BJP lacks leadership and killer instinct – ಎರಡರ ಜೊತೆ ಮೂರನೆಯದಂತಿರುವ ಬಿಜೆಪಿ ಕುರಿತು…

ಬರೆಯಲಿಕ್ಕೆ ತುಂಬ ವಿಷಯಗಳಿವೆ. ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿ ವರಿಷ್ಠರು ಆರಂಭದಲ್ಲೇ ಅನಾಹುತ ಮಾಡಿಕೊಂಡಿದ್ದಾರೆ. ಯಥಾ ಪ್ರಕಾರ ಇವರದು ಅದೇ ಶೋಭಾ ಕರಂದ್ಲಾಜೆ ರಾಮಾಯಣ. ಯಶವಂತಪುರದಲ್ಲಿ ಆ ಹೆಂಗಸು ಮಣ್ಣುಮುಕ್ಕಿ ಹೋಗಲಿದ್ದಾಳೆ. ಹಿಂದೊಮ್ಮೆ ಮುಖ್ಯಮಂತ್ರಿ ಆಗೇ ಬಿಡ್ತೀನಿ ಅಂತ ಕನಸು ಕಂಡ ಯಡಿಯೂರಪ್ಪ ಅದಕ್ಕಾಗಿ ನೂರು ಸಫಾರಿ ಹೊಲಿಸಿಕೊಂಡಿದ್ದರು. ಈಗ ಮತ್ತೆ ಅದೇ ಹುಂಬ ವರ್ತನೆ. ಪಕ್ಷದಲ್ಲಿ ಉಳಿದೆಲ್ಲರನ್ನೂ ಬಗ್ಗು ಬಡಿದು ಬಿಗ್‌ಬಾಸ್ ಆಗಹೊರಟಿದ್ದಾರೆ. ಅರವಿಂದ ಲಿಂಬಾವಳಿಯಂಥವರೂ ಶಸ್ತ್ರ ಕೆಳಗಿಟ್ಟು ಯಡಿಯೂರಪ್ಪನವರ ಪಾದ ಸೇರಿದ್ದಾರೆ. ಅನಂತಕುಮಾರ್ ಉಸ್ಸೆಂದು ಹೋದಂತೆಯೇ.

ಇಷ್ಟಾಗಿ ಕೈಯಲ್ಲಿ ಯಾವ ಅಸ್ತ್ರ ಹಿಡಿದುಕೊಂಡು ಇವರು ಚುನಾವಣೆಗೆ ಹೊರಟಿದ್ದಾರೆಂಬುದನ್ನು ನೋಡಿ. ಗೌಡರು ನಮಗೆ ವಿಶ್ವಾಸದ್ರೋಹ ಮಾಡಿದರು. ಗೌಡರ ಮಗ ಕುಮಾರ ಅನ್ಯಾಯ ಮಾಡಿದ ಎಂಬುದೊಂದು ಗೋಳು ತೋಡಿಕೊಳ್ಳುವುದು ಬಿಟ್ಟರೆ, ಸದ್ಯಕ್ಕೆ ಇವರ ಕೈಯಲ್ಲಿ ಯಾವ ಪಾಶುಪತಾಸ್ತ್ರವೂ ಇಲ್ಲ. ಬೆಲೆ ಏರಿಕೆಯೆಂಬುದು ಗಮನಕ್ಕೇ ಬಂದಿಲ್ಲವೆಂಬಂತೆ ಬಿಜೆಪಿ ಮುಖಂಡರಾದ ಯಡಿಯೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ಮುಂತಾದವರು ಓಡಾಡಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಎಂದೂ ಕಾಣದ ರೀತಿಯಲ್ಲಿ ಬೆಲೆ ಹೆಚ್ಚಳವಾಗಿದೆ. ಶ್ರೀಸಾಮಾನ್ಯ ತತ್ತರಿಸಿ ಹೋಗಿದ್ದಾನೆ. ಇವರಿಗೆ ಅದರ ಖಬರೇ ಇದ್ದಂತಿಲ್ಲ. ಮೇಲೆ ಹೆಸರಿಸಿದ ಅರಿವುಗೇಡಿಗಳ ಮಾತು ಹಾಗಿರಲಿ; ಸುರೇಶ್‌ಕುಮಾರ್‌ರಂಥ ಕ್ರಿಯಾಶೀಲ ನಾಯಕರೂ ದನಿಯೆತ್ತುತ್ತಿಲ್ಲ. ಅರುಣ್ ಜೇಟ್ಲಿ ಅಲ್ಲೆಲ್ಲೋ ದಿಲ್ಲಿಯಲ್ಲಿ ಕುಳಿತು ಕರಂದ್ಲಾಜೆ ಕ್ಯಾರೆಕ್ಟರ್ ಸರ್ಟಿಫಿಕೀಟು ಜಾರಿ ಮಾಡುತ್ತಾರೆ.

ಟಿಕೆಟ್ ಹಂಚಿಕೆಯ ವಿಷಯದಲ್ಲಿ ಎದ್ದಿರುವ ಭಿನ್ನಮತ, ದುಸುಮುಸು ಪ್ರತಿ ಚುನಾವಣೆಯಲ್ಲೂ ಇದ್ದದ್ದೇ. ಕೆಲವೇ ದಿನಗಳಲ್ಲಿ ಅದರ ಸದ್ದಡಗಿ ಹೋಗುತ್ತದೆ. ಮೇಲಾಗಿ ಮಹಾಭಾರತವನ್ನು ಓದಿದವರಿಗೆಲ್ಲ ದ್ರೌಪತಿಯ ಬಗ್ಗೆ ಒಂದು ಸಿಂಪಥಿ ಮೂಡುವಂತೆ, ಕರ್ನಾಟಕದ ಒಟ್ಟಾರೆ ಮತದಾರರಿಗೆ ಬಿಜೆಪಿಯ ಬಗ್ಗೆ ಒಂದು ಸಿಂಪಥಿ ಮೂಡಿದೆ. ಯಡಿಯೂರಪ್ಪನವರ ಏಳು ದಿನಗಳ ಮುಖ್ಯಮಂತ್ರಿಗಿರಿ ಮುಗಿದು ಸರ್ಕಾರ ಬಿತ್ತು ಅಂತ ಕೂಡಲೆ ಈ ಬಿಜೆಪಿಯ ಜನ, “ನಿವೇನೇ ಹೇಳಿ, ಒಟ್ಟಾರೆಯಾಗಿ ಕರ್ನಾಟಕದಲ್ಲಿ ಒಂದು ಪೊಲಿಟಿಕಲ್ ಅವೇರ್‌ನೆಸ್ ಬಂದುಬಿಡ್ತು. ಪಾಲಿಟಿಕ್ಸೇ ಗೊತ್ತಿಲ್ದೆ ಇರೋ ಜನ ಕೂಡ ಬಿಜೆಪಿಗೆ ಅನ್ಯಾಯ ಆಯ್ತು ಅಂತ ಮಾತಾಡೋ ಹಾಗಾಗೋಯ್ತು ಅಣ್ರೀ” ಎಂದು ಸಂಭ್ರಮಿಸಿದರು.

ಈ ಅರಿವುಗೇಡಿಗಳಿಗೆ ಗೊತ್ತಿಲ್ಲದ ಸಂಗತಿಯೆಂದರೆ, ಸಿಂಪಥಿಯೆಂಬುದು ಪ್ರೀತಿ ಅಲ್ಲ. ಅದು ಶಾಶ್ವತವೂ ಅಲ್ಲ. ಹುಟ್ಟಿದ ಅಷ್ಟಿಷ್ಟು ಅನುಕಂಪವನ್ನು ಮತಗಳನ್ನಾಗಿ ಪರಿವರ್ತಿಸಿಕೊಳ್ಳಲಿಕ್ಕೆ ತುಂಬ ಬುದ್ಧಿವಂತಿಕೆ ಬೇಕು. ದೇವೇಗೌಡರಿಗಿರುವಂಥ ಪ್ರೊಫೆಷನಲ್ ರಾಜಕೀಯ ಚಾತುರ್ಯ ಬೇಕು. ಯಡಿಯೂರಪ್ಪನವರಲ್ಲಿ ಅದರ ಲವಲೇಶವೂ ಕಾಣಿಸುತ್ತಿಲ್ಲ. ಸುಮ್ಮನೆ ಲಿಂಗಾಯಿತರನ್ನು ಓಲೈಸಿಕೊಂಡು ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಕುರುಬರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುತ್ತಿಲ್ಲ.

ಯಾವುದೇ ತರಹದ ‘ಅಲೆ’ ಇಲ್ಲದ ಚುನಾವಣೆಯಿದು. ಇಲ್ಲಿ ಎಲ್ಲ ಜಾತಿಯವರನ್ನೂ ಓಲೈಸಬೇಕು. “ಬರೀ ಅರವತ್ತು ಸೀಟು ಬಂದರೆ ಸಾಕು. ಎಂಥವರನ್ನೂ ಮೂಗು ಹಿಡಿದು ಆಟವಾಡಿಸಿಬಿಡುತ್ತೇನೆ” ಎಂಬ ನಿಲುವನ್ನು ದೇವೇಗೌಡರಂಥವರು ತಳೆಯಬಹುದೇನೋ. ಬಿಜೆಪಿಗೆ ಹಾಗೆ ಯೋಚಿಸುವುದು ಸಾಧ್ಯವಿಲ್ಲ. ಒಂದು ಕಿಲ್ಲರ್ ಇನ್‌ಸ್ಟಿಂಕ್ಟ್ ಇಟ್ಟುಕೊಂಡು ಅವರು ಕದನಕ್ಕೆ ಇಳಿಯಬೇಕು. ಸುಮ್ಮನೆ ಸದೆ ಬಡಿದರೆ ಸಾಲದು. ಈ ಬಾರಿ ಅವರು ಶತ್ರುವನ್ನು ನಿರ್ನಾಮ ಮಾಡಿ ವಿಧಾನಸೌಧಕ್ಕೆ ಹಿಂದಿರುಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯೆಡೆಗೆ ಆಕರ್ಷಿತರಾಗಿರುವವರು ತುಂಬ ಜನ. ಅದರಲ್ಲೂ ಶ್ರೀಮಂತರು, ದೊಡ್ಡ ಇಸಮುಗಳು, ರಿಯಲ್ ಎಸ್ಟೇಟ್ ಕುಳಗಳು ಥೈಲಿ ಹಿಡಿದು ಬರುತ್ತಿದ್ದಾರೆ. ಪಕ್ಷಕ್ಕೆ ರೊಕ್ಕದ ಸಮಸ್ಯೆಯಿಲ್ಲ. ಗುಜರಾತದಿಂದ ಮೋದಿಯ ದುಡ್ಡೂ ಹರಿದು ಬರಲಿದೆ.

ಅದೆಲ್ಲ ಇದೆಲ್ಲ ಕೇವಲ ಸಂಭ್ರಮದ ಮಾತಾಯಿತು. ಯುದ್ಧದ ಸಂಗತಿಯೇನು? ನಮ್ಮದು cadre based party ಅಂತಲೇ ಮೊದಲಿನಿಂದಲೂ ಬಿಜೆಪಿ ಹೇಳಿಕೊಂಡು ಬಂದಿದೆ. ಅರೆಸ್ಸೆಸ್ಸಿನ ಹುಡುಗರು ಮನೆಯಿಂದ ಬುತ್ತಿಕಟ್ಟಿಕೊಂಡು ಬಂದು, ಸೈಕಲ್ಲಿನ ಮೇಲೆ ಸುತ್ತಿ ಪ್ರಚಾರ ಮಾಡಿ ಹೋಗುತ್ತಾರೆ. ಸಾವಿರಗಟ್ಟಲೆ ಜನ ಎರಡು-ಮೂರು ಕಡೆ voters’ listನಲ್ಲಿ ಹೆಸರು ಬರೆಸಿರುತ್ತಾರೆ. ಒಂದೇ ಮಧ್ಯಾಹ್ನದಲ್ಲಿ ಎರಡೆರಡು ಕಡೆ ವೋಟು ಹಾಕಿ ಬಿಡುತ್ತಾರೆ ಎಂದೆಲ್ಲ ಯೋಚಿಸುವುದು ಹಳೆಯ ಕಾಲದ ಮಾತಾಯಿತು. ಈಗ ಆರೆಸ್ಸೆಸ್ಸಿಗರು ಅಂಥ ಪ್ರೀತಿ ಬಿಜೆಪಿಯೆಡೆಗೆ ಉಳಿದಿಲ್ಲ. ಗಣಿ ದೊರೆಗಳಿಗೆ, ಲ್ಯಾಂಡ್ ಮಾಫಿಯಾದವರಿಗೆ ಟಿಕೀಟು ಕೊಟ್ಟು ‘ನೀವು ಸೈಕಲ್ಲು ಹತ್ತಿ ಪ್ರಚಾರ ಮಾಡಿ’ ಅಂದರೆ ಮಾಡಲಿಕ್ಕೆ ಅವರಿಗೇನು ನಾಯಿ ಕಚ್ಚಿದೆಯಾ? ಅಲ್ಲದೆ ಚುನಾವಣಾ ಆಯೋಗವೂ ಈ ಬಾರಿ ಭಯಂಕರ ಬಿಗುವಿನಿಂದ ಕೆಲಸ ಮಾಡಲಿದೆ. ಈ ಪರಿಸ್ಥಿತಿಯಲ್ಲಿ ಬಿಜೆಪಿಗೆ ಅತ್ಯಂತ ಅವಶ್ಯಕವಾಗಿ ಬೇಕಾಗಿರುವುದು ದುಡ್ಡು, ಜಾತಿ, ಕಾರ್ಯಕರ್ತರು, ಸಂಘಟನಾ ಚತುರರಾದ ಕೆಳಮಟ್ಟದ ಮುಖಂಡರು, ರಾಷ್ಟ್ರೀಯ ನಾಯಕರ ಪೈಕಿ ಕೆಲವು ಪ್ರಮುಖರ ಪ್ರಖರ ಪ್ರವಾಸ ಮತ್ತು ಕೊನೆಯದಾಗಿ ಮತದಾರರ ಸಿಂಪಥಿ. ಅದೇನಿದ್ದರೂ ಕೊನೆಯ ಫ್ಯಾಕ್ಟರ್, ಅಷ್ಟೇ. ಅದೊಂದನ್ನೇ ನಂಬಿಕೊಂಡು ಇವರು ಬರಿಗೈಯಲ್ಲಿ ಆಟಕ್ಕಿಳಿದರೆ ಪ್ಯಾಲಿಗಳಾಗಿ ಬಿಡುತ್ತಾರೆ. ಏಕೆಂದರೆ, ಮತದಾನದ ಹೊತ್ತಿಗೆ ಯಾವ್ಯಾವ ಭೂತಗಳೆದ್ದು ನಿಲ್ಲುತ್ತವೆಯೋ ಯಾರಿಗೆ ಗೊತ್ತು?

ಮೇಲಾಗಿ ಕರ್ನಾಟಕದ ಮಟ್ಟಿಗೆ ಬಿಜೆಪಿಗೆ ಇನ್ನಾದರೂ ಒಂದು ಕ್ಯಾರೆಕ್ಟರ್ ಮೈಗೂಡಿಲ್ಲ. ಒಂದೊಂದು ಪಕ್ಷಕ್ಕೆ ಒಂದೊಂದು ಕ್ಯಾರೆಕ್ಟರ್ ಇರುತ್ತದೆ. ಗುಜರಾತದಲ್ಲಿ ಅನ್ನಿಸಿಕೊಂಡಂತೆ, ಇಲ್ಲಿ ಮತೀಯ ಸ್ವರೂಪ ಪಡೆದ ಪಕ್ಷವಾಗಿ ಬಿಜೆಪಿ ಬೆಳಿದಿಲ್ಲ. ಇಲ್ಲಿ ಮೋದಿಯಂತಹ ಅಗ್ರೆಸಿವ್ ನಾಯಕನೂ ಇಲ್ಲ. ಯಡಿಯೂರಪ್ಪ ಕೇವಲ ಸಿಡುಕುತ್ತಾರೆ. ಸಿಡುಕುವುದು ಅಗ್ರೆಸಿವ್ ನಾಯಕನ ಗುಣವಲ್ಲ. ಮದುವೆ ಮನೆಯಲ್ಲಿ ಕಡೆಗಣಿಸಲ್ಪಟ್ಟ ಅಜ್ಜಿಯೊಬ್ಬಳ ದುಸುಮುಸುವಿನಂತೆ ಭಾಸವಾಗುತ್ತದೆ ಅವರ ಸಿಡುಕು. ಪಕ್ಷದ ನಾಯಕ ಮಣಿಗಳ ಸಾಲಿನಲ್ಲಿ ಹೇಳಿಕೊಳ್ಳುವಂಥ ಅಬ್ಬರದ ವಾಗ್ಮಿಗಳೂ ಇಲ್ಲ. ಇರುವ ಒಂದಿಬ್ಬರು ಮಾತುಗಾರರನ್ನು ಕೂಡ ಯಡಿಯೂರಪ್ಪನಂಥವರು ಬಾಯಿ ಹೊಲಿದು ಕೂಡಿಸಿಬಿಟ್ಟಿದ್ದಾರೆ.

ದೇವೇಗೌಡರು ಮಾಡಿದ ವಿಶ್ವಾಸದ್ರೋಹ, ಕೀಳು ರಾಜಕಾರಣಗಳೆಡೆಗೆ ಜನಕ್ಕೆ ಬೇಸರವಿದೆ ಅಂತ ಮಾತ್ರಕ್ಕೆ ಎಲ್ಲರೂ ಅನಾಮತ್ತಾಗಿ ಬಿಜೆಪಿಯನ್ನೆತ್ತಿಕೊಂಡು ಮುದ್ದಾಡಿ ಬಿಡುತ್ತಾರೆ ಅಂತ ಭಾವಿಸಬೇಕಿಲ್ಲ. ವಿಶ್ವಾಸದ್ರೋಹ ಧರಂಸಿಂಗ್‌ಗೂ ಆಗಿತ್ತು. ಧರ್ಮದೇಟು ಅವರು ತಿಂದಿದ್ದರು. ಇವರಿಬ್ಬರ ಕಿತ್ತಾಟದ ನಡುವೆ ಎಲ್ಲೋ ಒಂದು ಕಡೆ ಕಾಂಗ್ರೆಸ್ಸಿಗರು ಲಾಭವೆತ್ತಿಕೊಂಡು ಬಿಡುತ್ತಾರಾ ಎಂಬ ಅನುಮಾನೂ ನನಗಿದೆ.

ಏನೇ ಫ್ಯಾಸಿಸ್ಟ್ ಧೋರಣೆಯ ಪಕ್ಷ ಅನ್ನಿಸಿಕೊಂಡರೂ ಕರ್ನಾಟಕದಲ್ಲಿ ಇವತ್ತಿನ ತನಕ ಬಿಜೆಪಿ ಅತಿರೇಕದ ಕಮ್ಯೂನಲ್ ಸ್ವರೂಪ ಪಡೆದಿಲ್ಲ. ಅಸಹ್ಯಪಡುವ ರೀತಿಯಲ್ಲಿ ಮತಾಂಧತೆ ತೋರ್ಪಡಿಸಿಲ್ಲ. ಈಗ ಬಿಜೆಪಿಗೆ ಸೇರುತ್ತಿರುವ, ಅದರ ಟಿಕೀಟಿನೊಂದಿಗೆ ಕಣಕ್ಕಿಳಿಯುತ್ತಿರುವ ಗಿರಾಕಿಗಳನ್ನು ನೋಡಿದರೆ ಇಲ್ಲಿ ಮದಾಂಧರು ಕಾಣಿಸುತ್ತಾರೆಯೇ ಹೊರತು ಮತಾಂಧರು ಕಾಣುತ್ತಿಲ್ಲ. ಎರಡರ ಜೊತೆಗೆ ಮೂರನೆಯದು ಎಂಬಂತಿದೆ ಬಿಜೆಪಿ. ಅಂಥ ಇರಾದೆಯಾಗಲೀ ತಾಕತ್ತಾಗಲೀ ಇಲ್ಲಿನವರಲ್ಲಿ ಕಾಣುತ್ತಿಲ್ಲ. ಸ್ವಲ್ಪ ದಿನ ಹಾರಾಡಿದ ಭಜರಂಗದಳದವರನ್ನು ಖುದ್ದು ಬಿಜೆಪಿಯವರೇ ದೂರವಿಟ್ಟುಬಿಟ್ಟರು. ಮೈಮೇಲೆ ಬಿದ್ದ ಕೇಸುಗಳ ಹೊಡೆತಕ್ಕೆ ಸಿಕ್ಕು ಭಜರಂಗಿಗಳೂ ದಿಕ್ಕಾಪಾಲಾಗಿ ಹೋದರು. ಇಂಥ ಪರಿಸ್ಥಿತಿಯಲ್ಲಿ ಮೈಮೇಲೆ ಎಚ್ಚರವಿಟ್ಟುಕೊಂಡು, ಎದೆಯಲ್ಲಿ ಕಿಲ್ಲರ್ ಇನ್‌ಸ್ಟಿಂಕ್ಟ್ ಇಟ್ಟುಕೊಂಡು, ಹುಮ್ಮಸ್ಸಿನೊಂದಿಗೆ ಮುನ್ನಡೆದರೆ ಅದು ಬಿಜೆಪಿಗೆ ಹಿತ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: