10th anniversay of Pokhran II, no celebration – ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಕಾಂಗ್ರೆಸ್!

1998 ಮೇ 11ರಂದು ರಾಷ್ಟ್ರವೇ ಹೆಮ್ಮೆ ಪಡುವಂಥ ಅಣು ಪರೀಕ್ಷೆ ನಡೆಸಿ ಇಡೀ ಜಗತ್ತಿನ ಗಮನ ಸೆಳೆದ, ಭಾರತದ ಶಕ್ತಿಯನ್ನು ಜಗಜ್ಜಾಹೀರಾತು ಮಾಡಿದ ರಾಜಸ್ತಾನದ ಪುಟ್ಟ ಗ್ರಾಮ ಪೋಖ್ರಾನ್ ನಲ್ಲಿ ಸ್ಮಶಾನ ಮೌನ. ಪರೀಕ್ಷೆಯ ಹತ್ತನೇ ವರ್ಷದ ಸಂಭ್ರಮಕ್ಕೆ ತಳಿರು ತೋರಣಗಳಿಲ್ಲ, ಹೋಗಲಿ ಅಣ್ವಸ್ತ್ರ ಸಿಡಿಸಿದ ಜಾಗದಲ್ಲಿ ಸಂತಸಕ್ಕೆ ಸಾಂಕೇತಿಕವಾಗಿ ಪಟಾಕಿಯನ್ನೂ ಸಿಡಿಸಲಾಗಿಲ್ಲ.
Pokhran II 10th anniversary on May 111998, ಆಗಸ್ಟ್ 15

ನನ್ನ ಆತ್ಮೀಯ ಸಹೋದರ, ಸಹೋದರಿಯರೇ ಹಾಗೂ ಮಕ್ಕಳೇ,

ಐವತ್ತೊಂದನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ. ಸ್ವಾತಂತ್ರ್ಯ ಬಂದು ಅರ್ಧ ಶತಮಾನವೇ ಕಳೆಯಿತು, ಆದರೂ ನಿನ್ನೆ ಬಂದಂತೆ ಭಾಸವಾಗುತ್ತಿದೆ! ನಮ್ಮ ಪ್ರೀತಿ ಆದರಗಳಿಗೆ ಪಾತ್ರವಾಗಿರುವ ತ್ರಿವರ್ಣ ಧ್ವಜವನ್ನು ಪಂಡಿತ್ ಜವಾಹರಲಾಲ್ ನೆಹರು ಅವರು ಮೊಟ್ಟಮೊದಲ ಬಾರಿಗೆ ಹಾರಿಸಿದ್ದು ಇದೇ ಸ್ಥಳದಲ್ಲಿ. ಅಂದಿನಿಂದ ಐತಿಹಾಸಿಕ ಕೆಂಪು ಕೋಟೆಯ ಮೇಲಿನಿಂದ ರಾಷ್ಟ್ರಧ್ವಜವನ್ನು ಹಾರಿಸುವುದು ಸಂಪ್ರದಾಯವಾಯಿತು.

ನಮಗೆಲ್ಲ ಗೊತ್ತೇ ಇದೆ, ಸ್ವಾತಂತ್ರ್ಯ ನಮಗೆ ಸುಲಭವಾಗಿ ಬಂದಿದ್ದಲ್ಲ. ಒಂದೆಡೆ ಮಹಾತ್ಮ ಗಾಂಧೀಜಿಯವರ ನಾಯಕತ್ವದಡಿ ಸಾವಿರಾರು ಮಹಿಳೆಯರು, ಪುರುಷರು ಜೈಲು ಸೇರಿ ವನವಾಸ ಅನುಭವಿಸಿದರು. ಇನ್ನೊಂದೆಡೆ ಅಸಂಖ್ಯ ಕ್ರಾಂತಿಕಾರಿಗಳು ನೇಣಿಗೆ ತಲೆಕೊಟ್ಟು ದೇಶಕ್ಕಾಗಿ ಪ್ರಾಣವನ್ನೇ ನೀಡಿದರು. ಇಂತಹ ಕಂಡು, ಕಾಣದ ಹುತಾತ್ಮರು ಹಾಗೂ ಹೋರಾಟಗಾರರಿಗೆ ಇಂದು ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಆಭಾರಿ. ಅವರಿಗೆ ನಾವೆಲ್ಲ ಒಟ್ಟು ಸೇರಿ ಗೌರವ ಅರ್ಪಿಸೋಣ ಹಾಗೂ ಸರ್ವಸ್ವವನ್ನೂ ತ್ಯಾಗ ಮಾಡಬೇಕಾಗಿ ಬಂದರೂ ಸ್ವಾತಂತ್ರ್ಯವನ್ನು ಕಾಪಾಡುತ್ತೇವೆ ಎಂದು ಶಪಥ ಮಾಡೋಣ. ನಮ್ಮ ದೇಶದ ಮೇಲೆ ಆಗಿಂದಾಗ್ಗೆ ಆಕ್ರಮಣ ನಡೆದಿದೆ. ಸ್ವಾತಂತ್ರ್ಯ ಬಂದ ಮೇಲೂ 50 ವರ್ಷಗಳಲ್ಲಿ ನಾಲ್ಕು ಬಾರಿ ಆಕ್ರಮಣಕ್ಕೆ ತುತ್ತಾಗಿದ್ದೆವು. ಆದರೂ ಸ್ವಾತಂತ್ರ್ಯವನ್ನು ರಕ್ಷಿಸಿಕೊಂಡಿದ್ದೇವೆ, ಸಮಗ್ರತೆಯನ್ನು ಕಾಪಾಡಿಕೊಂಡಿದ್ದೇವೆ. ಇದರ ಹೆಗ್ಗಳಿಕೆ ನಿಸ್ಸಂಶಯವಾಗಿ ನಮ್ಮ ಸೈನಿಕರಿಗೆ ಸಲ್ಲಬೇಕು. ಅವರು ಮನೆಯಿಂದ ಬಲು ದೂರದಲ್ಲಿ, ಪ್ರೀತಿಸುವ ಜೀವಗಳಿಂದ ದೂರವಾಗಿ, ಅಪಾಯವನ್ನು ಎದುರಿಗೆ ನಿಲ್ಲಿಸಿಕೊಂಡು ಹಗಲು ರಾತ್ರಿಯೆನ್ನದೆ ದೇಶವನ್ನು ಕಾಯುತ್ತಿದ್ದಾರೆ. ಹಾಗಾಗಿಯೇ ನಾವು ಸುರಕ್ಷಿತರಾಗಿದ್ದೇವೆ. ಅದು ಕೊರೆಯುವ ಚಳಿಯ ಸಿಯಾಚಿನ್ ಇರಬಹುದು, ಈಶಾನ್ಯ ಭಾಗದ ದಟ್ಟ ಅರಣ್ಯ, ಕಛ್, ಜೈಸಲ್ಮೇರ್‌ನ ಮರುಭೂಮಿ ಅಥವಾ ಹಿಂದೂ ಮಹಾಸಾಗರದಲ್ಲಿನ ಆಳದ ನೀರಾಗಿರಬಹುದು, ನಮ್ಮ ಸೈನಿಕರು ಎಲ್ಲೆಡೆಗಳಲ್ಲೂ  ನಿಗಾ ಇಟ್ಟಿದ್ದಾರೆ. ಸಮಸ್ತ ದೇಶವಾಸಿಗಳ ಪರವಾಗಿ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯನ್ನು ನಾನು ಅಭಿನಂದಿಸುತ್ತೇನೆ. O! Brave Soldiers, we are proud of you!

ಹೌದು, ಸೇನಾ ಪಡೆಗಳಿಗೆ ನಮ್ಮ ಸಹಕಾರ ಬೇಕು. ಅವರ ನಂತರದ ಗೌರವ ಹೊಲಗದ್ದೆಗಳಲ್ಲಿ ದುಡಿದು ದೇಶಕ್ಕೆ ಅನ್ನ ನೀಡುತ್ತಿರುವ ನಮ್ಮ ರೈತರು ಹಾಗೂ ಬೆವರು ಸುರಿಸಿ ದುಡಿಯುತ್ತಿರುವ ಕಾರ್ಮಿಕರಿಗೆ ಸಲ್ಲಬೇಕು. ಅವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಲಾಲ್ ಬಹಾದ್ದೂರ್ ಶಾಸ್ತ್ರಿ ಹೇಳಿದರು-“ಜೈ ಜವಾನ್, ಜೈ ಕಿಸಾನ್”. ಇವರಲ್ಲಿ ಒಬ್ಬರು ಇಲ್ಲದಿದ್ದರೆ ಇನ್ನೊಬ್ಬರು ಅಪೂರ್ಣ, ಇನ್ನೊಬ್ಬರು ಇಲ್ಲದಿದ್ದರೆ ಮೊದಲಿನವರು ಅಪರಿಪೂರ್ಣ. ಇವರ ಜತೆ ನಾನು ಹೊಸಬರೊಬ್ಬರನ್ನು ಸೇರಿಸಲು ಬಯಸುತ್ತೇನೆ-`ಜೈ ವಿಜ್ಞಾನ್”! ಅಷ್ಟಕ್ಕೂ, ಈಗಿರುವ ಶಕ್ತಿ-ಸಾಮರ್ಥ್ಯಗಳಿಂದಲೇ  21ನೇ ಶತಮಾನದಲ್ಲೂ ನಮ್ಮ ದೇಶವನ್ನು ಅಭಿವೃದ್ಧಿಗೊಳಿಸುವುದಕ್ಕಾಗಲಿ, ರಕ್ಷಿಸಿಕೊಳ್ಳುವುದಕ್ಕಾಗಲಿ ಸಾಧ್ಯವಿಲ್ಲ. ಒಂದು ವೇಳೆ ಹೊಸ ಅಪಾಯಗಳನ್ನು ಸಮರ್ಥವಾಗಿ ಎದುರಿಸಬೇಕಾದರೆ, ದೇಶವನ್ನು ರಕ್ಷಿಸಬೇಕಾದರೆ ನಾವು ನಮ್ಮ ಸೇನಾ ಪಡೆಗಳನ್ನು ಆಧುನೀಕರಣಗೊಳಿಸಲೇಬೇಕು. 1998, ಮೇ 11 ಮತ್ತು 13ರಂದು ನಾವು ಅಣು ಪರೀಕ್ಷೆ ನಡೆಸಿದ್ದು ಈ ಒಂದು ಕಾರಣಕ್ಕಾಗಿಯೇ. ಆದರೆ ಅಣುಪರೀಕ್ಷೆ ಎಂಬುದು ಒಂದು ರಾತ್ರಿಯ, ದಿನದ ಪ್ರಯತ್ನದ ಫಲವಲ್ಲ. ನಮ್ಮ ವಿಜ್ಞಾನಿಗಳು, ಎಂಜಿನಿಯರ್‌ಗಳು, ತಂತ್ರಜ್ಞರು ಮತ್ತು ರಕ್ಷಣಾ ಪಡೆಗಳು ಹಲವಾರು ವರ್ಷಗಳಿಂದ ಪಟ್ಟ ಶ್ರಮದ ಫಲವದು. ಶ್ರೀಮತಿ ಇಂದಿರಾ ಗಾಂಧಿಯವರು ನಿರ್ಮಿಸಿ ಕೊಟ್ಟ ಅಡಿಪಾಯದ ಮೇಲಿನ ಕೆಲಸವನ್ನು ವಿಸ್ತರಿಸುವ ಕಾರ್ಯವನ್ನಷ್ಟೇ ನಾನು ಮಾಡುತ್ತಿದ್ದೇನೆ…..”

ಹತ್ತು ವರ್ಷಗಳ ಹಿಂದೆ ಕೆಂಪುಕೋಟೆಯ ಮೇಲೆ ನಿಂತು ಅಟಲ್ ಬಿಹಾರಿ ವಾಜಪೇಯಿಯವರು ಆಡಿದ ಈ ಮಾತುಗಳು ಇಂದಿಗೂ ಕಿವಿಯಲ್ಲಿ ಗುಂಯ್‌ಗುಡುತ್ತಿವೆ. ಅವರಂತಹ ಒಬ್ಬ ಮುತ್ಸದ್ದಿಯ ಬಾಯಿಯಿಂದ ಮಾತ್ರ ಇಂತಹ ಮಾತುಗಳು ಹೊರಡಲು ಸಾಧ್ಯ. ಅವರಲ್ಲಿ ಮಾತ್ರ  ಇಂತಹ ಹೃದಯ ವೈಶಾಲ್ಯತೆಯನ್ನು ಕಾಣಲು ಆಗುತ್ತದೆ. ಆದರೆ ಬೇಸರದ ಸಂಗತಿಯೆಂದರೆ ರಾಷ್ಟ್ರವೇ ಹೆಮ್ಮೆ ಪಟ್ಟುಕೊಳ್ಳಬೇಕಾದ ಸಾಧನೆಯ ವಿಷಯದಲ್ಲೂ ಸೋನಿಯಾ ಗಾಂಧಿಯವರ ಕಾಂಗ್ರೆಸ್ ಸರಕಾರ ಪಕ್ಷಭೇದ ಮಾಡಲು ಹೊರಟಿದೆ! 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರಕಾರ ನಡೆಸಿದ್ದ ಅಣುಪರೀಕ್ಷೆಗೆ ನಾಳೆ ಭಾನುವಾರಕ್ಕೆ ಹತ್ತು ವರ್ಷ ತುಂಬಲಿದೆ. ಅಂತಹ ರಾಷ್ಟ್ರೀಯ ಸಾಧನೆಯನ್ನು ನೆನಪಿಸಿಕೊಳ್ಳುವ ಯಾವ ಆಚರಣೆಯನ್ನೂ ಅಧಿಕೃತವಾಗಿ ಮಾಡಕೂಡದೆಂದು ಡಿಆರ್‌ಡಿಓ ಸೇರಿದಂತೆ ಅಣು ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಎಲ್ಲ ಸಂಸ್ಥೆಗಳಿಗೂ ಕೇಂದ್ರ ಸರಕಾರ ಸೂಚನೆ ನೀಡಿದೆ!! ಅಷ್ಟೇ ಅಲ್ಲ, “1998ರಲ್ಲಿ ನಡೆಸಿದ್ದು ಕೇವಲ ಸ್ಫೋಟವನ್ನಷ್ಟೇ” ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಎಂ.ಎಂ. ಪಲ್ಲಂ ರಾಜು ಲಘುವಾಗಿ ಮಾತನಾಡಿದ್ದಾರೆ. ಏನಾಗಿದೆ ಈ ಕೇಂದ್ರ ಸರಕಾರ ಮತ್ತು ಅದರ ಮಂತ್ರಿವರ್ಯರಿಗೆ?

ಅಟಲ್ ಬಿಹಾರಿ ವಾಜಪೇಯಿಯವರು ನಡೆಸಿದ್ದು ಕೇವಲ ಅಣು ಸ್ಫೋಟವನ್ನಷ್ಟೇ, ಮೊದಲೇ ಎಲ್ಲವೂ ಸಿದ್ಧವಾಗಿತ್ತು ಎನ್ನುವುದಾದರೆ ನರಸಿಂಹರಾವ್, ದೇವೇಗೌಡ, ಐ.ಕೆ. ಗುಜ್ರಾಲ್ ಕಾಲದಲ್ಲೇ ಏಕೆ ಅಣುಪರೀಕ್ಷೆ ನಡೆಸಲಿಲ್ಲ? ಅಮೆರಿಕವನ್ನು ಎದುರು ಹಾಕಿಕೊಂಡು ಅಣುಪರೀಕ್ಷೆ ನಡೆಸುವ ತಾಕತ್ತು ಏಕೆ ಯಾರಿಗೂ ಇರಲಿಲ್ಲ? ಅದಿರಲಿ, ರಾಷ್ಟ್ರದ ಸಾಧನೆಯ ವಿಷಯದಲ್ಲಿ ರಾಜಕೀಯ ಮಾಡುವುದು ಎಷ್ಟು ಸರಿ? ಈ ದೇಶದ ಸೈನಿಕರ, ವಿಜ್ಞಾನಿಗಳ ಸಾಧನೆಗೂ ರಾಜಕೀಯ ಬಣ್ಣಬಳಿಯುವುದು ತಪ್ಪಲ್ಲವೇ? ಅಷ್ಟಕ್ಕೂ ಇವತ್ತು ಕಾಂಗ್ರೆಸ್ ಯಾವ ಅಣುಸಹಕಾರದ (ಅಮೆರಿಕದ ಜತೆಗಿನ) ಬಗ್ಗೆ ಮಾತನಾಡುತ್ತಿದೆಯೋ ಅಂತಹ ಅಣು ಸಹಕಾರ ಒಪ್ಪಂದಕ್ಕೆ ಮೂಲ ಕಾರಣವೇ ಪೋಖ್ರಾನ್ ಅಣು ಪರೀಕ್ಷೆ. ಭಾರತವನ್ನು ಒಂದು ಬಲಿಷ್ಠ ಶಕ್ತಿ ಎಂದು ಜಗತ್ತಿನ ಬಲಾಢ್ಯ ರಾಷ್ಟ್ರಗಳು ಒಪ್ಪಿಕೊಂಡಿದ್ದೇ 1998ರ ಅಣು ಪರೀಕ್ಷೆಯ ನಂತರ. ಅಂತಹ ಹೆಮ್ಮೆಪಡಬೇಕಾದ ರಾಷ್ಟ್ರೀಯ ಸಾಧನೆಯ ವಿಷಯದಲ್ಲೂ ಪಕ್ಷ ಭೇದ ಏಕೆ ಸೋನಿಯಾ ಗಾಂಧಿಯವರೇ?

1971ರಲ್ಲಿ ಪಾಕಿಸ್ತಾನವನ್ನು ಸೋಲಿಸಿ, ಬಾಂಗ್ಲಾದೇಶವನ್ನು ಸೃಷ್ಟಿಸಿದಾಗ ತಾವೊಬ್ಬ ವಿರೋಧ ಪಕ್ಷದ ನಾಯಕ ಎಂಬುದನ್ನು ಮರೆತು ಇಂದಿರಾ ಗಾಂಧಿಯವರನ್ನು “ದುರ್ಗಾ” ಎಂದು ವರ್ಣಿಸಿದ್ದರು ವಾಜಪೇಯಿ. ಅವರಿಗೆ ಪಕ್ಷಭೇದಕ್ಕಿಂತ ರಾಷ್ಟ್ರೀಯ ಹಿತಾಸಕ್ತಿ ಮುಖ್ಯವಾಗಿತ್ತು. ಆದರೆ 2004, ಮೇನಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಕಾಂಗ್ರೆಸ್ ಮಾಡಿದ ಮೊದಲ ಕೆಲಸವೇನೆಂದರೆ ದಾಖಲೆಯ ಸಮಯದಲ್ಲಿ ನಿರ್ಮಾಣ ಮಾಡಲಾಗಿದ್ದ 15 ಸಾವಿರ ಕಿ.ಮೀ. ಉದ್ದದ `ಸುವರ್ಣ ಚತುಷ್ಪಥ ಹೆದ್ದಾರಿ’ಯುದ್ದಕ್ಕೂ ಇದ್ದ ವಾಜಪೇಯಿಯವರ ಭಾವಚಿತ್ರಗಳನ್ನು ಒಂದೂವರೆ ಕೋಟಿ ರೂ. ಖರ್ಚು ಮಾಡಿ ತೆಗೆಸಿಹಾಕಿದ್ದು! ಅಂದು ಪ್ರಾರಂಭವಾದ ಕಾಂಗ್ರೆಸ್ಸಿನ ಸಣ್ಣ ಬುದ್ಧಿ ಮುಂದುವರಿಯುತ್ತಲೇ ಹೋಯಿತು. ಅದರ ಮುಂದಿನ ಬಲಿಪಶು ಪ್ರತಿವರ್ಷ ಜುಲೈ 26ರಂದು ನಡೆಯುತ್ತಿದ್ದ `ಕಾರ್ಗಿಲ್ ವಿಜಯ ದಿನ’. ನಮ್ಮ ಸೈನಿಕರ ಅಂತಃಶಕ್ತಿಯನ್ನು ಹೆಚ್ಚಿಸುವ ಕಾರ್ಗಿಲ್ ವಿಜಯೋತ್ಸವ ಆಚರಣೆಯನ್ನೂ ನಿಲ್ಲಿಸುವ ಮೂಲಕ ರಾಜಕೀಯ ದ್ವೇಷಕ್ಕಿಳಿಯಿತು. ದೇಶಕ್ಕಾಗಿ ಪ್ರಾಣ ನೀಡಿದ ಸೈನಿಕರ ತ್ಯಾಗಕ್ಕೇ ಅಪಚಾರವೆಸಗಿತು. ಅಷ್ಟೇ ಅಲ್ಲ, ಈಗ ಪೋಖ್ರಾನ್ ಸಾಧನೆಯನ್ನು ಹೆಮ್ಮೆಯಿಂದ ನೆನಪು ಮಾಡಿಕೊಳ್ಳುವುದಕ್ಕೂ ಅಡ್ಡಗಾಲು ಹಾಕಿದೆ. ಆದರೆ ಅಣುಪರೀಕ್ಷೆ ನಡೆಸಿದ್ದು ವಾಜಪೇಯಿಯವರೇ ಆದರೂ ಅದರಿಂದ ಹೆಚ್ಚಾಗಿದ್ದು ದೇಶದ ಕೀರ್ತಿಯೇ ಅಲ್ಲವೆ? “ಯಾವ ರಾಷ್ಟ್ರಗಳು ತಮ್ಮ ವೀರಕಲಿಗಳನ್ನು ನೆನಪಿಸಿಕೊಳ್ಳುವುದಿಲ್ಲವೋ ಅವು ಸುಸಂಸ್ಕೃತ ರಾಷ್ಟ್ರಗಳಲ್ಲ” (Those nations that do not remember their heroes are not cultured nations) ಎಂದು ಪೋಖ್ರಾನ್ ಅಣುಪರೀಕ್ಷೆ ಯೋಜನೆ(ಆಪರೇಶನ್ ಶಕ್ತಿ)ಯ ಕಾರ್ಯ ನಿರೂಪಕರಲ್ಲಿ ಒಬ್ಬರಾದ ಕೆ. ಸಂತಾನಮ್ ಮನನೊಂದು ಹೇಳಿದ್ದಾರೆ. ಈ ಕಾಂಗ್ರೆಸ್‌ಗೇನಾಗಿದೆ?

ಒಂದು ದೇಶ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಬೇಕಾದರೆ ಅದರ ನಾಯಕರಲ್ಲಿ ಹೃದಯ ವೈಶಾಲ್ಯತೆ ಇರಬೇಕು. ಇಂದು ಭಾರತ ಒಂದು ಅಣ್ವಸ್ತ್ರ ರಾಷ್ಟ್ರವಾಗಿ ಹೊರ ಹೊಮ್ಮಿರುವುದಕ್ಕೆ ಯಾರೋ ಒಬ್ಬರು ಕಾರಣರಲ್ಲ. ಹೋಮಿ ಜೆಹಾಂಗೀರ್ ಭಾಭಾ 1944ರಲ್ಲಿಯೇ ಭಾರತವನ್ನು ಅಣುಶಕ್ತಿ ಹೊಂದಿರುವ ರಾಷ್ಟ್ರವನ್ನಾಗಿ ಮಾಡುವ ಕನಸ್ಸು ಕಂಡಿದ್ದರು. ಭಾರತದ ಅಣುಶಕ್ತಿಯ ನಿಜವಾದ ಪಿತಾಮಹ ಅವರೇ. ಆದರೆ ಅವರ ಕನಸ್ಸನ್ನು ಸಾಕಾರಗೊಳಿಸಲು ನೆಹರು ಸಹಕಾರ ನೀಡಲಿಲ್ಲ. 1962ರ ಕದನದಲ್ಲಿ ಅವಮಾನಕಾರಿಯಾಗಿ ಚೀನಾಕ್ಕೆ ಶರಣಾದ ನಂತರ ಎಚ್ಚೆತ್ತುಕೊಂಡ ನೆಹರು ಅಣುಶಕ್ತಿಯನ್ನು ಅಭಿವೃದ್ಧಿಪಡಿಸುವತ್ತ ಗಮನಹರಿಸಿದರು. ಇಂದಿರಾ ಗಾಂಧಿಯವರಂತೂ 1968ರಲ್ಲಿ ಜಾರಿಗೆ ಬಂದ ಅಣುಪ್ರಸರಣ ನಿಷೇಧ ಒಪ್ಪಂದ (ಎನ್‌ಪಿಟಿ)ಕ್ಕೆ ಸಹಿಹಾಕಲು ನಿರಾಕರಿಸುವ ಮೂಲಕ ಮುಂದೆ ಎದುರಾಗಲಿದ್ದ ಅಪಾಯವನ್ನು ತಪ್ಪಿಸಿದರು ಹಾಗೂ 1974, ಮೇ 18ರಂದು ನಡೆದ ಭಾರತದ ಮೊಟ್ಟಮೊದಲ ಅಣು ಪರೀಕ್ಷೆಗೆ ಕಾರಣರಾದರು. ಮುಂದೆ ಬಂದ ರಾಜೀವ್ ಗಾಂಧಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 1988ರಲ್ಲಿ ಅಣ್ವಸ್ತ್ರೀಕರಣಕ್ಕೆ ಆದೇಶ ನೀಡಿದರು. ಆದರೆ ಅಭಿವೃದ್ಧಿಗೊಳಿಸಿದ ಅಣ್ವಸ್ತ್ರಗಳನ್ನು  ಪರೀಕ್ಷೆ ಮಾಡಲೇಬೇಕಾದ ಅನಿವಾರ್ಯತೆ ಎದುರಾಯಿತು. ಅಮೆರಿಕಕ್ಕೆ ಅಂಜಿದ ಪಿ.ವಿ. ನರಸಿಂಹ ರಾವ್ ಪರೀಕ್ಷೆಗೆ ಅನುಮತಿ ನೀಡಲಿಲ್ಲ. ಆದರೇನಂತೆ ಅಟಲ್ ಬಿಹಾರಿ ವಾಜಪೇಯಿ ಅವರು 1998, ಏಪ್ರಿಲ್ 8ರಂದು ಅಧಿಕಾರಕ್ಕೆ ಬಂದ  ಕೂಡಲೇ ಅಣುಪರೀಕ್ಷೆ ನಡೆಸುವಂತೆ ಆದೇಶ ನೀಡಿದರು. ಆಗಿನ ಡಿಆರ್‌ಡಿಒ ಅಧ್ಯಕ್ಷರಾಗಿದ್ದ ಡಾ. ಅಬ್ದುಲ್ ಕಲಾಂ(ಪರೀಕ್ಷೆಯ ವೇಳೆ ಕಲಾಂಗೆ ಮೇಜರ್ ಜನರಲ್ ಪೃಥ್ವಿರಾಜ್ ಎಂಬ ಗುಪ್ತನಾಮ ನೀಡಲಾಗಿತ್ತು), ಭಾರತೀಯ ಅಣುಶಕ್ತಿ ಆಯೋಗದ ಅಧ್ಯಕ್ಷ ಆರ್. ಚಿದಂಬರಂ ಹಾಗೂ ಭಾಭಾ ಅಣುಶಕ್ತಿ ಕೇಂದ್ರದ ಅನಿಲ್ ಕಾಕೋಡ್ಕರ್ ನೇತೃತ್ವದಲ್ಲಿ ನಮ್ಮ ವಿಜ್ಞಾನಿಗಳು ವೇಷ ಬದಲಿಸಿಕೊಂಡು (ಮಿಲಿಟರಿ ವೇಷಧರಿಸಿ) ರಾತ್ರಿಯಿಡೀ ಶ್ರಮಪಟ್ಟು ರಾಜಸ್ಥಾನದ ಮರುಭೂಮಿಯಲ್ಲಿ ಯಶಸ್ವಿಯಾಗಿ ಅಣುಪರೀಕ್ಷೆ ನಡೆಸಿದರು. ಅದುವರೆಗೂ ಅಣ್ವಸ್ತ್ರ ಅಭಿವೃದ್ಧಿ ಕಾರ್ಯಕ್ರಮವನ್ನು ಕದ್ದು ಮುಚ್ಚಿ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ 1998 ಮೇ 11 ಮತ್ತು 13ರಂದು ಅಣು ಪರೀಕ್ಷೆ ನಡೆಸಿದ ವಾಜಪೇಯಿ, “ಭಾರತ ಈಗ ಅಣ್ವಸ್ತ್ರ ರಾಷ್ಟ್ರ” ಎಂದು ಸಾರ್ವಜನಿಕವಾಗಿ ಘೋಷಣೆ ಮಾಡಿದರು. ಭಾರತವನ್ನು ಜಗತ್ತಿನ ಇತರ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಲು ಆರಂಭಿಸಿದ್ದು ಹಾಗೂ ಭಾರತದ ಸಾಮರ್ಥ್ಯವನ್ನು ಒಪ್ಪಿಕೊಂಡಿದ್ದು 1998ರ ಅಣುಪರೀಕ್ಷೆಯ ನಂತರವೇ. ಅದಕ್ಕೂ ಮಿಗಿಲಾಗಿ, ಇಡೀ ದೇಶದ ಪ್ರೀತಿಗೆ ಪಾತ್ರರಾದ ಡಾ. ಅಬ್ದುಲ್ ಕಲಾಂ ಅವರನ್ನು ಹೀರೋ ಮಾಡಿದ್ದೇ ಪೋಖ್ರಾನ್ ಅಣುಪರೀಕ್ಷೆಯಲ್ಲವೆ? ಇಷ್ಟಾಗಿಯೂ ಅಣು ಪರೀಕ್ಷೆ ನಡೆಸುವ ಎದೆಗಾರಿಕೆಯನ್ನು ತೋರಿದ್ದು ವಾಜಪೇಯಿ ಅವರೇ ಆದರೂ ಅದರ ಹೆಗ್ಗಳಿಕೆ ಮತ್ತು ಫಲಾಫಲ ತಮಗೇ ಸೇರಬೇಕೆಂದು ಪ್ರತಿಪಾದಿಸಲಿಲ್ಲ. ಅದರ ಶ್ರೇಯಸ್ಸನ್ನು (51ನೇ ಸ್ವಾತಂತ್ರ್ಯ ದಿನಾಚರಣೆಯಂದು ಮಾಡಿದ ಭಾಷಣದಲ್ಲಿ) ಇಂದಿರಾ ಗಾಂಧಿಯವರಿಗೇ ನೀಡಿದರು.

ಅಷ್ಟಕ್ಕೂ ಅಟಲ್‌ಗೆ ಬೇಕಾಗಿದ್ದು ದೇಶದ ಸಾಮರ್ಥ್ಯ ಹೆಚ್ಚಳವೇ ಹೊರತು ಸ್ವಾರ್ಥ ಸಾಧನೆಯಲ್ಲ. ಇದು ಇಟಲಿಯ ಸೋನಿಯಾ ಗಾಂಧಿಯವರಿಗೆ ಹೇಗೆ ತಾನೇ ಅರ್ಥವಾದೀತು? ಎಷ್ಟೇ ಆಗಲಿ, ಭಾರತದ ಪೌರತ್ವ ಪಡೆದ ಮಾತ್ರಕ್ಕೆ, ಸೀರೆ-ಬಳೆ ತೊಟ್ಟಾಕ್ಷಣ ಯಾರೂ ಭಾರತೀಯರಾಗಲು ಸಾಧ್ಯವಿಲ್ಲ. ಭಾರತೀಯತೆ ಎನ್ನುವುದು ದೇಹದ ಪ್ರತಿ ಕಣ ಕಣದಲ್ಲೂ ಇರಬೇಕಾದರೆ ಈ ಮಣ್ಣಿನಲ್ಲಿ ಜನಿಸಬೇಕು ಮತ್ತು ಜನ್ಮ ನೀಡಿದ ಮಣ್ಣಿನ ಬಗ್ಗೆ ಪ್ರೀತಿ, ಆದರ ಹೊಂದಿರಬೇಕು. ಅಂತಹ ವ್ಯಕ್ತಿಗಳು ಮಾತ್ರ ದೇಶದ ಹಿತಾಸಕ್ತಿಯ ವಿಷಯ ಬಂದಾಗ ಸೈದ್ಧಾಂತಿಕ ನಿಲುವುಗಳು, ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ನಿಲ್ಲುತ್ತಾರೆ. ನೀವೇ ಹೇಳಿ, ಇಡೀ ದೇಶವೇ ಹೆಮ್ಮೆಪಡುವಂತಹ ಪೋಖ್ರಾನ್ ಅಣುಪರೀಕ್ಷೆಯ ವಿಷಯದಲ್ಲೂ ಸಣ್ಣತನ ತೋರುತ್ತಿರುವ ಮಹಿಳೆಯ ಕೈಗೆ ಚುಕ್ಕಾಣಿ ಕೊಟ್ಟು ಹೇಗೆ ತಾನೇ ನೆಮ್ಮದಿಯಿಂದ ಇರಲು ಸಾಧ್ಯ? ಸಂಸತ್ತಿನ ಮೇಲೆ ದಾಳಿ ಮಾಡಲು ಬಂದವನನ್ನೇ ಗಲ್ಲಿಗೇರಿಸಲು ಮೀನಮೇಷ ಎಣಿಸುತ್ತಿರುವ ಕಾಂಗ್ರೆಸ್‌ನಿಂದ ಏನನ್ನು ತಾನೇ ನಿರೀಕ್ಷಿಸುತ್ತೀರಿ? ಟಾಡಾ, ಪೋಟಾ ಬೇಡವೆಂದ, ಕಾರ್ಗಿಲ್ ವಿಜಯ ದಿನಾಚರಣೆಯನ್ನೂ ನಿಲ್ಲಿಸುವ ಮೂಲಕ ಸೈನಿಕನ ತ್ಯಾಗವನ್ನೇ ಗುರುತಿಸದ ವ್ಯಕ್ತಿಗಳಿಂದ ಈ ದೇಶದ ರಕ್ಷಣೆ ಹೇಗೆ ಸಾಧ್ಯ?

ಅಂದು ಪೋಖ್ರಾನ್‌ನಲ್ಲಿ ಅಣುಪರೀಕ್ಷೆ ನಡೆಸಿದಾಗ ಇಡೀ ದೇಶವೇ ಬೀದಿಗಿಳಿದು, ಪಟಾಕಿ ಸಿಡಿಸಿ ಹೆಮ್ಮೆಪಟ್ಟಿತ್ತು. ಆ ಸಾಧನೆಗೆ ನಾಳೆ 10 ವರ್ಷಗಳು ತುಂಬಲಿವೆ. ಕಾಂಗ್ರೆಸ್‌ಗೆ ದೇಶಭಕ್ತಿ ಇಲ್ಲದಿದ್ದರೇನಂತೆ- Let’s celebrate.

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: