M.V.Kamath’s autobiography – ‘ಎ ರಿಪೋರ್ಟರ್ ಎಟ್ ಲಾರ್ಜ್’ ಭಾಗ 1

ಕಾಮತ್‌ರ ಆತ್ಮಚರಿತ್ರೆಯಲ್ಲಿ ಭೂತ, ವರ್ತಮಾನದ ಮೆಲುಕು

M.V. Kamath
ಕಾಮತ್ ಅವರ ಜೀವನದಲ್ಲಿ ಸರ್ವ ಧರ್ಮಗಳ ಪ್ರಭಾವ ಹೇರಳವಾಗಿರುವುದು ಅವರ ಆತ್ಮಚರಿತ್ರೆ ‘ಎ ರಿಪೋರ್ಟರ್ ಎಟ್ ಲಾರ್ಜ್’ನಲ್ಲಿ ಹಾಸುಹೊಕ್ಕಾಗಿದೆ. ಕಲಿಯುತ್ತಿದ್ದ ಕ್ರಿಶ್ಚಿಯನ್ ಶಾಲೆ, ಹಿಂದೂ ಮಕ್ಕಳ ಮೇಲೆ ಹೇರಲಾಗಿದ್ದ ಧಾರ್ಮಿಕ ವಿಧಿ, ಸಂತೆಯಲ್ಲಿನ ಕ್ರಿಶ್ಚಿಯನ್ ಮಿಶನರಿ ಅಂಗಡಿ, ಹಿಂದೂಗಳ ಮತಾಂತರ, ಪೋರ್ಚುಗೀಜರ ದಬ್ಬಾಳಿಕೆ… ಮುಂತಾದ ಘಟನೆಗಳನ್ನು ಆತ್ಮಚರಿತ್ರೆಯಲ್ಲಿ ದಾಖಲಿಸಿದ್ದಾರೆ.
ಅಂತರ್‌ಜಾತೀಯ ವಿವಾಹಗಳ ಬಗ್ಗೆ ಕಾಮತರು ಬರೆಯುತ್ತಾರೆ. `ಪ್ರೀತಿ ಧರ್ಮದ ಎಲ್ಲೆಗಳನ್ನು ಮೀರುತ್ತದೆ’ (Love transcends religion.) ಎನ್ನುತ್ತಾರೆ. ಕಾಮತರ ಅಜ್ಜ-ಅಜ್ಜಿ ಬದುಕಿರುವವರೆಗೆ ಎಲ್ಲರಿಗೆ (ಬೇರೆ ಜಾತಿಯವರಿಗೆ) ಅಡಿಗೆ ಮನೆಯಲ್ಲಿ ಮುಕ್ತ ಪ್ರವೇಶವಿರಲಿಲ್ಲವಂತೆ. ಅಲ್ಲಿ `ಲಕ್ಷ್ಮಣರೇಖೆ’ ಇತ್ತಂತೆ. ಮೊದಲು ಬ್ರಾಹ್ಮಣರಾಗಿದ್ದು, ನಂತರ ಮತಾಂತರಗೊಂಡ ಮನೆತನಗಳು ಹೆಣ್ಣು ಆರಿಸುವಾಗ ಬೇರೆ ಕುಟುಂಬದ ಬ್ರಾಹ್ಮಣ ಮೂಲ ಹುಡುಕುತ್ತಿದ್ದರಂತೆ. ಕಾಮತರು ಎಲಿನೋರ್ ಎಂಬ ಅಮೇರಿಕನ್ ಜ್ಯೂ ಹುಡುಗಿಯನ್ನು ಮದುವೆಯಾಗಿದ್ದರು. ಅವಳನ್ನು ತಮ್ಮ ಮನೆಗೆ ಕರೆದುಕೊಂಡು ಬಂದಾಗ ಇವರ ತಾಯಿ ಸ್ವಾಗತಿಸಿದ್ದರು. ಅಜ್ಜಿಯ ಕಾಲದ ಬಂಧನ ಉಳಿದಿರಲಿಲ್ಲ. ಅತ್ತೆಗೆ ಸೊಸೆಯ ಭಾಷೆ ಬರುತ್ತಿರಲಿಲ್ಲ ಆದರೂ ಅವಳ ಸಹವಾಸದಲ್ಲಿ ಶಬ್ದಾತೀತವಾದ ಮಮತೆಯನ್ನು ತಾಯಿ ಪ್ರದರ್ಶಿಸಿದರಂತೆ.

ಮಾಧವರು ಬಾಲ್ಯದಲ್ಲಿ ಕಾನ್ವೆಂಟ್ ಶಾಲೆ ಸೇರಿದ್ದರು. ಶಾಲೆ ಮುಗಿದೊಡನೆ ಎಲ್ಲರಿಗೂ ಕಡ್ಡಾಯವಾಗಿ ಪ್ರಾರ್ಥನೆ ಮಾಡಲು ಹೇಳಲಾಗುತ್ತಿತ್ತು. ಚೆಪೆಲ್‌ದಲ್ಲಿ ಹದಿನಾಲ್ಕು ಸ್ತಂಭಗಳಿದ್ದವು. ಪ್ರತಿಯೊಂದರ ಮೇಲೂ ಶಿಲುಬೆ ಏರಿದ ಏಸೂಕ್ರಿಸ್ತನ ಚಿತ್ರವಿತ್ತು. ಅದರ ಮುಂದೆ ಮಕ್ಕಳು ಕಡ್ಡಾಯವಾಗಿ ಮೊಣಕಾಲೂರಿ ಪ್ರಾರ್ಥನೆ ಮಾಡಬೇಕಾಗುತ್ತಿತ್ತು. ಹಿಂದೂ ಮಕ್ಕಳು ಹೇಗೆ ಈ ಪ್ರಾರ್ಥನೆಯಿಂದ ವಿನಾಯತಿ ಪಡೆದರು ಎಂಬ ಕತೆಯನ್ನು ಹೇಳುತ್ತಾರೆ.

ಆ ಕತೆ ಹೀಗಿದೆ. ಇವರು ಮನೆಯಲ್ಲಿ ಪೂಜೆ ನಡೆದಾಗ  ಸಾಷ್ಟಾಂಗ ನಮಸ್ಕಾರ ಹಾಕುತ್ತಿದ್ದರು. ಚೆಪಲ್‌ನಲ್ಲಿ ಸರ್ವಿಸ್ ನಡೆದಾಗ ಹಿಂದೂ ಮಕ್ಕಳಿಗೆ ಕಡ್ಡಾಯವಾಗಿ ಮೊಣಕಾಲೂರಿ ನಿಲ್ಲಲು ಹೇಳಿದಾಗ ಅದೊಂದು ಹೊಸ ಅನುಭವವಾಯ್ತು. ತಮ್ಮದಲ್ಲದ ಧಾರ್ಮಿಕ ವಿಧಿಯಲ್ಲಿ ಪಾಲುಗೊಳ್ಳಲು ಅವರಿಗೆ ಮನಸ್ಸಾಗಲಿಲ್ಲ. ಎರಡನೆಯ ದಿನ ಪ್ರಾರ್ಥನೆಯ ವೇಳೆಗೆ ಶಾಲೆಯಿಂದ ಓಡಿ ಮನೆಗೆ ಬಂದುಬಿಟ್ಟರು. ಶಾಲೆ ಎದುರಿಗೇ ಇವರ ಒಂದಸ್ತಿನ ಬಂಗ್ಲೆ ಇತ್ತು. ಇವರು ಶಾಲೆಬಿಟ್ಟು ಮನೆಗೆ ಬಂದದ್ದನ್ನು ತಂದೆಯವರು ಕಂಡು ಇವರನ್ನು ಶಿಕ್ಷಿಸತೊಡಗಿದರು. ಇವರ ಅಜ್ಜಿ ಬಂದು ಅವರನ್ನು ತಡೆದರು. ಮಗುವನ್ನು ವಿಚಾರಿಸದೇ ಶಿಕ್ಷಿಸುವುದು ತರವಲ್ಲ ಎಂಬುದು ಅಜ್ಜಿಯ ವಾದವಾಗಿತ್ತು. ತಂದೆ ಮನೆಗೆ ಬಂದ ಕಾರಣ ವಿಚಾರಿಸಿದರು. ಮಗು ತಡವರಿಸುತ್ತ ನಡುಗುತ್ತ ನಿಜ ಸ್ಥಿತಿ ತಿಳಿಸಿದಾಗ ಅವರ ಕೋಪ ಹೆಚ್ಚಾಯಿತು. ಆ ಶಾಲೆಯ ಸ್ಥಾಪನೆಗೆ ಇವರು ಸಹಾಯ ಮಾಡಿದ್ದರು. ಕಾನ್ವೆಂಟ್ ಶಾಲೆಗೆ ತಮ್ಮ ಮಕ್ಕಳನ್ನು ಕಳಿಸಲು ವಿರೋಧ ವ್ಯಕ್ತಪಡಿಸುವ ಕಾಲದಲ್ಲಿ ಇವರು ಮಕ್ಕಳನ್ನು ಕಳಿಸಿ ಪ್ರೋತ್ಸಾಹಿಸಿದ್ದರು. ಇಂಥವರ ಮಕ್ಕಳಿಗೆ ಮೊಣಕಾಲು ಊರಲು ಹಚ್ಚುವುದೆಂದರೇನು. ಕೂಡಲೇ ವಕೀಲರ ಉದ್ದವಾದ ಕಪ್ಪು ಕೋಟು ಧರಿಸಿದವರೇ `ಮದರ್ ಸುಪೀರಿಯರ್”ರನ್ನು ಕಾಣಲು ಕಾನ್ವೆಂಟಿಗೆ ಬಂದರು. ಅವರಿಬ್ಬರಲ್ಲಿ ಏನು ನಡೆಯಿತು ಬಾಲಕನಿಗೆ ಗೊತ್ತಾಗಲಿಲ್ಲ. ಆದರೆ ಇದರ ಪರಿಣಾಮದಿಂದಾಗ ಮರುದಿನದಿಂದ ಹಿಂದೂ ಮಕ್ಕಳಿಗೆ ಚೆಪಲ್ ಸರ್ವಿಸ್ ಕಾಲಕ್ಕೆ ವಿನಾಯತಿ ದೊರೆಯಿತು ಎಂದು ಕಾಮತರು ಬರೆಯುತ್ತಾರೆ.

ಉಡುಪಿಯಲ್ಲಿ ಬುಧವಾರ ಸಂತೆ. ಸಂತೆಯಲ್ಲೂ ಕ್ರಿಶ್ಚನ್ ಮಿಶನರಿಗಳು ಹೇಗೆ ಧರ್ಮಪ್ರಚಾರ ಮಾಡುತ್ತಿದ್ದರು ಎಂಬ ಸಂಗತಿ ವಿವರವಾಗಿ ಬರೆಯುತ್ತಾರೆ. ಒಬ್ಬ ಕ್ರಿಸ್ತ ಮಿಶನರಿ ತನ್ನ ಅಂಗಡಿಯಲ್ಲಿ ಒಂದು ಬಾರಿ, ಹನುಮಂತನ ದೊಡ್ಡ ಚಿತ್ರವೊಂದನ್ನು ಕೈಯಲ್ಲಿ ಹಿಡಿದು, ಅದರೆಡೆ ಬೆರಳು ಮಾಡಿ, “ಇದು ನಿಮ್ಮ ದೇವರೇ? ಈ ಮಂಗ? ಇದನ್ನು ನೀವು ಪೂಜಿಸುತ್ತೀರಾ?” ಈ ದೃಶ್ಯ ನೋಡಿ ಕಾಮತರು ಸ್ತಂಭೀಭೂತರಾದರಂತೆ. ಇಂತಹ ಸಂತೆಗೆ ತಾನು ಇನ್ನು ಹೋಗುವುದಿಲ್ಲ ಎಂದು ತಾಯಿಗೆ ಹೇಳಿದರಂತೆ. ಪೋರ್ತುಗೀಜರ ಹಿಂಸೆಯಿಂದ, ಅವರ ಬಲವಂತದ ಮತಾಂತರರಿಂದ, ಬೇಸತ್ತು ಸಾರಸ್ವತ ಬ್ರಾಹ್ಮಣರು ತಮ್ಮ ದೇವತೆಗಳನ್ನು ತೆಗೆದುಕೊಂಡು ಉತ್ತರ ಹಾಗೂ ದಕ್ಷಣ ಕನ್ನಡ ಜಿಲ್ಲೆಗಳಿಗೆ ವಲಸೆ ಹೋದ ಬಗ್ಗೆ ವಿವರಿಸುತ್ತಾರೆ.

ಇನ್ನು ಮತಾಂತರಗೊಂಡ ಹಿಂದುಗಳು ತಮ್ಮ ಹೊಸ ಕ್ರಿಸ್ತಮತದೊಂದಿಗೆ ತಮ್ಮ ಮೊದಲಿನ ಜಾತಿಯ ಲೇಬಲ್ಲನ್ನು ತೆಗೆದೊಗೆಯಲು ಸಾಧ್ಯವಾಗಲಿಲ್ಲ ಎಂಬುದನ್ನೂ ವಿವರಿಸುತ್ತಾರೆ. ಅವರಲ್ಲಿ ಅಂತರ್-ಜಾತಿ(ಪಂಗಡ) ವಿವಾಹ ಆಗುತ್ತಿರಲಿಲ್ಲ ಎಂಬುದರ ಬಗ್ಗೆ ಆಧಾರಗಳನ್ನು ಕೊಡುತ್ತಾರೆ. ಇನ್ನೊಂದು ಕುತೂಹಲಕಾರಿ ವಿಷಯವೆಂದರೆ, 30-40ರ ದಶಕದಲಿ ಅನೇಕ ಕೆಥೋಲಿಕ್ ಕ್ರಿಶ್ಚನರು ಗೋವಾ ಬಿಟ್ಟು ಕೆನರಾ ಜಿಲ್ಲೆಗಳಿಗೆ ವಲಸೆ ಬಂದರಂತೆ. ಇದಕ್ಕೆ ಕಾರಣ ಮೋಜಿನದಾಗಿದೆ. ಮತಾಂತರಗೊಂಡ ಹಿಂದುಗಳಿಗೆ ಪೋರ್ತುಗೀಜ್ ಭಾಷೆಯಲ್ಲಿಯೇ ಮಾತಾಡಲು ಸರಕಾರ ಕಡ್ಡಾಯ ಮಾಡಿದ್ದೇ ಇದಕ್ಕೆ ಕಾರಣ. ಇಲ್ಲಿ ಜನರ ಕೊಂಕಣಿ ಭಾಷೆಯ ಮೇಲಿನ ಪ್ರೇಮವನ್ನು ಗುರುತಿಸಬಹುದು. ಆಗ ಕ್ರಿಸ್ತೀಯರು ಧೋತಿ ಉಡುತ್ತಿದ್ದರು. ಅವರ ಉಡುಪಿನಿಂದ ಅವರ ಜಾತಿ ನಿರ್ಧರಿಸುವುದು ಕಷ್ಟವಾಗುತ್ತಿತ್ತು ಎಂದು ಬರೆಯುತ್ತಾರೆ. `ಹಿಸ್ಟ್ರಿ ಆಫ್ ದಕ್ಷಿಣಾತ್ಯ ಸಾರಸ್ವತ್ಸ್’ (History of Dakshinaatya Saraswats) ಎಂಬ ವಿ.ಎಸ್.ಕುಡುವಾ ಅವರ ಪುಸ್ತಕದಲ್ಲಿ ಮತಾಂತರಗೊಂಡ ಸಾರಸ್ವತರ ಪಟ್ಟಿಯೇ ಇದೆಯಂತೆ. 1607ರಲ್ಲಿ ಮತಾಂತರಗೊಂಡ ಮಹಾಬಲ ಕಾಮತ ಎಲಿಕ್ಸೋ ಮೆನೇಜಿಸ್ ಆದರು, 1630ರಲ್ಲಿ ಮತಾಂತರಗೊಂಡ ಚಂಡೆ ಕಾಮತರು ಎಂಟೋನಿಯೋ ಡಿಕೋಸ್ಟಾ ಆದರು. ಮುಂಬೈ ಪೋಲೀಸ್ ಕಮೀಶನರ್ ಆಗಿದ್ದ ರೊನ್ನಿ ಮೆಂಡೋನ್ಸಾ ಎಂಬವರು ಕಾಮತರನ್ನು ಕಂಡಾಗೆಲ್ಲ ಇಂಗ್ಲಿಷ್ ಬಿಟ್ಟು ಕೊಂಕಣಿಯಲ್ಲೆ ಮಾತಾಡುತ್ತಿದ್ದರಂತೆ.

ಗೋವೆಯಲ್ಲಿ ಗುಡಿಗಳನ್ನು ನೆಲಸಮ ಮಾಡಿ ಅಲ್ಲಿ ಚರ್ಚುಗಳನ್ನು ಕಟ್ಟಲು ಪೋರ್ತುಗೀಜ ಸರಕಾರ ಮುಂದಾದಾಗ ಅನೇಕ ಸಾರಸ್ವತ ಕುಟುಂಬಗಳು ತಮ್ಮ ದೇವತೆಗಳನ್ನು ಹಿಡಿದುಕೊಂಡು ಕೆನರಾದೆಡೆ ಧಾವಿಸಿದರು. ಕಾಮತರ ಪೂರ್ವಜರು ಗೋವೆಯಲ್ಲಿಯ ತಮ್ಮ ಎಲ್ಲ ಚರಾಚರ ಆಸ್ತಿಯನ್ನು ಬಿಟ್ಟು, ಒಬ್ಬ ಅಂಬಿಗನನ್ನು ಗೊತ್ತುಮಾಡಿಕೊಂಡು ಮನೆತನದ ದೇವತೆಗಳನ್ನು ಕಟ್ಟಿಕೊಂಡು ದಕ್ಷಿಣ ಕನ್ನಡದ  ಅಮ್ಮೆಂಬಳ ಎಂಬ ಹಳ್ಳಿಗೆ ವಲಸೆ ಬಂದರಂತೆ. ಅಲ್ಲಿಯ ಸಂತಾನಗೋಪಾಲಕೃಷ್ಣ ದೇವಾಲಯವನ್ನು ಇವರ ಪೂರ್ವಜರೇ ಸ್ಥಾಪಿಸಿದರಂತೆ. 1998ರಲ್ಲಿ  ಕಾಮತರು ಆ ದೇವಾಲಯವನ್ನು ಸಂದರ್ಶಿಸಿದಾಗ ಅಲ್ಲಿಯ ಕಾಮತ ಪರಿವಾರದವರು ಇವರನ್ನು ಪ್ರೀತಿಯಿಂದ ಸ್ವಾಗತಿಸಿದರಂತೆ. “ಪುಷ್ಪಗುಚ್ಛದಿಂದ ನನ್ನ ಕಣ್ಣಲ್ಲಿ ಬಂದ ಕಣ್ಣೀರನ್ನು ಮರೆಮಾಡುವ ಪ್ರಯತ್ನವನ್ನು ನಾನು ಮಾಡಿದ್ದೆ” ಎಂದು ಬರೆಯುತ್ತಾರೆ.

`ದಿ ಕ್ರಿಶ್ಚಿಯನ್ ಇಂಪ್ಯಾಕ್ಟ್ ಇನ್ ಸೌತ್ ಕೆನರಾ’ (The Christian Impact in South Canara) ಎಂಬ ಡಾ| ಕ್ರಾಂತಿ ಫೇರಿಯಾಸ್ ಬರೆದ ಪುಸ್ತಕದಿಂದ ಅನೇಕ ಅವತರಣಿಕೆಗಳನ್ನು ಉದ್ಧರಿಸುತ್ತಾರೆ. ಗೋವೆಯ ಸಾರಸ್ವತ ಬ್ರಾಹ್ಮಣರು ಬರೆದ ಸಂಸ್ಕೃತ ಹಾಗೂ ಮರಾಠಿ ಪುಸ್ತಕಗಳನ್ನು ಪೋರ್ತುಗೀಜರು ನಾಶಮಾಡಿದರಂತೆ. ಗುಡಿಗಳನ್ನು ಧ್ವಂಸಮಾಡಿ ಆ ಜಾಗೆಯಲ್ಲಿ ಚರ್ಚುಗಳನ್ನು ನಿರ್ಮಿಸಿದರಂತೆ. ಆಕಳಮಾಂಸ ತಿನ್ನಲು ಹಿಂದುಗಳಿಗೆ ಬಲವಂತ ಮಾಡಿದರಂತೆ. ಬ್ರಾಹ್ಮಣರ ಅಭಿಮಾನದ ಸಂಕೇತವಾದ ಶಿಖೆ(ಶೇಂಡಿ)ಯನ್ನು ಕತ್ತರಿಸಿದರಂತೆ. ಪೋರ್ತುಗೀಜರ ಅತ್ಯಾಚಾರಗಳನ್ನು ಚಿತ್ರಿಸುವ ಇನ್ನೊಂದು ಪುಸ್ತಕ, ಮಟಾಡೋ ಪ್ರಭು ಬರೆದ `ಸಾರಸ್ವತ್ ಚಿಲ್ಡ್ರೆನ್'(1999). ಈ ಪುಸ್ತಕದಿಂದ ಕೂಡ ಅನೇಕ ವಿಷಯ ಪ್ರಸ್ತಾಪಿಸುತ್ತಾರೆ. 1947ರ ಸರಕಾರದ ವರದಿಯ ಪ್ರಕಾರ, 1739ರಷ್ಟು ಹಿಂದೆ, ಸಾಲ್‌ಸೆಟ್ಟೆ, ಬಾರ್ಡೆಜ್ ಹಾಗೂ ತಾಸ್ವಾಡಿಯಿಂದ 5000ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಕ್ರಿಸ್ತೀಯರು ಕೆನರಾ ಜಿಲ್ಲೆಗಳಿಗೆ ವಲಸೆ ಹೋದರಂತೆ. ಇದನ್ನು ಪಂಜಿಂ ಆರ್ಕೈವ್ಸ್‌ನಲ್ಲಿದ್ದ ಕಾಗದಪತ್ರಗಳು ತಿಳಿಸುತ್ತವೆಯಂತೆ.

ಪೋರ್ತುಗಾಲನ್ನು ಮತ್ತು ಪೋರ್ತುಗೀಜ ಜನತೆಯನ್ನು ಒಮ್ಮೆ ನೋಡಿಬರಲು ಕಾಮತರಿಗೆ ಮನಸ್ಸಾಯಿತಂತೆ. 1958ರಲ್ಲಿ ಅವರು ಪಿ.ಟಿ.ಆಯ್. ಸಂಸ್ಥೆಯ ಪ್ರತಿನಿಧಿಯಾಗಿದ್ದಾಗ ಯುನೈಟೆಡ್ ನೇಶನ್ಸ್‌ನಲ್ಲಿ ತಮ್ಮ ಕೆಲಸ ಮುಗಿಸಿದ ಮೇಲೆ, ಮರಳುವಾಗ, ತಾವು ಉಳಿಸಿದ್ದ ಹಣದಿಂದ ಮೂರು ತಿಂಗಳ ಕಾಲ ಯುರೋಪ್ ಟೂರ್ ಮಾಡಲು ಹೊರಟರಂತೆ. ತಾವು ಪೋರ್ತುಗಾಲವನ್ನು ಸಂದರ್ಶಿಸಲು ಆದ್ಯತೆ ನೀಡಿದ್ದರಂತೆ. ಆದರೆ ಅವರಿಗೆ ವೀಸಾ ದೊರೆಯಲಿಲ್ಲವಂತೆ. ನ್ಯೂಯಾರ್ಕ್‌ನಲ್ಲಿರುವ ಪೋರ್ತುಗೀಜ್ ಕಾಸ್ಸೋಲೇಟಿಗೆ ಹೋಗಿ ತಮಗೆ ವಿಸಾ ದೊರೆಯದಿರಲು ಕಾರಣವೇನು? ಎಂದು ವಿಚಾರಿಸಿದಾಗ ಇವರಿಗೆ ದೊರೆತ ಉತ್ತರ, `ನೀನು ಇಂಡಿಯನ್ ಆಗಿದ್ದೀಯಲ್ಲ ಅದಕ್ಕೆ’ ಎಂದಿತ್ತು. ಇವರು ಒಂದು ಟ್ರಿಕ್ ಮಾಡಿ ಅಲ್ಲಿ ಹೋಗಲು ನಿಶ್ಚಯಿಸಿದರು. ಇವರು ಪ್ರವಾಸ ಮಾಡುವಾಗ ಇವರ ಮಾರ್ಗ ಲಿಸ್‌ಬಾನ ಮೇಲೆ ಹೋಗುವಂತೆ, ಅಲ್ಲಿಂದ ಮುಂದಿನ ವಿಮಾನ ಮಧ್ಯಾಹ್ನ 2.30ರ ನಂತರ ಇರುವಂತೆ ಬುಕಿಂಗ್ ಮಾಡಿದರು.  ಅಲ್ಲಿ ಇಳಿದಾಗ ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಅಪ್ಪಣೆ ಪಡೆದು ಟ್ಯಾಕ್ಸಿಯಿಂದ ಊರಲ್ಲಿ ಕೆಲ ತಾಸು ಸುತ್ತಾಡಿ ಬರಲು ನಿಶ್ಚಯಿಸಿದರು. ಆದರೆ ಆದದ್ದೇ ಬೇರೆ. ಅವರಿಗೆ ಊರಲ್ಲಿ ಸುತ್ತಾಡಲು ಪರವಾನಗಿ ದೊರೆಯಲಿಲ್ಲ. `ಜೊತೆಗೆ ಪೋಲೀಸರನ್ನು ಕಳಿಸಿರಿ ಪರವಾ ಇಲ್ಲ’ ಎಂದು ಅಂಗಲಾಚಿದರೂ ಅಲ್ಲಿಯ ಅಧಿಕಾರಿಗಳು ಇವರ ಮಾತು ಕೇಳಲಿಲ್ಲ. ಇವರಿಗೆ ಟಾಯ್‌ಲೆಟ್ಗೆ ಹೋಗಲು ಕೂಡ ಬಿಡಲಿಲ್ಲ. ಬಿಡುವದು ಅನಿವಾರ್ಯವಾದಾಗ ಇವರ ಪಾಸ್‌ಪೋರ್ಟ್ ಹಿಡಿದಿಟ್ಟುಕೊಂಡರು. ಊಟ ಮಾಡುವಾಗಲೂ ಇಬ್ಬರು ಪೋಲೀಸರ ನಜರಬಂದಿ ಇತ್ತು. ಇವರು ಮುಂದಿನ ಫೈಟ್‌ನಲ್ಲಿ ತಮ್ಮ ಆಸನದಲ್ಲಿ ಕುಳಿತ ಮೇಲೆಯೇ ಇವರ ಪಾಸ್‌ಪೋರ್ಟ ಮರಳಿ ಕೊಟ್ಟರಂತೆ!

ಕಾಮತರು 70ರ ದಶಕದಲ್ಲಿ ಮತ್ತೆ ಅಮೇರಿಕೆಯಲ್ಲಿದ್ದರು. ಈ ಸಲ ಟೈಮ್ಸ್ ಆಫ್ ಇಂಡಿಯಾದ ಪ್ರತಿನಿಧಿಯಾಗಿ ವಾಶಿಂಗ್ಟನ್‌ನಲ್ಲಿ ಇದ್ದರು. ಯುನೈಟೆಡ್ ನೇಶನ್ಸ್ ಸಭೆಯ ವರದಿಯನ್ನು ಪಡೆಯಲು ಇವರು ನ್ಯೂಯಾರ್ಕಿಗೆ ಹೋಗಿದ್ದರಂತೆ. ಅಲ್ಲಿ ಇವರು ಪೋರ್ತುಗೀಜ ಸರಕಾರ ಕಳಿಸಿದ ಶಿಷ್ಟ ಮಂಡಲಿಯನ್ನು ಕಂಡರಂತೆ. ಅದರ ಮುಖ್ಯಸ್ಥ ಪೋರ್ತುಗಾಲದ ಪ್ರೆಸಿಡೆಂಟ್ ಸೋಯರ್ಸ್, ಸಮಾಜವಾದಿಯಾಗಿದ್ದನೆಂದೂ, ಭಾರತದ ಬಗ್ಗೆ ಗೌರವಾದರ ತಾಳಿದ್ದನೆಂದೂ ತಿಳಿದು ಅವನ ಇಂಟರ್‌ವ್ಯೂ ಮಾಡಲು ಅಪ್ಪಣೆ ಕೇಳಿದರು. ಕೂಡಲೆ ಅಪ್ಪಣೆ ದೊರೆಯಿತು. ಇವರಿಗೆ ಸಂತೋಷವಾಯಿತು. ಪ್ರೆಸಿಡೆಂಟ್ ಇವರಿಗೆ ಕೇಳಿದರಂತೆ, `ಪೋರ್ತುಗಾಲ್ ಸಂದರ್ಶಿಸಿದ್ದೀರಾ?’ ಎಂದು. ಇವರ ಉತ್ತರ `ಹು ಮತ್ತು ಉಹು’ (Yes and No). `ಇದರ ಅರ್ಥವೇನು?’ ಎಂದರು ಪ್ರೆಸಿಡೆಂಟ್. ತಮ್ಮ ಕತೆಯನ್ನು ಹೇಳಿ, `ಅದು ಜೈಲಿನಂತೆ ಇತ್ತು’ ಎಂದಾಗ. `ನಿಮ್ಮನ್ನು ಅವರು ಜೈಲಿಗೆ ಕಳಿಸಿದ್ದರೆ ಒಳ್ಳೆಯದಾಗುತ್ತಿತ್ತು!’ ಎಂಬ ಉದ್ಗಾರ ಅವರು ತೆಗೆದರಂತೆ. `ಯಾಕೆ?’ ಎಂದು ಕಾಮತರು ಪ್ರಶ್ನಿಸಿದಾಗ ಪ್ರೆಸಿಡೆಂಟರು ಉತ್ತರಿಸಿದರಂತೆ, `ಆ ಸಮಯದಲ್ಲಿ ನಾನು ಜೈಲಿನಲ್ಲಿದ್ದೆ. ನಿಮಗೂ ಜೈಲಿಗೆ ಕಳಿಸಿದ್ದರೆ ನಮ್ಮ ನಿಮ್ಮ ಭೇಟಿ ಈ ಮೊದಲೇ ಆಗಿಬಿಡುತ್ತಿತ್ತು! ನಾವು ಮಿತ್ರರಾಗುತ್ತಿದ್ದೆವು!’ ಇಬ್ಬರೂ ಹೊಟ್ಟೆತುಂಬ ನಕ್ಕರಂತೆ.

ಕಾಮತರು ತಮ್ಮ ನೆನಪುಗಳನ್ನು ಹೀಗೆ ದಾಖಲಿಸುತ್ತ ಹೋಗುತ್ತಾರೆ. ಭೂತ ಮತ್ತು ವರ್ತಮಾನ ಘಟನೆಗಳು ವಿಷಯಕ್ಕೆ ತಕ್ಕಂತೆ ತಳಕುಹಾಕುತ್ತವೆ. ಓದುಗರಿಗೆ ಖುಶಿ ನೀಡುತ್ತವೆ. ಒಮ್ಮೆ ಟಾಟಾ ಕಾರ್ಪೊರೇಟ್ ಕಮ್ಯುನಿಕೇಶನ್ಸ್‌ನ ಡೈರೆಕ್ಟರರಾದ ಮಿತ್ರ ಎಸ್.ಎ.ಸಬಾವಾಲಾ ಅವರು ಕಾಮತರಿಗೆ ಕೇಳಿದರಂತೆ. `ಜೆ.ಅರ್.ಡಿ.ಟಾಟಾ ಅವರ ಭಾಷಣಗಳು ಹಾಗೂ ಸಂದರ್ಶನಗಳನ್ನು ಸಂಗ್ರಹಿಸಿದ್ದೇವೆ. ಅವುಗಳನ್ನು ಪ್ರಕಟಿಸಬೇಕಾಗಿದೆ. ಇವನ್ನು ಸಂಪಾದಿಸುವ ಕೆಲಸವನ್ನು ಇಬ್ಬರು ಪ್ರಸಿದ್ಧ ಪತ್ರಕರ್ತರಿಗೆ ಒಪ್ಪಿಸಿದ್ದೆವು. ಅವರ ಕೆಲಸ ಜೆ.ಆರ್.ಡಿ ಅವರಿಗೆ ಒಪ್ಪಿಗೆಯಾಗಿಲ್ಲ. ನಿಮಗೆ ಆ ಕೆಲಸ ಒಪ್ಪಿಸುವ ವಿಚಾರ ನಾನು ಮಾಡಿದ್ದೇನೆ. ಈ ಕೆಲಸ ನೀವು ಕೈಕೊಳ್ಳುವಿರಾ?’ ಕಾಮತರಿಗೆ ಟಾಟಾ ಅವರ ಸ್ವಭಾವ ಗೊತ್ತಿತ್ತು. ಅವರು ಭಾರಿ ಶಿಸ್ತಿನ ಮನುಷ್ಯ. ಸೂಕ್ಷಗ್ರಾಹಿ. ಒಂದು ಅರ್ಧವಿರಾಮ ಹಾಗೂ ಪೂರ್ಣವಿರಾಮ ಚಿಹ್ನೆಕೂಡ ಅಥವಾ ಪ್ಯಾರಾ ಹಿಂದೆಮುಂದೆ ಆದರೆ ಅವರಿಗೆ ಸರಿಬರದು. ಕಾಮತರು ಆ ಕೆಲಸಕ್ಕೆ ಒಪ್ಪಿದರು. ಒಬ್ಬ ಭಾರತದ ಮಹಾಪುರುಷನ ಕೆಲಸ ಮಾಡುವುದು ಅವರಿಗೆ ಹೆಮ್ಮೆಯ ವಿಷಯವಾಗಿತ್ತು. ಕಾಮತರ ಕೆಲಸವನ್ನು ಟಾಟಾ ಅವರು ಬಹಳ ಮೆಚ್ಚಿದರು. ಅವರಿಗೆ ಚಹಕ್ಕಾಗಿ ಟಾಟಾ ಅವರ ಪ್ರಸಿದ್ಧ ಬಾಂಬೇ ಹೌಸಿಗೆ ಆಮಂತ್ರಿಸಿದರು. `ಒಳ್ಳೆಯ ಕೆಲಸ ಮಾಡಿದ್ದೀರಿ. ಅಂದಹಾಗೆ, ನಿಮಗೆ ಎಷ್ಟು ಫೀಜು ಕೊಡಬೇಕು, ಕೇಳಿರಿ.’ ಎಂದು ಟಾಟಾ ಅವರು ಕೇಳಿದಾಗ, ಕಾಮತರು ವಿನಮ್ರರಾಗಿ, `ಫೀಜು ಬೇಡಾ. ಇಂಥ ಕೆಲಸ ನನಗೆ ಒಪ್ಪಿಸಿದ್ದೇ ನನಗೆ ಹೆಚ್ಚಿನ ತೃಪ್ತಿ ನೀಡಿದೆ’ ಎಂದು ಉತ್ತರಿಸಿದರು. ಆಗ ಟಾಟಾ, `ಕಳಪೆ(ರಬಿಶ್) ಮಾತು ಆಡಬೇಡ. ಒಪ್ಪಿಸಿದ ಕೆಲಸ ಅಚ್ಚುಕಟ್ಟಾಗಿ ಮಾಡಿದ್ದೀಯ. ಅದಕ್ಕೆ ಪ್ರತಿಫಲ ದೊರೆಯಬೇಕು. ನಿನಗೆ ಹಣ ಬೇಡವಾಗಿದ್ದರೆ ಬೇರೆಯ ರೀತಿಯಲ್ಲಿ ಏನನ್ನಾದರೂ ಪಡೆಯಬಹುದಲ್ಲ. ಗೋವಾದಲ್ಲಿ ನಮ್ಮ ಹೊಟೇಲು ಇದೆ. ಅಲ್ಲಿ ಅತಿಥಿಯಾಗಿ ವಾಸ ಮಾಡಬಹುದಲ್ಲ.’ ಕಾಮತರಿಗೆ ಆನಂದವಾಯಿತು. `ಎರಡು ದಿನ ಇರಬಹುದೇ?’ ಅಂದಾಗ ಟಾಟಾ ಅಂದರಂತೆ, `ಎಂಟು ದಿನ ಇರು. ಮತ್ತೆ ಜೊತೆಗೆ ಒಬ್ಬ ಸಂಗಾತಿಯನ್ನೂ ಕರಕೊಂಡು ಹೋಗು’ ಎಂದು.
ಕಾಮತರು ಗೋವಾದ  ಫೋರ್ಟ್ ಅಗುಡಾದ ಟಾಟಾ ಹೊಟೇಲಿಗೆ ಹೋದರು. ಅಲ್ಲಿ ಒಂದು `ದೈವೀ ನ್ಯಾಯ’ ದೊರೆಯಿತು ಎಂದು ಕಾಮತರು ಬರೆಯುತ್ತಾರೆ. ಇವರು ಅಲ್ಲಿದ್ದ ಸುದ್ದಿ ಕೇಳಿ ಅಲ್ಲಿಯ ಗವರ್ನರರು ತಮ್ಮ ರಾಜಭವನದಲ್ಲಿ ಕೆಲವು ದಿನ ವಾಸ ಮಾಡಲು ಆಮಂತ್ರಿಸಿದರಂತೆ. ಇವರು ಒಪ್ಪಲೇ ಬೇಕಾಯ್ತು. ರಾಜಭವನ ಪೋರ್ತುಗೀಜ್ ವೈಸರಾಯ್ ವಾಸಿಸಿದ್ದ ಅರಮನೆ. ಅಲ್ಲಿಯ ಅತಿಥಿ ಸತ್ಕಾರ ಸ್ವೀಕರಿಸಿದ ಮೇಲೆ ಸಂತೃಪ್ತರಾದ ಮಾಧವ ಕಾಮತರು ಬರೆಯುತ್ತಾರೆ, “ನನಗೆ ಎಲಿಜಾಬೆತ್ ಮಹಾರಾಣಿ ತನ್ನ ಬಕಿಂಗ್‌ಹ್ಯಾಮ ಪ್ಯಾಲೇಸಿನಲ್ಲಿ ವಾಸಮಾಡಲು ಕರೆದಿದ್ದರೆ, ಅಥವಾ ಅಮೇರಿಕೆಯ ಪ್ರೆಸಿಡೆಂಟ್ ತನ್ನ ಶ್ವೇತಭವನದಲ್ಲಿ ಇರಲು ಕರೆದಿದ್ದರೆ ಎಷ್ಟು ಆನಂದವಾಗಬಹುದಿತ್ತೋ ಅದಕ್ಕಿಂತ ಎರಡು ಪಟ್ಟು ಹೆಚ್ಚು ಆನಂದ ನನಗೆ ಗೋವಾದ ರಾಜಭವನದಲ್ಲಾಯಿತು” ಎಂದು. ಎಷ್ಟೆಂದರೂ ತಾವು ದೇವಭೂಮಿ ಗೋವಾ ಮೂಲದವರು ಎಂಬ ಅಭಿಮಾನ ಕಾಮತರಿಗೆ ಇದ್ದೇ ಇದೆ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: