Girl child in this part of the third world -ಅಂಥ ಹೆಣ್ಣುಮಕ್ಕಳ ಪೋಷಕರನ್ನು ಕುರಿತು ರವಿ

ಅಷ್ಟೇನೂ ರೂಪವತಿಯಲ್ಲದ, ಅಷ್ಟೇನೂ ಬುದ್ದಿವಂತಳೂ ಅಲ್ಲದ ಹೆಣ್ಣುಮಗುವನ್ನು ಬೆಳೆಸಿ ದೊಡ್ಡವಳನ್ನಾಗಿಸುವ ಪರಿ ಎಂತು? ಅವಳು ಇನ್ನೊಬ್ಬ ಕುಪ್ಪಮ್ಮ ಳಾಗದಂತೆ ನೀವು ತೆಗೆದುಕೊಳ್ಳಬೇಕಾದ ಕ್ರಮಗಳೇನು ? ವಿಶ್ವಾಸದಿಂದ ನಾಲಕ್ಕು ಕಿವಿಮಾತುಗಳು.

“ಒಂಭತ್ತನೇ ವಯಸ್ಸಿನಲ್ಲಿ ಮದುವೆಯಾಗಿ, ಹನ್ನೊಂದರ ಹರೆಯದಲ್ಲಿ ಗಂಡನನ್ನು ಕಳೆದುಕೊಂದು, ಅಂದಿನ ಸಂಪ್ರದಾಯದಂತೆ ಕೇಶಮುಂಡನ ಮಾಡಿಕೊಂಡು ತವರು ಮನೆಗೆ ಬಂದು, ನನ್ನ ತಂದೆಯಾದ ತನ್ನ ತಮ್ಮನ ಜೊತೆ ಬೆಳೆದು, ಬಡತನದ ಜಂಜಾಟದಲ್ಲೂ ದಿನನಿತ್ಯ ಮಧ್ವ ಸರೋವರದಲ್ಲಿ ಸ್ನಾನ ಮಾಡಿ ಇಂದಿನ ಇಂದ್ರಾಳಿಯಾದ ಕುಂಡಲ ಕಾಡಿನಿಂದಕಟ್ಟಿಗೆ, ಹುಲು ಇತ್ಯಾದಿಗಳನು ಮನೆಗೆ ತಂದು, ತಮ್ಮನ ಏಳು ಮಕ್ಕಳಾದ ನಮ್ಮನ್ನು ತಾಯಿಗಿಂತಲೂ ಹೆಚ್ಚಿನ ಪ್ರೀತಿಯಿಂದ ಸಾಕಿ ಸಲಹಿ ಅಪ್ಪ-ಅಮ್ಮನಿಗೆ ಸಹಾಯ ಮಾಡಿ, ಬಾಣಂತನದ ಹೊರೆಯನ್ನು ಸ್ವೀಕರಿಸಿ ಎಂಬತ್ತು ವರ್ಷ ಬದುಕಿ ಬಾಳಿ ಇಂದು ನಮ್ಮನ್ನು ಮೇಲಿಂದ ಹರಸುತ್ತಿರುವ ನಮ್ಮ ಸೋದರತ್ತೆ ದಿವಂಗತ ಕುಪ್ಪಮ್ಮನವರಿಗೆ ಈ ಸಂಕಲನದ ಅರ್ಪಣೆ” ಎಂಬ ಸಾಲುಗಳು ಕಣ್ಣಿಗೆ ಬಿದ್ದುದೇ ತಡ ಕಣ್ಣು ತೇವವಾದವು. ‘ಗಾಂಧಾರ ಮತ್ತು ಇತರ ಕಥೆಗಳು’ ಬರೆದಂತಹ ರಾಘವೇಂದ್ರ ಉಡುಪಿಯವರು ಸಂಕಲನವನ್ನು ಹೀಗೆ ತಮ್ಮ ಸೋದರತ್ತೆ ಕುಪ್ಪಮ್ಮನವರಿಗೆ ಅರ್ಪಣೆ ಮಾಡಿದ್ದಾರೆ.

ಒಂದೇ ಒಂದು ಸಲ ಯಾವುದಾದರೂ ಕರ್ಮಠ ಬ್ರಾಹ್ಮಣರ ಮನೆ ಹೊಕ್ಕು ನೋಡಿ: ಇವತ್ತಿಗೂ ಅಪರೂಪಕ್ಕೆ ಒಬ್ಬ ಅಂತಹ ತಾಯಿ ಕಾಣಸಿಗುತ್ತಾಳೆ. Ofcourse, ಮೊದಲಿನಂತೆ ಈಗ ಬಾಲ್ಯ ವಿವಾಹಗಳು, ಬಾಲ್ಯ ವೈಧವ್ಯಗಳು, ಶಿರೋಮುಂಡನಗಳೂ ಇಲ್ಲ. ಆದರೆ ಕುಪ್ಪಮ್ಮ ನವರಂತೆ ಬದುಕ ಸವೆಸುವ (ಅದು ಸವೆಸುವುದಾ?)ಹೆಣ್ಣು  ಮಕ್ಕಳು ಅದೆಷ್ಟು ಮನೆಗಳಲ್ಲಿಲ್ಲ? ಕಡಿಮೆ ರೂಪ, ಕೆಟ್ಟ ಜಾತಕ,ಗಂಡಸರ ಬೇಜವಾಬ್ದಾರು, ವಿನಾಕಾರಣ ಮದುವೆಯಾಗದೆ ಉಳಿದುಹೋದುವಿಕೆ, ಇಂಥ  ಕಾರಣಗಳಿರಬಹುದು. ಕೆಲವು ನತದೃಷ್ಟ ಹೆಣ್ಣು ಮಕ್ಕಳು ಹೆಚ್ಚಿನ ಓದೂ ಓದಲಾಗದೆ ಮನೆಗಳಲ್ಲಿ ಯಾರಿಗೂ ಬೇಡದವರಾಗಿ ಜೀವನ ಪರ್ಯಂತ, ಕಾಲ ಕಸದಂತೆ ಉಳಿದು ಹೋಗುತ್ತಾರೆ. ಅವರ ಬಗ್ಗೆ ಯಾರಾದರೂ ಯೋಚಿಸುತ್ತಾರಾ?

ಚಿಕ್ಕಊರುಗಳಲ್ಲಿ ತುಂಬು ಕುಟುಂಬಗಳಲ್ಲಿ ಇಂಥ ಹೆಣ್ಣು ಮಕ್ಕಳು ಹುಡುಕಿದಷ್ಟೂ ಸಿಕ್ಕುತ್ತಾರೆ. ನೋಡಿದ ತಕ್ಷಣ ಅವರ ಕಣ್ಣುಗಳಲ್ಲಿ ಜಾಣತನ ಕಾಣಲಿಕ್ಕಿಲ್ಲ. ಆದರೆ ಅವರು ಕೆಲಸಕ್ಕೆ ಬಾರದವರಲ್ಲ. ದುಡಿಯುವ ಕಸುವು, ಚೈತನ್ಯ ಅವರಲ್ಲಿರುತ್ತದೆ. ಮನೆಗೆಲಸವನ್ನಲ್ಲದೆಯೂ ಅವರು ಬೇರೆಯ ಕೆಲಸ ಮಾಡಬಲ್ಲರು.

ಮಾಡುವ ಉತ್ಸಾಹವೂ ಇರುತ್ತದೆ. ಆದರೆ ಅಂಥ ಹೆಣ್ಣು ಮಕ್ಕಳನ್ನು baby sitting (ಮಕ್ಕಳನ್ನು ಸಂಭಾಳಿಸುವುದಕ್ಕೆ), ಬಾಣಂತಿತನ ಮುಂತಾದವುಗಳಿಗೆ ಬಿಟ್ಟು ಬೇರೆ ಯಾವುದಕ್ಕೂ ನಾವು ಬಳಸುವುದಿಲ್ಲ. ನಾಲ್ಕಾರು ಜನ ಅಣ್ಣತಮ್ಮಂದಿರು, ತಂಗಿಯರು ಇದ್ದು ಬಿಟ್ಟರಂತೂ ಈ ಹೆಣ್ಣು ಮಕ್ಕಳು ಫುಟ್ ಬಾಲ್ ಗಳಂತೆ ಮನೆಯಿಂದ ಮನೆಗೆ ಓಡಾಡಿಸಲ್ಪಡುತ್ತಾರೆ. ಅವರು ಎಲ್ಲರಿಗೂ ಬೇಕು; ಯಾರಿಗೂ ಬೇಡ. ಅಕ್ಕರೆಯಿಂದ ಅವರನ್ನು ಮಾತಾನಾಡಿಸುವವರೂ ಇರುವುದಿಲ್ಲ. ಹಾಗೇ ನೋಡ ನೋಡುತ್ತ ವಯಸ್ಸಾಗಿ ಹೋಗುತ್ತದೆ.

ಬೆಂಗಳೂರಿನಂಥ ಊರಿನಲ್ಲಿ ಕಡೇ ಪಕ್ಷ ಗಾರ್ಮೆಂಟ್ ಇಂಡಸ್ಟ್ರಿಗಳಿವೆ. ಕೆಲಸಕ್ಕೆ ಕಳಿಸಬಹುದು. ಬೆಳಿಗ್ಗೆ ಹೋಗಿ ಸಂಜೆಗೆ ಬರುತ್ತಾರೆ. ಚಳ್ಳಕೆರೆಯಂಥ ತುರುವೇಕೆರೆಯಂಥ ಚಿಕ್ಕ ಊರುಗಳಲ್ಲಿ ಎಲ್ಲಿಗೆ ಕಳಿಸುತ್ತೀರಿ ಹೇಳಿ? ಕೂಲಿಗೆ ಕಳಿಸೋಣವೆಂದರೆ, ಮರ್ಯಾದೆಯ ಸಮಸ್ಯೆ. ಒಂದು ಹಂತದಲ್ಲಿ ಇವರನ್ನು ಏನು ಮಾಡಬೇಕೆಂಬುದೇ ಗೊತ್ತಾಗುವುದಿಲ್ಲ.

ಇವರನ್ನು ಏನೂ ಮಾಡಲಿಕ್ಕಾಗುವುದಿಲ್ಲ ಅಂತ ಗೊತ್ತಾಗುವ ಹಂತ ಯಾವುದು? ಮುಖ್ಯವಾಗಿ ಅದನ್ನು ಗೊತ್ತು ಮಾಡಿಕೊಳ್ಳಬೇಕು. ಒಂದು ಮಗುವನ್ನು ನೀವು ಹೇಗೇ ಬೆಳೆಸಿ: ಹುಟ್ಟಿದ ಏಳು ತಿಂಗಳಿಂದ ಅದರ ಏಳನೆಯ ವರ್ಷದ ತನಕ ನೀವು ಅದನ್ನು ಹೇಗೆ ರೂಪಿಸುತ್ತಿರೋ, ಅದಷ್ಟೇ ಸತ್ಯ. ಆಮೇಲಿನದೆಲ್ಲವನ್ನೂ ಶಾಲೆ; ಪರಿಸರ, ಟೀವಿ ,ಹಾಳುಮೂಳು ಸೇರಿಕೊಂಡು ರೂಪಿಸುತ್ತಾ ಹೋಗುತ್ತದೆ. ಒಬ್ಬ ಕಡಿಮೆ ರೂಪಿನ (ಕುರೂಪ ಎಂಬುದು ಅಮಾನವೀಯ ಶಬ್ದ) ಹುಡುಗಿ ಐದಾರನೆಯ ಕ್ಲಾಸಿಗೆ ಬರುತ್ತಿದ್ದಂತೆಯೇ, ಇವಳು ಎಷ್ಟರಮಟ್ಟಿಗೆ ಬುದ್ಧಿವಂತೆ ಅಂತ ಗೊತ್ತಾಗಿ ಬಿಡುತ್ತದೆ. ಇದು ಹಂಗೆ ಬುದ್ಧಿವಂತ ಕೂಸಲ್ಲ ಅಂತ ಗೊತ್ತಾಗುತ್ತಿದ್ದಂತೆಯೇ, ಸ್ಥಿತಿವಂತ ಪೋಷಕರು ಮಗುವನ್ನು ಟ್ಯೂಷನ್ನಿಗೆ ಹಾಕುತ್ತಾರೆ. ಅದರೆ, ಅದರ ಹಿಂಜರಿಕೆಗೆ, ಕೀಳರಿಮೆಗೆ ಅದರ ರೂಪು ಕಾರಣ ಅನ್ನುವ ವಿಷಯ ಅಪ್ಪ ಅಮ್ಮನ ಗಮನಕ್ಕೆ ಬರುವುದೇ ಇಲ್ಲ. ಮೊದಲು ಮಗುವಿನ ರೂಪದ ಬಗೆಗಿನ ಕೀಳರಿಮೆ ತೆಗೆಯಿರಿ. ಅಲ್ಲಿಗೆ ವಿದ್ಯಾಭ್ಯಾಸದ ಅರ್ಧ ಸಮಸ್ಯೆ ಮುಗಿಯುತ್ತದೆ.

ಕೀಳರಿಮೆ ತೆಗೆದ ನಂತರವೂ, ಎಂಟೊಂಬತ್ತನೇ ಕ್ಲಾಸಿಗೆ ಬರುವ ಹೊತ್ತಿಗೆ ಈ ಹುಡುಗಿ ಓದಿನ ವಿಷಯದಲ್ಲಿ ಉಪಯೋಗಕ್ಕೆ ಬರಲಾರಳು ಅಂತಗೊತ್ತಾಗಿ ಬಿಡುತ್ತದೆ. ಪೋಷಕರು ತಕ್ಷಣ ಜಾಗೃತರಾಗಬೇಕಾದ ಕಾಲವೆಂದರೆ ಅದೇ. ಕೂಡಲೇ ಮಗುವನ್ನು ಒಬ್ಬ ಒಳ್ಳೆಯ ಸೈಕಿಯಾಟ್ರಿಸ್ಟ್ ಗೆ ತೋರಿಸಬೇಕು. ಈ ಮಗು ಯಾವ faculty ಗೆ fit ಆಗುತ್ತಾಳೆ ಎಂಬುದರ ಪರೀಕ್ಷೆ, evaluation ಅವರಿಂದ ಮಾಡಿಸಬೇಕು. ಸಾಮಾನ್ಯವಾಗಿ ನಮ್ಮ ಮಕ್ಕಳು ಇಂಗ್ಲಿಷು, ಮ್ಯಾಥಮೆಟಿಕ್ಸು- ಇಂಥ ವಿಷಯಗಳಲ್ಲಿ ‘ವೀಕು’ ಎಂಬಂತಾಗಿಬಿಡುತ್ತಾರೆ. ಆ ಸಬ್ಜೆಕ್ಟಗಳನ್ನ ಬೇರೆ ವಿಧದಲ್ಲಿ ಹೇಳಿಸುವುದು ಸಾಧ್ಯವಾ? ಅವರ handwriting ಸರಿ ಪಡಿಸುವುದು ಸಾಧ್ಯವಾ? ಮಗು ತನ್ನನ್ನು ತಾನು ಇನ್ನಷ್ಟು ಚೆಂದಗೆ present ಮಾಡಿಕೊಳ್ಳಲು ಏನಾದರೂ ಸಹಾಯ ಮಾಡಬಹುದಾ?

ಇಲ್ಲ ,ಇದ್ಯಾವುದೂ ಸಾಧ್ಯವಿಲ್ಲ ಅಂತಾದರೆ ಕೂಡಲೆ ಶಾಲೆ ಮತ್ತು ಪರೀಕ್ಷೆಗಳ ಭೂತದಿಂದ ಮಗುವನ್ನು ಮುಕ್ತಳನ್ನಾಗಿ ಮಾಡಿ. ಹದಿನಾಲ್ಕು ತುಂಬುವುದರೊಳಗಾಗಿ ಅದನ್ನು ಒಂದು ವೃತ್ತಿಗೆ ಹಾಕಿ. ‘ಮಗಳು ರೂಪವಿಲ್ಲದವಳು’ ಅಂತ ನಿರ್ಧರಿಸಿ, ಅವಳ ಮದುವೆಗಾಗಿ ಅವಳ ಹೆಸರಿನಲ್ಲಿ ಲಕ್ಷಾಂತರ ರುಪಾಯಿ ಉಳಿಸುವ ಬದಲು ಅದರ ಅರ್ಧದಷ್ಟು ಹಣವನ್ನು ಅವಳ ವಿಶೇಷ ವಿದ್ಯೆಗಾಗಿ training ಗಾಗಿ, ಕಸಬು ಕಲಿಸುವುದಕ್ಕಾಗಿ invest ಮಾಡಿ. ಎಷ್ಟು ವರದಕ್ಷಿಣೆ ಕೊಟ್ಟರೂ ಬದುಕಲಾಗದಷ್ಟು ಸುಲಭವಾಗಿ ಮಗಳು ಬದುಕುತ್ತಾಳೆ. ಅವಳು ಯಾವತ್ತಿಗೂ ಯಾರಿಗೂ ಭಾರವಾಗುವುದಿಲ್ಲ. ಎಸೆಸೆಲ್ಸಿ ಫೇಲು, ಥರ್ಡ್ ಕ್ಲಾಸಿನಲ್ಲಿ ಬಿ.ಎ ಪಾಸು ಇಂಥ ಡಿಗ್ರಿಗಳಿಗಿಂತ ನಮ್ಮ ಹುಡುಗಿ ಒಂದು ನಿಶ್ಚಿತ ಕಸುಬಿನಲ್ಲಿ ವರ್ಧಮಾನಕ್ಕೆ ಬರುತ್ತಿದ್ದಾಳೆ ಎಂಬುದು ಹೆಮ್ಮೆಯ ಸಂಗತಿಯಾಗುತ್ತದೆ.

ಆದರೆ ನಾವು ಮಧ್ಯಮ ವರ್ಗದವರು,. ನಮಗೆ ಇಂಜಿನಿಯರಿಂಗ್ ನ, ಸಾಫ್ಟ್ ವೇರ್ [^] ಉದ್ಯಮದ ಭೂತ ಹಿಡಿದಿದೆ. ಮಕ್ಕಳನ್ನು ಅವರು ಅಂಥ ಜಾಣರಲ್ಲವೆಂದು ಗೊತ್ತಿದ್ದೂ ಮಾರ್ಕು ತರುವಂತೆ ಪೀಡಿಸುತ್ತೇವೆ. ಕೊನೆಗೆ ಯಾವುದಕ್ಕೂ ಬಾರದಂತೆ ಮಾಡುತ್ತೇವೆ. ಎಲ್ಲ ಗೊತ್ತಿದ್ದವರಿಗೆ ಬುದ್ಧಿ ಹೇಳುವರ್ಯಾರು? ಇವಿಷ್ಟು ಮಾತುಗಳನ್ನು ನಾನು ಕೇವಲ ಬ್ರಾಹ್ಮಣರ ಹೆಣ್ಣು ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ಬರೆದಿಲ್ಲ ಎಂಬುದು ತಮಗೆ ವಿದಿತವಾದರೆ, ನಾನು ಗೆದ್ದೆ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: