ ವಾರಾಂತ್ಯವಾದ ಶುಕ್ರವಾರ ಅಥವಾ ಶನಿವಾರ ರಾತ್ರಿ ಸ್ವಲ್ಪ ಹೆಚ್ಚು ಸಮಯ, ಸ್ವಾತಂತ್ರ್ಯ ನೀಡಿ ಎಂದು ಒತ್ತಾಯಿಸಿದ್ದರೆ ಯಾರೂ ಬೇಡವೆನ್ನುತ್ತಿರಲಿಲ್ಲ. ಅವರ ದುಡ್ಡು, ಅವರ ಖಯಾಲಿ. ನಾವೇನೂ ಕಳೆದುಕೊಳ್ಳುವುದಿಲ್ಲ. ಆದರೆ ನಿತ್ಯವೂ ನಡುರಾತ್ರಿಯವರೆಗೂ ಕುಡಿದು, ಕುಣಿದು, ಕುಪ್ಪಳಿಸುವ ‘ನೈಟ್ ಲೈಫ್’ ಬೇಕೆನ್ನುವುದು ಎಷ್ಟು ಸರಿ? ‘ನೈಟ್ ಲೈಫ್’ ಬೇಕೆನ್ನುವವರು ಯಾರು? ಯಾರ ಪರ್ಸನಲ್ ಲೈಫ್ ಸರಿಯಿಲ್ಲವೋ ಅವರಿಗೆ ನಿತ್ಯವೂ ನೈಟ್ ಲೈಫ್ ಬೇಕು. ಯಾರಿಗೆ ತಮ್ಮ ಪರ್ಸನಲ್ ಲೈಫ್ ಹಾಳು ಮಾಡಿಕೊಳ್ಳಬೇಕೋ ಅವರಿಗೂ ಬೇಕು. ಹಾಗಿರುವಾಗ ನಮ್ಮ eನಪೀಠಿಗಳು ಯಾವ ವರ್ಗಕ್ಕೆ ಸೇರಿದ್ದಾರೆ?!  ಅದಿರಲಿ, ‘ಕುಡಿಯಬೇಡಿ, ಕುಣಿಯಬೇಡಿ, ಸಂಗೀತ ಕೇಳಬೇಡಿ’ ಎಂದು ಬಿದರಿಯವರೇನು ಆದೇಶ ಹೊರಡಿಸಿಲ್ಲ. ಅಕ್ಕ, ಪಕ್ಕದವರಿಗೆ, ಸಾಮಾನ್ಯ ಜನರಿಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ‘ಲೌಡ್ ಮ್ಯೂಸಿಕ್’ಗೆ ಕಡಿವಾಣ ಹಾಕಿದ್ದಾರೆ. ಆದರೆ ಲಘು ಸಂಗೀತ ಕೇಳುವುದಕ್ಕೆ ಯಾವ ಅಭ್ಯಂತರವೂ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಅವರೇನು ಡಿಸ್ಕೋಥೆಕ್, ಬೀದಿ ಗಲಾಟೆ ಅಂತ ಪಕ್ಷಪಾತ ಮಾಡುತ್ತಿಲ್ಲ. ಗಣಪತಿ ಹಬ್ಬ, ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲೂ ರಾತ್ರಿ 10.30 ರ ನಂತರ ಆರ್ಕೆಸ್ಟ್ರಾವನ್ನೂ ಬಂದ್ ಮಾಡಿಸಲಾಗುತ್ತದೆ. ಮಿಗಿಲಾಗಿ ಮಜಾ ಮಾಡಲು ಯೋಗ್ಯ, ಸುರಕ್ಷಿತ ಮಾರ್ಗಗಳು ಸಾಕಷ್ಟಿವೆ. ಪ್ರತಿ ದಿನವೂ ಬಾರ್‌ನಿಂದಲೇ ಮನೆಗೆ ಹೋಗಬೇಕೆಂದಿಲ್ಲ, ಮನೆಯಲ್ಲೇ ಕುಡಿಯಬಹುದು. ಸಂಗೀತ ಕೇಳಲು ನಿತ್ಯವೂ ಲೈವ್‌ಬ್ಯಾಂಡ್, ನೈಟ್ ಕ್ಲಬ್ ಹಾಗೂ ಡಿಸ್ಕೋಥೆಕ್‌ಗಳಿಗೇ ಹೋಗಬೇಕೆಂದಿಲ್ಲ, ಕಾರಿನಲ್ಲೂ ಕೇಳಬಹುದು, ಕಿವಿಗೆ ಐ ಪಾಡ್ ಸಿಕ್ಕಿಸಿಕೊಳ್ಳಬಹುದು. ಊಟ ಬೇಕೆಂದರೆ ನಡುರಾತ್ರಿಯವರೆಗೂ ತೆರೆದಿರಲು ಹೋಟೆಲ್‌ಗಳಿಗೆ ಅನುಮತಿ ನೀಡಿ ಎಂದು ಒತ್ತಾಯ ಮಾಡಲಿ. ಅಲ್ಲದೆ ರಾತ್ರಿಪಾಳಿ ಇರುವ, ಕತ್ತಲು ಕವಿದ ನಂತರವೂ ಕಾರ್ಯಪ್ರವೃತ್ತವಾಗಿರುವ ಬಹುತೇಕ ಎಲ್ಲ ಕಚೇರಿಗಳಲ್ಲೂ ಕ್ಯಾಂಟೀನ್‌ಗಳಿವೆ.

ಆದರೂ ಅಪಸ್ವರವೇಕೆ?

ಕಲಾವಿದರಿಗೆ ಅನ್ಯಾಯವಾಗುತ್ತಿದೆ ಎಂದು ಬೊಬ್ಬೆ ಹಾಕುತ್ತಿದ್ದಾರಲ್ಲಾ ಇವರ ವಾದದಲ್ಲಿ ಯಾವ ಹುರುಳಿದೆ? “ಫುಡ್ ಸೇಫ್ಟಿ ಆಕ್ಟ್’ ಜಾರಿಗೆ ತಂದಿರುವ ಕೇಂದ್ರ ಸರಕಾರ ಸ್ವಾಸ್ಥ್ಯದ ಕಾರಣವೊಡ್ಡಿ ನೂಕುವ ಗಾಡಿಯಲ್ಲಿ ತರಕಾರಿ ಮಾರುವುದಕ್ಕೇ ನಿಷೇಧ ಹೇರಿದೆ. ಹಾಗಾದರೆ ಬಡ ವ್ಯಾಪಾರಿಯ ಹೊಟ್ಟೆಗೆ ಹೊಡೆದಂತಾಗಲಿಲ್ಲವೆ? ಅದಿರಲಿ, ರಸ್ತೆ ಬದಿ ಮಾರುವ ತರಕಾರಿ ತಿಂದರೆ ಜನರ ಆರೋಗ್ಯ ಕೆಡುತ್ತದೆ ಎನ್ನುವುದಾದರೆ, ಬಾರ್, ಪಬ್, ನೈಟ್‌ಕ್ಲಬ್‌ಗಳಲ್ಲಿ ರಾತ್ರಿಯಿಡೀ ಕುಡಿದು ಓಲಾಡುವವರು, ಮನೆ ಮುರುಕರು ಹಾಗೂ ಸ್ಪೀಕರ್‌ಗಳ ಕರ್ಕಶ ಧ್ವನಿಯಿಂದ ಸಮಾಜದ ಸ್ವಾಸ್ಥ್ಯ ಹಾಳಾಗುವುದಿಲ್ಲವೆ? ಈ ಹಿನ್ನೆಲೆಯಲ್ಲಿ ರಾತ್ರಿ 11.30 ರ ನಂತರ ಡಾನ್ಸ್ ಬಾರ್, ಪಬ್, ಡಿಸ್ಕೋಥೆಕ್‌ಗಳನ್ನು ಮುಚ್ಚಿಸುವ ಕ್ರಮದ ಬಗ್ಗೆ ದೃಷ್ಟಿಹಾಯಿಸಿದರೆ ಬೇರೆ ಬೇರೆ ಮಜಲುಗಳು ಕಾಣಿಸುತ್ತಿವೆ.

ಬೆಂಗಳೂರಿನಲ್ಲಿ ಯಾವಾಗ ಬಾಂಬ್ ಸ್ಫೋಟವಾಗುತ್ತದೋ ಎಂಬ ಭಯದಿಂದ ಕಾಲ ಹಾಕುತ್ತಿರುವಾಗಲೇ ಕಳೆದ ಜುಲೈ ೨೫ರಂದು ಸರಣಿ ಸ್ಫೋಟ ಸಂಭವಿಸಿತು. ಆಗ ದೂರಿದ್ದು ಯಾರನ್ನು? ‘ಇಂಟಲಿಜೆನ್ಸ್ ಫೈಲ್ಯೂರ್’ ಅಂತ ಪೊಲೀಸರ ಮೇಲೆ ಒಮ್ಮೆ ಗೂಬೆ ಕೂರಿಸಿದ್ದಾಗಿದೆ. ಇನ್ನು ರಾತ್ರಿಯಿಡೀ ಕುಡಿದು ಕಾರು, ಬೈಕುಗಳೇ ತೂರಾಡಿಕೊಂಡು ಹೋಗುವಂತೆ ಡ್ರೈವ್ ಮಾಡುತ್ತಿರುವಾಗ ಸಹಜವಾಗಿಯೇ ಅಪಘಾತ, ಅಪರಾಧಗಳು ಸಂಭವಿಸುತ್ತವೆ. ಆಗ ದೂರುವುದೂ ನಮ್ಮ ಪೊಲೀಸ್ ವ್ಯವಸ್ಥೆಯನ್ನೇ ಅಲ್ಲವೆ? ಅಂದರೆ ಆರೇಳು ಸಾವಿರ ಸಂಬಳ ತೆಗೆದುಕೊಳ್ಳುವ ಪೊಲೀಸರು ಅರವತ್ತು, ಎಪ್ಪತ್ತು ಸಾವಿರ ಸಂಬಳ ತೆಗೆದು ಕೊಳ್ಳುವವರ ಪುಂಡಾಟಿಕೆಗಳನ್ನು ಸಹಿಸಿಕೊಂಡು, ಅವರಿಗೆ ರಕ್ಷಣೆ ನೀಡಬೇಕೆ? ಇತ್ತೀಚೆಗಂತೂ ನಗರದೊಳಗೆ ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆಂದು ತಲಘಟ್ಟಪುರ, ವರ್ತೂರು, ದೊಡ್ಡಬಳ್ಳಾಪುರ, ಬನ್ನೇರುಘಟ್ಟ ಮುಂತಾದ ಕಡೆ ಡಾಬಾ ಅಂತ ಬೋರ್ಡು ಹಾಕಿಕೊಂಡು ಒಳಗೆ ‘ರೇವ್’ ಪಾರ್ಟಿಗಳು ನಡೆಯಲಾರಂಭಿಸಿವೆ. ಕಳೆದ ವಾರ ನಡೆದ ಪ್ರತಿಭಟನೆಯ ವೇಳೆ ಕೇಳಿದ್ದು ಇಂತಹ ಸ್ವಾತಂತ್ರ್ಯವನ್ನೇ. ಆದರೆ ಇಂತಹ ಡ್ಯಾನ್ಸ್, ಮ್ಯೂಸಿಕ್ ಪಾರ್ಟಿಗಳು ನಡುರಾತ್ರಿಯವರೆಗೂ ನಡೆಯುತ್ತವೆ. ಅಂತಹ ಸಂದರ್ಭದಲ್ಲಿ ಜನ, ವಾಹನ ಸಂಚಾರ ತೀರಾ ಕಡಿಮೆ. ಹುಡುಗಿಯರನ್ನು ಪಾರ್ಟಿಗೆ ಅಂತ ಕರೆದುಕೊಂಡು ಹೋಗಿ ಅನುಚಿತವಾಗಿ ನಡೆದುಕೊಳ್ಳಲು, ಕಳ್ಳಕಾಕರು ದರೋಡೆ, ಲೂಟಿಯಂತಹ ಅಪರಾಧವನ್ನೆಸಗಲು ಅದು ಸಕಾಲ. ಹಾಗಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸರು ಮಂಜಾಗ್ರತಾ ಕ್ರಮವಾಗಿ ಪಾರ್ಟಿಗಳಿಗೆ ಗಡುವು ವಿಧಿಸುವುದು ತಪ್ಪೆ? ಅಷ್ಟಕ್ಕೂ ದಿನದ ೨೪ ಗಂಟೆಗಳೂ ರಕ್ಷಣೆ ಒದಗಿಸಲು ಹೇಗೆತಾನೇ ಸಾಧ್ಯ? ಒಂದು ವೇಳೆ, ಅಹಿತಕರ ಘಟನೆ ನಡೆದರೆ ಸಾರ್ವಜನಿಕರು ಪೊಲೀಸರನ್ನು ದೂರದೇ ಇರುತ್ತಾರೆಯೇ?

ಇವೆಲ್ಲಕ್ಕಿಂತ ಮುಖ್ಯವಾದ ವಿಷಯವೊಂದಿದೆ.

ಮೊನ್ನೆ ಮಂಚನಬೆಲೆ ಡ್ಯಾಂ ಬಳಿ ನಡೆಯುತ್ತಿದ್ದ ರೇವ್ ಪಾರ್ಟಿಯ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯವರು ನಡೆಸಿದ ದಾಳಿಯ ಸಂದರ್ಭದಲ್ಲಿ ಸಿಕ್ಕಿದ ಗಾಂಜಾ ಮತ್ತಿ ತರ ಮಾದಕ ವಸ್ತುಗಳನ್ನು ನೆನಪಿಸಿಕೊಳ್ಳಿ. ಈ ಮಾದಕ ವಸ್ತುವಿಗೂ ಅಂತಾರಾಷ್ಟ್ರೀಯ ಭಯೋತ್ಪಾದನೆಗೂ ನೇರ ಸಂಬಂಧವಿದೆ! ಅದು ಜಗತ್ತಿನ ಯಾವುದೇ ದೇಶ, ಮೂಲೆಯಲ್ಲಿ ನಡೆಯುತ್ತಿರುವ ಪ್ರತ್ಯೇಕತಾ ಚಳವಳಿ, ಬಂಡಾಯ, ಭಯೋತ್ಪಾದನೆ ಇರಬಹುದು. ಈ ಎಲ್ಲ ಚಳವಳಿ, ಬಂಡಾಯ, ಭಯೋತ್ಪಾದನೆಗಳಿಗೂ ಹಣ ಪೂರೈಕೆ ಯಾಗುತ್ತಿರುವುದೇ ಮಾದಕ ವಸ್ತು ಮಾರಾಟ (ಡ್ರಗ್ಸ್ ಪೆಡ್ಲಿಂಗ್)ದಿಂದ!! ಅದಕ್ಕಾಗಿಯೇ ಮಾದಕವಸ್ತು ವ್ಯವಹಾರವನ್ನು ವಿಶ್ವಸಂಸ್ಥೆ “ಗ್ಲೋಬಲ್ ಕ್ರೈಮ್”ಎಂದು ಘೋಷಣೆ ಮಾಡಿದೆ. ಇವತ್ತು ಭಯೋತ್ಪಾದನೆ ಎಂಬುದು ನಕಲಿ ನೋಟುಗಳ ರೂಪದಲ್ಲೂ ಇದೆ, ಮಾದಕ ವಸ್ತು ಮಾರಾಟದಲ್ಲೂ ಇದೆ. ಪಾಕಿಸ್ತಾನದಲ್ಲಿ ತಯಾರಾಗಿ ಬಾಂಗ್ಲಾ ಮೂಲಕ ಭಾರತವನ್ನು ಸೇರಿರುವ 17 ಸಾವಿರ ಕೋಟಿ ರೂ. ನಕಲಿ ನೋಟುಗಳು ನಮ್ಮ ದೇಶದ ಅರ್ಥವ್ಯವಸ್ಥೆಯನ್ನೇ ಬುಡಮೇಲು ಮಾಡಬಲ್ಲ ಸಾಮರ್ಥ್ಯ ಹೊಂದಿದ್ದರೆ, ಮಾದಕ ವಸ್ತು ನಮ್ಮ ಪ್ರತಿಭಾವಂತ ಯುವಜನಾಂಗದ ಆರೋಗ್ಯವನ್ನೇ ಹದಗೆಡಿಸಬಲ್ಲದು. ಈ ಮಾದಕ ವಸ್ತುವಿನ ಮುಖ್ಯ ಮಾರಾಟ ತಾಣಗಳು ಮತ್ತಾವುವೂ ಅಲ್ಲ ಡಾನ್ಸ್‌ಬಾರ್, ನೈಟ್ ಕ್ಲಬ್ ಹಾಗೂ ಡಿಸ್ಕೋಥೆಕ್‌ಗಳು! ಸಂಗೀತ ಎಷ್ಟೇ ಚೆನ್ನಾಗಿದ್ದರೂ ‘ಮತ್ತು’ ಬಾರದೆ ಕಾಲು ಕುಣಿಸಲು ಸಾಧ್ಯವಿಲ್ಲ. ‘ಮತ್ತು’ ಮತ್ತೂ ಏರಬೇಕಾದರೆ, ಗಣಬಂದವರಂತೆ ಕುಣಿಯಬೇಕಾದರೆ ಮದ್ಯ, ಮಾನಿನಿಯರ ಜತೆಗೆ ಮಾದಕ ವಸ್ತುವೂ ಬೇಕಾಗು ತ್ತದೆ. ಅದಕ್ಕೆ ಮಂಚನಬೆಲೆ ಜೀವಂತ ಉದಾಹರಣೆ.  ಒಂದು ವೇಳೆ, ಕಾಲು ಕುಣಿಸಲು ‘ಮತ್ತು’ ಬೇಕಿಲ್ಲ ಎನ್ನುವವರಿಗೆ ಖಂಡಿತ ಡಿಸ್ಕೋಥೆಕ್‌ಗಳ ಅಗತ್ಯವಿಲ್ಲ. ಇದು ನಮ್ಮ eನಪೀಠಿಗಳಿಗೆ ಅರ್ಥವಾಗದಿದ್ದರೇನಂತೆ ಶಂಕರ ಬಿದರಿಯವರಿಗೆ ಗೊತ್ತು. “ನಾನಿರುವುದು ಒಂದು ಕೋಟಿ ಬೆಂಗಳೂರಿಗರ ಹಿತಾಸಕ್ತಿಯನ್ನು ಕಾಪಾಡುವುದಕ್ಕೇ ಹೊರತು, ನೈಟ್ ಲೈಫ್ ಬೇಕೆನ್ನುವ ಕೆಲವು ಜನರ ರಕ್ಷಣೆಗಲ್ಲ” ಎಂದು ಬಿದರಿಯವರು ಹೇಳಿರುವುದು ಅದೇ ಕಾರಣಕ್ಕೆ.

ಬೆಂಗಳೂರು ಕಾಸ್ಮೊಪಾಲಿಟನ್ ಸಿಟಿಯಾಗಿರಬಹುದು. ಇಲ್ಲಿಗೆ ಯಾವ ರಾಜ್ಯದಿಂದ ಯಾರು ಬೇಕಾದರೂ ಬಂದು ಭವ್ಯ ಭವಿಷ್ಯವನ್ನು ಕಂಡುಕೊಳ್ಳಲಿ. ನಮ್ಮ ಅಭ್ಯಂತರವೇನೂ ಇಲ್ಲ. ಆದರೆ ಬೆಂಗಳೂರಿನ ಭವಿಷ್ಯವನ್ನು ಹಾಳುಗೆಡವುದನ್ನು ಸಹಿಸಲು ಸಾಧ್ಯವಿಲ್ಲ.  ವೀರಪ್ಪನ್‌ನ ಸಹಚರರನ್ನು ಸಾಲಾಗಿ ಕೊಂದು, ಕೊನೆಗೆ ಬೆರಳೆಣಿಕೆಯಷ್ಟು ಜನರು ಮಾತ್ರ ಉಳಿ ಯುವಂತೆ ಮಾಡುವ ಮೂಲಕ ವೀರಪ್ಪನ್‌ನ ಬೆನ್ನುಹುರಿ ಮುರಿದಿದ್ದ ಶಂಕರ್ ಬಿದರಿಯವರೇ, ನಿಮ್ಮ ಡ್ಯೂಟಿಯನ್ನು ನಿರಾತಂಕವಾಗಿ ಮಾಡಿ.

ಕನ್ನಡಿಗರ ಬೆಂಬಲ ನಿಮಗಿದೆ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: