M.V.Kamath’s autobiography : part 11 – ‘ಎ ರಿಪೋರ್ಟರ್ ಎಟ್ ಲಾರ್ಜ್’ ಭಾಗ 11

ಭಾಷಾವಾರು ಪ್ರಾಂತ್ಯ ರಚನೆ ಕಾಮತರಿಗೆ ಸಮ್ಮತವಿರಲಿಲ್ಲ. ಈ ರೀತಿ ಪ್ರಾಂತ್ಯ ರಚನೆಯು ಆದರೆ ಕೊಂಕಣಿ ಭಾಷೆಯ ಒಂದು ರಾಜ್ಯವಾಗಬೇಕು ಎಂಬುದು ಅವರ ವಾದವಾಗಿತ್ತು. ಕೊಂಕಣಿ ಭಾಷೆಯನ್ನು ಒಂದು ಸ್ವತಂತ್ರ ಭಾಷೆ ಎಂಬುದನ್ನು ಮರೆತು, ಅದು ಮರಾಠಿ ಭಾಷೆಯ ಉಪಭಾಷೆಯೆಂದು ಪರಿಗಣಿಸುವ ಮಹಾರಾಷ್ಟ್ರದ ಜನತೆ ಕೊಂಕಣಿಗೆ ಅನ್ಯಾಯ ಮಾಡುತ್ತಿದೆ ಎನ್ನುತ್ತಾರೆ ಕಾಮತ. ಅಷ್ಟೇ ಅಲ್ಲ, ಗೋವೆಯನ್ನು ಕಬಳಿಸುವ ವ್ಯರ್ಥ ಪ್ರಯತ್ನ ಮಾಡಿದ್ದನ್ನು ನೆನೆಯುತ್ತಾರೆ.

M V Kamathಪ್ರಾಂತಗಳ ಪುನರ್‌ರಚನೆಯ ಬಗ್ಗೆ `ನುಡಿ’ಯಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳನ್ನು ಕರ್ನಾಟಕದ ಪತ್ರಿಕೆಗಳು ಮತ್ತೆ ಪ್ರಕಟಿಸುತ್ತಿದ್ದವು. ಮೈಸೂರು ಪ್ರದೇಶ ತನ್ನ ಪ್ರತ್ಯೇಕತೆ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಿತ್ತು. ಕರ್ನಾಟಕ ಒಂದೇ ರಾಜ್ಯವಾದರೆ ಅಲ್ಲಿ ಮೈಸೂರು ಅರಸರ ಸ್ಥಿತಿ ಏನು? ಇಂಥ ವಿಷಯದ ಬಗ್ಗೆ ಲೇಖನಗಳು ನುಡಿಯಲ್ಲಿ ಪ್ರಕಟಗೊಳ್ಳುತ್ತಿದ್ದವು. ಮೈಸೂರು, ಹೈದರಾಬಾದ, ಮುಂಬೈ, ಮದ್ರಾಸ, ಕೇರಳ ಮುಂತಾದ ರಾಜ್ಯಗಳಲ್ಲಿರುವ ಕನ್ನಡ ಪ್ರದೇಶಗಳು ಸೇರಿ ಏಕೀಕೃತ ಕರ್ನಾಟಕ ರೂಪುಗೊಳ್ಳಬೇಕು ಎಂಬ ಲೇಖನಗಳು ಬಿ.ಜಿ.ಖೇರ್ ಮಂತ್ರಿ ಮಂಡಲದಲ್ಲಿಯ ಕನ್ನಡ ನಾಡಿನ ಮಂತ್ರಿಗಳಾದ ಎಮ್.ಪಿ.ಪಾಟೀಲ, ಕೆ.ಎಫ್.ಪಾಟೀಲ ಹಾಗೂ ಬಿ.ಡಿ. ಜತ್ತಿ ಇವರುಗಳ ಮೆಚ್ಚಿಗೆಯನ್ನು ಪಡೆದಿದ್ದವಂತೆ.

ನಿಜಾಮ ರಾಜ್ಯದಲ್ಲಿ ನಡೆದ `ರಜಾಕಾರ’ ಗಲಭೆಯ ಬಗ್ಗೆ `ನುಡಿ’ ಪತ್ರಿಕೆ ಬರೆಯಿತು. ಅಲ್ಲಿ ಭಾರತ ಸರಕಾರ ನಡೆಸಿದ `ಪೋಲೀಸ್ ಆಕ್ಷನ್’ ಬಗ್ಗೆ ಒಂದು ಲೇಖನವನ್ನು ಕಾಮತರು ಬರೆದರಂತೆ. ಒಂದು ಸಂಪಾದಕೀಯದಲ್ಲಿ ನಿಜಾಮ ರಾಜ್ಯವನ್ನು ತುಂಡುತುಂಡು ಮಾಡಿ ಆಂಧ್ರ, ಕರ್ನಾಟಕ ಮಹಾರಾಷ್ಟ್ರ ರಾಜ್ಯಗಳಲ್ಲಿ ಹಂಚಬೇಕು, ವಿರೋಧಿಸುವ ನಿಜಾಮನನ್ನು ಗಲ್ಲಿಗೇರಿಸಬೇಕು ಎಂದು ಬರೆದಿದ್ದರಂತೆ. ಇವರ ಲೇಖನವನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಮೆಚ್ಚಲಿಲ್ಲ. `ನಿಜಾಮನನ್ನು ಗಲ್ಲಿಗೇರಿಸಬೇಕು’ ಎಂದು ಬರೆದದ್ದು `ನುಡಿ’ ಪತ್ರಿಕೆಯ ಬೇಜವಾಬ್ದಾರಿಯನ್ನು ತೋರುತ್ತದೆ ಎಂದಿತು.2002ದಲ್ಲಿ ಮೃತಾವಸ್ಥೆಯಲ್ಲಿದ್ದ ಪ್ರೆಸ್ ಕೌನ್ಸಿಲ್ 1950ರಲ್ಲಿ ಬಹಳ ಶಕ್ತಿಶಾಲಿಯಾಗಿತ್ತು. ಕಾಮತರು ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯ ಪೂರ್ಣಾವಧಿಯ ಕೆಲಸಗಾರರಾಗಿದ್ದರೂ `ನುಡಿ’ಗೆ ಬರೆಯುತ್ತಿದ್ದುದನ್ನು ಸದಾನಂದರು ದೊಡ್ಡ ಮನಸ್ಸು ಮಾಡಿ ಮನ್ನಿಸುತ್ತಿದ್ದರು.

`ನುಡಿ’ಯಿಂದ ಯಾವುದೇ ವರಮಾನ ಕಾಮತರಿಗೆ ದೊರೆಯುವುದಿಲ್ಲ ಎಂಬ ವಿಷಯ ಅವರಿಗೆ ಗೊತ್ತಿತ್ತು. `ನುಡಿ’ಗೆ ವಿಶೇಷ ಲೇಖನಗಳನ್ನು ಬರೆದರೂ ಸದಾನಂದರು ಅಡ್ಡಿಬರುತ್ತಿರಲಿಲ್ಲ. ಕಾಮತರು ನಿಯಮಿತವಾಗಿ ಒಂದು ಅಂಕಣವನ್ನು `ನುಡಿ’ಗೆ ಬರೆಯುತ್ತಿದ್ದರು. ಇವರು ನೀಡಿದ ಕವರೇಜ್ ಕರ್ನಾಟಕದ ಯಾವ ಪತ್ರಿಕೆಯೂ ನೀಡುತ್ತಿರಲಿಲ್ಲವಂತೆ. `ನುಡಿ’ಯ ಪ್ರಸಾರ ಆಗ 2000 ಇತ್ತು. ಫ್ರೀ ಪ್ರೆಸ್ ಸರ್ಕ್ಯುಲೇಶನ್ 15,000 ಇತ್ತು. ಟೈಮ್ಸ್ ಆಫ್ ಇಂಡಿಯಾದ್ದು ಆಗ 35000 ಇತ್ತು.

ಕಾಮತರು ಬರೆದ ವಿಶೇಷ ವರದಿಗಳಲ್ಲಿ ಇಂಥವು ಇದ್ದವು. `ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಗೆ ಮಾಸ್ಕೋದ ರಾಯಭಾರಿ ಮಾಡಲಾಗಿತ್ತು ಆದರೆ ಅವರು ನಿರಾಕರಿಸಿದ್ದರು.’ಮೈಸೂರ್ ಕಾಂಗ್ರೆಸ್ ಪಾರ್ಟಿ ಪ್ರತ್ಯೇಕ ಸ್ಥಾನ ಬೇಡಿದಾಗ ಕಾಂಗ್ರೆಸ್ ಹೈ ಕಮಾಂಡ್ ಅವರಿಗೆ ಛೀಮಾರಿ ಹಾಕಿತ್ತು.’ ಇನ್ನೊಂದು ವಿಶೇಷ ವರದಿಯಿಂದಾಗಿ ಇವರು ಕೆಲಸ ಕಳೆದುಕೊಳ್ಳುವ ಪ್ರಸಂಗ ಬಂದಿತ್ತು. ಕಸ್ತೂರಭಾಯಿ ಲಾಲಭಾಯಿ ಕಮೀಟಿಯವರು ಮೊದಲು ಮಲ್ಪೆಯನ್ನು ಮಹತ್ವದ ಬಂದರವನ್ನಾಗಿ ಮಾಡಬೇಕೆಂದು ಹೇಳಿದ ವರದಿ. ಲಾಲಭಾಯಿ ಕಮೀಟಿಯ ಮುಂದೆ ಅಂದು ಸಿಂಡಿಕೇಟ್ ಬ್ಯಾಂಕಿನ ಜನರಲ್ ಮೆನೆಜರ್ ಅಗಿದ್ದ ಶ್ರೀ ಕೆ.ಕೆ.ಪೈ, ಹಾಗೂ ಪತ್ರಿಕೋದ್ಯಮಿಯಾಗಿ ಕಾಮತರು ಹೇಳಿಕೆ ನೀಡಿ ಮಲ್ಪೆ ನೈಸರ್ಗಿಕ ಬಂದರು ಆಗಿದ್ದರಿಂದ ಅದನ್ನೇ ಅಭಿವೃದ್ಧಿಗೊಳಿಸಲು ಶಿಫಾರಸು ಮಾಡಿದ್ದರಂತೆ.

ಆಗ ಶ್ರೀನಿವಾಸ ಮಲ್ಯ ಕಾಂಗ್ರೆಸ್ ಜನರಲ್ ಸೆಕ್ರೆಟರಿ ಆಗಿದ್ದರು. ಅವರಿಗೆ ಮಲ್ಪೆಯ ಅಭಿವೃದ್ಧಿಯಲ್ಲಿ ಆಸಕ್ತಿ ಇರಲಿಲ್ಲ. ಹೆಚ್ಚು ಹಣ ವ್ಯಯಿಸಿ ಮಂಗಳೂರನ್ನೇ ಅಭಿವೃದ್ಧಿಗೊಳಿಸಲು ಶಿಫಾರಸು ಮಾಡುವಂತೆ ಕಮೀಟಿಯ ಮೇಲೆ ಒತ್ತಡ ತಂದಿದ್ದರಂತೆ. ಕಾಮತರು ಇದನ್ನು ವಿರೋಧಿಸಿ ಬರೆದರು. ಇದರಿಂದ ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗಿತ್ತು. ಆದರೆ ಸದಾನಂದರು ಇವರನ್ನು ಕೆಲಸದಿಂದ ತೆಗೆಯಲಿಲ್ಲ. ಒಮ್ಮೆ ಸದಾನಂದರು ಕಾಮತರನ್ನು ಕೇಳಿದ್ದರಂತೆ, `ಶ್ರೀನಿವಾಸ ಮಲ್ಯ ನಿಮ್ಮ ಊರವರು, ನಿಮ್ಮ ಜಾತಿಯವರು (ಗೌಡ ಸಾರಸ್ವತರು), ಆದರೂ ನಿಮ್ಮನ್ನು ಕೆಲಸದಿಂದ ತೆಗೆಯಲು ಯಾಕೆ ಹೇಳುತ್ತಾರೆ?’ ಎಂದು ಕೇಳಿದ್ದರಂತೆ. ಒಂದು ವೇಳೆ ಮಲ್ಪೆ ದೊಡ್ಡ ಬಂದರವಾಗಿ ಅಭಿವೃದ್ಧಿ ಹೊಂದಿದ್ದರೆ ಉಡುಪಿಯೂ ಬಹಳ ಸುಧಾರಿಸುತ್ತಿತ್ತು ಎಂದು ಬರೆಯುತ್ತಾರೆ.

`ನುಡಿ’ ಒಳ್ಳೆಯ ಪತ್ರಿಕೆಯೆಂದು ಹೆಸರು ಗಳಿಸಿತು ಆದರೆ ಅರ್ಥಿಕವಾಗಿ ಸುಧಾರಿಸಲಿಲ್ಲ. ಕೆಲವರಿಂದ ಠೇವಣಿಯಾಗಿ ಪಡೆದ ಹಣ ಕರಗಿತ್ತು. ಸಾಲ ಹೆಚ್ಚಾಗಿತ್ತು. ಜಾಹೀರಾತು ಸಿಗುತ್ತಿರಲಿಲ್ಲ. ಅದಕ್ಕೆ ಮೂರು ವರ್ಷ ಪೂರ್ತಿಯಾಗಬೇಕಿತ್ತು. ಪತ್ರಿಕೆಯನ್ನು ಹೆಚ್ಚು ಜನ ಕೊಳ್ಳಲು ಕೆಲವು ಸುಧಾರಣೆಗಳನ್ನು ಮಾಡಿದರು. ಜನಪ್ರಿಯ ಲಘು ಲೇಖನಗಳನ್ನೂ ಹಾಕತೊಡಗಿದರು. ಶ್ರೀ ವ್ಯಾಸರಾಯ ಬಲ್ಲಾಳರಿಂದ ಒಂದು ಕಾದಂಬರಿಯನ್ನು ಬರೆಸಿ ಅಂಕಣದಲ್ಲಿ ಧಾರಾವಾಹಿಯಾಗಿ ಪ್ರಕಟಿಸತೊಡಗಿದರು. ಆಗ `ಅನುರಕ್ತೆ’ ರೂಪತಾಳಿತು. ಇದು ಬಲ್ಲಾಳರ ಪ್ರಥಮ ಕಾದಂಬರಿ. ಮುಂದೆ ಬಲ್ಲಾಳರು ಹಿರಿಯ ಕಾದಂಬರಿಕಾರರಾಗಿ ಬೆಳೆಯಲಿ `ನುಡಿ’ ಮಹತ್ವದ ಪಾತ್ರ ವಹಿಸಿತು ಎಂದು ಕಾಮತರು ಬರೆಯುತ್ತಾರೆ. ರಾಮಚಂದ್ರ ಉಚ್ಚಿಲರು ಫುಟ್ಬಾಲ್ ಆಟಗಾರರಾಗಿದ್ದರು, ಲೇಖನದಲ್ಲಿ ಆಸಕ್ತರಾಗಿದ್ದರು. ಅವರಿಂದ ಕ್ರೀಡಾ ಅಂಕಣ ಬರೆಸಿದರು. ಇದರಿಂದ ಸರ್ಕ್ಯುಲೇಶನ್ನು ಹೆಚ್ಚಾಯಿತು. ಆದರೂ ಹಿಂದಿನ ಬಾಕಿ ಉಳಿದ ಸಾಲ ಹಾಗೆಯೇ ಇತ್ತು.

`ನುಡಿ’ ಪತ್ರಿಕೆಗೆ ಒಳ್ಳೆಯ ಹೆಸರಿತ್ತು. ಅನೇಕರು ಕೊಳ್ಳಲು ಮುಂದೆ ಬಂದರು. ಎಲೆಕ್ಷನ್ ಸಮಯದಲ್ಲಿ ಕಾಂಗ್ರೆಸ್ ಕೂಡ ಇದನ್ನು ಕೊಳ್ಳಲು ಮನಸ್ಸು ಮಾಡಿತ್ತು. ಫ್ರೀ ಪ್ರೆಸ್ ಜರ್ನಲ್ ಗುಂಪಿನವರೂ ಕೊಳ್ಳಲು ಮುಂದೆ ಬಂದರು. ಅದರ ನಷ್ಟದ ಜವಾಬ್ದಾರಿ ಹೊರಲು ತಯಾರಿರಲಿಲ್ಲ. ಫ್ರೀ ಪ್ರೆಸ್ ಆಫೀಸಿನಲ್ಲಿಯೇ `ನುಡಿ’ ಸಂಪಾದಿಸಲು ಅವಕಾಶ ಕಲ್ಪಿಸಲಾಯಿತು. ವ್ಯಾಸರಾಯ ಬಲ್ಲಾಳರನ್ನು ಸಂಪಾದಕರಾಗಿ ನಿಯಮಿಸಲು ಪ್ರಸ್ತಾವ ಬಂತು. ಬಲ್ಲಾಳರಿಗೆ ಕ್ಯಾಲ್ಟೆಕ್ಸ್ ಎಂಬ ಎಣ್ಣೆಯ ಕಂಪನಿಯಲ್ಲಿ ಒಳ್ಳೆಯ ಕೆಲಸವಿತ್ತು. ಅವರು ನೌಕರಿ ಬಿಡಲು ತಯಾರಾಗಲಿಲ್ಲ. ಅದೂ ಒಳ್ಳೆಯದೇ ಆಯಿತು ಎಂದು ಕಾಮತರು ಬರೆಯುತ್ತಾರೆ. ಅವರು ತಮ್ಮ ಕೆಲಸ ಬಿಟ್ಟು ಈ ಪತ್ರಿಕೆ ಸೇರಿದ್ದರೆ ಅವರಿಗೆ ಮುಂದೆ ತೊಂದರೆಯಾಗುತ್ತಿತ್ತು. ಶ್ರೀನಿವಾಸ ಹಾವನೂರರನ್ನು ಉಪ-ಸಂಪಾದಕರನ್ನಾಗಿ ನಿಯಮಿಸಲಾಯಿತು.

ನುಡಿಯನ್ನು ಫ್ರೀಪ್ರೆಸ್‌ನವರು ಕೊಂಡು ಜೂನ್‌ದಿಂದ ಅಗಸ್ಟ್ 1950 ವರೆಗೆ ನಡೆಸಿದರು.`ಅಗಸ್ಟ್ ತಿಂಗಳಲ್ಲಿ ಸದಾನಂದರು ಒಂದು ಬಾಂಬನ್ನೆಸೆದರು’ ಎಂದು ಕಾಮತರು ಬರೆಯುತ್ತಾರೆ. ಅವರು ಪತ್ರಿಕೆಯನ್ನು ಮುಚ್ಚಿಬಿಟ್ಟರು. ಕಾರಣ ಇದು ಆರ್ಥಿಕವಾಗಿ ಸ್ವೀಕಾರಾರ್ಹವಲ್ಲ ಎಂದುಬಿಟ್ಟರು. `ನುಡಿ’ಯ ಬ್ಯಾಲೆನ್ಸ್-ಶೀಟನ್ನು ತಯಾರಿಸಿದರು. ಅದರ ನಷ್ಟ 13,000 ರೂಪಾಯಿ ಆಗಿತ್ತು. ಮೂರು ವರ್ಷಗಳಲ್ಲಿ ಮಾಡಿದ ಸಾಲ ಇದಾಗಿತ್ತು. ಈ ಹಣ ಕಾಮತರ ಮೂರು ವರ್ಷಗಳ ಸಂಬಳಕ್ಕೆ ಸರಿಯಾಗುತ್ತಿತ್ತು. ಅಗಸ್ಟ್ ೧ಕ್ಕೆ `ನುಡಿ’ ನಿಂತಾಗ ಮಿತ್ರರು ಅದನ್ನು ಮರಳಿ ತೆಗೆದುಕೊಂಡು ಪ್ರಾರಂಭಿಸುವದು ಸಾಧ್ಯವಾಗಲಿಲ್ಲ. ಮೂರು ಜನ ಮಿತ್ರರು ನಷ್ಟವನ್ನು ಕೈಯಿಂದ ತುಂಬಲು ನಿಶ್ಚಯಿಸಿದರು. (ಕಾಮತ, ಹನುಮೇಶ ಮತ್ತು ರಾಮಚಂದ್ರರಾವ).

`ನುಡಿ’ ಪತ್ರಿಕೆ ನಿಂತ ಮೇಲೆ ಕೆಲವು ವಾರಗಳ ತರುವಾಯ ಮಿತ್ರ ಹನುಮೇಶರ ಮನೆಯಲ್ಲಿ ಮಿತ್ರರೆಲ್ಲ ಸೇರಿ ಕಾಫಿ ಕುಡಿಯುತ್ತಿದ್ದರು. ಆ ಮನೆಯೇ ಪತ್ರಿಕೆಯ ರಿಜಿಸ್ಟರ್ಡ್ ಆಫೀಸಾಗಿತ್ತು. ಅಂದಿನ ಮುಂಬಯಿ ರಾಜ್ಯದ ಸುದ್ದಿಸಮಾಚಾರ ಶಾಖೆಯ ಡೆಪ್ಯುಟ್ ಡೈರೆಕ್ಟರ್ ಕುಲಕರ್ಣಿ ಎಂಬ ವ್ಯಕ್ತಿ ಇವರಲ್ಲಿ ಬಂದು ಅಂದರು, “ ನುಡಿಯ ಸಂಪಾದಕರು ಸರಕಾರದ ಪಾಕ್ಷಿಕ ನ್ಯೂಜ್ ಕಾನ್ಫರೆನ್ಸ್‌ಗೆ ಯಾಕೆ ಬರುತ್ತಿಲ್ಲ ಎಂದು ಮುಖ್ಯ ಮಂತ್ರಿ ಮೊರಾರ್ಜಿ ದೇಸಾಯಿ ಕೇಳುತ್ತಿದ್ದರು’ ಎಂದು. ಸರಕಾರಕ್ಕೆ ಸಂಬಂಧಿಸಿದ ಲೇಖನಗಳನ್ನು `ಓರಿಯಂಟಲ್ ಲ್ಯಾಂಗ್ವೇಜ್ ಟ್ರಾನ್‌ಸ್ಲೇಶನ್ ಆಫೀಸರ’ರು ಅನುವಾದಿಸಿ ಕೊಡುತ್ತಿದ್ದರು. ಅವನ್ನು ಮಂತ್ರಿಗಳಲ್ಲಿ ಹಂಚಲಾಗುತ್ತಿತ್ತು. ಡೆಪ್ಯುಟಿ ಡೈರೆಕ್ಟರರು `ನುಡಿ’ ಮಹತ್ವದ ಪತ್ರಿಕೆ ಎಂದು ತಮ್ಮ ಗಣನೆಗೆ ತಂದದ್ದು ಕಾಮತರಿಗೆ ಅಭಿಮಾನ ಸಂಗತಿಯಾಗಿತ್ತು.

ಕಾಮತರು ಇಂಗ್ಲಿಷ್ ಪತ್ರಿಕೆಯಿಂದ ನಿವೃತ್ತರಾದ ಮೇಲೆ ಇವರ ಮಿತ್ರನಾದ ಹರೀಂದ್ರ ದವೆ ತಮ್ಮ `ಜನ್ಮಭೂಮಿ ಪ್ರವಾಸಿ’ ಎಂಬ ಗುಜರಾತಿ ದಿನ ಪತ್ರಿಕೆಗೆ ಅಂಕಣ ಬರೆಯಲು ಕೇಳಿಕೊಂಡನಂತೆ. ಈ ಪತ್ರಿಕೆ ಫ್ರೀಪ್ರೆಸ್ ಸಮೂಹದ ಪತ್ರಿಕೆಯಾಗಿತ್ತು. ಕಾಮತರು ತಮ್ಮ ಲೇಖನ ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದರು, ಅದನ್ನು ಗುಜರಾತಿ ಭಾಷೆಗೆ ತರ್ಜುಮೆ ಮಾಡಿ ಪ್ರಕಟಿಸುತ್ತಿದ್ದರು. ಕಾಮತರ ಹೆಸರು ಗುಜರಾತಿನಲ್ಲಿ ಮನೆಮಾತಾಗಿತ್ತಂತೆ. ಒಮ್ಮೆ ಕಾಮತರಿಗೆ ಹರೀಂದ್ರಭಾಯಿ, “ನೀವು ಗುಜರಾತಿನಲ್ಲಿ ಈಗ ಸೆಲಿಬ್ರಿಟಿ ಆಗಿದ್ದೀರಿ” ಅಂದಾಗ ಕಾಮತರಿಗೆ ಬಹಳ ಆನಂದವಾಗಿತ್ತು.

ನಥುರಾಮ ಗೋಡ್ಸೆಯ ಟ್ರಾಯಲ್ ನಡೆದಾಗ ಕಾಮತರು ದೆಹಲಿಯಲ್ಲಿ ಫ್ರೀ ಪ್ರೆಸ್ ಪತ್ರಿಕೆಯ ಸ್ಪೆಶಲ್ ಕರಸ್ಪಾಂಡೆಂಟ್ ಆಗಿದ್ದರಂತೆ. ಮೊದಮೊದಲು ಕಾಮತರಿಗೆ ಗೋಡಸೆಯ ಬಗ್ಗೆ ತಿಸ್ಕಾರವಿತ್ತು. ನಂತರ ಅವನ ಬಗ್ಗೆ ವಿಚಿತ್ರ ಆದರ(ಗೌರವ) ಉಂಟಾಗತೊಡಗಿತಂತೆ. ನ್ಯಾಯಾಲಯದಲ್ಲಿ ನ್ಯಾಯಾಧೀಶ ಅವನಿಗೆ ಮರಣ ದಂಡನೆಯನ್ನು ವಿಧಿಸಿದಾಗ ನಥೂರಾಮ ನ್ಯಾಧೀಶರಿಗೆ ಸೆಲ್ಯೂಟ್ ಮಾಡಿದನಂತೆ. ಆಗ ಕಾಮತರು ಅಲ್ಲಿ ಉಪಸ್ಥಿತರಿದ್ದರಂತೆ. ಅಂದು ಕಾಮತರು ಒಂದು ವಿಶೇಷ ವರದಿಯನ್ನು ಬರೆದರಂತೆ. ಆ ದೃಶ್ಯ ಅವಿಸ್ಮರಣೀಯವಾಗಿತ್ತು ಎಂದು ಬರೆಯುತ್ತಾರೆ. ಫ್ರೀ ಪ್ರೆಸ್ ಗ್ರೂಪಿನ ಮರಾಠಿ ಪತ್ರಿಕೆ `ನವಶಕ್ತಿ’ ಈ ಇಂಗ್ಲೀಷಿನ `ಲೀಡ್ ಸ್ಟೋರಿ’ಯನ್ನು ಅನುವಾದಿಸಿ ರವಿವಾರದ ಪುರವಣಿಯ ವಿಶೇಷ ಲೇಖನವನ್ನಾಗಿ ಪರಿವರ್ತಿಸಿತು. ಆಗ ಪತ್ರಿಕೆಯ ಸಂಪಾದಕರು ಶ್ರೀ ಡಿ.ವಿ. ಗೋಖಲೆಯವರು ಇದ್ದರಂತೆ. ಗೋಖಲೆಯವರಿಗೆ ನಥೂರಾಮ ಗೋಡಸೆ ಒಂದು ಪತ್ರ ಬರೆದನಂತೆ.

“ನಿಮ್ಮ ಪತ್ರಿಕೆಯಲ್ಲಿ `ಟ್ರಾಯಲ್’ದ ವರದಿ ತುಂಬಾ ಚೆನ್ನಾಗಿತ್ತು. ಅದನ್ನು ರಿಪೋರ್ಟ ಮಾಡಿದ ಪತ್ರಕರ್ತರಾರು ಕೃಪೆ ಮಾಡಿ ತಿಳಿಸುವಿರಾ?” ಎಂದು. ಕಾಮತರು ಬರೆಯುತ್ತಾರೆ, “ನನ್ನ ರಿಪೋರ್ಟನ್ನು ಇನ್ನಷ್ಟು ಚೆನ್ನಾಗಿ ಮರಾಠಿಯಲ್ಲಿ ಗೋಖಲೆಯವರು ಬರೆದಿರಬೇಕು. ನನಗೆ ಹೆಚ್ಚು ಆನಂದ ನೀಡಿದ ಸಂಗತಿಯೆಂದರೆ ಜೇಲಿನ ಕತ್ತಲೆಯಲ್ಲಿ ಮಂಕಾಗಿ ಕುಳಿತ ಗೋಡಸೆ ಅದನ್ನು ಓದಿ ಮೆಚ್ಚಿದನಲ್ಲ ಎಂಬುದು. ನನ್ನ ವರದಿಯೇ ಶ್ರೇಷ್ಠವಾಗಿತ್ತು ಎಂದು ಇದರ ಅರ್ಥವಲ್ಲ, ಅನೇಕ ವಾಚಕರಿಗೆ ತಮ್ಮ ಭಾಷೆಯಲ್ಲಿ ವರದಿ ಓದಿದಾಗ ಆಗುವ ಆನಂದ ಇಂಗ್ಲೀಷಿನಲ್ಲಿ ವರದಿ ಓದಿದಾಗ ಆಗುವದಿಲ್ಲ”.

ನಾಥೂರಾಮ ಗೋಡ್ಸೆಯ ತಮ್ಮನಾದ ಗೋಪಾಲ ಗೋಡ್ಸೆ ಜೈಲಿನಿಂದ ಮುಕ್ತನಾದ ಮೇಲೆ ಟೈಮ್ಸ್ ಆಫ್ ಇಂಡಿಯಾ ಆಫೀಸಿಗೆ ಹೋಗಿ ಎಮ್.ವಿ.ಕಾಮತರ ಬಗ್ಗೆ ವಿಚಾರಿಸಿದನಂತೆ. ಕೆಲವು ವರ್ಷಗಳ ತರುವಾಯ ಕಾಮತರು ಓಬೀರಾಯ್ ಪಂಚತಾರಾ ಹೊಟೇಲಿನಲ್ಲಿ ಕಪಿಲ್‌ದೇವ್ ಮತ್ತು ಶೋಭಾ ಡೇ ಅವರೊಡನೆ ಒಂದು ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾಗ, ಆ ಸಭೆಯಲ್ಲಿ ಒಬ್ಬ ವ್ಯಕ್ತಿ ಬಂದು ಕಾಮತರ ಕಾಲುಗಳನ್ನು ಸ್ಪರ್ಶ ಮಾಡಿ ನಮಸ್ಕರಿಸಿದನಂತೆ. ನೀನು ಯಾರಪ್ಪ ಎಂದು ಕೇಳಿದರೆ ಅವನೆಂದ, `ನಾನು ಗೋಪಾಲ ಗೋಡಸೆ’ ಎಂದು. ಕಾಮತರು ಅವನೊಂದಿಗೆ ಒಂದೆರಡು ಶಬ್ದ ಮಾತಾಡಬೇಕೆನ್ನುವಷ್ಟರಲ್ಲಿ ಆ ವ್ಯಕ್ತಿ ಹೊರಟುಹೋಗಿದ್ದ ಎಂದು ಬರೆಯುತ್ತಾರೆ.

ಫ್ರೀ ಪ್ರೆಸ್ ಜರ್ನಲ್ ಪತ್ರಿಕೆಯಲ್ಲಿ ಕೆಲಸ ಮಾಡುವುದು ಎಂದರೆ ಒಂದು ಬಗೆಯ ಶಿಕ್ಷಣವಾಗಿತ್ತು ಎಂದು ಕಾಮತರು ಬರೆಯುತ್ತಾರೆ.

Advertisements

About sujankumarshetty

kadik helthi akka

Posted on ಆಗಷ್ಟ್ 8, 2009, in ಡಾ।‘ಜೀವಿ’ ಕುಲಕರ್ಣಿ - ಜೀವನ ಮತ್ತು ಸಾಹಿತ್ಯ. Bookmark the permalink. ನಿಮ್ಮ ಟಿಪ್ಪಣಿ ಬರೆಯಿರಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: