Idiot home minister and impotent prime minister – ಮೂರ್ಖ ಗೃಹಮಂತ್ರಿಗೆ ಷಂಡ ಪ್ರಧಾನಿ

“ನಾನು ಹೋಗೋ ಹೊತ್ತಿಗೆ ಉಗ್ರವಾದಿಗಳೆಲ್ಲ ಜಾಗ ಖಾಲಿ ಮಾಡಿಕೊಂಡು ಹೊರಟು ಹೋಗಿದ್ದರು!” ಅಂತ ಒಂದು ರಾಷ್ಟ್ರದ ಗೃಹ ಮಂತ್ರಿ ಮಾತಾಡುತ್ತಾನೆ ಅಂದರೆ ಅಂಥವನನ್ನು ಇಟ್ಟುಕೊಂಡ ಷಂಡ ಪ್ರಧಾನಿಯನ್ನು ಏನನ್ನಬೇಕು? ರಾಷ್ಟ್ರದಲ್ಲಿ ಎಲ್ಲೋ ರೈಲು ಅಪಘಾತವಾದರೆ ತಕ್ಷಣ ತಮ್ಮ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟ ಲಾಲ ಬಹದ್ದೂರ್ ಶಾಸ್ತ್ರೀಜಿಯವರಂಥವರನ್ನು ನೋಡಿದ ದೇಶ ನಮ್ಮದು. “ಮುಂಬಯಿಯಂತಹ ದೊಡ್ಡ ನಗರದಲ್ಲಿ ಇಂಥ ಚಿಕ್ಕಪುಟ್ಟ ಘಟನೆಗಳು ನಡೆಯುತ್ತಿರುತ್ತವೆ. ಇದೆಲ್ಲ ಸಹಜ” ಅಂತ ಮಹಾರಾಷ್ಟ್ರದ ಗೃಹಮಂತ್ರಿ ಆರ್.ಆರ್. ಪಾಟೀಲ್ ಮಾತನಾಡುತ್ತಾನೆ. ಇದಕ್ಕೇನನ್ನಬೇಕು? ಮುಂಬಯಿಯ ಭೀಕರ ಹತ್ಯಾಕಾಂಡದ ನೈತಿಕ ಹೊಣೆ ಹೊತ್ತು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಅಂತ ಒಬ್ಬೇ ಒಬ್ಬ ಮಂತ್ರಿ ಸೊಲ್ಲೆತ್ತಿದನಾ ಕೇಳಿ?

ಮೂಲತಃ ನಮ್ಮದು ನಿರ್ವೀರ್ಯ ದೇಶ. ಅಕ್ಟೋಬರ್ 10, 2006 ರಂದೇ ನಾವು ಅಫಜಲ್ ಗುರೂನನ್ನು ನೇಣಿಗೆ ಹಾಕಿ ಕೈ ತೊಳೆದುಕೊಳ್ಳಬೇಕಿತ್ತು. ಎಲ್ಲ ರೀತಿಯ ವಿಚಾರಣೆ ನಡೆದು, ಸಾಕ್ಷ್ಯಗಳು ಕೂಡ ಸಾಬೀತಾಗಿ ಭಾರತದ ಸರ್ವೋಚ್ಚ ನ್ಯಾಯಾಲಯ ಅಫಜಲ್ ಗುರುವನ್ನು ಪಾರ್ಲಿಮೆಂಟ್ ಹೌಸ್ ಮೇಲೆ ನಡೆದ ಮಾರಣಾಂತಿಕ ಹಲ್ಲೆಗೆ ಕಾರಣನಾಗಿದ್ದಾನೆ ಎಂದು ಘೋಷಿಸಿ ಅವನನ್ನು ನೇಣಿಗೆ ಹಾಕುವಂತೆ ಆದೇಶಿಸಿತು. 2006ರ ಅಕ್ಟೋಬರ್ 10ಕ್ಕೆ ನೇಣುಗಂಬ ಸಿದ್ಧವೂ ಆಗಿತ್ತು. ಆದರೆ ಅಫಜಲ್ ಗುರೂನ ಕುಟುಂಬದವರು ದಯಾಭಿಕ್ಷೆಯ ಅರ್ಜಿಯನ್ನು ಅಂದಿನ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರೆದುರು ಇಟ್ಟರು. ಅಬ್ದುಲ್ ಕಲಾಂ ಅದನ್ನು ಗೃಹಮಂತ್ರಾಲಯಕ್ಕೆ ಕಳಿಸಿಕೊಟ್ಟರು. ದಯಾಭಿಕ್ಷೆಯ ಅರ್ಜಿಯನ್ನು ಮತ್ತೆ ಪರಿಶೀಲಿಸಬೇಕೆಂದರೆ, ಅದು ರಾಜ್ಯ ಸರ್ಕಾರಕ್ಕೆ ಹಿಂತಿರುಗಬೇಕಾದ ಫೈಲು. ಅಸಲು ಕೇಂದ್ರ ಸರ್ಕಾರದಿಂದ ಫೈಲು ಇವತ್ತಿನ ತನಕ ಕದಲಿಲ್ಲ. ತಿಹಾರ್ ಜೈಲಿನಲ್ಲಿ ಅಫಜಲ್ ಗುರು ರೇಷನ್ ತಿನ್ನುತ್ತಾ ಸುಖವಾಗಿ ಕುಳಿತಿದ್ದಾನೆ. ಅವನನ್ನು ನೇಣು ಹಾಕಿದರೆ ಅದು ಭಾರತೀಯ ಮುಸಲ್ಮಾನರ ಮನಸ್ಸಿಗೆ ನೋವುಂಟು ಮಾಡುತ್ತದೆ ಅಂತ ನಿರ್ಲಜ್ಜರಾಗಿ ಮಾತನಾಡುವುದು ಗುಲಮ್ ನಬಿ ಆಜಾದ್. “ಇಲ್ಲ ಇಲ್ಲ, ಅಫಜಲ್ ನನ್ನು ನಾವು ಇಲ್ಲಿ ನೇಣು ಹಾಕಿದರೆ, ಅಲ್ಲಿ ಅವರು ಸರಬಜಿತ್ ನನ್ನು ನೇಣಿಗೇರಿಸುತ್ತಾರೆ” ಎಂದು ಗೃಹಮಂತ್ರಿ ಶಿವರಾಜ್ ಪಾಟೀಲ್ ಬೊಗಳುತ್ತಾನೆ. ಪಾರ್ಲಿಮೆಂಟ್ ಭವನದ ಮೇಲೆ ಹಲ್ಲೆಯಲ್ಲಿ ಅಫಜಲ್ ನ ಪಾತ್ರವಿರುವುದು ಅಗತ್ಯಕ್ಕಿಂತ ಸ್ಪಷ್ಟವಾಗಿ ಸಾಬೀತಾಗಿದೆ.

ಅದರ 1ನೇ ನಂಬರಿನ ಗೇಟಿನ ಬಳಿ ಸತ್ತ ಮಹಮ್ಮದ್ ಎಂಬ ಉಗ್ರನ ಮೊಬೈಲ್ ನಿಂದ, ಘಟನೆ ನಡೆಯುವುದಕ್ಕೆ ಕೆಲವೇ ಕ್ಷಣಗಳ ಮುಂಚೆ ಅಫಜಲ್ ಗುರುವಿನ ಮೊಬೈಲಿಗೆ ಮೂರು ಕರೆಗಳು ಹೋಗಿವೆ. ಇನ್ನೊಬ್ಬ ಉಗ್ರನ ಬಳಿ ದೊರೆತ ಮೊಬೈಲ್ ಹ್ಯಾಂಡ್ ಸೆಟ್ಟನ್ನು ಕೆಲವೇ ದಿನಗಳ ಹಿಂದಿನ ತನಕ ಖುದ್ದು ಅಫಜಲ್ ಗುರು ಬಳಸುತ್ತಿದ್ದ ಎಂಬುದಕ್ಕೆ ಸಾಕ್ಷ್ಯ ಸಿಕ್ಕಿದೆ. ಉಗ್ರರಿಗೆ ಅಫಜಲ್ ಕೊಡಿಸಿದ ಮನೆಯಲ್ಲಿ ಸ್ಫೋಟಕಗಳು, ನಕಲಿ ಯೂನಿಫಾರ್ಮ್ ಗಳು, ಲ್ಯಾಪ್ ಟ್ಯಾಪ್ ಮತ್ತು ಐಡೆಂಟಿಟಿ ಕಾರ್ಡುಗಳು ದೊರೆತಿವೆ. ಇಷ್ಟೆಲ್ಲ ಸಾಕ್ಷ್ಯಗಳು ಸಿಕ್ಕು, ಸರ್ವೋಚ್ಚ ನ್ಯಾಯಾಲಯ ಮರಣದಂಡನೆ ವಿಧಿಸಿದ ನಂತರವೂ ಮುಸ್ಲಿಮರ ಮನಸ್ಸಿಗೆ ನೋವಾಗುತ್ತದೆಂಬ ಕಾರಣಕ್ಕೆ ನಾವು ಅವನನ್ನು ನೇಣು ಹಾಕುವುದಿಲ್ಲ ಅಂದರೆ ನಮ್ಮದು ಷಂಡ ಪ್ರಧಾನಿ ಇರುವ ದೇಶವಲ್ಲದೇ, ಮತ್ತೇನು?

ಮುಂಬಯಿಯ ಘಟನೆಗೆ ಇವರು react ಮಾಡಿದ ರೀತಿಯನ್ನೇ ನೋಡಿ. ಕೇರಳದಲ್ಲೆಲ್ಲೋ ಇದ್ದ ಮಹಾರಾಷ್ಟ್ರದ ಮುಖ್ಯಮಂತ್ರಿಗೆ ಮುಂಬಯಿಯ ಪರಿಸ್ಥಿತಿಯನ್ನು ಅರುಹಲಿಕ್ಕೇ ತೊಂಬತ್ತು ನಿಮಿಷ ಬೇಕಾದವು. ಆತ ಗೃಹಮಂತ್ರಿಯನ್ನು ಕಮ್ಯಾಂಡೋ ಪಡೆ ಕಳಿಸುವಂತೆ ಕೋರಿ, ಆತ ಅದನ್ನು ಮಂಜೂರು ಮಾಡಿ, ದಿಲ್ಲಿಯಲ್ಲಿ ಇರದಿದ್ದ ವಿಮಾನವನ್ನು ಚಂಡೀಘಡದಿಂದ ತರಿಸಿಕೊಂಡು ಮುಂಬಯಿಗೆ NSG ಪಡೆಯನ್ನು ತಲುಪಿಸುವ ಹೊತ್ತಿಗೆ ಮರುದಿನ ಬೆಳಿಗ್ಗೆ 7 ಘಂಟೆ! ಅಲ್ಲಿಗೆ ಅನಾಮತ್ತು ಹತ್ತು ತಾಸು ಪಾಕಿ ಉಗ್ರರಿಗೆ ಮನಸೋ ಇಚ್ಛೆ ಮುಂಬಯಿಯ ಎರಡು ಹೊಟೇಲು ಮತ್ತು ಒಂದು ವಸತಿ ಸಮುಚ್ಚಯದಲ್ಲಿ ನರಮೇಧ ನಡೆಸಲು ಅವಕಾಶ ಕೊಟ್ಟಂತಾಯಿತು.

ಇವತ್ತಿನ ಲೆಕ್ಕದ ಪ್ರಕಾರ ಮುಂಬಯಿಗೆ ಬೋಟ್ ಮೂಲಕ ಬಂದಿಳಿದವರು ಹತ್ತೇ ಮಂದಿ ಉಗ್ರರು. ಅವರಲ್ಲಿ ಇಬ್ಬರು ಸ್ಕೋಡಾ ಕಾರು ಹತ್ತಿ ಯಡವಟ್ಟು ಮಾಡಿಕೊಂಡರು. ಒಬ್ಬ ಸತ್ತು ಹೋದ, ಇನ್ನೊಬ್ಬ ಸಿಕ್ಕುಬಿದ್ದ. ಉಳಿದ ಎಂಟು ಮಂದಿ ಎಷ್ಟು ಸಾವಧಾನವಾಗಿ ‘ಕೆಲಸ’ ಮಾಡಿದ್ದಾರೆಂದರೆ, ಪ್ರತಿಷ್ಠಿತ ಹೊಟೇಲಿನ ಹದಿನೇಳು ಮಂದಿ ಅತಿಥಿಗಳನ್ನು ಗೋಡೆಗೆ ನಿಲ್ಲಿಸಿ “ಉಡಾದೇ ಕ್ಯಾ?” ಎಂದು ಪರಸ್ಪರ ಟೆಲಿಫೋನಿನಲ್ಲಿ ಮಾತಾಡಿಕೊಂಡು ಅತ್ಯಂತ ನಿರ್ದಯವಾಗಿ ಗೋಡೆಗೆ ನಿಂತವರ ಪೈಕಿ ಹದಿನೈದು ಮಂದಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.

“ಇದು ಅತ್ಯಂತ ಹೇಯಕರ. ಬಲವಾಗಿ ಖಂಡಿಸುತ್ತೇನೆ ಇದಕ್ಕೆ ಕಾರಣರಾದವರಿಗೆ ಅತ್ಯುಗ್ರ ಶಿಕ್ಷೆ ವಿಧಿಸಲಾಗುವುದು” ಅಂತ ನಿಶ್ಯಕ್ತ ಮುದಿಯನ ಹಾಗೆ ಬಡಬಡಿಸಿದ್ದು ಬಿಟ್ಟರೆ ನಮ್ಮ ಪ್ರಧಾನಿ [^] ಮಾಡಿದ್ದಾದರೂ ಏನು? ಪಾಕಿಸ್ತಾನದ ISI ಮುಖ್ಯಸ್ಥನಿಗೆ ಮೊದಲು ಬುಲಾವು ಹೋಯಿತು. ಕೂಡಲೆ ಕಳಿಸುತ್ತೇನೆ ಅಂದ ಪಾಕಿ ಅಧ್ಯಕ್ಷ, “ಅಂಥ ಅವಸರವಾದರೂ ಏನಿದೆ? ಉಗ್ರರ ಹಲ್ಲೆಯ ಹಿಂದೆ ಪಾಕಿಸ್ತಾನದ ಯಾವುದಾದರೂ ಸಂಘಟನೆ ಇದೆಯಾ ಎಂಬುದಕ್ಕೆ ಮೊದಲು ಸರಿಯಾದ ಸಾಕ್ಷ್ಯಗಳಾದರೂ ಸಿಕ್ಕಲಿ, ಅದು ಸಿಕ್ಕಿದ್ದೇ ಆದರೆ ISIನ ನಿರ್ದೇಶಕರ ಪೈಕಿ ಒಬ್ಬರನ್ನು ಕಳಿಸೋಣ” ಅಂತ ಮಾತು ಬದಲಿಸಿದ.

ಆಶ್ಚರ್ಯಕರ ಸಂಗತಿಯೆಂದರೆ, ತೀರ ಅನಿರೀಕ್ಷಿತವಾದ ರೀತಿಯಲ್ಲಿ ಸಾಕ್ಷ್ಯ ದೊರೆತಿದೆ. ಮೊದಲು ಪಾಕಿಸ್ತಾನ್ದ ಅಲ್ -ಹುಸೇನಿ ಎಂಬ ಹಡಗಿನಲ್ಲಿ ಬಂದ ಉಗ್ರರು ಆ ನಂತರ ನಾವಿಕನನ್ನು ಕೊಲೆ ಮಾಡಿ ಚಿಕ್ಕ ಬೋಟಿನಲ್ಲಿ ಮುಂಬಯಿಗೆ ಬಂದವರು ಒಂದು ಸ್ಯಾಟಲೇಟ್ ಫೋನನ್ನು ಬೋಟಿನಲ್ಲಿಯೇ ಮರೆತುಬಿಟ್ಟಿದ್ದಾರೆ. ಉಗ್ರರ ಹೆಜ್ಜೆ ಜಾಡು ಸಿಕ್ಕಿದ್ದೇ ಆ ಫೋನಿನಿಂದ. ಈಗ ಸಿಕ್ಕಿರುವ ಸಾಕ್ಷ್ಯ ಸ್ಪಷ್ಟವಾಗಿ ಹೇಳುವುದೆಂದರೆ ಮೊನ್ನೆಯ ಹತ್ಯಾಕಾಂಡದ ಪೂರ್ಣ ಉಸ್ತುವಾರಿಯಲ್ಲಿದ್ದವನು ಯೂಸುಫ್ ಅಲಿಯಾಸ್ ಮುಜಮ್ಮಿಲ್. ಅಷ್ಟೇ ಅಲ್ಲ, ಲಷ್ಕರ್ -ಎ-ತೊಯಿಬಾದ ಸಂಸ್ಥಾಪಕರಲ್ಲಿ ಒಬ್ಬನಾದ ಝುಕಿ ಉರ್ ರೆಹಮಾನ್ ಖುದ್ದಾಗಿ ಈ ಆಪರೇಷನ್ ನಲ್ಲಿ ಆಸಕ್ತಿ ವಹಿಸಿದ್ದ. ಯಾವ ಕಾರಣಕ್ಕೂ ಯಾರನ್ನೂ ಭೇಟಿಯಾಗದ ಝುಕಿ, ಈ ಹತ್ತೂ ಉಗ್ರರನ್ನು ಕೊನೆಯ ಹಂತದಲ್ಲಿ ಭೇಟಿಯಾಗಿ ತುಂಬ ಹೊತ್ತು ಮಾತನಾಡಿದ್ದ.

ಈ ದಾಳಿಯ ವೈಶಿಷ್ಟ್ಯವೆಂದರೆ, ಬಂದ ಉಗ್ರರ್ಯಾರು ಆತ್ಮಹತ್ಯಾ ದಳದವರಲ್ಲ. ಅವರಿಗೆ ತಾವು ವಾಪಸು ಕರಾಚಿಗೆ ಹಿಂತಿರುಗುತ್ತೇವೆಂಬ ವಿಶ್ವಾಸವಿತ್ತು. ಕರಾಚಿಯ ಅಜೀಜಾಬಾದ್ ನಲ್ಲಿ ಅವರಿಗೆ ಮನೆಯೂ ಇತ್ತು. ವಾಪಸು ಹೋದಲು ಇಂಥದೇ ನಿರ್ದಿಷ್ಟ ಮಾರ್ಗವಿದೆಯೆಂಬುದನ್ನೂ ಅವರಿಗೆ ಸೂಚಿಸಲಾಗಿತ್ತು. ಅವರಿಗೆ ಝುಕಿ ಕೊಟ್ಟಿದ್ದ ಅತಿ ಮುಖ್ಯ ಸೂಚನೆಯೆಂದರೆ, “ಮುಂಬಯಿಗೆ ಪ್ರವೇಶಿಸುವ ಮುನ್ನ ನಿಮ್ಮ ಕೈಯಲಿರುವ ಸ್ಯಾಟಲೈಟ್ ಫೋನನ್ನು ನಾಶ ಮಾಡಿ”. ಆದರೆ ಉಗ್ರರು ನುಗ್ಗುವ ಅವಸರದಲ್ಲಿ ಅದನ್ನೇ ಮರೆತ್ತಿದ್ದರು. ಇದೇ ಮುಜಮ್ಮಿಲ್ ಅಲಿಯಾಸ್ ಯೂಸುಫ್ ಈ ಹಿಂದೆ ಉತ್ತರ ಪ್ರದೇಶದಲ್ಲಿ CRPF ಯೋಧರಿದ್ದ ರಾಂಪುರ್ ಕ್ಯಾಂಪಿನ ಮೇಲೆ ಬರ್ಬರವಾದ ದಾಳಿ ಮಾಡಿಸಿದ್ದ. ಮುಂಬಯಿಯ ದಾಳಿಯನ್ನು ಲಷ್ಕರ್ -ಎ- ತೊಯಿಬಾ ಕನಿಷ್ಠ ಪಕ್ಷ ಒಂದು ವರ್ಷಕ್ಕೆ ಮುಂಚೆಯೇ Plan [^] ಮಾಡಿತ್ತು.

ಅಡಗಿ ಕುಳಿತ ಕೊನೆಯ ಮೂವರು ಉಗ್ರರನ್ನು ಕೊಲ್ಲುವ ಹೊತ್ತಿಗೆ NSG ಪಡೆಗಳಿಗೆ ಅನಾಮತ್ತು 58 ತಾಸು ಹಿಡಿದಿವೆ. ಬಹುಶಃ ಅತಿ ಹೆಚ್ಚಿನ ಮಾರಣಹೋಮ ನಡೆದದ್ದು ತಾಜ್ ಮಹಲ್ ಪ್ಯಾಲೇಸ್ ಹೊಟೇಲಿನಲ್ಲಿ. ಅದರ 565 ಕೋಣೆಗಳ ಪೈಕಿ 465 ಕೋಣೆಗಳು ಅವತ್ತು ಅತಿಥಿಗಳಿಂದ ತುಂಬಿದ್ದವು. ಹೊಟೇಲಿನ ಸಭಾಂಗಣದಲ್ಲಿ ಎರಡು ಪಾರ್ಟಿಗಳು ನಡೆಯುತ್ತಿದ್ದುವು. ಒಂದು ಮದುವೆಯ ರಿಸೆಪ್ಷನ್ ನಡೆದಿತ್ತು. ಅದರ ಕಾಫಿ ಹೌಸ್ ತುಂಬ ಪ್ರತಿಷ್ಠಿತರು, ವಿದೇಶಿಯರು, ಉದ್ಯಮಿಗಳು ಊಟಕ್ಕೆ ಸೇರಿದ್ದರು. ನೋಡನೋಡುತ್ತ ಭಾರತದ ಅತ್ಯಂತ ಪ್ರಾಚೀನಕಟ್ಟಡ ಉರಿಯುವ ಕೆಂಡವಾಗಿ, ಶವಾಗಾರವಾಗಿ ಪರಿವರ್ತಿತವಾಗಿ ಹೋಯಿತು.

‘ಅಪರೇಷನ್ ಸೈಕ್ಲೋನ್’ ಕಾರ್ಯಾಚರಣೆಯೇನೋ ಮುಗಿದಿದೆ. ಆದರೆ ಸೆಪ್ಟೆಂಬರ್ 11ರ ನಂತರ ಅಮೆರಿಕದಲ್ಲಿ ಒಂದೇ ಒಂದು ಮುಸ್ಲಿಂ ಉಗ್ರರ ದಾಳಿ ನಡೆಯಲಿಲ್ಲ. ಭಾರತದಲ್ಲೇಕೆ ಪದೇ ಪದೇ ನಡೆಯುತ್ತದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ನಮ್ಮಲ್ಲಿ ಉತ್ತರವೇ ಇಲ್ಲ. ಎಂಥ ದರಿದ್ರ ದೇಶ ನಮ್ಮದು?

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: