In Support of small time business in India – ಬೀದಿ ಬಿಕರಿಯವ, ಆಗದಿರಲಿ ಭಿಕಾರಿ

Street vendors literally thrown out of the street by big vendorsದೊಡ್ಡದೊಡ್ಡ ಕಂಪನಿಗಳು ಸಣ್ಣಪುಟ್ಟ ಅಂಗಡಿಮುಂಗಟ್ಟುಗಳನ್ನು ಗುಳುಂ ಮಾಡಿ ಮಾಲ್ ಸಂಸ್ಕೃತಿಯನ್ನು ಪೋಷಿಸುತ್ತಿರುವ ಅಪಾಯಗಳ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಒಂದು ನಿಮಿಷ ಸೀರಿಯಸ್ ಆಗಿ ಚಿಂತೆಮಾಡಿ ; ಭಾರತೀಯರೆಲ್ಲರೂ ಸಾಮೂಹಿಕವಾಗಿ ಶಾಪರ್ಸ್ ಸ್ಟಾಪ್ ಮೋಹಪರವಶವಾದರೆ ಫುಟ್‌ಪಾತ್‌ನಲ್ಲಿ ಕಳ್ಳೇಪುರಿ ಮಾರುವವನ ಭವಿಷ್ಯವೇನು? ರಿಲಯನ್ಸ್‌ನ ಹವಾನಿಯಂತ್ರಿತ ಷೋರೂಂನಲ್ಲಿ ನೀವು ಫ್ರೆಶ್ ವೆಜಿಟಬಲ್ಸ್ ಆರಿಸುತ್ತಿದ್ದರೆ ಬಿಸಿಲಲ್ಲಿ ಗಾಡಿತಳ್ಳಿಕೊಂಡು ಟೋಮೆಟೋ, ಈರುಳ್ಳಿ ಕೂಗುತ್ತಾ ನಿಮ್ಮ ಮನೆಬಾಗಿಲಿಗೆ ಬರುವವವನ ಗತಿಯೇನು?

ಏನ್ ಸಾರ್… ನಿನ್ನೆ, ಮೊನ್ನೆ ಕಾಣ್ಲೇ ಇಲ್ಲಾ. ಊರ್ ಕಡೆ ಹೋಗಿದ್ರಾ? ಈ ಸಾರಿ ಬೇಸಿಗೆಯಲ್ಲೂ ಮಳೆ ಸುರೀತಾ ಇರೋದ್ರಿಂದ ಸೆಖೆ ಸ್ವಲ್ಪ ಕಡಿಮೆ ಅಲ್ವಾ? ಮತ್ತೇನ್ ಸಾರ್…ಮಗಳು ಕಾಲೇಜಿಗೆ ಹೋಗ್ತಿದ್ದಾಳಲ್ಲಾ, ಡಿಗ್ರಿ ಮುಗಿಯೋಕೆ ಬಂತಾ? ರಾಮಣ್ಣ ಹೇಳಿದ್ರು ನಿಮ್ ದೊಡ್ ಮಗನಿಗೆ ಯಾವುದೋ ಒಳ್ಳೆಯ ಕಂಪನಿಯಲ್ಲಿ ಕೆಲಸ ಸಿಕ್ಕಿತಂತೆ? ಇನ್ನೇನ್ ಪರ್ವಾಗಿಲ್ಲ ಬಿಡಿ. ಮಗಳ ಮದುವೆ ಬಗ್ಗೆ ತಲೇನೇ ಕೆಡಿಸಿಕೊಳ್ಳಬೇಕಿಲ್ಲ..ಸರಿ ಬಿಡಿ, ಏನ್ ಬೇಕು, ಈರುಳ್ಳಿನಾ? ಅರ್ಧ ಕೆಜಿ ಕೊಡ್ಲಾ, ಕಾಲ್ ಕೆಜಿ ಸಾಕಾ? ಕೊತ್ತಂಬರಿ ಸೊಪ್ಪು… ಎಷ್ಟು… ಒಂದು ರೂಪಾಯಿಗಾ? ಸರಿ ಸಾರ್, ಒಳ್ಳೆಯದು, ಹೋಗಿ ಬನ್ನಿ..

ಮನೆಯ ಪಕ್ಕದಲ್ಲೇ ಇರುವ ಅಥವಾ ಬೀದಿಯ ಅಂಚಿನಲ್ಲಿರುವ ದಿನಸಿ ಅಂಗಡಿಗೆ ಹೋದರೆ ನಾವು ತೆಗೆದುಕೊಳ್ಳುವುದು ಒಂದು ರೂಪಾಯಿ ಕೊತ್ತಂಬರಿ, ಕರಿ ಬೇವಿನ ಸೊಪ್ಪೇ ಆದರೂ ಬಾಯಿ ತುಂಬಾ ಮಾತನಾಡಿ ಕಳುಹಿಸುತ್ತಾರೆ. ಒಂದು ವೇಳೆ, ದುಡ್ಡು ಮರೆತು ಹೋಗಿದ್ದರೂ ‘ಪರ್ವಾಗಿಲ್ಲ, ಇನ್ನೊಮ್ಮೆ ಬಂದಾಗ ಕೊಡಿ ಸಾರ್” ಅಂತ ಖುಷಿಯಿಂದಲೇ ಬೇಕಾದ ದಿನಸಿಯನ್ನು ಕೊಡುತ್ತಾರೆ. ಅಕಸ್ಮಾತ್ ಪುಟ್ಟ ಮಗನೋ, ಮಗಳೋ ಬಂದು ‘ಅಪ್ಪ ಹೇಳಿದ್ರು ಒಂದು ಬಾರ್ ಬಟ್ಟೆ ಸೋಪು, ಸೆವೆನ್ ಓ”ಕ್ಲಾಕ್ ಶೇವಿಂಗ್ ಬ್ಲೇಡ್ ಬೇಕಂತೆ, ಆಮೇಲೆ ಕೊಡುತ್ತಾರಂತೆ” ಅಂತ ಹೇಳಿದರೂ ಕೇಳಿದ್ದನ್ನು ಕೊಟ್ಟು ಕಳುಹಿಸುತ್ತಾರೆ. ಅಷ್ಟೇ ಅಲ್ಲ, ಪಟ್ಟಿ ಬರೆಸಿ ಸಂಬಳ ಬಂದಾಗ. ಇಲ್ಲವೆ ದುಡ್ಡಿದ್ದಾಗ ಚುಕ್ತಾ ಮಾಡಬಹುದು. ಇದೂ ಒಂದು ರೀತಿಯ ಮಾನವೀಯ ಬೆಸುಗೆ. ಕೊಡು-ಕೊಳ್ಳುವ ವ್ಯವಹಾರದಲ್ಲೂ ಆತ್ಮೀಯತೆ, ಪರಸ್ಪರ ವಿಶ್ವಾಸ, ಕಾಳಜಿ ಇರುತ್ತದೆ.

ಸರಕಿನ ಪ್ರಮಾಣ ಮತ್ತು ಗುಣಮಟ್ಟ ಹೇಗೇ ಇದ್ದರೂ ಚೆಂದದ ಕವರ್ ಹಾಕಿಕೊಟ್ಟು ಹೊರಹೋಗುವಾಗ ‘ಥ್ಯಾಂಕ್ಯೂ” ಅಂತ ‘ಪ್ರೋಗ್ರಾಮ್ಡ್ ರೋಬೋಟ್”ಗಳಂತೆ ಕೃತಕ ಸ್ಮೈಲ್ ಕೊಡುವ ಮಾಲ್ ಸಂಸ್ಕೃತಿಗೂ ಅಕ್ಕ-ಪಕ್ಕದ ಬೀದಿಗಳಲ್ಲಿರುವ ಅಂಗಡಿಯಾತನಿಗೂ ಅದೆಷ್ಟು ವ್ಯತ್ಯಾಸ ಅಲ್ಲವೆ? ಬಾಯಿ ತುಂಬ ಮಾತಾಡುವುದೂ ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ಒಂದು ಕಲೆ ಅಂತ ಖಂಡಿತ ಭಾವಿಸಬೇಡಿ. ಅಂತಹ ವಿಶ್ವಾಸದ ಮಾತುಗಳನ್ನಾಡುವ ಮೂಲಕ ಅಂಗಡಿಯಾತ ಕೋಟಿ ಕೋಟಿಯನ್ನೇನು ದುಡಿಯುವುದಿಲ್ಲ. ಮಾಲ್‌ಗಳಿಗೆ ಹೋದಾಗ ಎಲ್ಲಿ ಕೋಡು ಗುಡ್ಡವಾಗುತ್ತದೋ ಎಂಬ ಅಂಜಿಕೆಯಿಂದ ಕೇಳಿದಷ್ಟು ಕೊಟ್ಟು ಬೇಕಾದ್ದನ್ನು ತೆಗೆದುಕೊಂಡು ಬರುವ ಜನರೇ ಬೀದಿ ಬದಿಯ ಅಂಗಡಿಗೆ ಹೋದಾಗ ಒಂದೆರಡು ರೂಪಾಯಿಗೂ ಚೌಕಾಶಿ ಮಾಡುತ್ತಾರೆ. ಬೇಡ ಬಿಡಿ, ಪಕ್ಕದ ಬೀದಿಯಲ್ಲಿರುವ ಅಂಗಡಿಯಲ್ಲಿ ತೆಗೆದುಕೊಳ್ಳುತ್ತೇನೆ ಅಂತ ಬೆದರಿಕೆಯನ್ನೂ ಹಾಕುತ್ತಾರೆ.

ಹಾಗಿರುವಾಗ ಅಂಗಡಿಯಾತನಿಗೆ ಎಷ್ಟು ಗಿಟ್ಟೀತು? ಅಂಗಡಿಯಿಂದಾಗಿ ಮರ್ಯಾದೆಯಿಂದ ಜೀವನ ಮಾಡುವಷ್ಟು, ಮಕ್ಕಳನ್ನು ಓದಿಸುವಷ್ಟು ಆದಾಯ ಬರಬಹುದಷ್ಟೇ. ಹೆಚ್ಚೆಂದರೆ ನಿವೇಶನ ಖರೀದಿ ಮಾಡಿ ಇರುವುದಕ್ಕೆ ಒಂದು ಗೂಡು ಕಟ್ಟಿಕೊಳ್ಳಬಹುದು. ಒಂದಲ್ಲ ಒಂದು ದಿನ ಮಕ್ಕಳು ತಮ್ಮ ಕಾಲ ಮೇಲೆ ತಾವು ನಿಂತುಕೊಳ್ಳುತ್ತಾರೆ, ಅವರನ್ನು ಓದಿಸಿದರೆ ಸಾಕು ಎಂದು ನೆಮ್ಮದಿಯಿಂದ ಇರಬಹುದಾಗಿತ್ತು.ಆದರೆ ಇಂದು ಏನಾಗುತ್ತಿದೆ?

ಯಾವುದೇ ಅಂಗಡಿಗೆ ಬೇಕಾದರೂ ಹೋಗಿ ಕೇಳಿ. ‘ಬ್ಯುಸಿನೆಸ್ ಡೌನ್” ಆಗಿದೆ, ಅಂಗಡಿಯನ್ನು ನಡೆಸುವು ದಕ್ಕಾಗುತ್ತಿಲ್ಲ ಸಾರ್, ಪಾರ್ಟ್‌ಟೈಮ್ ಕೆಲಸ ನೋಡಿದ್ದೇನೆ ಅನ್ನುತ್ತಾರೆ. ಸೂಪರ್, ಹೈಪರ್ ಮಾರ್ಕೆಟ್‌ಗಳು ಬಂದ ಮೇಲೆ ‘ಒನ್ ಸ್ಟಾಪ್ ಬೈ” ಸಂಸ್ಕೃತಿ ಹೆಚ್ಚಾಗುತ್ತಿದೆ. ಒಬ್ಬ ಸಾಫ್ಟ್‌ವೇರ್ ಕ್ಷೇತ್ರದ ಉದ್ಯೋಗಿ ಇರಬಹುದು, ಖಾಸಗಿ ಕಂಪನಿಯ ಕಾರ್ಮಿಕನಾಗಿರಬಹುದು, ಸಮಯಾಭಾವದ ಸುಳಿಗೆ ಸಿಲುಕಿರುವ ಅವರಿಗೆ ಒಂದೇ ಜಾಗದಲ್ಲಿ ಎಲ್ಲ ವಸ್ತುಗಳೂ ಲಭ್ಯವಾಗುವ ಸೂಪರ್‌ಮಾರ್ಟ್, ಹೈಪರ್ ಮಾರ್ಕೆಟ್‌ಗಳಿಂದ ಖಂಡಿತ ಅನುಕೂಲವಾಗಿದೆ. ಆದರೆ ಮುಂದೆ ಎದುರಾಗಲಿರುವ ಅಪಾಯದ ಬಗ್ಗೆ ಯೋಚನೆ ಮಾಡಿ ನೋಡಿ. ನಾಯಿಕೊಡೆಗಳಂತೆ ತಲೆಯೆತ್ತುತ್ತಿರುವ ಮಾಲ್‌ಗಳಿಂದಾಗಿ ಸಾಮಾನ್ಯ ವ್ಯಾಪಾರಿ ವರ್ಗವೊಂದು ದುಡಿಯುವ ಅವಕಾಶದಿಂದಲೇ ವಂಚಿತವಾಗುತ್ತಿದೆ. ಅವರ ದಾರಿದ್ರ್ಯ ಹೆಚ್ಚಾಗುತ್ತಿದೆ. ವ್ಯಾಪಾರವೇ ನಿಂತು ಹೋದರೆ ಆತ ಎಲ್ಲಿಗೆ ಹೋಗಬೇಕು? ಅಷ್ಟೇನು ಓದಿ-ಕಲಿಯದ ಆತನಿಗೆ ಯಾರು ಕೆಲಸ ಕೊಡುತ್ತಾರೆ? ಈ ವಿಷಯವನ್ನು ಮತ್ತೆ ಮತ್ತೆ ಪ್ರಸ್ತಾಪಿಸಬೇಕಾಗಿ ಬರುತ್ತಿದೆ.

ಅದಕ್ಕೆ ಕಾರಣವೂ ಇದೆ. ಎನ್‌ಡಿಎ ಸರಕಾರವಿದ್ದಾಗ ಲಾಭ ಗಳಿಸುತ್ತಿದ್ದ ಭಾರತ್ ಅಲ್ಯೂಮಿನಿಯಂ ಕಂಪನಿ (ಬಾಲ್ಕೋ), ಮಾರುತಿ ಉದ್ಯೋಗ್ ಲಿಮಿಟೆಡ್, ಅಶೋಕ ಹೋಟೆಲ್ಸ್‌ಗಳನ್ನು ಬಿಕರಿಗೆ ಇಟ್ಟರು, ಕಾಂಗ್ರೆಸ್ ನವರಂತೂ ಚಿಲ್ಲರೆ ಮಾರಾಟ ಕ್ಷೇತ್ರ (ರೀಟೇಲ್ ಸೆಕ್ಟರ್) ವನ್ನೇ ದೊಡ್ಡ ತಿಮಿಂಗಿಲಗಳಿಗೆ ತೆರೆಯುವ ಮೂಲಕ ಸಾಮಾನ್ಯ ದಿನಸಿ ಅಂಗಡಿಯವರು, ಹೊತ್ತು ಹಾಗೂ ಗಾಡಿಯಲ್ಲಿ ಮಾರುವವರ ಬದುಕನ್ನೇ ಕಸಿದುಕೊಳ್ಳು ತ್ತಿದ್ದಾರೆ, ಎಸ್‌ಇಝೆಡ್‌ಗಳಿಗೆ ಯದ್ವಾತದ್ವಾ ಅನುಮತಿ ನೀಡಿ ರೈತನನ್ನು ಕೊಂದು ಹಾಕುವ ಕಾರ್ಯವನ್ನೂ ಮಾಡುತ್ತಿದೆ. ಮೇಲ್ನೋಟಕ್ಕೆ ಇಂತಹ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸುವಂತೆ ನಾಟಕವಾಡುವ, ಬೊಬ್ಬೆ ಹಾಕುವ ಕಮ್ಯುನಿಸ್ಟರು ರಹಸ್ಯವಾಗಿ ಖದೀಮ ಕೆಲಸ ಮಾಡುತ್ತಿದ್ದಾರೆ. ಸಿಂಗೂರಿನಲ್ಲಿ ಟಾಟಾ ಕಂಪನಿಗೆ, ನಂದಿಗ್ರಾಮದಲ್ಲಿ ಇಂಡೋನೇಷ್ಯಾದ ಸಲೀಂ ಗ್ರೂಪ್‌ಗೆ ಬಡವರ ಕೃಷಿ ಭೂಮಿಯನ್ನು ಕಸಿದು ಕೊಟ್ಟ ಕಮ್ಯುನಿಸ್ಟರು ಈಗ ರಿಲಯನ್ಸ್ ಫ್ರೆಶ್‌ಗೆ ಮಣೆ ಹಾಕಲು ಮುಂದಾಗಿದ್ದಾರೆ!

ಎರಡು ದಿನಗಳ ಹಿಂದಷ್ಟೇ ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ತಮ್ಮ ಬೃಹತ್ ಮಳಿಗೆಗಳನ್ನು ತೆರೆಯಲು ರಿಲಯನ್ಸ್ ಫ್ರೆಶ್‌ಗೆ ಅನುಮತಿ ನೀಡಿದ್ದಾರೆ! ಕಮ್ಯುನಿಸ್ಟರಿಗೆ ಅಮೆರಿಕದ ವಾಲ್‌ಮಾರ್ಟ್ ಬೇಡವಂತೆ, ಆದರೆ ರಿಲಯನ್ಸ್‌ಗೆ ಸ್ವಾಗತವಂತೆ! ನೀವೇ ಹೇಳಿ, ವಾಲ್‌ಮಾರ್ಟ್‌ಗೂ ರಿಲಯನ್ಸ್‌ಗೂ ಏನು ವ್ಯತ್ಯಾಸ? ವಾಲ್‌ಮಾರ್ಟ್ ವಿದೇಶಿ ಕಂಪನಿಯಾದರೆ, ರಿಲಯನ್ಸ್ ದೇಶಿ ತಿಮಿಂಗಿಲ. ವಾಲ್‌ಮಾರ್ಟ್, ಟೆಸ್ಕೋ, ಕ್ಯಾರ್‌ಫೋರ್‌ಗಳಂಥ ವಿದೇಶಿ ಕಂಪನಿಗಳು ಬೇಡ, ರಿಲಯನ್ಸ್ ಬೇಕು ಎನ್ನಲು ರಿಲಯೆನ್ಸೇನು ಜನರನ್ನು ಉದ್ಧಾರ ಮಾಡುವ ಗುರಿ ಇಟ್ಟುಕೊಂಡಿದೆಯೇ? ರಿಲಯನ್ಸ್ ಉದ್ದೇಶ ಹಣ ಗಳಿಕೆಯಲ್ಲವೆ? ರಿಲಯನ್ಸ್‌ನಿಂದಾಗಿ ಹೊತ್ತು ಮಾರುವವರ ತುತ್ತಿಗೂ ಕುತ್ತು ಬರುವುದಿಲ್ಲವೆ? ಬಡವರ ವೃತ್ತಿಯನ್ನು ಕಸಿದುಕೊಳ್ಳುವುದಿಲ್ಲವೆ?

ಒಬ್ಬ ನಾರಾಯಣಮೂರ್ತಿ ಬೆಳೆಯುವುದಕ್ಕೂ, ಮುಖೇಶ್ ಅಂಬಾನಿ, ಸುನೀಲ್ ಮಿತ್ತಲ್‌ಗಳಂತಹ ವ್ಯಕ್ತಿಗಳು ತಲೆಯೆತ್ತುವುದಕ್ಕೂ ಬಹಳ ವ್ಯತ್ಯಾಸವಿದೆ. ನಾರಾಯಣಮೂರ್ತಿ ತಮ್ಮ ಬುದ್ಧಿಶಕ್ತಿಯನ್ನು ಉಪ ಯೋಗಿಸಿ ಇನ್ಫೋಸಿಸ್‌ನಂತಹ ಬೃಹತ್ ಕಂಪನಿಯನ್ನು ಪ್ರಾರಂಭಿಸಿದರು. ಭಾರೀ ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿ ಮಾಡಿ ಲಕ್ಷಾಂತರ ಪದವೀಧರರಿಗೆ ಕೆಲಸ ನೀಡಿದರು. ಅಂತಹ ಉದ್ಯೋಗ ಸೃಷ್ಟಿಗೆ ಬೇಕಾದ ವ್ಯಾಪಾರ ಗುತ್ತಿಗೆಗಳನ್ನು ವಿದೇಶದಿಂದ ತಂದರು. ಹೀಗೆ ನಾರಾಯಣಮೂರ್ತಿಯವರಿಂದಾಗಿ ವಿದೇಶಿ ಉದ್ಯೋಗಗಳು ಭಾರತಕ್ಕೆ ಬಂದವು, ಜತೆಗೆ ವಿದೇಶಿ ವಿನಿಮಯದ ರೂಪದಲ್ಲಿ ಅಪಾರ ಪ್ರಮಾಣದ ಸಂಪನ್ಮೂಲ ನಮ್ಮ ದೇಶಕ್ಕೆ ಹರಿದು ಬರುತ್ತಿದೆ. ಷೇರುಗಳನ್ನು ಹಂಚುವ ಮೂಲಕ ಆ ಸಂಪನ್ಮೂಲದ ಮೇಲೆ ಜನ ಕೂಡ ಕೈಹಾಕು ವಂತೆ ಮಾಡಿದರು. ಎಷ್ಟೋ ಕುಟುಂಬಗಳು ನೆಮ್ಮದಿಯ ಬದುಕು ಕಾಣುವಂತಾಗಿದೆ.

ಆದರೆ, ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಕಾಲಿಟ್ಟಿರುವ ಮುಖೇಶ್ ಅಂಬಾನಿ, ಭಾರ್ತಿ ಗ್ರೂಪ್‌ನ ಸುನೀಲ್ ಮಿತ್ತಲ್ ಕೂಡ ಕೆಲವರಿಗೆ ಉದ್ಯೋಗ ನೀಡಿದರೂ ನೂಕುವ ಗಾಡಿಯಲ್ಲಿ ಹಣ್ಣು-ಹಂಪಲು, ತರಕಾರಿ ಮಾರುವವರ ಅನ್ನವನ್ನೇ ಕಿತ್ತುಕೊಳ್ಳುತ್ತಿದ್ದಾರೆ. ಇದು ಟೀಕೆ ಅಂತ ಅನಿಸಬಹುದು. ಮುಂದೊಂದು ದಿನ ನಗರಗಳಿಗೂ ನಕ್ಸಲಿಸಂ ಬಂದಾಗ ಪರಿಸ್ಥಿತಿ ಅರ್ಥವಾಗುತ್ತದೆ. ಆ ವೇಳೆಗೆ ಪರಿಸ್ಥಿತಿ ಕೈಮೀರಿಯೂ ಹೋಗಿರುತ್ತದೆ. ಅಷ್ಟಕ್ಕೂ ಒಬ್ಬ ಸಾಮಾನ್ಯ ವ್ಯಾಪಾರಿಯ ಅನ್ನಕ್ಕೂ ಕುತ್ತುಬಂದರೆ ಅವರ ಮಕ್ಕಳ ಗತಿಯೇನು? ಅವರಿಗೆ ಶಿಕ್ಷಣ ಕೊಡಿಸುವುದಕ್ಕೂ ಸಾಧ್ಯವಾಗದಿದ್ದರೆ ಅವರ ಭವಿಷ್ಯವೇನಾದೀತು?

ಈ ಮಧ್ಯೆ ಮತ್ತೊಂದು ಆಘಾತಕಾರಿ ಬೆಳವಣಿಗೆಯಾಗಿದೆ!ಮಾರ್ಚ್ 13ರಂದು “ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ(ತಿದ್ದುಪಡಿ)-೨೦೦೮” ಎಂಬ ಹೊಸ ವಿಧೇಯಕಕ್ಕೆ ರಾಜ್ಯಸಭೆ ಅನುಮೋದನೆ ನೀಡಿದೆ. ಇಂಥದ್ದೊಂದು ವಿಧೇಯಕವನ್ನು 2005, ಆಗಸ್ಟ್ 25ರಂದೇ ಲೋಕಸಭೆಯ ಮುಂದಿಡಲಾಗಿತ್ತು. 1954ರ ಆಹಾರ ಕಲಬೆರಕೆ ತಡೆ ಕಾಯಿದೆಯ ಕೆಲವು ಅಂಶಗಳನ್ನೂ ಹೊಂದಿದ್ದ “ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಧೇ ಯಕ-2005″ಕ್ಕೆ ಪ್ರೊ.ರಾಮ್ ಗೋಪಾಲ್ ಯಾದವ್ ನೇತೃತ್ವದ ಸಂಸತ್ತಿನ ಸ್ಥಾಯಿ ಸಮಿತಿ ಹಾಗೂ ಸಂಸತ್ತಿನ ಅನುಮೋದನೆ ದೊರೆತು ಕಾಯಿದೆಯೂ ಆಗಿತ್ತು. ಆದರೆ ಅದನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ “ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ(ತಿದ್ದುಪಡಿ)-2008″ಯನ್ನು ಹೊರತರಲಾಗಿದೆ. ಈ ಕಾಯಿದೆಯ ಪ್ರಕಾರ ಅದು ತಿಂಡಿ-ತಿನಿಸುಗಳಿರಬಹುದು, ಆಹಾರ ವಸ್ತುಗಳಿರಬಹುದು ಅವುಗಳನ್ನು ಪ್ಯಾಕ್ ಮಾಡದೆ ಮಾರುವಂತಿಲ್ಲ. ತಯಾ ರಕರು ಹಾಗೂ ಮಾರಾಟಗಾರರು ಸರಕಾರದ ಪರವಾನಗಿ ಹೊಂದಿರಬೇಕಾಗುತ್ತದೆ. ಗುಣಮಟ್ಟ ಪರೀಕ್ಷೆಯ ನಂತರವೇ ಪ್ಯಾಕ್ ಮಾಡಿ, ಮಾರಾಟ ಮಾಡಬೇಕು. ಒಂದು ವೇಳೆ, ನಾಮಬಲವಿಲ್ಲದ(ಬ್ಯ್ರಾಂಡ್), ಕಡಿಮೆ ಗುಣಮಟ್ಟದ ಸರಕುಗಳನ್ನು ಮಾರಾಟ ಮಾಡಿದರೆ 5 ಲಕ್ಷದವರೆಗೂ ದಂಡ ಹಾಕಬಹುದು. ಮೇಲ್ನೋಟಕ್ಕೆ ಈ ಕಾಯಿದೆ ಗ್ರಾಹಕರ ಹಿತರಕ್ಷಣೆಯ ಉದ್ದೇಶ ಇಟ್ಟುಕೊಂಡಿದೆ ಎಂಬಂತೆ ಕಾಣಬಹುದು. ಆದರೆ ಅದರಿಂದ ಲಾಭವಾಗುವುದು ಮಾತ್ರ ದೊಡ್ಡ ದೊಡ್ಡ business ಕಂಪನಿಗಳಾದ ನೆಸ್ಲೆ,ಪೆಪ್ಸಿಕೋ, ಕೋಕಾ-ಕೋಲಾ, ಬ್ರೂಕ್‌ಬಾಂಡ್, ಡ್ಯಾನೋನ್ ಗ್ರೂಪ್, ಕ್ಯಾಡ್‌ಬರೀಸ್, ಪರ್ಫೆಟ್ಟಿ, ಹೀನ್ಝ್, ಹಿಂದೂಸ್ತಾನ್ ಲಿವರ್ ಮತ್ತು ಇತ್ತೀಚೆಗೆ ಆಹಾರ ಸಂಸ್ಕರಣೆ ಕ್ಷೇತ್ರಕ್ಕೆ ದೊಡ್ಡ ಪ್ರಮಾಣದಲ್ಲಿ ಕಾಲಿಟ್ಟಿರುವ ರಿಲಯನ್ಸ್ ಹಾಗೂ ಭಾರ್ತಿ ಗ್ರೂಪ್‌ಗಳಿಗೆ.

ಅಷ್ಟಕ್ಕೂ 2008ರ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ ಬೃಹತ್ ಕಂಪನಿಗಳಿರುವ ಸಂಘಟಿತ ಕ್ಷೇತ್ರದ ಜತೆಗೆ ಸಣ್ಣಪುಟ್ಟ ಅಂಗಡಿ, ಬೇಕರಿ, ಉಪ್ಪಿನ ಕಾಯಿ-ಹಪ್ಪಳ-ಸಂಡಿಗೆ-ಚಿಪ್ಸ್‌ಗಳನ್ನು ಮನೆಯಲ್ಲೇ ಸಿದ್ಧಪಡಿಸಿ ಮಾರಾಟ ಮಾಡುವ ಗುಡಿ ಕೈಗಾರಿಕೆ, ಹೊತ್ತು ಮಾರುವವರು ಮುಂತಾದವರಿರುವ ಅಸಂಘಟಿತ ಕ್ಷೇತ್ರಕ್ಕೂ ಅನ್ವಯವಾಗುತ್ತದೆ. ತಪಾಸಕರು ಅಂಗಡಿಗಳಿಗೆ ಆಗಮಿಸಿ ಸ್ಥಳದಲ್ಲೇ 1 ಲಕ್ಷ ರೂ. ದಂಡಹಾಕಬಹುದು. ಡಬ್ಬಾವಾಲಾ ಹಾಗೂ ಟಿಫಿನ್ ಕ್ಯಾರಿಯರ್‌ಗಳನ್ನೂ ಕಾಯಿದೆಯಡಿ ತರಲಾಗಿದೆ.

ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದ ನೀತಿಯ ಬಗ್ಗೆ ಏನನ್ನಬೇಕು? ಮಕ್ಕಳು ಪೆಪ್ಸಿಕೋದ ಲೇಸ್, ಕುರ್‌ಕುರೇ, ಬಿಂಗೋ ತಿಂದು ಬಲೂನ್ ಥರಾ ಊದಿದರೂ ಚಿಂತೆಯಿಲ್ಲ, ರಸ್ತೆ ಬದಿಯಲ್ಲಿ ಅಂಗಡಿಯಿಟ್ಟುಕೊಂಡು ಕಣ್ಣೆದುರಿಗೇ ಅಲೂಗಡ್ಡೆ ಚಿಪ್ಸ್ ಮಾಡಿಕೊಡುವವನು ಮಾತ್ರ ಇರಬಾರದು! ಒಂದು ಲಕ್ಷ ರೂ.ದಂಡ ಹಾಕಿ ಆತನನ್ನು ನಾಶಪಡಿಸಲು ಭೂಮಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಬೇಕರಿಯವರಿಗೂ ಕುತ್ತು ಬರುತ್ತಿದೆ. ಒಬ್ಬ ಸಾಮಾನ್ಯ ವ್ಯಾಪಾರಿ ಗುಣಮಟ್ಟ ಪರೀಕ್ಷೆ ಮಾಡಿಸಿ, ಪ್ಯಾಕ್ ಮಾಡಿ ಆಹಾರ ವಸ್ತುಗಳನ್ನು ಮಾರಾಟ ಮಾಡಲು ಸಾಧ್ಯವಿದೆಯೆ? ಇಂತಹ ಕಾಯಿದೆಯನ್ನು ತಂದು ಲೈಸೆನ್ಸ್, ಪ್ಯಾಕೇಜಿಂಗ್ ಅಂತಹ ಅಡೆತಡೆಗಳನ್ನೊಡಿದರೆ ಅಸಂಘಟಿತ ಮಾರಾಟಗಾರರು ದೈತ್ಯ ಕಂಪನಿಗಳ ಜತೆ ಸ್ಪರ್ಧೆ ಮಾಡಲು ಸಾಧ್ಯವೆ?

ಇಂದು ಪೆಪ್ಸಿಕೋ ಹಾಗೂ ಕೋಕ್‌ನಂತಹ ಎರಡು ಕಂಪನಿಗಳು ನಮ್ಮ ಇಡೀ ಲಘುಪಾನೀಯ ಕ್ಷೇತ್ರವನ್ನು ಆಕ್ರಮಿಸಿಕೊಂಡಿವೆ. ದೇಶೀಯ ಕಂಪನಿಗಳಾಗಿದ್ದ ಥಮ್ಸ್ ಅಪ್, ಟೋರಿನೋಗಳನ್ನು ಈ ಭೂತಗಳೇ ನುಂಗಿದ ಉದಾಹರಣೆ ನಮ್ಮ ಮುಂದಿದೆ. ಪಾರ್ಲೆ ಬ್ಯ್ರಾಂಡನ್ನು ಸ್ವಾಧೀನಪಡಿಸಿಕೊಂಡಿರುವ ಕೋಕ್ ಹಾಗೂ ಡ್ಯೂಕ್ಸ್ ಬ್ರ್ಯಾಂಡನ್ನು ಕಬಳಿಸಿರುವ ಪೆಪ್ಸಿ ಕಂಪನಿಗಳು ತಮ್ಮ ಕಬಂದಬಾಹುಗಳನ್ನು ಇನ್ನಷ್ಟು ಚಾಚಲು ಈ ಕಾಯಿದೆ ಅನುಕೂಲ ಮಾಡಿಕೊಡುತ್ತದೆಯೇ ಹೊರತು ಬಡ ಭಾರತೀಯ ವ್ಯಾಪಾರಿ ಉದ್ಧಾರವಾಗುವುದಿಲ್ಲ. ಕುರ್‌ಕುರೇ, ಲೇಸ್, ಪಿಝಾ ತಿನ್ನುವ ಗ್ರಾಹಕನ ಆರೋಗ್ಯದ ಸಂರಕ್ಷಣೆಯೂ ಆಗುವುದಿಲ್ಲ. ಅಸಂಘಟಿತ ವ್ಯಾಪಾರಸ್ಥರು ನಾಶಗೊಳ್ಳುತ್ತಾರಷ್ಟೇ.

ನೀವೇ ಹೇಳಿ, ಇಂತಹ ಪ್ರಗತಿ ನಮಗೆ ಬೇಕೆ? ಷೇರು ಮಾರುಕಟ್ಟೆಯ ಸೆನ್ಸೆಕ್ಸ್, ನಿಫ್ಟಿ ಹಾಗೂ ಫೋರ್ಬ್ಸ್ ಮ್ಯಾಗಝಿನ್‌ನ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಎಷ್ಟು ಜನ ಭಾರತೀಯರಿದ್ದಾರೆ ಎಂಬಿತ್ಯಾದಿ ಅಂಶಗಳ ಮೇಲೆ ಎಷ್ಟು ದಿನ ಅಂತ ಪ್ರಗತಿಯನ್ನು ಅಳೆಯಲು ಸಾಧ್ಯ? ಬಡ ಹಾಗೂ ಶ್ರೀಮಂತರ ನಡುವಿನ ಅಂತರ ಇದೇ ವೇಗದಲ್ಲಿ ಹೆಚ್ಚಾಗುತ್ತಾ ಹೋದರೆ ಮುಂದೊಂದು ದಿನ ಅರಾಜಕತೆ ಸೃಷ್ಟಿಯಾಗುವುದಿಲ್ಲವೆ?

ಇಲ್ಲಿ ಆ ಪಕ್ಷ, ಈ ಪಕ್ಷ ಅಂತ ಭೇದ ಭಾವ ಮಾಡುವ ಹಾಗಿಲ್ಲ. ಎಲ್ಲ ರಾಜಕೀಯ ಪಕ್ಷಗಳೂ ಜನ ವಿರೋಧಿಗಳೇ ಆಗಿರುವಾಗ ಸಾಮಾನ್ಯ ಜನರೇನು ಮಾಡಬೇಕು? ಪ್ರಾಣಿ ದಯಾ ಸಂಘ ಅಂತ ಕಟ್ಟಿಕೊಂಡು ಬೆಂಗಳೂರಿನ ನರಭಕ್ಷಕ ನಾಯಿಗಳ ರಕ್ಷಣೆಗೆ ಟೊಂಕಕಟ್ಟಿ ನಿಂತಿರುವ ಮಹಾನ್ ವ್ಯಕ್ತಿಗಳಿಗೆ ನಿಜವಾಗಿಯೂ ಕಾಳಜಿ ಇದ್ದರೆ ಬಡ ಮತ್ತು ಸಾಮಾನ್ಯರ ಬದುಕು-ವೃತ್ತಿಯನ್ನು ಕಸಿದುಕೊಳ್ಳುತ್ತಿರುವ ಫುಡ್ ವರ್ಲ್ಡ್, ಫ್ಯಾಬ್ ಮಾಲ್, ರಿಲಯನ್ಸ್ ಫ್ರೆಶ್‌ಗಳ ವಿರುದ್ಧ ಹೋರಾಡಲಿ. ನಾವೂ ಕೂಡ ಬದಲಾಗೋಣ. ಬಟ್ಟೆ-ಬರೆಯಂತಹ ಅಗತ್ಯಗಳಿಗೆ ಮಾಲ್‌ಗಳಿಗೆ ಹೋದರೂ ಪರವಾಗಿಲ್ಲ, ಕನಿಷ್ಠ ದಿನಸಿಯನ್ನು ಮಾತ್ರ ಅಕ್ಕ-ಪಕ್ಕದ ಅಂಗಡಿಗಳಲ್ಲೇ ಖರೀದಿಸೋಣ. ಉತ್ತಮ ಗುಣಮಟ್ಟದ ದಿನಸಿ ನೀಡುವಂತೆ ಒತ್ತಡವನ್ನೂ ಹೇರೋಣ. ಆದರೆ ನಿರ್ಲಕ್ಷಿಸಿದರೆ ಅಪಾಯ ತಪ್ಪಿದ್ದಲ್ಲ.

ಅಷ್ಟಕ್ಕೂ ನಮಗೆ ಬೇಕಾಗಿರುವುದು ದಿನಸಿ ಅಂಗಡಿ ಯಾತನ ವೃತ್ತಿಯನ್ನೇ ಕಸಿದುಕೊಳ್ಳುವ, ತಳ್ಳೋ ಗಾಡಿಯಲ್ಲಿ ತರಕಾರಿ, ಹಣ್ಣು-ಹಂಪಲು ಮಾರುವವರ ಅನ್ನ ಕಿತ್ತುಕೊಳ್ಳುವ ಕಂಪನಿಗಳೂ ಅಲ್ಲ, ಬರೀ ಆದಾಯ ದಿಂದಲೇ ಅಳೆಯಲಾಗುವ ಪ್ರಗತಿಯೂ ಅಲ್ಲ. ನಮಗೆ ಬೇಕಾಗಿರುವುದು ಎಲ್ಲರ ಅಭ್ಯುದಯದ ಗುರಿ ಹೊಂದಿರುವ ಸಮಗ್ರ ಅಭಿವೃದ್ಧಿ. ಇಲ್ಲದಿದ್ದರೆ ಪ್ರಗತಿಯ ಹೆಸರಿನಲ್ಲಿ ಬರುವುದು ದುರ್ಗತಿ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಪ್ರತಾಪ್ ಸಿಂಹ - ಬೆತ್ತಲೆ ಜಗತ್ತು. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: