Karnataka state politics : Down with movie actor Jaggesh – ಜಗ್ಗೇಶ್ ಸೇರಿ ಬಿಜೆಪಿ ಸೇರಿರುವ ಎಲ್ಲ ಪಕ್ಷಾಂತರಿಗಳಿಗೆ ಧಿಕ್ಕಾರ!

ಜಗ್ಗೇಶ್ ಎಲ್ಲಾದರೂ ಸಿಕ್ಕರೆ ಹತ್ತಿರಕ್ಕೆ ಕರೆದು ಕ್ಯಾಕರಿಸಿಬೇಕೆನ್ನಿಸುತ್ತಿದೆ. ಅಲ್ಲಿ ತುರುವೇಕೆರೆಯಲ್ಲಿ ಈ ಮನುಷ್ಯ ಆರಿಸಿ ಬಂದು ಇನ್ನೂ 40 ದಿನಗಳಾಗಲಿಲ್ಲ. ಅಂಥದರಲ್ಲಿ ‘ಕ್ಷೇತ್ರದ ಅಭಿವೃದ್ಧಿ’ಯ ನೆಪ ಹೇಳಿ, ತನ್ನನ್ನು ಆಯ್ಕೆ ಮಾಡಿದ ಲಕ್ಷಾಂತರ ಜನರ ಮುಖಕ್ಕೆ ರಾಜೀನಾಮೆ ಬಿಸಾಡಿ ಮತ್ತೆ ನೀವು ಮತ ಹಾಕಿ ಅಂತ ಅವರೆದುರೇ ಹೋಗಿ ನಿಲ್ಲುತ್ತಿದ್ದಾನೆ. ಇರೋ ಕೆಲಸ ಬಿಟ್ಟು, ಮತ್ತೆ ಅದೇ ಲಕ್ಷಾಂತರ ಜನ ಕ್ಯೂ ನಿಂತು ಮತ ಹಾಕಲಿಕ್ಕೆ ಇವನೇನು ಮಹಾತ್ಮಾ ಗಾಂಧಿಯಾ? ಸುಭಾಷ್ ಚಂದ್ರ ಬೋಸಾ?

ನಾನು ಕೇವಲ ಒಬ್ಬ ಜಗ್ಗೇಶ್ ಬಗ್ಗೆ ಮಾತನಾಡುತ್ತಿಲ್ಲ. ವಲಸೆ ಬಂದಿರುವ, ಹೊರಟಿರುವ ಎಲ್ಲ ಶಾಸಕರ ಬಗ್ಗೆಯೂ ಮಾತನಾಡುತ್ತಿದ್ದೇನೆ. ಇದು ಕರ್ನಾಟಕಕ್ಕೆ ಹೊಸದೇನಲ್ಲ. ನಮ್ಮಲ್ಲಿ ಪಕ್ಷಾಂತರದ ಸಂಪ್ರದಾಯವೇ ಇದೆ. ತೀರ ಇತ್ತೀಚೆಗೆ 1994ರಲ್ಲಿ ದೇವೇಗೌಡರು ಬಂಗಾರಪ್ಪನವರ ಕಡೆಯ ಶಾಸಕರನ್ನು ತಲಾ 5 ಲಕ್ಷ ರುಪಾಯಿ ಚೆಲ್ಲಿ ಖರೀದಿಸಿದ್ದರು. ಅದೇ ಕೆಲಸವನ್ನು ಎಸ್ಸೆಂ ಕೃಷ್ಣ 1999ರಲ್ಲಿ ಮಾಡಿದ್ದರು. ಆದರೆ ಈ ಬಾರಿ ವಿಶೇಷವೆಂದರೆ, ಆಯ್ಕೆಯಾಗಿ ಬಂದ ನಲವತ್ತೇ ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು “ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇವೆ” ಎಂದು ಈ ಮಹಾಮಹಿಮರು ಬೊಗಳುತ್ತಿದ್ದಾರೆ.

ನಲವತ್ತು ದಿನಗಳ ಹಿಂದೆ ಯಡಿಯೂರಪ್ಪ ಆಡಿದ ಪ್ರಮಾಣ ವಚನದ ಮಾತುಗಳನ್ನು ನೆನಪು ಮಾಡಿಕೊಳ್ಳಿ. “ನಾನು ಯಾವುದೇ ರಾಗದ್ವೇಷಗಳಿಲ್ಲದೆ, ಪಕ್ಷಪಾತಗಳಿಲ್ಲದೆ ಕಾಯಾ ವಾಚಾ ಮನಸಾ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ” ಅಂತ ತಾನೆ ಇವರಂದಿದ್ದು? ಅದರರ್ಥ ನಾಡಿನ ಎಲ್ಲಾ 224 ಕ್ಷೇತ್ರಗಳ ಅಭಿವೃದ್ಧಿಯ ಜವಾಬ್ದಾರಿ ನನ್ನದು ಅಂತ ಆಯಿತಲ್ಲ? ಸ್ವತಃ ಮುಖ್ಯಮಂತ್ರಿಯಾದವನು ಹೀಗೆ ಭರವಸೆ ಕೊಟ್ಟ ಮೇಲೆ ಬಾಲಚಂದ್ರ ಜಾರಕಿಹೊಳಿ, ಶಿವಣ್ಣಗೌಡ, ಜಗ್ಗೇಶ್ ಮುಂತಾದ ಅನುಪಮ ‘ದೇಶ ಭಕ್ತ’ ಶಾಸಕರಿಗೇಕೆ ತಮ್ಮ ಕ್ಷೇತ್ರದ ಅಭಿವೃದ್ಧಿಯಾಗುವುದಿಲ್ಲ ಎಂಬ ದಿಗಿಲು ಹುಟ್ಟಿತು? ಇವರಿಗೇಕೆ ಮಲತಾಯಿ ಧೋರಣೆ ದಿಗಿಲು?

Of course, ಮಲತಾಯಿ ಧೋರಣೆಯ ದಿಗಿಲು ತೀರ ತಳ್ಳಿ ಹಾಕುವಂತಹುದೇನಲ್ಲ. ಹಿಂದೆ ಇದೇ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರವಿದ್ದಾಗ ‘ನಮ್ಮ ಕ್ಷೇತ್ರಗಳಿಗೆ ನಯಾಪೈಸೆ ಕೊಡುತ್ತಿಲ್ಲ’ ಅಂತ ಕಾಂಗ್ರೆಸ್ಸಿಗರು ಕೂಗಾಡಿದ್ದರು. ಆಗ ಗೌಡರ ಮಗ ರೇವಣ್ಣನೆಂಬ ಭೂಪ ಎದ್ದು ನಿಂತು, “ಎಸ್ಸೆಂ ಕೃಷ್ಣ ಕಾಲದಲ್ಲಿ ನೀವು ದಳದವರ ಕ್ಷೇತ್ರಗಳಿಗೆ ಹೇಗೆ ನಯಾಪೈಸೆ ಕೊಡದೆ ವಂಚಿಸಿದ್ದೀರಿ ಗೊತ್ತೆ?” ಅಂತ ಅಂಕಿ ಸಂಖ್ಯೆ ಸಮೇತ ಝಾಡಿಸಿ ಎಲ್ಲರನ್ನೂ ಸುಮ್ಮನಾಗಿಸಿದ್ದ. ಅದರರ್ಥವೇನು? ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಅದು ವಿರೋಧ ಪಕ್ಷದವರ ಕ್ಷೇತ್ರಗಳು ಸೊರಗುವಂತೆ ಮಾಡುವುದು ಈ ನೆಲದ ಸಂಪ್ರದಾಯ ಅಂತ ಆಯಿತಲ್ಲ? ಮೇಲುನೋಟಕ್ಕೆ ಇದು ಶಾಸಕರ, ಪಕ್ಷಗಳ ಮಧ್ಯದ ವೈರ ಎಂಬಂತೆ ಕಂಡರೂ, ಅಂತಿಮವಾಗಿ ಮೋಸಕ್ಕೆ ಒಳಗಾಗುವವನು ಮತದಾರ ಅಲ್ಲವೇ? ಒಂದು ಕ್ಷೇತ್ರದಲ್ಲಿ ಬಿಜೆಪಿ 50 ಸಾವಿರ ಮತಗಳಿಂದ ಗೆದ್ದಿರಬಹುದು. ಕಾಂಗ್ರೆಸ್ಸು 49 ಸಾವಿರ ಮತ ಪಡೆದು ಸೋತಿರಬಹುದು. ಅದರರ್ಥ 49 ಸಾವಿರ ಜನ ಅಭಿವೃದ್ಧಿಯಿಲ್ಲದೆ ಐದು ವರ್ಷ ನರಳಬೇಕೆ? ನಮ್ಮ ರಾಜಕಾರಣಿಗಳು ಪ್ರಜಾಪ್ರಭುತ್ವದ ಮೂಲ ನಿಯಮವನ್ನು ಮರೆತಿದ್ದಾರೆ ಅನ್ನಿಸುವುದಿಲ್ಲವೆ? ಇವರು ಈ ಹಿಂದೆ ಮಾಡಿದುದನ್ನೇ ಗಮನಿಸಿ ನೋಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ತಮ್ಮ ಕ್ಷೇತ್ರಕ್ಕೆ ಸುಮಾರು 300 ಕೋಟಿ ರುಪಾಯಿಗಳ ಯೋಜನೆಗಳನ್ನು ಮಂಜೂರು ಮಾಡಿಕೊಂಡರು. ಉಪಮುಖ್ಯಮಂತ್ರಿ ಯಡಿಯೂರಪ್ಪ ಶಿವಮೂಗ್ಗದ ಮೇಲೆ ಕನಕವೃಷ್ಟಿಯನ್ನೇ ಸುರಿಸಿದರು. ಆದರೆ ಜೇವರ್ಗಿಯೂ ಸೇರಿದಂತೆ 39 ಅತ್ಯಂತ ಹಿಂದುಳಿದ ತಾಲ್ಲೂಕುಗಳಿವೆ. ಅವುಗಳನ್ನು ಯಾರು ಉದ್ಧರಿಸಬೇಕು?

ಸರ್ವಜನರ ಸರ್ಕಾರವಾಗಿದ್ದಿದ್ದರೆ ಇವರು ಕರ್ನಾಟಕದ ಐದೂವರೆ ಕೋಟಿ ಜನರನ್ನು ಸಮಾನರನ್ನಾಗಿ ನೋಡುತ್ತಿದ್ದರು. ಆದರೆ ಮೊನ್ನೆ ತನಕ ಇದ್ದದ್ದು ವಕ್ಕಲಿಗರ ಸರ್ಕಾರ, ಈಗಿರುವುದು ಲಿಂಗಾಯಿತರ ಸರ್ಕಾರ. ಜೊತೆಗೆ ರೆಡ್ಡಿಗಳ ಸೇರ್ಪಡೆಯಾಗಿರುವುದರಿಂದ ಭಾಗಶಃ ರೆಡ್ಡಿಗಳ ಸರ್ಕಾರ. ಇದೆಂಥ ಕೀಳು ರಾಜಕೀಯ ಸಂಸ್ಕೃತಿ? ಇವರಿಗೆ ಛೀಮಾರಿ ಹಾಕಬಲ್ಲಂತಹ ಒಂದು ವೇದಿಕೆಯೇ ಕರ್ನಾಟಕದಲ್ಲಿ ಇಲ್ಲದಿರುವುದು ಎಂಥ ದುರಂತ?

ಇವತ್ತು ‘ಕ್ಷೇತ್ರದ ಅಭಿವೃದ್ಧಿ ಮತ್ತು ಬಿಜೆಪಿಯ ಸಿದ್ಧಾಂತ(!)’ ಒಪ್ಪಿಕೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಸ್ಪರ್ಧಿಸಲು ಸಿದ್ಧರಾಗುತ್ತಿರುವವರ ಮುಖ ಒಮ್ಮೆ ನೋಡಿ. ಇವರಾರಿಗಾದರೂ ಬಿಜೆಪಿಯ ತತ್ವ ಸಿದ್ಧಾಂತ ಗೊತ್ತಾ? ಹೋಗಲಿ ಗೋಳ್ವಾಲಕರರ ಹೆಸರಾದರೂ ಕೇಳಿದ್ದಾರಾ? ಹೆಗಡೇವಾರ್ ಬರೆದ ಪುಸ್ತಕ ಓದಿದ್ದಾರಾ? ಹೋಗಲಿ ತಮ್ಮ ಕ್ಷೇತ್ರಗಳನ್ನು ನಿಜವಾಗಿಯೂ ಅಭಿವೃದ್ಧಿಗೆ ಒಳಪಡಿಸುವ ಇರಾದೆ ಇವರಿಗಿದೆಯಾ? ನಮ್ಮ ದೇಶದ ಸಂಸದರಿಗೂ ಮಧ್ಯಂತರ ಚುನಾವಣೆ ಬೇಕಿಲ್ಲ. ಇನ್ನೂ ಮೊನ್ನೆ ಆರಿಸಿ ಬಂದ ಯಾವ ಶಾಸಕನಿಗೂ ಮತ್ತೆ ಜನರೆದುರು ನಿಂತು ಮತ ಕೇಳಲು ಉತ್ಸಾಹವಿಲ್ಲ. ಹೆಚ್ಚಿನವರು ಚುನಾವಣೆ ಮುಗಿಸಿ ಈದ ನಾಯಿಗಳಂತೆ ಹೈರಾಣಾಗಿ ಮಕಾಡೆ ಮಲಗಿದ್ದಾರೆ. ಅಂಥದರಲ್ಲಿ ಜಗ್ಗೇಶ್, ಜಾರಕಿಹೊಳಿ, ಶಿವನಗೌಡರಂಥ ನಾಲ್ಕಾರು ಜನ ಮತ್ತೆ ಚುನಾವಣೆಗೆ ರೆಡಿಯಾಗುತ್ತಿದ್ದಾರೆ ಅಂದರೆ, ಅವರಿಗೆ ದೊಡ್ಡ ಮಟ್ಟದ ಆಮಿಷ ಉಂಟಾಗಿದೆ ಅಂತ ತಾನೇ ಅರ್ಥ? ಶಿವನಗೌಡ ಆಡಿರುವ ಮಾತನ್ನು ಕೇಳಿಸಿಕೊಳ್ಳಿ “ದೇವದುರ್ಗದಲ್ಲಿ ನಾನು ನೂರು ಕೋಟಿ ಖರ್ಚು ಮಾಡಿದರೂ ಗೆಲ್ಲುವುದಿಲ್ಲ. ಈಗ ಗೆದ್ದಿರೋದು ದೊಡ್ಡದು. ಅಂಥದರಲ್ಲಿ ರಾಜೀನಾಮೆ ಕೊಡು ಅಂದರೆ ಹ್ಯಾಗೆ ಕೊಡಲಿ? ನನಗೆ ನನ್ನ ಸೇಫ್ಟಿ ಮುಖ್ಯ. ಮೂದಲು ಇಪ್ಪತ್ತು ಕೋಟಿ ಕೊಡಿ. ಮಂತ್ರಿ ಸ್ಥಾನ ಕೊಟ್ಟು ಬಿಡಿ. ಆಕಸ್ಮಾತ್ ದೇವದುರ್ಗದಲ್ಲಿ ಸೋತರೆ ನನ್ನನ್ನು ಎಂಎಲ್ಸಿ ಮಾಡ್ತೀನಿ ಅಂತ ಮಾತು ಕೊಡಿ”.

ಹೆಚ್ಚು ಕಡಿಮೆ ರಾಜೀನಾಮೆ ಕೊಡಲು ಅಣಿಯಾಗಿರುವ ಎಲ್ಲ ಶಾಸಕರೂ ಇದೇ ದಾಟಿಯಲ್ಲಿ ಮಾತನಾಡಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅವರು ಮಾಡುವ ಅತೀ ದೊಡ್ಡ ಅವಮಾನ ಅಂತಲಾದರೂ ಇವರಿಗೆ ಅನ್ನಿಸುವುದಿಲ್ಲವೇ? ಈ ಹಿಂದೆ ಸಿದ್ಧರಾಮಯ್ಯ ರಾಜೀನಾಮೆ ಕೊಟ್ಟು ಚಾಮುಂಡೇಶ್ವರಿ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದರು. ಅವರಿಗೆ at least ಸುಸಂಬದ್ಧ ಹಾಗೂ ಸೈದ್ಧಾಂತಿಕವೆನ್ನಿಸುವಂಥ ಕಾರಣಗಳಿದ್ದವು. ಆದರೆ ಇವರಿಗೇನಿವೆ, ಇದು ಸಾಲದೆಂಬಂತೆ, ರಾಜ್ಯದಲ್ಲಿ ಮತದಾನ ಕಡ್ಡಾಯ ಮಾಡಬೇಕು ಅಂತ ಬೇರೆ ಶಾಸಕರು ಮಾತನಾಡುತ್ತಿರುತ್ತಾರೆ. ಯಾವ ಭಾಗ್ಯಕ್ಕೆ ಕಡ್ಡಾಯ ಮತದಾನ ಮಾಡಬೇಕು? ಇರುವ ಕೆಲಸವನ್ನೆಲ್ಲ ಬಿಟ್ಟು ಬಂದು ಪ್ರಜೆಗಳು ಇವರಿಗೇಕೆ ಆರಾರು ತಿಂಗಳಿಗೊಮ್ಮೆ ಮತ ಹಾಕಬೇಕು?

ತಮ್ಮ ಪಕ್ಷ ತಮ್ಮ ನಾಯಕನನ್ನು ಗಟ್ಟಿಗೊಳಿಸಿಕೊಳ್ಳಲಿಕ್ಕಾಗಿ ಯಡಿಯೂರಪ್ಪ ಇದೆಲ್ಲ ಸರ್ಕಸ್ ಮಾಡುತ್ತಿದ್ದಾರೆ. ಈ ಹಿಂದೆ ದೇವರಾಜ ಅರಸು ಅವರೂ ಪ್ರಜಾಪ್ರಭುತ್ವಕ್ಕೆ ಚ್ಯುತಿ ಬರುವಂತಹ ಅನೇಕ ಕೃತ್ಯಗಳನ್ನು ದೀರ್ಘಾವಧಿ ಮಾಡಿದ್ದರು. ಆದರೆ ಅರಸು ಅವರು, ಕರ್ನಾಟಕದ ಜನತೆ ತಲೆಮಾರುಗಳ ತನಕ ನೆನಪಿಟ್ಟುಕೊಳ್ಳುವಂತಹ ಭೂಸುಧಾರಣಾ ಕಾಯಿದೆಯನ್ನು ಜಾರಿಗೆ ತಂದಿದ್ದರು. ಇಂಥ ಮಹತ್ಕಾರ್ಯವನ್ನು ಮಾಡುವ ಯಾವ ಸೂಚನೆಯೂ ಯಡ್ಡಿ ತೋರ್ಪಡಿಸಿಲ್ಲ. ಒಂದಡೆ ರೈತರಿಗೆ ರಸಗೊಬ್ಬರವಿಲ್ಲ. ಇತ್ತ ಬರೀ ಐದು ಜನ ಶಾಸಕರಿಗಾಗಿ ನೂರು ಕೋಟಿ ರುಪಾಯಿ ಚೆಲ್ಲಾಡಲಾಗುತ್ತಿದೆ. ಪ್ರಜಾತಂತ್ರವನ್ನು ಯಾವ ದಿಕ್ಕಿಗೆ ಒಯ್ಯುತ್ತಿದ್ದಾರೆ ಯಡಿಯೂರಪ್ಪ? ಅವರೇ ಉತ್ತರಿಸಬೇಕು.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ರವಿ ಬೆಳಗೆರೆ - ಸೂರ್ಯ ಶಿಕಾರಿ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: