An attempt to become Immortal -ಇಂದು ನಾಳೆಗಳ ನಡುವೆ ರವಿ ಬೆಳಗೆರೆ

ನಾವು ನೆಗೆದುಬಿದ್ದು ಹೋದ ನಂತರ ನಮ್ಮನ್ನು ಕುರಿತು ಜನ ಒಳ್ಳೆಯ ಭಾವನೆ ತಳೆಯಬೇಕೆಂದರೆ, ನಮ್ಮನ್ನು ಹೊಗಳಲಿಕ್ಕೆ ನಮಗಿಂತ ಚಿಕ್ಕವರನ್ನು ಚೆನ್ನಾಗಿಟ್ಟುಕೊಳ್ಳಬೇಕು ಎಂಬ ಮಾತೊಂದಿದೆ. ಹೆಸರಾಂತ ಲೇಖಕರು, ಪತ್ರಕರ್ತರು, ಕವಿಗಳು, ರಾಜಕಾರಣಿಗಳು-ಹೀಗೆ ಸಾರ್ವಜನಿಕ ಜೀವನದಲ್ಲಿರುವವರು ತಮಗಿಂತ ಚಿಕ್ಕವರನ್ನು ಅದಕ್ಕೆ ಅಂತಲೇ groom ಮಾಡಿಟ್ಟುಕೊಂಡಿರುತ್ತಾರಂತೆ: ಕಡೇ ಪಕ್ಷ ತಾವು ಸತ್ತ ಮೇಲೆ ಒಂದು ಒಳ್ಳೆಯ ಸಂತಾಪ ಸೂಚಕ ಲೇಖನ ಅಥವಾ ಭಾಷಣವಾದರೂ ಬರಲಿ ಎಂಬ ಕಾರಣಕ್ಕೆ . ಮನುಷ್ಯ  ವರ್ತನೆಯೇ ಹಾಗೆ. ನನ್ನ ನಂತರವೂ ನನ್ನ ಬಗ್ಗೆ ಒಂದು ಒಳ್ಳೆಯ image ಇರಲಿ ಅಂತ ಮನಸು ಬಯಸುತ್ತದೆ.

ಕೆಲವು ಚಿತ್ರನಟರು ವಯಸ್ಸಾದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದಿಲ್ಲ. ಮತ್ತೆ ಕೆಲವರು ಮೇಕಪ್ ಇಲ್ಲದೆ ಈಚೆಗೆ ಬರುವುದಿಲ್ಲ. ಒಂದು ಕಾಲಕ್ಕೆ ಜನರ ಕಣ್ಣಲ್ಲಿ ಯಾವ ಸುಂದರಚಿತ್ರವಿತ್ತೋ ಅದೇಚಿತ್ರ ಶಾಶ್ವತವಾಗಿ ಇರಲಿ ಎಂಬ ಆಸೆ. ಹಿಂದಿ ಚಲನಚಿತ್ರ ನಟ ರಾಜ್ ಕುಮಾರ್, ತಾನು ಸತ್ತ ನಾಲ್ಕು ದಿನಗಳ ನಂತರ ಮಾತ್ರ ಜಗತ್ತಿಗೆ ಅದರ ಸುದ್ದಿ ತಿಳಿಯಬೇಕು ಅಂತ ಬಯಸಿದ್ದನಂತೆ. ಅಂದರೆ, ನಾಲ್ಕು ದಿನದೊಳಗಾಗಿ ಶವ ಸಂಸ್ಕಾರ-ಹಾಳುಮೂಳು ಅಂತ ಎಲ್ಲವೂ ಮುಗಿದು ಹೋಗಿರುತ್ತದೆ. ಪಾರ್ಥಿವದ ಮುಖ ನೋಡುವುದಕ್ಕೂ ಯಾರಿಗೂ ಸಿಗುವುದು ಬೇಡ ಎಂಬ ಉದ್ದೇಶ.

ಬದುಕಿರುವಷ್ಟು ದಿನ ವಿಗ್ ಧರಿಸದೆ ಆತ ಮನೆಯ ಮಂದಿಗೂ ಕಾಣಲು ಸಿಕ್ಕಿರಲಿಲ್ಲ. ಕೆಲವು ಅಪರೂಪದ ಸೌಂದರ್ಯವತಿಯರು ಗಂಡ ತೀರಿ ಹೋದ ಮೇಲೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸುತ್ತಾರೆ. ಕೆಲವು ವೃದ್ಧರು ತಮ್ಮ ಫೋಟೋ ತೆಗೆಯಬೇಡಿ ಅನ್ನುತ್ತಾರೆ. ಮೊದಲ ಬಾರಿಗೆ ಭೇಟಿಯಾದಾಗ ಮಳಗಾಂವಕರ್ ಹಾಗಂದಿದ್ದರು.ಇದೆಲ್ಲ  ರೂಪದ ಬಗೆಗಿನ  ಮಾತಾಯಿತು.

ನಾನು ಇವತ್ತು ಯೋಚಿಸುತ್ತಿರುವುದು, ಮನುಷ್ಯ  ಗತಿಸಿ ಹೋದ ಐವತ್ತು-ನೂರು ವರ್ಷದ ನಂತರದ ಮಾತಿನ ಬಗ್ಗೆ . ಅಸಲಿಗೆ ನಮ್ಮ ಬಗ್ಗೆ ಮಾತಾಡಲಿಕ್ಕೆ ಯಾರಾದರೂ ಇರುತ್ತಾರಾ ಎಂಬುದಕ್ಕಿಂತ ಮಾತಾಡಲಿಕ್ಕೆ ಏನಾದರೂ ಇರುತ್ತದಾ? ಕೇಳಿಕೊಳ್ಳುತ್ತೇನೆ. ಪುಸ್ತಕ, ಲೇಖನ, ಹಳೇ ಪತ್ರಿಕೆ, ಮಕ್ಕಳು, ಮೊಮ್ಮಕ್ಕಳು-ಇವುಗಳನ್ನೆಲ್ಲ ಬಿಟ್ಟು ಹೋಗಿರುತ್ತೇವಲ್ಲ? ಹಾಗಂತ ಯೋಚನೆ ಮಾಡಿದರೆ, ಇವತ್ತಿಗೆ ಐವತ್ತೋ-ಅರವತ್ತೋ ವರ್ಷದ ಹಿಂದೆ ಅಂಥ ವ್ಯಾಸ ವಿರಚಿತ ಶ್ರೀಮದ್ಮಹಾಭಾರತವನ್ನೇ ಕನ್ನಡಕ್ಕೆ ಅನುವಾದಿಸಿದ ಅಳಸಿಂಗರಾಚಾರ್ಯರ ಬಗ್ಗೆಯೇ ನಾವ್ಯಾರು ಇವತ್ತು ಮಾತನಾಡುತ್ತಿಲ್ಲ. ವಿಧಾನಸೌಧ [^] ಕಟ್ಟಿದ ಕೆಂಗಲ್ ಹನುಮಂತಯ್ಯ ವಿಸ್ಮೃತಿಗೆ ಸರಿದು ಹೋಗಿದ್ದಾರೆ. ನಾಟಕ ಪಿತಾಮಹ ಗರುಡ ಸದಾಶಿವರಾಯರು ಈ ತಲೆಮಾರಿನ ಹುಡುಗರಿಗೆ ಗೊತ್ತಿಲ್ಲ.. ಗೋಳಗುಮ್ಮಟ ಕಟ್ಟಿಸಿದ್ದು ಯಾರುಎಂಬುದು ದೂರದ ಮಾತು. ನಮ್ಮ ಮಕ್ಕಳಿಗೆ ರೆನ್ ಅಂಡ್ ಮಾರ್ಟಿನ್ ಗ್ರಾಮರ್ ಪುಸ್ತಕ ನೋಡಿಯೂ ಗೊತ್ತಿಲ್ಲ.ಇನ್ನು ನನ್ನಂಥ ಯಃಕಶ್ಚಿತ್ ಮನುಷ್ಯ, ನಾನು ಸತ್ತ ಮೇಲಿನ ಐವತ್ತು-ಊರು ವರ್ಷಗಳ ನಂತರ ನಮಗಿಂತ ಚಿಕ್ಕವರು ನಮ್ಮ ಬಗ್ಗೆ ಏನು ಮಾತಾಡುತ್ತಾರೆ ಅಂತ ಯೋಚಿಸುವುದರಲಿ ಯಾವ ಅರ್ಥವಿದೆ?ಅಲ್ಲ, ಯೋಚಿಸಬೇಕಾದ್ದು ಅದಲ್ಲವೇ ಅಲ್ಲ.

ನನ್ನ ಕಣ್ಣೆದುರಿಗೆ ನಿಸಾರ ಇದ್ದಾರೆ, ಎಚ್ .ಎಸ್. ವೆಂಕಟೇಶಮೂರ್ತಿ ಇದ್ದಾರೆ. ಸೀತಾರಾಂ ಇದ್ದಾರೆ. ಬೇಂದ್ರೆ ಇದ್ದ್ದರು. ಕುವೆಂಪು [^], ಅಡಿಗ,ಬೀಚಿ, ತರಾಸು, ದೇವುಡು-ಎಲ್ಲ ಇದ್ದರು. ಅವರು ಬರೆದದ್ದೆಲ್ಲ ಇಲ್ಲೇ ಕಣ್ಣೆದುರಿಗಿದೆ. ಕೆಲವರಚರಿತ್ರೆಗಳು ಗೊತ್ತಿವೆ. ಇನ್ನೊಂದೆಡೆ ನಾವಿದ್ದೇವೆ. ಅಂದರೆ ನಾನೂ ಸೇರಿದಂತೆ ನನ್ನ ಓರಿಗೆಯ ಲೇಖಕರು,ಕವಿಗಳು, ನಟರು, ನಾಟಕಕಾರರು, ಮೇಷ್ಟ್ರುಗಳು-ಇತ್ಯಾದಿ. ನಾವೆಲ್ಲ ಏನೋ ಒಂದು ಬರೆಯುತ್ತಿದ್ದೇವೆ. ನಮ್ಮ ಕನಸು, ಕನವರಿಕೆ, ಖಯಾಲಿ: ಅಷ್ಟೆ.

ಅದರೆ ನಮ್ಮಲ್ಲಿ ಎಷ್ಟು ಜನ ನಮಗಿಂತ ಚಿಕ್ಕವರಿಗೆ relate ಆಗುತ್ತಿದ್ದೇವೆ? ಕವಿ-ಲೇಖಕರ ಮಾತು ಬಿಡಿ, ನೀವೇ ನಿಮ್ಮ ಮಕ್ಕಳಿಗೆ ನಿಮ್ಮ ತಮ್ಮಂದಿರಿಗೆ ನಿಮಗಿಂತ ಚಿಕ್ಕವರಿಗೆ relate ಆಗುವ ಹಾಗೆ ಮಾತನಾಡುತ್ತಿದ್ದೀರಿ? ನಡೆದುಕೊಳ್ಳುತ್ತಿದ್ದೀರಿ? ನಿಮ್ಮ ಮಗ ಅಥವಾ ತಮ್ಮ ನಿಮ್ಮನ್ನು ಅಕ್ಸೆಪ್ಟ್ ಮಾಡಿಕೊಳ್ಳುತ್ತಿದ್ದಾನಾ? ಮಗಳು ಅಥವಾ ತಂಗಿಯಲ್ಲಿ ನಿಮ್ಮ ಬಗ್ಗೆ ಮೆಚ್ಚುಗೆ ಮೂಡುತ್ತಿದ್ದೆಯಾ? ಯೋಚಿಸಿರುವುದಿಲ್ಲ.

ತಪ್ಪು ಮಾಡುವಾಗ ಯೋಚಿಸುವುದು ಬೇರೆ, ಸಿಗರೇಟು ಸೇದುವಾಗ, ‘ಮಕ್ಕಳೆದುರಿಗೆ ಬೇಡ’ ಅಂದುಕೊಳ್ಳುತೇವೆ. ಗುಂಡು ಪಾರ್ಟಿಗಳನ್ನು ಮನೆಗಳಿಂದ ಹೊರಗೆ  ಮಾಡುತ್ತೇವೆ ಅಥವಾ ಮಕ್ಕಳು ಮಲಗಿದ ಮೇಲೆ ಸೀಸೆ ಬಿಚ್ಚುತ್ತೇವೆ. ಇದೆಲ್ಲವೂ ತಪ್ಪುಗಳ ಕುರಿತಾದ ಮಾತಾಯಿತು. ‘ನಮ್ಮಪ್ಪ ಜೀವನಪರ್ಯಂತ ಸಿಗರೇಟೇ ಸೇದಲಿಲ್ಲ’ ಅಂತ ಯಾವ ಮಗನೂ ಮಾತನಾಡುವುದಿಲ್ಲ. ಅಲ್ಲಿ ಮೆಚ್ಚುಗೆಯ ಪ್ರಶ್ನೆ ಉದ್ಭವಿಸುವುದಿಲ್ಲ. ‘ಅಪ್ಪ, ದುರಭ್ಯಾಸಗಳಿಲ್ಲದವನು’ ಅಂ ತ ಒಂದು ಅಭಿಪ್ರಾಯ ಮೂಡಬಹುದು ಅಷ್ಟೆ. ನಾನು ಪ್ರಸ್ತಾಪಿಸುವುದು  ಅದನ್ನಲ್ಲ. ದುರಭ್ಯ್ಯಾಸಗಳೇ ಇಲ್ಲದಕೋಟ್ಯಾಂತರ ಜನ ಈ ಜಗತ್ತಿನಲ್ಲಿದ್ದಾರೆ. ಆದರೆ ನಮಗಿಂತ ಚಿಕ್ಕವರಲ್ಲಿ ನಮ್ಮ ಬಗ್ಗೆ ಮೆಚ್ಚುಗೆ ಮೂಡುವಂಥ ಯಾವುದನ್ನು ಮಾಡುತ್ತಿದ್ದೇವೆ?

ಯಾವುದನ್ನಾದರೂ ಯಾಕೆ ಮಾಡಬೇಕು? ಅಂತ ನೀವು ಕೇಳ ಬಹುದು. ಅಪಾಯವಿರುವುದು ಅಲ್ಲಿ. ಮೆಚ್ಚುಗೆ ಮೂಡುವಂತಹುದನ್ನು ನೀವು ಮಾಡದಿದ್ದರೆ ನಿಮ್ಮ ಮಗ ಅಥವಾ ತಮ್ಮನಲ್ಲಿ ಮೆಚ್ಚುಗೆಯ ಮಹಾಪೂರ ಹುಟ್ಟಿ ಹರಿಯುವಂತಹುದನ್ನು ಸಲ್ಮಾನ್ ಖಾನ್ ಮಾಡಿ ಬಿಡುತ್ತಾನೆ, ಸಂಜಯ್ ದತ್  ಮಾಡಿಬಿಡುತ್ತಾನೆ, ದಾವೂದ್ ಇಬ್ರಾಹಿಂ ಮಾಡಿಬಿಡುತ್ತಾನೆ. ನಿಮ್ಮ ತಂಗಿ ಅಥವಾ ಮಗಳಲ್ಲಿ ultimate ಆರಾಧ್ಯ ದೈವವಾಗಿ ದೀಪಿಕಾ ಪಡುಕೋಣೆಯೋ ಮತ್ಯಾವಳೋ ಬಂದು ಪದ್ಮಾಸನ ಹಾಕಿ ಕೂತು ಬಿಡುತ್ತಾಳೆ. ಅದು ಬಿಟ್ಟರೆ ರವಿಶಂಕರ್ ಗುರೂಜಿಯಂಥ ಗೊಗ್ಗಯ್ಯಗಳು ಎಂಟ್ರಿ ಪಡೆದುಕೊಂಡು ಬಿಡುತ್ತಾರೆ.

ಅದು ರೋಲ್ ಮಾಡೆಲ್ ಬೇಕು ಅಂತ ಚಡಪಡಿಸುವ ವಯಸ್ಸು. ನಿಜವಾದ ರೋಲ್ ಮಾಡೆಲುಗಳು ಸಿಗುವುದು. ನಿಜಕ್ಕೂ ಕಷ್ಟ. ನಾವೇ ಒಂಚೂರು ಪ್ರಯತ್ನ ಪಟ್ಟುಬಿಟ್ಟರೆ, ಆ ಬಗ್ಗೆ ಗಂಭೀರವಾಗಿ ಯೋಚಿಸಿದರೆ ನಾವೇ ಕ್ರಮೇಣನಮಗಿಂತ ಚಿಕ್ಕವರಿಗೆ ರೋಲ್ ಮಾಡೆಲ್ ಗಳಾಗಿ ಸಿಕ್ಕು ಬಿಡುತ್ತೇವೆ. ಪ್ರಯತ್ನಿಸಿ ನೋಡಿ. ಯಂಡಮೂರಿ ವೀರೇಂದ್ರನಾಥ್ ಎರಡು ಮೂರು ಕಡೆ ತಮ್ಮ ತಂದೆಯ ಬಗ್ಗೆ ಬರೆದದ್ದನ್ನು ಓದಿದ್ದೇನೆ. ಅವರು ತುಂಬ ಇಂಪ್ರೆಸ್ ಆದದ್ದು, ಅವರ ತಂದೆ ರಸ್ತೆ ಪಕ್ಕ ಸಸಿ ನೆಟ್ಟು ಅವುಗಳಿಗೆ ಪ್ರತಿನಿತ್ಯ ಕೊಡದಲ್ಲಿ ಒಯ್ದು ನೀರು ಹಾಕುತ್ತಿದ್ದರು ಮತ್ತು ತಮ್ಮ ಬೀದಿಯಲ್ಲಿನ ಮಕ್ಕಳಿಗೆ ನಿತ್ಯ ಪಾಠ ಹೇಳಿ, ಸ್ಪರ್ಧೆಗಳನ್ನಿಟ್ಟು ಪೆನ್ನು, ಪೆನ್ಸಿಲಿನಂತಹ ಚಿಕ್ಕ ಚಿಕ್ಕ ಪ್ರೈಜುಗಳನ್ನು ಕೊಡುತ್ತಿದ್ದರು-ಎಂಬುದು.

ನಾನು ತೀರ ಚಿಕ್ಕ ವಯಸ್ಸಿನ ಮಕ್ಕಳೊಂದಿಗೆ relate ಆಗುವುದನ್ನಷ್ಟೇ ಯೋಚಿಸುತ್ತಿಲ್ಲ .ನಮ್ಮ ಮಕ್ಕಳು ಅಥವಾ ತಮ್ಮ ತಂಗಿಯರ ಬಗ್ಗೆಯಷ್ಟೇ ಮಾತಾಡುತ್ತಲೂ ಇಲ್ಲ. ಈ ಜಗತ್ತಿನಲ್ಲಿ ಎಲ್ಲ ಅರ್ಥದಲ್ಲೂನಮಗಿಂತ ಚಿಕ್ಕವರು ಎಷ್ಟೊಂದು ಜನ ಇದ್ದಾರಲ್ಲವೆ? ನಾವು ಸತ್ತ ಮೇಲೆ ಅವರೆಲ್ಲ ನಮ್ಮ ಬಗ್ಗೆ ಏನಂದುಕೊಳ್ಳುತ್ತಾರೆ?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: